ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವಿಮಾನಸಂಸ್ಥೆ ಆರಂಭಿಸಿ ಒಂದು ವಾರಕ್ಕೆ ರಾಕೇಶ್ ಸಾವು; ಯಾರಿವರು ಬಿಗ್ ಬುಲ್?

|
Google Oneindia Kannada News

ಮುಂಬೈ: ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರೆನಿಸಿದ ರಾಕೇಶ್ ಝುಂಝುನುವಾಲಾ ಭಾನುವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. 62 ವರ್ಷದ ರಾಕೇಶ್ ಬೆಳಗ್ಗೆ 6:45ಕ್ಕೆ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ. ಮೂವರು ಮಕ್ಕಳನ್ನು ಅವರು ಅಗಲಿದ್ದಾರೆ.

ಬಹು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ರಾಕೇಶ್ ಝುಂಝುನುವಾಲ ಕಿಡ್ನಿ ಸಂಬಂಧಿತ ಅನಾರೋಗ್ಯಕ್ಕೆ ತುತ್ತಾಗಿ ಕೆಲ ವಾರಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಬಂಡವಾಳ ಹಾಕಿದ್ದ ಆಕಾಶ ಏರ್ ಎಂಬ ವಿಮಾನ ಸಂಸ್ಥೆ ಒಂದು ವಾರದ ಹಿಂದಷ್ಟೇ ಚಾಲನೆಗೊಂಡಿದೆ.

ಜನಪ್ರಿಯ ಉದ್ಯಮಿ, ಹೂಡಿಕೆದಾರ ರಾಕೇಶ್ ಇನ್ನಿಲ್ಲಜನಪ್ರಿಯ ಉದ್ಯಮಿ, ಹೂಡಿಕೆದಾರ ರಾಕೇಶ್ ಇನ್ನಿಲ್ಲ

ಆಕಾಶ ಏರ್ ವಿಮಾನಸಂಸ್ಥೆ ಉದ್ಘಾಟನೆಗೆ ವ್ಹೀಲ್ ಚೇರ್‌ನಲ್ಲೇ ಅವರು ಆಗಮಿಸಿದ್ದರು. ಸ್ವಾತಂತ್ರ್ಯೋತ್ಸವಕ್ಕೆ ಒಂದು ದಿನ ಮುನ್ನ ಅವರ ನಿವಾಸದಲ್ಲೇ ಹೃದಯಾಘಾತವಾಗಿದೆ. ನಂತರ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಉಳಿಯಲಿಲ್ಲ.

ರಾಕೇಶ್ ಝುಂಝುನುವಾಲ ಬಹು ಆಯಾಮಗಳ ಮತ್ತು ಬಹಳ ಮಹತ್ವಾಕಾಂಕ್ಷಿ ಹಾಗು ಸಾಹಸಿ ಉದ್ಯಮಿಯಾಗಿದ್ದರು. ಸ್ಟಾಕ್ ಮಾರ್ಕೆಟ್‌ನ ಸರದಾರರೆನಿಸಿದ್ದರು. ಷೇರುಪೇಟೆಯಿಂದ ಹಿಡಿದು ಇತ್ತೀಚೆಗೆ ಸ್ಥಾಪಿಸಿದ ಆಕಾಶ ಏರ್‌ಲೈನ್ಸ್‌ವರೆಗೂ ರಾಕೇಶ್ ಝುಂಝುನುವಾಲ ಅವರ ಉದ್ಯಮ ಪ್ರಯಾಣ ಮತ್ತು ಅವರ ಬಗೆಗಿನ ಕೆಲ ಕುತೂಹಲಕಾರಿ ಸಂಗತಿಗಳ ಸಂಕ್ಷಿಪ್ತ ವಿವರ ಇಲ್ಲಿ ಮುಂದಿದೆ.

ರಾಕೇಶ್ ಝುಂಝುನುವಾಲ ಯಾರು?

ರಾಕೇಶ್ ಝುಂಝುನುವಾಲ ಯಾರು?

ರಾಕೇಶ್ ಝುಂಝುನುವಾಲ ಹುಟ್ಟಿದ್ದು ಮುಂಬೈನಲ್ಲಿ 1960 ಜುಲೈ 5ರಂದು. ಅವರದ್ದು ರಾಜಸ್ಥಾನೀಯ ಕುಟುಂಬ. ರಾಜಸ್ಥಾನದ ಝುಂಝುನು ಪ್ರದೇಶದ ಮೂಲದವರು. ಝುಂಝುನುವಾಲ ಷೇರುಪೇಟೆ ಹೂಡಿಕೆದಾರರಾಗಿ ಹೆಚ್ಚು ಚಿರಪರಿಚಿತ.

ಇವರ ತಂದೆ ಆದಾಯ ತೆರಿಗೆ ಇಲಾಖೆಯ ಆಯುಕ್ತರಾಗಿದ್ದರು. ಚಾರ್ಟರ್ಡ್ ಅಕೌಂಟೆಂಟ್ ಓದಿದ ರಾಕೇಶ್ ಝುಂಝುನುವಾಲ ಮುಂಬರುವ ದಿನಗಳಲ್ಲಿ ಸ್ಟಾಕ್ ಮಾರ್ಕೆಟ್‌ನ ಕಿಂಗ್ ಆಗುವ ಮಟ್ಟಕ್ಕೆ ಬೆಳೆದರು. ಇವರ ಈಗಿನ ಆಸ್ತಿ ಮೌಲ್ಯ 5.5 ಬಿಲಿಯನ್ ಡಾಲರ್ (ಸುಮಾರು 48 ಸಾವಿರ ಕೋಟಿ ರೂ). ಇವರು ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 36ನೇ ಸ್ಥಾನದಲ್ಲಿದ್ದಾರೆ.

ರಾಕೇಶ್ ಝುಂಝುನುವಾಲ ಅವರ ಪತ್ನಿ ರೇಖಾ ಕೂಡ ಷೇರುಪೇಟೆ ವ್ಯವಹಾರಸ್ಥೆ. ಇವರಿಗೆ ಮೂವರು ಮಕ್ಕಳಿದ್ದಾರೆ. ಒಬ್ಬ ಮಗಳು ಮತ್ತು ಇಬ್ಬರು ಗಂಡುಮಕ್ಕಳು.

ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ದಲಾಲ್ ಸ್ಟ್ರೀಟ್‌ನ ಬಿಗ್‌ ಬುಲ್ ರಾಕೇಶ್ ಜುಂಜುನ್‌ ವಾಲ ನೀಡಿರುವ ಸಲಹೆಗಳಿವುಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ದಲಾಲ್ ಸ್ಟ್ರೀಟ್‌ನ ಬಿಗ್‌ ಬುಲ್ ರಾಕೇಶ್ ಜುಂಜುನ್‌ ವಾಲ ನೀಡಿರುವ ಸಲಹೆಗಳಿವು

ಬಿಗ್ ಬುಲ್ ರಾಕೇಶ್

ಬಿಗ್ ಬುಲ್ ರಾಕೇಶ್

ರಾಕೇಶ್ ಝುಂಝುನುವಾಲ ಅವರನ್ನು ಭಾರತದ ವಾರೆನ್ ಬಫೆಟ್ ಎಂದೂ ಕರೆಯುತ್ತಾರೆ. ಭಾರತದ ಷೇರುಪೇಟೆಯ ಸರದಾರ ಎನಿಸಿದ್ದಾರೆ. ಭಾರತದ ಬಿಗ್ ಬುಲ್ ಎಂದೂ ಸಂಬೋಧಿಸಲಾಗುತ್ತದೆ.

ಮುಂಬೈನ ದಲಾಲ್ ಸ್ಟ್ರೀಟ್‌ನಲ್ಲಿರುವ ಷೇರುಪೇಟೆಗೂ ರಾಕೇಶ್ ಝುಂಝುನುವಾಲಗೂ ಅಪಾರ ನಂಟು. ಬಿಎಸ್‌ಇ ಸೂಚ್ಯಂಕ 1985ರಲ್ಲಿ 150 ಅಂಕಗಳ ಮಟ್ಟದಲ್ಲಿ ಇದ್ದಾಗ ರಾಕೇಶ್ ಝುಂಝುನುವಾಲ ಹೂಡಿಕೆ ಮಾಡಲು ಆರಂಭಿಸಿದ್ದರು. ಆಗಲೇ ಅವರು 5 ಸಾವಿರ ರೂ ಹೂಡಿಕೆ ಮಾಡಿದ್ದರು. ಈಗ ಬಿಎಸ್‌ಇ ಸೆನ್ಸೆಕ್ಸ್ ಹೆಚ್ಚೂಕಡಿಮೆ 60 ಸಾವಿರ ಅಂಕಗಳ ಮಟ್ಟಕ್ಕೆ ಬೆಳೆದು ನಿಂತಿದೆ.

ರಾಕೇಶ್ ತಂದೆ ರಾಧೇಶ್ಯಾಮ್ ಝುಂಝುನುವಾಲ ಐಟಿ ಅಧಿಕಾರಿ ಆಗದ್ದಲ್ಲದೇ ಷೇರುಪೇಟೆ ಬಗ್ಗೆ ಬಹಳ ಆಸಕ್ತಿ ಹೊಂದಿದ್ದವರು. ಅಪ್ಪ ತನ್ನ ಸ್ನೇಹಿತರ ಜೊತೆ ಷೇರುಮಾರುಕಟ್ಟೆಯ ವಿಚಾರಗಳನ್ನು ಮಾತನಾಡುವುದನ್ನು ಕೇಳಿಸಿಕೊಳ್ಳುತ್ತಾ ರಾಕೇಶ್‌ಗೂ ಷೇರುಪೇಟೆ ಮೇಲೆ ಆಸಕ್ತಿ ಉಂಟಾಗಿತ್ತು. ಅಪ್ಪನ ಸಲಹೆಗಳ ಸಹಾಯದಿಂದ ಷೇರುಪೇಟೆಯಲ್ಲಿ ರಾಕೇಶ್ ಹೂಡಿಕೆ ಮಾಡಲು ಆರಂಭಿಸಿದರು. ಅಪ್ಪ ಹೂಡಿಕೆ ಸಲಹೆ ಕೊಡುತ್ತಿದ್ದರಾದರೂ ಹೂಡಿಕೆಗೆ ಹಣ ಕೊಡಲು ನಿರಾಕರಿಸುತ್ತಿದ್ದರು. ರಾಕೇಶ್ ತಮ್ಮ ಸೋದರರ ಗ್ರಾಹಕರ ಮನವೊಲಿಸಿ ಅವರಿಂದ ಹಣ ಪಡೆದು ಷೇರುಪೇಟೆಯಲ್ಲಿ ಹೂಡಿಕೆ ಮಾಡುತ್ತಿದ್ದರು.

1985ರಲ್ಲಿ ಐದು ಸಾವಿರದಿಂದ ಹೂಡಿಕೆ ಆರಂಭಿಸಿದ ರಾಕೇಶ್ ಒಂದೇ ವರ್ಷದಲ್ಲಿ 5 ಲಕ್ಷ ರೂ ಲಾಭ ಗಳಿಸಿದ್ದರು. 1989ರಷ್ಟರಲ್ಲಿ 20-25 ಲಕ್ಷ ರೂ ಲಾಭ ಸಿಕ್ಕಿತು. ಆಗಿನ ಕಾಲಕ್ಕೆ ಅಷ್ಟು ಲಾಭ ಬಹಳ ದೊಡ್ಡದು. ಝುಂಝುನುವಾಲ ಅವರು ಷೇರುಪೇಟೆಯಲ್ಲಿ ಈಗ ಮಾಡಿರುವ ಒಟ್ಟಾರೆ ಹೂಡಿಕೆ ಬರೋಬ್ಬರಿ 11 ಸಾವಿರ ಕೋಟಿ ರೂ. ಟೈಟನ್ ಕಂಪನಿಯೊಂದರಲ್ಲೇ ಅವರು 7 ಸಾವಿರ ಕೋಟಿ ರೂ ಮೌಲ್ಯದಷ್ಟು ಷೇರುಗಳನ್ನು ಹೊಂದಿದ್ದಾರೆ.

ರಾಕೇಶ್ ವ್ಯವಹಾರ ಮತ್ತು ವೃತ್ತಿಜೀವನ

ರಾಕೇಶ್ ವ್ಯವಹಾರ ಮತ್ತು ವೃತ್ತಿಜೀವನ

ರಾಕೇಶ್ ಝುಂಝುನುವಾಲ ಕೇವಲ ಷೇರುಪೇಟೆಯಲ್ಲಿ ಹೂಡಿಕೆ ಮಾಡುತ್ತಿದ್ದುದು ಮಾತ್ರವಲ್ಲ ಇನ್ನೂ ಅನೇಕ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು. ಆ್ಯಪ್‌ಟೆಕ್ ಲಿಮಿಟೆಡ್, ಹಂಗಾಮ ಡಿಜಿಟಲ್ ಮೀಡಿಯಾ ಎಂಟರ್ಟೈನ್ಮೆಂಟ್ ಸಂಸ್ಥೆಗಳ ಮಾಲೀಕರಾಗಿದ್ದರು.

ಪ್ರೇಮ್ ಫೋಕಸ್, ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್, ಬಿಲ್‌ಕೇರ್ ಲಿ, ಪ್ರಜ್ ಇಂಡಸ್ಟ್ರೀಸ್, ಪ್ರೊವೋಗ್ ಇಂಡಿಯಾ ಲಿ, ಕಾನ್‌ಕಾರ್ಡ್ ಬಯೋಟೆಕ್ ಲಿ, ಇನ್ನೋವಾಸಿಂತ್ ಟೆಕ್ನಾಲಜೀಸ್, ಮಿಡ್ ಡೇ ಮಲ್ಟಿಮೀಡಿಯಾ ಲಿ, ನಾಗಾರ್ಜುನ ಕಸ್ಟ್ರಕ್ಷನ್ ಕಂಪನಿ, ವೈಸ್‌ರಾಯ್ ಹೋಟೆಲ್ಸ್, ಟಾಪ್ಸ್ ಸೆಕ್ಯೂರಿಟಿ ಲಿ ಸೇರಿದಂತೆ ಹಲವು ಕಂಪನಿಗಳ ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದಾರೆ.

ಟೈಟಾನ್ ಕಂಪನಿ ಮಾತ್ರವಲ್ಲದೇ ಸ್ಟಾರ್ ಹೆಲ್ತ್ ಇನ್ಷೂರೆನ್ಸ್, ಮೆಟ್ರೋ ಬ್ಯಾಂಡ್ಸ್, ಕಾನ್‌ಕಾರ್ಡ್ ಬಯೋಟೆಕ್ ಮೊದಲಾದ ಸಂಸ್ಥೆಗಳ ಬಹಳಷ್ಟು ಷೇರುಗಳನ್ನು ಹೊಂದಿದ್ದಾರೆ. ಹಾಗೆಯೆ, ಮೂರು ಬಾಲಿವುಡ್ ಸಿನಿಮಾಗಳ ನಿರ್ಮಾಪಕರೂ ಆಗಿದ್ದಾರೆ. ಅವರ ಹೊಸ ಸಾಹಸ ಆಕಾಶ ಏರ್‌ಲೈನ್ಸ್ ಆಗಿತ್ತು.

ಆಕಾಶ ಏರ್ ಏರ್‌ಲೈನ್ಸ್ ಕಥೆ

ಆಕಾಶ ಏರ್ ಏರ್‌ಲೈನ್ಸ್ ಕಥೆ

ರಾಕೇಶ್ ಝುಂಝುನುವಾಲ ಷೇರುಪೇಟೆಯಲ್ಲಿ ಹೂಡಿಕೆ ಮಾಡಿದ್ದೆಲ್ಲವೂ ಚಿನ್ನದ ಮೊಟ್ಟೆಯಾಗಿ ಪರಿಣಮಿಸಿ ಲಾಭ ಮಾಡಿದ್ದಿದೆ. ಸಾವಿರಾರು ಕೋಟಿ ರೂ ಲಾಭ ಮಾಡಿಕೊಂಡ ರಾಕೇಶ್ ಇತ್ತೀಚೆಗೆ ಆಕಾಶ ಏರ್‌ಲೈನ್ಸ್ ಎಂಬ ಹೊಸ ವೈಮಾನಿಕ ಸಂಸ್ಥೆಯನ್ನು ಸ್ಥಾಪಿಸಿ ಹಲವರ ಹುಬ್ಬೇರಿಸಿದ್ದರು.

ವೈಮಾನಿಕ ಕ್ಷೇತ್ರ ಬಹಳ ಅಪಾಯದ ಹಾಗೂ ನಷ್ಟ ಹೆಚ್ಚು ಇರುವ ಕ್ಷೇತ್ರವಾಗಿ ಪರಿಣಿಮಿಸಿದೆ. ಇಂಥ ಹೊತ್ತಲ್ಲಿ ಝುಂಝುನುವಾಲ ಹೊಸ ವಿಮಾನ ಸಂಸ್ಥೆ ಸ್ಥಾಪಿಸಿದ್ದು ಅಚ್ಚರಿಯೇ. ಅದರಲ್ಲೂ ಅತ್ಯಂತ ಕಡಿಮೆ ದರದಲ್ಲಿ ವೈಮಾನಿಕ ಸೇವೆ ಆರಂಭಿಸುವ ದೃಷ್ಟಿಯಿಂದ ಅವರು ಇದನ್ನು ಸ್ಥಾಪಿಸಿದ್ದರು.

ಜೆಟ್ ಏರ್‌ವೇಸ್ ಸಂಸ್ಥೆಯ ಮಾಜಿ ಸಿಇಒ ವಿನಯ್ ದುಬೆ, ಗೋ ಫಸ್ಟ್ ಸಂಸ್ಥೆಯ ಮಾಜಿ ಸಿಒಒ ಪ್ರವೀಣ್ ಅಯ್ಯರ್ ಮತ್ತು ಇಂಡಿಗೋ ಏರ್‌ಲೈನ್ಸ್‌ನ ಮಾಜಿ ಅಧ್ಯಕ್ಷ ಆದಿತ್ಯ ಘೋಷ್ ಅಗ್ಗದ ಪ್ರಯಾಣ ದರದಲ್ಲಿ ವೈಮಾನಿಕ ಸೇವೆ ಒದಗಿಸುವ ದೃಷ್ಟಿಯಿಂದ ಆಕಾಶ ಏರ್ ಎಂಬ ಸಂಸ್ಥೆ ಸ್ಥಾಪಿಸುವ ಯೋಜನೆ ಹಾಕಿದರು. 2021 ಜುಲೈನಲ್ಲಿ ರಾಕೇಶ್ ಝುಂಝುನುವಾಲ ಈ ಏರ್‌ಲೈನ್ಸ್‌ಗೆ ಬಂಡವಾಳ ಒದಗಿಸಿದರು.

ನಷ್ಟವೇ ಹೆಚ್ಚಿರುವ ಸಂದರ್ಭದಲ್ಲಿ ಇದು ಯಾಕೆ ಬೇಕು ಎಂದು ಹಲವರು ಸಲಹೆ ನೀಡಿದರೂ ರಾಕೇಶ್ ಝುಂಝುನುವಾಲ ಕೇಳದೇ ಈ ಸಾಹಸಕ್ಕೆ ಕೈಹಾಕಿದ್ದರು.

"ಯಾಕೆ ನಾನು ಏರ್‌ಲೈನ್ ಆರಂಭಿಸಿದೆ ಎಂದು ಬಹಳ ಜನ ಕೇಳುತ್ತಾರೆ. ಪ್ರಯತ್ನ ಹಾಕದೇ ಇರುವುದಕ್ಕಿಂತ ಏನಾದರೂ ಪ್ರಯತ್ನಿಸಿ ವಿಫಲವಾಗುವುದೇ ಉತ್ತಮ," ಎಂದು ರಾಕೇಶ್ ಝುಂಝುನುವಾಲ ಒಮ್ಮೆ ಹೇಳಿದ್ದರು.

ಈ ಹೇಳಿಕೆ ಅವರ ಇಡೀ ಜೀವನದ ಪ್ರತಿಬಿಂಬ ಎಂದರೆ ತಪ್ಪಾಗಲಾರದು.

ರಾಕೇಶ್ ಮಹಾ ದಾನಿ

ರಾಕೇಶ್ ಮಹಾ ದಾನಿ

ರಾಕೇಶ್ ಝುಂಝುನುವಾಲ ಪಕ್ಕಾ ವ್ಯವಹಾರಸ್ಥನಾದರೂ ದಾನಗಳಲ್ಲಿ ಎತ್ತಿದ ಕೈ. ತಮ್ಮ ಬಹಳಷ್ಟು ಆದಾಯದ ಹಣವನ್ನು ಸಮಾಜ ಕಾರ್ಯಗಳಿಗೆ ವಿನಿಯೋಗಿಸುತ್ತಾರೆ. ಅವರು ಷೇರುಪೇಟೆಯಲ್ಲಿ ಮಾಡಿರುವ ಹೂಡಿಕೆಗಳಿಂದ ಕೋಟಿಗಟ್ಟಲೆ ಹಣ ಡಿವಿಡೆಂಡ್ ರೂಪದಲ್ಲಿ ಬರುತ್ತಿರುತ್ತದೆ. 2021 ಜುಲೈ ತಿಂಗಳಲ್ಲಿ ಅವರು 50 ಕೋಟಿ ರೂ ದಾನ ಮಾಡಿದ್ದರು. ಅಲ್ಲದೇ, 5 ಸಾವಿರ ಕೋಟಿ ರೂ ಹಣವನ್ನು ದಾನವಾಗಿ ಕೊಡುವ ನಿರ್ಧಾರ ಮಾಡಿದ್ದರೆನ್ನಲಾಗಿದೆ.

ಕ್ಯಾನ್ಸರ್ ಸಂತ್ರಸ್ತ ಮಕ್ಕಳನ್ನು ಪಾಲನೆ ಮಾಡುವ ಸೇಂಟ್ ಜ್ಯೂಡ್ ಎಂಬ ಸಂಸ್ಥೆಗೆ ನಿಯಮಿತವಾಗಿ ದಾನ ಮಾಡುತ್ತಿದ್ದರು. ಲೈಂಗಿಕ ಕಿರುಕುಳದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅಗಸ್ತ್ಯ ಫೌಂಡೇಶನ್ ಮತ್ತು ಅರ್ಪಣ್ ಸಂಸ್ಥೆಗಳಿಗೂ ರಾಕೇಶ್ ದಾನ ಮಾಡುತ್ತಿರುತ್ತಿದ್ದರು. ಅಶೋಕ ವಿಶ್ವವಿದ್ಯಾಲಯ, ಒಲಿಂಪಿಕ್ ಗೋಲ್ಡ್ ಕ್ವೆಸ್ಟ್, ಫ್ರೆಂಡ್ಸ್ ಆಫ್ ಟ್ರೈಬಲ್ಸ್ ಇತ್ಯಾದಿ ಸಂಸ್ಥೆ ಮತ್ತು ಯೋಜನೆಗಳಿಗೆ ಅವರು ನೆರವಾಗುತ್ತಿದ್ದರು.

(ಒನ್ಇಂಡಿಯಾ ಸುದ್ದಿ)

English summary
India's stock market king and multi portfolio investor Rakesh JhunJhunwala passed away on August 14th. Here are some interesting details about his personal life and professional life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X