ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ಮಾತು ಕೇಳಿ ಕಂಗಾಲಾಗಿರುವ ರಾಹುಲ್ ಗಾಂಧಿ!

By ಆರ್ ಟಿ ವಿಠ್ಠಲಮೂರ್ತಿ
|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿ ಮಾತಿನಿಂದ ಕಂಗಾಲಾದ ರಾಹುಲ್ ಗಾಂಧಿ | Oneindia Kannada

"ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿಗಿರಿ ಗಿಟ್ಟಿಸಲು ಲಾಬಿ ಮಾಡುತ್ತಿರುವವರ ಪೈಕಿ ಇಪ್ಪತ್ತಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ನೀವು ಯೆಸ್ ಎಂದರೆ ಮಂತ್ರಿ ಮಂಡಲ ವಿಸ್ತರಣೆಗೆ ನಾನು ಸಿದ್ದ. ಆದರೆ ಮಂತ್ರಿ ಪದವಿ ಸಿಗದವರು ಒಗ್ಗೂಡಿ ಕಮಲ ಪಾಳೆಯದ ಕಡೆ ಹೋದರೆ, ಆ ಮೂಲಕ ಸರ್ಕಾರ ಉರುಳಿದರೆ ಅದರ ಹೊಣೆ ಹೊರಲು ನೀವು ಸಿದ್ದರಾಗಿರಬೇಕು."

ಹಾಗಂತ ಮೊನ್ನೆ ಸಿಎಂ ಕುಮಾರಸ್ವಾಮಿ ಅವರು ನೇರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮೆಸೇಜು ಮುಟ್ಟಿಸಿದ ಮೇಲೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತಣ್ಣಗಾಗಿ ಹೋಗಿದೆ.

ಸಿದ್ದರಾಮಯ್ಯ ಸೂಚನೆ: ದೆಹಲಿಗೆ ತೆರಳಿದ ಕಾಂಗ್ರೆಸ್ ನಾಯಕರುಸಿದ್ದರಾಮಯ್ಯ ಸೂಚನೆ: ದೆಹಲಿಗೆ ತೆರಳಿದ ಕಾಂಗ್ರೆಸ್ ನಾಯಕರು

ಅಂದ ಹಾಗೆ, ಸಿಎಂ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರದಲ್ಲಿ ಮಂತ್ರಿಗಿರಿ ಗಿಟ್ಟಿಸಲು ಕೈ ಪಾಳೆಯದ ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಲಾಬಿ ಮಾಡುತ್ತಿದ್ದಾರೆ. ಆ ಪೈಕಿ ಇಪ್ಪತ್ತಕ್ಕೂ ಹೆಚ್ಚು ಮಂದಿ ಬಿಜೆಪಿ ವರಿಷ್ಠರ ಜತೆ ಸಂಪರ್ಕದಲ್ಲಿರುವ ಕುರಿತು ಕುಮಾರಸ್ವಾಮಿ ನೀಡಿದ ದಾಖಲೆ, ರಾಹುಲ್ ಗಾಂಧಿ ಕಂಗಾಲಾಗುವಂತೆ ಮಾಡಿದೆ.

ರಾಜ್ಯ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ವತಿಯಿಂದ ಆರು, ಜೆಡಿಎಸ್ ವತಿಯಿಂದ ಎರಡು ಸ್ಥಾನಗಳನ್ನು ಭರ್ತಿ ಮಾಡಬೇಕಾಗಿರುವುದೇನೋ ನಿಜ. ಆದರೆ ಬಯಸಿದರೆ ಜೆಡಿಎಸ್ ಪಕ್ಷ ಮಂತ್ರಿ ಮಂಡಲಕ್ಕೆ ತಮ್ಮವರಿಬ್ಬರನ್ನು ಭರ್ತಿ ಮಾಡಿಕೊಂಡು ದಕ್ಕಿಸಿಕೊಳ್ಳಬಹುದು.

ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಆಗೋಲ್ಲ : 5 ಕಾರಣಗಳು! ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಆಗೋಲ್ಲ : 5 ಕಾರಣಗಳು!

ಆದರೆ ಕಾಂಗ್ರೆಸ್ ಪಕ್ಷ ಇರುವ ಸ್ಥಾನಗಳನ್ನು ಭರ್ತಿ ಮಾಡಿದರೆ ಅದನ್ನು ದಕ್ಕಿಸಿಕೊಳ್ಳಲು ಸಾಧ್ಯವಿಲ್ಲ. ಬರಿಯೇ ಕಾಂಗ್ರೆಸ್ ಪಕ್ಷ ದಕ್ಕಿಸಿಕೊಳ್ಳುವುದಿದ್ದರೆ ಆ ಮಾತು ಬೇರೆ. ಆದರೆ ದಕ್ಕಿಸಿಕೊಳ್ಳುವ ಭರಾಟೆಯಲ್ಲಿ ಉರುಳುವುದು ಸಮ್ಮಿಶ್ರ ಸರ್ಕಾರ ಎಂದು ಕುಮಾರಸ್ವಾಮಿ ಹೇಳಿದ ಮೇಲೆ ರಾಹುಲ್ ಗಾಂಧಿ ಮೌನವಾಗಿಬಿಟ್ಟಿದ್ದಾರೆ.

ಸರಕಾರ ಉರುಳಿದರೆ ಕಾಂಗ್ರೆಸ್ಸಿಗೆ ಹೊಡೆತ

ಸರಕಾರ ಉರುಳಿದರೆ ಕಾಂಗ್ರೆಸ್ಸಿಗೆ ಹೊಡೆತ

ಒಂದು ಕಡೆ ಹಲ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ, ಮುಂದಿನ ಲೋಕಸಭಾ ಚುನಾವಣೆಗೆ ಪೂರಕವಾದ ಸೆಮಿಫೈನಲ್ ಎಂದು ಬಣ್ಣನೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಉರುಳಿದರೆ ನಿಸ್ಸಂಶಯವಾಗಿಯೂ ಅದರ ಎಫೆಕ್ಟು ಕಾಂಗ್ರೆಸ್ ಪಕ್ಷಕ್ಕೇ ಹೊರತು ಜೆಡಿಎಸ್ ಪಕ್ಷಕ್ಕಲ್ಲ.

ಯಾಕೆಂದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗ ಮೇಲೆದ್ದು ನಿಂತು ದೇವೇಗೌಡರಿಗೋ, ಕುಮಾರಸ್ವಾಮಿಗೋ ದಿಲ್ಲಿ ರಾಜಕೀಯದಲ್ಲಿ ನೆಲೆ ಸಿಗಬೇಕು ಎಂಬುದು ಒಂದು ನಿರೀಕ್ಷೆಯಾದರೂ, ಶತಾಯ ಗತಾಯ ಅಧಿಕಾರಕ್ಕೆ ಬರಲೇಬೇಕು, ಇಲ್ಲದಿದ್ದರೆ ತಮಗೆ ಉಳಿಗಾಲವಿಲ್ಲ ಎಂಬುದು ಕಾಂಗ್ರೆಸ್ ನ ಅನಿವಾರ್ಯತೆ.

ಹೀಗಾಗಿಯೇ ಅದು ಕರ್ನಾಟಕದಲ್ಲಿ ರಚನೆಯಾಗಿರುವ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಕೂಟ ಸರ್ಕಾರ ಉರುಳಲಿ ಎಂದು ಬಯಸುವ ಸ್ಥಿತಿಯಲ್ಲೇ ಇಲ್ಲ.

ಕುಮಾರಸ್ವಾಮಿ ಅವರೇ ಸೃಷ್ಟಿಸಿಕೊಂಡಿರುವ ಖತರ್ನಾಕ್ ಟೈಂಬಾಂಬು!ಕುಮಾರಸ್ವಾಮಿ ಅವರೇ ಸೃಷ್ಟಿಸಿಕೊಂಡಿರುವ ಖತರ್ನಾಕ್ ಟೈಂಬಾಂಬು!

ಹಿಂದೆ ದುರಹಂಕಾರದಿಂದ ವರ್ತಿಸಿದ್ದ ಕಾಂಗ್ರೆಸ್

ಹಿಂದೆ ದುರಹಂಕಾರದಿಂದ ವರ್ತಿಸಿದ್ದ ಕಾಂಗ್ರೆಸ್

ಈ ಹಿಂದೆ ಅಂದರೆ, 2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಕರ್ನಾಟಕದಲ್ಲಿ ಅಧಿಕಾರ ಹಿಡಿದಾಗ ಅದು ಸಹ ಬಾಳ್ವೆ ನಡೆಸಲೇಬೇಕು ಎಂಬ ಅನಿವಾರ್ಯತೆಯೇನೂ ಕೈ ಪಾಳೆಯಕ್ಕಿರಲಿಲ್ಲ.

ಯಾಕೆಂದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಅವತ್ತು ದಿಲ್ಲಿ ಗದ್ದುಗೆಯ ಮೇಲೆ ಕುಳಿತಿತ್ತು. ಈ ರೀತಿ ದಿಲ್ಲಿ ಗದ್ದುಗೆ ಮೇಲೆಯೇ ಕುಳಿತಿರುವಾಗ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವುದು ಕಾಂಗ್ರೆಸ್ ನಾಯಕರಿಗೆ ಅಂತಹ ಪ್ರತಿಷ್ಠೆಯ ಸಂಗತಿಯೇನೂ ಆಗಿರಲಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿಯೇತರ ಶಕ್ತಿಗಳನ್ನು ನುಂಗಿದರೆ ಮಾತ್ರ ಕಾಂಗ್ರೆಸ್ ಗೆ ಉಜ್ವಲ ಭವಿಷ್ಯ ಎಂಬ ನಂಬಿಕೆ ಗಟ್ಟಿಯಾಗುತ್ತಿದ್ದ ಕಾಲ ಅದು. ಕೇವಲ ಜೆಡಿಎಸ್ ಅಂತಲ್ಲ, ತೃತೀಯ ರಂಗದ ಅಂಗಪಕ್ಷಗಳನ್ನು ನುಂಗಿ ನೊಣೆಯುವುದೇ ಅವತ್ತು ಕೈ ಪಾಳೆಯದ ಮುಖ್ಯ ಅಜೆಂಡಾ ಆಗಿತ್ತು.

2004ರಿಂದ 2014ರವರೆಗೆ ಅದು ನಿರಂತರವಾಗಿ ಇಂತಹ ಪ್ರಯತ್ನಗಳನ್ನು ನಡೆಸುತ್ತಾ ಬಂತು. ಹೀಗಾಗಿ ಸಮಾಜವಾದಿ ಪಕ್ಷದಿಂದ ಹಿಡಿದು, ಜೆಡಿಎಸ್ ತನಕ ದೇಶದಲ್ಲಿ ಯಾವ್ಯಾವ ಶಕ್ತಿಗಳು ತೃತೀಯ ರಂಗದಲ್ಲಿ ಗುರುತಿಸಿಕೊಂಡಿದ್ದವೋ? ಅವುಗಳನ್ನು ನುಂಗಲು ಕಾಂಗ್ರೆಸ್ ಪಕ್ಷ ಸತತ ಪ್ರಯತ್ನ ನಡೆಸುತ್ತಲೇ ಬಂದಿತ್ತು.

ಒಂದು ಹಂತದಲ್ಲಿ ಅಣುಬಂಧ ಒಪ್ಪಂದವನ್ನು ಕಮ್ಯೂನಿಸ್ಟರು ವಿರೋಧಿಸಿದಾಗ ಅವರನ್ನು ಸೈಡ್ ಲೈನಿಗಟ್ಟಿ, ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಜತೆ ಕಾಂಗ್ರೆಸ್ ಪಕ್ಷ ಕೈ ಜೋಡಿಸಿದ್ದೇ ಅದಕ್ಕೆ ಸಾಕ್ಷಿ.

ಬಿಜೆಪಿಯನ್ನು ಸೋಲಿಸುವುದು ಸುಲಭವಲ್ಲ

ಬಿಜೆಪಿಯನ್ನು ಸೋಲಿಸುವುದು ಸುಲಭವಲ್ಲ

ಆದರೆ ಇವತ್ತು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಅವತ್ತು ಕಾಂಗ್ರೆಸ್ ಪಕ್ಷದ ಪರವಾಗಿದ್ದ ಉದ್ಯಮಿಗಳ ಸಮೂಹ ಇವತ್ತು ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರದ ಜತೆಗಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಅದನ್ನು ಸೋಲಿಸುವುದು ಸರಳವಾದ ವಿಷಯ ಅಲ್ಲ.

ಹೀಗಾಗಿ ದೇಶದ ಯಾವ್ಯಾವ ರಾಜ್ಯಗಳಲ್ಲಿ ತನ್ನ ಸೇನಾನೆಲೆ ತಳವೂರಲು ಅವಕಾಶವಿದೆಯೋ? ಅಲ್ಲೆಲ್ಲ ತುಂಬ ತಕರಾರು ಮಾಡಿಕೊಳ್ಳದೆ ನೆಲೆಯೂರಲು ಕೈ ಪಾಳೆಯ ಬಯಸುತ್ತಲೇ ಇದೆ. ಅದೇ ಕಾರಣಕ್ಕಾಗಿ ಕರ್ನಾಟಕದಲ್ಲೂ ಅದು ಜೆಡಿಎಸ್ ಜತೆಗಿನ ಸಂಬಂಧವನ್ನು ಬಯಸಿ, ಬಯಸಿ ಗಟ್ಟಿಯಾಗುಳಿಸಿಕೊಂಡಿದೆ.

ಲೋಕಸಭೆ ಚುನಾವಣೆ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಹೆಚ್ಚಲಿದೆ ಬಿಜೆಪಿ ಹವಾಲೋಕಸಭೆ ಚುನಾವಣೆ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಹೆಚ್ಚಲಿದೆ ಬಿಜೆಪಿ ಹವಾ

ಬಂಡಾಯದ ಬಟನ್ ಒತ್ತಿ ವಿದೇಶಕ್ಕೆ ಸಿದ್ದರಾಮಯ್ಯ

ಬಂಡಾಯದ ಬಟನ್ ಒತ್ತಿ ವಿದೇಶಕ್ಕೆ ಸಿದ್ದರಾಮಯ್ಯ

ಅದರ ಅನಿವಾರ್ಯತೆ ದಿಲ್ಲಿಯಾದರೆ, ಇಲ್ಲಿನ ಕೈ ಪಾಳೆಯದ ನಾಯಕರಿಗೆ ತಮ್ಮ ಯುದ್ದ ಶಿಬಿರಗಳನ್ನು ಉಳಿಸಿಕೊಳ್ಳುವುದು ಮುಖ್ಯ. ಹೀಗಾಗಿಯೇ ಸರ್ಕಾರ ಬಂದ ಆರಂಭದಿಂದಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದಲ್ಲ, ಒಂದು ರೀತಿಯ ಟೆಕ್ನಿಕ್ಕು ಬಳಸಿ ಜೆಡಿಎಸ್ ಮೇಲೆ ಪ್ರಭಾವ ಬೀರಲು, ಅದರ ಶಕ್ತಿಯನ್ನು ಉಡುಗಿಸಲು ಯತ್ನಿಸುತ್ತಿದ್ದಾರೆ.

ಒಂದು ಹಂತದಲ್ಲಿ ಈ ಸರ್ಕಾರವನ್ನು ಉರುಳಿಸದಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವೇ ಇಲ್ಲ, ಬದಲಿಗೆ ಕಾಂಗ್ರೆಸ್ ಪಕ್ಷಕ್ಕಿರುವ ಶಕ್ತಿಯನ್ನು ಜೆಡಿಎಸ್ ನುಂಗಿ ಹಾಕಿ ತನ್ನ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ ಎಂಬ ಬೆಂಬಲಿಗರ ವಾದ ಕೇಳಿ ಸಿದ್ದರಾಮಯ್ಯ ಒಂದು ಟೆಕ್ನಿಕ್ ರೂಪಿಸಿ, ವಿದೇಶ ಪ್ರವಾಸಕ್ಕೆ ಹೋಗಿದ್ದರು.

ತಾವು ಪ್ರವಾಸ ಹೋದ ಅವಧಿಯಲ್ಲಿ ಕೈ ಪಾಳೆಯದಲ್ಲಿರುವ ತಮ್ಮ ಬೆಂಬಲಿಗರು ಬಂಡಾಯವೆದ್ದು ಸರ್ಕಾರವನ್ನು ಬೀಳಿಸಲಿ. ಆ ಮೂಲಕ ಬಿಜೆಪಿ ಅಧಿಕಾರದಲ್ಲಿ ಬಂದು ಕುಳಿತು, ಕಾಂಗ್ರೆಸ್ ಪಕ್ಷ ವಿರೋಧ ಸ್ಥಾನದಲ್ಲಿ ಕೂರುವ ಅನಿವಾರ್ಯತೆ ಸೃಷ್ಟಿಯಾದರೂ ತಮಗೆ ಭವಿಷ್ಯವಿದೆ ಎಂದು ಸಿದ್ದರಾಮಯ್ಯ ನಂಬಿದ್ದರು.

ಸಿದ್ದರಾಮಯ್ಯ ಭೇಟಿ ಮಾಡಿದ ಸಚಿವ ಸ್ಥಾನ ಆಕಾಂಕ್ಷಿಗಳು, ಮತ್ತೆ ಲಾಬಿ ಶುರುಸಿದ್ದರಾಮಯ್ಯ ಭೇಟಿ ಮಾಡಿದ ಸಚಿವ ಸ್ಥಾನ ಆಕಾಂಕ್ಷಿಗಳು, ಮತ್ತೆ ಲಾಬಿ ಶುರು

ರಾಹುಲ್ ಗಾಂಧಿಗೆ ಕುಮಾರಸ್ವಾಮಿ ಪಾಠ

ರಾಹುಲ್ ಗಾಂಧಿಗೆ ಕುಮಾರಸ್ವಾಮಿ ಪಾಠ

ಅವರು ವಿದೇಶಕ್ಕೆ ಹಾರಿ ಹೋದ ನಂತರ ಇಲ್ಲಿ ಅವರ ಬೆಂಬಲಿಗರ ಹಾವಳಿ ಅತಿಯಾದಾಗ ಸಿಎಂ ಕುಮಾರಸ್ವಾಮಿ ನೇರವಾಗಿಯೇ ರಾಹುಲ್ ಗಾಂಧಿ ಅವರನ್ನು ಸಂಪರ್ಕಿಸಿ, ಇದು ಸಿದ್ದರಾಮಯ್ಯ ಅವರ ಟೆಕ್ನಿಕ್ಕು, ಸರ್ಕಾರ ಉಳಿಯಬೇಕು ಅನ್ನುವುದು ನಮಗಿಂತ ನಿಮಗೆ ಮುಖ್ಯ. ಯಾಕೆಂದರೆ ನಾಳೆ ದಿಲ್ಲಿ ಗದ್ದುಗೆಯ ಮೇಲೆ ಕೂರಬೇಕಾದವರು ನಾವಲ್ಲ, ನೀವು. ಹೀಗಾಗಿ ಸಿದ್ದರಾಮಯ್ಯ ಗ್ಯಾಂಗು ಹೆಚ್ಚು ಕಡಿಮೆ ಮಾಡಿ ಈ ಸರ್ಕಾರವನ್ನು ಉರುಳಿಸಿದರೆ ದಕ್ಷಿಣ ಭಾರತದಲ್ಲಿರುವ ಪ್ರಬಲ ಸೇನಾನೆಲೆಯೊಂದು ನಿಮ್ಮ ಕೈ ತಪ್ಪುತ್ತದೆ ಎಂದು ನೇರವಾಗಿ ಹೇಳಿಬಿಟ್ಟಿದ್ದರು.

ಯಾವಾಗ ಕುಮಾರಸ್ವಾಮಿ ಈ ಮಾತು ಹೇಳಿದರೋ? ಇದಾದ ನಂತರ ಗಾಬರಿ ಬಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿ, ಮಿಸ್ಟರ್ ಸಿದ್ದರಾಮಯ್ಯಾಜೀ, ನೀವು ಮುಖ್ಯಮಂತ್ರಿಯಾದಾಗ ಅದೇ ಜಾಗದ ಮೇಲೆ ಪಕ್ಷದ ಹಲವರು ಕಣ್ಣಿಟ್ಟಿದ್ದರು. ಆದರೂ ನಾವು ಅವಕಾಶ ನೀಡಲಿಲ್ಲ ಎಂದು ವಿವರಿಸಿದ್ದರು.

ರಾಹುಲ್ ಮಾತಿಗೆ ಕಿವಿಯಾದ ಸಿದ್ದರಾಮಯ್ಯ

ರಾಹುಲ್ ಮಾತಿಗೆ ಕಿವಿಯಾದ ಸಿದ್ದರಾಮಯ್ಯ

ಇವತ್ತು ಕುಮಾರಸ್ವಾಮಿ ಅವರ ಸಂಪುಟದಲ್ಲಿ ಸಚಿವರಾಗಿರುವ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಮಹಾರಾಷ್ಟ್ರದ ಪ್ರಫುಲ್ ಪಟೇಲ್ ಅವರನ್ನು ಹಿಡಿದುಕೊಂಡು ನಮ್ಮ ಮೇಲೆ ಒತ್ತಡ ಹೇರಿಸಿದ್ದರು. ಸಿದ್ದರಾಮಯ್ಯ ಪಕ್ಷ ಕಟ್ಟಲು ಏನು ಬೆಂಬಲ ನೀಡುತ್ತಿದ್ದಾರೋ? ಅದಕ್ಕಿಂತ ಹೆಚ್ಚಿನ ಬೆಂಬಲ ನೀಡಲು ಸಿದ್ದ ಎಂದು ಹೇಳಿಸಿದ್ದರು.

ಅದೇ ರೀತಿ ಮತ್ತೋರ್ವ ಲಿಂಗಾಯತ ನಾಯಕ ಕೂಡಾ, ಜೆಡಿಎಸ್ ಬೆಂಬಲದ ಜತೆಗೆ ಈ ಸರ್ಕಾರವನ್ನು ಉಳಿಸಿಕೊಳ್ಳುತ್ತೇನೆ. ಹೈಕಮಾಂಡ್ ಶಕ್ತಿಯನ್ನೂ ಹೆಚ್ಚಿಸುತ್ತೇನೆ ಎಂದು ದಿಲ್ಲಿಯಲ್ಲೇ ಹಲವು ದಿನಗಳ ಕಾಲ ಠಿಕಾಣಿ ಹೂಡಿ ಹೈಕಮಾಂಡ್ ಗೆ ವಿವರಿಸಿದ್ದರು.

ಆದರೆ ಹೈಕಮಾಂಡ್ ಯಾವ ಆಮಿಷಗಳಿಗೂ ಬಗ್ಗಲಿಲ್ಲ. ಅದರ ಬದಲು ನಿಮಗೇ ಪೂರ್ಣ ಶಕ್ತಿ ನೀಡಿ ಐದು ವರ್ಷಗಳ ಕಾಲ ನೀವು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವಂತೆ ನೋಡಿಕೊಂಡಿತು.

ಸಿದ್ದು ಮನಸ್ಸಿಗೆ ನಾಟಿದ ರಾಹುಲ್ ಮಾತು

ಸಿದ್ದು ಮನಸ್ಸಿಗೆ ನಾಟಿದ ರಾಹುಲ್ ಮಾತು

ಆದರೆ ಇವತ್ತು ಪಕ್ಷಕ್ಕೆ ಸಂಕಷ್ಟ ಕಾಲ ಎದುರಾಗಿದೆ. ಮಾಡುವ ಸಣ್ಣ ತಪ್ಪು ಕೂಡಾ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಕುಸಿದು ಹೋಗುವಂತೆ ಮಾಡಬಹುದು. ನಿಜ, ಈ ಸರ್ಕಾರದಲ್ಲಿ ನಿಮಗೆ ಮುಜುಗರವಾಗುವಂತಹ ಹಲವು ಸಂಗತಿಗಳು ನಡೆಯಬಹುದು.

ಆದರೆ ನಿಮಗೇನೇ ಮುಜುಗರವಾದರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಅಧಿಕಾರ ಹಿಡಿಯಲು ಸಫಲರಾಗದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ವಸ್ತುಸ್ಥಿತಿ ಎಂದರೆ ಇವತ್ತಿನ ಕಾಲ ಸ್ವಾತಂತ್ರ್ಯಾನಂತರ ಪಕ್ಷ ಎದುರಿಸುತ್ತಿರುವ ಅತ್ಯಂತ ಸಂಕಷ್ಟ ಕಾಲ. ಇದನ್ನು ನೆನಪಿಟ್ಟುಕೊಂಡು ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಬಗ್ಗೆ ಯೋಚಿಸಿ ಎಂದು ರಾಹುಲ್ ಗಾಂಧಿ ನೇರವಾಗಿ ಸಿದ್ದರಾಮಯ್ಯ ಅವರಿಗೆ ಹೇಳಿದ್ದರು.

ಮತ್ತೊಂದು ಸುತ್ತಿನ ಬಂಡಾಯಕ್ಕೆ ಸಿದ್ದು ಸೂಚನೆ?

ಮತ್ತೊಂದು ಸುತ್ತಿನ ಬಂಡಾಯಕ್ಕೆ ಸಿದ್ದು ಸೂಚನೆ?

ಯಾವಾಗ ರಾಹುಲ್ ಗಾಂಧಿ ಈ ರೀತಿ ಮಾತನಾಡಿದರೋ? ಇದಾದ ನಂತರ ಸಿದ್ದರಾಮಯ್ಯ ತಣ್ಣಗಾದರು. ಸ್ವಲ್ಪಕಾಲ ಸುಮ್ಮನಿದ್ದರು. ಆದರೆ ದಿನ ಕಳೆದಂತೆಲ್ಲ ಕುಮಾರಸ್ವಾಮಿ ಸರ್ಕಾರದಲ್ಲಿ ಅತೀವ ಮುಜುಗರ ಎದುರಿಸುತ್ತಿರುವುದು ಸಿದ್ದರಾಮಯ್ಯ ಬೆಂಬಲಿಗರು.

ಮೊದಲನೆಯದಾಗಿ ಸರ್ಕಾರದಲ್ಲಿರುವ ಕಾಂಗ್ರೆಸ್ ನಾಯಕರ ಪೈಕಿ ಬಹುತೇಕರು ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿರುವವರು. ಹೀಗಾಗಿ ಈ ಸರ್ಕಾರದಲ್ಲಿ ತಮ್ಮ ಬೆಂಬಲಿಗರ ಪಡೆ ದೊಡ್ಡದಾಗಿರಬೇಕು ಎಂಬ ಹಪಹಪಿ ಸಿದ್ದರಾಮಯ್ಯ ಅವರದು. ಹೀಗಾಗಿ ಅವರು ಸರ್ಕಾರದ ವಿರುದ್ದ ಮತ್ತೊಂದು ಸುತ್ತಿನ ಬಂಡಾಯ ಸಾರಲು ತಮ್ಮ ಬೆಂಬಲಿಗರಿಗೆ ಸೂಚನೆ ನೀಡಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ.

ಅದರನುಸಾರ ಹಲ ಶಾಸಕರು, ನಾಯಕರು ಬಂಡಾಯದ ಬಾವುಟ ಹಾರಿಸಿದ್ದಾರೆ. ಆದರೆ ಆ ಬಂಡಾಯಕ್ಕೆ ಮುಂಚಿನ ಕಸುವಿಲ್ಲ. ಹೆಚ್ಚೆಂದರೆ ಸದ್ಯದಲ್ಲೇ ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ಕೈ ಪಾಳೆಯದ ನಾಯಕರ ಮಾತುಗಳಿಗೆ ಒಂದಷ್ಟು ಮನ್ನಣೆ ಸಿಗುವಂತೆ ಮಾಡಬಹುದೇ ಹೊರತು ಬೇರೇನೂ ಮಾಡಲು ಸಾಧ್ಯವಿಲ್ಲ.

ಸಂಪುಟ ವಿಸ್ತರಣೆಗೆ ಕೈಹಾಕಿದರೆ ಗಂಡಾಂತರ

ಸಂಪುಟ ವಿಸ್ತರಣೆಗೆ ಕೈಹಾಕಿದರೆ ಗಂಡಾಂತರ

ಯಾಕೆಂದರೆ ಸರ್ಕಾರ ಕಳೆದುಕೊಳ್ಳಲು, ಕಳೆದುಕೊಂಡರೆ ಬೇರೆ ದಾರಿ ಕಂಡುಕೊಳ್ಳಲು ಜೆಡಿಎಸ್ ಸಿದ್ದವಿದೆ. ಆದರೆ ಕಾಂಗ್ರೆಸ್ ಮುಂದೆ ಯಾವ ದಾರಿಯೂ ಇಲ್ಲ. ಅದಕ್ಕಿಂತ ಮುಖ್ಯವಾಗಿ ಮುಂದ್ಯಾವತ್ತೋ ಕರ್ನಾಟಕದಲ್ಲಿ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವ ಸಲುವಾಗಿ ವಿಪಕ್ಷದ ಸ್ಥಾನದಲ್ಲಿ ಕೂರುವುದಕ್ಕಿಂತ, ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಸಮರದಲ್ಲಿ ಗೆದ್ದು ದಿಲ್ಲಿ ಗದ್ದುಗೆಯ ಮೇಲೆ ವಿರಾಜಮಾನವಾಗುವುದು ಅದರ ಮುಖ್ಯ ಗುರಿ.

ಹೀಗಾಗಿ ಸಚಿವ ಸಂಪುಟ ವಿಸ್ತರಣೆಯ ಕಸರತ್ತಿಗೆ ಕುಮಾರಸ್ವಾಮಿ ಕೈ ಹಾಕಿದರೆ ಸರ್ಕಾರಕ್ಕೆ ಗಂಡಾಂತರವಾಗಬಹುದೇ ಹೊರತು ಲಾಭವೇನೂ ಆಗುವುದಿಲ್ಲ. ಇದು ರಾಹುಲ್ ಗಾಂಧಿ ಅವರಿಗೆ ಅರ್ಥವಾಗಿದೆ. ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಆದರೆ ಅವರ ಬೆನ್ನ ಹಿಂದಿರುವವರಿಗೆ ಇದು ಅರ್ಥವಾಗುತ್ತಿಲ್ಲ.

English summary
Why cabinet expansion in Karnataka getting delayed? Many Congress leaders who are lobbying for cabinet berth are in touch with BJP. If they don't get inducted into cabinet they may destabilize JDS-Congress govt by joining hands with BJP. This has been communicated to Rahul Gandhi by Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X