ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ಕಾರಣಗಳ ಗುಟ್ಟು: ಅಫ್ಘಾನಿಸ್ತಾನದಿಂದ ಸೇನೆ ವಾಪಸ್ ಕರೆಸಿಕೊಂಡ ಯುಎಸ್ ಯಡವಟ್ಟು!

|
Google Oneindia Kannada News

ಕಾಬೂಲ್, ಆಗಸ್ಟ್ 17: "ಇದು ಅಫ್ಘಾನಿಸ್ತಾನ, ಅನೇಕ ಸಾಮ್ರಾಜ್ಯಗಳ ಸ್ಮಶಾನವಾಗಿರುವ ಈ ನೆಲದಲ್ಲಿ ಸರಿಯಾದ ಆಯ್ಕೆಗಳಿಲ್ಲ. ಇಂದು ನೀವು ನಮ್ಮ ಸ್ನೇಹಿತರೇ ಆಗಿರಬಹುದು, ನಾಳೆ ನೀವೇ ನಮ್ಮ ಶತ್ರುಗಳೂ ಆಗಬಹುದು. ಇದು ನಿಮಗೆ ವಿಭಿನ್ನ ಎಂದು ಅನ್ನಿಸುವುದಿಲ್ಲ. ನೀನು ಇಲ್ಲೇ ಇದ್ದರೆ ನಮ್ಮ ಶತ್ರುವಾಗುತ್ತೀರಿ ಇಲ್ಲಿಂದ ಹೊರಟರೆ ಹೇಡಿ ಎನ್ನಿಸಿಕೊಳ್ಳುತ್ತೀರಿ," ಇದು '12 ಸ್ಟ್ರಾಂಗ್' ಎಂಬ ಸಿನಿಮಾದಲ್ಲಿ ಅಫ್ಘಾನಿಸ್ತಾನದ ಮುಖಂಡರೊಬ್ಬರು ಹೊಡೆಯುವ ಡೈಲಾಗ್.

ಎರಡು ದಶಕಗಳ ನಂತರದಲ್ಲಿ ತಾಲಿಬಾನ್ ಸಂಘಟನೆಯ ಮುಷ್ಠಿಗೆ ಸಿಲುಕಿರುವ ಅಫ್ಘಾನಿಸ್ತಾನದಲ್ಲೂ ಇಂಥದ್ದೇ ಸನ್ನಿವೇಶ ಸೃಷ್ಟಿಯಾಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡ ಒಂದು ವಾರದಲ್ಲಿ ಇಡೀ ಅಫ್ಘಾನ್ ರಾಷ್ಟ್ರದ ಚಿತ್ರಣವೇ ಅದಲು ಬದಲಾಗಿದೆ. ಈ ರೀತಿಯ ಬದಲಾವಣೆಗಳು ಅಫ್ಘಾನ್ ಪಾಲಿಗೆ ಇದೇ ಮೊದಲೇನೂ ಅಲ್ಲ. ಸುಮಾರು ಮೂರು ಸಹಸ್ರಮಾನಗಳಿಂದ ಇಂಥದ್ದೇ ಪರಿಸ್ಥಿತಿ ಎದುರಿಸುತ್ತಿದೆ.

ಅಫ್ಘಾನಿಸ್ತಾನದಲ್ಲಿ ಬಂದೂಕು ಹಿಡಿದು ನಿಂತ ತಾಲಿಬಾನಿಗಳ ಕುಣಿತಕ್ಕೆ ಚೀನಾ ತಾಳ!ಅಫ್ಘಾನಿಸ್ತಾನದಲ್ಲಿ ಬಂದೂಕು ಹಿಡಿದು ನಿಂತ ತಾಲಿಬಾನಿಗಳ ಕುಣಿತಕ್ಕೆ ಚೀನಾ ತಾಳ!

ಪ್ರಾಚೀನ ಬಲ್ಖ್ ಸಾಮ್ರಾಜ್ಯದಿಂದ ಗಾಂಧಾರದವರೆಗೆ ನಂತರ ಅಲೆಕ್ಸಾಂಡರ್ ಆಯಿತು. ಟರ್ಕಿಯ ಇಸ್ಲಾಮಿಕ್ ದಾಳಿಕೋರ ಮೊಹಮ್ಮದ್ ಘೋರಿ ಮತ್ತು ಘಜ್ನಿ ಸಾಮ್ರಾಜ್ಯಗಳವರೆಗೆ ನೋಡಿದ್ದು ಆಗಿದೆ. ತೈಮೂರ್ ನಿಂದ ನಾದಿರ್ ಶಾ ಜೊತೆಗೆ ಇತರೆ ಮಧ್ಯ ಏಷ್ಯನ್ ಬುಡಕಟ್ಟುಗಳು ದೇಶಕ್ಕೆ ಲಗ್ಗೆ ಇಟ್ಟಿದ್ದು ಆಗಿದೆ. ಮೊಘಲ್ ಸಾಮ್ರಾಜ್ಯದಿಂದ ಸಿಖ್ ಆಳ್ವಿಕೆಯವರೆಗಿನ ವಿದೇಶಿ ಆಕ್ರಮಣಕಾರರ ಪಟ್ಟಿ ಮಹಾರಾಜ ರಂಜಿತ್ ಸಿಂಗ್ ವರೆಗೂ ನೋಡಿದ್ದು ಆಗಿದೆ. ಇದಲ್ಲದೇ ಬ್ರಿಟಿಷ್ ಆಳ್ವಿಕೆಯಿಂದ ಅಫ್ಘಾನ್ ಬುಡಕಟ್ಟುಗಳ ಆಳ್ವಿಕೆ, ಸೋವಿಯತ್ ಬೆಂಬಲಿತ ಕಮ್ಯುನಿಸ್ಟ್ ಆಳ್ವಿಕೆಯನ್ನು ಅಫ್ಘಾನಿಸ್ತಾನ ನೋಡಿದೆ. ಅತಿ-ಮತಾಂಧ ತಾಲಿಬಾನ್ ಮತ್ತು ಯುಎಸ್ ಬೆಂಬಲಿತ ಪ್ರಜಾಪ್ರಭುತ್ವದಿಂದ ಹಿಡಿದು ಇದೀಗ ಎರಡನೇ ಬಾರಿಗೆ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಏರಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಕ್ರೌರ್ಯಕ್ಕೆ 20 ವರ್ಷಗಳವರೆಗೂ ಬ್ರೇಕ್ ಹಾಕಿದ್ದ ಅಮೆರಿಕಾದ ಸೇನೆಯನ್ನು ಅಧ್ಯಕ್ಷ ಜೋ ಬೈಡನ್ ದಿಢೀರನೇ ವಾಪಸ್ ಕರೆಸಿಕೊಂಡ ಬೆನ್ನಲ್ಲೇ ಅಘಾತಕಾರಿ ಬೆಳವಣಿಗೆಗಳಿಗೆ ಅಫ್ಘಾನ್ ಸಾಕ್ಷಿ ಆಗುತ್ತಿದೆ. ದೇಶದಲ್ಲಿನ ಪ್ರಜಾಪ್ರಭುತ್ವ ಆಳ್ವಿಕೆ ಅಂತ್ಯಗೊಂಡು ತಾಲಿಬಾನ್ ಅಸ್ತಿತ್ವ ಸ್ಥಾಪಿಸಿಕೊಂಡಿದೆ. ವಿಶ್ವದ ದೊಡ್ಡಣ್ಣನ ದಿಢೀರ್ ನಿರ್ಧಾರಕ್ಕೆ ಕಾರಣವೇನು?, ಅಫ್ಘಾನಿಸ್ತಾನದಲ್ಲಿದ್ದ ಸೇನೆಯನ್ನು ಯುಎಸ್ ವಾಪಸ್ ಕರೆಸಿಕೊಂಡಿದ್ದು ಏಕೆ?, ಅಮೆರಿಕಾದ ತನ್ನ ಸೇನೆ ಕರೆಸಿಕೊಳ್ಳುವುದಕ್ಕೆ ನೀಡಿರುವ ಐದು ಪ್ರಮುಖ ಕಾರಣಗಳ ಬಗ್ಗೆ ಇಲ್ಲಿ ತಿಳಿಯೋಣ.

ದೋಹಾ ಒಪ್ಪಂದ ಮೂಲಕ ನಡೆಯಿತೇ ದೋಖಾ?

ದೋಹಾ ಒಪ್ಪಂದ ಮೂಲಕ ನಡೆಯಿತೇ ದೋಖಾ?

ಅಫ್ಘಾನಿಸ್ತಾನದಿಂದ ಯುಎಸ್ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುತ್ತಿರುವುದನ್ನೇ ತಾಲಿಬಾನ್ ಉಗ್ರ ಸಂಘಟನೆಯು ಎದುರು ನೋಡುತ್ತಿದೆ ಎಂಬುದರ ಸತ್ಯದ ಅರಿವು ಅಮೆರಿಕಾಗೂ ಗೊತ್ತಿತ್ತು. ಅದರ ಹೊರತಾಗಿಯೂ ಅಧ್ಯಕ್ಷ ಜೋ ಬೈಡನ್ ಯುಎಸ್ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಘೋಷಣೆ ಮಾಡಿದರು. ಅಫ್ಘಾನ್ ಸರ್ಕಾರವನ್ನು ರಕ್ಷಿಸುವ ನಿಟ್ಟಿನಲ್ಲಿ ವಿಶ್ವಾಸ ಮೂಡುವುದಕ್ಕೂ ಮೊದಲೇ ಉಗ್ರ ಸಂಘಟನೆಯ ಜೊತೆಗೆ ದೋಹಾದಲ್ಲಿ ಯುಎಸ್ಎ ಒಪ್ಪಂದಕ್ಕೆ ಅಂಕಿತ ಹಾಕಿತ್ತು. ತಾಲಿಬಾನ್ ಉಗ್ರ ಸಂಘಟನೆ ಮತ್ತು ಅಮೆರಿಕಾ ನಡುವೆ ನಡೆದ ಒಪ್ಪಂದ ಹಾಗೂ ಜೋ ಬೈಡನ್ ತೆಗೆದುಕೊಂಡ ದಿಢೀರ ನಿರ್ಧಾರವೇ ಇಂದಿನ ಅಫ್ಘಾನ್ ಸ್ಥಿತಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಯುಎಸ್ ಸೇನೆ ವಾಪಸ್ ಕರೆಸಿಕೊಂಡಿದ್ದಕ್ಕೆ ನೀಡಿರುವ ಐದು ಕಾರಣಗಳು ಅದೇ ರೀತಿಯಾಗಿವೆ.

ಅಮೆರಿಕಾದ ಕಾರಣ - 1

ಅಮೆರಿಕಾದ ಕಾರಣ - 1

ಕಳೆದ 2001ರ ಸಪ್ಟೆಂಬರ್ 11ರ ದಾಳಿಯು ಯುಎಸ್ಎ ಪ್ರಜೆಗಳ ಮೇಲೆ ಅತಿಯಾದ ಭಾವನಾತ್ಮಕ ಪ್ರಭಾವವನ್ನು ಬೀರಿತ್ತು. ಅಂದಿನ ಪರಿಸ್ಥಿತಿಯಲ್ಲಿ ಅಪರಾಧಿಗಳನ್ನು ಕಠಿಣವಾಗಿ ಶಿಕ್ಷಿಸುವಂತೆ ಕೂಗು ಕೇಳಿ ಬಂದಿತ್ತು. ಆ ತಕ್ಷಣಕ್ಕೆ ಅಮೆರಿಕಾ "ಸ್ವಾತಂತ್ರ್ಯ ನಿರಂತರ ಕಾರ್ಯಾಚರಣೆ" ಆರಂಭಿಸಿತು. ಅಲ್ ಖೈದಾ ಜೊತೆಗೆ ಆತ್ಮೀಯತೆಯನ್ನು ಹೊಂದಿದ್ದ ಕಾರಣಕ್ಕಾಗಿ ತಾಲಿಬಾನ್ ಮೇಲೂ ಕಾರ್ಯಾಚರಣೆ ನಡೆಸಲಾಯಿತು. ಅದರ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಕಳೆದುಕೊಂಡು ಯುಎಸ್ ಬೆಂಬಲಿತ ಸರ್ಕಾರವು ಅಸ್ತಿತ್ವಕ್ಕೆ ಬಂದಿತು. ಒಸಾಮಾ ಬಿನ್ ಲಾಡೆನ್ ಸೇರಿದಂತೆ ಅಲ್ ಖೈದಾ ಸಂಘಟನೆಯ ಪ್ರಮುಖ ಮುಖಂಡರ ಅಂತ್ಯದೊಂದಿಗೆ ಉಗ್ರರ ವಿರುದ್ಧದ ತಮ್ಮ ಕಾರ್ಯಾಚರಣೆಯು ಮುಕ್ತಾಯವಾಯಿತು ಎಂದು ಯುಎಸ್ ಶ್ವೇತಭವನದ ಜನರು ಭಾವಿಸಿದ್ದರು. ಇದೆಲ್ಲಕ್ಕಿಂತ ಹೆಚ್ಚಾಗಿ ರಿಪಬ್ಲಿಕನ್ನರು ಮತ್ತು ಡೆಮೋಕ್ರಾಟ್‌ಗಳ ನಡುವೆ ಸ್ಪಷ್ಟ ಸೈದ್ಧಾಂತಿಕ ಭಿನ್ನತೆಗಳಿವೆ. ಜೋ ಬೈಡೆನ್ ಒಬ್ಬ ಪ್ರಜಾಪ್ರಭುತ್ವವಾದಿಯಾಗಿದ್ದು, "ಭಯೋತ್ಪಾದನೆ ವಿರುದ್ಧ ಯುದ್ಧ" ಎಂದು ಕರೆಯುವ ಕಾರ್ಯಾಚರಣೆಯನ್ನು ಮುಂದುವರಿಸಲು ಬಯಸಲಿಲ್ಲ.

ಅಮೆರಿಕಾದ ಕಾರಣ - 2

ಅಮೆರಿಕಾದ ಕಾರಣ - 2

ಏಷ್ಯಾ ಪೆಸಿಫಿಕ್‌ನಲ್ಲಿ ಚೀನಾ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಯುನೈಟೆಡ್ ಸ್ಟೇಟ್ಸ್ ಅದನ್ನು ನಿರ್ಲಕ್ಷಿಸುವಂತಾ ಅನಿವಾರ್ಯತೆ ಸೃಷ್ಟಿ ಆಯಿತು. ಚೀನಾಗೆ ಎದುರೇಟು ನೀಡುವುದಕ್ಕಾಗಿ ಕ್ವಾಡ್ ರೀತಿಯ ವೇದಿಕೆಗಳನ್ನು ರಚಿಸಿತಾದರೂ ಇದು ದೀರ್ಘಾವಧಿಯಲ್ಲಿ ಸಹಾಯಕವಾಗಿರುವುದಿಲ್ಲ ಎಂಬುದನ್ನು ಅಮೆರಿಕಾ ಅರಿತುಕೊಂಡಿತು. ದೀರ್ಘಾವಧಿ ಉದ್ದೇಶವನ್ನು ಇಟ್ಟುಕೊಂಡು ಏಷ್ಯಾ ಪೆಸಿಫಿಕ್‌ಗೆ ಅಮೆರಿಕಾ ಲಗ್ಗೆ ಇಟ್ಟಿತು. ಏಕಕಾಲದಲ್ಲಿ ಎರಡು ಕಡೆಗಳಲ್ಲಿ ಹೆಚ್ಚಿನ ನಿಗಾ ವಹಿಸುವುದಕ್ಕೆ ಸಾಧ್ಯವಾಗದ ಕಾರಣ ಏಷ್ಯಾ ಪೆಸಿಫಿಕ್‌ನಲ್ಲಿ ಪ್ರಾಬಲ್ಯ ವೃದ್ಧಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನಿಸ್ತಾನದಲ್ಲಿನ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ತೀರ್ಮಾನಿಸಲಾಯಿತು.

ಅಮೆರಿಕಾದ ಕಾರಣ - 3

ಅಮೆರಿಕಾದ ಕಾರಣ - 3

ಅಫ್ಘಾನಿಸ್ತಾನದಲ್ಲಿ 1996-2001ರಲ್ಲಿ ಆಳ್ವಿಕೆ ನಡೆಸಿದ ತಾಲಿಬಾನ್ 1.0 ಮತ್ತು ಪ್ರಸ್ತುತ ತಾಲಿಬಾನ್ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಿದು ಕೊಳ್ಳಲಾಗಿದೆ. ಇಂದಿನ ತಾಲಿಬಾನ್ ಸಂಘಟನೆ ಉಗ್ರರು ಎಂಬ ಹಣೆಪಟ್ಟಿಯನ್ನು ಕಳಚಿಕೊಂಡು ನ್ಯಾಯಸಮ್ಮತವಾಗಿ ಬದುಕಲು ಬಯಸುತ್ತಿದೆ. ದೋಹಾ-ಕ್ವಾತರ್ ಪ್ರದೇಶದಲ್ಲಿ ತಾಲಿಬಾನ್ ರಾಜಕೀಯ ಕಚೇರಿ ತೆರೆಯುವುದಕ್ಕೆ ಅವಕಾಶ ನೀಡಲು ಇದೊಂದು ಪ್ರಮುಖ ಕಾರಣವಾಗಿತ್ತು. ಅವರು ಶಾಂತಿಯುತ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡ ರೀತಿಯು ಅವರ ಉತ್ಸಾಹವನ್ನು ಸಾಬೀತುಪಡಿಸುತ್ತದೆ.

ತಾಲಿಬಾನ್ 1.0 ಗಿಂತ ಪ್ರಸ್ತುತದಲ್ಲಿ ಇರುವ ತಾಲಿಬಾನ್ 2.0 ಬಲಿಷ್ಠವಾಗಿದೆ. ಈ ಮೊದಲು ತಾಲಿಬಾನ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ನೀಡಿದ ಹಣವನ್ನು ಅವಲಂಬಿಸಿತ್ತು. ಆದರೆ ಇಂದು ತಾಲಿಬಾನ್ ತನ್ನದೇ ಆಗಿರುವ ಆರ್ಥಿಕತೆಯನ್ನು ಹೊಂದಿದೆ. ಮಾದಕ ವಸ್ತುಗಳ ಮಾರಾಟ, ತೆರಿಗೆ, ಸುಲಿಗೆ ಸೇರಿದಂತೆ ಹಲವು ಮಾರ್ಗಗಳಿಂದ ಹಣ ಸಂಗ್ರಹಿಸುತ್ತಿದೆ. ತಾಲಿಬಾನಿಗಳ ಶಸ್ತ್ರಾಸ್ತ್ರ, ಆಯುಧಗಳು ಮತ್ತು ತರಬೇತಿಯ ಗುಣಮಟ್ಟ ಕೂಡ ಹೆಚ್ಚಾಗಿದೆ.

ಕಳೆದ ಐದು ವರ್ಷಗಳಲ್ಲಿ ಯುಎಸ್ ಸೇನಾ ನೆಲೆಗಳ ಮೇಲೆ ತಾಲಿಬಾನಿಗಳು ನಡೆಸಿರುವ ದಾಳಿಗಳಲ್ಲಿ ಅದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದ್ದರಿಂದ ನಿಮ್ಮ ಮುಂದೆ ಬಲಿಷ್ಠ ವಿರೋಧಿಗಳು ಇರುವಾಗ ವಿಯೆಟ್ನಾಂನಲ್ಲಿ ಮಾಡಿದಂತೆ ಯುಎಸ್ ತನ್ನದೇ ಸಮಾಧಿಯನ್ನು ಸೃಷ್ಟಿಸಲು ಬಯಸುವುದಿಲ್ಲ. ಹಾಗಾಗಿ ಗೌರವಯುತವಾಗಿ ಸೇನೆಯನ್ನು ಹಿಂತೆಗೆದುಕೊಳ್ಳುವುದು ಒಂದೇ ಆಯ್ಕೆಯಾಗಿತ್ತು.

ಅಮೆರಿಕಾದ ಕಾರಣ - 4

ಅಮೆರಿಕಾದ ಕಾರಣ - 4

ಕಳೆದ 20 ವರ್ಷಗಳಲ್ಲಿ 'ಭಯೋತ್ಪಾದನೆ ವಿರುದ್ಧ ಯುದ್ಧ'ದ ನಿರ್ವಹಣೆಗಾಗಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ 3 ತ್ರಿಲಿಯನ್ ಯುಎಸ್ ಡಾಲರ್ ಹಣವನ್ನು ಖರ್ಚು ಮಾಡಿದೆ. ಅಂಥ ಪ್ರದೇಶಗಳಲ್ಲಿ ಸೇನೆಯ ನಿರ್ವಣೆ ಮಾಡುವುದು ದೊಡ್ಡ ಸವಾಲಾಗುವುದರ ಜೊತೆಗೆ ಹೆಚ್ಚು ಹಣ ಖರ್ಚಾಗಲಿದೆ. ಸರಬರಾಜು ಸರಪಳಿ ನಿರ್ವಹಣೆ ಬಗ್ಗೆ ನಿಗಾ ವಹಿಸಬೇಕಾಗುತ್ತದೆ. ಕಳೆದ 15 ವರ್ಷಗಳಿಂದ ಯುಎಸ್ ಸೇನೆಗೆ ಅಗತ್ಯವಿರುವ ಎಲ್ಲ ರೀತಿ ಸೌಲಭ್ಯಗಳನ್ನು ಒದಗಿಸುವ ಮೂಲಕ ನೆಲ ಪಾಕಿಸ್ತಾನವಾಗಿತ್ತು. ಆದರೆ ಕಳೆದ 5 ವರ್ಷಗಳಿಂದ ಪಾಕಿಸ್ತಾನ ಮತ್ತು ಯುಎಸ್ ನಡುವಿನ ಸಂಬಂಧ ಅಷ್ಟಾಗಿ ಚೆನ್ನಾಗಿಲ್ಲ. ಇದರ ಪರಿಣಾಮವಾಗಿ ಅಫ್ಘಾನಿಸ್ತಾನದ ಯುಎಸ್ ಸೇನೆಗೆ ದೂರದ ನೆಲೆಯಿಂದ ಅಗತ್ಯ ಸೌಲಭ್ಯಗಳನ್ನು ಪೂರೈಸುವ ಸವಾಲು ಎದುರಾಯಿತು. ಈ ಕಾರ್ಯದ ನಿರ್ವಹಣೆಗೆ ಮೊದಲಿಗಿಂತಲೂ ಹೆಚ್ಚು ಹಣ ವೆಚ್ಚ ಮಾಡುವ ಅನಿವಾರ್ಯತೆ ಸೃಷ್ಟಿ ಆಯಿತು. ಪ್ರಸ್ತುತ ಒಂದು ವರ್ಷಕ್ಕೆ 45 ರಿಂದ 50 ಬಿಲಿಯನ್ ಡಾಲರ್ ಹಣವನ್ನು ವೆಚ್ಚ ಮಾಡಲಾಗುತ್ತಿದ್ದು, ಯುದ್ಧ ಸಂದರ್ಭದಲ್ಲಿ ಅದರ ವೆಚ್ಚ 100 ಬಿಲಿಯನ್ ಯುಎಸ್ ಡಾಲರ್ ಆಗುವ ಸಾಧ್ಯತೆಗಳಿವೆ. ಇಷ್ಟೊಂದು ಪ್ರಮಾಣದ ಹಣವನ್ನು ಖರ್ಚು ಮಾಡುವುದು ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಬಂದ ಯುಎಸ್ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ವಾಪಸ್ ಕರೆಸಿಕೊಂಡಿದೆ.

ಅಮೆರಿಕಾದ ಕಾರಣ - 5

ಅಮೆರಿಕಾದ ಕಾರಣ - 5

2020ರ ಯುಎಸ್ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಜೋ ಬೈಡೆನ್ ತಮ್ಮ ಆದ್ಯತೆಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದ್ದರು. ಅಫ್ಘಾನಿಸ್ತಾನದಿಂದ ಯುಎಸ್ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದು ಹಾಗೂ ದೇಶೀಯ ಸವಾಲುಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿ ಕೆಲಸ ಮಾಡುವುದೇ ಡೆಮಾಕ್ರಟಿಕ್ ಪಕ್ಷದ ಪ್ರಮುಖ ಅಜೆಂಡಾಗಳಲ್ಲಿ ಒಂದಾಗಿತ್ತು. ಅಮೆರಿಕನ್ನರ್ ಅವರನ್ನು ಆಯ್ಕೆ ಮಾಡಿದ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಕಾರ್ಯ ನಿರ್ವಹಿಸಿದ್ದಾರೆ. ತಾವು ತೆಗೆದುಕೊಳ್ಳುತ್ತಿರುವ ತೀರ್ಮಾನ ತುಂಬಾ ಕಠಿಣವಾಗಿರುವುದು ಎಂದು ಜೋ ಬೈಡೆನ್ ಅವರಿಗೆ ತಿಳಿದಿದೆ. ಆದರೆ, ಯಾವುದೇ ರೀತಿ ಉಪಯೋಗಕ್ಕೆ ಬಾರದ ಕಾರ್ಯಕ್ಕಾಗಿ ಜನರು ನೀಡುವ ತೆರಿಗೆ ಹಣವನ್ನು ಅಷ್ಟರ ಮಟ್ಟಿಗೆ ಖರ್ಚು ಮಾಡುವುದು ಸೂಕ್ತವಲ್ಲ ಎಂದಿದ್ದರು. ಅಲ್ಲದೇ ಇತ್ತೀಚಿನ ನೀಡಿದ ಹೇಳಿಕೆಯಲ್ಲಿ ಯುಎಸ್ ಸೇನೆಯು ಅಫ್ಘಾನಿಸ್ತಾನದ ನಿರ್ಮಾಣಕ್ಕಾಗಿ ಅಲ್ಲಿಗೆ ಹೋಗಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದರು.

ತಾಲಿಬಾನ್ ಮುಷ್ಠಿಯಲ್ಲಿದ್ದ ಅಫ್ಘಾನಿಸ್ತಾನ

ತಾಲಿಬಾನ್ ಮುಷ್ಠಿಯಲ್ಲಿದ್ದ ಅಫ್ಘಾನಿಸ್ತಾನ

ಕಳೆದ 1996 ರಿಂದ 2001ರವರೆಗೂ ಅಫ್ಘಾನಿಸ್ತಾನದಲ್ಲಿ ಇದೇ ತಾಲಿಬಾನ್ ಉಗ್ರ ಸಂಘಟನೆಯ ಹಿಡಿತದಲ್ಲಿತ್ತು. 2001ರ ಸಪ್ಟೆಂಬರ್ 11ರಂದು ಯುನೈಟೆಡ್ ಸ್ಟೇಟ್ಸ್ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ್ದರು. ಅಲ್ ಖೈದಾ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ ಕಾರಣಕ್ಕಾಗಿ ತಾಲಿಬಾನ್ ಮೇಲೂ ಯುಎಸ್ ಸೇನಾಪಡೆಗಳು ಕಾರ್ಯಾಚರಣೆಗೆ ಇಳಿದವು. ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನ್ ಮೇಲೆ ದಾಳಿ ನಡೆಸಿದ ಯುಎಸ್ ಸೇನೆಯು ಅಫ್ಘಾನಿಸ್ತಾನವನ್ನು 2001ರಲ್ಲಿ ತಾಲಿಬಾನ್ ಹಿಡಿತದಿಂದ ಬಿಡುಗಡೆಗೊಳಿಸಿತು. ಅದರ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಕಳೆದುಕೊಂಡಿತು. ಯುಎಸ್ ಬೆಂಬಲಿತ ಸರ್ಕಾರವು ಅಸ್ತಿತ್ವಕ್ಕೆ ಬಂದಿತು.

Recommended Video

ಪ್ರಪ್ರಥಮ ಬಾರಿಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ಕೊಟ್ಟ ತಾಲಿಬಾನ್ ವಕ್ತಾರ! | Oneindia Kannada

English summary
Taliban and Afghanistan Crisis: Why US President Joe Biden Withdraws Army from Afghanistan; Here Five Reasons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X