ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯದ ಪಗಡೆಯಾಟದಲ್ಲಿ ಬಿಎಸ್ ವೈ ಗೆದ್ದಿದ್ದು ಯಾಕೆ?

|
Google Oneindia Kannada News

ಬೆಂಗಳೂರು, ಜುಲೈ 24: ಕಳೆದ ಒಂದು ವಾರಗಳಲ್ಲಿ ಅಸಹ್ಯ ಹುಟ್ಟಿಸುವ ಮಟ್ಟಿನ ವಾದ-ವಿವಾದಗಳ ನಡುವಲ್ಲಿ ನಮಗೆ ಅಚ್ಚರಿ ಹುಟ್ಟಿಸಿದ್ದು, 'ದುರ್ವಾಸ' ಮುನಿಯಂಥ ಸಿಡುಕ ಯಡಿಯೂರಪ್ಪನವರು ತುಟಿಪಿಟಿಕನ್ನದೆ ತಾಳ್ಮೆಯಿಂದ ಕುಳಿತಿದ್ದು!" ಎಂದು ಅಚ್ಚರಿ ತುಂಬಿದ ಕಣ್ಣಲ್ಲಿ ಉದ್ಗಾರ ಎಳೆಯುತ್ತಿದ್ದಾರೆ ಸ್ವತಃ ಯಡಿಯೂರಪ್ಪ ಅಭಿಮಾನಿಗಳು.

"ವಿಪಕ್ಷಗಳ ನಿರಂತರ ಆರೋಪ, ಪ್ರಚೋದನಾತ್ಮಕ ಮಾತುಗಳು, ವ್ಯಂಗ್ಯ, ಅಣಕ, ಛೂಬಾಣ ಎಲ್ಲಕ್ಕೂ ಗೋಡೆಯಂತೆ ನಿರ್ಲಿಪ್ತವಾಗಿ ಕುಳಿತಿದ್ದ ಯಡಿಯೂರಪ್ಪನವರ ಕಣ್ಣು ನೆಟ್ಟಿದ್ದಿದ್ದು ಕೇವಲ 'ಮುಖ್ಯಮಂತ್ರಿ' ಖುರ್ಚಿಯ ಮೇಲಾ? ಅದೊಂದೇ ಕಾರಣಕ್ಕೆ ಅವರು ತಮ್ಮ ಗುಣ-ಸ್ವಭಾವದಲ್ಲೇ ಇಲ್ಲದ ಸಹಿಷ್ಣು ಮನೋಭಾವವನ್ನು ಒಂದು ವಾರದ ಮಟ್ಟಿಗೆ ಎಲ್ಲಿಂದಲೋ ಎರವಲು ತಂದುಕೊಂಡಂತೆ ಕೂತುಬಿಟ್ಟರಾ?" ಎಂಬುದು ಅವರನ್ನು ಹತ್ತಿರದಿಂದ ಬಲ್ಲವರ ಪ್ರಶ್ನೆ!

"ಸಿಎಂ ಪಟ್ಟಕ್ಕೇರುವ ಮೊದಲೇ ರೈತರ ಹಿತ ಕಾಯುವ ಆಶ್ವಾಸನೆ"

"ಖಂಡಿತ ಇಲ್ಲ. ಯಡಿಯೂರಪ್ಪನವರ ಈ ನಡೆಯ ಹಿಂದೆ ಮುಖ್ಯಮಂತ್ರಿಯಾಗುವ ಛಲ ಮಾತ್ರವಿಲ್ಲ, ಅದರ ಹಿಂದೆ ಇದೇ ಕುಮಾರಸ್ವಾಮಿಯಿಂದ ನಯವಂಚನೆಗೊಳಗಾದ ಹತಾಶೆ ಇದೆ, ಜನಾದೇಶ ಒಲಿದಿದ್ದರೂ ಸರ್ಕಾರ ಮಾಡಲಾಗಲಿಲ್ಲವಲ್ಲ ಎಂಬ ಕೊರಗಿದೆ, ಅಪವಿತ್ರ ಮೈತ್ರಿಯ ಬಗ್ಗೆ ಧಿಕ್ಕಾರವಿದೆ, ಜೊತೆಗೆ ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ಬಿ. ಎಸ್. ಯಡಿಯೂರಪ್ಪ ಎಂಬ ಫಿನಿಕ್ಸ್ ನ ತಾಕತ್ತೇನು ಎಂಬುದನ್ನು ತೋರಿಸುವ ತುಡಿತವಿದೆ!" ಎಂಬುದು ಬಿಎಸ್ ವೈ ಆಪ್ತರ ಮಾತು.

ಕಳೆದ 14 ತಿಂಗಳ ಹಿಂದೆ ಬಿ.ಎಸ್.ಯಡಿಯೂರಪ್ಪನವರು ಇದೇ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ನಿಂತು ವಿಶ್ವಾಸ ಮತ ಯಾಚಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ವಿಶ್ವಾಸಮತದಲ್ಲಿ ಗೆಲ್ಲುವ ಸಾಧ್ಯತೆಯೇ ಇಲ್ಲದ ಕಾರಣ ವಿಶ್ವಾಸ ಮತ ಯಾಚಿಸದೆ, ಕಣ್ಣೀರಿಟ್ಟು, ಭಾವುಕ ಭಾಷಣ ಮಾಡಿ ರಾಜೀನಾಮೆ ನೀಡಿದ್ದರು.

ವಿಶ್ವಾಸಮತದಲ್ಲಿ ಸೋಲು; ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಪತನವಿಶ್ವಾಸಮತದಲ್ಲಿ ಸೋಲು; ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಪತನ

ಚಕ್ರ ತಿರುಗಿದೆ... ಅಂದು ಯಡಿಯೂರಪ್ಪ ಅವರಿದ್ದ ಪರಿಸ್ಥಿತಿಯಲ್ಲಿ ಇಂದು ಎಚ್. ಡಿ. ಕುಮಾರಸ್ವಾಮಿಯವರಿದ್ದಾರೆ. ಕರ್ಮ ಸಿದ್ಧಾಂತವನ್ನು ನಂಬದವರೂ ನಂಬಬೇಕಾದ ಪರಿಸ್ಥಿತಿ ಕಣ್ಣಮುಂದಿದೆ.

ಮೈತ್ರಿ ಸರ್ಕಾರವನ್ನು ಬೀಳಿಸಲೇಬೇಕೆಂದು ಬಿಜೆಪಿ ಮಾಡಿದ ಆರೇಳು ಪ್ರಯತ್ನಗಳಲ್ಲಿ ಕೊನೆಗೂ ಒಂದು ಸಫಲವಾಗಿದೆ. ಆದರೆ ಈ ಬೆಳವಣಿಗೆ ಕರ್ನಾಟಕದ ರಾಜಕೀಯದಲ್ಲಿ, ಕರ್ನಾಟಕ ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರೊಬ್ಬ 'ಮಾಸ್ ಲೀಡರ್' ಎಂಬುದು ಮತ್ತೊಮ್ಮೆ ಸಾಬೀತಾಗಿದೆಯಾ? ವಿಪಕ್ಷಗಳ ಚುಚ್ಚು ಮಾತು, ಪ್ರಚೋದನಾತ್ಮಕ ಆರೋಪಗಳಿಗೆ ಎದೆಯಲ್ಲಿ ಜ್ವಾಲಾಮುಖಿ ಕುದಿಯುತ್ತಿದ್ದರೂ ಅದನ್ನು ತುಟಿಯಂಚಿಗೆ ಬಾರದಂತೆ ಕಾಪಿಟ್ಟುಕೊಂಡ ಯಡಿಯೂರಪ್ಪ ಮೌನವಾಗಿದ್ದುಕೊಂಡೇ ನೀಡಿದ ಸಂದೇಶವೇನು? 76 ರ ಇಳಿ ವಯಸ್ಸಿನಲ್ಲೂ ಸದನದಲ್ಲೇ ಮಲಗಿ, ನಿದ್ದೆಬಿಟ್ಟು ಇಷ್ಟನ್ನೆಲ್ಲ ಮಾಡುವ ಅಗತ್ಯ ಏನಿತ್ತು? ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳುವುದಕ್ಕೆ ಬಹುಶಃ ಯಡಿಯೂರಪ್ಪನವರಿಗಿದ್ದ ಕೊನೆಯ ಅವಕಾಶ ಇದಾಗಿತ್ತು. ಅವರು ಅದರಲ್ಲಿ ಗೆದ್ದರು!

ಅಪವಿತ್ರ ಮೈತ್ರಿ ಮೇಲೆ ಮುನಿಸು

ಅಪವಿತ್ರ ಮೈತ್ರಿ ಮೇಲೆ ಮುನಿಸು

2018 ರ ಏಪ್ರಿಲ್ ತಿಂಗಳಿನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 224 ವಿಧಾನಸಭಾ ಕ್ಷೇತ್ರಗಳಲ್ಲಿ 104 ರಲ್ಲಿ ಗೆದ್ದು, ಸರ್ಕಾರವನ್ನೂ ರಚಿಸಿತ್ತು. ಆದರೆ ಇದಕ್ಕೂ ಮುನ್ನವೇ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಇಚ್ಛೆಯಿಂದ 80 ಸ್ಥಾನ ಗೆದ್ದಿದ್ದ ಕಾಂಗ್ರೆಸ್, 37 ಸ್ಥಾನ ಪಡೆದಿದ್ದ ಜೆಡಿಎಸ್ ಗೆ ಬೇಷರತ್ ಬೆಂಬಲ ಘೋಷಿಸಿತ್ತು. ಆದ್ದರಿಂದ ವಿಶ್ವಾಸ ಮತವನ್ನೂ ಯಾಚಿಸದೆ ಎರಡೇ ದಿನದಲ್ಲಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಬೇಕಾಯ್ತು. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎಚ್.ಡಿ.ಕುಮಾರಸ್ವಾಮಿ ಮುಖುಮಂತ್ರಿಯಾಗಿದ್ದರು! ಜನಾದೇಶದ ಹೊರತಾಗಿಯೂ ಅಪವಿತ್ರ ಮೈತ್ರಿಯಿಂದಾಗಿ ಸರ್ಕಾರ ರಚಿಸಲಾಗದ ಹತಾಶೆ ಯಡಿಯೂರಪ್ಪನವರ ನಿದ್ದೆ ಕೆಡಿಸಿತ್ತು. ಆ ನಂತರ ಮೈತ್ರಿ ಸರ್ಕಾರವನ್ನು ಬೀಳಿಸುವ ಹಲವು ಪ್ರಯತ್ನಗಳು ನಡೆದವು. ಆದರೆ ಅವ್ಯಾವವೂ ಯಶಸ್ವಿಯಾಗಿರಲಿಲ್ಲ.

2008 ರ ನಯವಂಚನೆಯ ಸಿಟ್ಟು

2008 ರ ನಯವಂಚನೆಯ ಸಿಟ್ಟು

2006 ರಲ್ಲಿ ಬಿಜೆಪಿ-ಜೆಡಿಎಸ್ 20:20 ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಇಪ್ಪತ್ತು ತಿಂಗಳ ಆಡಳಿತದ ನಂತರ ಎಚ್.ಡಿ.ಕುಮಾರಸ್ವಾಮಿ ಅವರು ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಪದವಿಯನ್ನು ಬಿಟ್ಟುಕೊಡಬೇಕು ಎಂಬ ಒಪ್ಪಂದವಾಗಿತ್ತು. ಆದರೆ 2008 ರಲ್ಲಿ ಬಿಎಸ್ ವೈಗೆ ಸ್ಥಾನ ಬಿಟ್ಟುಕೊಡದೆ ಕುಮಾರಸ್ವಾಮಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದರು! ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೊತ್ತಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಸ್ವತಂತ್ರವಾಗಿ ಸರ್ಕಾರ ರಚಿಸಿತು. ಆದರೆ 2011 ರಲ್ಲಿ ಭದ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯ್ತಲ್ಲದೆ, ಸೆರೆವಾಸ ಅನುಭವಿಸಬೇಕಾಯ್ತು. ಈ ಎಲ್ಲಕ್ಕೂ ಕಾರಣ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಎಂಬುದು ಯಡಿಯೂರಪ್ಪ ಅವರ ಭಾವನೆ. ಅದೂ ಅಲ್ಲದೆ ಯಡಿಯೂರಪ್ಪ ಜೈಲಿನಲ್ಲಿದ್ದಾಗ ಮುಖ್ಯಮಂತ್ರಿಯಾದ ಡಿವಿ ಸದಾನಂದಗೌಡರು, ನಂತರ ಯಡಿಯೂರಪ್ಪ ಜೈಲಿನಿಂದ ಹೊರಬಂದರೂ ಅವರಿಗೆ ಸ್ಥಾನ ಬಿಟ್ಟುಕೊಡದೆ ಇರುವುದಕ್ಕೂ ಕಾರಣ ದೇವೇಗೌಡರು ಎಂದು ಹಲವು ಬಾರಿ ಬಿಎಸ್ ವೈ ಆರೋಪಿಸಿದ್ದರು. ತನ್ನನ್ನು ಎಲ್ಲ ರೀತಿಯಲ್ಲೂ ಬಲಿಪಶು ಎಂಬಂತೆ ನಡೆಸಿಕೊಂಡವರಿಗೆ ಈ ಮೂಲಕ ಪಾಠ ಕಲಿಸಿದ್ದಾರೆ ಯಡಿಯೂರಪ್ಪ.

ತೃಪ್ತಿ ಇಲ್ಲ ಎಂದಿದ್ದ 'ಅತೃಪ್ತ'ರಿಗೆ ಎಚ್ಡಿಕೆ ಹರಿಸಿದ್ದ ಅನುದಾನದ ಹೊಳೆ ತೃಪ್ತಿ ಇಲ್ಲ ಎಂದಿದ್ದ 'ಅತೃಪ್ತ'ರಿಗೆ ಎಚ್ಡಿಕೆ ಹರಿಸಿದ್ದ ಅನುದಾನದ ಹೊಳೆ

ಕೇಂದ್ರ ಸರ್ಕಾರಕ್ಕೂ ಸಂದೇಶ

ಕೇಂದ್ರ ಸರ್ಕಾರಕ್ಕೂ ಸಂದೇಶ

ಇಷ್ಟೇ ಅಲ್ಲ. ಕರ್ನಾಟಕ ಬಿಜೆಪಿಗೆ ಬಿ ಎಸ್ ಯಡಿಯೂರಪ್ಪ ಅನಿವಾರ್ಯ ಎಂಬ ಸಂದೇಶವನ್ನು ಅವರು ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ಅರ್ಥ ಮಾಡಿಸಿದ್ದಾರೆ. ಈ ಮೊದಲು 2012 ರಲ್ಲಿ ಕೆಜೆಪಿ ಸ್ಥಾಪಿಸಿ, 2013 ರಲ್ಲಿ ಸಿದ್ದರಾಯ್ಯ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಪರೋಕ್ಷ ಕಾರಣರಾಗಿದ್ದ ಯಡಿಯೂರಪ್ಪ, ಆಗಲೇ ಹೈಕಮಾಂಡಿಗೆ ರಾಜ್ಯ ಬಿಜೆಪಿಗೆ ತಾವು ಅನಿವಾರ್ಯ ಎಂಬುದನ್ನು ಅರ್ಥಮಾಡಿಸಿದ್ದರು. ಈಗ ಮತ್ತೊಮ್ಮೆ ಅರ್ಥ ಮಾಡಿಸಿದ್ದಾರೆ.

'ದಿ ಪ್ರಿಟ್' ವೆಬ್ ಸೈಟ್ ವರದಿ ಮಾಡಿರುವ ಪ್ರಕಾರ ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಬೀಳಲಿಸುವ ಯಾವ ಇರಾದೆಯೂ ಇರಲಿಲ್ಲ. ಸಮ್ಮಿಶ್ರ ಸರ್ಕಾರದ ನಾಯಕರೇ ಆಂತರಿಕ ಭಿನ್ನಾಭಿಪ್ರಾಯದಿಂದ ಕಚ್ಚಾಡಿ ಸರ್ಕಾರ ಬೀಳಲಿ, ಬಿಜೆಪಿ ಸರ್ಕಾರವನ್ನು ಬೀಳಿಸುವ ಪ್ರಯತ್ನಕ್ಕೆ ಕೈಹಾಕುವುದು ಬೇಡ ಎಂಬುದು ಕೇಂದ್ರ ನಾಯಕರ ಇಚ್ಛೆಯಾಗಿತ್ತು. ನಂತರ ರಾಷ್ಟ್ರಪತಿಗಳ ಆಳ್ವಿಕೆ ಹೇರಿ, ಮತ್ತೆ ಚುನಾವಣೆಗೆ ಹೋಗುವವುದು ಉತ್ತಮ ಮಾರ್ಗ ಎಂಬ ಅಭಿಪ್ರಾಯ ಹೈಕಮಾಂಡಿನದಾಗಿತ್ತು. ಆದರೆ ತಮ್ಮ ನಾಯಕತ್ವವನ್ನು ಸಾಬೀತುಪಡಿಸಿಕೊಳ್ಳಲೇಬೇಕು ಎಂಬ ತವಕದಲ್ಲಿದ್ದ ಯಡಿಯೂರಪ್ಪ ಈ ಕೆಲಸಕ್ಕೆ ಕೈಹಾಕಿದರು. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ 25 ರಲ್ಲಿ ಬಿಜೆಪಿ ಗೆದ್ದಿದ್ದು ಯಡಿಯೂರಪ್ಪ ಅವರ ವರ್ಚಸ್ಸನ್ನು ಮತ್ತಶಃ್ಟು ಹೆಚ್ಚಿಸಿತ್ತು.

ಸಿಎಂ ಆಗಲು ಕೊನೆಯ ಅವಕಾಶ

ಸಿಎಂ ಆಗಲು ಕೊನೆಯ ಅವಕಾಶ

ಬಹುಶಃ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿಯಾಗಲು ಇದು ಕೊನೆಯ ಅವಕಾಶ ಎಂಬ ಭಾವನೆ ಅವರಲ್ಲೂ ಇದ್ದಿರಬಹುದು. ಏಕೆಂದರೆ ಈಗಾಗಲೇ 'ಯುವ ನಾಯಕತ್ವಕ್ಕೆ' ಒತ್ತು ನೀಡಬೇಕೆಂಬ ಮಾತು ಪದೇ ಪದೇ ಕೇಳಿಬರುತ್ತಿದೆ. ಲೋಕಸಭೆ ಚುನಾವಣೆಯ ನಂತರ ರಚನೆಯಾದ ಕೇಂದ್ರ ಮಂತ್ರಿಮಂಡಲದಲ್ಲೂ ಯುವಕರಿಗೇ ಮಣೆಹಾಕಲಾಗಿದೆ. ಹಲವು ಹಿರಿಯ ನಾಯಕರಿಗೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಹ ನೀಡಿರಲಿಲ್ಲ. ಈ ಎಲ್ಲವನ್ನೂ ಬಲ್ಲ ಯಡಿಯೂರಪ್ಪನವರಿಗೆ ತಾವು ಮುಖ್ಯಮಂತ್ರಿಯಾಗಲು ಈ ಅವಕಾಶ ತಪ್ಪಿದರೆ ಮತ್ತೆಂದೂ ಮುಖ್ಯಮಂತ್ರಿಯಾಗುವುದು ಸಲೀಸಲ್ಲ ಎಂಬುದು ಅರ್ಥವಾಗಿದ್ದಿರಬಹುದು. ಅದೇ ಕಾರಣಕ್ಕೆ ಮೈತ್ರಿ ಸರ್ಕಾರ ಬೀಳುವುದನ್ನು ಅತ್ಯಂತ ತಾಳ್ಮೆಯಿಂದ ಕಾದರು. ಕೊನೆಗೂ ಅವರ ಆಸೆ ಈಡೇರಿದೆ. ಆದರೆ ಹಿಂದಿನ ಅವಧಿಯಂತೆ ಭ್ರಷ್ಟಾಚಾರದ ಆರೋಪ, ಆಂತರಿಕ ಕಲಹಗಳಿಂದ ಸುದ್ದಿಯಾಗದೆ ಉತ್ತಮ ಆಡಳಿತ ನೀಡಲಿ ಎಂಬುದು ರಾಜ್ಯದ ಜನತೆಯ ಅಪೇಕ್ಷೆ.

ಯಡಿಯೂರಪ್ಪ ಗದ್ದುಗೆಗೆ ಏರಲು ನಾಲ್ಕು ಮುಹೂರ್ತ ಫಿಕ್ಸ್!ಯಡಿಯೂರಪ್ಪ ಗದ್ದುಗೆಗೆ ಏರಲು ನಾಲ್ಕು ಮುಹೂರ್ತ ಫಿಕ್ಸ್!

English summary
Finally BJP president BS Yeddyurappa reached his target. Reason behind his hard work to topple Karnataka's JDS-Congress coalition government is not only dream of becoming CM again, but to teach lesson to many, including BJP highcommand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X