ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಪಠ್ಯ ಕ್ರಮ ಮಕ್ಕಳಿಗೆ ಆಗುತ್ತಿದೆ ಅನ್ಯಾಯ, ಸರಿ ಪಡಿಸುವರು ಯಾರು?

|
Google Oneindia Kannada News

ಬೆಂಗಳೂರು, ಜು. 29: ನ್ಯಾಯ ಬೆಲೆ ಅಂಗಡಿಯಲ್ಲಿ ಕಳಪೆ ಅಕ್ಕಿ ಕೊಟ್ಟರೆ ತಿಂದು ಹೇಗೂ ಜೀರ್ಣ ಮಾಡಿಕೊಳ್ಳಬಹುದು. ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣದಲ್ಲಿ ಕಳಪೆಯಾದರೆ ವಿದ್ಯಾರ್ಥಿಗಳ ಪರಿಸ್ಥಿತಿ ಏನು? ರಾಜ್ಯದ ಸರ್ಕಾರಿ ಹಾಗೂ ರಾಜ್ಯ ಪಠ್ಯ ಕ್ರಮದ ಖಾಸಗಿ ಶಾಲಾ ಮಕ್ಕಳಿಗೆ 2017 ರಿಂದಲೂ ಕಳಪೆ ಗುಣಮಟ್ಟದ ಪಠ್ಯಕ್ರಮದ ಪುಸ್ತಕಗಳನ್ನು ನೀಡಿ ಶಿಕ್ಷಣ ಇಲಾಖೆ ದ್ರೋಹ ಎಸಗುತ್ತಿದೆ. ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಮಕ್ಕಳಿಗೆ ಆಗುತ್ತಿರುವ ಅನ್ಯಾಯ ಕುರಿತ ವಿವರ ಇಲ್ಲಿದೆ ನೋಡಿ.

ರಾಜ್ಯದಲ್ಲಿ ಪಠ್ಯ ಕ್ರಮದ ಸಿದ್ಧತೆ ಇಲ್ಲ: ರಾಷ್ಟ್ರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಜಾರಿಗೆ ತಂದಿದೆ. ದೇಶದಲ್ಲಿ ಏಕ ರೂಪದ ಶಿಕ್ಷಣ ವ್ಯವಸ್ಥೆ ಜತೆಗೆ ಪಠ್ಯ ಕ್ರಮ ಹಾಗೂ ತರಗತಿಗಳ ಬದಲಾವಣೆ, ವೃತ್ತಿಪರ ಹಾಗೂ ಕೌಶಲ್ಯ ಆಧಾರಿತ ಜ್ಞಾನ ಬೆಳೆಸುವ ಉದ್ದೇಶ ಈ ಯೋಜನೆ ಹೊಂದಿದೆ. ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ವರ್ಷದಿಂದಲೇ ಜಾರಿಗೆ ತರುತ್ತಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲು ಶಿಕ್ಷಣ ಇಲಾಖೆ ಉತ್ಸುಕತೆ ಮೆರದಿದೆ. ವಿಪರ್ಯಾಸವೆಂದರೆ ದೇಶದಲ್ಲಿಯೇ ಅತಿ ಕಳಪೆ ಪಠ್ಯ ಕ್ರಮ ಪಠ್ಯ ಪುಸ್ತಕಗಳನ್ನು ರಾಜ್ಯ ಶಿಕ್ಷಣ ಇಲಾಖೆ ಮುದ್ರಣ ಮಾಡುತ್ತಿದೆ. ಈ ಮೂಲಕ ಮಕ್ಕಳ ಓದಿನ ವಿಚಾರದಲ್ಲಿ ಕಣ್ಣಿಗೆ ಮಣ್ಣೆರಚುತ್ತಿದೆ.

ತರಗತಿ ಹಾಗೂ ವಿಷಯವಾರು ಬದಲಾವಣೆಗೆ ಸಲಹೆ

ತರಗತಿ ಹಾಗೂ ವಿಷಯವಾರು ಬದಲಾವಣೆಗೆ ಸಲಹೆ

ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ 2017-18 ರಲ್ಲಿ ಪರಿಷ್ಕರಿಸಿ ಮುದ್ರಣ ಮಾಡಿದ ಪಠ್ಯ ಪುಸ್ತಕಗಳಲ್ಲಿನ ವಿಷಯ ಗುಣಮಟ್ಟದ ಬಗ್ಗೆ ಅಧ್ಯಯನ ನಡೆಸುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ ಸಂಸ್ಥೆಯ ಪಠ್ಯಕ್ರಮ ಅಧ್ಯಯನ ವಿಭಾಗ ಅನ್ವೇಷಣೆ ಮಾಡಿ 2017 ರಲ್ಲೇ ವರದಿ ನೀಡಿತ್ತು. ತೀರಾ ಕಳಪೆ ಗುಣಮಟ್ಟ ಪಠ್ಯ ಕ್ರಮ ಹೊಂದಿರುವ ಬಗ್ಗೆ ತರಗತಿವಾರು ಹಾಗೂ ವಿಷಯವಾರು ಕೋಷ್ಟಕ ಇತ್ತು. ರಾಜ್ಯದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ವಿಚಾರದಲ್ಲಿ ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ ಮಾಡಿರುವ ಅನ್ಯಾಯವನ್ನು ಎಳೆಎಳೆಯಾಗಿ ಬಿಡಿಸಿ ಹೇಳಿತ್ತು. ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣ ಹಂತದ ಪಠ್ಯ ಕ್ರಮ ಏನು ಒಳಗೊಡಿರಬೇಕು ಎಂಬುದರ ಸಮಗ್ರ ವರದಿ ನೀಡಿತ್ತು. ವಿಷಯವಾರು ಪಾಠವಾರು ಅನ್ವೇಷಣೆ ಮಾಡಿ ಸಲಹೆಯನ್ನು ಸಹ ನೀಡಿತ್ತು. ಆ ವರದಿ ಇಲ್ಲಿ ಒನ್ಇಂಡಿಯಾ ಕನ್ನಡ ನೀಡಿದ್ದು ಲಿಂಕ್ ಕ್ಲಿಕ್ ಮಾಡಿ.

ಬದ್ಧತೆ ತೋರದ ಶಿಕ್ಷಣ ಇಲಾಖೆ

ಬದ್ಧತೆ ತೋರದ ಶಿಕ್ಷಣ ಇಲಾಖೆ

ಒಂದಡೆ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿದೆ. ಇದಕ್ಕೂ ಮುನ್ನವೇ ರಾಜ್ಯದಲ್ಲಿನ ಪಠ್ಯ ಪುಸ್ತಕ ಕಲಿಕೆಯಿಂದ ವಿದ್ಯಾರ್ಥಿಗಳಿಗೆ ಆಗುತ್ತಿರವ ಅನ್ಯಾಯದ ಬಗ್ಗೆ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನ್ ರಿಸರ್ಚ್ ಅಂಡ್ ಟ್ರೈನಿಂಗ್ ಎಳೆ ಎಳೆಯಾಗಿ ವರದಿ ನೀಡಿತ್ತು. ನೆರೆ ರಾಜ್ಯಗಳಲ್ಲಿರುವ ಪಠ್ಯ ಪುಸ್ತಕದ ಪಠ್ಯ ಕ್ರಮ ಗುಣಮಟ್ಟ ರಾಜ್ಯದಲ್ಲಿಇರಲಿಲ್ಲ. ಈ ಕುರಿತು ವರದಿ ನೀಡಿದ ಒಂದೇ ವರ್ಷದಲ್ಲಿ ರಾಜ್ಯದಲ್ಲಿ ಪಠ್ಯ ಕ್ರಮ ಬದಲಾವಣೆ ತರುವ ಬದ್ಧತೆಯನ್ನು ಶಿಕ್ಷಣ ಇಲಾಖೆ ತೋರಬೇಕಿತ್ತು. ಆದರೆ, ಅಧಿಕಾರಿಗಳು ತೋರಲಿಲ್ಲ. ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳು ಸುಮ್ಮನಾದರು. ಹೀಗಾಗಿ ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ ನಿದ್ದೆಯಲ್ಲಿಯೇ ಐದು ವರ್ಷ ಕಳೆದು ಬಿಟ್ಟಿದೆ. ಅಧಿಕಾರಿಗಳ ಸೋಮಾರಿತನದಿಂದಾಗಿ ಐದು ವರ್ಷದಿಂದ ಕಳಪೆ ಪಠ್ಯವನ್ನೇ ಬೋಧನೆ ಮಾಡಲಾಗುತ್ತಿದೆ. ಕೊರೊನಾ ನೆಪದಲ್ಲಿ ಅದನ್ನೇ ಈ ವರ್ಷವೂ ಉಣಬಡಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಸಾಹಸ ಮಂತ್ರಿ ಕಿವಿ ಗೊಡಲಿಲ್ಲ

ಸಾಹಸ ಮಂತ್ರಿ ಕಿವಿ ಗೊಡಲಿಲ್ಲ

ಸಾಹಸಮಯ ತೀರ್ಮಾನಗಳಿಗೆ ಹೆಸರಾಗಿರುವ ಎಸ್. ಸುರೇಶ್ ಕುಮಾರ್ ಶಿಕ್ಷಣ ಮಂತ್ರಿಯಾದ ಕೂಡಲೇ ರಾಜ್ಯ ಪಠ್ಯ ಕ್ರಮ ಪಠ್ಯ ಪುಸ್ತಕ ಲೋಪದ ಬಗ್ಗೆ ಎನ್‌ಸಿಆರ್‌ಟಿ ನೀಡಿರುವ ವರದಿ ಆಧರಿಸಿ ಕ್ರಮ ಜರುಗಿಸಿ. ತ್ವರಿತವಾಗಿ ಪಠ್ಯ ಕ್ರಮವನ್ನು ಬದಲಾವಣೆ ಮಾಡುವ ಸಂಬಂಧ ಸಮಿತಿ ರಚಿಸಿ ಕ್ರಮ ಜರುಗಿಸಿ ಎಂದು ಬಹುತೇಕ ಶಾಲಾ ಆಡಳಿತ ಹಾಗೂ ಶಿಕ್ಷಣ ಸಂಸ್ಥೆಗಳ ಒಕ್ಕೂಟಗಳು ಮನವಿ ನೀಡಿವೆ. ರಾಜ್ಯದಲ್ಲಿ ಸುದ್ದಿಯಾಗುವಂತಹ ಬಡ ಮಕ್ಕಳ ಮನೆಗಳಿಗೆ ಭೇಟಿ, ಶಾಲಾ ಮಕ್ಕಳ ಕುಶಲೋಪಹರಿ, ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಸಿ ಶಹಬ್ಬಾಸ್ ಗಿರಿಯಲ್ಲಿ ಶಿಕ್ಷಣ ಸಚಿವರು ಎರಡು ವರ್ಷ ಕಳೆದರು. ರಾಜ್ಯದ ಶಿಕ್ಷಣ ವ್ಯವಸ್ಥೆಯ ಮೂಲಭೂತ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಶಿಕ್ಷಣ ಸಚಿವರು ಕ್ರಮ ಜರುಗಿಸಲೇ ಇಲ್ಲ. ಹೀಗಾಗಿ ಹಳೇ ಪಠ್ಯ ಕ್ರಮ ಪುಸ್ತಕಗಳನ್ನೇ ರಾಜ್ಯದ ವಿದ್ಯಾರ್ಥಿಗಳು ಓದಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ವರ್ಷ ಪಠ್ಯ ಪುಸ್ತಕ ಮುದ್ರಣ ಆಗಿಲ್ಲ

ಈ ವರ್ಷ ಪಠ್ಯ ಪುಸ್ತಕ ಮುದ್ರಣ ಆಗಿಲ್ಲ

ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆನ್‌ಲೈನ್ ಶಾಲೆ ಆರಂಭವಾಗಿ ಒಂದು ತಿಂಗಳು ಮುಗಿದಿದೆ. ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ ಈವರೆಗೂ ಪಠ್ಯ ಪುಸ್ತಕ ಮುದ್ರಣ ಕಾರ್ಯ ಮುಗಿಸಿಲ್ಲ. ಹೀಗಾಗಿ ಇನ್ನೂ ಮೂರ್ನಾಲ್ಕ ತಿಂಗಳು ಆಗುವ ಲಕ್ಷಣ ಗೋಚರಿಸುತ್ತಿದೆ. ವಿಪರ್ಯಾಸವೆಂದರೆ ಈ ವರ್ಷವೂ ಅದೇ ಕಳಪೆ ಪಠ್ಯ ಕ್ರಮದ ಪುಸ್ತಕಗಳನ್ನೇ ವಿದ್ಯಾರ್ಥಿಗಳು ಓದಬೇಕು. ಅದನ್ನು ಕೂಡ ಈ ಸಲ ಕಾಲಕ್ಕೆ ಸರಿಯಾಗಿ ಕೊಡುತ್ತಿಲ್ಲ. ಶಾಲೆಗಳು ಒಂದು ತಿಂಗಳಿನಿಂದ ಆನ್‌ಲೈನ್ ತರಗತಿ ಮಾಡುತ್ತಿದ್ದರೂ ವಿದ್ಯಾರ್ಥಿಗಳ ಬಳಿ ಪಠ್ಯ ಕ್ರಮ ವಿಲ್ಲ. ಸದ್ಯ ಸಚಿವ ಸ್ಥಾನ ದಿಂದ ಕೆಳಗೆ ಇಳಿದಿರುವ ಸುರೇಶ್ ಕುಮಾರ್ ಚಾಮರಾಜನಗರಕ್ಕೆ ಭೇಟಿ ನೀಡಿದ್ದಾರೆ. ಎರಡು ವರ್ಷ ಸಚಿವರಾಗಿದ್ದರೂ ಆನ್‌ಲೈನ್ ಪಾಠ ನಡೆಯಲು ಪಠ್ಯ ಪುಸ್ತಕ ಸರಿಯಾದ ಸಮಯಕ್ಕೆ ಪೂರೈಸುವ ನಿಟ್ಟಿನಲ್ಲ ಕ್ರಮ ಜರುಗಿಸಲಿಲ್ಲ.

ಕ್ಯಾಮ್ಸ್ ಆಕ್ರೋಶ

ಕ್ಯಾಮ್ಸ್ ಆಕ್ರೋಶ

ಕಳೆದ ಐದು ವರ್ಷದಿಂದ ರಾಜ್ಯ ಪಠ್ಯ ಕ್ರಮದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಕಳಪೆ ಪಠ್ಯಕ್ರಮ ಪುಸ್ತಕಗಳನ್ನು ಶಿಕ್ಷಣ ಇಲಾಖೆ ಪೂರೈಕೆ ಮಾಡುತ್ತಿದೆ. ಇದನ್ನೆ ಓದುವ ಮೂಲಕ ದೇಶದ ನೆರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಸರ್ಕಾರಿ ಹಾಗೂ ರಾಜ್ಯ ಪಠ್ಯ ಕ್ರಮದ ಖಾಸಗಿ ಶಾಲೆ ಮಕ್ಕಳು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಸಚಿವರಿಗೆ ಮನವಿ ನೀಡಿದ್ದೇವೆ. ಐದು ವರ್ಷವಾದರೂ ರಾಜ್ಯದಲ್ಲಿ ಪಠ್ಯಕ್ರಮವನ್ನು ಬದಲಿಸುವ ಕಾರ್ಯಕ್ಕೆ ಪಠ್ಯ ಪುಸ್ತಕ ಸೊಸೈಟಿ ಮುಂದಾಗಿಲ್ಲ. ಇದೀಗ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿದ್ದಾರೆ. ಶಿಕ್ಷಣ ಸಚಿವರು ಎರಡು ವರ್ಷ ಕಳೆಯುವ ಬದಲಿಗೆ ಸ್ವಲ್ಪ ಎಚ್ಚೆತ್ತುಕೊಂಡಿದ್ದಲ್ಲಿ ರಾಜ್ಯದಲ್ಲಿ ಕನಿಷ್ಠ ಈ ವರ್ಷವಾದರೂ ಗುಣಮಟ್ಟದ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿ ಹೊಸದಾಗಿ ನೀಡಬಹುದಿತ್ತು. ರಾಜ್ಯ ಪಠ್ಯ ಕ್ರಮದ ಮಕ್ಕಳ ಸಂವಿಧಾನ ಬದ್ಧ ಹಕ್ಕು ಉಲ್ಲಂಘನೆ ಆಗುತ್ತಿದ್ದರೂ ಶಿಕ್ಷಣ ಸಚಿವರಾಗಿದ್ದ ಎಸ್. ಸುರೇಶ್ ಕುಮಾರ್ ಯಾಕೆ ಮೌನ ವಹಿಸಿದರೂ ಗೊತ್ತಿಲ್ಲ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

English summary
No textbook for children in Karnataka this academic Year: Karnataka State broad Text books Curriculum Quality Revision: A blunder by Education Minister Suresh Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X