• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭ್ರಷ್ಟಾಚಾರ ವಿರೋಧಿ ಹೋರಾಟದಿಂದ 1 ರೂ ದಂಡದವರೆಗೆ: ಪ್ರಶಾಂತ್ ಭೂಷಣ್ ಬದುಕಿನ ಚಿತ್ರಣ

|

ದೇಶದಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾಗುತ್ತಿರುವ ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕತೆಯ ಸಂಗತಿಗಳ ನಡುವೆ ಗಮನ ಸೆಳೆಯುತ್ತಿರುವ ಸಂಗತಿಯೆಂದರೆ ನ್ಯಾಯಾಂಗ ನಿಂದನೆ. ದೇಶದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣಗಳು ಹೊಸತಲ್ಲ. ಆದರೆ ವಕೀಲರೊಬ್ಬರು ಸುಪ್ರೀಂಕೋರ್ಟ್ ಕುರಿತು ನೀಡಿದ ಹೇಳಿಕೆಗಳಿಗೆ ಎರಡು ಪ್ರತ್ಯೇಕ ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಎದುರಿಸುತ್ತಿರುವುದು ಮತ್ತು ಈ ಪ್ರಕರಣಗಳಲ್ಲಿ ಸುತಾರಾಂ ಕ್ಷಮೆಯಾಚಿಸುವುದಿಲ್ಲ ಎಂದು ಪಟ್ಟು ಹಿಡಿದಿರುವುದು ತೀವ್ರ ಚರ್ಚೆಗೆ ಒಳಗಾಗಿದೆ.

ಪ್ರಶಾಂತ್ ಭೂಷಣ್ , ಸಿಜೆಐ ಬೋಬ್ಡೆ ಅವರು ಐಷಾರಾಮಿ ಬೈಕ್ ಮೇಲೆ ಕುಳಿತ ಫೋಟೊವೊಂದನ್ನು ಟೀಕಿಸಿ ಟ್ವೀಟ್ ಮಾಡಿದ್ದರು. ಇದರ ವಿರುದ್ಧ ದಾಖಲಾದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತೀವ್ರ ಚರ್ಚೆಯ ಬಳಿಕ ಸುಪ್ರೀಂಕೋರ್ಟ್ ವಿಧಿಸಿರುವ ಶಿಕ್ಷೆಯೆಂದರೆ ಒಂದು ರೂ. ದಂಡ. 15 ದಿನಗಳ ಒಳಗಾಗಿ ಆ ದಂಡ ಪಾವತಿ ಮಾಡದೆ ಹೋದರೆ 3 ತಿಂಗಳ ಶಿಕ್ಷೆ ಅಥವಾ 3 ವರ್ಷ ವಕೀಲಿಕೆಯಿಂದ ನಿರ್ಬಂಧ ಎದುರಿಸಬಹುದು. ಈ ತೀರ್ಪು ಮತ್ತಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

ನ್ಯಾಯಾಂಗ ನಿಂದನೆ ಪ್ರಕರಣ: ವಕೀಲ ಪ್ರಶಾಂತ್ ಭೂಷಣ್‌ಗೆ 1 ರೂ ದಂಡ!

ನ್ಯಾಯಾಂಗ ವ್ಯವಸ್ಥೆಗೆ ಪ್ರಶಾಂತ್ ಭೂಷಣ್ ಮತ್ತು ಪ್ರಶಾಂತ್ ಭೂಷಣ್ ಅವರಿಗೆ ನ್ಯಾಯಾಂಗ ವ್ಯವಸ್ಥೆ ಹೊಸತಲ್ಲ. ಜತೆಗೆ ರಾಜಕೀಯ ವಲಯದೊಂದಿಗೆ ಅವರ ನಂಟು ಇದೆ. ಸೈದ್ಧಾಂತಿಕ ಕಾರಣಗಳಿಂದ ಪ್ರಶಾಂತ್ ಭೂಷಣ್ ರಾಜಕೀಯವಾಗಿ ಒಂದು ವರ್ಗದ ಪ್ರೀತಿ ಮತ್ತೊಂದು ವರ್ಗದ ದ್ವೇಷಕ್ಕೆ ಒಳಗಾಗುತ್ತಲೇ ಇದ್ದಾರೆ. ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರದಲ್ಲಿಯೂ ಅವರಿಗೆ ಒಂದು ವಲಯದಿಂದ ದೊಡ್ಡ ಮಟ್ಟದಲ್ಲಿಯೇ ಬೆಂಬಲ ವ್ಯಕ್ತವಾಗಿತ್ತು ಎನ್ನುವುದು ಗಮನಾರ್ಹ. ಪ್ರಶಾಂತ್ ಭೂಷಣ್ ಅವರ ಬದುಕಿನ ಬಗ್ಗೆ ಸಣ್ಣ ನೋಟ ಇಲ್ಲಿದೆ. ಮುಂದೆ ಓದಿ...

ಓದು, ಬರಹ

ಓದು, ಬರಹ

ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಶಾಂತಿ ಭೂಷಣ್ ಮತ್ತು ಕುಮುದ ಭೂಷಣ್ ಅವರ ನಾಲ್ವರು ಮಕ್ಕಳಲ್ಲಿ ಹಿರಿಯ ಮಗ ಪ್ರಶಾಂತ್ ಭೂಷಣ್. ಐಐಟಿ ಮದ್ರಾಸ್‌ನಲ್ಲಿ ಎಂಜಿನಿಯರಿಂಗ್ ಸೇರಿದ ಅವರು ಒಂದು ಸೆಮೆಸ್ಟರ್ ಬಳಿಕ ಅದನ್ನು ತ್ಯಜಿಸಿದರು. ಮನೆಯಿಂದ ದೂರ ಇದ್ದು ಓದಲು ಆಗುವುದಿಲ್ಲ ಎಂದು ವಾಪಸಾದರು. 1974-76ರ ಇಂದಿರಾಗಾಂಧಿ ಚುನಾವಣೆಯ ಪ್ರಕರಣದ ವಿಚಾರಣೆ ನಡೆದಾಗ ಅಲಹಾಬಾದ್ ಮತ್ತು ಸುಪ್ರೀಂಕೋರ್ಟ್ ಎರಡರ ವಿಚಾರಣೆಯಲ್ಲಿಯೂ ಹಾಜರಿದ್ದ ಅವರಿಗೆ ಕಾನೂನು ಕುರಿತು ಆಸಕ್ತಿ ಮೂಡಿತು. ಬಳಿಕ ಅಲಹಾಬಾದ್ ವಿ.ವಿಯಿಂದ ಕಾನೂನು ಪದವಿ ಪೂರೈಸಿದರು. ಈ ಪ್ರಕರಣದ ಕುರಿತು ವಿದ್ಯಾರ್ಥಿ ದೆಸೆಯಲ್ಲಿಯೇ ಅವರು 'ದಿ ಕೇಸ್ ದಟ್ ಶುಕ್ ಇಂಡಿಯಾ' ಎಂಬ ಪುಸ್ತಕ ಬರೆದಿದ್ದರು.

ಫಿಲಾಸಫಿಯ ಆಸಕ್ತಿ

ಫಿಲಾಸಫಿಯ ಆಸಕ್ತಿ

ಫಿಲಾಸಫಿ, ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಅವರ ಆಸಕ್ತಿಯ ವಿಷಯಗಳಾಗಿದ್ದವು. ಕಾನೂನು ಪದವಿ ಪಡೆದ ಬಳಿಕವೂ ತತ್ವಶಾಸ್ತ್ರಜ್ಞನಾಗುವ ಆಸೆ ಬತ್ತಿರಲಿಲ್ಲ. ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ಸ್ಕಾಲರ್‌ಶಿಪ್ ಜತೆಗೆ ಪ್ರವೇಶ ಪಡೆದರು. ಆದರೆ ಆ ಕ್ಷೇತ್ರದಲ್ಲಿ ಬೌದ್ಧಿಕ ಮಾತುಗಳ ಆಟವೇ ಇದ್ದು ಬೇರೇನೂ ಇಲ್ಲ ಎನಿಸಿ ಹಿಂದಿರುಗಿದರು. 1983ರಲ್ಲಿ ವಕೀಲರಾಗಿ ನೋಂದಣಿ ಮಾಡಿಸಿಕೊಂಡರು.

ನ್ಯಾ. ಕರ್ಣನ್ ವಿಚಾರದಲ್ಲಿ ಕುರುಡಾಗಿದ್ದ ಭಾರತ, ಪ್ರಶಾಂತ್ ಭೂಷಣ್ ವಿಚಾರದಲ್ಲಿ ಎಚ್ಚೆತ್ತಿದೆ...

ಫೀಸು ಪಡೆಯದ ಕೇಸುಗಳೇ ಹೆಚ್ಚು

ಫೀಸು ಪಡೆಯದ ಕೇಸುಗಳೇ ಹೆಚ್ಚು

ವಕೀಲರಾಗಿದ್ದ ತಂದೆ ಶಾಂತಿ ಭೂಷಣ್ ಅವರಿಂದ ಪ್ರಭಾವಿತರಾಗಿ ಆರಂಭದಿಂದಲೇ ಸಾರ್ವಜನಿಕ ಚಳವಳಿಗಳಲ್ಲಿ ತೊಡಗಿಸಿಕೊಂಡರು. ಮಾನವಹಕ್ಕುಗಳು, ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಸೇವೆಯಲ್ಲಿರುವವರ ಹೊಣೆಗೇಡಿತನಗಳ ವಿಚಾರಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಸಂಬಂಧ ಅನೇಕ ಸಂಘಟನೆಗಳ ಜತೆಗೆ ನಿಕಟ ಸಂಬಂಧ ಹೊಂದಿದ್ದಾರೆ. ಸದುದ್ದೇಶದಿಂದ ಕೂಡಿದ ಸುಮಾರು 500 ಪ್ರಕರಣಗಳನ್ನು ಅವರು ನಡೆಸಿದ್ದಾರೆ. ಹಣ ಪಡೆದು ವಕೀಲಕೆ ಮಾಡುವ ಪ್ರಕರಣಗಳಿಗೆ ಕೇವಲ ಶೇ 25ರಷ್ಟು ಸಮಯವನ್ನಷ್ಟೇ ನೀಡುತ್ತಿರುವ ಬಗ್ಗೆ ಮತ್ತು ಇತರೆ ವಕೀಲರು ವಿಧಿಸುವ ಶುಲ್ಕದ ಶೇ 5ರಷ್ಟು ಮಾತ್ರ ಪಡೆಯುತ್ತಿರುವುದಾಗಿ ಅವರು ಹೇಳಿಕೊಂಡಿದ್ದರು.

ಭ್ರಷ್ಟಾಚಾರದ ವಿರುದ್ಧದ ಸಮಿತಿ

ಭ್ರಷ್ಟಾಚಾರದ ವಿರುದ್ಧದ ಸಮಿತಿ

1990ರಲ್ಲಿ ತಂದೆಯ ಜತೆಗೂಡಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ವಿರುದ್ಧ ಹೋರಾಟಕ್ಕೆ ನ್ಯಾಯಾಂಗ ಹೊಣೆಗೇಡಿತನ ಸಮಿತಿಯನ್ನು ರಚಿಸಿದ್ದರು. ಇದರಲ್ಲಿ ಮಾಜಿ ನ್ಯಾಯಾಧೀಶರು ಮತ್ತು ವಕೀಲರು ಇದ್ದರು. ಭ್ರಷ್ಟಾಚಾರದ ಆರೋಪ ಎದುರಿಸಿದ್ದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ವಿ. ರಾಮಸ್ವಾಮಿ ಅವರನ್ನು ಸಂಸತ್ ವಾಗ್ದಂಡನೆಗೆ ಗುರಿಪಡಿಸದ ಕಾರಣ ತಮ್ಮ ಸಮಿತಿಯೊಳಗೆ ನಾಗರಿಕರನ್ನೂ ಸೇರಿಸಿಕೊಂಡು ನ್ಯಾಯಾಂಗ ಹೊಣೆಗೇಡಿತನ ಮತ್ತು ಸುಧಾರಣೆಯ ಆಂದೋಲನ (ಸಿಜೆಎಆರ್) ಆರಂಭಿಸಿದರು.

ನ್ಯಾಯಾಂಗ ನಿಂದನೆ

ನ್ಯಾಯಾಂಗ ನಿಂದನೆ

ನ್ಯಾಯಮೂರ್ತಿಗಳನ್ನು ಆರ್‌ಟಿಐ ವ್ಯಾಪ್ತಿಗೆ ತರುವ, ಅವರು ತಮ್ಮ ಆಸ್ತಿ ವಿವರಗಳನ್ನು ಘೋಷಿಸುವ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2009ರಲ್ಲಿ ತೆಹೆಲ್ಕಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಸುಪ್ರೀಂಕೋರ್ಟ್‌ನ 16 ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಲ್ಲಿ ಕನಿಷ್ಠ ಅರ್ಧದಷ್ಟು ಮಂದಿ ಭ್ರಷ್ಟರಾಗಿದ್ದರು ಎಂದು ಆರೋಪಿಸಿದ್ದರು. ಇದರ ವಿರುದ್ಧ ವಕೀಲ ಹರೀಶ್ ಸಾಳ್ವೆ ನ್ಯಾಯಾಂಗ ನಿಂದನೆ ದೂರು ಸಲ್ಲಿಸಿದ್ದರು. ಇದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸುವಲ್ಲಿ ಭೂಷಣ್ ವಿಫಲರಾಗಿದ್ದರು. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

ವಿವಿಧ ಹಗರಣಗಳ ಹೋರಾಟ

ವಿವಿಧ ಹಗರಣಗಳ ಹೋರಾಟ

1990ರಲ್ಲಿ ಬೋಫೋರ್ಸ್ ಹಗರಣದ ಬಗ್ಗೆ ಅವರು 'ದಿ ಸೆಲ್ಲಿಂಗ್ ಆಫ್ ಎ ನೇಷನ್' ಎಂಬ ಪುಸ್ತಕ ಬರೆದಿದ್ದರು. ಸಂಸತ್ ಒಪ್ಪಿಗೆ ಇಲ್ಲದೆ ಎಚ್‌ಪಿ ಮತ್ತು ಬಿಪಿಗಳನ್ನು ಖಾಸಗೀಕರಣ ಮಾಡುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ 2003ರಲ್ಲಿ ಸುಪ್ರೀಂಕೋರ್ಟ್ ಹೋರಾಟದ ಮೂಲಕ ತಡೆ ತಂದಿದ್ದರು. ಭ್ರಷ್ಟಾಚಾರದ ಆರೋಪದಲ್ಲಿ ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿ ನೀರಾ ಯಾದವ್ ಅವರನ್ನು ಶಿಕ್ಷೆಗೆ ಗುರಿಯಾಗಿಸುವಲ್ಲಿ ಭೂಷಣ್ ಮುಖ್ಯ ಪಾತ್ರ ವಹಿಸಿದರು. 2ಜಿ ತರಂಗಾಂತರ ಹಂಚಿಕೆ ಹಗರಣ, ಕಲ್ಲಿದ್ದಲು ಹಂಚಿಕೆ ಹಗರಣ, ವ್ಯಾಪಂ ಹಗರಣ ಮುಂತಾದವುಗಳ ವಿರುದ್ಧ ಭೂಷಣ್ ಕಾನೂನು ಸಮರ ನಡೆಸಿದ್ದರು.

ಬುಡಕಟ್ಟು ಜನರ ಪ್ರದೇಶದಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆಯನ್ನು ಭೂಷಣ್ ಟೀಕಿಸಿದ್ದರು. 2008ರ ಮುಂಬೈ ದಾಳಿಯ ವೇಳೆ ಬಂಧಿತನಾಗಿದ್ದ ಉಗ್ರ ಅಜ್ಮಲ್ ಕಸಬ್‌ಗೆ ಗಲ್ಲು ಶಿಕ್ಷೆ ಜಾರಿ ಮಾಡುವುದನ್ನು ಖಂಡಿಸಿದ್ದರು. ಗಲ್ಲು ಶಿಕ್ಷೆಯನ್ನು ರದ್ದುಗೊಳಿಸುವ ವಿಚಾರದಲ್ಲಿಯೂ ಭೂಷಣ್ ಹಲವು ಪ್ರಯತ್ನಗಳನ್ನು ನಡೆದಿದ್ದಾರೆ. ನರ್ಮದಾ ಬಚಾವೋ ಆಂದೋಲನ, ಭೋಪಾಲ್ ಅನಿಲ ದುರಂತ ಮುಂತಾದವುಗಳ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.

ಚಳವಳಿ ಮತ್ತು ಎಎಪಿ

ಚಳವಳಿ ಮತ್ತು ಎಎಪಿ

ಪ್ರಶಾಂತ್ ಭೂಷಣ್ ರಾಜಕೀಯವಾಗಿ ಹೆಚ್ಚು ಗುರುತಿಸಿಕೊಂಡಿದ್ದು ಅಣ್ಣಾ ಹಜಾರೆ ಅವರು ಲೋಕಪಾಲ್ ಜಾರಿಗಾಗಿ ನಡೆಸಿದ ಹೋರಾಟದ ಸಂದರ್ಭದಲ್ಲಿ. 2012ರಲ್ಲಿ ಹುಟ್ಟಿಕೊಂಡ ಆಮ್ ಆದ್ಮಿ ಪಕ್ಷದ ಸ್ಥಾಪಕರಲ್ಲಿ ಪ್ರಶಾಂತ್ ಭೂಷಣ್ ಒಬ್ಬರು. ಯುಪಿಎ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದ ಭೂಷಣ್, ನಂತರ ಬಂದ ಬಿಜೆಪಿ ಸರ್ಕಾರದ ವಿರುದ್ಧ ಕೂಡ ಟೀಕೆಗಳನ್ನು ನಡೆಸಿದರು. 2015ರ ದೆಹಲಿ ಚುನಾವಣೆಗೂ ಮುನ್ನ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನೇ ಟೀಕಿಸಿದರು. ಚುನಾವಣೆ ನಂತರ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರನ್ನು ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯಿಂದ ಹೊರಹಾಕಲಾಯಿತು. ಬಳಿಕ ಇಬ್ಬರೂ ಸೇರಿ ಸ್ವರಾಜ್ ಅಭಿಯಾನ್ ಎಂಬ ಹೊಸ ಆಂದೋಲನ ಶುರುಮಾಡಿದರು. ಏಪ್ರಿಲ್ ತಿಂಗಳಲ್ಲಿ ಇಬ್ಬರನ್ನೂ ಪಕ್ಷದಿಂದಲೇ ವಜಾಗೊಳಿಸಲಾಯಿತು.

ಆಡಳಿತದಲ್ಲಿರುವ ಪಕ್ಷಗಳ ವಿರುದ್ಧ ನಿರಂತರ ಟೀಕೆಗಳನ್ನು ನಡೆಸುತ್ತಿರುವ ಪ್ರಶಾಂತ್ ಭೂಷಣ್, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಎಲ್ಲ ರಾಜಕೀಯ ಪಕ್ಷಗಳು, ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ವಿರುದ್ಧ ಹೋರಾಟ ನಡೆಸಿರುವುದು ಗಮನಾರ್ಹ. ಅವರ ಸೈದ್ಧಾಂತಿಕ ನಿಲುವುಗಳು ಯಾವ ಪಕ್ಷಕ್ಕೂ ಹಿಡಿಸದ ಕಾರಣದಿಂದ ಎಲ್ಲ ರಾಜಕೀಯ ಪಕ್ಷಗಳಿಗೂ ಅವರು ಮುಳ್ಳಾಗಿಯೇ ಉಳಿದಿದ್ದಾರೆ. ನ್ಯಾಯಾಂಗ ನಿಂದನೆ ಪ್ರಕರಣದಿಂದ ಮತ್ತೆ ಸುದ್ದಿಯಲ್ಲಿರುವ ಅವರ ನಡೆ ಈ ವಿಚಾರದಲ್ಲಿ ಹೇಗಿರಲಿದೆ ಎನ್ನುವುದು ಕುತೂಹಲಕಾರಿಯಾಗಿದೆ.

English summary
Who is Prashant Bhushan, an activist against corruption and advocate in many cases. All you need to know about the controversial person in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X