• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಿನ್ನಮತದ ಜ್ವಾಲೆ ಉರಿಯಲು ಕಾರಣವಾಗುವುದೆ ಸಂಪುಟ ರಚನೆ?

By ಆರ್ ಟಿ ವಿಠ್ಠಲಮೂರ್ತಿ
|

ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ತನಗರಿವಿಲ್ಲದಂತೆಯೇ ಸುಮಾರು ಎರಡು ದಶಕಗಳ ಹಿಂದಿನ ಇತಿಹಾಸ ಪುನರಾವರ್ತನೆಯಾಗುವಂತೆ ಮಾಡಿದೆ. ಅರ್ಥಾತ್, ತಮ್ಮದು ಒಕ್ಕಲಿಗ ಪ್ಲಸ್ ಅಹಿಂದ ಸಮುದಾಯಗಳ ಸರ್ಕಾರ ಎಂಬ ಭಾವನೆಯನ್ನು ಎಸ್.ಎಂ.ಕೃಷ್ಣ ಮೂಡಿಸಿದ್ದರು. ಆದರೆ ಅವರು ಈ ಕೆಲಸವನ್ನು ಉದ್ದೇಶಪೂರ್ವಕವಾಗಿ ಮಾಡಿದ್ದರು. ಆದರೆ ಕುಮಾರಸ್ವಾಮಿ ಸರ್ಕಾರ ಉದ್ದೇಶರಹಿತವಾಗಿ ಅದೇ ಸ್ವರೂಪ ಪಡೆದಿದೆ.

ಕುಮಾರಸ್ವಾಮಿ ನೇತೃತ್ವದ ಮಂತ್ರಿಮಂಡಲವನ್ನೇ ನೋಡಿ. ರೆಡ್ಡಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಶಿವಶಂಕರರೆಡ್ಡಿ ಸೇರಿದಂತೆ ಒಟ್ಟು ಒಂಭತ್ತು ಮಂದಿ ಒಕ್ಕಲಿಗರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿದೆ.

ಪ್ರಮಾಣ ವಚನ ಸ್ವೀಕರಿಸಿದ ಜಿಲ್ಲಾವಾರು ಸಚಿವರುಗಳ ಪಟ್ಟಿ

ಅದೇ ರೀತಿ ಹಿಂದುಳಿದ ವರ್ಗದ ನಾಲ್ವರಿಗೆ, ದಲಿತ ವರ್ಗದ ನಾಲ್ವರಿಗೆ, ಮೂವರು ಅಲ್ಪಸಂಖ್ಯಾತರಿಗೆ ಹಾಗೂ ಬ್ರಾಹ್ಮಣ ಸಮುದಾಯದ ಒಬ್ಬರಿಗೆ ಮಂತ್ರಿಗಿರಿ ನೀಡಿದೆ. ಲಿಂಗಾಯತ ಸಮುದಾಯದ ನಾಲ್ಕು ಮಂದಿಯನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡಿದೆ.

ಇದು ಕೇವಲ ಕುಮಾರಸ್ವಾಮಿಯವರ ಪಕ್ಷದ ಆಯ್ಕೆಯಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷ ಕೂಡಾ ಈ ಪ್ರಕ್ರಿಯೆಯಲ್ಲಿ ಸೇರಿಕೊಂಡಿದೆ. ಹೀಗೆ ಉಭಯ ಪಕ್ಷಗಳು ಸೇರಿ ಮಂತ್ರಿ ಮಂಡಲವನ್ನು ರಚಿಸಿದ ರೀತಿ ಎಸ್.ಎಂ.ಕೃಷ್ಣ ಮಾಡೆಲ್ ಅನ್ನು ನೆನಪಿಸುತ್ತಿದೆ.

ಕೃಷ್ಣ ಜೆಡಿಎಸ್‌ಗೆ ಬಂದರೆ ಸ್ವಾಗತ: ಎಚ್‌.ಡಿ. ಕುಮಾರಸ್ವಾಮಿ

ಆದರೆ ಎಸ್.ಎಂ.ಕೃಷ್ಣ ಅವರು ಒಕ್ಕಲಿಗ ಪ್ಲಸ್ ಅಹಿಂದ ಸಮುದಾಯಗಳನ್ನು ಹೆಚ್ಚು ಓಲೈಸುವ ಸರ್ಕಾರವನ್ನು ನೀಡಿದ್ದಕ್ಕೆ ಒಂದು ಕಾರಣವಿತ್ತು. ಅದೆಂದರೆ, 1999ರ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ಶಕ್ತಿ ದೊಡ್ಡ ಮಟ್ಟದಲ್ಲಿ ಬಿಜೆಪಿ-ಸಂಯುಕ್ತ ಜನತಾದಳ ಮೈತ್ರಿಕೂಟದ ಜತೆ ನಿಂತಿತ್ತು.

ಆ ಹೊತ್ತಿಗಾಗಲೇ ರಾಮಕೃಷ್ಣ ಹೆಗಡೆ ಜನತಾ ಪರಿವಾರದಿಂದ ಉಚ್ಚಾಟನೆಯಾಗಿ ಲೋಕಶಕ್ತಿ ಪಕ್ಷವನ್ನು ಕಟ್ಟಿ 1998ರ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಜತೆ ಕೈ ಜೋಡಿಸಿ ಆ ಮೈತ್ರಿಕೂಟ ಹದಿನಾರರಷ್ಟು ಸೀಟುಗಳನ್ನು ಗೆಲ್ಲಲು ನೆರವಾಗಿದ್ದರು. ಮುಂದೆ ಕೃಷ್ಣ ಅಧಿಕಾರ ಹಿಡಿದಿದ್ದು ಹೇಗೆ, ಕಳೆದುಕೊಂಡಿದ್ದು ಹೇಗೆ, ಅಂದಿನ ಸ್ಥಿತಿ ಇಂದೂ ಹೇಗೆ ಪುನರಾವರ್ತನೆಯಾಗುತ್ತಿದೆ ಎಂಬುದನ್ನು ಮುಂದೆ ಓದಿರಿ.

ಕೆಪಿಸಿಸಿ ಗಾದಿಗೆ ಬಂದು ಮುಖ್ಯಮಂತ್ರಿಯಾದ ಕೃಷ್ಣ

ಕೆಪಿಸಿಸಿ ಗಾದಿಗೆ ಬಂದು ಮುಖ್ಯಮಂತ್ರಿಯಾದ ಕೃಷ್ಣ

ಮುಂದೆ ವಿಧಾನಸಭೆ ಚುನಾವಣೆ ಬಂದಾಗ ಇದೇ ರಾಮಕೃಷ್ಣ ಹೆಗಡೆ ಅವರು ರಾಜ್ಯದಲ್ಲಿ ಜನತಾ ಪರಿವಾರ ಒಡೆಯಲು ಕಾರಣರಾದರು. ಆ ಸಂದರ್ಭದಲ್ಲಿ ಒಡೆದ ಜನತಾ ಪರಿವಾರದಿಂದ ಹೊರಹೊಮ್ಮಿದ ಎರಡು ಶಕ್ತಿಗಳೆಂದರೆ ಒಂದು, ಜೆಡಿಎಸ್, ಮತ್ತೊಂದು ಸಂಯುಕ್ತ ಜನತಾದಳ. ಸಂಯುಕ್ತ ಜನತಾದಳ 1999ರ ಚುನಾವಣೆಯಲ್ಲಿ ಬಿಜೆಪಿಯ ಜತೆ ಕೈ ಜೋಡಿಸಿದಾಗ ಅದರ ಸಮ್ಮುಖದಲ್ಲಿ ಹೆಗಡೆ, ಪಟೇಲ್, ಯಡಿಯೂರಪ್ಪ, ರಾಜಶೇಖರ ಮೂರ್ತಿ ಸೇರಿದಂತೆ ಲಿಂಗಾಯತ ಸಮುದಾಯದ ಪಾಲಿಗೆ ಭರವಸೆ ಮೂಡಿಸುವಂತಹ ಪ್ರಬಲ ನಾಯಕರಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣ ಅವರನ್ನು ಕೆಪಿಸಿಸಿ ಅಧ್ಯಕ್ಷ ಗಾದಿಗೆ ತಂದು, ಅಹಿಂದ ಸಮುದಾಯಗಳ ಬೆಂಬಲದೊಂದಿಗೆ ಅಧಿಕಾರ ಹಿಡಿಯಿತು.

ಲಿಂಗಾಯತರನ್ನು ಓಲೈಸುವ ಅಗತ್ಯವಿಲ್ಲ

ಲಿಂಗಾಯತರನ್ನು ಓಲೈಸುವ ಅಗತ್ಯವಿಲ್ಲ

ಹೇಗಿದ್ದರೂ ಲಿಂಗಾಯತ ಸಮುದಾಯ ಬಹಿರಂಗವಾಗಿ ಬಿಜೆಪಿ-ಸಂಯುಕ್ತ ಜನತಾದಳಕ್ಕೆ ಬೆಂಬಲ ನೀಡಿದ ಮೇಲೆ ಅದನ್ನು ಓಲೈಸುವ ಅಗತ್ಯವೇನಿಲ್ಲ ಎಂಬಂತೆ ಎಸ್.ಎಂ.ಕೃಷ್ಣ ವರ್ತಿಸಿದರು. ಅವತ್ತು ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಮುಂಚೂಣಿ ಸಾಲಿನಲ್ಲಿ ಒಬ್ಬೇ ಒಬ್ಬ ಲಿಂಗಾಯತ ಮಂತ್ರಿ ಇರಲಿಲ್ಲ ಅನ್ನುವುದೇ ಎಸ್.ಎಂ.ಕೃಷ್ಣ ಅವರ ಧೋರಣೆಯನ್ನು ಪ್ರತಿಬಿಂಬಿಸಿತ್ತು. ಮತ್ತು ಅದೇ ರೀತಿ ಆಡಳಿತದ ಆಯಕಟ್ಟಿನ ಜಾಗಗಳಲ್ಲೂ ಲಿಂಗಾಯತರಿಗೆ ವಿಶೇಷ ಪ್ರಾತಿನಿಧ್ಯವನ್ನೇನೂ ಎಸ್.ಎಂ.ಕೃಷ್ಣ ನೀಡಲಿಲ್ಲ. ಒಂದು ಸಂದರ್ಭದಲ್ಲಿ ಈ ಕುರಿತು ಚರ್ಚೆ ನಡೆದಾಗ ತೋರಿಕೆಗಾಗಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ಸಮುದಾಯದ ಅಲ್ಲಂ ವೀರಭದ್ರಪ್ಪ ಅವರನ್ನು ತಂದು ಕೂರಿಸಿದರು.

ಮೇಲೇರುವ ಅವಕಾಶ ಕಳೆದುಕೊಂಡ ಅಲ್ಲಂ

ಮೇಲೇರುವ ಅವಕಾಶ ಕಳೆದುಕೊಂಡ ಅಲ್ಲಂ

ಕೆಪಿಸಿಸಿ ಅಧ್ಯಕ್ಷರಾದವರಿಗೆ ಸಹಜವಾಗಿ ಮಹತ್ವಾಕಾಂಕ್ಷೆ ಮೊಳಕೆ ಒಡೆಯುತ್ತದೆ. ಅರ್ಥಾತ್, ಭವಿಷ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಪಡೆಯಲು ಕೆಪಿಸಿಸಿ ಅಧ್ಯಕ್ಷ ಸ್ಥಾನ ಏಣಿಯಿದ್ದಂತೆ. ಆದರೆ ಅಲ್ಲಂ ವೀರಭದ್ರಪ್ಪ ಯಾವ ಲೆವೆಲ್ಲಿನಲ್ಲಿ ಡಮ್ಮಿ ಆಗಿದ್ದರೆಂದರೆ, ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೇ ಅವರು ಸೋನಿಯಾಗಾಂಧಿ ಅವರಿಗೆ ಆಪ್ತರಾಗಿದ್ದ ವಿನ್ಸೆಂಟ್ ಜಾರ್ಜ್ ಅವರನ್ನು ಭೇಟಿ ಮಾಡಿದರು. ಈ ಭೇಟಿಯ ಸಂದರ್ಭದಲ್ಲಿ, ಕೆಪಿಸಿಸಿ ಅಧ್ಯಕ್ಷನಾಗಿ ಮಾಡಲು ನನಗೇನೂ ಕೆಲಸವಿಲ್ಲ. ಹೀಗಾಗಿ ಎಸ್.ಎಂ.ಕೃಷ್ಣ ಅವರ ಸಚಿವ ಸಂಪುಟಕ್ಕೆ ನಾನು ಸೇರ್ಪಡೆಯಾಗುವಂತೆ ಮಾಡಿ ಎಂದು ವಿನ್ಸೆಂಟ್ ಜಾರ್ಜ್ ಅವರನ್ನು ಕೇಳಿಕೊಂಡರು. ಅವರ ಕೋರಿಕೆಯನ್ನು ವಿನ್ಸೆಂಟ್ ಜಾರ್ಜ್ ತಳ್ಳಿ ಹಾಕಲಿಲ್ಲ. ವಿನ್ಸೆಂಟ್ ಜಾರ್ಜ್ ಅವರು ಹೇಳಿದ್ದನ್ನು ಎಸ್.ಎಂ.ಕೃಷ್ಣ ಕೂಡಾ ನಿರಾಕರಿಸಲಿಲ್ಲ. ಪರಿಣಾಮವಾಗಿ ಅಲ್ಲಂ ವೀರಭದ್ರಪ್ಪ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಮಂತ್ರಿ ಮಂಡಲಕ್ಕೆ ವಲಸೆ ಬಂದರು.

ಪರಮೇಶ್ವರಗೆ ಅರಸಿ ಬಂದ ಅದೃಷ್ಟ

ಪರಮೇಶ್ವರಗೆ ಅರಸಿ ಬಂದ ಅದೃಷ್ಟ

ಇತ್ತೀಚಿನ ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜತೆ ಗೃಹ ಸಚಿವರೂ ಆಗಿದ್ದ ಜಿ. ಪರಮೇಶ್ವರ್ ಒಂದು ಸಂದರ್ಭದಲ್ಲಿ, ಯಾವುದಾದರೂ ಒಂದು ಜಾಗಕ್ಕೆ ರಾಜೀನಾಮೆ ನೀಡಬೇಕು ಎಂಬ ಫರ್ಮಾನು ಬಂದಾಗ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೇ ಹೊರತು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಲ್ಲ. ಪರಿಣಾಮವಾಗಿ ಅವರು ಕುಮಾರಸ್ವಾಮಿ ಅವರ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗುವ ಲಕ್ಕು ಪಡೆದರು. ಒಂದು ವೇಳೆ ಅವರೇನಾದರೂ ಅವತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಗೃಹ ಸಚಿವ ಸ್ಥಾನವನ್ನು ಉಳಿಸಿಕೊಂಡಿದ್ದರೆ ಇವತ್ತು ಉಪಮುಖ್ಯಮಂತ್ರಿಯಾಗುವುದು ಕಷ್ಟವಿತ್ತು.

ಲಿಂಗಾಯತರನ್ನು ಕಡೆಗಣಿಸಿದ್ದಕ್ಕೆ ಬೆಲೆತೆತ್ತ ಕೃಷ್ಣ

ಲಿಂಗಾಯತರನ್ನು ಕಡೆಗಣಿಸಿದ್ದಕ್ಕೆ ಬೆಲೆತೆತ್ತ ಕೃಷ್ಣ

ಇದನ್ನೇಕೆ ಗಮನಿಸಬೇಕೆಂದರೆ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಲಿಂಗಾಯತ ಸಮುದಾಯವನ್ನು ಆಡಳಿತದ ಮಟ್ಟದಲ್ಲಿ ಹೇಗೆ ಕಡೆಗಣಿಸಲಾಗಿತ್ತು? ಎಂಬ ಕಾರಣಕ್ಕಾಗಿ. ಮುಂದೆ ಇದೇ ಕಾರಣಕ್ಕಾಗಿ ಎಸ್.ಎಂ.ಕೃಷ್ಣ ಸರ್ಕಾರ ಭಾರೀ ಬೆಲೆ ತೆರಬೇಕಾಯಿತು. ಯಾಕೆಂದರೆ ಒಂದು ಸಮುದಾಯವನ್ನು ವಿರೋಧಿಸುವ ಭರದಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳು ಲಿಂಗಾಯತ ಸಮುದಾಯದ ಆಕ್ರೋಶಕ್ಕೆ ಕಾರಣವಾದವು. ಅಷ್ಟು ಮಾತ್ರವಲ್ಲ, 2004ರ ಚುನಾವಣೆಯಲ್ಲಿ ಕೈ ಪಾಳೆಯಕ್ಕೆ ಬಿದ್ದ ಸ್ವಲ್ಪ ಪ್ರಮಾಣದ ಲಿಂಗಾಯತ ಮತಗಳು ಬಿಜೆಪಿಯ ಬೆಂಬಲಕ್ಕೆ ನಿಂತವು.

ಇಂದು ಎಚ್ಡಿಕೆ ಅನುದ್ದೇಶಪೂರ್ವಕವಾಗಿ ಮಾಡಿದ್ದಾರೆ

ಇಂದು ಎಚ್ಡಿಕೆ ಅನುದ್ದೇಶಪೂರ್ವಕವಾಗಿ ಮಾಡಿದ್ದಾರೆ

ಪ್ರಬಲ ಸಮುದಾಯ ಯಾವತ್ತೂ ತನ್ನ ಮತಗಳನ್ನು ಮಾತ್ರವಲ್ಲ, ಇತರ ಸಮುದಾಯಗಳ ಮತಗಳ ಮೇಲೂ ಪ್ರಭಾವ ಬೀರುತ್ತದೆ. ಇದೇ ಕಾರಣಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಮೊಟ್ಟ ಮೊದಲ ಬಾರಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಯಿತು. ಮುಂದೆ ಈ ಶಕ್ತಿಯೊಂದಿಗೆ ಅದು ಜೆಡಿಎಸ್ ಜತೆ ಸೇರಿ ಅಧಿಕಾರವನ್ನೂ ಹಿಡಿಯಿತು. ಅದೀಗ ಇತಿಹಾಸ. ಆದರೆ ಎಸ್.ಎಂ.ಕೃಷ್ಣ ಯಾವುದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದರೋ? ಅದನ್ನು ಇವತ್ತು ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಸೇರಿ ಅನುದ್ದೇಶಪೂರ್ವಕವಾಗಿ ಮಾಡಿವೆ. ಯಾವತ್ತು ಒಂದು ಪಕ್ಷ ಸಂಪುಟ ವಿಸ್ತರಣೆಯಂತಹ ಕೆಲಸವನ್ನು ಮಾಡುತ್ತದೋ? ಅದು ಉದ್ದೇಶಪೂರ್ವಕವಾಗಿರುತ್ತದೆ. ಆದರೆ ಎರಡು ಶಕ್ತಿಗಳು ಸೇರಿದಾಗ ಸಹಾ ಅದೇ ರೀತಿಯ ಫಲಿತಾಂಶ ಕಾಣುತ್ತಿದೆ ಎಂದರೆ ಅದು ಉದ್ದೇಶಪೂರ್ವಕವೇನಲ್ಲ.

ಒಕ್ಕಲಿಗ ಸಮುದಾಯಕ್ಕೆ ಎಚ್ಡಿಕೆ ಹೆಚ್ಚಿನ ಪ್ರಾಶಸ್ತ್ಯ

ಒಕ್ಕಲಿಗ ಸಮುದಾಯಕ್ಕೆ ಎಚ್ಡಿಕೆ ಹೆಚ್ಚಿನ ಪ್ರಾಶಸ್ತ್ಯ

ಯಾಕೆಂದರೆ ವೈಯಕ್ತಿವಾಗಿ ಒಂದು ಪಕ್ಷ ಕೈಗೊಂಡ ತೀರ್ಮಾನವನ್ನು ನೋಡಿದರೆ ಅದು ಸಹಜವಾಗಿಯೇ ಹಳೇ ಮೈಸೂರು ಪ್ರಾಂತ್ಯದ ಬಲಿಷ್ಠ ಒಕ್ಕಲಿಗ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಅದೇ ರೀತಿ ಕಾಂಗ್ರೆಸ್ ಪಕ್ಷ ಅಹಿಂದ ಸಮುದಾಯಗಳಿಗೆ ಹೆಚ್ಚಿನ ಅವಕಾಶ ನೀಡಿದೆ. ಪರಿಣಾಮವಾಗಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ತನಗರಿವಿಲ್ಲದಂತೆ ಎಸ್.ಎಂ.ಕೃಷ್ಣ ಮಾಡೆಲ್ಲಿನ ಸರ್ಕಾರವಾಗಿ ರೂಪುಗೊಂಡಿದೆ. ಆದರೆ ಒಂದು ವ್ಯತ್ಯಾಸವೆಂದರೆ, ಎಸ್.ಎಂ.ಕೃಷ್ಣ ಸ್ವತಂತ್ರವಾಗಿ ಏನು ಮಾಡಿದ್ದರೋ ಅದನ್ನು ಎರಡು ಪಕ್ಷಗಳು ಸೇರಿ ಮಾಡಿರುವುದರಿಂದ ಕೆಲವೇ ದಿನಗಳಲ್ಲಿ ಅದು ಭಿನ್ನಮತದ ಜ್ವಾಲೆಯನ್ನು ದೊಡ್ಡ ಮಟ್ಟದಲ್ಲಿ ಕಾಣಬೇಕಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Will caste calculation backfire chief minister H D Kumaraswamy, who has tried to woo Okkaliga, Ahinda and Lingayat community in his cabinet, along with Congress? Political analysis by R T Vittal Murthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more