ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕು? ಸಂಭಾವ್ಯರ ಪಟ್ಟಿ

|
Google Oneindia Kannada News

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು? ಎಂಬ ಕುತೂಹಲದ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿದೆ. ಕಳೆದ ಹಲವು ತಿಂಗಳುಗಳಿಂದ ತೆರೆ ಮರೆಯಲ್ಲಿ ನಡೆದಿದ್ದ ಬೆಳವಣಿಗೆಗಳು ಇಂದು ಕೇಂದ್ರ ಬಿಂದುವಾಗಿದ್ದು, ಅಂತಿಮ ಹಂತ ತಲುಪಿದೆ. ಜುಲೈ 26ರಂದು ಏನಾಗಲಿದೆ? ಆಷಾಢ ಕಳೆಯುತ್ತಿದ್ದಂತೆ ಕರ್ನಾಟಕಕ್ಕೆ ಹೊಸ ಸಿಎಂ ಸಿಗಲಿದ್ದಾರೆ ಎಂಬ ಸುದ್ದಿ ಗಾಳಿಯಲ್ಲಿ ತೇಲುತ್ತಿದೆ.

ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಈಗ ಕರ್ನಾಟಕದಲ್ಲಿ ಸಿಎಂ ಬದಲಾವಣೆಯೊಂದೇ ಪ್ರಶ್ನೆಯಾಗಿ ಉಳಿದಿಲ್ಲ, ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಆಮೂಲಾಗ್ರ ಬದಲಾವಣೆ ತರುವುದು ಅನಿವಾರ್ಯವಾಗಿದೆ. 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಜಾತಿ, ಮತ, ಪಂಥ, ಪ್ರಾದೇಶಿಕತೆ, ಸಂಘಟನೆ, ಅನುಭವ ಎಲ್ಲವನ್ನು ಅಳೆದು ತೂಗಿ ಅಚ್ಚರಿಯ ಹೆಸರೊಂದನ್ನು ಹೈಕಮಾಂಡ್ ಘೋಷಿಸಲು ಮುಂದಾಗಬೇಕಿದೆ.

ಕರ್ನಾಟಕ ಜನರ ನಾಡಿ ಮಿಡಿತ, ರಾಷ್ಟ್ರೀಯ ಸ್ವಯಂಸೇವಕ ಸಂಘ, ಅಧಿಕಾರಿಗಳು ಸೇರಿದಂತೆ ಅನೇಕ ಮೂಲಗಳಿಂದ ಬಂದಿರುವ ಸಲಹೆ, ಸೂಚನೆಗಳನ್ನು ಹೈಕಮಾಂಡ್ ಸಂಗ್ರಹಿಸಲು ಆರಂಭಿಸಿ ಹಲವು ತಿಂಗಳುಗಳೇ ಕಳೆದಿವೆ, ಇನ್ನೇನಿದ್ದರೂ ನಿರ್ಣಯ ತೆಗೆದುಕೊಂಡು ಪ್ರಕಟಿಸುವ ಕಾಲ.

ಬದಲಾವಣೆಗೆ ಚಾಲನೆ ಕೊಟ್ಟವರು ಯಾರು?

ಬದಲಾವಣೆಗೆ ಚಾಲನೆ ಕೊಟ್ಟವರು ಯಾರು?

ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ, ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಬಗ್ಗೆ ಚರ್ಚೆಗೆ ಮೊದಲು ಚಾಲನೆ ನೀಡಿದವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಆರೆಸ್ಸೆಸ್ ನಂ.2 ದತ್ತಾತ್ರೇಯ ಹೊಸಬಾಳೆ.

ಕರ್ನಾಟಕದಲ್ಲಿರುವ ಒಟ್ಟಾರೆ ಮತದಾರರ ಇಲ್ಲಿವರೆಗಿನ ನಾಡಿಮಿಡಿತ, ಬದಲಾವಣೆ ತಂದರೆ ಆಗುವ ಪರಿಣಾಮಗಳನ್ನು ಚರ್ಚಿಸಿ, ಹೊಸ ಸಿಎಂ ಆಯ್ಕೆ ನಡೆಸಿದ್ದಾರೆ. ಅತಿ ಹೆಚ್ಚುಶೇಕಡಾವಾರು ಮತದಾರರನ್ನು ಹೊಂದಿರುವ ವೀರಶೈವ ಲಿಂಗಾಯತ ಸಮುದಾಯವನ್ನು ಪಕ್ಕಕ್ಕೆ ತಳ್ಳದೆ ಹೊಸ ಸಾಧ್ಯತೆ ಬಗ್ಗೆ ನೋಡಲಾಗಿದೆ. ಈ ನಡುವೆ ಯಡಿಯೂರಪ್ಪ ಅವರಿಗೆ ಗೌರವಯುತ ನಿರ್ಗಮನ ಹಾಗೂ ಪರಿಶ್ರಮಕ್ಕೆ ತಕ್ಕ ಸ್ಥಾನಮಾನ ನೀಡುವ ಬಗ್ಗೆ ಕೂಡಾ ಚರ್ಚಿಸಲಾಗಿದೆ.

ಮಠಾಧೀಶರಿಂದ ಹೆಚ್ಚಾದ ಒತ್ತಡ

ಮಠಾಧೀಶರಿಂದ ಹೆಚ್ಚಾದ ಒತ್ತಡ

ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರ ಶ್ರಮ ಬಹಳ ದೊಡ್ಡದಿದೆ. ಯಡಿಯೂರಪ್ಪ ಅವರ ರಾಜಕೀಯ ಅನುಭವ, ರೈತ ಪರ ಹೋರಾಟವನ್ನು ಪಕ್ಷಾತೀತವಾಗಿ ಎಲ್ಲರೂ ಮಾನ್ಯ ಮಾಡುತ್ತಾರೆ. ಹೀಗಾಗಿ ಅವರನ್ನು ಇನ್ನುಳಿದ ಎರಡು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಸುವ ಮೂಲಕ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಅವರಿಗೆ ಅವಕಾಶ ಮಾಡಿಕೊಡಬೇಕು ಎಂಬ ಸಂದೇಶವನ್ನು ಬಿಜೆಪಿ ಹೈಕಮಾಂಡ್ ಕಡೆಗೆ ಮಠಾಧೀಶರು ರವಾನಿಸಿದ್ದಾರೆ. ಆದರೆ, ಕೇಂದ್ರ ನಾಯಕರು ಈಗಾಗಲೇ ನಿರ್ಧಾರವಾಗಿದ್ದು, ಯಾವುದೇ ಒತ್ತಡ, ಪ್ರತಿಭಟನೆಯಿಂದ ಏನೂ ಬದಲಾವಣೆಯಾಗುವುದಿಲ್ಲ.

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ, ದಿವಂಗತ ರಾಜಕಾರಣಿ ಎಸ್ ಆರ್ ಬೊಮ್ಮಾಯಿ ಅವರ ಪುತ್ರ. ಎಚ್ ಡಿ ದೇವೇಗೌಡ, ರಾಮಕೃಷ್ಣ ಹೆಗಡೆ ಕಾಲದ ಜನತಾ ಪರಿವಾರದಿಂದ ಬೆಳೆದು ಬಂದ ಬಸವರಾಜ ಬೊಮ್ಮಾಯಿ ಅವರು ಹಾಲಿ ಗೃಹ ಸಚಿವರಾಗಿದ್ದಾರೆ. ಬಿಎಸ್ ಯಡಿಯೂರಪ್ಪರ ಆಪ್ತ ಬಳಗದಲ್ಲಿರುವ ಬೊಮ್ಮಾಯಿ 2008ರಿಂದ ಬಿಜೆಪಿಯಲ್ಲಿದ್ದಾರೆ. ಜಲ ಸಂಪನ್ಮೂಲ ಖಾತೆ ಸಚಿವರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದರು.

ಮುರುಗೇಶ್ ನಿರಾಣಿ

ಮುರುಗೇಶ್ ನಿರಾಣಿ

ಗಣಿಗಾರಿಕೆ ಹಾಗೂ ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ್ ನಿರಾಣಿ ಅವರು ಪಂಚಮಶಾಲಿ ಲಿಂಗಾಯತ ಸಮುದಾಯದ ಮುಖಂಡರಾಗಿದ್ದಾರೆ. ಈ ಹಿಂದೆ ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ಕೈಗಾರಿಕಾ ಸಚಿವರಾಗಿ ಕರ್ನಾಟಕಕ್ಕೆ ಬಂಡಾವಳ ಹೂಡಿಕೆಯ ರಹದಾರಿ ತೋರಿಸಿದರು. ಯಡಿಯೂರಪ್ಪ ಅವರ ಜೊತೆಗೆ ವಿವಾದ, ಆರೋಪಗಳನ್ನು ಹೊತ್ತುಕೊಂಡವರು. ನಿರಾಣಿ ಒಡೆತನದ ಸಕ್ಕರೆ, ಇಂಧನ ಕ್ಷೇತ್ರದ ಉದ್ಯಮಗಳಲ್ಲಿ1 ಲಕ್ಷಕ್ಕೂ ಅಧಿಕ ನೌಕರರಿದ್ದಾರೆ. 90ರ ದಶಕದಿಂದ ಆರೆಸ್ಸೆಸ್ ಜೊತೆ ಗುರುತಿಸಿಕೊಂಡಿರುವ ನಿರಾಣಿ ಮೂರು ಬಾರಿ ಶಾಸಕರಾಗಿದ್ದಾರೆ.

ಅರವಿಂದ್ ಬೆಲ್ಲದ್

ಅರವಿಂದ್ ಬೆಲ್ಲದ್

ಎರಡು ಬಾರಿ ಶಾಸಕರಾಗಿರುವ ಅರವಿಂದ್ ಬೆಲ್ಲದ್ ಅವರು ಹುಬ್ಬಳ್ಳಿ -ಗದಗ ಭಾಗದಲ್ಲಿ ತಕ್ಕಮಟ್ಟಿನ ಜನಪ್ರಿಯತೆ ಹೊಂದಿದ್ದು, ಬೆಲ್ಲದ್ ಕುಟುಂಬ ಉದ್ಯಮದಲ್ಲೂ ಯಶಸ್ಸುಗೊಳಿಸಿದೆ. ಹಿರಿಯ ಶಾಸಕ ಚಂದ್ರಕಾಂತ್ ಬೆಲ್ಲದ್ ಅವರ ಪುತ್ರ ಅರವಿಂದ್ ಅವರು ಆರೆಸ್ಸೆಸ್ ಬೆಂಬಲ ಹೊಂದಿರುವ ರಾಜಕಾರಣಿ. ಉತ್ತರ ಕರ್ನಾಟಕ ಭಾಗದ ಎರಡನೇ ಪೀಳಿಗೆಯ ನೇತಾರ ಎಂದು ಬಿಂಬಿಸಲಾಗುತ್ತಿದ್ದು, ಅಚ್ಚರಿಯ ಹೆಸರಾಗಿ ಬೆಲ್ಲದ್ ಹೆಸರು ಸಿಎಂ ರೇಸ್ ಪಟ್ಟಿಯಲ್ಲಿ ಸೇರಿಕೊಂಡಿದೆ.

ಸಿ.ಟಿ ರವಿ

ಸಿ.ಟಿ ರವಿ

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಿ.ಟಿ ರವಿ ಅವರು ಸಂಘ ಪರಿವಾರದ ನೆಚ್ಚಿನ ಮುಖಂಡ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದಾರೆ. ಸಚಿವ ಸ್ಥಾನ ತೊರೆದು ತಮಿಳುನಾಡು ಚುನಾವಣೆ ಬಿಜೆಪಿ ಉಸ್ತುವಾರಿ ವಹಿಸಿಕೊಂಡು ಸಮರ್ಥವಾಗಿ ನಿಭಾಯಿಸಿದರು. ಸಂಘಟನಾ ಸಾಮರ್ಥ್ಯ ಹೊಂದಿರುವ ರವಿ ಅವರು ಹಿಂದುತ್ವವಾದಿಯಾಗಿ ಮತದಾರರನ್ನು ಒಗ್ಗೂಡಿಸಬಲ್ಲ ಶಕ್ತಿ ಹೊಂದಿದ್ದಾರೆ ಎಂದು ನಂಬಲಾಗಿದೆ. ಒಕ್ಕಲಿಗ ಸಮುದಾಯದ ಸಿಟಿ ರವಿ ಅವರು ನಾಲ್ಕು ಬಾರಿ ಶಾಸಕರಾಗಿದ್ದು,ಯಡಿಯೂರಪ್ಪ ಸರ್ಕಾರದ ವಿರುದ್ಧವೇ ದನಿಯೆತ್ತಿದ್ದರು.

ಸಿಎನ್ ಅಶ್ವಥ ನಾರಾಯಣ

ಸಿಎನ್ ಅಶ್ವಥ ನಾರಾಯಣ

ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ, ಐಟಿ ಬಿಟಿ ಸಚಿವರಾಗಿರುವ ಸಿಎನ್ ಅಶ್ವಥ ನಾರಾಯಣ ಯಾವುದೇ ಬಣದಲ್ಲಿ ಗುರುತಿಸಿಕೊಳ್ಳದೆ ತಟಸ್ಥವಾಗಿದ್ದಾರೆ. ವೃತ್ತಿಯಿಂದ ವೈದ್ಯರಾಗಿದ್ದು, ಮಲ್ಲೇಶ್ವರ ಕ್ಷೇತ್ರದ ಶಾಸಕರಾಗಿ ಎಲ್ಲಾ ಸಮುದಾಯದವರ ಒಲವು ಗಳಿಸಿದ್ದಾರೆ. ಕರ್ನಾಟಕದ ಎರಡನೇ ಪೀಳಿಗೆ ಯುವ ಮುಖವಾಗಿ ಆಯ್ಕೆ ಮಾಡಲು ಮಾನದಂಡವಾಗಬಲ್ಲುದು.

ಪ್ರಲ್ಹಾದ್ ಜೋಶಿ

ಪ್ರಲ್ಹಾದ್ ಜೋಶಿ

ಕೇಂದ್ರದ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಕೂಡಾ ಕರ್ನಾಟಕದ ಸಿಎಂ ಸ್ಥಾನಕ್ಕೆ ಪರಿಗಣಿಸಿ ಚರ್ಚಿಸಲಾಗಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಅನಂತ್ ಕುಮಾರ್ ನಂತರ ಪ್ರಲ್ಹಾದ್ ಜೋಶಿ ಅವರು ಉನ್ನತ ಸ್ಥಾನಮಾನ ಹೊಂದಿದ್ದಾರೆ. ಮೂರು ಬಾರಿ ಸಂಸದರಾಗಿದ್ದು, ಮೋದಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಆರೆಸ್ಸೆಸ್ ಬೆಂಬಲಿತ ಸಂಸದರಾಗಿದ್ದು, ಉತ್ತಮ ಆಡಳಿತಗಾರರಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ಕರ್ನಾಟಕದಲ್ಲಿ ಈ ಬಾರಿ ಬ್ರಾಹ್ಮಣ ಕೋಟಾದಿಂದ ಸಿಎಂ ಆಯ್ಕೆ ಬಹುತೇಕ ಇಲ್ಲ ಎಂಬ ಸುದ್ದಿ ಬಂದಿದೆ.

ಸುನೀಲ್ ಕುಮಾರ್

ಸುನೀಲ್ ಕುಮಾರ್

ಕರ್ನಾಟಕಕ್ಕೆ ಯುವ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಮುಂದಾಗಿರುವ ಬಿಜೆಪಿ ಹೈಕಮಾಂಡ್ ಅವರು ಸುನಿಲ್ ಕುಮಾರ್ ಅವರನ್ನು ಅಚ್ಚರಿಯ ಆಯ್ಕೆಯಾಗಿ ಪರಿಗಣಿಸಬಹುದಾಗಿದೆ. ಕರ್ನಾಟಕದ ಮುಖ್ಯ ವಿಪ್ ಆಗಿರುವ ಸುನಿಲ್ ಅವರು ಕರಾವಳಿ ಭಾಗದ ಮುಖಂಡರಾಗಿದ್ದಾರೆ. ಕೇರಳ ಬಿಜೆಪಿಯ ಸಹ ಪ್ರಭಾರಿಯಾಗಿದ್ದಾರೆ. ಹಿಂದುತ್ವ ಬಳಸಿ ರಾಜಕೀಯ ನಡೆಸುವ ರಾಜಕಾರಣಿಯಾಗಿದ್ದು, ಸಂಘ ಪರಿವಾರದ ಕಟ್ಟಾಳುವಾಗಿದ್ದಾರೆ. ಎಬಿವಿಪಿಯಿಂದ ಬೆಳೆದು ರಾಜಕಾರಣಿಯಾಗಿ ವಿವಿಧ ಹಂತದಲ್ಲಿ ಕಾರ್ಯನಿರ್ವಹಿಸಿದ್ದು, ತಳಮಟ್ಟದಿಂದ ಬೆಳೆದು ಬಂದವರಿಗೆ ಮನ್ನಣೆ ನೀಡಲು ಬಿಜೆಪಿ ಮುಂದಾಗಬಹುದು. ಸಿಟಿ ರವಿ ಜೊತೆಗೂಡಿ ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಪೀಠದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಸುನಿಲ್ ಅವರು ಆರೆಸ್ಸೆಸ್ ಮುಖಂಡರಾದ ಬಿಎಲ್ ಸಂತೋಷ್, ದತ್ತಾತ್ರೇಯ ಹೊಸಬಾಳೆ ಅವರ ಆಪ್ತ ಬಳಗದಲ್ಲೂ ಗುರುತಿಸಿಕೊಂಡಿದ್ದಾರೆ.

English summary
Who Will Be The Next CM of Karnataka? Who Are The Frontrunners For New CM of Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X