ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Operation ಕಮಲ ಯಶಸ್ಸಾಗಲು ಸಾಧ್ಯವಿಲ್ಲ ಅನ್ನೋದಿಕ್ಕೆ ಇಲ್ಲಿವೆ 4 ಕಾರಣಗಳು

By ಅನಿಲ್ ಆಚಾರ್
|
Google Oneindia Kannada News

Recommended Video

ಬಿಜೆಪಿ ಆಪರೇಷನ್ ಕಮಲ ಯಶಸ್ವಿಯಾಗಲ್ಲ ಯಾಕೆ? ಇಲ್ಲಿದೆ 4 ಕಾರಣಗಳು | Oneindia Kannada

ಬೆಟ್ಟಕ್ಕೆ ಕಲ್ಲು ಹೊರುವ ಕೆಲಸ ಮಾಡಬಾರದು ಎಂಬ ಮಾತಿದೆ. ಆದರೆ ಕರ್ನಾಟಕ ಬಿಜೆಪಿಯ 'ಆಪರೇಷನ್' ಪ್ರಯತ್ನಗಳನ್ನು ಗಮನಿಸಿದರೆ ಅವು ಬೆಟ್ಟಕ್ಕೆ ಕಲ್ಲು ಹೊರುವ ಕೆಲಸ ಅನ್ನದೆ ವಿಧಿಯಿಲ್ಲ. ಹೇಗಾದರೂ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆಗೆ ಏರಬೇಕು ಎಂದು ಪ್ರಯತ್ನಿಸುತ್ತಿರುವ ಬಿಜೆಪಿ, ಅದಕ್ಕೆ ಕೊಡುವ ಕಾರಣ ತನ್ನ ಬಳಿ ಇರುವ ಸ್ಥಾನಗಳ ಸಂಖ್ಯೆ 104.

ಆದರೆ, ಅದೊಂದು ಕಾರಣಕ್ಕೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವನ್ನು ಕೆಡವಲು ಸಾಧ್ಯವಾ ಎಂಬ ಪ್ರಶ್ನೆ ಕೇಳಿಕೊಂಡರೆ, ಅಸಾಧ್ಯ ಎಂಬ ಉತ್ತರ ಅವರಿಗೇ ಸಿಕ್ಕಿರುತ್ತಿತ್ತು. ಆದರೆ ಹೈ ಕಮಾಂಡ್ ನಿಂದ ಒತ್ತಡವೋ ಅಥವಾ ರಾಜ್ಯ ನಾಯಕರ ಆತುರವೋ ಪದೇಪದೇ ಆಪರೇಷನ್ ಗೆ ಯತ್ನಿಸಿ, ಕೈ ಸುಟ್ಟುಕೊಂಡು, ಮುಖ ಮಸಿ ಮಾಡಿಕೊಳ್ಳುತ್ತಿದೆ ಬಿಜೆಪಿ.

ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಪ್ರಯತ್ನಗಳು ಸಫಲ ಆಗುವುದಿಲ್ಲ ಎಂಬುದಕ್ಕೆ ಈ ವರದಿಯಲ್ಲಿ ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಇತಿಹಾಸದಿಂದಲೂ ಪಾಠ ಕಲಿಯದಿದ್ದರೆ ಹೇಗೆ? ಬಿಜೆಪಿ ನಾಯಕರು ಇಷ್ಟನ್ನೂ ತಿಳಿಯುತ್ತಿಲ್ಲ ಅಂದರೆ ನೈತಿಕ ಅಧಃಪತನ ಒಂದು ಕಡೆಯಾದರೆ, ನಾಯಕತ್ವದ ಬಗ್ಗೆ ಪಕ್ಷದೊಳಗೆ ನಂಬಿಕೆ ಹೋಗುತ್ತದೆ.

Operation ಕಮಲ ನಿಜವೆಷ್ಟು, ಕತೆಯೆಷ್ಟು?: ಇಲ್ಲಿದೆ ಲೆಕ್ಕಾಚಾರOperation ಕಮಲ ನಿಜವೆಷ್ಟು, ಕತೆಯೆಷ್ಟು?: ಇಲ್ಲಿದೆ ಲೆಕ್ಕಾಚಾರ

ಇರಲಿ, ಆಪರೇಷನ್ ಕಮಲ ಯಶಸ್ವಿಯಾಗಲು ಅಸಾಧ್ಯ ಎನಿಸುವ ಅಂಶಗಳು ಹೀಗಿವೆ:

ಬಿಜೆಪಿ ಮುಂದೆ ಎರಡು ಆಯ್ಕೆಗಳಿವೆ

ಬಿಜೆಪಿ ಮುಂದೆ ಎರಡು ಆಯ್ಕೆಗಳಿವೆ

ಬಿಜೆಪಿಗೆ ಸರಕಾರ ರಚನೆಗೆ ಅಗತ್ಯ ಇರುವುದು ಒಂಬತ್ತು ಶಾಸಕರ ಬೆಂಬಲ. ಅದರಲ್ಲಿ ಪಕ್ಷೇತರ ಶಾಸಕ ಮುಳಬಾಗಲಿನ ನಾಗೇಶ್ ಹಾಗೂ ಕೆಪಿಜೆಪಿಯ ಶಂಕರ್ ರ ಬೆಂಬಲವನ್ನು ಪಡೆಯಬಹುದು. ಆದರೆ ಬಿಎಸ್ ಪಿಯ ಶಾಸಕರಾದ ಮಹೇಶ್ ಯಾವ ಕಾರಣಕ್ಕೂ ಬೆಂಬಲ ನೀಡಲ್ಲ. ಇಬ್ಬರು ಕೇಸರಿ ಪಕ್ಷಕ್ಕೆ ಬಂದರೆ ಉಳಿದ ಏಳು ಶಾಸಕರನ್ನು ಪಕ್ಷಕ್ಕೆ ಸೆಳೆಯಲು ಪಕ್ಷೇತರರಾಗಲೀ ಅಥವಾ ಸಣ್ಣ-ಪುಟ್ಟ ಸಮಾನ ಮನಸ್ಕ ಪಕ್ಷಗಳ ಶಾಸಕರಾಗಲೀ ಗೆದ್ದಿಲ್ಲ. ಇನ್ನು ಅಧಿಕಾರದಲ್ಲಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಕೊಡಿಸಬೇಕು. ಅದು ಕೂಡ ವಿಧಾನಸಭಾ ಚುನಾವಣೆ ಗೆದ್ದ ಒಂದು ವರ್ಷದೊಳಗೆ ಕನಿಷ್ಠ ಹದಿನಾಲ್ಕು ಶಾಸಕರಿಂದ ರಾಜೀನಾಮೆ ಕೊಡಿಸಬೇಕು. ಅವರಿಗೆ ಮುಂದೆ ಚುನಾವಣೆ ಎದುರಿಸಲು ಬಿಜೆಪಿಯಿಂದ ಟಿಕೆಟ್, ಅದಾಗದಿದ್ದರೆ ಪಕ್ಷದೊಳಗೆ ಸ್ಥಾನಮಾನ, ಚುನಾವಣೆಗೆ ನಿಂತರೆ ಸಂಪನ್ಮೂಲ ಪೂರೈಕೆ, ಸ್ಥಳೀಯವಾಗಿ ಅದಾಗಲೇ ಪಕ್ಷಕ್ಕಾಗಿ ದುಡಿದ ನಾಯಕರನ್ನು ಸಮಾಧಾನ ಪಡಿಸಿ, ಇದೀಗ ಹೊಸದಾಗಿ ಬಂದವರಿಗೆ ಪ್ರಾಶಸ್ತ್ಯ ಸಿಗುವಂತೆ ಮಾಡಬೇಕು. ಈ ರೀತಿ ಸನ್ನಿವೇಶದಲ್ಲಿ ಸಾಲು ಸಾಲು ಸವಾಲುಗಳಿವೆ.

ಕಾಂಗ್ರೆಸ್ ಗಿಂತ ಒಳ್ಳೆ ಆಫರ್ ನೀಡಲು ಸಾಧ್ಯವಾ?

ಕಾಂಗ್ರೆಸ್ ಗಿಂತ ಒಳ್ಳೆ ಆಫರ್ ನೀಡಲು ಸಾಧ್ಯವಾ?

ಇನ್ನು ದೋಸ್ತಿ ಸರಕಾರದ ಮಧ್ಯೆಯೇ ಭಿನ್ನಾಭಿಪ್ರಾಯ ಬಂದು, ಅವರಾಗಿಯೇ ದೂರವಾಗಬೇಕು. ಮೈತ್ರಿ ಸರಕಾರಗಳಲ್ಲಿ ಕಡಿಮೆ ಸಂಖ್ಯೆಯ ಶಾಸಕರನ್ನು ಹೊಂದಿದ ಪಕ್ಷಗಳಿಗೆ ಮುಖ್ಯಮಂತ್ರಿ ಸ್ಥಾನ ಸಿಗುವುದೇ ಕಷ್ಟ ಸಾಧ್ಯ. ಅಂಥದ್ದರಲ್ಲಿ ಕುಮಾರಸ್ವಾಮಿ ಅವರಿಗೆ ಅಂಥ ಅವಕಾಶವನ್ನು ಕಾಂಗ್ರೆಸ್ ನೀಡಿದೆ. ಜತೆಗೆ ಚುನಾವಣೆ ಮುಗಿದ ತಕ್ಷಣವೇ, ನಾವು ಬೇಷರತ್ ಬೆಂಬಲ ನೀಡುತ್ತೇವೆ. ಅವರೇ ಮುಖ್ಯಮಂತ್ರಿ ಆಗಲಿ ಎಂದ ಮೇಲೆ, ಇದಕ್ಕಿಂತ ಒಳ್ಳೆ ಆಫರ್ ಅನ್ನು ಬಿಜೆಪಿಯಿಂದ ಜೆಡಿಎಸ್ ಗೆ ನೀಡಲು ಸಾಧ್ಯವೆ? ಕಾಂಗ್ರೆಸ್ ಜತೆಗೆ ಜೆಡಿಎಸ್ ಇರುವಷ್ಟು ಕಾಲವೂ ಅದರ 'ಜಾತ್ಯತೀತ' ವರ್ಚಸ್ಸಿಗೆ ಏನೂ ಹಾನಿ ಇಲ್ಲ. ಹತ್ತು ವರ್ಷ ಅಧಿಕಾರದಿಂದ ದೂರ ಇದ್ದು, ಇನ್ನೊಂದು ಅವಧಿಗೆ ಸುಮ್ಮನೆ ಕೂರುವ ಸ್ಥಿತಿ ಬಂದಿದ್ದರೆ ಅಸ್ತಿತ್ವವೇ ಉಳಿಸಿಕೊಳ್ಳಲು ಕಷ್ಟವಾಗುತ್ತಿದ್ದ ಜೆಡಿಎಸ್ ಗೆ ಈಗಿನ ಸ್ಥಿತಿಯಲ್ಲಿ ಶತಾಯ ಗತಾಯ ತನ್ನ ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕು. ಇಂಥ ಸನ್ನಿವೇಶದಲ್ಲಿ ಕಾಂಗ್ರೆಸ್ ಗೆ ಕೈ ಕೊಟ್ಟು ಜೆಡಿಎಸ್ ಏಕಾಏಕಿ ಬಿಜೆಪಿ ಜತೆ ಹೋಗಲು ಸಾಧ್ಯವಾ?

ರಾಜೀನಾಮೆ ಅಂಗೀಕಾರ ಆಗದಿದ್ದರೆ ಎಂಬ ಆತಂಕ

ರಾಜೀನಾಮೆ ಅಂಗೀಕಾರ ಆಗದಿದ್ದರೆ ಎಂಬ ಆತಂಕ

ಇನ್ನೇನು ಲೋಕಸಭೆ ಚುನಾವಣೆ ಹತ್ತಿರದಲ್ಲಿದೆ. ಇಂಥ ಸನ್ನಿವೇಶದಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಗೆ ಬೆನ್ನು ತೋರಿಸಿ ಜೂಟ್ ಹೇಳುವುದು ಆ ಪಕ್ಷದ ಶಾಸಕರಿಗೆ ಅಷ್ಟು ಸುಲಭದ ವಿಷಯವಲ್ಲ. ಏಕೆಂದರೆ, ಲೋಕಸಭೆ ಚುನಾವಣೆ ಹೊತ್ತಿಗೆ ಪರಿಸ್ಥಿತಿಯೇ ಬದಲಾಗಿ ಕೇಂದ್ರದಲ್ಲಿ ಕಾಂಗ್ರೆಸ್ ಗೆ ಪ್ರಾಮುಖ್ಯ ಬಂದರೆ ಎಂಬ ಆತಂಕ ಇದ್ದೇ ಇರುತ್ತದೆ. ಇನ್ನು ವರ್ಷದೊಳಗೆ ಮತ್ತೊಂದು ಚುನಾವಣೆ ಎದುರಿಸುವುದು ಸುಲಭದ ಮಾತಲ್ಲ. ಇಡೀ ಆಪರೇಷನ್ ಅಪಾಯದಿಂದ ಕೂಡಿರುವುದರಿಂದ ಅಂತಿಮವಾಗಿ ಸಫಲ ಆಗುತ್ತದೆ ಎಂಬ ಆಶಾವಾದವೇ ಇಲ್ಲ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಶಾಸಕರನ್ನು ಸೆಳೆದು, ಸರಕಾರವನ್ನು ಸುಲಭವಾಗಿ ರಚನೆ ಮಾಡಲು ಕಾಂಗ್ರೆಸ್-ಜೆಡಿಎಸ್ ನ ವರಿಷ್ಠ ನಾಯಕರು ಬಿಡುವುದಿಲ್ಲ. ಕಾನೂನು ತೊಡಕುಗಳು ಸಹ ಎದುರಾಗುತ್ತವೆ. ರಾಜೀನಾಮೆ ಅಂಗೀಕಾರ ಆಗದೇ ಇರುವ ಸಾಧ್ಯತೆ ಇದ್ದು, ಸರಕಾರ ಉಳಿಸಿಕೊಳ್ಳಲು ಸಮಯ ಸಿಕ್ಕರೆ ಅಲ್ಲಿಗೆ ಅವಕಾಶ ಕೈ ಚೆಲ್ಲಿದಂತೆ ಎಂಬ ಸಂಗತಿ ಕಾಡುವಾಗ ಏಕಾಏಕಿ ಬಿಜೆಪಿಗೆ ಅನುಕೂಲ ಒದಗಿಸಲು ಕಾಂಗ್ರೆಸ್ ಅಥವಾ ಜೆಡಿಎಸ್ ನ ಅತೃಪ್ತ ಶಾಸಕರು ಮನಸು ಮಾಡಲು ಸಾಧ್ಯವಾ?

ಬಿಜೆಪಿಗೆ ರಹಸ್ಯ ಕಾಪಾಡಿಕೊಳ್ಳಲು ಆಗುತ್ತಿಲ್ಲ

ಬಿಜೆಪಿಗೆ ರಹಸ್ಯ ಕಾಪಾಡಿಕೊಳ್ಳಲು ಆಗುತ್ತಿಲ್ಲ

ಅದೇನೇ ಗುಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಅಂದರೂ ಬಿಜೆಪಿಯಿಂದ ಆಪರೇಷನ್ ಕಮಲ ರಹಸ್ಯ ಕಾಪಾಡಲು ಆಗುತ್ತಿಲ್ಲ. ಏಕೆಂದರೆ ಅಧಿಕಾರದಲ್ಲಿ ಇರುವ ಜೆಡಿಎಸ್-ಕಾಂಗ್ರೆಸ್ ಗೆ ಕೇಸರಿ ಪಕ್ಷದ ಪ್ರಯತ್ನಗಳು ಗುಪ್ತಚರ ಇಲಾಖೆ ಮೂಲಕ ತಿಳಿಯುತ್ತಲೇ ಇರುತ್ತದೆ. ಆ ಪ್ರಯತ್ನಕ್ಕೆ ಎಲ್ಲೆಲ್ಲಿ, ಯಾವಾಗೆಲ್ಲ ಅಡ್ಡೇಟು ಕೊಡಲು ಸಾಧ್ಯವಾಗುತ್ತಿದೆಯೋ ಆಗೆಲ್ಲ ಆ ಕೆಲಸವನ್ನು ಮಾಡುತ್ತಿದ್ದಾರೆ. ಹಾಗಂತ ಬಿಜೆಪಿ ಪ್ರಯತ್ನಗಳೆಲ್ಲ ಠುಸ್ ಪಟಾಕಿಯೇ ಅಂತ ನೋಡಿದರೆ, ಕಳೆದ ಬಾರಿ ಸಿದ್ದರಾಮಯ್ಯ ವಿದೇಶ ಪ್ರವಾಸಕ್ಕೆ ಅಂತ ತೆರಳಿದ್ದಾಗ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯೆ ಭಿನ್ನಾಭಿಪ್ರಾಯ ತಾರಕಕ್ಕೇರಿದಾಗ ಒಂದು ಅದ್ಭುತ ಅವಕಾಶ ಇತ್ತು. ಅದಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಎಲ್ಲ ರೀತಿಯ ನೆರವು ನೀಡಿದ್ದರು. ಡಿ.ಕೆ.ಶಿವಕುಮಾರ್ ರನ್ನು ಕಟ್ಟಿ ಹಾಕಿದ್ದರು. ಆದರೆ ಆ ಬಾರಿ ವಿಫಲವಾಯಿತು. ಅಲ್ಲಿಗೆ ಬಿಜೆಪಿ ಪಾಲಿಗೆ ಆಪರೇಷನ್ ಮಾಡುವ ಅವಕಾಶವೇ ಹೊರಟು ಹೋಯಿತು. ಇನ್ನೇನಿದ್ದರೂ ಲೋಕಸಭೆ ಚುನಾವಣೆ ಮುಗಿಯುವ ತನಕ ಸುಮ್ಮನಿರಲೇಬೇಕು. ಆಗಲೂ ಪರಿಸ್ಥಿತಿ ಅನುಕೂಲ ಆಗಬಹುದು ಎಂಬ ಖಾತ್ರಿ ಇಲ್ಲ. ಅಲ್ಲಿಗೆ ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ ಅನ್ನೋ ಹಾಗೆ, ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಆಗುವ ಯೋಗ ಇದ್ದಂತಿಲ್ಲ.

English summary
Karnataka political development grabbing the attention of nation. BJP state leaders trying to form government in the state through operation lotus. But it is not working out. Why it is not possible to form the government, cannot break JDS- Congress coalition government, why? Here is the 4 reasons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X