ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಮೆನಿಯಾ vs ಅಜುರ್‌ಬೈಜಾನ್- ಇದು ಕ್ರೈಸ್ತ-ಮುಸ್ಲಿಂ ಸಂಘರ್ಷವಾ? ಜಾಗಕ್ಕಾಗಿ ಹೋರಾಟವಾ?

|
Google Oneindia Kannada News

ಯೂರೋಪ್ ಮತ್ತು ಏಷ್ಯಾ ಗಡಿಭಾಗದಲ್ಲಿರುವ ಆರ್ಮೇನಿಯಾ ಮತ್ತು ಅಜುರ್‌ಬೈಜಾನ್ ದೇಶಗಳ ಮಧ್ಯೆ ಗಡಿಭಾಗದಲ್ಲಿ ಮತ್ತೆ ಕಾಳಗ ನಡೆದಿದ್ದು ಇತ್ತೀಚೆಗೆ ಸುಮಾರು 150ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದಾರೆ.

ಎರಡು ವರ್ಷಗಳ ಹಿಂದೆ ಈ ಎರಡು ದೇಶಗಳ ಮಧ್ಯೆ ತಿಕ್ಕಾಟ ನಡೆದಿತ್ತು. ಈಗ ಅದು ಮರುಕಳಿಸಿದೆ. ಅಜುರ್‌ಬೈಜಾನ್ ಸೇನಾಪಡೆಗಳು ತನ್ನ ಭೂಭಾಗಕ್ಕೆ ನುಗ್ಗುತ್ತಿವೆ ಎಂದು ಆರ್ಮೇನಿಯಾ ಆಪಾದಿಸಿದ್ದು, ವಿಶ್ವ ರಾಷ್ಟ್ರಗಳ ಮಧ್ಯಪ್ರವೇಶಕ್ಕೆ ಮನವಿ ಮಾಡಿಕೊಳ್ಳುವ ಮಟ್ಟಕ್ಕೆ ಹೋಗಿದೆ. ಸದ್ಯಕ್ಕೆ ಎರಡೂ ದೇಶಗಳು ಕದನ ವಿರಾಮ ಒಪ್ಪಂದಕ್ಕೆ ಸಹಿಹಾಕಿರುವುದು ತಿಳಿದುಬಂದಿದೆ. ಆದರೆ ಸಂಘರ್ಷ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತೆ ಉಳಿದುಕೊಂಡಿರುವುದಂತೂ ಹೌದು.

ಕಾಲಿಗೆ ಬುದ್ಧಿ ಹೇಳುತ್ತಿರುವ ರಷ್ಯನ್ ಸೈನಿಕರು; ಉಕ್ರೇನಿಗರಿಗೆ ಗೆಲುವಿನ ದಿನ ಸನಿಹವಾಯ್ತಾ?ಕಾಲಿಗೆ ಬುದ್ಧಿ ಹೇಳುತ್ತಿರುವ ರಷ್ಯನ್ ಸೈನಿಕರು; ಉಕ್ರೇನಿಗರಿಗೆ ಗೆಲುವಿನ ದಿನ ಸನಿಹವಾಯ್ತಾ?

ಕಳೆದ ಎರಡು ದಿನಗಳಿಂದ ನಡೆದ ಕಾಳಗದಲ್ಲಿ ಆರ್ಮೇನಿಯಾದ ನೂರಕ್ಕೂ ಹೆಚ್ಚು ಸೈನಿಕರು ಮೃತಪಟ್ಟರೆ, ಅಜುರ್‌ಬೈಜಾನ್‌ನ 50 ಸೈನಿಕರು ಕೊಲ್ಲಲ್ಪಟ್ಟಿರುವುದು ತಿಳಿದುಬಂದಿದೆ. ಇತ್ತ ಆರ್ಮೇನಿಯಾದಲ್ಲಿ ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಪ್ರಧಾನಿ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಶತ್ರುದೇಶ ಅಜುರ್‌ಬೈಜಾನ್ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿದ್ದಾರೆಂಬುದು ಪ್ರಧಾನಿ ವಿರುದ್ಧ ಜನರಿಗೆ ಇರುವ ಮುನಿಸು.

ಆರ್ಮೇನಿಯಾ ಮತ್ತು ಅಜುರ್‌ಬೈಜಾನ್ ನಡುವಿನ ಸಂಘರ್ಷ ಈಗ್ಗೆ ಎರಡು ವರ್ಷದ್ದಲ್ಲ. ಒಂದು ಶತಮಾನದ ಹಿಂದಿನಿಂದ ಶುರುವಾದ ವಿವಾದ ಇದು. ಧರ್ಮದಿಂದ ಶುರುವಾದ ವಿವಾದ ಈಗ ಒಂದು ಪ್ರದೇಶಕ್ಕಾಗಿ ತಿಕ್ಕಾಟ ನಡೆಯುತ್ತಿದೆ.

ಅಧಿಕಾರಿಯ ಪ್ರಾಣ ಉಳಿಸಲು ಸಾವಿನ ನಾಟಕ ಕಟ್ಟಿದ ರಷ್ಯನ್ನರುಅಧಿಕಾರಿಯ ಪ್ರಾಣ ಉಳಿಸಲು ಸಾವಿನ ನಾಟಕ ಕಟ್ಟಿದ ರಷ್ಯನ್ನರು

ಏನಿದು ವಿವಾದ?

ಏನಿದು ವಿವಾದ?

1920ರ ದಶಕದಲ್ಲಿ ಜೋಸೆಫ್ ಸ್ಟಾಲಿನ್ ಕಾಲದಲ್ಲಿ ಅಂದಿನ ರಷ್ಯಾ ಕೌಕೇಕಸ್ ಪ್ರದೇಶದ ಮೇಲೆ ದಾಳಿ ಬಹುತೇಕ ಭಾಗಗಳನ್ನು ವಶಕಪಡಿಸಿಕೊಂಡಿತು. ಯೂರೋಪ್ ಮತ್ತು ಏಷ್ಯಾ ಮಧ್ಯೆ ಬರುವ ಬ್ಲ್ಯಾಕ್ ಸೀ ಮತ್ತು ಕ್ಯಾಸ್ಪಿಯನ್ ಸೀ ನಡುವಿನ ಪ್ರದೇಶಗಳನ್ನು ಕೌಕೇಕಸ್ ಪ್ರದೇಶಗಳೆಂದು ಪರಿಗಣಿಸಲಾಗುತ್ತದೆ. ಜಾರ್ಜಿಯಾ, ಅಜರ್‌ಬೈಹಾನ್, ಆರ್ಮೇನಿಯಾ ಮೊದಲಾದ ದೇಶಗಳು ಈ ಪ್ರದೇಶದಲ್ಲಿವೆ. ಇವೆಲ್ಲವೂ ಸ್ಟಾಲಿನ್ ನೇತೃತ್ವದ ರಷ್ಯಾದ ವಶವಾಗಿ ಹೋದವು.

ಅಷ್ಟೇ ಆಗಿದ್ದರೆ ಆರ್ಮೇನಿಯಾ, ಅಜುರ್‌ಬೈಜಾನ್ ಮಧ್ಯೆ ಈಗ ತಿಕ್ಕಾಟ ನಡೆಯುತ್ತಿರಲಿಲ್ಲ. ಕೌಕೇಕಸ್ ಪ್ರದೇಶದಲ್ಲಿದ್ದ ಆರ್ಮೇನಿಯನ್ನರ ಬಾಹುಳ್ಯ ಇದ್ದ ನಾಗೋರ್ನೋ-ಕರಾಬಾಖ್ ಪ್ರದೇಶವನ್ನು ಅಜುರ್‌ಬೈಜಾನ್ ಪ್ರಾಂತ್ಯಕ್ಕೆ ವಿಂಗಡಣೆ ಮಾಡಿತ್ತು ಸೋವಿಯತ್ ರಷ್ಯಾ. ಆ ಶತಮಾನದ ಕೊನೆಯಲ್ಲಿ ಯುಎಸ್‌ಎಸ್‌ಆರ್ ಪತನವಾದ ಬಳಿಕ ಇತರ ಅನೇಕ ಪ್ರಾಂತ್ಯಗಳಂತೆ ಆರ್ಮೇನಿಯಾ ಮತ್ತು ಅಜುರ್‌ಬೈಜಾನ್ ಕೂಡ ಬೇರೆಯಾದವು. ಆದರೆ, ನಾಗೋರ್ನೋ-ಕರಾಬಾಖ್ ಪ್ರದೇಶದ ವಿವಾದ ಮಾತ್ರ ಮುಂದುವರಿದಿದೆ.

ಧರ್ಮದ ನಂಟು

ಧರ್ಮದ ನಂಟು

ಕೌಕೇಕಸ್ ಪ್ರದೇಶದಲ್ಲಿ ಆರ್ಮೇನಿಯಾ ಮತ್ತು ಅಜುರ್‌ಬೈಜಾನ್ ಮಧ್ಯೆ ತಿಕ್ಕಾಟದ ಇತಿಹಾಸ ಬಹಳ ಹಳೆಯದು. ಆರ್ಮೇನಿಯಾ ಕ್ರೈಸ್ತ ದೇಶವಾದರೆ ಅಜುರ್‌ಬೈಜಾನ್ ಮುಸ್ಲಿಂ ಪ್ರಾಬಲ್ಯದ ಪ್ರದೇಶ. ಹೀಗಾಗಿ ಎರಡು ದೇಶಗಳು ಭಾರತ ಪಾಕಿಸ್ತಾನದಂತೆ ಸಾಂಪ್ರದಾಯಿಕ ವೈರಿ ದೇಶಗಳೆನಿಸಿವೆ.

ಈಗ ಎರಡು ದೇಶಗಳ ನಡುವಿನ ತಿಕ್ಕಾಟದಲ್ಲಿ ಮೇಲ್ನೋಟಕ್ಕೆ ಧರ್ಮ ವಿಚಾರ ಕಾಣುವುದಿಲ್ಲವಾದರೂ ಅಗೋಚರವಾಗಂತೂ ಇದೆ ಎನ್ನುತ್ತಾರೆ ಕೆಲವರು. ಆದರೆ, ನಾಗೋರ್ನೋ-ಕರಾಬಾಖ್ ಪ್ರದೇಶದ ಹಕ್ಕಿಗಾಗಿ ಈಗ ಸಂಘರ್ಷ ನಡೆಯುತ್ತಿರುವುದು ಸ್ಪಷ್ಟವಾಗಿದೆ.

1980ರ ದಶಕದ ಕೊನೆಯಲ್ಲಿ ಸೋವಿತ್ ರಷ್ಯಾ ಪತನವಾಗುತ್ತಿರುವಂತೆಯೇ ನಾಗೊರ್ನೊ ಕರಬಾಖ್ ಪ್ರದೇಶದ ಸ್ವಾಮ್ಯಕ್ಕಾಗಿ ಆರ್ಮೇನಿಯಾ ಮತ್ತು ಅಜುರ್‌ಬೈಜಾನ್ ಮಧ್ಯೆ ಘರ್ಷಣೆ ಶುರುವಾಯಿತು. 1991ರಲ್ಲಿ ನಾಗೊರ್ನೊ ಕರಬಾಖ್‌ನಲ್ಲಿದ್ದ ಆರ್ಮೇನಿಯನ್ನರು ತಮ್ಮದು ಸ್ವತಂತ್ರ ದೇಶ ಎಂದು ಘೋಷಿಸಿಕೊಂಡರು. 1994ರಲ್ಲಿ ನಾಗೊರ್ನೊ ಮೇಲೆ ಅಜುರ್‌ಬೈಜಾನ್ ಆಕ್ರಮಣ ಮಾಡಿತು. ನಾಗೊರ್ನೊಗೆ ಆರ್ಮೇನಿಯಾ ಬೆಂಬಲಕ್ಕೆ ಬಂದಿತು. ಅಜುರ್ಬೈಜಾನ್ ಸೇನಾ ಪಡೆಗಳನ್ನು ನಾಗೊರ್ನೊ ಕರಬಾಖ್‌ನಿಂದ ಓಡಿಸುವಲ್ಲಿ ಆರ್ಮೇನಿಯಾ ಯಶಸ್ವಿಯಾಯಿತು.

1994ರಲ್ಲಿ ರಷ್ಯಾ ಮಧ್ಯಪ್ರವೇಶಿಸಿ ಕದನವಿರಾಮಕ್ಕೆ ಸಂಧಾನ ಮಾಡಿದರಾದರೂ ವಿವಾದಕ್ಕೆ ಪರಿಹಾರ ಒದಗಿಸಲು ವಿಫಲವಾಯಿತು. ನಾಗೊರ್ನೊ ಕರಬಾಖ್ ಅಧಿಕೃತವಾಗಿ ಅಜುರ್‌ಬೈಜಾನ್ ಬಳಿಯೇ ಇದೆ. ಇದು ಅಜುರ್‌ಬೈಜಾನ್‌ಗೆ ಸೇರಿದ ಪ್ರದೇಶವೆಂದು ಜಾಗತಿಕವಾಗಿ ಮಾನ್ಯತೆ ಈಗಲೂ ಇದೆ. ನಾಗೊರ್ನೊ ಕರಬಾಖ್ ವಿಚಾರವಾಗಿ ಆರ್ಮೇನಯಾ ಮತ್ತು ಅಜುರ್‌ಬೈಜಾನ್ ಮಧ್ಯೆ ಆಗಾಗ್ಗೆ ಸಂಘರ್ಷಗಳು ನಡೆಯುತ್ತಿದ್ದರೂ ಅತಿರೇಕದ ಹಂತಕ್ಕೆ ಹೋಗಿದ್ದು 2020ರಲ್ಲಿ. ಆರು ವಾರಗಳ ಕಾಲ ನಡೆದ ಯುದ್ಧದಲ್ಲಿ 6500 ಜನರು ಬಲಿಯಾಗಿ ಹೋಗಿದ್ದರು. ನಂತರ ಪರಿಸ್ಥಿತಿ ಸುಧಾರಣೆಯಾಗಿ ಶಾಂತಿ ನೆಲಸಿತು.

 ಅಜುರ್‌ಬೈಜಾನ್ ಆಕ್ರಮಣ

ಅಜುರ್‌ಬೈಜಾನ್ ಆಕ್ರಮಣ

ನಾಗೊರ್ನೊ ಕರಬಾಖ್ ಪ್ರದೇಶ ಅಧಿಕೃತವಾಗಿ ಅಜುರ್‌ಬೈಜಾನ್‌ಗೆ ಸೇರಿದೆಯಾದರೂ ಸ್ವತಂತ್ರ ಆಡಳಿತ ಹೊಂದಿದೆ. ಇದೇ ಮಾರ್ಚ್ ತಿಂಗಳಲ್ಲಿ ನಾಗೊರ್ನೊ ಕರಬಾಖ್‌ನಲ್ಲಿನ ಫಾರುಖ್ ಎಂಬ ಗ್ರಾಮದ ಮೇಲೆ ಅಜುರ್‌ಬೈಜಾನ್ ಸೇನಾ ಪಡೆಗಳು ಆಕ್ರಮಣ ಮಾಡಿದವು. ಇದು ಆರ್ಮೇನಿಯನ್ನರ ಪ್ರಾಬಲ್ಯ ಇರುವ ಊರು. ಇಲ್ಲಿ ಅಜುರ್‌ಬೈಜಾನ್ ಕಾಲಿಟ್ಟಿದ್ದು ಇಡೀ ಪ್ರದೇಶವನ್ನು ತನ್ನ ಸುಪರ್ದಿಗೆ ಪಡೆದುಕೊಳ್ಳುವ ಮೊದಲ ಹೆಜ್ಜೆ ಎಂದೇ ಭಾವಿಸಲಾಗಿದೆ.

ಐರೋಪ್ಯ ಒಕ್ಕೂಟದಿಂದ ಇಲ್ಲಿ ಶಾಂತಿ ಮಾತುಕತೆಗೆ ಪ್ರಯತ್ನ ನಡೆದು ಪರಿಸ್ಥಿತಿ ಸುಧಾರಿಸಿತು ಎನಿಸುವಷ್ಟರಲ್ಲಿ ಆರ್ಮೇನಿಯಾ ಮತ್ತು ಅಜುರ್‌ಬೈಜಾನ್ ದೇಶಗಳು ಬಹುತೇಕ ಯುದ್ಧಕ್ಕೆ ನಿಂತವು. ಕಳೆದ ಒಂದು ವಾರದಲ್ಲಿ ಗಡಿಭಾಗದಲ್ಲಿ ಗುಂಡಿನ ಕಾಳಗ ನಡೆದು 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಟರ್ಕಿ ಮಧ್ಯಪ್ರವೇಶ

ಟರ್ಕಿ ಮಧ್ಯಪ್ರವೇಶ

ಅಜುರ್‌ಬೈಜಾನ್‌ಗೆ ಟರ್ಕಿ ಬೆಂಬಲ ಪೂರ್ಣವಾಗಿ ಇದೆ. ಎರಡೂ ಕೂಡ ಮುಸ್ಲಿಮ್ ದೇಶಗಳಾದ್ದರಿಂದ ಈ ಸ್ನೇಹ ಇರಬಹುದು ಎಂದಾದರೂ ವ್ಯಾವಹಾರಿಕ ನಂಟೂ ದಟ್ಟವಾಗಿದೆ. ಅಜುರ್‌ಬೈಜಾನ್ ಮತ್ತು ಟರ್ಕಿಯ ಮಧ್ಯೆ ತೈಲ ಸಾಗಣೆಗೆ ಪೈಪ್‌ಲೈನ್‌ಗಳು ನಾಗೊರ್ನೊ ಕರಬಾಖ್ ಪ್ರದೇಶದ ಮೂಲಕವೇ ಹಾದು ಹೋಗುತ್ತದೆ. ಹೀಗಾಗಿ, ನಾಗೊರ್ನೊ ಕರಬಾಖ್ ಪ್ರದೇಶ ಅಜುರ್‌ಬೈಜಾನ್ ನಿಯಂತ್ರಣದಲ್ಲಿ ಇರಬೇಕೆಂದು ಟರ್ಕಿ ಬಯಸುತ್ತದೆ.

ಇನ್ನೊಂದೆಡೆ, ಆರ್ಮೇನಿಯಾ ಮತ್ತು ಟರ್ಕಿ ದೇಶಗಳೂ ಪರಸ್ಪರ ವೈರಿಗಳೇ. ಟರ್ಕಿ ದೇಶ ಆಟ್ಟೊಮಾನ್ ಕಾಲಘಟ್ಟದಲ್ಲಿ ಆರ್ಮೇನಿಯನ್ನರ ನರಮೇಧ ಮಾಡಿತ್ತು. ಈ ಶತ್ರುತ್ವ ಈಗಲೂ ಮುಂದುವರಿದೆ.

ಇನ್ನೊಂದೆಡೆ ಈ ಪ್ರದೇಶದಲ್ಲಿ ಹಿತಾಸಕ್ತಿ ಇರುವುದು ರಷ್ಯಾಗೆ. ಆದರೆ, ಆರ್ಮೇನಿಯಾ ಮತ್ತು ಅಜುರ್‌ಬೈಜಾನ್ ಈ ಎರಡೂ ದೇಶಗಳೊಂದಿಗೆ ರಷ್ಯಾ ಉತ್ತಮ ಬಾಂಧವ್ಯ ಹೊಂದಿದೆ. ಹೀಗಾಗಿ, ಅದು ಆರ್ಮೇನಿಯಾಗೆ ಪೂರ್ಣವಾಗಿ ಬೆಂಬಲ ಕೊಡುವ ಮಟ್ಟಕ್ಕೆ ಹೋಗುವುದು ಅನುಮಾನ. ಆದರೆ ಟರ್ಕಿ ಭಾಗಿಯಾಗಿರುವುದರಿಂದ ರಷ್ಯಾ ಆರ್ಮೇನಿಯಾ ಪರ ನಿಲ್ಲಬೇಕಾಗಿ ಬರಬಹುದು.

ಮಗದೊಂದೆಡೆ, ಆರ್ಮೇನಿಯಾ ದೇಶದಲ್ಲಿ ರಷ್ಯಾದ ಮಿಲಿಟರಿ ನೆಲೆಗಳಿವೆ. ರಷ್ಯಾ ಮಿಲಿಟರಿಗೆ ಜಾಗ ಕೊಟ್ಟಿರುವ ಆರ್ಮೇನಿಯಾಗೆ ಐರೋಪ್ಯ ದೇಶಗಳು ಬೆಂಬಲ ಕೊಡುತ್ತವಾ ಗೊತ್ತಿಲ್ಲ.

(ಒನ್ಇಂಡಿಯಾ ಸುದ್ದಿ)

English summary
Ceasefire declared between Armenia and Azerbaijan after over 150 soldiers killed in 3 days of war in border region. Nagorno-karabakh is center for this conflict. Here are some details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X