ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಕ್ಕೆ ಇ-ಬುಕ್ಸ್ ಏಕೆ ಬೇಕು?: ಮೈಲ್ಯಾಂಗ್ ಸಿಇಒ ಅಭಿಪ್ರಾಯ

|
Google Oneindia Kannada News

ಪುಸ್ತಕಗಳ ವಿತರಣೆಗಾಗಿ ಈ-ಬುಕ್ಸ್ ಟೆಕ್ನಾಲಜಿಯನ್ನು ಬಳಸುವುದು ಮತ್ತು ಜಾಗತಿಕ ಪುಸ್ತಕ ಪ್ರಕಾಶನ ಸಂಸ್ಥೆಗಳ ಉನ್ನತ ವಿಧಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಇವೇ ಮುಂತಾದ ಸುಧಾರಣೆಗಳನ್ನು ತರಬೇಕೆಂಬ ಸಂಕಲ್ಪ ಮೈಲ್ಯಾಂಗ್(MyLangBooks) ಸಂಸ್ಥೆ ಸಿಇಒ ಪವಮಾನ ಪ್ರಸಾದ್ ಅವರು ಕನ್ನಡ ಪುಸ್ತಕ ಲೋಕಕ್ಕೆ ಇ ಬುಕ್ಸ್ ಏಕೆ ಬೇಕು ಎಂಬುದರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ..

ಪುಸ್ತಕ ಎನ್ನುವುದು ಒಂದು ಇನ್ಫರ್ಮೇಶನ್ ಪ್ರಾಡಕ್ಟ್ ಅಥವಾ ಮಾಹಿತಿಯ ವಸ್ತು. ಒಂದು ಪುಸ್ತಕದಲ್ಲಿ ನಿಜವಾಗಿ ನಮಗೆ ಸಿಗುವುದು ಜ್ಞಾನ ಅಥವಾ ಮನರಂಜನೆ. 'ಪುಸ್ತಕ' ಎನ್ನುವ ಸ್ವರೂಪದಲ್ಲಿ ಇವು ನಮಗೆ ಒಂದು ವಿಶಿಷ್ಟ ರೀತಿಯಲ್ಲಿ ದಕ್ಕುತ್ತವೆ. ಕಾಗದ ಎನ್ನುವುದು ಪುಸ್ತಕಕ್ಕೆ ಒಂದು ಮಾಧ್ಯಮವಷ್ಟೇ. ಆಯಾ ಕಾಲಕ್ಕೆ ಯಾವ ಯಾವ ಮಾಧ್ಯಮಗಳು ಲಭ್ಯವಿರುತ್ತವೋ ಅವೆಲ್ಲವನ್ನೂ ಪುಸ್ತಕಗಳಿಗಾಗಿ ಬಳಸಿಕೊಳ್ಳಬಹುದು. (ಹಿಂದಿನ ಕಾಲದಲ್ಲಿ ತಾಳೆಗರಿ ಬಳಸುತ್ತಿರಲಿಲ್ಲವೇ?)

ಸರ್ಕಾರದ ಇ ಬುಕ್ ಯೋಜನೆ ವಿರುದ್ಧ ಪ್ರಕಾಶಕರು ಕಿಡಿಕಾರಿದ್ದೇಕೆ?ಸರ್ಕಾರದ ಇ ಬುಕ್ ಯೋಜನೆ ವಿರುದ್ಧ ಪ್ರಕಾಶಕರು ಕಿಡಿಕಾರಿದ್ದೇಕೆ?

ಈ ಕಾಲದಲ್ಲಿ ನಮಗೆ ಪ್ರಮುಖವಾಗಿ ಲಭ್ಯವಿರುವ ಮಾಧ್ಯಮಗಳು ಕಾಗದ, ಈ-ಬುಕ್ಸ್ ಮತ್ತು ಆಡಿಯೋ ಬುಕ್ಸ್. ಪುಸ್ತಕಗಳಿಗಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ಬಳಸಿಕೊಂಡರೆ ಅವು ಹೆಚ್ಚು ಹೆಚ್ಚು ಜನರನ್ನು ವೇಗವಾಗಿ ಮತ್ತು ಸುಲಭವಾಗಿ ತಲುಪಬಹುದು. ಕನ್ನಡ ಓದುಗರು ಈ-ಬುಕ್ಸ್ ಅನ್ನು ಒಪ್ಪಿಕೊಳ್ಳುವರೇ ಎನ್ನುವ ಪ್ರಶ್ನೆಗೆ ಉತ್ತರ: ಬೇರೆ ಭಾಷೆಗಳ ಓದುಗರಿಗಿಂತ ಕನ್ನಡದ ಓದುಗರು ಮೂಲಭೂತವಾಗಿ ಬೇರೆ ಎಂದು ಹೇಳುವುದಕ್ಕೆ ನಮ್ಮ ಬಳಿ ಯಾವುದೇ ಆಧಾರವಿಲ್ಲ. ಎಲ್ಲರಂತೆ ನಾವು ಕೂಡ ಎನ್ನುವುದು ಒಪ್ಪಿಕೊಳ್ಳಬಹುದಾದ ಇಂಟ್ಯೂಶನ್.

ಕನ್ನಡದ ಓದುಗರು ಈ-ಬುಕ್ಸ್ ಒಪ್ಪಿಕೊಳ್ಳುವುದಿಲ್ಲ ಎಂದು ಅಂಕಿ ಅಂಶಗಳ ಮೂಲಕ ಸಿದ್ಧ ಮಾಡಿ ತೋರಿಸಬಹುದಾದ ಯಾವುದೇ ಗಂಭೀರ ಪ್ರಯತ್ನಗಳು ಕನ್ನಡದಲ್ಲಿ ನಡೆದಿಲ್ಲ. ಚೂರು ಪಾರು ಪ್ರಯತ್ನಗಳನ್ನು ಕೆಲವು ಹವ್ಯಾಸಿಗಳು ಮಾಡಿರಬಹುದು. ಇನ್ನು ಕೆಲವರು ತಮ್ಮ ಬಿಜಿನೆಸ್ ಬೇಳೆ ಬೇಯಿಸಿಕೊಳ್ಳಲು ಕನ್ನಡ ಈ-ಬುಕ್ಸ್ ಎಂಬ ಕಾನ್ಸೆಪ್ಟ್ ಅನ್ನು ತಾತ್ಕಾಲಿಕವಾಗಿ ಬಳಸಿಕೊಂಡು ತಮ್ಮ ಕಾರ್ಯಸಾಧನೆಯಾದ ಮೇಲೆ ಅದನ್ನು ಒಗೆದು ಬಿಸಾಡಿರಬಹುದು. ಅದರಿಂದ ಏನೂ ಸಿದ್ಧವಾಗುವುದಿಲ್ಲ. ಹಾಗಾಗಿ ನಾವು ಗಂಭೀರ ಪ್ರಯತ್ನ ಮಾಡದೇ ಸುಮ್ಮನೇ ಹಿಂದೇಟು ಹಾಕುವುದು ಲೇಜೀನೆಸ್.

 ಕನ್ನಡ ಪುಸ್ತಕೋದ್ಯಮ ಸರಿಯಾದ ಹಂಚಿಕೆ ವ್ಯವಸ್ಥೆ

ಕನ್ನಡ ಪುಸ್ತಕೋದ್ಯಮ ಸರಿಯಾದ ಹಂಚಿಕೆ ವ್ಯವಸ್ಥೆ

ಕನ್ನಡ ಪುಸ್ತಕೋದ್ಯಮ ಸರಿಯಾದ ಹಂಚಿಕೆ ವ್ಯವಸ್ಥೆ ಮತ್ತು ಪ್ರಚಾರ ಇಲ್ಲದೆ ನರಳುತ್ತಿದೆ. ಇಂಥ ಸಂದರ್ಭದಲ್ಲಿ ಓದುಗರಿಗೆ ಪುಸ್ತಕಗಳ ಬಗ್ಗೆ ಮಾಹಿತಿ ಒದಗಿಸುವುದು ಮತ್ತು ಅದು ಸುಲಭವಾಗಿ ದೊರಕುವಂತೆ ಮಾಡುವುದು ಇಂದಿನ ತುರ್ತು. ಇವೆರಡನ್ನೂ ಈ-ಬುಕ್ಸ್ ಸಾಧ್ಯ ಮಾಡಬಲ್ಲುದು.

ಇಂದಿನ ಯುವಜನರು ಯಾವಾಗಲೂ ಮೊಬೈಲ್ ಫೋನಿನಲ್ಲೇ ಮುಳುಗಿರುತ್ತಾರೆ ಎನ್ನುವುದು ನಿಜವಾದರೂ ಮೊಬೈಲ್ ಫೋನ್ ಒಂದು ಮಾಧ್ಯಮವಷ್ಟೇ ಅನ್ನುವುದನ್ನು ನಾವು ಮರೆಯಬಾರದು. ಅವರನ್ನು ಪುಸ್ತಕ ಓದುವಂತೆ ಮಾಡಬೇಕೆಂದಿದ್ದರೆ, ಪುಸ್ತಕಗಳನ್ನು ಮೊಬೈಲಿನಲ್ಲೇ ಸಿಗುವಂತೆ ಮಾಡುವುದು ಜಾಣ್ಮೆಯ ಮಾರ್ಗ. ಅವರನ್ನು ಅಂಗಡಿಗೆ ಹೋಗಿ ಕಾಗದದ ಪುಸ್ತಕವನ್ನೇ ಕೊಳ್ಳ್ರಿರಿ ಎಂದು ಒತ್ತಾಯಿಸುವುದರಿಂದ ಪ್ರಯೋಜನವಿಲ್ಲ. ಯುವ ಓದುಗರನ್ನು ಕನ್ನಡಕ್ಕೆ ಸೆಳೆದುಕೊಳ್ಳುವುದು ಅತಿ ಮುಖ್ಯವಾದ ಕೆಲಸ. ಅವರು ಮುಂದಿನ ಪೀಳಿಗೆಗೆ ಕನ್ನಡವನ್ನು ದಾಟಿಸುವ ಕೊಂಡಿಯಾಗಬಲ್ಲರು, ಆಗಬೇಕು.

 ಕನ್ನಡ ಓದುವ ಅಭ್ಯಾಸವಿರದ ವರ್ಗ

ಕನ್ನಡ ಓದುವ ಅಭ್ಯಾಸವಿರದ ವರ್ಗ

ಕನ್ನಡದ ಪುಸ್ತಕಗಳನ್ನು ಓದಬೇಕೆಂಬ ಹಂಬಲವಿದ್ದೂ ಕನ್ನಡ ಓದುವ ಅಭ್ಯಾಸವಿರದ ವರ್ಗವೊಂದಿದೆ. ಈ ವರ್ಗವನ್ನು ನಾವು ನಗರದಲ್ಲಿ ಹೆಚ್ಚಾಗಿ ಕಾಣಬಹುದು. ಇಂಥವರಿಗೆ ಆಡಿಯೋ ಬುಕ್ಸ್ ಒಂದು ವರದಾನವಾಗಬಲ್ಲುದು. ಕನ್ನಡದಿಂದ ಜಾರಿಹೋದ ಈ ವರ್ಗವನ್ನು ಮತ್ತೆ ಕನ್ನಡಕ್ಕೆ ತರುವ ಅವಕಾಶವನ್ನು ಆಡಿಯೋ ಬುಕ್ಸ್ ಒದಗಿಸಬಲ್ಲುದು.

ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಇಷ್ಟೆಲ್ಲ ಅನುಕೂಲ ಇದ್ದಾಗ್ಯೂ ಕಾಗದದ ಪುಸ್ತಕಗಳಿಗೆ ತನ್ನದೇ ಒಂದು ಆಕರ್ಷಣೆ ಇದ್ದೇ ಇದೆ. ಈ-ಬುಕ್ಸ್ ಲಭ್ಯವಿದ್ದ ಮಾತ್ರಕ್ಕೆ ಎಲ್ಲರೂ ಈ-ಬುಕ್ಸ್ ಅನ್ನೇ ಕೊಳ್ಳುವರು ಎನ್ನುವುದು ಸುಳ್ಳು ಎಂದು ಸಾಬೀತಾಗಿದೆ. ಇದನ್ನು ಇಂಗ್ಲಿಶ್ ಮುಂತಾದ ಪುಸ್ತಕೋದ್ಯಮಗಳಲ್ಲಿ ನಡೆದಿರುವ ವಿದ್ಯಮಾನಗಳು ಸ್ಪಷ್ಟ ಪಡಿಸುತ್ತವೆ. ನಿಜಕ್ಕೂ, ಈ ಬುಕ್ಸ್ ಬಂದ ಮೇಲೆ ಕಾಗದದ ಪುಸ್ತಕಗಳೂ ಹೆಚ್ಚು ಮಾರಾಟವಾಗುವುದು ಕಂಡು ಬಂದಿದೆ. ಏಕೆಂದರೆ ಈ ಬುಕ್ಸ್-ನಿಂದ ಪುಸ್ತಕದ ಬಗೆಗಿನ ಪ್ರಚಾರ ಹೆಚ್ಚು ವ್ಯಾಪಕವಾಗಿ ಆಗುತ್ತದೆ. ಇದರಿಂದ ಕಾಗದವನ್ನೇ ಬಯಸುವ ಮಂದಿಯೂ ಕಾಗದದ ಪುಸ್ತಕಗಳನ್ನು ಕೊಳ್ಳುವಂತಾಗುತ್ತದೆ.

ಒಟ್ಟಿನಲ್ಲಿ ಓದುಗರು ಯಾವ ಯಾವ ಮಾಧ್ಯಮಗಳಲ್ಲಿ ಓದಲು ಸಾಧ್ಯವಿದೆಯೋ ಅವೆಲ್ಲದರಲ್ಲೂ ಪುಸ್ತಕಗಳನ್ನು ನೀಡುವುದು ಪುಸ್ತಕೋದ್ಯಮವು ಮಾಡಬಹುದಾದ ಜಾಣತನದ ಕೆಲಸ. ಹಾಗೆ ಮಾಡುವುದು ಒಂದು ವೃತ್ತಿಪರ ಹೊಣೆಗಾರಿಕೆಯೂ ಹೌದು.

 ಮೈಲ್ಯಾಂಗ್ ಬುಕ್ಸ್ ಬಗ್ಗೆ

ಮೈಲ್ಯಾಂಗ್ ಬುಕ್ಸ್ ಬಗ್ಗೆ

ಮೈಲ್ಯಾಂಗ್ ಬುಕ್ಸ್ ಎನ್ನುವುದು ಒಂದು ಹೊಚ್ಚ ಹೊಸ ಕನ್ನಡ ಪುಸ್ತಕಗಳ ಪ್ರಕಾಶನ ಸಂಸ್ಥೆ. ಇದನ್ನು ಕಟ್ಟುತ್ತಿರುವ ತಂಡದವರಾದ ನಾವು ಟೆಕ್ನಾಲಜಿ ಆಧಾರಿತ ಸಾಪ್ಟ್ ವೇರು ಕಂಪೆನಿಗಳನ್ನು ಕಟ್ಟುವಲ್ಲಿ ಮತ್ತು ಅವನ್ನು ನಡೆಸುವಲ್ಲಿ ದಶಕಗಳ ಪರಿಣತಿಯನ್ನು ಹೊಂದಿದ್ದೇವೆ. ಅಷ್ಟೇ ಅಲ್ಲದೆ, ಕನ್ನಡ ಪುಸ್ತಕಗಳನ್ನು ಚಿಕ್ಕಂದಿನಿಂದಲೂ ಓದಿಕೊಂಡು ಅವುಗಳಿಂದ ದಕ್ಕಿದ ಜ್ಞಾನ ಮತ್ತು ಮೌಲ್ಯಗಳ ಫಲಾನುಭವಿಗಳಾಗಿದ್ದೇವೆ. ಹಾಗಾಗಿ ಕನ್ನಡ ಪುಸ್ತಕಗಳ ಮತ್ತು ಅವುಗಳನ್ನು ಓದುವ ಸಂಸ್ಕೃತಿಯ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದೇವೆ. ಟೆಕ್ನಾಲಜಿ ಗೊತ್ತಿದ್ದ ಮಾತ್ರಕ್ಕೆ ಏನನ್ನು ಬೇಕಾದರೂ ಯಾರ ನೆರವೂ ಇಲ್ಲದೆ ಸಾಧಿಸಿಬಿಡುತ್ತೇವೆ ಎನ್ನುವ ಹಮ್ಮು ನಮಗಿಲ್ಲ. ಹಾಗಾಗಿ ಕನ್ನಡ ಸಾಹಿತ್ಯ ಲೋಕದ ಮತ್ತು ಪುಸ್ತಕೋದ್ಯಮದ ಪರಿಣತರಿಂದ ಮಾರ್ಗದರ್ಶನವನ್ನೂ ನೆರವನ್ನೂ ಪಡೆದು ಅದಕ್ಕೆ ನಮ್ಮ ಟೆಕ್ನಾಲಜಿಯ ಚಳಕವನ್ನು ಸೇರಿಸಿ ಒಂದು ಯಶಸ್ವೀ ಪುಸ್ತಕ ಪ್ರಕಾಶನ ಸಂಸ್ಥೆಯನ್ನು ಕಟ್ಟಬೇಕೆನ್ನುವ ಹೆಬ್ಬಯಕೆಯೊಂದಿಗೆ ಮುಂದಡಿಯಿಡುತ್ತಿದ್ದೇವೆ.

 ಮೈಲ್ಯಾಂಗ್ ಬುಕ್ಸ್ ಗುರಿ ಮತ್ತು ದಾರಿ

ಮೈಲ್ಯಾಂಗ್ ಬುಕ್ಸ್ ಗುರಿ ಮತ್ತು ದಾರಿ

ಕತೆ (ಫಿಕ್ಷನ್) ಮತ್ತು ಕತೆಗೆ ಹೊರತಾದ (ನಾನ್-ಫಿಕ್ಷನ್) ಪ್ರಕಾರಗಳಲ್ಲಿ ಯುವ ಓದುಗರನ್ನು ಸೆಳೆಯಬಲ್ಲ (ಉತ್ತಮ ಸಾಹಿತ್ಯಿಕ ಮೌಲ್ಯಗಳನ್ನು ಬಿಟ್ಟುಕೊಡದೇ) ಮತ್ತು ಅವರಿಗೆ ಉಪಯಕ್ತವಾದ ಜ್ಞಾನವನ್ನು ಒದಗಿಸಬಲ್ಲ ಹೊಸ ಪುಸ್ತಕಗಳನ್ನು ಹೊರತರುವುದು. ಕನ್ನಡಕ್ಕೆ ಹೊಸತಾದ ಪುಸ್ತಕ ಪ್ರಕಾರಗಳನ್ನು (genres) ತರುವುದು. ಈ-ಬುಕ್ಸ್ (ಎಲೆಕ್ಟ್ರಾನಿಕ್ ಬುಕ್ಸ್) ಮೂಲಕ ಹೆಚ್ಚು ಹೆಚ್ಚು ಓದುಗರನ್ನು ತಲುಪುವುದು.

ಮೊಬೈಲ್ ಫೋನಗಳ ಮೂಲಕವೇ ಪುಸ್ತಕಗಳನ್ನು ಕೊಂಡು ಅದರೊಳಗೇ ಓದುವಂಥ ಟೆಕ್ನಾಲಜಿಯ ಮೂಲಕ ಪುಸ್ತಕ ಕೊಳ್ಳುವ ಮತ್ತು ಓದುವ ಪ್ರಕ್ರಿಯೆಯನ್ನು ಸುಲಭ ಮಾಡುವುದು.

 ಆಧುನಿಕ ವಿಧಾನ ಬಳಸಿ ಮಾರ್ಕೆಟಿಂಗ್

ಆಧುನಿಕ ವಿಧಾನ ಬಳಸಿ ಮಾರ್ಕೆಟಿಂಗ್

ಡಿಜಿಟಲ್ ಮಾರ್ಕೆಟಿಂಗ್ ಮುಂತಾದ ಆಧುನಿಕ ವಿಧಾನಗಳನ್ನು ಬಳಸಿ ಕನ್ನಡ ಪುಸ್ತಕಗಳನ್ನು ಹೆಚ್ಚು ಹೆಚ್ಚು ಜನಪ್ರಿಯ ಗೊಳಿಸುವುದು. ಆಡಿಯೋ ಪುಸ್ತಕಗಳ (ಕೇಳು-ಪುಸ್ತಕಗಳು) ಮೂಲಕ ಕನ್ನಡ ಪುಸ್ತಕಗಳ ಮಾರುಕಟ್ಟೆಯನ್ನು ಹಿಗ್ಗಿಸುವುದು.

ಪ್ರತಿಭಾನ್ವಿತ ಬರಹಗಾರರಿಗೆ ಒಳ್ಳೆಯ ಲಾಭಾಂಶವನ್ನು ರಾಯಧನದ ಮೂಲಕ ತಲುಪಿಸಿ ಅವರನ್ನು ಹೆಚ್ಚು ಹೆಚ್ಚು ಯಶಸ್ವಿಯಾಗಿಸುವುದು. ಇದರಿಂದಾಗಿ ಅವರು ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು. ಪ್ರತಿಭಾನ್ವಿತ ಹೊಸ ಬರಹಗಾರರಿಗೆ ಅವಕಾಶಗಳನ್ನು ಕಲ್ಪಿಸಿಕೊಡುವುದು. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

English summary
Why Kannada needs e-books explains MyLangBooks CEO Pavamana Prasad. Our focus is to bring great content, great marketing together and create new readers for Kannada says MyLangBooks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X