ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಸಮರ ಮೂರು ಪಕ್ಷಗಳಿಗೆ ಪ್ರತಿಷ್ಠೆಯಾಗಿರುವುದು ಏಕೆ?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 28: ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆ ಮೂರು ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ. ಇಲ್ಲಿ ಮೂರು ಪಕ್ಷಗಳು ಮಾಡಿರುವ ತಂತ್ರಗಾರಿಕೆ ಮತ್ತು ಬರಲಿರುವ ಫಲಿತಾಂಶ ಮುಂದಿನ 2023ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಆದರೂ ಅಚ್ಚರಿಪಡಬೇಕಾಗಿಲ್ಲ.

ಈ ಉಪ ಚುನಾವಣೆ ಬರೀ ಚುನಾವಣೆ ಆಗಿ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವು ಅಷ್ಟೇ ಆಗಿದ್ದರೆ ಬಹುಶಃ ಮೂರು ಪಕ್ಷಗಳ ನಾಯಕರು ಇಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಇಲ್ಲಿ ತರುವ ಗೆಲುವು ಮೂರು ಪಕ್ಷಗಳಿಗೆ ಮುಂದಿನ ಚುನಾವಣೆಗೆ ಸನ್ನದ್ಧವಾಗಲು ಒಂದು ಅಡಿಪಾಯವಾಗಿರುವುದರಿಂದ ಅ.30ರಂದು ನಡೆಯುವ ಚುನಾವಣೆ ಮತ್ತು ಅದು ತಂದು ಕೊಡಲಿರುವ ಫಲಿತಾಂಶ ಬಹುಪ್ರಮುಖವಾಗಿ ಗೋಚರಿಸುತ್ತಿದೆ.

 ಬಿಜೆಪಿಗೆ ಎರಡು ಸ್ಥಾನಗಳು ಪ್ರಮುಖವಲ್ಲ, ಆದರೆ?

ಬಿಜೆಪಿಗೆ ಎರಡು ಸ್ಥಾನಗಳು ಪ್ರಮುಖವಲ್ಲ, ಆದರೆ?

ಇಲ್ಲಿ ಬಿಜೆಪಿಗೆ ಎರಡು ಸ್ಥಾನಗಳು ಆಡಳಿತದ ದೃಷ್ಠಿಯಿಂದ ಪ್ರಮುಖವೇನಲ್ಲ. ರಾಜ್ಯದಲ್ಲಿ ಆಡಳಿತ ನಡೆಸಲು ಬೇಕಾದ ಮ್ಯಾಜಿಕ್ ಸಂಖ್ಯೆ ಬಿಜೆಪಿಯಲ್ಲಿದೆ. ಹಾಗೆಂದು ಕೈಚೆಲ್ಲಿ ಕೂತರೆ ಅದರ ಪರಿಣಾಮಗಳು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಭಾರೀ ಹಾನಿಯನ್ನು ಮಾಡಲಿದೆ. ಕಾರಣ ಈ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲದೆ ಹೋದರೆ ಅದನ್ನು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜಕೀಯವಾಗಿ ಬಳಸಿಕೊಳ್ಳಲಿವೆ. ರಾಜ್ಯದಲ್ಲಿ ಆಡಳಿತ ಪಕ್ಷಕ್ಕೆ ಜನರ ಒಲವಿಲ್ಲ ಎಂದು ಪ್ರಚಾರ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಆಡಳಿತ ವಿರೋಧಿ ಅಲೆಯನ್ನು ಹುಟ್ಟು ಹಾಕಲು ಸಹಾಯವಾಗಲಿದೆ. ಹೀಗಾಗಿ ಬಿಜೆಪಿ ಗೆಲುವಿಗಾಗಿ ಹರಸಾಹಸ ಪಟ್ಟು ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಮತ್ತು ಸಂಪುಟದ ಸಚಿವರು ಸೇರಿದಂತೆ ಘಟಾನುಘಟಿ ನಾಯಕರನ್ನು ಪ್ರಚಾರಕ್ಕಾಗಿ ಬಳಸಿಕೊಂಡಿದೆ. ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ.

 ಸಿಎಂ ಬಸವರಾಜ ಬೊಮ್ಮಾಯಿಗೆ ಅಗ್ನಿಪರೀಕ್ಷೆ

ಸಿಎಂ ಬಸವರಾಜ ಬೊಮ್ಮಾಯಿಗೆ ಅಗ್ನಿಪರೀಕ್ಷೆ

ರಾಜ್ಯ ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ನಂತರದ ನಾಯಕ ಯಾರು ಎಂಬ ಪ್ರಶ್ನೆ ಈ ಹಿಂದಿನಿಂದಲೇ ಹುಟ್ಟಿಕೊಂಡಿತ್ತು. ಅದಕ್ಕೆ ಉತ್ತರ ಎಂಬಂತೆ ಬಸವರಾಜ ಬೊಮ್ಮಾಯಿಗೆ ಸಿಎಂ ಪಟ್ಟ ಕಟ್ಟುವ ಮೂಲಕ ಮುಂದಿನ ರಾಜ್ಯ ಬಿಜೆಪಿಯ ನಾಯಕ ಬಸವರಾಜ ಬೊಮ್ಮಾಯಿ ಎಂಬುದನ್ನು ಹೈಕಮಾಂಡ್ ತೋರಿಸಿಕೊಟ್ಟಿದೆ. ಅಷ್ಟೇ ಅಲ್ಲ ಮುಂದಿನ ಚುನಾವಣೆ ಕೂಡ ಅವರ ನಾಯಕತ್ವದಲ್ಲಿಯೇ ನಡೆಯಲಿದೆ ಎಂಬುದನ್ನು ಕೂಡ ಈಗಾಗಲೇ ಹೇಳಿಯಾಗಿದೆ. ಹೀಗಿರುವಾಗ ಬಸವರಾಜ ಬೊಮ್ಮಾಯಿಗೆ ವೈಯಕ್ತಿಕವಾಗಿಯೂ ಇದೊಂದು ಅಗ್ನಿಪರೀಕ್ಷೆಯೇ...

 ಜೆಡಿಎಸ್ ಉಪ ಚುನಾವಣೆ ಏಕೆ ಗೆಲ್ಲಬೇಕು?

ಜೆಡಿಎಸ್ ಉಪ ಚುನಾವಣೆ ಏಕೆ ಗೆಲ್ಲಬೇಕು?

ಇನ್ನು ಪ್ರತಿ ಬಾರಿಯೂ ಚುನಾವಣೆಗಳು ಬಂದಾಗಲೆಲ್ಲ ಬಿಜೆಪಿ ಮತ್ತು ಕಾಂಗ್ರೆಸ್‌ನ ಟೀಕೆಗಳಿಗೆ ಗುರಿಯಾಗಿ ಬಿ ಟೀಂ ಎಂಬ ಆರೋಪಗಳಿಗೆ ಸಿಲುಕಿ ನಲುಗುತ್ತಿರುವ ಮತ್ತು ರಾಜ್ಯದಲ್ಲಿ ಜೆಡಿಎಸ್ ನೆಲಕಚ್ಚುತ್ತಿದೆ ಎಂಬ ಹೇಳಿಕೆಗಳನ್ನು ನೀಡುವವರಿಗೆ ನಾವಿನ್ನೂ ಸದೃಢರಾಗಿದ್ದೇವೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ತೋರಿಸುತ್ತೇವೆ ಎಂಬುದನ್ನು ಸಾರಿ ಹೇಳಬೇಕಾದರೆ ಜೆಡಿಎಸ್‌ಗೆ ಇಲ್ಲಿ ಗೆಲುವು ಅನಿವಾರ್ಯವಾಗಿದೆ. ಹೀಗಾಗಿಯೇ ಬಹಳಷ್ಟು ತಂತ್ರಗಳನ್ನು ಮಾಡಿಯೇ ಎರಡು ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಅಖಾಡಕ್ಕಿಳಿಸಿದೆ.

 ಕೈ ಪಾಲಿಗೆ ಕುತಂತ್ರವಾದ ಜೆಡಿಎಸ್ ತಂತ್ರ

ಕೈ ಪಾಲಿಗೆ ಕುತಂತ್ರವಾದ ಜೆಡಿಎಸ್ ತಂತ್ರ

ಇದನ್ನು ಕಾಂಗ್ರೆಸ್‌ನ ನಾಯಕರು ಬಿಜೆಪಿ ಗೆಲುವಿಗಾಗಿ ಮಾಡಿದ ಕುತಂತ್ರ ಎಂದು ಮೂದಲಿಸಬಹುದು. ಆದರೆ, ಇದು ದೇವೇಗೌಡರು ಮತ್ತು ಕುಮಾರಸ್ವಾಮಿ ಸೇರಿದಂತೆ ಒಂದಷ್ಟು ನಾಯಕರು ಸೇರಿಕೊಂಡು ಮಾಡಿದ ತಂತ್ರವಾಗಿದೆ. ಇಲ್ಲಿ ಗೆಲುವು ಮುಖ್ಯ ಉದ್ದೇಶವಾಗಿದ್ದರೂ ಒಂದು ವೇಳೆ ಅದು ಸಾಧ್ಯವಾಗದೆ ಹೋದರೂ ಎದುರಾಳಿ ಸಿದ್ದರಾಮಯ್ಯಗೆ ಟಾಂಗ್ ಕೊಡುವ ಹುನ್ನಾರವೂ ಇಲ್ಲದಿಲ್ಲ. ಇಲ್ಲಿ ಜೆಡಿಎಸ್ ಮಾಡಿರುವ ತಂತ್ರದಿಂದ ಹೆಚ್ಚು ನಷ್ಟ ಅನುಭವಿಸುವವರು ಕಾಂಗ್ರೆಸ್ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸದ್ಯ ಜೆಡಿಎಸ್ ಮಾಡಿದ ಪ್ರತಿ ತಂತ್ರವೂ ಕಾಂಗ್ರೆಸ್‌ಗೆ ಮುಳುವಾಗುತ್ತಾ ಹೋಗಿದೆ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಇದೆಲ್ಲವನ್ನು ಅರಿತ ಕಾಂಗ್ರೆಸ್ ನಾಯಕರು ಆಡಳಿತ ಪಕ್ಷ ಬಿಜೆಪಿಯನ್ನು ಹಣಿಯುವುದಕ್ಕಿಂತ ಹೆಚ್ಚಾಗಿ ಜೆಡಿಎಸ್‌ನ್ನೇ ಹಣಿದಿದ್ದಾರೆ.

 ಸಿದ್ದರಾಮಯ್ಯ ಜೆಡಿಎಸ್‌ನ್ನೇ ಹಣಿದಿದ್ದು ಜಾಸ್ತಿ

ಸಿದ್ದರಾಮಯ್ಯ ಜೆಡಿಎಸ್‌ನ್ನೇ ಹಣಿದಿದ್ದು ಜಾಸ್ತಿ

ಕಾಂಗ್ರೆಸ್ ಉಪ ಚುನಾವಣೆಯನ್ನು ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಿರುವುದು ಇದುವರೆಗಿನ ವಿದ್ಯಮಾನಗಳನ್ನು ಗಮನಿಸಿದರೆ ಎದ್ದು ಕಾಣಿಸುತ್ತಿದೆ. ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲ ಒಟ್ಟಾಗಿದ್ದೇವೆ ಎಂಬುದನ್ನು ಸಾರ್ವಜನಿಕವಾಗಿ ತೋರಿಸುವ ಪ್ರಯತ್ನವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಡಿದ್ದಾರೆ. ಆದರೆ ಪ್ರಚಾರದ ವೇಳೆ ಆಡಳಿತ ಪಕ್ಷವನ್ನು ಟಾರ್ಗೆಟ್ ಮಾಡುವುದಕ್ಕಿಂತ ಹೆಚ್ಚಾಗಿ ಜೆಡಿಎಸ್ ನಾಯಕರ ವಿರುದ್ಧ ಆರೋಪಗಳನ್ನು ಮಾಡಿರುವುದು ಮತ್ತು ಪ್ರಚಾರದುದ್ದಕ್ಕೂ ಸಿದ್ದರಾಮಯ್ಯನವರು ದೇವೇಗೌಡರು ಮತ್ತು ಕುಮಾರಸ್ವಾಮಿಯವರನ್ನೇ ಹೀಗಳೆದಿದ್ದು ಕಾಂಗ್ರೆಸ್‌ಗೆ ಲಾಭ ತಂದುಕೊಟ್ಟಂತೆ ಕಾಣಿಸುತ್ತಿಲ್ಲ.

 ಇಲ್ಲಿ ಮತದಾರನ ನಿರ್ಧಾರವೇ ಅಂತಿಮ

ಇಲ್ಲಿ ಮತದಾರನ ನಿರ್ಧಾರವೇ ಅಂತಿಮ

ಅದು ಏನೇ ಇರಲಿ, ಚುನಾವಣಾ ಪ್ರಚಾರದ ವೇಳೆ ರಾಜಕೀಯ ಪಕ್ಷದ ನಾಯಕರು ಏನೇ ಆರೋಪ ಪ್ರತ್ಯಾರೋಪಗಳನ್ನು ಮಾಡಿದರೂ ಕೊನೆಯಲ್ಲಿ ಸೋಲು ಮತ್ತು ಗೆಲುವನ್ನು ನಿರ್ಧರಿಸುವವರು ಮತದಾರರೇ... ಇವತ್ತು ಯಾರೂ ಅನಕ್ಷರಸ್ಥರಲ್ಲ. ಎಲ್ಲರೂ ಅಕ್ಷರಸ್ಥರೇ ಅದಕ್ಕಿಂತ ಹೆಚ್ಚಾಗಿ ರಾಜಕೀಯ ವಿದ್ಯಮಾನಗಳನ್ನು ಪ್ರತಿಯೊಬ್ಬರೂ ಕುತೂಹಲದಿಂದ ನೋಡುತ್ತಾರೆ. ಜತೆಗೆ ಸಾಮಾಜಿಕ ಜಾಲತಾಣಗಳು ಕೂಡ ಸಕ್ರಿಯವಾಗಿವೆ. ಹೀಗಿರುವಾಗಿ ಹಿಂದಿನ ಚುನಾವಣೆಗಳ ಭ್ರಮೆಯಲ್ಲಿಯೇ ರಾಜಕೀಯ ನಾಯಕರು ಈಗಲೂ ಇದ್ದರೆ ಮೂರ್ಖತನವಾಗಿ ಬಿಡುತ್ತದೆ. ಮತದಾರ ಪ್ರಜ್ಞಾವಂತನಾಗಿದ್ದಾನೆ ಎಂಬುದನ್ನು ಈ ಹಿಂದಿನ ಚುನಾವಣೆಗಳಲ್ಲಿ ಸಾಬೀತು ಮಾಡಿದ್ದಾನೆ. ಈ ಉಪ ಚುನಾವಣೆಯಲ್ಲಿಯೂ ಅದನ್ನೇ ಮಾಡಲಿದ್ದಾನಾ? ಕಾದು ನೋಡಬೇಕಷ್ಟೆ.

Recommended Video

Facebook ನ ಇನ್ಮೇಲೆ ಏನಂತ ಕರಿಬೇಕು ಗೊತ್ತಾ? | Oneindia Kannada

English summary
Why Hanagal and Sindagi by elections a prestige matter for Congress, BJP and JDS party. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X