ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಮಾತಿಗೆ, ಕುಮಾರಸ್ವಾಮಿ ನೆಮ್ಮದಿಗೆ ಇರುವ ಆ ರಹಸ್ಯ ಲಿಂಕ್ ಏನು?

By ಆರ್ ಟಿ ವಿಠ್ಠಲಮೂರ್ತಿ
|
Google Oneindia Kannada News

Recommended Video

ಮೋದಿ ಮಾತಿಗೆ, ಕುಮಾರಸ್ವಾಮಿ ನೆಮ್ಮದಿಗೆ ಇರುವ ಆ ರಹಸ್ಯ ಲಿಂಕ್ ಏನು? | Oneindia Kannada

ರಾಜ್ಯ ಬಿಜೆಪಿಯ ಕೆಲ ನಾಯಕರ ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರಾಡಿದ ಮಾತುಗಳು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ನೆಮ್ಮದಿಗೆ ಕಾರಣವಾಗಿವೆ. ಲೋಕಸಭೆ ಚುನಾವಣೆಗೂ ಮುನ್ನ ಮೋದಿ ಅವರು ಆಡಿರುವ ಮಾತುಗಳು ಕಾಂಗ್ರೆಸ್ ನಾಯಕರ ನೆಮ್ಮದಿಯನ್ನೂ ಕೆಡಿಸಬಲ್ಲವು.

ಅಂದ ಹಾಗೆ, ನರೇಂದ್ರ ಮೋದಿ ಅವರ ಮಾತುಗಳಿಗೂ, ಕುಮಾರಸ್ವಾಮಿ ಅವರಿಗೆ ನೆಮ್ಮದಿ ಸಿಕ್ಕಿದೆ ಎಂಬುದಕ್ಕೂ ಎಲ್ಲಿಂದೆಲ್ಲಿಯ ಹೋಲಿಕೆ ಎಂದು ಕೇಳುವವರಿರಬಹುದು. ಆದರೆ ಅದಕ್ಕೂ ಮುನ್ನ ತೆರೆಯ ಹಿಂದೆ ನಡೆದ ಒಂದು ರಹಸ್ಯ ಬೆಳವಣಿಗೆಯನ್ನು ಕೆದಕಬೇಕು.

ಎರಡು ದಿನಗಳ ಹಿಂದೆ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಸಾಮಾನ್ಯವಾಗಿ ಗೃಹ ಖಾತೆ ಯಾರ ಬಳಿಯೇ ಇದ್ದರೂ, ಗುಪ್ತಚರ ಇಲಾಖೆ ಮುಖ್ಯಮಂತ್ರಿಗಳ ಸುಪರ್ದಿಯಲ್ಲಿರುತ್ತದೆ.

ಸಿದ್ದರಾಮಯ್ಯ ದಾಳಕ್ಕೆ ದೇವೇಗೌಡರ ಪ್ರತಿದಾಳ, ರಾಹುಲ್ ಗಾಂಧಿ ತಳಮಳ!ಸಿದ್ದರಾಮಯ್ಯ ದಾಳಕ್ಕೆ ದೇವೇಗೌಡರ ಪ್ರತಿದಾಳ, ರಾಹುಲ್ ಗಾಂಧಿ ತಳಮಳ!

ಪ್ರತಿ ದಿನವೂ ರಾಜ್ಯದಲ್ಲಾಗಿರುವ, ಆಗುತ್ತಿರುವ ಬೆಳವಣಿಗೆಗಳ ಕುರಿತು ಮುಖ್ಯಮಂತ್ರಿಗಳಿಗೆ ಗುಪ್ತಚರ ಇಲಾಖೆ ಫಸ್ಟ್ ಹ್ಯಾಂಡ್ ಇನ್ ಫರ್ಮೇಶನ್ ಕೊಡುತ್ತದೆ. ಸಹಜವಾಗಿ ಅವತ್ತೂ ಹೀಗೇ ಗುಪ್ತಚರ ಇಲಾಖೆಯ ಆ ಅಧಿಕಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದರು.

ಗುಪ್ತಚರ ಅಧಿಕಾರಿಯಿಂದ ಬಂದ ಮಾಹಿತಿ ಏನು?

ಗುಪ್ತಚರ ಅಧಿಕಾರಿಯಿಂದ ಬಂದ ಮಾಹಿತಿ ಏನು?

ಹೀಗೆ ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಒಬ್ಬ ವ್ಯಕ್ತಿಯ ಬಾವಚಿತ್ರವನ್ನು ಮುಖ್ಯಮಂತ್ರಿಗಳಿಗೆ ತೋರಿಸಿದರು. ಸಾರ್, ಈತ ಇಂಡಸ್ಟ್ರಿಯಲಿಸ್ಟು. ರಾಜ್ಯ ಸರ್ಕಾರವನ್ನು ಹೇಗಾದರೂ ಮಾಡಿ ಬೀಳಿಸಬೇಕು ಎಂದು ವಿರೋಧಿಗಳ ಜತೆ ಕೈ ಜೋಡಿಸಿದ್ದಾರೆ. ಇದಕ್ಕಾಗಿ ಐನೂರು ಕೋಟಿ ರೂಪಾಯಿ ಬಂಡವಾಳ ಹಾಕಿದ್ದಾರೆ ಎಂದು ವಿವರಿಸಿದರು.

ಹೀಗೆ ಸರ್ಕಾರವನ್ನು ಅಲುಗಾಡಿಸಲು ವಿರೋಧಿಗಳು ಯತ್ನ ನಡೆಸುತ್ತಿದ್ದಾರೆ ಎಂಬ ಬಗ್ಗೆ ಅದು ಕುಮಾರಸ್ವಾಮಿ ಅವರಿಗೆ ಬಂದ ಮೊದಲ ಮಾಹಿತಿಯೇನಲ್ಲ. ಆದರೆ ಮುಂಚೆಲ್ಲ ಇಂತಹ ಮಾಹಿತಿಗಳು ದಕ್ಕಿದ ಕೂಡಲೇ ಅವರು ತಕ್ಷಣವೇ ಪರ್ಯಾಯ ತಂತ್ರಗಾರಿಕೆಗೆ ಮುಂದಾಗುತ್ತಿದ್ದರು.

ಪರಿಣಾಮವಾಗಿ, ಸರ್ಕಾರ ಉರುಳಿಸಲು ಯಾರು ಯತ್ನನಡೆಸುತ್ತಿದ್ದಾರೋ? ಅವರನ್ನು ಕಟ್ಟಿ ಹಾಕುವುದರಿಂದ ಹಿಡಿದು, ವಿರೋಧಿಗಳ ಜತೆ ಕೈ ಜೋಡಿಸಲು ಹೊರಟ ಶಾಸಕರ ಮನ ಒಲಿಸುವ ತನಕ ವಿವಿಧ ಹಂತಗಳ ಕಾರ್ಯಾಚರಣೆ ನಡೆಸುತ್ತಿದ್ದರು.

ಭಿನ್ನಮತೀಯರ ದಾಳಿಗೆ ಆಪರೇಷನ್ 'ಕೆಜಿಎಫ್' ಸಾಧ್ಯವಾಗುವುದೆ?ಭಿನ್ನಮತೀಯರ ದಾಳಿಗೆ ಆಪರೇಷನ್ 'ಕೆಜಿಎಫ್' ಸಾಧ್ಯವಾಗುವುದೆ?

ಈ ಸರ್ಕಾರ ಬಿದ್ದರೆ ಬೀಳಲಿ ಬಿಡಿ

ಈ ಸರ್ಕಾರ ಬಿದ್ದರೆ ಬೀಳಲಿ ಬಿಡಿ

ಆದರೆ ಈ ಸಲ ಗುಪ್ತಚರ ಇಲಾಖೆಯ ಆ ಅಧಿಕಾರಿ ಮಾಹಿತಿ ನೀಡಿದ್ದೇ ತಡ, ಕುಮಾರಸ್ವಾಮಿ ಮೌನವಾದರು. ಸಿಎಂ ಏನೂ ಮಾತನಾಡದಿರುವುದನ್ನು ನೋಡಿದ ಆ ಅಧಿಕಾರಿ, ಸಾರ್, ಇಂತಹ ಪರಿಸ್ಥಿತಿಯಲ್ಲಿ ನಾವು ಏನು ಮಾಡಬೇಕು? ಅಂತ ನೀವು ಮಾರ್ಗದರ್ಶನ ನೀಡಿದರೆ ಒಳ್ಳೆಯದು ಎಂದರು.

ಆಗ ಕುಮಾರಸ್ವಾಮಿ ಅವರು, ಈ ಸರ್ಕಾರ ಬಿದ್ದರೆ ಬೀಳಲಿ ಬಿಡಿ. ಯಾವ್ಯಾವ ಶಾಸಕರು ಬಿಜೆಪಿಯ ಜತೆ ಹೋಗಬೇಕು ಅಂತಿದ್ದಾರೋ? ಅವರನ್ನು ಯಾರೂ ತಡೆಯುವುದು ಬೇಡ. ಈ ಸರ್ಕಾರ ಇದ್ದರೂ ಅಷ್ಟೇ, ಹೋದರೂ ಅಷ್ಟೇ ಎಂದು ಬಿರುಸಾಗಿಯೇ ಹೇಳಿದ್ದಾರೆ.

ಮುಖ್ಯಮಂತ್ರಿಗಳಿಂದ ಈ ಉತ್ತರ ನಿರೀಕ್ಷಿಸದ ಅ ಆಧಿಕಾರಿ ದೂಸರಾ ಮಾತನಾಡದೆ ನಮಸ್ಕರಿಸಿ ಜಾಗ ಖಾಲಿ ಮಾಡಿದ್ದಾರೆ. ಆ ಅಧಿಕಾರಿಯ ಮಾತು ಮತ್ತು ಅದಕ್ಕೆ ಕುಮಾರಸ್ವಾಮಿ ನೀಡಿದ ಪ್ರತಿಕ್ರಿಯೆ ಈಗ ಉನ್ನತ ಮಟ್ಟದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ಕೈ ಗ್ಯಾಂಗಿಗೆ ಸಿದ್ದುವೇ ಚಕ್ರವರ್ತಿ, ಮಿಡ್ಲ್ ಮನ್ನುಗಳಿಗೆ ಫುಲ್ಲು ನಿಶ್ಯಕ್ತಿ!ಕೈ ಗ್ಯಾಂಗಿಗೆ ಸಿದ್ದುವೇ ಚಕ್ರವರ್ತಿ, ಮಿಡ್ಲ್ ಮನ್ನುಗಳಿಗೆ ಫುಲ್ಲು ನಿಶ್ಯಕ್ತಿ!

ಕುತೂಹಲ ಹುಟ್ಟಿಸಿದ್ದೇ ಎಚ್ಡಿಕೆ ಮಾತು

ಕುತೂಹಲ ಹುಟ್ಟಿಸಿದ್ದೇ ಎಚ್ಡಿಕೆ ಮಾತು

ಅಂದ ಹಾಗೆ ಕುಮಾರಸ್ವಾಮಿ ಹೀಗೇಕೆ ಹೇಳಿದರು? ಹಿಂದೆಲ್ಲ ಈ ರೀತಿಯ ಮಾಹಿತಿ ಸಿಕ್ಕಿದರೆ ಸರ್ಕಾರ ಉಳಿಸಿಕೊಳ್ಳಲು ಯತ್ನಿಸುತ್ತಿದ್ದವರು ಈಗೇಕೆ ಸರ್ಕಾರ ಹೋದರೆ ಹೋಗಲಿ ಎಂದು ಹೇಳುತ್ತಿದ್ದಾರೆ? ಅನ್ನುವುದು ಎಲ್ಲರ ಕುತೂಹಲ.

ಇದಕ್ಕೆ ಕಾರಣ ಹುಡುಕುತ್ತಾ ಹೋದರೆ ಮೊದಲು ಕಣ್ಣಿಗೆ ಕಾಣುವುದು ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ. ಸಂಪುಟ ಪುನಾರಚನೆಯ ನಂತರ ಸಿದ್ದರಾಮಯ್ಯ ಕೈ ಪಾಳೆಯದಲ್ಲಿ ದಿನ ಕಳೆದಂತೆ ಬಲಿಷ್ಠರಾಗುತ್ತಾ ಹೋಗುತ್ತಿದ್ದಾರೆ.

ಮೊದಲನೆಯದಾಗಿ ಅವರು ಸೂಚಿಸಿದವರು ಮಂತ್ರಿ ಮಂಡಲಕ್ಕೆ ಸೇರ್ಪಡೆಯಾದರು. ಅವರು ಹೇಳಿದವರ ಪೈಕಿ ಬಹುತೇಕರು ನಿಗಮ-ಮಂಡಳಿಗಳ ಅಧ್ಯಕ್ಷರಾದರು. ಇದು ಫೈನಲಿ, ತಮ್ಮ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರೇನೋ ಎಐಸಿಸಿ ಅಧ್ಯಕ್ಷರಿಗೆ ಮಾಹಿತಿ ಮುಟ್ಟಿಸಿದರು. ಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲಿ ನಡೆದ ಮಾತುಕತೆಗೂ,ಈಗಿನ ಬೆಳವಣಿಗೆಗೂ ವ್ಯತ್ಯಾಸವಿದೆ.ಹೀಗಾಗಿ ಮೈತ್ರಿ ಧರ್ಮ ಪಾಲಿಸದಿದ್ದರೆ ಸರ್ಕಾರ ಉಳಿಯುವುದು ಕಷ್ಟ ಎಂದಿದ್ದರು.

ಆಪರೇಷನ್ ಕಮಲ ಮಾಡಲು ಬಿಎಸ್ವೈಗೆ ಹೈಕಮಾಂಡ್ ಗ್ರೀನ್ ಸಿಗ್ನಲ್!ಆಪರೇಷನ್ ಕಮಲ ಮಾಡಲು ಬಿಎಸ್ವೈಗೆ ಹೈಕಮಾಂಡ್ ಗ್ರೀನ್ ಸಿಗ್ನಲ್!

ರಾಹುಲ್ ಬಗ್ಗೆಯೇ ಎಚ್ಡಿಕೆಗೆ ಅಪನಂಬಿಕೆ

ರಾಹುಲ್ ಬಗ್ಗೆಯೇ ಎಚ್ಡಿಕೆಗೆ ಅಪನಂಬಿಕೆ

ಆಗ ರಾಹುಲ್ ಗಾಂಧಿ ಕೂಡಾ ಎಚ್ಚೆತ್ತುಕೊಂಡು ವಿವರ ಪಡೆದಿದ್ದರು. ಅಷ್ಟೇ ಅಲ್ಲ, ಏನೇ ಆದರೂ ಜೆಡಿಎಸ್ ಗೆ ಮುಜುಗರವಾಗುವ ರೀತಿಯಲ್ಲಿ ನಡೆದುಕೊಳ್ಳುವುದು ಬೇಡ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡ ಕೆ.ಸಿ. ವೇಣುಗೋಪಾಲ್ ಅವರಿಗೆ ಹೇಳಿದ್ದರು.

ಅದರ ಪ್ರಕಾರ, ವೇಣುಗೋಪಾಲ್ ಕೂಡಾ ಮೊನ್ನೆ ಕರ್ನಾಟಕಕ್ಕೆ ಬಂದವರು, ಜೆಡಿಎಸ್ ವಿಷಯದಲ್ಲಿ ಅಚ್ಚಾ ಅಚ್ಚಾ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜತೆ ಸೇರಿ ಇಪ್ಪತ್ತೆಂಟು ಕ್ಷೇತ್ರಗಳನ್ನೂ ಗೆಲ್ಲಲು ಪ್ರಯತ್ನಿಸುತ್ತೇವೆ ಎಂದಿದ್ದರು.

ಆದರೆ ರಾಹುಲ್ ಗಾಂಧಿಯವರ ಬಗ್ಗೆ ಅನುಮಾನವಿಲ್ಲದಿದ್ದರೂ, ಅವರು ನಿಂತಿರುವ ಸಂದರ್ಭದ ಬಗ್ಗೆ ಈಗ ಕುಮಾರಸ್ವಾಮಿ ಅವರಿಗೆ ಅಪನಂಬಿಕೆ ಶುರುವಾಗಿದೆ. ಮೊದಲನೆಯದಾಗಿ, ದಿಲ್ಲಿ ಗದ್ದುಗೆ ಸಿಗುವವರೆಗೆ ಕಾಂಗ್ರೆಸ್ ಪಕ್ಷ ತಮ್ಮೊಂದಿಗೆ ಸೌಹಾರ್ದವಾಗಿ ನಡೆದುಕೊಳ್ಳಲು ಯತ್ನಿಸುತ್ತದೆ. ಆದರೆ ಅದು ಮೇಲು ನೋಟದ ಯತ್ನ. ಆಳದಲ್ಲಿ ಸಿದ್ದರಾಮಯ್ಯ ಅವರಿಗೆ ಬಲ ತುಂಬುತ್ತಲೇ ಹೋಗುತ್ತದೆ.

ಕುಮಾರಸ್ವಾಮಿ ಮಾತು ಕೇಳಿ ಕಂಗಾಲಾಗಿರುವ ರಾಹುಲ್ ಗಾಂಧಿ!ಕುಮಾರಸ್ವಾಮಿ ಮಾತು ಕೇಳಿ ಕಂಗಾಲಾಗಿರುವ ರಾಹುಲ್ ಗಾಂಧಿ!

ಕಾಂಗ್ರೆಸ್ಸಿಗೆ ಪ್ರಬಲ ಸೇನಾ ನೆಲೆ ಕರ್ನಾಟಕ

ಕಾಂಗ್ರೆಸ್ಸಿಗೆ ಪ್ರಬಲ ಸೇನಾ ನೆಲೆ ಕರ್ನಾಟಕ

ಹೀಗೆ ಮಾಡುವುದು ಕೂಡಾ ಒಂದು ರೀತಿಯಲ್ಲಿ ಜೆಡಿಎಸ್ ಪಕ್ಷವನ್ನು ದುರ್ಬಲಗೊಳಿಸುವ ತಂತ್ರವೇ ವಿನ: ಮತ್ತೇನಲ್ಲ. ಹಾಗೆಯೇ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೂರು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆಯಾದರೂ, ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಅದರ ಕೈಲಿರುವ ಪ್ರಬಲ ಸೇನಾ ನೆಲೆ ಎಂದರೆ ಕರ್ನಾಟಕ ಮಾತ್ರ.

ಹೀಗೆ ರಾಷ್ಟ್ರ ರಾಜಕಾರಣದಲ್ಲಿ ನಿರ್ಣಾಯಕವಾಗುವ ಐದು ಸೇನಾ ನೆಲೆಗಳ ಪೈಕಿ ಗುಜರಾತ್ ಮೊದಲನೆಯದು, ಮಹಾರಾಷ್ಟ್ರ ಎರಡನೆಯದು. ಕರ್ನಾಟಕ ಮೂರನೆಯದು. ನಂತರದ ಸ್ಥಾನ ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶಗಳದು.

ಈ ಸೇನಾ ನೆಲೆಗಳ ಪೈಕಿ ಕರ್ನಾಟಕ ಹೊರತುಪಡಿಸಿದರೆ ಬೇರೆ ಯಾವ ಯುದ್ಧ ನೆಲೆಗಳಲ್ಲೂ ಕಾಂಗ್ರೆಸ್ ಸೈನ್ಯಕ್ಕೆ ಶಕ್ತಿ ಇಲ್ಲ. ಉಳಿದಂತೆ ಈಗ ಕಾಂಗ್ರೆಸ್ ಅಧಿಕಾರ ನಡೆಸುತ್ತಿರುವ ರಾಜ್ಯಗಳೆಲ್ಲ ಯುದ್ಧದ ನೆಲೆಯಲ್ಲಿ ನೋಡಿದರೆ ಒಂಥರಾ ಔಟ್ ಪೋಸ್ಟುಗಳಿದ್ದಂತೆಯೇ ಹೊರತು, ಸೇನಾ ನೆಲೆಗಳಾಗುವ ಶಕ್ತಿ ಅವಕ್ಕಿಲ್ಲ.

ಈ ಕಾರಣಕ್ಕಾಗಿಯೇ ಉರುಳಲಿ ಎಂದಿದ್ದು

ಈ ಕಾರಣಕ್ಕಾಗಿಯೇ ಉರುಳಲಿ ಎಂದಿದ್ದು

ಯಾಕೆಂದರೆ ಲೋಕಸಭೆ ಚುನಾವಣೆಯಂತಹ ಯುದ್ಧಕ್ಕೆ ಪ್ರಬಲ ಶಸ್ತ್ರಾಸ್ತ್ರಗಳನ್ನು ಒದಗಿಸುವ ಶಕ್ತಿ ಇರುವುದು ಈ ಐದು ಸೇನಾ ನೆಲೆಗಳಿಗೆ ಮಾತ್ರ. ಹೀಗಾಗಿ ಕಾಂಗ್ರೆಸ್ ಮೃದು ಧೋರಣೆಯ ನಾಟಕವಾಡುತ್ತಿದೆ ಎಂಬುದು ಕುಮಾರಸ್ವಾಮಿ ಅವರ ಅನುಮಾನ.

ಹೀಗಾಗಿ ಅವರು, ಕರ್ನಾಟಕ ಎಂಬ ಸೇನಾ ನೆಲೆ ಕೈ ಸೈನ್ಯಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗಬಾರದು ಎಂದು ಯೋಚಿಸಿದ್ದಾರೆ. ಇದೇ ಕಾರಣಕ್ಕಾಗಿ ಅವರು ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗದೆ, ಅದು ಉರುಳುವುದಾದರೆ ಉರುಳಲಿ ಎಂದು ಹೇಳುತ್ತಿರುವುದು.

ಹೀಗಾಗಿ ಕುಮಾರಸ್ವಾಮಿ ಅವರ ನಿರ್ಧಾರ ದೊಡ್ಡ ತಲೆನೋವು ತಂದಿರುವುದು ಕಾಂಗ್ರೆಸ್ ಪಕ್ಷಕ್ಕೆ. ಈ ಹಿಂದೆ ಸರ್ಕಾರ ಉರುಳುವ ಯತ್ನ ನಡೆದರೆ ಕುಮಾರಸ್ವಾಮಿ ಅದನ್ನು ತಡೆಯುವ ಯತ್ನವನ್ನಾದರೂ ಮಾಡುತ್ತಿದ್ದರು. ಈಗ ಅಂತಹ ಯತ್ನ ಮಾಡದೆ ಸುಮ್ಮನಿರಲು ನಿರ್ಧರಿಸಿದ್ದಾರೆ.

ಕುಮಾರಸ್ವಾಮಿ ಬಗ್ಗೆ ಮೋದಿ ಮೆಚ್ಚುಗೆ

ಕುಮಾರಸ್ವಾಮಿ ಬಗ್ಗೆ ಮೋದಿ ಮೆಚ್ಚುಗೆ

ಈ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಈಗ ಪ್ರಧಾನಿ ನರೇಂದ್ರ ಮೋದಿ ಅವರ ವಿಷಯಕ್ಕೆ ಬರೋಣ. ಕೆಲ ದಿನಗಳ ಹಿಂದೆ ತಮ್ಮನ್ನು ಭೇಟಿ ಮಾಡಿದ ಬಿಜೆಪಿಯ ರಾಜ್ಯ ನಾಯಕರ ಬಳಿ ಅವರು, ನಮ್ಮದೇನಿದ್ದರೂ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸುವ ಯತ್ನವೇ ಹೊರತು ಜೆಡಿಎಸ್ ಪಕ್ಷವನ್ನಲ್ಲ ಎಂದು ಹೇಳಿದ್ದಾರೆ.

ಹಾಗೆಯೇ, ಕುಮಾರಸ್ವಾಮಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಯಾರೇನೇ ಹೇಳಲಿ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ನಡೆದುಕೊಳ್ಳುತ್ತಿರುವ ರೀತಿಯಿಂದ ನಾನು ಆಶ್ಚರ್ಯಚಕಿತನಾಗಿದ್ದೇನೆ. ರಾಜ್ಯ ಮಟ್ಟದಲ್ಲಿ ಯಾರೇನೇ ಮಾತನಾಡಲಿ. ಆದರೆ ಅವರು ಮೇಲಿಂದ ಮೇಲೆ ದೆಹಲಿಗೆ ಬರುತ್ತಾರೆ. ಬರುವಾಗ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನು ಹಿಡಿದುಕೊಂಡು ಬರುತ್ತಾರೆ. ನಾನಷ್ಟೇ ಅಲ್ಲ, ಕೇಂದ್ರ ಸರ್ಕಾರದಲ್ಲಿರುವ ಹಲವು ಸಚಿವರನ್ನು ಭೇಟಿ ಮಾಡುತ್ತಾರೆ. ಒಂದು ವೇಳೆ ಕೆಲಸವಾಗಿಲ್ಲ ಅಂದರೆ ಖುದ್ದು ತಮ್ಮ ತಂದೆ ದೇವೇಗೌಡರನ್ನು ಕರೆದುಕೊಂಡು ದೆಹಲಿಗೆ ಬಂದು ಬಿಡುತ್ತಾರೆ.

ಎಚ್ಡಿಕೆಯನ್ನು ನೋಡಿ ಕಲಿಯುವುದು ಸಾಕಷ್ಟಿದೆ

ಎಚ್ಡಿಕೆಯನ್ನು ನೋಡಿ ಕಲಿಯುವುದು ಸಾಕಷ್ಟಿದೆ

ಎಷ್ಟೇ ಆದರೂ ದೇವೇಗೌಡ ಮಾಜಿ ಪ್ರಧಾನಿ. ಅವರೇ ಬಂದು ಮುಂದೆ ಕುಳಿತರೆ ಕೆಲಸ ಮಾಡಿಕೊಡಲಾಗುವುದಿಲ್ಲ ಎಂದು ಯಾರು ಹೇಳಲು ಸಾಧ್ಯ? ಹೀಗೆ ಚಾಕಚಕ್ಯತೆಯಿಂದ ಕೆಲಸ ಮಾಡುತ್ತಿರುವ ಕುಮಾರಸ್ವಾಮಿ ಅವರನ್ನು ನೋಡಿ, ನಮ್ಮವರು ಕಲಿಯುವುದು ಬಹಳಷ್ಟಿದೆ ಎಂದು ಮುಕ್ತಕಂಠದಿಂದ ಹೊಗಳಿದ್ದಾರೆ.

ಮೋದಿಯವರು ತಮ್ಮ ಬಗ್ಗೆ ಆಡಿದ ಈ ಮಾತುಗಳು ಸಹಜವಾಗಿಯೇ ಕುಮಾರಸ್ವಾಮಿ ಅವರ ನೆಮ್ಮದಿಗೆ ಕಾರಣವಾಗಿವೆ. ಅದರ ಬೆನ್ನ ಹಿಂದೆಯೇ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರು, ನಿಮ್ಮ ಕೈಲಾದಷ್ಟು ದಿನ ಕಾಂಗ್ರೆಸ್ ಜತೆ ಕೆಲಸ ಮಾಡಿ, ಆಗದಿದ್ದರೆ ನಿಮ್ಮವರು ಅಂತ ನಾವಿರುತ್ತೇವೆ ಎಂದು ನೀಡಿದ ಭರವಸೆ ನೆನಪಾಗಿದೆ.

ದುರ್ಬಲವಾಗುತ್ತಿರುವ ಮೈತ್ರಿಕೂಟ

ದುರ್ಬಲವಾಗುತ್ತಿರುವ ಮೈತ್ರಿಕೂಟ

ಹೀಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿದ್ದ ಭರವಸೆ ಪ್ಲಸ್ ಪ್ರಧಾನಿ ನರೇಂದ್ರ ಮೋದಿ ಅವರಾಡಿದ ಮೆಚ್ಚುಗೆಯ ಮಾತು ಸಹಜವಾಗಿಯೇ ಎಚ್ ಡಿ ಕುಮಾರಸ್ವಾಮಿ ಅವರ ಮನಸ್ಸಿನ ಮೇಲೆ ಪ್ರಭಾವ ಬೀರಿದೆ. ಹೀಗಾಗಿ ಅವರು ಸರ್ಕಾರದ ಅಳಿವು, ಉಳಿವಿನ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ. ಸರಕಾರ ಬಿದ್ದರೆ ಬೀಳಲಿ ಎಂದು ಹೇಳಿದ್ದೇ ಈ ಕಾರಣಕ್ಕೆ.

ಅದರ ಬದಲು ಮುಂದಿನ ದಿನಗಳಲ್ಲಿ ತಾವಿಡಬಹುದಾದ ಹೆಜ್ಜೆಗಳು ಹೇಗಿರಬೇಕು? ಅಂತ ಯೋಚಿಸುತ್ತಿದ್ದಾರೆ, ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದ್ದಾರೆ. ಅರ್ಥಾತ್, ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಬಹಿರಂಗವಾಗಿಯಲ್ಲದಿದ್ದರೂ, ಆಳದಲ್ಲಿ ದುರ್ಬಲವಾಗುತ್ತಾ ನಡೆದಿದೆ. ಅಲ್ಲದೆ, ಗೌಡರು ಹನ್ನೆರಡು ಕ್ಷೇತ್ರಗಳಿಗಾಗಿ ಬೇಡಿಕೆ ಇಟ್ಟಿರುವುದೂ ಕಾಂಗ್ರೆಸ್ಸನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

English summary
Narendra Modi's one word of appreciation has flattened HD Kumaraswamy and forced him to think about coalition govt with clearer mind. So, what did Narendra Modi say about Kumaraswamy? Political analysis by R T Vittalmurthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X