ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಮಡಿಲಲ್ಲಿರುವ ಟೈಮ್ ಬಾಂಬ್ ಸ್ಫೋಟವಾದರೆ...!

By ಆರ್ ಟಿ ವಿಠ್ಠಲಮೂರ್ತಿ
|
Google Oneindia Kannada News

ಕರ್ನಾಟಕದಲ್ಲಿ ಜೆಡಿಎಸ್ ಜತೆ ಕೈ ಜೋಡಿಸಿ ಸಮ್ಮಿಶ್ರ ಸರ್ಕಾರ ರಚಿಸಲು ಕಾಂಗ್ರೆಸ್ ಪಕ್ಷ ಸಫಲವಾದರೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಷಯದಲ್ಲಿ ಅದು ತನ್ನ ಮಡಿಲಲ್ಲಿರುವ ಟೈಮ್ ಬಾಂಬ್ ಅನ್ನು ತಾನೇ ಸ್ಫೋಟಿಸಿಕೊಂಡು ಕಮಲ ಪಾಳೆಯಕ್ಕೆ ಅನುಕೂಲ ಮಾಡಿಕೊಡಲಿದೆ ಎಂದು ಬಿಜೆಪಿ ಹೈಕಮಾಂಡ್ ಲೆಕ್ಕ ಹಾಕಿರುವುದು ಇಂಟರೆಸ್ಟಿಂಗ್ ಆಗಿದೆ.

ವಾಸ್ತವವಾಗಿ ಸಮ್ಮಿಶ್ರ ಸರ್ಕಾರದ ಭವಿಷ್ಯದ ವಿಷಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇನೂ ಆತಂಕದಲ್ಲಿಲ್ಲ. ಯಾಕೆಂದರೆ ಈ ಸರ್ಕಾರ ಮುಂದಿನ ಲೋಕಸಭಾ ಚುನಾವಣೆಯವರೆಗೆ ಉಳಿಯಲೇಬೇಕು ಎಂಬುದು ಕಾಂಗ್ರೆಸ್ ಹೈಕಮಾಂಡ್ ಬಯಕೆ.

ಕೆಪಿಸಿಸಿ ಅಧ್ಯಕ್ಷರ ನೇಮಕ : ರಾಹುಲ್ ಗಾಂಧಿ ಕೊಟ್ಟ ಸೂಚನೆ ಏನು?ಕೆಪಿಸಿಸಿ ಅಧ್ಯಕ್ಷರ ನೇಮಕ : ರಾಹುಲ್ ಗಾಂಧಿ ಕೊಟ್ಟ ಸೂಚನೆ ಏನು?

ಆದರೆ ಸಮ್ಮಿಶ್ರ ಸರ್ಕಾರದಲ್ಲಿ ತಮ್ಮ ಪಕ್ಷದ ನಾಯಕರಿಗೆ ಸೂಕ್ತ ಸ್ಥಾನಮಾನಗಳನ್ನು ಕಲ್ಪಿಸಿಕೊಡುವ ವಿಷಯದಲ್ಲಿ ಎಡವಿ ಬಿದ್ದಿರುವ ಅದು, ಹೀಗೆ ಬಿದ್ದಿದ್ದರಿಂದ ಆಗಿರುವ ಗಾಯಗಳನ್ನು ಗುಣಪಡಿಸಿಕೊಳ್ಳಲು ಪರದಾಡುತ್ತಿದೆ.

ಮೊದಲನೆಯದಾಗಿ ಸಚಿವ ಸಂಪುಟ ವಿಸ್ತರಣೆಯ ವಿಷಯದಲ್ಲಿ ಕಾಂಗ್ರೆಸ್ ಅನುಸರಿಸಿದ ಮಾನದಂಡ ಸಹಜವಾಗಿಯೇ ಆ ಪಕ್ಷದ ಒಳವಲಯಗಳಲ್ಲಿ ಅಸಮಾಧಾನದ ಜ್ವಾಲೆಯನ್ನು ಹುಟ್ಟು ಹಾಕಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ಅಥವಾ ದಿನೇಶ್?ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ಅಥವಾ ದಿನೇಶ್?

ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರಭಾವಿ ಮಂತ್ರಿಯಾಗಿದ್ದ ಎಂ.ಬಿ.ಪಾಟೀಲರಂಥವರು ದೆಹಲಿಗೆ ಹೋಗಿ ಎಐಸಿಸಿ ಅಧ್ಯಕ್ಷರ ಮುಂದೆ ತಮ್ಮ ದುಮ್ಮಾನವನ್ನು ತೋಡಿಕೊಂಡು ಬಂದಿದ್ದಾರೆ. ಇದೇ ರೀತಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ರಾಮಲಿಂಗಾರೆಡ್ಡಿ, ರೋಷನ್ ಬೇಗ್, ಎಚ್.ಕೆ. ಪಾಟೀಲ್ ಸೇರಿದಂತೆ ಹಲವರು ಕೋಪಾವಿಷ್ಟರಾಗಿದ್ದಾರೆ.

ಇವರನ್ನೆಲ್ಲ ಸಮಾಧಾನಪಡಿಸುವ ಕಾಂಗ್ರೆಸ್ ಹೈಕಮಾಂಡ್ ಯತ್ನ ಜಾರಿಯಲ್ಲಿದೆಯಾದರೂ ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಇವೆಲ್ಲವೂ ಪಕ್ಷಕ್ಕೆ ಉಲ್ಟಾ ಹೊಡೆಯಲಿದೆ ಎಂಬುದು ಮಾತ್ರ ನಿಶ್ಚಿತ.

ಸಿದ್ದು ಬಂದರೇ ಬೆಟರ್ರು ಅಂತಿದ್ದಾರೆ ರಾಹುಲ್

ಸಿದ್ದು ಬಂದರೇ ಬೆಟರ್ರು ಅಂತಿದ್ದಾರೆ ರಾಹುಲ್

ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಷಯಕ್ಕೇ ಬರೋಣ. ಮಂತ್ರಿ ಮಂಡಲದಲ್ಲಿ ಸ್ಥಾನ ದಕ್ಕದ ಹಲವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಪಟ್ಟಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಈ ಜಾಗಕ್ಕೆ ತರುವುದು ಬೆಟರ್ರು ಎಂಬ ಭಾವನೆಯಿದೆ. ಯಾಕೆಂದರೆ ಮುಖ್ಯಮಂತ್ರಿಯಾಗಿ ಅವರು ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ವಿಫಲರಾದರೂ ಗಣನೀಯ ಸಂಖ್ಯೆಯ ಸ್ಥಾನಗಳನ್ನು ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ತಕ್ಕಡಿ ಅವರತ್ತಲೇ ತೂಗುತ್ತಿದೆ. ಆದರೆ, ಇತರ ಕಾರಣಗಳು ಮತ್ತು ಹಲವಾರು ಸಂಗತಿಗಳು ಅದಕ್ಕೆ ಅವಕಾಶ ಕೊಡುತ್ತಿಲ್ಲ.

ಮರಳಿ ಅಧಿಕಾರಕ್ಕೆ ತರಲು ಸಿದ್ದು ಸೋತಿದ್ದಾರೆ

ಮರಳಿ ಅಧಿಕಾರಕ್ಕೆ ತರಲು ಸಿದ್ದು ಸೋತಿದ್ದಾರೆ

ಒಂದು ಪಕ್ಷ ಅಧಿಕಾರದಲ್ಲಿದ್ದು ಮರು ಚುನಾವಣೆಯನ್ನು ಎದುರಿಸಿದಾಗ ಹೆಚ್ಚು ಸೀಟುಗಳನ್ನು ಗಳಿಸಲು ಯಶಸ್ವಿಯಾಗಿದ್ದು ದೇವರಾಜ ಅರಸರ ಕಾಲದಲ್ಲಿ. 1972ರಲ್ಲಿ ಮುಖ್ಯಮಂತ್ರಿಯಾದ ದೇವರಾಜ ಅರಸರು ತಮ್ಮದೇ ರಾಜಕೀಯ ಲೆಕ್ಕಾಚಾರಗಳ ಮೂಲಕ ಅಹಿಂದ ವರ್ಗಗಳನ್ನು ಕನ್‌ಸಾಲಿಡೇಟ್ ಮಾಡಿ 1978ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಮರಳಿ ಅಧಿಕಾರಕ್ಕೆ ಬರುವಂತೆ ಮಾಡಿದರು.

ಆದರೆ ಅದು ಜಾತಿ ಅಸಮಾನತೆಯ ಮೇಲೆ ಗಮನ ಕೇಂದ್ರೀಕೃತವಾಗಿದ್ದ ಕಾಲ. ಆದರೆ ನಂತರದ ದಿನಗಳಲ್ಲಿ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರ 1983ರಲ್ಲಿ ಅಧಿಕಾರಕ್ಕೆ ಬಂತು. 1985ರಲ್ಲಿ ಮಧ್ಯಂತರ ಚುನಾವಣೆಗೆ ಹೋಗಿ ಗೆಲುವು ಸಾಧಿಸಿತು. ಆದರೆ ಅದು ದೇವರಾಜ ಅರಸರಂತೆ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮರಳಿ ಸಾಧಿಸಿದ ಗೆಲುವಲ್ಲ. ಹೀಗೆ ಪೂರ್ಣಾವಧಿ ಅಧಿಕಾರದಲ್ಲಿದ್ದು ಪಕ್ಷವನ್ನು ಮರಳಿ ಅಧಿಕಾರಕ್ಕೆ ತಂದವರಲ್ಲಿ ದೇವರಾಜ ಅರಸರು ಕೊನೆಯ ನಾಯಕ. ಇದಾದ ನಂತರದ ದಿನಗಳಲ್ಲಿ ದೇವರಾಜ ಅರಸರ ತರಹ ಯಾರೂ ಯಶಸ್ಸು ಪಡೆದಿಲ್ಲ. ಸಿದ್ಧರಾಮಯ್ಯ ಕೂಡಾ ಹಾಗೆ ಯಶಸ್ಸು ಕಾಣಲಿಲ್ಲ ಎಂಬುದು ನಿಜ.

ಸಿದ್ದರಾಮಯ್ಯನವರ ಸಾಧನೆ ತೆಗೆದುಹಾಕುವಂತಿಲ್ಲ

ಸಿದ್ದರಾಮಯ್ಯನವರ ಸಾಧನೆ ತೆಗೆದುಹಾಕುವಂತಿಲ್ಲ

ಅವರು ಜಾಗತೀಕರಣ ಬಂದ ನಂತರದ ಕಾಲಘಟ್ಟದಲ್ಲೂ ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಐದು ವರ್ಷಗಳ ಕಾಲ ನಡೆಸಿ, ಆನಂತರದ ಚುನಾವಣೆಯಲ್ಲಿ ಪಕ್ಷ ಎಂಭತ್ತರಷ್ಟು ಸೀಟುಗಳ ಗಡಿ ತಲುಪುವಂತೆ ಮಾಡಿದ್ದಾರೆ.

1989ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ 1994ರ ವೇಳೆಗೆ ನಲವತ್ತು ಸೀಟುಗಳ ಗಡಿಗೆ ಬಂದು ತಲುಪಿತು. 1994ರಲ್ಲಿ ಅಧಿಕಾರಕ್ಕೆ ಬಂದ ಜನತಾದಳ 1999ರ ಚುನಾವಣೆಯ ವೇಳೆಗೆ ಎರಡು ಹೋಳುಗಳಾಗಿ ಕುಸಿದು ಬಿತ್ತು. 1999ರಲ್ಲಿ ಅಧಿಕಾರಕ್ಕೆ ಬಂದ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಪಕ್ಷ 2004ರ ಚುನಾವಣೆಯಲ್ಲಿ ಅರವತ್ತೈದು ಸೀಟುಗಳನ್ನು ಗಳಿಸುವಷ್ಟರಲ್ಲಿ ಸುಸ್ತಾಯಿತು.

ಇದಾದ ನಂತರ ಅಧಿಕಾರಕ್ಕೆ ಬಂದ ಯಾವ ಪಕ್ಷವೂ ಮರುಚುನಾವಣೆಯಲ್ಲಿ ದೊಡ್ಡ ಸಂಖ್ಯೆಯ ಸ್ಥಾನಗಳನ್ನು ಗೆಲ್ಲಲಿಲ್ಲ. ಆದರೆ ಸಿದ್ಧರಾಮಯ್ಯ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದ ದಾಖಲೆಯನ್ನು ಮುರಿದಿದ್ದಾರೆ. ಈಗವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಿಂತ ಮುಖ್ಯವಾಗಿ ಸರ್ಕಾರದ ಮಟ್ಟದಲ್ಲಿ ತಮಗೆ ಯಾವ ಮುಜುಗರವೂ ಆಗಬಾರದು ಎಂದು ಬಯಸುತ್ತಿದ್ದಾರೆ.

ಹೈಕಮಾಂಡ್ ಮೇಲೆ ಭೈರೇಗೌಡ ಒತ್ತಡ

ಹೈಕಮಾಂಡ್ ಮೇಲೆ ಭೈರೇಗೌಡ ಒತ್ತಡ

ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಯಥಾ ಪ್ರಕಾರ ಅಹಿಂದ ಸಮುದಾಯಗಳ ಮತಗಳನ್ನು ಕನ್‌ಸಾಲಿಡೇಟ್ ಮಾಡಿಕೊಂಡು ಮುಂದಿನ ಲೋಕಸಬಾ ಚುನಾವಣೆಯಲ್ಲಿ ಕನಿಷ್ಠ ಹತ್ತು ಸ್ಥಾನಗಳನ್ನಾದರೂ ಗೆಲ್ಲಬಹುದು ಎಂಬುದು ಒಂದು ಲೆಕ್ಕಾಚಾರ. ಆದರೆ ಲೆಕ್ಕಾಚಾರ ಕಾಂಗ್ರೆಸ್ ಹೈಕಮಾಂಡ್ ಭಾವಿಸಿದಷ್ಟು ಸರಳವಾಗಿಲ್ಲ. ಯಾಕೆಂದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಎಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್ ಕಣ್ಣಿಟ್ಟಿದ್ದಾರೆ. ಈ ಪೈಕಿ ದಿನೇಶ್ ಗುಂಡೂರಾವ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತರುವಂತೆ ಸಚಿವ ಕೃಷ್ಣ ಭೈರೇಗೌಡ ಅವರು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿರುವುದು ರಹಸ್ಯವೇನೂ ಅಲ್ಲ.

ಜಾತಿ ರಾಜಕಾರಣ ಸುಭದ್ರವಾಗಿ ಬೇರೂರಿರುವ ಈ ಕಾಲಘಟ್ಟದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ದಿನೇಶ್ ಗುಂಡೂರಾವ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರೆ ಯಾವ ಸಮುದಾಯ ಕಾಂಗ್ರೆಸ್ ಪರ ನಿಲ್ಲುತ್ತದೆ? ಅನ್ನುವುದು ಸ್ವತ: ಕೃಷ್ಣ ಭೈರೇಗೌಡರಿಗೂ ಗೊತ್ತಿಲ್ಲ. ಯಾಕೆಂದರೆ ಆ ಸಮುದಾಯದ ಗಣನೀಯ ಪ್ರಮಾಣದ ಮತಗಳು ಸಾಂಪ್ರದಾಯಿಕವಾಗಿ ಬಿಜೆಪಿ ಜತೆ ಹೋಗುತ್ತವೆ ಎಂಬುದು ಗೊತ್ತಿಲ್ಲದ ವಿಷಯವೇನಲ್ಲ. ಒಂದು ಜಾಗಕ್ಕೆ ಒಬ್ಬರನ್ನು ಕರೆತಂದು ಕೂರಿಸಿದರೆ ಅವರು ನಿರ್ದಿಷ್ಟ ಸಮುದಾಯದ ಮತಗಳನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಬೇಕು.

ದಿನೇಶ್ ಗುಂಡೂರಾವ್ ಯಶಸ್ವಿಯಾಗುತ್ತಾರಾ?

ದಿನೇಶ್ ಗುಂಡೂರಾವ್ ಯಶಸ್ವಿಯಾಗುತ್ತಾರಾ?

ದಿನೇಶ್ ಗುಂಡೂರಾವ್ ಇದರಲ್ಲಿ ಯಶಸ್ವಿಯಾಗುತ್ತಾರೆ ಎನ್ನಲು ಮೇಲ್ನೋಟಕ್ಕೆ ಯಾವ ಸಾಕ್ಷ್ಯಾಧಾರಗಳೂ ಇಲ್ಲ. ಅದೇ ರೀತಿ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿರುವ ಗಾಂಧಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬ್ರಾಹ್ಮಣೇತರ ಮತದಾರರೇ ಅವರ ಶಕ್ತಿಯಾಗುಳಿದಿದ್ದಾರೆ. ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಹೊಸಬರಿಗೆ ಹೆಚ್ಚಿನ ಆದ್ಯತೆ ನೀಡಿದ ಕಾಂಗ್ರೆಸ್ ಹೈಕಮಾಂಡ್ ನೀತಿ ಈ ವಿಷಯದಲ್ಲೂ ವರ್ಕ್‌ಔಟ್ ಆದರೆ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಬೇಕು ಎಂಬುದು ಕೃಷ್ಣ ಭೈರೇಗೌಡರ ವಾದ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕೃಷ್ಣ ಭೈರೇಗೌಡರನ್ನು ಕಂಡರೆ ಹೆಚ್ಚು ವಿಶ್ವಾಸ ಮತ್ತು ಅವರು ಕರ್ನಾಟಕದಲ್ಲಿ ಯುವ ಸಮುದಾಯವನ್ನು ಸೆಳೆದು ಭವಿಷ್ಯದ ಕಾಂಗ್ರೆಸ್ ಪಕ್ಷವನ್ನು ಕಟ್ಟಬಲ್ಲರು ಎಂಬ ನಂಬಿಕೆ. ಹೀಗಾಗಿ ದಿನೇಶ್ ಗುಂಡೂರಾವ್ ಕೂಡಾ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೀರಿಯಸ್ ಕಂಟೆಂಡರ್.

ನಿಜವಾದ ಟೈಮ್ ಬಾಂಬ್ ಎಚ್ಕೆ ಪಾಟೀಲ

ನಿಜವಾದ ಟೈಮ್ ಬಾಂಬ್ ಎಚ್ಕೆ ಪಾಟೀಲ

ಆದರೆ ಈ ಮಧ್ಯೆ ನಿಜವಾದ ಬಾಂಬ್ ಒಂದು ತನ್ನ ಮಡಿಲಲ್ಲೇ ಹುದುಗಿಕೊಂಡಿದೆ ಎಂಬುದನ್ನು ಕಾಂಗ್ರೆಸ್ ಪಕ್ಷ ಅರ್ಥ ಮಾಡಿಕೊಳ್ಳಬೇಕಿದೆ. ಒಂದು ಮಟ್ಟದಲ್ಲಿ ಅದು ಅರ್ಥ ಮಾಡಿಕೊಂಡಿದೆಯಾದರೂ ಪರಿಪೂರ್ಣವಾಗಿ ಅದಕ್ಕೆ ಸತ್ಯ ಅರಿವಾದಂತಿಲ್ಲ. ಹೀಗೆ ಅದು ತನ್ನ ಮಡಿಲಲ್ಲಿಟ್ಟುಕೊಂಡ ಬಾಂಬು ಬೇರೆ ಯಾರೂ ಅಲ್ಲ. ಈ ಹಿಂದಿನ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಚ್.ಕೆ. ಪಾಟೀಲ್. 1999ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಉತ್ತರ ಕರ್ನಾಟಕ ಭಾಗದ ಐವತ್ತರಷ್ಟು ಶಾಸಕರನ್ನು ಒಗ್ಗೂಡಿಸಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಲೇಬೇಕು ಎಂಬ ಒತ್ತಡ ಹೆಚ್ಚುವಂತೆ ಮಾಡುವಲ್ಲಿ ಎಚ್.ಕೆ. ಪಾಟೀಲ್ ಯಶಸ್ವಿಯಾಗಿದ್ದರು.

ಆದರೆ ಹೀಗೆ ಮಾಡಿದ ಎಚ್.ಕೆ. ಪಾಟೀಲ್ ಅವರ ಬಗ್ಗೆ ಎಸ್.ಎಂ. ಕೃಷ್ಣ ವಿನಾಕಾರಣ ಆತಂಕ ಬೆಳೆಸಿಕೊಂಡರು. ಶುರುವಿನಲ್ಲಿ ಜಲಸಂಪನ್ಮೂಲ ಖಾತೆ ಕೊಟ್ಟವರು ಆನಂತರದ ದಿನಗಳಲ್ಲಿ ಇದೇ ಡಿ.ಕೆ. ಶಿವಕುಮಾರ್ ಅವರನ್ನು ಮುಂದಿಟ್ಟುಕೊಂಡು ಎಚ್.ಕೆ. ಪಾಟೀಲರನ್ನು ಸೈಡ್ ಲೈನ್ ಮಾಡುವ ಪ್ರಯತ್ನಕ್ಕಿಳಿದರು. ಈ ದಿಸೆಯಲ್ಲಿ ಅವರು ಯಶಸ್ವಿಯೂ ಆದರು. ಶುರುವಿನಲ್ಲಿ ಜಲಸಂಪನ್ಮೂಲ ಖಾತೆಯಿಂದ ಅವರನ್ನು ಎತ್ತಂಗಡಿ ಮಾಡಿ ಬೇರೆ ಖಾತೆ ಕೊಟ್ಟರು. 2004ರ ವಿಧಾನಸಭಾ ಚುನಾವಣೆಯಲ್ಲಿ ಅದೇ ಎಚ್.ಕೆ. ಪಾಟೀಲರ ಇಚ್ಛೆಗೆ ವಿರುದ್ಧವಾಗಿ ನಲವತ್ತು ಮಂದಿಗೆ ಟಿಕೇಟ್ ಕೊಟ್ಟರು. ಆದರೆ ಅವರಲ್ಲಿ ಬಹುತೇಕರು ಪರಾಭವಗೊಂಡು ಮನೆ ಸೇರಿದರು. ಅವರು ಮಾತ್ರವಲ್ಲ, ಪಕ್ಷವನ್ನೂ ಮನೆಗೆ ಸೇರಿಸಿದರು.

ನಿರುಪದ್ರವಿಯಂತೆ ಕಂಡರೂ ಹೆಚ್ಚು ಪ್ರಭಾವಿ

ನಿರುಪದ್ರವಿಯಂತೆ ಕಂಡರೂ ಹೆಚ್ಚು ಪ್ರಭಾವಿ

ಮೇಲ್ನೋಟಕ್ಕೆ ನಿರುಪದ್ರವಿಯಂತೆ ಎಚ್.ಕೆ. ಪಾಟೀಲ್ ಕಂಡರೂ ಇವತ್ತಿಗೂ ಉತ್ತರ ಕರ್ನಾಟಕ ಭಾಗದಲ್ಲಿ ಅವರಿಗೆ ಹೆಚ್ಚಿನ ಪ್ರಭಾವವಿದೆ. ವಾಸ್ತವವಾಗಿ ಇತ್ತೀಚಿನ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಎಚ್.ಕೆ. ಪಾಟೀಲರನ್ನು ಕಡೆಗಣಿಸುವ ಕೆಲಸ ನಡೆದಾಗ ಅವರು ಆಕ್ರೋಶಗೊಂಡರು. ಅಷ್ಟೇ ಅಲ್ಲ, ಅತೃಪ್ತ ಶಾಸಕರ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮೂವತ್ತರಷ್ಟು ಮಂದಿ ಕಾಂಗ್ರೆಸ್ ಶಾಸಕರು ಎಚ್.ಕೆ. ಪಾಟೀಲರ ಜತೆ ನಿಂತಿದ್ದರು. ಯಾವಾಗ ಈ ವಿಷಯ ಅರ್ಥವಾಯಿತೋ? ಆಗ ಕಾಂಗ್ರೆಸ್ ಹೈಕಮಾಂಡ್ ಎಚ್ಚೆತ್ತುಕೊಂಡಿತು.

ಸ್ವತ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ದಿಲ್ಲಿಗೆ ಬರುವಂತೆ ಎಚ್.ಕೆ. ಪಾಟೀಲರಿಗೆ ಬುಲಾವ್ ನೀಡಿದರು. ಅದರನುಸಾರ ಇವರು ದಿಲ್ಲಿಗೆ ಹೋದಾಗ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ತಮ್ಮನ್ನು ಕಾಯುಕ್ತಾ ಕುಳಿತಿದ್ದರೂ ಅವರನ್ನು ಹೊರಗೇ ಕೂರಲು ಹೇಳಿ ಎಚ್.ಕೆ. ಪಾಟೀಲರನ್ನು ಒಳಗೆ ಕರೆಸಿಕೊಂಡು ನಲವತ್ತು ನಿಮಿಷ ಮಾತುಕತೆ ನಡೆಸಿದ ರಾಹುಲ್ ಗಾಂಧಿ, ನೀವು ಪಕ್ಷದ ಆಸ್ತಿ. ಸೂಕ್ತ ಕಾಲದಲ್ಲಿ ನಿಮ್ಮ ಬಗ್ಗೆ ಪೂರಕ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಎಚ್ಕೆ ಪಾಟೀಲರಿಗೆ ಗಾಂಧಿ ಸಮಾಧಾನ

ಎಚ್ಕೆ ಪಾಟೀಲರಿಗೆ ಗಾಂಧಿ ಸಮಾಧಾನ

ಇತ್ತೀಚಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ನ ಹಲವು ನಾಯಕರನ್ನು ರಾಹುಲ್ ಗಾಂಧಿ ಕರೆದು ಮಾತನಾಡಿಸಿದ್ದರೂ ಎಚ್.ಕೆ. ಪಾಟೀಲರನ್ನು ಉಳಿದೆಲ್ಲರಿಗಿಂತ ಹೆಚ್ಚು ಆಸಕ್ತಿಯಿಂದ ಕಂಡರು. ಸಮಾಧಾನ ಹೇಳಿದರು. ಅವರಾಡಿದ ಸಮಾಧಾನದ ಮಾತಿನಿಂದ ಎಚ್.ಕೆ. ಪಾಟೀಲರು ಸುಮ್ಮನೆ ಬಂದಿರಬಹುದು. ಆದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವರನ್ನು ಕೂರಿಸಲು ಕಾಂಗ್ರೆಸ್ ವಿಫಲವಾದರೆ ನೋ ಡೌಟ್, ಉತ್ತರ ಕರ್ನಾಟಕ ಭಾಗದಲ್ಲಿ ಅದು ಬಿಜೆಪಿಗೆ ಪ್ಲಸ್ ಆಗಿ ಪರಿಣಮಿಸುತ್ತದೆ. ವೈಯಕ್ತಿಕವಾಗಿ ಎಚ್.ಕೆ. ಪಾಟೀಲರು ಯಾವತ್ತೂ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಲ್ಲ. ಆದರೆ ಅವರಿಗೆ ಆಗುವ ಅವಮಾನವನ್ನು ಉತ್ತರ ಕರ್ನಾಟಕ ಭಾಗದ ಜನ ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಾರೆ. ಹೀಗಾಗಿ ಇವತ್ತಿನ ಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಷಯ ಬಂದಾಗ ಆ ಜಾಗಕ್ಕೆ ಶಕ್ತಿ ತುಂಬಬಲ್ಲ ಇಬ್ಬರು ನಾಯಕರೆಂದರೆ ಸಿದ್ಧರಾಮಯ್ಯ ಹಾಗೂ ಎಚ್.ಕೆ. ಪಾಟೀಲ.

ಪಾಟೀಲರು ಕೆಪಿಸಿಸಿ ಚುಕ್ಕಾಣಿ ಹಿಡಿಯಬೇಕೆನ್ನುತ್ತೆ ಬಿಜೆಪಿ

ಪಾಟೀಲರು ಕೆಪಿಸಿಸಿ ಚುಕ್ಕಾಣಿ ಹಿಡಿಯಬೇಕೆನ್ನುತ್ತೆ ಬಿಜೆಪಿ

ಸಿದ್ಧರಾಮಯ್ಯ ಅವರಿಗೆ ವೈಯಕ್ತಿಕವಾಗಿ ಆ ಜಾಗದಲ್ಲಿ ಬಂದು ಕೂರುವುದು ಇಷ್ಟವಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹುದ್ದೆ ಹಳೇ ಮೈಸೂರು ಭಾಗಕ್ಕೆ ಸಿಕ್ಕಿರವುದರಿಂದ ಕೆಪಿಸಿಸಿ ಅಧ್ಯಕ್ಷ ಪಟ್ಟ ಉತ್ತರ ಕರ್ನಾಟಕ ಭಾಗಕ್ಕೆ ಸಿಗಲಿ ಎಂಬ ನಿರೀಕ್ಷೆ ಎಚ್.ಕೆ. ಪಾಟೀಲರಲ್ಲಿದೆ. ಈ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಡವಿದರೆ ಅನುಮಾನವೇ ಬೇಡ, ಅದು ಕಮಲ ಪಾಳೆಯಕ್ಕೆ ವರದಾನವಾಗುತ್ತದೆ. ಸದ್ಯಕ್ಕಿರುವ ಮಾಹಿತಿಯ ಪ್ರಕಾರ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಷಯದಲ್ಲಿ ಎಚ್.ಕೆ. ಪಾಟೀಲ ಹಾಗೂ ದಿನೇಶ್ ಗುಂಡೂರಾಯರ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆಯಾದರೂ ಅಂತಿಮವಾಗಿ ದಿನೇಶ್ ಗುಂಡೂರಾವ್ ಅವರಿಗೆ ಲಕ್ಕು ಒಲಿದರೂ ಒಲಿಯಬಹುದು ಎಂಬುದು ಬಿಜೆಪಿ ಪಾಳೆಯಕ್ಕಿರುವ ಮಾಹಿತಿ. ಹಾಗಾಗಲಿ ಎಂದು ಅದು ಬಯಸುತ್ತಿದೆ. ಯಾಕೆಂದರೆ ಕಾಂಗ್ರೆಸ್ ಪಕ್ಷ ತನ್ನ ಮಡಿಲಲ್ಲಿಟ್ಟುಕೊಂಡುವ ಟೈಮ್ ಬಾಂಬು ತಾನೇ ತಾನಾಗಿ ಸ್ಫೋಟಿಸಿದರೆ ಅದರ ಲಾಭ ದಕ್ಕುವುದು ಬಿಜೆಪಿಗೆ ತಾನೇ?

English summary
Who will don the post of KPCC President? HK patil or Dinesh Gundu Rao? Or Rahul Gandhi will make Siddaramaiah KPCC president keeping Lok Sabha Elections 2019? Political Analysis by R T Vittal Murthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X