ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಭವಿಷ್ಯ ಮತ್ತು ದೇವೇಗೌಡರ ಜಾಣ್ಮೆ

By ಆರ್ ಟಿ ವಿಠ್ಠಲಮೂರ್ತಿ
|
Google Oneindia Kannada News

ಬಹುಮತ ಸಾಬೀತುಪಡಿಸಲಾಗದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪತನವಾಗಿರುವ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಒಂದು ಕುತೂಹಲದ ಪ್ರಶ್ನೆ ಕೇಳಿ ಬರುತ್ತಿದೆ. ಅದೆಂದರೆ, ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಎಷ್ಟು ಭದ್ರವಾಗಿರಲಿದೆ? ಎಂಬುದು.

ಇದು ಸಹಜವೇ. 2004ರಲ್ಲಿ ರಚನೆಯಾದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ಬಹುಬೇಗ ಉರುಳಿ ಬಿತ್ತು. ತಮ್ಮ ಪಕ್ಷವನ್ನು ನುಂಗಿ ನೊಣೆಯಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಆರೋಪಿಸಿ, ಮಾಜಿ ಪ್ರಧಾನಿ ದೇವೇಗೌಡರ ಮಗ ಕುಮಾರಸ್ವಾಮಿ ಅವರು, ಯಡಿಯೂರಪ್ಪ ಅವರ ಜತೆ ಕೈ ಜೋಡಿಸಿ ಬಿಜೆಪಿ-ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ಮಾಡಿದರು.

ಅಧಿಕಾರ ಹಂಚಿಕೆ ವರದಿ ಊಹಾಪೋಹ: ಕುಮಾರಸ್ವಾಮಿ ಅಧಿಕಾರ ಹಂಚಿಕೆ ವರದಿ ಊಹಾಪೋಹ: ಕುಮಾರಸ್ವಾಮಿ

ಇದಾಗಿ ದಶಕಕ್ಕೂ ಹೆಚ್ಚು ಕಾಲ ಕಳೆದು ಹೋಗಿದೆ. ಈ ಅವಧಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಹೇಳಿಕೊಳ್ಳುವಂತಹ ಸಖ್ಯ ಬೆಳೆಯಲಿಲ್ಲ. 2013ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದೇ ಉಭಯ ಪಕ್ಷಗಳ ನಾಯಕರು ನಂಬಿಕೊಂಡಿದ್ದರು. ಅದು ಸಾಧ್ಯವಾಗಲಿಲ್ಲ ಎಂಬುದು ಬೇರೆ ಮಾತು.

ಆದರೆ ಪರಸ್ಪರ ಕೈ ಜೋಡಿಸುವ ವಿಷಯ ಬಂದಾಗ ಜೆಡಿಎಸ್ ನಿರಂತರವಾಗಿ ಬಿಜೆಪಿಯ ಕಡೆ ನೋಡುತ್ತಿತ್ತೇ ವಿನ: ಕಾಂಗ್ರೆಸ್ ಕಡೆಗಲ್ಲ. ಅದೇ ರೀತಿ ಕಾಂಗ್ರೆಸ್ ಕೂಡಾ ಜೆಡಿಎಸ್ ಪಕ್ಷವನ್ನು ಮುಗಿಸಲು ಹವಣಿಸುತ್ತಲೇ ಬಂತು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾಗಲಿರುವ ನಿಯೋಜಿತ ಸಿಎಂ ಕುಮಾರಸ್ವಾಮಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾಗಲಿರುವ ನಿಯೋಜಿತ ಸಿಎಂ ಕುಮಾರಸ್ವಾಮಿ

ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಜೆಡಿಎಸ್ ಪಕ್ಷವನ್ನು ದುರ್ಬಲಗೊಳಿಸುವ ಕೆಲಸ ನಡೆದುಕೊಂಡೇ ಬಂದಿದ್ದು ಇದಕ್ಕೆ ಸಾಕ್ಷಿ. ಜೆಡಿಎಸ್ ನ ಏಳು ಮಂದಿ ಶಾಸಕರನ್ನು ಕೈ ಪಾಳೆಯಕ್ಕೆ ಸೆಳೆಯವುದರಿಂದ ಹಿಡಿದು ಈ ಬಾರಿಯ ಚುನಾವಣೆಯ ಕಣದಲ್ಲಿ ಜೆಡಿಎಸ್ ಪಕ್ಷ, ಬಿಜೆಪಿಯ 'ಬಿ' ಟೀಂ ಎಂದು ಆರೋಪಿಸುವ ಮಟ್ಟಕ್ಕೆ ಹೋಯಿತು.

ರೇಷ್ಮೆ ದಿರಿಸಿನಲ್ಲಿ ಕುಮಾರಸ್ವಾಮಿ ಪ್ರಮಾಣವಚನ ರೇಷ್ಮೆ ದಿರಿಸಿನಲ್ಲಿ ಕುಮಾರಸ್ವಾಮಿ ಪ್ರಮಾಣವಚನ

ಅಂದ ಹಾಗೆ, ಮೈತ್ರಿಕೂಟ ಸರ್ಕಾರ ರಚನೆಯಾದರೆ ಬಿಜೆಪಿ-ಜೆಡಿಎಸ್ ಪರಸ್ಪರ ಕೈ ಜೋಡಿಸಬೇಕು ಎಂದೇ ಉಭಯ ಪಕ್ಷಗಳ ವರಿಷ್ಠರು ದೆಹಲಿ ಮಟ್ಟದಲ್ಲಿ ಮಾತನಾಡಿಕೊಂಡಿದ್ದರು. ಮೊನ್ನೆ ಚುನಾವಣೆಯ ಪ್ರಚಾರ ನಡೆಯುತ್ತಿದ್ದಾಗ ಒಂದು ಸಂದರ್ಭದಲ್ಲಿ ಕಾಂಗ್ರೆಸ್ ಬಗ್ಗೆ ಆಕ್ರೋಶಗೊಂಡ ಕುಮಾರಸ್ವಾಮಿ, ನಾವು ಬಿಜೆಪಿಯ ಜತೆ ನಿಂತು ಕೆಮ್ಮಿದರೆ ನಿಮ್ಮ ಗತಿ ಏನಾಗುತ್ತದೆ? ಎಂದು ಕೈ ಪಾಳೆಯವನ್ನು ಪ್ರಶ್ನಿಸಿದ್ದು ಇದೇ ಹಿನ್ನೆಲೆಯಲ್ಲಿ.

ಬಿಜೆಪಿ-ಜೆಡಿಎಸ್ ಅಲಿಖಿತ ಮೈತ್ರಿ ಮುರಿದುಬಿದ್ದಿದ್ದೇಕೆ?

ಬಿಜೆಪಿ-ಜೆಡಿಎಸ್ ಅಲಿಖಿತ ಮೈತ್ರಿ ಮುರಿದುಬಿದ್ದಿದ್ದೇಕೆ?

ಆದರೆ ಫಲಿತಾಂಶವೇನೋ ಅತಂತ್ರವಾಯಿತು. ಅದರೆ ಬಿಜೆಪಿ-ಜೆಡಿಎಸ್ ಪರಸ್ಪರ ಕೈಗೂಡಿಸುವ ಲೆಕ್ಕಾಚಾರ ತಲೆ ಕೆಳಗಾಯಿತು. ಪಕ್ಷ ನೂರಾ ನಾಲ್ಕು ಸ್ಥಾನಗಳನ್ನು ಗೆದ್ದಿದ್ದರಿಂದ ಜೆಡಿಎಸ್ ಗೆ ಸಿಎಂ ಹುದ್ದೆ ಬಿಟ್ಟು ಕೊಡಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಯಾರಿರಲಿಲ್ಲ. ಅದೇ ಕಾಲಕ್ಕೆ ಕರ್ನಾಟಕವನ್ನು ಕಳೆದುಕೊಂಡು ಮತ್ತಷ್ಟು ದೈನೇಸಿ ಸ್ಥಿತಿಗೆ ಹೋಗಲು ಕಾಂಗ್ರೆಸ್ ಕೂಡಾ ರೆಡಿ ಇರಲಿಲ್ಲ. ಹೀಗಾಗಿ ಮೈತ್ರಿಯ ಮಾತುಕತೆಗೆ ಬಿಜೆಪಿ ವರಿಷ್ಠರು ಹಿಂಜರಿದರು. ಕಾಂಗ್ರೆಸ್ ನಾಯಕರು ದೆಹಲಿಯಿಂದ ಬಂದು ಜೆಡಿಎಸ್ ಗೆ ಬೇಷರತ್ ಬೆಂಬಲ ನೀಡುವುದಾಗಿ ಘೋಷಿಸಿದರು. ಆದರೆ ತಮ್ಮನ್ನು ಮುಗಿಸಲು ನಿರಂತರ ಯತ್ನ ನಡೆಸುತ್ತಲೇ ಬಂದ ಕಾಂಗ್ರೆಸ್ ಜತೆ ಹೋಗಲು ಮಾಜಿ ಪ್ರಧಾನಿ ದೇವೇಗೌಡರು ನಿರ್ಧರಿಸಿದ್ದೇಕೆ?

ಕಾಂಗ್ರೆಸ್ ಜತೆ ಹೋಗಲು ಗೌಡ್ರು ನಿರ್ಧರಿಸಿದ್ದೇಕೆ?

ಕಾಂಗ್ರೆಸ್ ಜತೆ ಹೋಗಲು ಗೌಡ್ರು ನಿರ್ಧರಿಸಿದ್ದೇಕೆ?

ಈ ಪ್ರಶ್ನೆಗೆ ಉತ್ತರ ಕಂಡು ಹಿಡಿದರೆ, ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಭವಿಷ್ಯ ಎಷ್ಟು ಭದ್ರ ಎಂಬುದು ಸ್ಪಷ್ಟವಾಗುತ್ತದೆ. ಈಗ ಅದನ್ನು ವಿವರವಾಗಿ ನೋಡುತ್ತಾ ಹೋಗೋಣ. ಮೊದಲನೆಯದಾಗಿ, ದೇವೇಗೌಡರು ಕಾಂಗ್ರೆಸ್ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳಲು ನಿರ್ಧರಿಸಿದ್ದು, ಬಿಜೆಪಿ ಜತೆ ಹೊಂದಾಣಿಕೆ ಸಾಧ್ಯವಿಲ್ಲ, ಹೀಗಾಗಿ ಮುಖ್ಯಮಂತ್ರಿ ಪದವಿಯನ್ನು ಪಡೆಯಲು ಪಕ್ಷ ಕಾಂಗ್ರೆಸ್ ಜತೆ ಹೋಗುವುದು ಅನಿವಾರ್ಯ ಎಂಬ ಕಾರಣಕ್ಕಾಗಿ.

ಜೆಡಿಎಸ್ ಆಪೋಶನ ತೆಗೆದುಕೊಳ್ಳಲು ಸಿದ್ಧವಿದ್ದ ಕಾಂಗ್ರೆಸ್

ಜೆಡಿಎಸ್ ಆಪೋಶನ ತೆಗೆದುಕೊಳ್ಳಲು ಸಿದ್ಧವಿದ್ದ ಕಾಂಗ್ರೆಸ್

ಎರಡನೆಯದಾಗಿ, ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದ ಕಾಲದಲ್ಲಿ ಕೇಂದ್ರದ ಅಧಿಕಾರ ಸೂತ್ರ ಹಿಡಿದಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ. ಹೀಗೆ ಕೇಂದ್ರದಲ್ಲೇ ಅಧಿಕಾರ ಹಿಡಿದಿರುವಾಗ ಕರ್ನಾಟಕದಲ್ಲಿ ಅಧಿಕಾರ ಇದ್ದರೂ, ಇರದಿದ್ದರೂ ಅದು ತುಂಬ ಚಿಂತಿಸುವುದೇನೂ ಇರಲಿಲ್ಲ. ನಿಜ ಹೇಳಬೇಕೆಂದರೆ ಅದು ಚಿಂತಿಸಲೂ ಇಲ್ಲ. ಧರ್ಮಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚನೆಯಾದರೂ ಅದನ್ನು ಉರುಳಿಸಲು ಕೈ ಪಾಳೆಯದ ನಾಯಕರೇ ನಿರಂತರವಾಗಿ ಯತ್ನಿಸುತ್ತಾ ಬಂದರು. ಆದರೆ ಅದಕ್ಕೆ ಕಾಂಗ್ರೆಸ್ ಹೈಕಮಾಂಡ್ ಯಾವ ತಕರಾರೂ ಎತ್ತಲಿಲ್ಲ. ಸಾಧ್ಯವಾದರೆ ಜೆಡಿಎಸ್ ಪಕ್ಷವನ್ನು ಅಪೋಶನ ತೆಗೆದುಕೊಳ್ಳುವುದು ಒಳ್ಳೆಯದು. ಆ ಮೂಲಕ ಬಿಜೆಪಿಯೇತರ ಮತಬ್ಯಾಂಕ್ ಅನ್ನು ಸಾರಾಸಗಟಾಗಿ ವಶಪಡಿಸಿಕೊಳ್ಳುವುದು ಒಳ್ಳೆಯದೇ ಎಂಬಂತೆ ಅದು ನಡೆದುಕೊಂಡಿತು.
ಇದೇ ಕಾರಣಕ್ಕಾಗಿ ಕುಮಾರಸ್ವಾಮಿ ಬಿಜೆಪಿ ಜತೆ ಕೈ ಜೋಡಿಸಿ ಸರ್ಕಾರ ರಚಿಸಿದರು.

ಕರ್ನಾಟಕವನ್ನು ಕಳೆದುಕೊಳ್ಳಲು ಕಾಂಗ್ರೆಸ್ ಸಿದ್ಧವಿಲ್ಲ

ಕರ್ನಾಟಕವನ್ನು ಕಳೆದುಕೊಳ್ಳಲು ಕಾಂಗ್ರೆಸ್ ಸಿದ್ಧವಿಲ್ಲ

ಇದು ಅಂದಿನ ಪರಿಸ್ಥಿತಿ. ಆದರೆ ಇಂದಿನ ಪರಿಸ್ಥಿತಿ ಬೇರೆ. ಇವತ್ತು ಕೇಂದ್ರದಲ್ಲಿ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಅಸ್ತಿತ್ವದಲ್ಲಿದೆ. ಅದರೆದುರು ನಿಂತಿರುವ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಒಂದೊಂದೇ ಯುದ್ಧ ನೆಲೆಗಳನ್ನು(ರಾಜ್ಯ)ಕಳೆದುಕೊಳ್ಳುತ್ತಾ ಬಂದಿದೆ. ಸದ್ಯದ ಸ್ಥಿತಿಯಲ್ಲಿ ಅದಕ್ಕಿದ್ದ ಪ್ರಬಲ ಯುದ್ಧ ನೆಲೆ ಎಂದರೆ ಕರ್ನಾಟಕ ಮಾತ್ರ. ಪಂಜಾಬ್ ನಂತಹ ರಾಜ್ಯಗಳಲ್ಲಿ ಅದು ಅಧಿಕಾರದಲ್ಲಿದ್ದರೂ ಅವ್ಯಾವುವೂ ಶಸ್ತ್ರಾಸ್ತ್ರ ಪೂರೈಕೆಯ ವಿಷಯದಲ್ಲಿ ಕರ್ನಾಟಕದಷ್ಟು ಪ್ರಬಲ ಯುದ್ದ ನೆಲೆಗಳಲ್ಲ. ಈ ಪರಿಸ್ಥಿತಿಯಲ್ಲೇ ಅದು ಡಿಸೆಂಬರ್ ವೇಳೆಗೆ ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಸ್ ಘಡ ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕು.

ಈಗ ಮೈತ್ರಿ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ

ಈಗ ಮೈತ್ರಿ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ

ಪರಿಸ್ಥಿತಿ ಹೀಗಿರುವಾಗ ಕರ್ನಾಟಕವೇನಾದರೂ ಸಂಪೂರ್ಣವಾಗಿ ಕೈ ಬಿಟ್ಟು ಹೋದರೆ ಮುಂದಿನ ಮೂರು ರಾಜ್ಯಗಳ ಚುನಾವಣೆಯಲ್ಲಿ ತನ್ನ ಬಲ ಹೆಚ್ಚಿಸಿಕೊಳ್ಳುವ, ಆ ಮೂಲಕ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಟೀಮನ್ನು ಎದುರಿಸುವ ಅದರ ಶಕ್ತಿ ಕುಸಿದು ಹೋಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅದೀಗ ಬದಲಾವಣೆಯ ಕಾಲಘಟ್ಟಕ್ಕೆ ಬಂದು ನಿಂತಿದೆ. ಅರ್ಥಾತ್, 2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚನೆಯಾದಾಗ ಅದನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಅದಕ್ಕಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮತ್ತು ಕರ್ನಾಟಕದಲ್ಲಿ ಶತಾಯ ಗತಾಯ ಅಧಿಕಾರದಲ್ಲಿ ಉಳಿದುಕೊಳ್ಳಬೇಕಾದ ಅನಿವಾರ್ಯತೆ ಇದೆ.

ಹೀಗಾಗಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಉರುಳುವುದನ್ನು ಅದು ಬಯಸುವುದೂ ಇಲ್ಲ, ಭಿನ್ನಮತೀಯ ಚಟುವಟಿಕೆಗಳಿಗೆ ಆಸ್ಪದ ನೀಡಲೂ ತಯಾರಿಲ್ಲ. ಕುಮಾರಸ್ವಾಮಿ ಅವರ ಸರ್ಕಾರ ಸುಭದ್ರವಾಗಿರಲಿದೆ ಅನ್ನುವುದಕ್ಕೆ ಇದು ಮಹತ್ವದ ಸಾಕ್ಷಿ.
ಏಕಾಂಗಿಯಾಗಿ ಹೋರಾಡುವ ಶಕ್ತಿ ಕಾಂಗ್ರೆಸ್ ನಲ್ಲಿಲ್ಲ

ಏಕಾಂಗಿಯಾಗಿ ಹೋರಾಡುವ ಶಕ್ತಿ ಕಾಂಗ್ರೆಸ್ ನಲ್ಲಿಲ್ಲ

ಇನ್ನು ಈ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾದ ಒಂದು ಸಂದೇಶ ನೀಡಿದೆ. ಅದೆಂದರೆ, ಮುಂದಿನ ದಿನಗಳಲ್ಲಿ ಏಕಾಂಗಿಯಾಗಿ ರಾಷ್ಟ್ರಮಟ್ಟದಲ್ಲಿ ಮೋದಿ ಗ್ಯಾಂಗ್ ಅನ್ನು ಎದುರಿಸುವುದು ತನಗೆ ಕಷ್ಟ ಎಂಬುದು. ಹೀಗಾಗಿ ಮೊನ್ನೆ ಮೊನ್ನೆಯ ತನಕ ಬಿಜೆಪಿಯೇತರ ಶಕ್ತಿಗಳ ಮಹಾಮೈತ್ರಿಯ ಬಗ್ಗೆ ನಸನಸೆ ತೋರಿಸುತ್ತಿದ್ದ ಕಾಂಗ್ರೆಸ್ ಈಗ ಅದು ಅನಿವಾರ್ಯ ಎಂಬ ಅಂಶವನ್ನು ಜೀರ್ಣ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದೆ. ಹೀಗೆ ಮಹಾಮೈತ್ರಿ ಸಾಧಿತವಾಗಬೇಕೆಂದರೆ ಮಿತ್ರ ಪಕ್ಷಗಳ ಜತೆ ತನ್ನ ಕೊಡು-ಕೊಳ್ಳುವಿಕೆಯ ಸಂಬಂಧ ಹೇಗಿದೆ ಅನ್ನುವುದನ್ನು ಇತರ ಪ್ರಾದೇಶಿಕ ಶಕ್ತಿಗಳಿಗೆ ತೋರಿಸಬೇಕಲ್ಲ? ಹೀಗಾಗಿ ಅದು ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬರಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದ ಉಳಿವಿನ ಬಗ್ಗೆ ವಿಶೇಷ ಕಾಳಜಿ ತೋರಿಸಲಿದೆ.

ಗೌಡರ ಜಾಣ್ಮೆಗೆ ಒಂದು ನಿದರ್ಶನ

ಗೌಡರ ಜಾಣ್ಮೆಗೆ ಒಂದು ನಿದರ್ಶನ

ಇದೆಲ್ಲದರ ಫಲವಾಗಿ ರಾಷ್ಟ್ರ ಮಟ್ಟದಲ್ಲಿ ಮಹಾಮೈತ್ರಿ ಸಾಧಿತವಾಯಿತು ಎಂದರೆ ಅದರ ಬಹುದೊಡ್ಡ ಲಾಭ ಸಿಗುವುದು ಜೆಡಿಎಸ್ ಗೆ. ನೇರವಾಗಿ ಇದು ದೇವೇಗೌಡರಿಗೆ ದಕ್ಕದಿದ್ದರೂ ಕುಮಾರಸ್ವಾಮಿ ಅವರಿಗೆ ದಕ್ಕುತ್ತದೆ. ಅರ್ಥಾತ್, ಅವರಿಗೆ ದಿಲ್ಲಿ ಗದ್ದುಗೆಯ ಕನಸು ಬೀಳಲು ಶುರುವಾಗುತ್ತದೆ. ಹೀಗಾಗಲಿ ಎಂಬುದು ದೇವೇಗೌಡರ ಬಯಕೆ. ಇದೇ ಕಾರಣಕ್ಕಾಗಿ ಅವರು ಕುಮಾರಸ್ವಾಮಿ ನೇತೃತ್ವದ ಸರ್ಕಾರ ಭದ್ರವಾಗಿರಲಿದೆ ಎಂಬುದನ್ನು ಮಾತ್ರವಲ್ಲ, ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಲು ಜೆಡಿಎಸ್ ಗೆ ಅವಕಾಶ ದಕ್ಕಲಿದೆ ಎಂಬ ಕಾರಣಕ್ಕಾಗಿಯೂ ಕೈ ಪಾಳೆಯದ ಜತೆ ಕೈ ಜೋಡಿಸಿದ್ದಾರೆ. ಅಂದ ಹಾಗೆ ರಾಜಕಾರಣದಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ. ಆದರೆ ನಡೆದಿದ್ದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿಕೊಳ್ಳುವ ಜಾಣ್ಮೆ ಇರಬೇಕು. ಕಾಂಗ್ರೆಸ್ ಜತೆ ಕೈ ಜೋಡಿಸುವ ದೇವೇಗೌಡರ ನಡೆ ಕೂಡಾ ಇಂತಹ ಜಾಣ್ಮೆಗೆ ಒಂದು ನಿದರ್ಶನ.

English summary
Why did H D Deve Gowda decide to go with Congress instead of BJP after Karnataka Assembly Election Results were announced? Political analysis by R T Vittal Murthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X