ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲದಕ್ಕೂ ಮೋದಿಯನ್ನು ಏಕೆ ದೂಷಿಸುತ್ತೀರಿ?; ಮೆಟ್ರೊ ಮ್ಯಾನ್ ಶ್ರೀಧರನ್ ಮಾತುಕತೆ...

|
Google Oneindia Kannada News

ತಿರುವನಂತಪುರಂ, ಮಾರ್ಚ್ 29: ಕೇರಳ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು, "ಮೆಟ್ರೋ ಮ್ಯಾನ್" ಎಂದೇ ಖ್ಯಾತಿಯಾಗಿರುವ ಇ. ಶ್ರೀಧರನ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಪಾಲಕ್ಕಾಡ್‌ನಿಂದ ಕಣದಲ್ಲಿದ್ದಾರೆ. ಕಾಂಗ್ರೆಸ್‌ನ ಶಫಿ ಪರಂಬಿಲ್ ಅವರ ವಿರುದ್ಧ ಶ್ರೀಧರನ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ಕೊಂಕಣ ರೈಲ್ವೆ, ದೆಹಲಿ ಮೆಟ್ರೊ, ಕೊಚ್ಚಿ ಮೆಟ್ರೋ ಮತ್ತು ಪಂಬಾ ಸೇತುವೆಯಂಥ ಯೋಜನೆಗಳ ಮೂಲಕ ಭಾರತದಲ್ಲಿ ಸಾರ್ವಜನಿಕ ಸಾರಿಗೆಯ ರೀತಿಯನ್ನೇ ಬದಲಾಯಿಸಿದ ಕೀರ್ತಿ 88ರ ಹರೆಯದ ಈ ಮಾಜಿ ಸರ್ಕಾರಿ ನೌಕರನಿಗೇ ಸಲ್ಲುತ್ತದೆ. ತಮ್ಮ ರಾಜಕೀಯ ಜೀವನದ ಆರಂಭವಾಗಿ ಈ ಬಾರಿಯ ವಿಧಾನಸಭಾ ಚುನಾವಣೆ ಕಣದಲ್ಲಿದ್ದು, ಈ ಸಂದರ್ಭ ತಮ್ಮ ಅನುಭವ, ಗುರಿಗಳನ್ನು ಮೆಟ್ರೋ ಮ್ಯಾನ್ ಶ್ರೀಧರನ್ ಅವರು "ಸಂಡೇ ಗಾರ್ಡಿಯನ್"ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಕೇರಳದಲ್ಲಿ ಆಡಳಿತ ಸ್ಥಿತಿ ಹೇಗಿದೆ, ಏನೆಲ್ಲಾ ಬದಲಾವಣೆ ಆಗಬೇಕಿದೆ, ತಾವು ಅಧಿಕಾರಕ್ಕೆ ಬಂದರೆ ಏನೆಲ್ಲಾ ಯೋಜನೆಗಳನ್ನು ಜಾರಿಗೆ ತರುವ ಗುರಿಯಿದೆ ಎಂಬುದನ್ನು ಶ್ರೀಧರನ್ ಅವರು ಈ ಸಂದರ್ಶನದಲ್ಲಿ ತಿಳಿಸಿದ್ದಾರೆ. ಮುಂದೆ ಓದಿ...

"ನನ್ನ ರಾಜ್ಯದ ಅಭಿವೃದ್ಧಿಗೆ ನನ್ನ ಜ್ಞಾನ ಬಳಸಿಕೊಳ್ಳಬೇಕು"

1. ನಿಮ್ಮ ರಾಜಕೀಯ ಜೀವನ ಪ್ರಾರಂಭಿಸಲು ನೀವು ಬಿಜೆಪಿಯನ್ನು ಏಕೆ ಆಯ್ಕೆ ಮಾಡಿಕೊಂಡಿರಿ ಹಾಗೂ ಈ ಸಮಯದಲ್ಲಿ ನೀವು ರಾಜಕೀಯಕ್ಕೆ ಬಂದಿದ್ದರ ಉದ್ದೇಶವೇನು?

ಎರಡು ಮುಖ್ಯ ಉದ್ದೇಶವಿದೆ. ಮೊದಲನೆಯದಾಗಿ, ನಾನು 67 ವರ್ಷ ಸರ್ಕಾರಿ ಸೇವೆಯಲ್ಲಿದ್ದವನು. ಈ ಅವಧಿಯಲ್ಲಿ ದೇಶಕ್ಕೆ ಹಲವು ಯೋಜನೆಗಳನ್ನು ನೀಡುವ ಒಳ್ಳೆಯ ಅವಕಾಶಗಳು ನನಗೆ ಒದಗಿ ಬಂದವು. ಕೊಂಕಣ ರೈಲ್ವೆ, ದೆಹಲಿ ಮೆಟ್ರೊ, ಕೊಚ್ಚಿ ಮೆಟ್ರೊ ಮುಂತಾದ ಯೋಜನೆಗಳನ್ನು ನೀಡುವ ಅವಕಾಶ ಸಿಕ್ಕಿತು. ಇದೀಗ ನನ್ನ ರಾಜ್ಯದ ಅಭಿವೃದ್ಧಿಗೆ ನನ್ನ ಜ್ಞಾನ ಹಾಗೂ ಅನುಭವವನ್ನು ಬಳಸಿಕೊಳ್ಳಬೇಕು. ಇದು ಸಾಧ್ಯವಾಗುವುದು ರಾಜಕೀಯದಿಂದ. ಹೀಗಾಗಿ ಈ ಮಾರ್ಗ ಆರಿಸಿಕೊಂಡೆ.

ಕೇರಳ: ಪಾಲಕ್ಕಾಡ್‌ನಿಂದ ಮೆಟ್ರೋ ಮ್ಯಾನ್ ಶ್ರೀಧರನ್ ಸ್ಪರ್ಧೆಕೇರಳ: ಪಾಲಕ್ಕಾಡ್‌ನಿಂದ ಮೆಟ್ರೋ ಮ್ಯಾನ್ ಶ್ರೀಧರನ್ ಸ್ಪರ್ಧೆ

ಎರಡನೆಯದಾಗಿ, ನಾನು ಕೇರಳದಲ್ಲಿ ಹತ್ತು ವರ್ಷಗಳಿಂದ ವಾಸಿಸುತ್ತಿದ್ದೇನೆ. 2011-2016ರ ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರವಿತ್ತು. ಮುಂದಿನ ಐದು ವರ್ಷಗಳಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರ್ಕಾರ ಬಂತು. ಆದರೆ ಈ ಎರಡೂ ಸರ್ಕಾರಗಳ ಕಾರ್ಯಕ್ಷಮತೆ ಬಗ್ಗೆ ನಾನು ನಿರಾಸೆಗೊಂಡೆ. ನನಗೆ ಸರ್ಕಾರ, ಆಡಳಿತ ಶೈಲಿ ಹಾಗೂ ಆಡಳಿತದಲ್ಲಿನ ವಿಧಾನ ಬದಲಾಗಬೇಕು ಎಂದು ಅನಿಸಿತು. ಆ ಸಮಯದಲ್ಲಿ ನನಗೆ ಬಿಜೆಪಿ ಸೇರುವ ಆಯ್ಕೆ ಮುಂದಿತ್ತು. ಕೇರಳದಲ್ಲಿ ಬಿಜೆಪಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ಕಳೆದ ಏಳು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಗಣನೀಯವಾಗಿ ಭಾರತದ ಘನತೆ, ಖ್ಯಾತಿ ಹೆಚ್ಚಿದೆ. ಆದ್ದರಿಂದ ನನಗೆ ಬಿಜೆಪಿ ಸೇರಬೇಕು ಎನಿಸಿತು. ನನ್ನ ರಾಜ್ಯದಲ್ಲಿ ಸೇವೆ ಸಲ್ಲಿಸಲು ಬಿಜೆಪಿ ಅವಕಾಶವನ್ನೂ ನೀಡಿತು.

"ನಾನು ಮುಖ್ಯಮಂತ್ರಿ ಅಭ್ಯರ್ಥಿಯಾಗಬೇಕೆಂದು ಎಂದೂ ಬಯಸಿಲ್ಲ"

2. ಬಿಜೆಪಿ ಸೇರುವ ಮೊದಲು ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಬಗ್ಗೆ ಚರ್ಚಿಸಿದ್ದೀರಾ? ಪಕ್ಷ ಸೇರುವ ಮೊದಲು ನಡೆದ ಚರ್ಚೆಯೇನು?

ಇಲ್ಲವೇ ಇಲ್ಲ. ಈ ಕುರಿತು ನಾನು ಎಂದಿಗೂ ಚರ್ಚಿಸಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಬಯಕೆಯನ್ನು ಎಂದಿಗೂ ವ್ಯಕ್ತಪಡಿಸಲಿಲ್ಲ. ಇದೆಲ್ಲ ಮಾಧ್ಯಮ ಸೃಷ್ಟಿ. ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ನನ್ನ ನಿವಾಸಕ್ಕೆ ಬಂದು ಬಿಜೆಪಿ ಸೇರಲು ಬಯಸುತ್ತೀರಾ ಎಂದು ಕೇಳಿದರು. ರಾಜ್ಯದ ಆಡಳಿತ ಶೈಲಿಯಲ್ಲಿನ ಬದಲಾವಣೆ ಅಗತ್ಯದ ಬಗ್ಗೆ ನಾನು ಆಗಾಗ್ಗೆ ಚರ್ಚಿಸುತ್ತಿದ್ದೆ. ಆಗಲೇ ಸುರೇಂದ್ರನ್ ನನ್ನನ್ನು ಎರಡು ಬಾರಿ ಸಂಪರ್ಕಿಸಿ ಬಿಜೆಪಿ ಸೇರಲು ಮನವಿ ಮಾಡಿದ್ದರು.

ಚರ್ಚೆಯ ಸಮಯದಲ್ಲಿ ನಾನು ಒಂದೇ ಷರತ್ತು ಇಟ್ಟಿದ್ದು. ಅದು, ಮಲಪ್ಪುರಂ ಜಿಲ್ಲೆಯ ಪೊನ್ನಾನಿ ಸಮೀಪದ ಕ್ಷೇತ್ರದಿಂದಲೇ ನನ್ನನ್ನು ಕಣಕ್ಕೆ ಇಳಿಸಬೇಕೆಂದು. ಅವರು ಮೂರು ಆಯ್ಕೆ ಕೊಟ್ಟರು. ತಿಶೂರ್, ಕೊಚ್ಚಿ, ಪಾಲಕ್ಕಾಡ್. ಕೊನೆಯದಾಗಿ ಪಾಲಕ್ಕಾಡ್‌ನಿಂದ ಸ್ಪರ್ಧಿಸಲು ಪಕ್ಷ ಸೂಚಿಸಿತು ಅಷ್ಟೆ.

"ನಾನು ಚರ್ಚಿಸಲು ಬಯಸದ ವಿಷಯವೆಂದರೆ ಲವ್ ಜಿಹಾದ್"

3. ಬಿಜೆಪಿ ಅಧಿಕಾರಕ್ಕೆ ಬಂದರೆ ಸರ್ಕಾರ ಲವ್ ಜಿಹಾದ್ ವಿರುದ್ಧ ಕಾನೂನು ತರುತ್ತದೆ ಎಂದು ಈಚೆಗೆ ಸುರೇಂದ್ರನ್ ಹೇಳಿದ್ದರು. ಇದರ ಬಗ್ಗೆ ನಿಮ್ಮ ನಿಲುವೇನು?

ನಾನು ಚರ್ಚೆ ಮಾಡಲು ಬಯಸದ ಒಂದು ವಿಷಯ ಎಂದರೆ ಇದು. ಲವ್ ಜಿಹಾದ್ ಬಗ್ಗೆ ಮಾಧ್ಯಮಗಳು ಏಕೆ ಚರ್ಚೆ ಮಾಡುತ್ತಿವೆ ತಿಳಿಯುತ್ತಿಲ್ಲ. ಬಿಜೆಪಿ ಎಂದರೆ ಲವ್ ಜಿಹಾದ್ ಅಷ್ಟೆಯೇ? ಈ ಬಗ್ಗೆ ಒಂದೆರಡು ವಿಚಿತ್ರ ಹೇಳಿಕೆಗಳಿಂದ ಬಿಜೆಪಿಯನ್ನು ಕೆಳಗಿಳಿಸುವ ಯತ್ನ ನಡೆದಿದೆ. ಪ್ರೀತಿಸುವುದು ಅವರವರ ವೈಯಕ್ತಿಕ ವಿಷಯ. ಇದು ಅವರ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಆಯ್ಕೆ. ಆದರೆ ಯಾರಾದರೂ ಪ್ರೀತಿಯ ಹೆಸರಿನಲ್ಲಿ ಹುಡುಗಿಯನ್ನು ಬಲವಂತವಾಗಿ ಮತಾಂತರ ಮಾಡಿದರೆ ಅದು ಲವ್ ಜಿಹಾದ್. ಬಿಜೆಪಿ ಅದರ ವಿರುದ್ಧ ಇದೆ.

ಕೇರಳದಲ್ಲಿ ಬಿಜೆಪಿಗೆ ಕಿಂಗ್ ಮೇಕರ್ ಆಗಲು ಬೇಕಾದಷ್ಟು ಮತ ಸಿಗಲಿದೆ: ಮೆಟ್ರೋ ಮ್ಯಾನ್ ಶ್ರೀಧರನ್ಕೇರಳದಲ್ಲಿ ಬಿಜೆಪಿಗೆ ಕಿಂಗ್ ಮೇಕರ್ ಆಗಲು ಬೇಕಾದಷ್ಟು ಮತ ಸಿಗಲಿದೆ: ಮೆಟ್ರೋ ಮ್ಯಾನ್ ಶ್ರೀಧರನ್

"ಆಡಳಿತ ಸರ್ಕಾರದ ಕಾರ್ಯವೈಖರಿ ಕೆಟ್ಟದಾಗಿದೆ"

4. ನಿಮ್ಮ ದೃಷ್ಟಿಯಲ್ಲಿ ಪ್ರಸ್ತುತ ಕೇರಳ ಸರ್ಕಾರದಲ್ಲಿರುವ ಹಾಗೂ ನೀವು ಅಧಿಕಾರಕ್ಕೆ ಬಂದರೆ ತೊಡೆದುಹಾಕಲು ಬಯಸುವ ಬಹುಮುಖ್ಯ ತೊಡಕೇನು?

ಬಹುಮುಖ್ಯವಾಗಿ ಪರಿಣಾಮಕಾರಿ ಸರ್ಕಾರಕ್ಕೆ ತೊಡಕಿದೆ. ಇಲ್ಲಿ ಏನೂ ಆಗುತ್ತಿಲ್ಲ. ಸೇತುವೆ ಮೇಲೆ ಒಂದು ರಸ್ತೆ ನಿರ್ಮಿಸಲು ಇಲ್ಲಿ 12-15 ವರ್ಷ ಹಿಡಿಯುತ್ತದೆ. ಸರ್ಕಾರದ ಕಾರ್ಯವೈಖರಿ ಕೆಟ್ಟದಾಗಿದೆ. ಜನರು ಪ್ರತಿಭಟನೆ ನಡೆಸದೇ ಕಷ್ಟಪಡುತ್ತಿದ್ದಾರೆ. ಜನರ ಕಲ್ಯಾಣಕ್ಕಾಗಿ ತೆಗೆದುಕೊಳ್ಳುವ ಯಾವುದೇ ಯೋಜನೆಯೂ ದೀರ್ಘಕಾಲದ್ದಾಗಿರುತ್ತದೆ. 65 ವರ್ಷದ ಹಿಂದೆ ಯುನೈಟೆಡ್ ಕೇರಳ ಆಂದೋಲನ ನಡೆಯಿತು. ಅಂದಿನಿಂದ ಕೇರಳಕ್ಕೆ ಯಾವುದೇ ಫಲ ಬಂದಿರುವ ನೆನಪಿಲ್ಲ. ನಮ್ಮ ಮೂಲ ಅಗತ್ಯಗಳನ್ನು ಪೂರೈಸಿಕೊಳ್ಳಲು ಕೇರಳ ಇನ್ನೂ ನೆರೆಯ ರಾಜ್ಯಗಳ ಮೇಲೆ ಅವಲಂಬಿತವಾಗಿದೆ. ನಾವು ಅಕ್ಕಿ ಉತ್ಪಾದಿಸಿದರೂ ಅದು ಸಾಕಾಗುವುದಿಲ್ಲ. ಅಕ್ಕಿ ಕೊರತೆಯನ್ನು ಆಂಧ್ರ ಪೂರೈಸುತ್ತದೆ. ಮೊಟ್ಟೆ ಹಾಗೂ ಕೋಳಿ ಪೂರೈಕೆಗಾಗಿ ತಮಿಳುನಾಡನ್ನು ಅವಲಂಬಿಸಿದ್ದೇವೆ. ಹಣ್ಣುಗಳಿಗಾಗಿ ಕರ್ನಾಟಕ ಅವಲಂಬಿಸಿದ್ದೇನೆ. ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸುತ್ತೇವೆ. ರಾಜ್ಯದ ಅಭಿವೃದ್ಧಿ ಅಗತ್ಯ ಮಟ್ಟ ತಲುಪಿಲ್ಲ ಎಂಬುದನ್ನು ಇದು ತೋರುತ್ತಿದೆ. ಅಭಿವೃದ್ಧಿಯಲ್ಲಿ ನಾವು ಉಳಿದ ರಾಜ್ಯಗಳಿಗಿಂತ 10-15 ವರ್ಷಗಳ ಹಿಂದಿದ್ದೇವೆ. ಹೀಗಾಗಿ ರಾಜ್ಯವನ್ನು ಉತ್ತಮವಾಗಿ ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಲು ನಾನು ಬಯಸುತ್ತೇನೆ.

"ಸರ್ಕಾರದ ಕಾರ್ಯವೈಖರಿ ಬದಲಾಯಿಸಲು ಬಯಸುತ್ತೇನೆ"

5. ಕೇರಳವನ್ನು ಸುಸ್ಥಿರ ರಾಜ್ಯವನ್ನಾಗಿ ಮಾಡಲು, ಅಧಿಕಾರಕ್ಕೆ ಬಂದರೆ ನೀವು ತೆಗೆದುಕೊಳ್ಳುವ ಪ್ರಮುಖ ಕ್ರಮಗಳು ಯಾವುವು?

ರಾಜ್ಯವನ್ನು ಅಭಿವೃದ್ಧಿಪಡಿಸಲು ನಮ್ಮಲ್ಲಿ ಸಾಕಷ್ಟು ಮಾಸ್ಟರ್ ಪ್ಲಾನ್‌ಗಳಿವೆ. ಆದರೆ ಸಮಸ್ಯೆ ಎಂದರೆ, ಈ ಯೋಜನೆಗಳು ಕಾರ್ಯಗತವಾಗುತ್ತಿಲ್ಲ. ಕಾರ್ಯಗತವಾಗದೇ ಅನುಷ್ಠಾನಗೊಳ್ಳುತ್ತಿವೆ. ಉದಾಹರಣೆಗೆ, ಅಲಪ್ಪುಳ ಬೈಪಾಸ್ ಕಾಮಗಾರಿ ಪೂರೈಸಲು 40 ವರ್ಷಗಳಾಗಿವೆ. ನಿರ್ಧಾರಗಳನ್ನು ತ್ವರಿತವಾಗಿ ತೆಗೆದುಕೊಂಡು ಅನುಷ್ಠಾನಗೊಳಿಸುವ ಸರ್ಕಾರ ನಮ್ಮಲ್ಲಿಲ್ಲ. ಯಾವುದೇ ಸರ್ಕಾರವಾದರೂ ಐದು ವರ್ಷಗಳಲ್ಲಿ ಒಂದು ಯೋಜನೆಯನ್ನು ಪೂರೈಸಬೇಕು.
ಇದರಲ್ಲದೇ 99 ಲೆವೆಲ್ ಕ್ರಾಸಿಂಗ್ ರಿಪ್ಲೇಸ್‌ಮೆಂಟ್ ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಆದರೆ ಕಳೆದ ಐದು ವರ್ಷಗಳಲ್ಲಿ ಇವ್ಯಾವುದೂ ಆಗಿಲ್ಲ. ಸರ್ಕಾರ ಈ ರೀತಿ ಕಾರ್ಯನಿರ್ವಹಿಸುತ್ತಿದೆ ಮತ್ತು ಇದನ್ನು ಬದಲಾಯಿಸಲು ನಾನು ಬಯಸುತ್ತೇನೆ.

''ಶ್ರೀಧರನ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು ಬಹುದೊಡ್ದ ಜೋಕ್''''ಶ್ರೀಧರನ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು ಬಹುದೊಡ್ದ ಜೋಕ್''

"ಕಾಂಗ್ರೆಸ್ ಅಭ್ಯರ್ಥಿಗೆ ನನ್ನಷ್ಟು ಅನುಭವವಿದೆಯೇ?"

6. ಭಾರತೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಎರಡು ಬಾರಿ ಶಾಸಕರಾಗಿರುವ ಶಫಿ ಪರಂಬಿಲ್ ವಿರುದ್ಧ ನಿಮ್ಮನ್ನು ಕಣಕ್ಕಿಳಿಸಲಾಗಿದೆ ಹಾಗೂ ಅವರು ನಿಮಗಿಂತ ಐವತ್ತು ವರ್ಷ ಚಿಕ್ಕವರು...

ನನಗೆ 67 ವರ್ಷಗಳ ಅನುಭವವಿದೆ. ಅವರಿಗೆ ಈ ಅನುಭವವಿದೆಯೇ? ದೇಶಕ್ಕೆ ಈಗ ಜ್ಞಾನ, ಅನುಭವ, ಪರಿಣತಿ ಮುಖ್ಯ. ನಾನು 88 ವಯಸ್ಸಿನವನಾದ್ದರಿಂದ ಎಲ್ಲಾ ಕಡೆ ಸುತ್ತಾಡಬೇಕಿಲ್ಲ. ಸ್ವಯಂಸೇವಕರಿಗೆ ನಾನು ಮಾರ್ಗದರ್ಶನ ನೀಡುತ್ತೇನೆ. ಆ ಮಾರ್ಗದರ್ಶನವನ್ನು ಅವರಿಗೆ ನೀಡಲು ಸಾಧ್ಯವೇ? ಉದಾಹರಣೆಗೆ, ಇದೇ ಶಾಸಕರು ಏಳು ವರ್ಷದ ಹಿಂದೆ ಬಸ್ ನಿಲ್ದಾಣ ಸ್ಥಾಪನೆಯ ಕೆಲಸ ಆರಂಭಿಸಿದರು. ಅದು ಇನ್ನೂ ಪೂರ್ಣಗೊಂಡಿಲ್ಲ. ಅದನ್ನು ನಾನು ಕೈಗೆತ್ತಿಕೊಂಡಿದ್ದರೆ, ಎರಡು ವರ್ಷಗಳಲ್ಲೇ ಮುಗಿಸುತ್ತಿದ್ದೆ.

"ನನಗೆ ಪ್ರಶಸ್ತಿಯ ಮಹತ್ವಾಕಾಂಕ್ಷೆಯಿಲ್ಲ"

7. ಪಾಲಕ್ಕಾಡ್‌ ಕ್ಷೇತ್ರಕ್ಕೆ ನಿಮ್ಮ ಯೋಜನೆಗಳೇನು?

ಅಭಿವೃದ್ಧಿ, ಉದ್ಯೋಗ, ಶಿಕ್ಷಣ ಮತ್ತು ಪಾರದರ್ಶಕತೆ ಎಂಬ ನಾಲ್ಕು ಮುಖ್ಯ ಕ್ಷೇತ್ರಗಳತ್ತ ಗಮನ ಹರಿಸಲು ನಾನು ಬಯಸುತ್ತೇನೆ. ನನಗೆ ಪ್ರಶಸ್ತಿ ತೆಗೆದುಕೊಳ್ಳುವ ಯಾವುದೇ ಮಹತ್ವಾಕಾಂಕ್ಷೆಯಿಲ್ಲ.

"ಎಲ್ಲದಕ್ಕೂ ಮೋದಿಯನ್ನೇಕೆ ದೂಷಿಸುತ್ತೀರಿ?"

8. ವರದಿಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಸಿಎಜಿ ಲೆಕ್ಕಪರಿಶೋಧನಾ ವರದಿಗಳು 75% ರಷ್ಟು ಕಡಿಮೆಯಾಗಿದೆ. ಇದು ನಿಜವೇ?

ಇದು ಮಾಧ್ಯಮಗಳ ಸಂಪೂರ್ಣ ತಪ್ಪು ಮಾಹಿತಿ. ಮಾಧ್ಯಮ ತಮ್ಮ ದೇಶವನ್ನು ಪ್ರೀತಿಸಬೇಕು. ಇಂದು, ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಮಿಲಿಟರಿ ಶಕ್ತಿಯಾಗಿದೆ. ನಾವು ಅದನ್ನು ಯಾರ ನಾಯಕತ್ವದಲ್ಲಿ ಸಾಧಿಸಿದ್ದೇವೆ? ಭಾರತ ನಾಲ್ಕನೇ ಅತಿದೊಡ್ಡ ಮಿಲಿಟರಿ ಶಕ್ತಿಯಾಗಿರದಿದ್ದರೆ, ಚೀನಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳು ಭಾರತವನ್ನು ಪ್ರವೇಶಿಸುತ್ತಿದ್ದವು. ನರೇಂದ್ರ ಮೋದಿಯವರ ಸಕಾರಾತ್ಮಕ ಅಂಶಗಳನ್ನು ನಾವು ನೋಡಬೇಕು. ಎಲ್ಲದಕ್ಕೂ ನೀವು ಮೋದಿಯನ್ನು ಏಕೆ ದೂಷಿಸುತ್ತೀರಿ?

English summary
We should see the positive side of Narendra Modi. Why do you blame Modi for everything? asks Metro man E Sreedharan in an interview with "Sunday Guardian"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X