ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರುದ್ಯೋಗ, ಬಡತನ, ರೋಗದ ಭಯ ಮತ್ತು ಲಾಕ್ಡೌನು ಎನ್ನುವ ಮದ್ದು...

By ಡಾ. ಎ.ಶ್ರೀಧರ, ಮನೋವಿಜ್ಞಾನಿ
|
Google Oneindia Kannada News

ಹರಿಕೆ ಹೊತ್ತ ದೇವರಿಗೆ ಕಾಣಿಕೆ ಸಲ್ಲಿಸಲು ಅಡ್ಡ ಬರುವ ಲಾಕ್ಡೌನ್‌ ಅನ್ವಯಿಸುವುದು ಕೇವಲ ಶ್ರೀಸಾಮಾನ್ಯನಿಗೆ ಮಾತ್ರವಷ್ಟೇ. ಜನಸಾಮಾನ್ಯರಿಂದಲೇ ಗೆದ್ದೋ, ಗೆಲ್ಲದೆಯೋ ಗದ್ದುಗೆ ಏರಿದವರಿಗೆ ಯಾವ ನಿರ್ಬಂಧ? ಎಲ್ಲಿಯ ತಡೆ? ಇಂತಹ ಸಮಯದಲ್ಲಿಯೇ ಅವರಿಗೆ ದೇವರ ಮೇಲೆ ಭಕ್ತಿ ಉದ್ಭವಿಸಿ ಹೊರಚೆಲ್ಲವಷ್ಟು ಉಕ್ಕಿಹರಿಯುವುದು. ದೂರದೂರದ ಊರ ಸಿರಿವಂತ ದೇವರುಗಳು, ದೇವಸ್ಥಾನ, ಪೂಜೆಗಳು ದಿಢೀರನೆ ಮನಸಿಗೆ ಬಂದುಬಿಡುವುದು.

ಹಾಗೆ ಬರುವುದೇ ತಡ ಸಿದ್ಧವಾಗಿಬಿಡುತ್ತದೆ ಗೂಟ, ಬಾವುಟದ ಗಾಡಿಗಳು. ದೇವರ ಸಾನಿಧ್ಯವು ಉದ್ಘೋಷ, ಮಂತ್ರೋಚ್ಚಾರಣೆಗಳ ಮೂಲಕ ಇಂತಹವರನ್ನು ಬರಮಾಡಿಕೊಳ್ಳಲು ಕ್ಷಣದಲ್ಲಿ ಸಿದ್ಧವಾಗಿಬಿಡುತ್ತದೆ. ಈ ಕೋವಿಡ್ ಸಮಯದಲ್ಲಿ ಯಾರನ್ನು ನಂಬುವುದು? ಯಾವುದನ್ನು ನಂಬದಿರುವುದು ಎನ್ನುವುದೂ ಮಾನಸಿಕ ದುಸ್ಥಿತಿಯನ್ನು ಹೆಚ್ಚಿಸುವಂತಹದ್ದು. ಉರಿಯುತ್ತಿರುವ ಹೆಣಗಳು ಒಂದು ಕಡೆ, ಇನ್ನೊಂದೆಡೆ ಬಡತನ, ನಿರುದ್ಯೋಗದ ಧಗೆ. ಇದರಿಂದ ಹುಟ್ಟಿರುವ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲಾಗದೆ ಭಯ, ಭ್ರಮೆಗಳಿಗೆ ಸಿಕ್ಕಿ ನುಚ್ಚುನೂರಾಗುತ್ತಿರುವ ಮನದ ಗಟ್ಟಿಶಕ್ತಿಗಳು. ಇವೆಲ್ಲಕ್ಕೂ ಈ ಕೋವಿಡ್ ರೋಗ ಮಾತ್ರವಷ್ಟೇ ಕಾರಣವೇ? ಅಥವಾ ರೋಗದ ಅಸಮರ್ಪಕ ನಿರ್ವಹಣೆಯೇ? ಮುಂದೆ ಓದಿ...

ಆತ್ಮಶಕ್ತಿಯೇ ಕೊರೊನಾ ನಿವಾರಣೆಗೆ ಅರ್ಧ ಮದ್ದು: ಮನೋ ವೈದ್ಯ ಡಾ. ಶ್ರೀಧರ್ ಸಲಹೆ ಆತ್ಮಶಕ್ತಿಯೇ ಕೊರೊನಾ ನಿವಾರಣೆಗೆ ಅರ್ಧ ಮದ್ದು: ಮನೋ ವೈದ್ಯ ಡಾ. ಶ್ರೀಧರ್ ಸಲಹೆ

 ಜನರ ಬದುಕಿನ ರೀತಿಯನ್ನೇ ಕಟ್ಟಿ ಹಾಕುವುದು ಸರಿಯೇ?

ಜನರ ಬದುಕಿನ ರೀತಿಯನ್ನೇ ಕಟ್ಟಿ ಹಾಕುವುದು ಸರಿಯೇ?

ಹಾರಿ, ಹರಡುವ ಈ ವೈರಾಣುಗಳ ಬಗ್ಗೆ ರೋಗಶಾಸ್ತ್ರದ ವಿವಿಧ ಶಾಖೆಗಳು ನೀಡಿರುವ ವಿವರಣೆಗಳು, ಅಂಕಿಅಂಶಗಳು ಅತ್ಯುತ್ತಮ ಮಾಹಿತಿ, ಮಾರ್ಗದರ್ಶನಗಳನ್ನೇ ಸೂಚಿಸಿದ್ದರೂ ಜನರ ನಡೆನುಡಿಗಳ ವಿಚಾರ ಬಂದಾಗ ಇಷ್ಟೊಂದು ಖಚಿತವಾದ, ಮನಸ್ಸು ಮತ್ತು ಹೊಟ್ಟೆಯ ಪಾಡನ್ನು ಕಾಪಾಡುವಂತಹ ಜನಹಿತ ಚಿಂತನೆಗಳು ಸಾಧ್ಯವಾಗುತ್ತಿಲ್ಲವೇಕೆ? ರೋಗ ವ್ಯಾಪಿಸುತ್ತಿದೆ ಎಂದ ತಕ್ಷಣ ಜನರ ಬಾಯಿಗೆ ಬಟ್ಟೆ ಕಟ್ಟಿದ ರೀತಿಯಲ್ಲಿ ಬದುಕಿನ ರೀತಿಯನ್ನೇ ಕಟ್ಟಿ ಹಾಕುವುದು ಸರಿಯೇ? ರೋಗದ ಸಂಚಲನ ತಡೆಗಟ್ಟಬಹುದಾದ ಹೊಸ ಮಾದರಿಗಳತ್ತ ಗಮನ ಹರಿಸದಿರುವುದಕ್ಕೆ ಕಾರಣಗಳು ಇರಬಲ್ಲದೆ? ನಮ್ಮನ್ನು ಆಳುವವರ ಮನಸು ಕೂಡ ಕೋವಿಡ್ ಭೀತಿಗೆ ಸಿಕ್ಕಿಕೊಂಡಿರುವುದೇ?

ಅಥವಾ ಇಂತಹದೊಂದು ವಿಚಾರದಲ್ಲಿ ಲಾಭವೇ ಇಲ್ಲ ಎನ್ನುವ ಧೋರಣೆಯೂ ಇರಬಹುದೇ? (ರಾಜಕಾರಣಿಗಳಲ್ಲಿ ಇದಿಂದು ತೀರಾ ಸಹಜ) ಅಥವಾ ಎಲ್ಲವೂ ನನಗೆ ತಿಳಿದಿದೆಯೆನ್ನುವಂತಹ ಹಾವಭಾವಗಳಿಂದ ಬೀಗುವ ಸರ್ವಜ್ಞ ರಾಜಕಾರಣಿಗಳ ಹಿಡಿತಕ್ಕೆ ಸಿಕ್ಕಿಕೊಂಡಿರಬಹುದೆ? ಅಥವಾ ಎಲ್ಲವನ್ನು ಭಗವಂತನೇ ಮಾಡಲಿ ಎನ್ನುವ ಭಾವನೆಯೂ ಇರಬಹುದೇ? ಇವೆಲ್ಲಕ್ಕೂ ಹೌದು ಎನ್ನುವ ಉತ್ತರ ಸರಿಯೆನ್ನುವುದನ್ನು ಬಲಪಡಿಸುವ ಪ್ರಸಂಗಗಳು ಕಣ್ಣೆದುರಿಗೆ ಜರುಗಿದಾಗಲಂತೂ ಇದುವೇ ಖಂಡಿತ ಎನಿಸುತ್ತದೆ.

 ಯಾರ ಮೇಲಿನ ಸಿಟ್ಟು ಇನ್ಯಾರ ಮೇಲೋ ಹರಿಸಿದಂತೆ!

ಯಾರ ಮೇಲಿನ ಸಿಟ್ಟು ಇನ್ಯಾರ ಮೇಲೋ ಹರಿಸಿದಂತೆ!

ಮಧ್ಯಪ್ರದೇಶದಲ್ಲಿಂದು ಮಾಸ್ಕ್ ಹಾಕಿರದ ಮಹಿಳೆಯೊಬ್ಬಳನ್ನು ಪೊಲೀಸರು ನಡುರಸ್ತೆ ಹಿಗ್ಗಾಮುಗ್ಗಾ ಎಳೆದಾಡಿದ್ದರ ವಿಡಿಯೋ ನೋಡಿದರೆ ನಾಗರೀಕತೆಯ ನಿಯಮಗಳು ಪೊಲೀಸರಿಗೆ ಅನ್ವಯಿಸುವುದಿಲ್ಲ ಎನ್ನುವುದು ಈಗಂತೂ ತುಂಬಾ ಸ್ಪಷ್ಟ. ಇಂತಹ ವರ್ತನೆಗಳು ಹುಟ್ಟುವುದಕ್ಕೆ ಕೋವಿಡ್ ರೋಗದ ಸ್ಥಿತಿಯಷ್ಟು ಪ್ರಶಸ್ತವಾದುದು ಮತ್ತೊಂದಿಲ್ಲವೆನ್ನುವ ವಿಷಯದ ಬಗ್ಗೆ ಮನೋವಿಜ್ಞಾನಿಗಳು ಈಗಾಗಲೇ ಎಚ್ಚರಿಸಿದ್ದಾರೆ. ಕೊರೊನಾ ರೋಗದ ಬಗ್ಗೆ ಹರಿದು ಬರುವ ಮಾಹಿತಿಗಳು, ಕಟ್ಟಾಜ್ಞೆಗಳು, ಕಟ್ಟುಕತೆಗಳು ಪ್ರತಿಯೊಬ್ಬರ ಮನದಲ್ಲಿ, ಕೊರೊನಾ ವೈರಾಣುವಿಗಿಂತಲೂ ವೇಗವಾಗಿ, ನುಗ್ಗಿ ನಂಬಲಾರದಂತಹ ನಡೆನುಡಿಗಳ ಮೂಲಕ ವ್ಯಕ್ತಗೊಳ್ಳುತ್ತವೆ. ಅದರಲ್ಲಿಯೂ ಸರಕಾರದ ಅಧಿಕಾರಿಗಳು, ಕಾನೂನು ಪಾಲಕರ ಮನದಲ್ಲಿ ರೋಗದ ಭೀತಿಯೇ ನಿಶ್ಶಕ್ತರು, ಅಸಹಾಯಕರ ಮೇಲೆ ತಿರುಗಿ ಬೀಳುವಂತಹ ವರ್ತನೆಗಳಾಗಿ ಮೂಡಬಲ್ಲದು. ಸರಳವಾಗಿ ಹೇಳುವುದಾದರೇ ಯಾರ ಮೇಲಿನ ಸಿಟ್ಟು ಇನ್ಯಾರ ಮೇಲೋ ಹರಿಸಿದಂತೆ!

#LifeAfterCorona: ಹೊಸತನ ಸೃಷ್ಟಿಯಾಗುವ ಆಶಯ ಬಲವಾಗಿದೆ#LifeAfterCorona: ಹೊಸತನ ಸೃಷ್ಟಿಯಾಗುವ ಆಶಯ ಬಲವಾಗಿದೆ

 ವ್ಯಕ್ತಿ ಬದುಕಿನ ಕುರಿತೂ ಯೋಚಿಸಬೇಕಾಗುತ್ತದೆ

ವ್ಯಕ್ತಿ ಬದುಕಿನ ಕುರಿತೂ ಯೋಚಿಸಬೇಕಾಗುತ್ತದೆ

ಅದೇ ರೀತಿ, ರೋಗವೇನೋ ಜೀವಕ್ಕೆ ಅಪಾಯಕಾರಿ ಹೌದು. ಆದರೆ ಅದನ್ನು ನಿಯಂತ್ರಿಸುವ ವಿಧಾನದಲ್ಲಿ ವ್ಯಕ್ತಿ ಬದುಕಿನ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಅಂತಹದೊಂದು ಚಿಂತನೆಗೆ ಅವಕಾಶವೇ ಎಲ್ಲ ಎನ್ನುವುದನ್ನು ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ನಮ್ಮ ಪ್ರಧಾನಿಯವರ ಕಾರ್ಯತಂತ್ರ ಸೂಚಿಸಿತ್ತು. ಅದೇ ಇಂದಿಗೂ ಅನೇಕರ ರಾಜ್ಯಗಳ ಮೂಲ ಮಾದರಿಯಾಗಿ ಉಳಿದಿದೆ. ಪ್ರತಿಷ್ಠಿತರ ನಡೆನುಡಿಗಳನ್ನು ಅನುಸರಿಸುವುದು, ಅಸಂಬದ್ಧ, ಅಪಾಯಕಾರಿಯಾಗಿದ್ದರೂ ಅನುಸರಿಸುವುದು ಮನುಷ್ಯರ ಸಹಜ ಗುಣಗಳಲ್ಲಿ ಒಂದು. ಅದರಲ್ಲಿಯೂ ಸುಪ್ರಸಿದ್ಧರ ಹೇಳಿಕೆ, ತಿಳಿವಳಿಕೆಗಳು ಎಷ್ಟೇ ಅಸಂಬದ್ಧ, ಅವೈಜ್ಞಾನಿಕವೇ ಆಗಿದ್ದರೂ ಅದನ್ನು ಅನುಮೋದಿಸಿ ಆರಾಧಿಸುವವರ ಸಂಖ್ಯೆಯೂ ದೊಡ್ಡದೇ ಇರುತ್ತದೆ. ಈವತ್ತಿನ ಸನ್ನಿವೇಶದಲ್ಲಿ ಕೊವಿಡ್ ನಿಯಂತ್ರಣ ನಿಯಮಾವಳಿಗಳು ಅಪಕ್ವವಾಗಿದ್ದರೂ ಅದೊಂದು ಸೂಕ್ತ ಎನ್ನುವಂತಹ ನಿಲುವು ಬಹಳ ಸುಲಭವಾಗಿ ಅಧಿಕಾರಿಗಳು, ರಾಜಕಾರಣಿಗಳಲ್ಲಿ ಕಂಡುಬರುತ್ತಿರುವುದು ಇಂತಹುದರ ಉತ್ತಮ ಉದಾಹರಣೆ ಇರಬಹುದೆ?

 ಕಠಿಣ ಲಾಕ್ಡೌನು ಹೇರುವುದಕ್ಕೆ ಮಹಾ ಅವಸರ

ಕಠಿಣ ಲಾಕ್ಡೌನು ಹೇರುವುದಕ್ಕೆ ಮಹಾ ಅವಸರ

ಇಂತಹ ಅನುಸರಣೆ, ಅನುಮೋದನೆಯ ಮನಸ್ಥಿತಿಯೂ ಅನೇಕಾನೇಕ ಜಠಿಲ ಪ್ರಶ್ನೆಗಳತ್ತ ಗಮನ ಹರಿಸದಂತೆ ಮಾಡಿಬಿಡುತ್ತದೆ. ಹಾಗಾದಾಗ ಜನತೆಗೆ ಆಗುವ ನೋವು ಅಷ್ಟಿಷ್ಟಲ್ಲ. ಲಾಕ್ಡೌನು ಯಾವ ರೀತಿಯ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ ಎನ್ನುವುದರತ್ತ ಆಳವಾಗಿ ಗಮನ ಹರಿಸಿಲ್ಲ ಎನ್ನುವುದಕ್ಕೆ ಈ ಮಾತು ನಿಜವೆನಿಸುತ್ತದೆ. ಆದುದರಿಂದಲೇ ಸಂಕೀರ್ಣತೆಯಿಂದ ಕೂಡಿದ ನಮ್ಮ ದೇಶದ ಸ್ಥಿತಿಗತಿಗಳಿಗೆ ಅನುಗುಣವಾದ ಸಮಸ್ಯಾ ಪರಿಹಾರದ ಮಾದರಿಗಳನ್ನು ಕಂಡುಕೊಳ್ಳುವಂತಹ ಒಂದು ತಜ್ಞರ ಪಡೆ ಮೂಡುವುದಕ್ಕೂ ಸಾಧ್ಯವಿಲ್ಲ ಎನ್ನುವಂತಹ ಸ್ಥಿತಿಯಲ್ಲಿ ನಾವಿದ್ದೇವೇನೋ ಅನಿಸುತ್ತದೆ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣವಿದೆ. ನಮ್ಮ ಸರಕಾರದ ಸಚಿವರುಗಳಿಗೆ, ರಾಜಕಾರಣಿಗಳಿಗೆ ಕಠಿಣ ಲಾಕ್ಡೌನು ಹೇರುವುದಕ್ಕೆ ಮಹಾ ಅವಸರ. ರೋಗವೂ ಹೆದರಿಬಿಡುತ್ತದೆ ಇವರುಗಳ ಲಾಕ್ಡೌನುಗಳಿಗೆ ಎನ್ನುವ ನಂಬಿಕೆ.

ಕಳೆದ ನಾಲ್ಕು ನೂರಕ್ಕೂ ಹೆಚ್ಚು ದಿನಗಳುದ್ದಕ್ಕೂ ಇದರ ಕಹಿಯನ್ನು ಜನಸಾಮಾನ್ಯರು, ಬಡಜನ ಸಹಿಸಿಕೊಂಡಿದ್ದಾರೆ. ಜನರ ಮನಸು, ಗಳಿಸುವ ಅವಕಾಶ, ದುಡಿಮೆಯ ಗುರಿ, ವೃತ್ತಿ ಕೌಶಲ್ಯಗಳ ಅಭಿವೃದ್ಧಿ ಎಲ್ಲವೂ ಈಗ ಮೂರಾಬಟ್ಟೆ. ಮಾಡಿದ ಸಾಲ ತೀರಿಸುವುದಕ್ಕೆ ದಾರಿ ಇಲ್ಲ, ಹೊಸ ಸಾಲ ಮಾಡುವಷ್ಟು ಶಕ್ತಿ ಇಲ್ಲ. ಹೀಗೆಲ್ಲಾ ಇರುವುದರ ಬಗ್ಗೆ ಸಮಾಜ ವಿಜ್ಞಾನಿಗಳು, ಚಿಂತಕರು, ಆರ್ಥಿಕ ತಜ್ಞರು, ಮನೋತಜ್ಞರು ನಾನಾ ರೀತಿಯ ಅಂಕಿಅಂಶಗಳ ಮೂಲಕ ವಿವರಿಸಿರುವುದನ್ನೂ ಕೆಲ ಮಾಧ್ಯಮಗಳು ಬಹಳ ಕಾಳಜಿಯಿಂದ ವಿವರಿಸುತ್ತಿವೆ. ಆದರೆ ಇವುಗಳು ಮುಖ್ಯವಲ್ಲ ಎನ್ನುವ ರೀತಿಯಲ್ಲಿ ಸರಕಾರದ ನಡೆ ಇರುವುದು ಬಹಳ ಸ್ಪಷ್ಟ.

 ಕಠಿಣ ಲಾಕ್‌ಡೌನು ವಿಷಪೂರಿತ ಗಾಳಿಯಷ್ಟೇ ಅಪಾಯಕಾರಿ

ಕಠಿಣ ಲಾಕ್‌ಡೌನು ವಿಷಪೂರಿತ ಗಾಳಿಯಷ್ಟೇ ಅಪಾಯಕಾರಿ

ಸರ್ಕಾರಗಳನ್ನು ರಚಿಸುವ ಮಹಾನ್‌ ರೋಗ ತಜ್ಞರ ಅಭಿಪ್ರಾಯಗಳನ್ನು ತುಂಬಾನೇ ಗೌರವಿಸಬೇಕು, ಪಾಲಿಸಲೂ ಬೇಕು. ಆದರೆ ರೋಗವಿರದವರು, "ಕೈ ಕೆಸರಾದರೇನೇ ಬಾಯಿ ಮೊಸರು" ಆಗುವವರ ಪಾಡೇನು?. ಕಾಯಕವೇ ಉತ್ಸಾಹ ತುಂಬುವುದೆನ್ನುವುದರ ದೃಷ್ಟಿಯಿಂದಲೇ ಬದುಕಿನ ಕಲೆಗಳನ್ನು ಕಷ್ಟಪಟ್ಟು ಮೈಗೂಡಿಸಿಕೊಂಡಿರುವವರ ಪಾಡೇನು? ತಿಂಳುಗಟ್ಟಲೆ ಮನೆಯಲ್ಲಿಯೇ ಕೈಕಟ್ಟಿ ಕುಳಿತಿರುವುದು ಸಾಧ್ಯವೇ? ಕೈ ಬಾಯಿಗಳನ್ನು ಹೇಗಾದರೂ ಕಟ್ಟಿ ಹಾಕಿಸಿಕೊಳ್ಳಬಹುದು, ಆದರೇ ಮನಸ್ಸು? ಅದು ಯಾರಪ್ಪನ ಮಾತನ್ನು ಕೇಳುವುದಿಲ್ಲ, ಗೊತ್ತಾ? ನಿರುದ್ಯೋಗ, ಬಡತನ, ರೋಗದ ಭಯ, ಸಾಕಪ್ಪ ಸಾಕು, ನಾಳೆಯ ಬಗ್ಗೆ ಯೋಚಿಸಲೇ ಬಾರದೆಂದುಕೊಂಡಷ್ಟು ತಲೆಬುರಡೆಯನ್ನೇ ಸೀಳಿ ಹೊರಬರುವಂತಹ ಭಯ, ಆತಂಕಗಳು.

ಇವುಗಳಿಂದ ತಪ್ಪಿಸಿಕೊಳ್ಳಲು ಪೊಲೀಸರ ಲಾಟಿಯನ್ನಾದರೂ ಎದುರಿಸಬಹುದು ಎನ್ನುವಂತಹ ಹಟ ದೇಹವನ್ನು ಮನೆಯಿಂದ ತಬ್ಬಿ ಹೊರಗೆ ತಳ್ಳುತ್ತದೆ. ಒಂದಕ್ಕೊಂದು ಅಂಟಿಕೊಂಡಿರುವ ಓಣಿಗಳು, ವಠಾರದ ಮನೆಗಳಿಂದ ಹೊರಬಂದರಷ್ಟೇ ಗಾಳಿ, ಬೆಳಕು ಎನ್ನುವಂತಹ ಪರಿಸ್ಥಿತಿ ಇದ್ದಾಗ ಬೀದಿಗಿಳಿದರಷ್ಟೇ ಉಸಿರಾಟ. ಗಾಳಿ ಕುಡಿದಾದರೂ ಜೀವ ಉಳಿಸಿಕೊಳ್ಳುವುದು ಮನುಷ್ಯ ಸಹಜ ಛಲ. ಇದು ನಮ್ಮ ಸರಕಾರಗಳಿಗೆ ಅರ್ಥವಾಗಲೇಬೇಕು. ಇನ್ನೂ ಕಠಿಣ ಲಾಕ್ಡೌನು ಎನ್ನುವಂತಹ ಮಾತುಗಳು ವಿಷಪೂರಿತ ಗಾಳಿಯಷ್ಟೇ ಅಪಾಯಕಾರಿ. ಉಳ್ಳವರಿಗೆ ರೋಗ ಬಂದರೆ ಜೀವ ಉಳಿಸಿಕೊಳ್ಳುವುದಕ್ಕೆ ಆಲೋಚಿಸುವಂತಹ ವ್ಯವಸ್ಥೆ ಸುವ್ಯವಸ್ಥಿತವಾಗಿದೆ. ಆದರೆ ಹೊಟ್ಟೆ ಬೆನ್ನುಗಳೆರುಡು ಒಂದಾಗುತ್ತಿರುವವರ ಗತಿ?

 ಜೀವನ ಕೌಶಲ್ಯ ಹೆಚ್ಚಿಸುವ ಪ್ರಯತ್ನ ಮಾಡಲಿ

ಜೀವನ ಕೌಶಲ್ಯ ಹೆಚ್ಚಿಸುವ ಪ್ರಯತ್ನ ಮಾಡಲಿ

ಸಾಂಕ್ರಾಮಿಕ ರೋಗವು ಹಳ್ಳಿಗಳ ಹಾದಿ ಹಿಡಿದಿದೆ, ವೈದ್ಯಕೀಯ ಸೌಲಭ್ಯ ಹಾಗಿರಲಿ, ರೋಗದ ಬಗ್ಗೆ ತಿಳಿವಳಿಕೆ, ಮಾಹಿತಿಗಳೂ ದೊರಕದಂತಹ ಸ್ಥಿತಿಯಿದೆ. ಇಂತಹದೊಂದು ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ಜನರ ಸ್ವಭಾವ ನಡೆನುಡಿಗಳತ್ತ ಗಮನ ಹರಿಸುವುದು ಲಾಭದಾಯಕ. ಏಕೆಂದರೆ, ಸಾಮಾನ್ಯ ಮನುಷ್ಯನಲ್ಲಿ ಇನ್ನೂ ಗಟ್ಟಿಯಾಗಿ ಉಳಿದಿರುವ ಕುಟುಂಬ ಪ್ರಜ್ಞೆ, ಅನುಕಂಪ, ನೆರವು ನೀಡುವ ಗುಣಗಳ ಮೂಲಕ ಸಹಕಾರ ಸ್ವಭಾವ ಹೆಚ್ಚಿಸುವದರತ್ತ ಪ್ರಯತ್ನ ಮಾಡಬೇಕಿದೆ. ಇದನ್ನು ಸಮಪರ್ಕವಾಗಿ ಮಾಡಲು ಜನರ ಸಂಘಟನೆಗಳು ಬೇಕು. ಇದನ್ನು ಉತ್ತೇಜಿಸುವಂತಹ ನೀತಿ ನಿಯಮಗಳನ್ನು ಜರೂರಾಗಿ ಸರಕಾರ ಉತ್ತೇಜಿಸಬೇಕು. ಆರೋಗ್ಯವಂತ ಯುವಜನರ ಗುಂಪುಗಳನೇಕವು ಇದನ್ನು ಈಗಾಗಲೇ ಮಾಡುತ್ತಿವೆ. ಅಂತಹ ಗುಂಪುಗಳಿಗೆ ಆರ್ಥಿಕ ನೆರವು, ತಜ್ಞರ ಮಾರ್ಗದರ್ಶನದ ಅಗತ್ಯವಿದೆ. ಈ ಸಮಯದಲ್ಲಿ ಸಮುದಾಯಗಳ ಮೂಲಕ ಆರೋಗ್ಯ, ವೃತ್ತಿ ಮತ್ತು ಜೀವನದ ಕೌಶಲ್ಯಗಳನ್ನು ಹೆಚ್ಚಿಸುವಂತಹ ಪ್ರಯತ್ನಗಳನ್ನು ಮಾಡಬೇಕಾಗಿದೆ. ಮಾಧ್ಯಮಗಳು ಇಂತಹದೊಂದು ಕಾರ್ಯ ಮಾಡುವ ಸಾಮರ್ಥ್ಯ ಉತ್ತಮವಾಗಿದೆ. ಹಾಗೆಯೇ ಸಾಮಾಜಿಕ ಜಾಲತಾಣಗಳ ಮೂಲಕವೂ ಈ ಮಾದರಿ ಕಾರ್ಯಗಳನ್ನು ಮಾಡುವುದಕ್ಕೂ ಇದು ಸುಸಮಯ.

English summary
Lockdown applies only to the common man and why government is in great hurry to impose a tough lockdown? Psychologists Dr A Sridhar explains...,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X