• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರಿನಾಗರ ಕಾಣುವುದಕ್ಕೂ ಎಚ್ಡಿಕೆ ಮನೆ ಬಿಡದಿರುವುದಕ್ಕೂ ಎಲ್ಲಿಯ ಸಂಬಂಧ?

By ಆರ್ ಟಿ ವಿಠ್ಠಲಮೂರ್ತಿ
|
   ಜೆಪಿ ನಗರದ ಮನೆಯನ್ನ ಕುಮಾರಸ್ವಾಮಿ ಬಿಡೋದಿಲ್ಲ | ಇದರ ಹಿಂದಿದೆ ಕುತೂಹಲಕಾರಿ ಕಥೆ | Oneindia Kannada

   ಯಾರೆಷ್ಟೇ ಹೇಳಿದರೂ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಜೆ.ಪಿ. ನಗರದ ನಿವಾಸವನ್ನು ತೊರೆಯಲು ಒಪ್ಪುತ್ತಿಲ್ಲ.

   ಮುಖ್ಯಮಂತ್ರಿಯಾದವರು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸರ್ಕಾರಿ ಬಂಗಲೆಗೆ ಹೋಗುವುದು ಸಹಜ. ದೇವರಾಜ ಅರಸು ಹಾಗೂ ಎಸ್.ಆರ್. ಬೊಮ್ಮಾಯಿ ಅವರಂತಹ ನಾಯಕರು ಬಾಲಬ್ರೂಯಿ ಬಂಗಲೆಯಲ್ಲಿದ್ದರೆ, ಇತ್ತೀಚಿನ ವರ್ಷಗಳಲ್ಲಿ ಮುಖ್ಯಮಂತ್ರಿಗಳಾದವರು ಹೈಗ್ರೌಂಡ್ಸ್ ನಲ್ಲಿರುವ ಕಾವೇರಿ ಇಲ್ಲವೇ ಅನುಗ್ರಹ ಬಂಗಲೆಯನ್ನು ವಾಸ್ತವ್ಯಕ್ಕೆ ಆರಿಸಿಕೊಳ್ಳುತ್ತಿದ್ದುದು ಜಾಸ್ತಿ.

   ಪ್ರಕಾಶ್ ಅಮ್ಮಣ್ಣಾಯರಿಂದ ಸಿಎಂ ಕುಮಾರಸ್ವಾಮಿ ಜಾತಕ ವಿಶ್ಲೇಷಣೆ

   ಈ ಮಧ್ಯೆ ಯಡಿಯೂರಪ್ಪ ಅವರಂತಹ ನಾಯಕ ರೇಸ್ ಕೋರ್ಸ್ ಎದುರಿನ ಬಂಗಲೆ ತಮಗೆ ಲಕ್ಕು ಎಂಬ ಕಾರಣಕ್ಕಾಗಿ ಅಲ್ಲಿ ಉಳಿದುಕೊಂಡಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಮುಖ್ಯಮಂತ್ರಿಯಾದವರೊಬ್ಬರು ಸರ್ಕಾರಿ ಬಂಗಲೆಗೆ ಹೋಗಲು ಆಸಕ್ತಿಯನ್ನೇ ತೋರದಿರುವುದು ಇದು ಮೊದಲ ಬಾರಿ.

   ಅಂದ ಹಾಗೆ, ಬಾಲಬ್ರೂಯಿಯಂತಹ ಬಂಗಲೆಗಳಿಗೆ ಹೋಗಲು ಈಗ ಯಾರೂ ಇಷ್ಟಪಡುವುದಿಲ್ಲ. ಅಲ್ಲಿದ್ದ ಕಾರಣದಿಂದಲೇ ದೇವರಾಜ ಅರಸು ಹಾಗೂ ಎಸ್.ಆರ್. ಬೊಮ್ಮಾಯಿ ತಮ್ಮ ರಾಜಕೀಯ ಬದುಕಿನಲ್ಲಿ ಕಡು ಕಷ್ಟದ ದಿನಗಳನ್ನು ನೋಡಿದರು ಎಂಬುದು ಚಾಲ್ತಿಯಲ್ಲಿರುವ ನಂಬಿಕೆ.

   ಈ ಮಧ್ಯೆ ಕ್ರೆಸೆಂಟ್ ರಸ್ತೆಯ ಶುರುವಿನಲ್ಲೇ ಇರುವ ಬಂಗಲೆಯಲ್ಲಿ ವಾಸ್ತುದೋಷ ಅತಿಯಾಗಿದೆ. ಅಲ್ಲಿ ಅಗ್ನಿ ಮೂಲೆಯಿಂದ ಹಿಡಿದು, ಜಲಮೂಲದ ತನಕ ಎಲ್ಲವೂ ಅಸಮರ್ಪಕವಾಗಿವೆ. ಹೀಗಾಗಿ ಅಲ್ಲಿ ವಾಸವಿದ್ದವರು ಬದುಕಿನಲ್ಲೇ ಬಹುದೊಡ್ಡ ಗಂಡಾಂತರಗಳನ್ನು ಅನುಭವಿಸಿದ್ದಾರೆ ಅಂತ ಹೇಳುವ ವಾಸ್ತುತಜ್ಞರು ಇದಕ್ಕೆ ಪೂರಕವಾಗಿ, ಅಲ್ಲಿ ವಾಸವಾಗಿದ್ದ ಎಸ್. ರಮೇಶ್ ಅವರ ಉದಾಹರಣೆಯನ್ನು ಕೊಡುತ್ತಾರೆ.

   ಕುಮಾರಸ್ವಾಮಿ ಪ್ರಮಾಣದ ಮುಹೂರ್ತ ಹೇಗಿತ್ತು? ಭವಿಷ್ಯ ಹೇಗಿದೆ?

   ಹೀಗಾಗಿಯೇ ಯಾರೇ ಮಂತ್ರಿಗಳಾಗಲಿ, ಅವರು ಕ್ರೆಸೆಂಟ್ ರಸ್ತೆಯ ಶುರುವಿನಲ್ಲೇ ಸಿಗುವ ಬಂಗಲೆಗೆ ಹೋಗಲು ಒಪ್ಪುತ್ತಿರಲಿಲ್ಲ. ಪರಿಣಾಮವಾಗಿ ಸರ್ಕಾರ ಅದನ್ನು ನ್ಯಾಯಾಂಗ ಇಲಾಖೆಗೆ ನೀಡಿ ಸುಮ್ಮನಾಗಿದೆ. ಆದರೆ ಅಲ್ಲಿಗೆ ಹೋಗಲು ಒಪ್ಪದಿದ್ದರೂ ಮಂತ್ರಿಗಳಾದವರು ಬೇರೆ ಬಂಗಲೆಗಳಿಗಾದರೂ ಹೋಗುವುದು ಸಂಪ್ರದಾಯ. ಸರ್ಕಾರಿ ಬಂಗಲೆಯಲ್ಲಿ ವಾಸಿಸುವುದು ಒಂದು ರೀತಿಯ ಚಾರ್ಮು ಅನ್ನುವುದು ಎಲ್ಲರ ನಂಬಿಕೆ. ಅದು ನಿಜವೂ ಹೌದು.

   ರೇವಣ್ಣ ಅವರ ಮಾತು ಕೇಳುತ್ತಾರಾ ಕುಮಾರಣ್ಣ?

   ರೇವಣ್ಣ ಅವರ ಮಾತು ಕೇಳುತ್ತಾರಾ ಕುಮಾರಣ್ಣ?

   ಆದರೆ ಈಗ ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಚುಕ್ಕಾಣಿ ಹಿಡಿದಿರುವ ಕುಮಾರಸ್ವಾಮಿ ಮಾತ್ರ ಕಾವೇರಿ, ಅನುಗ್ರಹ ಸೇರಿದಂತೆ ಯಾವ ಬಂಗಲೆಗಳಿಗೂ ಹೋಗಲು ತಯಾರಿಲ್ಲ. ಖುದ್ದು ಅವರಣ್ಣ ಎಚ್.ಡಿ. ರೇವಣ್ಣ ಅವರು ಬಾಲಬ್ರೂಯಿ ಸಮೀಪದಲ್ಲಿರುವ ಮುಖ್ಯ ಕಾರ್ಯದರ್ಶಿಗಳ ಬಂಗಲೆಯನ್ನು ನೋಡಿ ಬಂದು, ಅಲ್ಲಿಗೆ ಹೋದರೆ ಯಾವ ತೊಂದರೆಯೂ ಇಲ್ಲ. ಅದು ಸೇಫ್ ಆಗಿದೆ ಎಂದಿದ್ದಾರೆ.

   ಈ ಮಧ್ಯೆ, ಅಧಿಕಾರದಲ್ಲಿರುವವರು ಜನ ಸಂಪರ್ಕಕ್ಕಾಗಿಯಾದರೂ ಸರ್ಕಾರಿ ಬಂಗಲೆಯನ್ನು ಹೊಂದಿರಬೇಕು. ಉಳಿದ ಬಂಗಲೆಗಳ ವಿಷಯದಲ್ಲಿ ನಿನಗೆ ನೆಮ್ಮದಿ ಇಲ್ಲದಿದ್ದರೂ ಬಾಲಬ್ರೂಯಿ ಸಮೀಪದಲ್ಲಿ ಮುಖ್ಯ ಕಾರ್ಯದರ್ಶಿಗಳು ವಾಸವಾಗಿರುವ ಬಂಗಲೆಗೆ ಹೋಗಬಹುದು. ಯಾವ ತೊಂದರೆಯೂ ಇಲ್ಲ. ನಿನ್ನ ಗ್ರಹಗತಿಗೆ ಯಾವ ಸಮಸ್ಯೆಯೂ ಆಗುವುದಿಲ್ಲ ಎಂಬುದು ರೇವಣ್ಣ ಅವರ ಮಾತು.

   ಬಿಚ್ಚಿಕೊಳ್ಳುತ್ತದೆ ನೋಡಿ ಒಂದು ಇಂಟ್ರೆಸ್ಟಿಂಗ್ ಕಥೆ

   ಬಿಚ್ಚಿಕೊಳ್ಳುತ್ತದೆ ನೋಡಿ ಒಂದು ಇಂಟ್ರೆಸ್ಟಿಂಗ್ ಕಥೆ

   ಕುಮಾರಸ್ವಾಮಿ ಮಾತ್ರ ಜೆ.ಪಿ. ನಗರದ ಮನೆಯನ್ನು ಬಿಡಲು ಬಿಲ್ ಕುಲ್ ಒಪ್ಪುತ್ತಿಲ್ಲ. ಇದಕ್ಕೇನು ಕಾರಣ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹೋದರೆ ಒಂದೂವರೆ ವರ್ಷಗಳ ಮುನ್ನ ಆರಂಭವಾದ ಕತೆ ಬಿಚ್ಚಿಕೊಳ್ಳುತ್ತದೆ. ಆ ಸಂದರ್ಭದಲ್ಲಿ ಕುಮಾರಸ್ವಾಮಿ ರಾಜಕೀಯವಾಗಿ ಸಂಕಷ್ಟದಲ್ಲಿದ್ದರು. ಒಂದು ಕಡೆಯಿಂದ ಸಿದ್ಧರಾಮಯ್ಯ ಅವರ ಸರ್ಕಾರ ಅವರ ವಿರುದ್ಧ ದೊಡ್ಡ ಮಟ್ಟದಲ್ಲಿ ತಿರುಗಿ ಬಿದ್ದಿತ್ತು. ಮತ್ತೊಂದು ಕಡೆಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡಾ ಕುಮಾರಸ್ವಾಮಿ ವಿರುದ್ಧ ಕುದಿಯುತ್ತಿದ್ದರು.

   ಇಂತಹ ಕಾಲದಲ್ಲಿ ಕುಮಾರಸ್ವಾಮಿ ತಾವು ಬಹುಕಾಲದಿಂದ ವಾಸವಾಗಿದ್ದ ಜೆ.ಪಿ.ನಗರದ ಮನೆಯನ್ನು ತೊರೆಯಲು ನಿರ್ಧರಿಸಿದರು. ಈ ಹಂತದಲ್ಲಿ ಅವರು ಕುಟುಂಬ ಸಮೇತರಾಗಿ ಬಂದು ನೆಲೆಸಿದ್ದು ವಿಧಾನಸೌಧದ ಹತ್ತಿರವಿರುವ ಯು.ಬಿ.ಸಿಟಿ ಏರಿಯಾದ ಫ್ಲ್ಯಾಟಿನಲ್ಲಿ.

   ಅಲ್ಲಿ ಬಂದು ಒಂದು ವರ್ಷಗಳಷ್ಟು ಕಾಲ ಕಳೆದ ಮೇಲೆ ಕುಮಾರಸ್ವಾಮಿ ಜೆ.ಪಿ. ನಗರದ ಮನೆಯನ್ನು ಮಾರಲು ನಿರ್ಧರಿಸಿದರು. ಮಧ್ಯವರ್ತಿಗಳ ಪ್ರಯತ್ನದ ಮೂಲಕ ಆ ಮನೆಯನ್ನು ಖರೀದಿ ಮಾಡಲು ವ್ಯಕ್ತಿಯೊಬ್ಬರು ಮುಂದಾದರು. ಮುಂದೆ ಮನೆ ಮಾರಾಟ ಮಾಡಲು ಕುಮಾರಸ್ವಾಮಿ ಒಪ್ಪಿದರು. ಖರೀದಿ ಮಾಡಲು ಬಂದವರು ಮುಂಗಡ ಹಣವನ್ನೂ ನೀಡಿದರು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಕುಮಾರಸ್ವಾಮಿಯವರಿಗೆ ಮಹತ್ವದ ಸಂದೇಶವೊಂದು ಬಂದು ತಲುಪಿತು.

   ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಭವಿಷ್ಯ ಮತ್ತು ದೇವೇಗೌಡರ ಜಾಣ್ಮೆ

   ಮನೆಯಲ್ಲಿ ಕರಿನಾಗರ ಕಾಣಿಸಿಕೊಂಡಿತ್ತು!

   ಮನೆಯಲ್ಲಿ ಕರಿನಾಗರ ಕಾಣಿಸಿಕೊಂಡಿತ್ತು!

   ಅದೇನೆಂದರೆ, ಅವರು ಮಾರಲು ನಿರ್ಧರಿಸಿದ್ದ ಮನೆಯಲ್ಲಿ ಕರಿನಾಗರ ಕಾಣಿಸಿಕೊಂಡಿತು ಎಂಬುದು. ವೈಜ್ಞಾನಿಕ ಮನೋಭಾವದವರು ನಾಗರಹಾವನ್ನು ವಿಶೇಷವಾಗಿ ಪರಿಗಣಿಸುವುದಿಲ್ಲ. ಹಾಗೆಯೇ ಅದರಲ್ಲಿ ಸ್ಪಿರಿಚ್ಯುಯೆಲ್ ಪವರ್ ಇದೆ ಎಂದೂ ನಂಬುವುದಿಲ್ಲ. ಆದರೆ ಹಿಂದೂ ಧರ್ಮದಿಂದ ಹಿಡಿದು ಜಗತ್ತಿನ ವಿವಿಧ ಧರ್ಮಗಳಲ್ಲಿ ಕರಿನಾಗರದ ಬಗ್ಗೆ ವಿಶೇಷ ಗೌರವವಿದೆ. ಅದು ಏಕಕಾಲಕ್ಕೆ ವೈಭವದ ಸಂಕೇತ. ಶಕ್ತಿಯ ಸಂಕೇತ, ಅಪಾಯದ ಸಂಕೇತವೂ ಹೌದು.

   ಒಂದು ವೇಳೆ ಅದು ಕನಸಿನಲ್ಲಿ ಕಂಡರೆ ವ್ಯಕ್ತಿ ಸೇಫ್ ಅಲ್ಲ. ಬದಲಿಗೆ ಅದು, ಅವರ ಮೇಲೆರಗಲಿರುವ ಯಾವುದೋ ಅಪಾಯದ ಮುನ್ಸೂಚನೆ. ಹೀಗಾಗಿ ಜ್ಯೋತಿಷ್ಯ ಶಾಸ್ತ್ರವನ್ನು ನಂಬುವವರು ತಕ್ಷಣವೇ ಈ ಬಗ್ಗೆ ಎಚ್ಚರ ವಹಿಸುತ್ತಾರೆ. ಆದರೆ ಅದು ಬಹಿರಂಗ ಬದುಕಿನಲ್ಲಿ ಕಾಣಿಸಿಕೊಂಡರೆ ಅದೃಷ್ಟದ ಸಂಕೇತ. ವೈಭವ, ಅಧಿಕಾರದ ಸಂಕೇತ, ಶಕ್ತಿಯ ಸಂಕೇತ. ಕರಿನಾಗರ ಮನೆಯಲ್ಲಿ ಕಾಣಿಸಿಕೊಂಡರೆ ಆ ಮನೆಗೆ ಇವೆಲ್ಲ ಬೋನಸ್ ಇದ್ದಂತೆ.

   ಅದೇ ರೀತಿ ಆ ಮನೆಯವರನ್ನು ಯಾರಾದರೂ ಎದುರು ಹಾಕಿಕೊಂಡರೆ ಗಂಡಾಂತರ ಕಟ್ಟಿಟ್ಟ ಬುತ್ತಿ. ಯಾವಾಗ ಕರಿನಾಗರ ಕಂಡಿತೋ? ಇದಾದ ತಕ್ಷಣ ಕುಮಾರಸ್ವಾಮಿ ತಮ್ಮ ಕುಟುಂಬದ ಸದಸ್ಯರ ಜತೆಗಷ್ಟೇ ಅಲ್ಲ, ತಮಗೆ ಬೇಕಾದ ಜ್ಯೋತಿಷಿಗಳ ಬಳಿಯೂ ಮಾತುಕತೆ ನಡೆಸಿದರು.

   ನಾಗದೋಷ, ದೋಷದ ಕಾರಣಗಳು, ಮನೆಗೆ ಹಾವು ಬಂದರೆ ಏನು ಫಲ?

   ಕುಮಾರಸ್ವಾಮಿಗೆ ಜ್ಯೋತಿಷಿಗಳು ಹೇಳಿದ್ದೇನು?

   ಕುಮಾರಸ್ವಾಮಿಗೆ ಜ್ಯೋತಿಷಿಗಳು ಹೇಳಿದ್ದೇನು?

   ಆ ಸಂದರ್ಭದಲ್ಲಿ ಜ್ಯೋತಿಷಿಗಳು ಹೇಳಿದ್ದು : ಕುಮಾರಸ್ವಾಮಿಯವರೇ ಕರಿನಾಗರ ನಿಮ್ಮ ಮನೆಯಲ್ಲಿ ಕಾಣಿಸಿಕೊಂಡಿದೆ ಎಂದರೆ ನೀವು ಕಳೆದುಕೊಂಡ ವೈಭವವನ್ನು ಮರಳಿ ಪಡೆಯುತ್ತೀರಿ. ಮುಖ್ಯಮಂತ್ರಿಗಿರಿ ಮಾತ್ರವಲ್ಲ, ನಿಮ್ಮ ತಂದೆಯಂತೆಯೇ ಈ ದೇಶದ ಪ್ರಧಾನಿಯಾಗುವ ಅವಕಾಶವೂ ಇದೆ. ಹಾಗಂತ ಕರಿ ನಾಗರ ಯಾವ ಮನೆಯಲ್ಲಿ ಕಾಣುತ್ತದೋ? ಆ ಮನೆಯವರಿಗೆಲ್ಲ ಇಂತಹ ಪಟ್ಟ ಒದಗುತ್ತದೆ ಎಂದು ಹೇಳಲಾಗದು. ಆದರೆ ನಿಶ್ಚಿತವಾಗಿ ಅವರು ತಮ್ಮ ಬದುಕಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸುವ ಅವಕಾಶಗಳಿರುತ್ತವೆ.

   ನಿಮಗೆ ರಾಜಕೀಯವೇ ಸರ್ವಸ್ವ. ಹೀಗಾಗಿ ನಿಮ್ಮ ಗ್ರಹಗತಿಗಳಿಗೆ ಕರಿನಾಗರ ಕಂಡಿರುವುದು ಪೂರಕ. ಹಾಗೆಯೇ ನೀವು ಡೆಡ್ಲಿ ಪವರ್ ಹೊಂದುತ್ತೀರಿ. ಯಾವ ಕಾರಣಕ್ಕೂಈ ಮನೆ ಮಾರಬೇಡಿ. ಮಾರದೆ ಇರುವುದಷ್ಟೇ ಅಲ್ಲ, ಸಾಧ್ಯವಾದಷ್ಟು ಬೇಗ ಅಲ್ಲಿಗೆ ಹೋಗಿ ವಾಸಿಸಿ. ಯಾಕೆಂದರೆ ಕರಿ ನಾಗರ ಕಂಡಿರುವುದರಿಂದ ಮತ್ತು ಅದರ ಪವರ್ ನಿಮಗೆ ಶೀಘ್ರಗತಿಯಲ್ಲಿ ದಕ್ಕಬೇಕು. ಹೇಗಿದ್ದರೂ ಮುಂದಿನ ಚುನಾವಣೆಗೆ ಕಾಲಾವಕಾಶವಿದೆ. ಗೋ ಅಹೆಡ್.

   ಮುಂಗಡ ಹಣ ವಾಪಸ್ ಮಾಡಿದ ಎಚ್ಡಿಕೆ

   ಮುಂಗಡ ಹಣ ವಾಪಸ್ ಮಾಡಿದ ಎಚ್ಡಿಕೆ

   ಯಾವಾಗ ಜ್ಯೋತಿಷಿಗಳು ಈ ಮಾತು ಹೇಳಿದರೋ? ತಕ್ಷಣವೇ ಎಚ್ಚೆತ್ತುಕೊಂಡ ಕುಮಾರಸ್ವಾಮಿ ಮಾಡಿದ ಮೊದಲ ಕೆಲಸವೆಂದರೆ, ಮನೆಯನ್ನು ಮಾರಾಟ ಮಾಡಲು ಪಡೆದಿದ್ದ ಮುಂಗಡ ಹಣವನ್ನು ಕೊಳ್ಳಲು ಬಂದವರಿಗೆ ಹಿಂತಿರುಗಿಸಿದ್ದು. ಆನಂತ ಅವರು ಜೆ.ಪಿ.ನಗರದ ಮನೆಯನ್ನು ಭರ್ಜರಿಯಾಗಿ ರಿನೋವೇಷನ್ ಮಾಡಿಸಿದರು. ಹೀಗೆ ರಿನೋವೇಷನ್ ಮಾಡಿಸಿದವರೇ ಕುಟುಂಬವನ್ನು ಯು.ಬಿ.ಸಿಟಿ ಸಮೀಪದ ಫ್ಲ್ಯಾಟಿನಿಂದ ಜೆ.ಪಿ.ನಗರದ ಮನೆಗೆ ಸ್ಥಳಾಂತರಿಸಿದರು.

   ಹುಡುಕಿಕೊಂಡು ಬಂದಿತ್ತು ಯೋಗಾಯೋಗ

   ಹುಡುಕಿಕೊಂಡು ಬಂದಿತ್ತು ಯೋಗಾಯೋಗ

   ಇದಾದ ನಂತರ ಎದುರಾದ ಚುನಾವಣೆಯಲ್ಲಿ ಜೆಡಿಎಸ್ ಗೆದ್ದಿದ್ದು ಮೂವತ್ತೇಳು ಸೀಟು. ಆದರೆ ಅಧಿಕಾರದಲ್ಲಿರಬೇಕು ಎಂಬ ಹಪಹಪಿ ಕಾಂಗ್ರೆಸ್ ಪಕ್ಷಕ್ಕಿದ್ದುದರಿಂದ ಜೆಡಿಎಸ್ ಕೇಳುವ ಮುನ್ನವೇ ಸಿಎಂ ಪೋಸ್ಟ್ ಅನ್ನು ಜೆಡಿಎಸ್ ಗೆ ಬಿಟ್ಟು ಕೊಡುವ ಪ್ರಪೋಸಲ್ಲನ್ನು ಅದು ಮಂಡಿಸಿತು. ಯಾವಾಗ ಈ ಬೆಳವಣಿಗೆ ನಡೆಯಿತೋ? ಇದಾದ ನಂತರ ಕುಮಾರಸ್ವಾಮಿಯವರಿಗೆ ಕರಿ ನಾಗರದ ಎಫೆಕ್ಟಿನ ಬಗ್ಗೆ ಅಪಾರ ನಂಬಿಕೆ ಬಂದಿದೆ. ಹೀಗಾಗಿಯೇ ಅವರು ತಮ್ಮ ಪ್ರಮಾಣ ವಚನ ಸಮಾರಂಭಕ್ಕೆ ತೃತೀಯ ರಂಗದ ಭಾಗವಾಗಲಿರುವ ನಾಯಕರಿಗೆ ಆಹ್ವಾನ ನೀಡಿ ಕರೆಸಿದರು.

   ಇಂದಿರಾರಂತೆ ನೆಲಕಚ್ಚುತ್ತಾರಾ ಮೋದಿ?

   ಇಂದಿರಾರಂತೆ ನೆಲಕಚ್ಚುತ್ತಾರಾ ಮೋದಿ?

   ಅಂದ ಹಾಗೆ ಕುಮಾರಸ್ವಾಮಿ ಅವರಿಗಿರುವ ಸದ್ಯದ ಮಾಹಿತಿ ಎಂದರೆ, ಒಂದು ಕಾಲದಲ್ಲಿ ದೇಶದ ಪ್ರಬಲ ನಾಯಕಿಯಾಗಿದ್ದ ಇಂದಿರಾಗಾಂಧಿ ಅವರನ್ನು ತುರ್ತುಸ್ಥಿತಿಯ ನಂತರ ನೆಲಕ್ಕುರುಳಿಸಿದ್ದು ಅವಿಭಜಿತ ಉತ್ತರ ಪ್ರದೇಶ ಮತ್ತು ಬಿಹಾರ. ಅವತ್ತಿನ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಎಂಭತ್ತಕ್ಕೂ ಹೆಚ್ಚು ಸೀಟುಗಳನ್ನು ಕಾಂಗ್ರೆಸ್ ಕಳೆದುಕೊಂಡಿತ್ತು. ಬಿಹಾರದಲ್ಲಿದ್ದ ಐವತ್ತು ಪ್ಲಸ್ ಸೀಟುಗಳನ್ನೂ ಕಳೆದುಕೊಂಡಿತ್ತು.

   ಈಗ ಪ್ರಧಾನಿಯಾಗಿರುವ ನರೇಂದ್ರ ಮೋದಿ ಕೂಡಾ ಇಂದಿರಾ ಗಾಂಧಿ ಅವರಂತೆಯೇ ನೆಲ ಕಚ್ಚುವ ಘಳಿಗೆಗಳು ಬರಲಿವೆ ಎಂಬುದು ಅವರಿಗೆ ಬಂದಿರುವ ಮಾಹಿತಿ. ಸದ್ಯದ ಪರಿಸ್ಥಿತಿಯಲ್ಲಿ ಅವರಿಗೆ ತುಂಬ ಪವರ್ ಇರುವಂತೆ ಬಾಸವಾಗುತ್ತಿರಬಹುದು. ತುರ್ತು ಸ್ಥಿತಿಯ ಕಾಲದಲ್ಲಿ ಇಂದಿರಾ ಗಾಂಧಿ ಅವರಿಗೂ ಇದಕ್ಕೂ ಹೆಚ್ಚು ಪವರ್ ಇತ್ತು.

   ಆದರೆ ಕಾಲ ಚಕ್ರ ಅವರನ್ನು ನೆಲಕ್ಕುರುಳಿಸಿತು. ಹಿಂದೆ ಇಂದಿರಾ ಗಾಂಧಿ ಎದುರಿಸಿದ ಅಪಾಯವನ್ನು ಮುಂದೆ ನರೇಂದ್ರ ಮೋದಿಯವರೂ ಎದುರಿಸುತ್ತಾರೆ. ಹೀಗಾಗಿ ಈಗಿನಿಂದಲೇ ನೀವು ಸಕ್ರಿಯರಾಗಿರಿ, ತೃತೀಯ ಶಕ್ತಿಗೆ ಬೇಕಾದ ಬಲ ತುಂಬಿ. ಆನಂತರ ನೋಡಿ. ಅನುಮಾನವೇ ಬೇಡ. ಈ ದೇಶದ ಅತ್ಯುನ್ನತ ಹುದ್ದೆ ನಿಮ್ಮನ್ನು ಅರಸಿ ಬರುತ್ತದೆ ಎಂಬುದು ಕುಮಾರಸ್ವಾಮಿ ಅವರಿಗಿರುವ ಮಾಹಿತಿ.

   ಎಚ್ಡಿಕೆಯನ್ನು ಯಾರೂ ಎದುರು ಹಾಕಿಕೊಳ್ಳಲು ತಯಾರಿಲ್ಲ

   ಎಚ್ಡಿಕೆಯನ್ನು ಯಾರೂ ಎದುರು ಹಾಕಿಕೊಳ್ಳಲು ತಯಾರಿಲ್ಲ

   ಹೀಗಾಗಿಯೇ ಅವರು ರಾಜ್ಯ ಕಾಂಗ್ರೆಸ್ ನ ಕೆಲ ನಾಯಕರಿಂದ ಯಾವ ಲೆವೆಲ್ಲಿನ ಪ್ರತಿರೋಧ ಬಂದರೂ ಮೌನವಾಗಿದ್ದಾರೆ. ಸರ್ಕಾರ ಉರುಳಿದರೆ ಉರುಳಲಿ ಅಂತ ನಿಶ್ಚಿಂತೆಯಾಗಿದ್ದಾರೆ. ಅವರೀಗ ಕೇವಲ ಮುಖ್ಯಮಂತ್ರಿಯಲ್ಲ, ಕರಿ ನಾಗರದ ಪವರ್ ಇಟ್ಟುಕೊಂಡು ದೇಶದ ಅತ್ಯುನ್ನತ ಹುದ್ದೆಯ ಕನಸು ಕಾಣುತ್ತಿರುವ ನಾಯಕ. ಹೀಗಾಗಿ ಕುಮಾರಸ್ವಾಮಿ ಅವರನ್ನು ದೊಡ್ಡ ಮಟ್ಟದಲ್ಲಿ ಎದುರು ಹಾಕಿಕೊಳ್ಳಲು ಯಾರೂ ತಯಾರಾಗುತ್ತಿಲ್ಲ. ಎದುರು ಹಾಕಿಕೊಂಡವರು ಫಿನಿಷ್ ಆಗುತ್ತಾರೆ ಎಂಬ ನಂಬಿಕೆ ವ್ಯಾಪಕವಾಗಿರುವುದರಿಂದ, ಯಾರಾದರೂ ಕುಮಾರಸ್ವಾಮಿ ವಿರುದ್ಧ ಗುಡುಗಿದರೆ ಅವರನ್ನು ಪಾಪದ ಪ್ರಾಣಿ ಎಂಬಂತೆ ನೋಡುತ್ತಾರೆ. ಅಂದ ಹಾಗೆ ಇವೆಲ್ಲ ನಂಬಿಕೆಯ ವಿಷಯ. ಹಲವರು ನಂಬಬಹುದು, ಕೆಲವರು ನಂಬದೇ ಇರಬಹುದು. ಆದರೆ ಕುಮಾರಸ್ವಾಮಿ ಜೆ.ಪಿ. ನಗರದ ಮನೆಯನ್ನು ತೊರೆದು ಸರ್ಕಾರಿ ಬಂಗಲೆಗೆ ಹೋಗಲು ಒಪ್ಪದಿರುವ ಮುಖ್ಯ ಕಾರಣ ಇದೇ ಮತ್ತು ಇದೊಂದೇ.

   English summary
   Why HD Kumaraswamy is not ready to move to official residence from JP Nagar home? Here is an interesting story. It all started when black cobra appeared in his JP Nagar residence. Ever since then, HDK is on the rise.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X