ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಜತೆ ಸಿಕ್ಕಿಬಿದ್ದ ದೇವಿಂದರ್ ಸಿಂಗ್ ಯಾರು? ಅಫ್ಜಲ್ ಗುರು ಹೇಳಿದ್ದ ಸ್ಫೋಟಕ ಸಂಗತಿ

|
Google Oneindia Kannada News

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರೊಂದಿಗೆ ಸಿಕ್ಕಿಬಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿ ದೇವಿಂದರ್ ಸಿಂಗ್ ಬಂಧನದ ಹಿಂದೆ ಅನೇಕ ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ. ಇಬ್ಬರು ಉಗ್ರರನ್ನು ಕರೆದೊಯ್ಯುತ್ತಿದ್ದ ದೇವಿಂದರ್ ಸಿಂಗ್ ವಾಹನದಲ್ಲಿ ಮತ್ತು ಅವರ ಶ್ರೀನಗರದ ಮನೆಯಲ್ಲಿ ಎಕೆ 47ಗಳು, ಇತರೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ದೊರಕಿದ್ದವು.

ದೇವಿಂದರ್ ಸಿಂಗ್ ದಶಕಗಳಿಂದಲೂ ಭಯೋತ್ಪಾದಕರಿಗೆ ನೆರವಾಗುತ್ತಿದ್ದಾರೆ. ಅವರ ವಿರುದ್ಧ ಸಂಸತ್ ದಾಳಿಯ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಒಳಗಾದ ಅಫ್ಜಲ್ ಗುರು ಪತ್ರದಲ್ಲಿ ಆರೋಪ ಮಾಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಬದಲಾಗಿ ಅವರು ಬಡ್ತಿ, ಪುರಸ್ಕಾರಗಳನ್ನು ಪಡೆಯುತ್ತಲೇ ಹೋದರು.

ಉಗ್ರರ ಜೊತೆ ಸಿಕ್ಕಿಬಿದ್ದ ಡಿವೈಎಸ್‌ಪಿ: ಕೆಲವು ಆತಂಕಕಾರಿ ಮಾಹಿತಿಉಗ್ರರ ಜೊತೆ ಸಿಕ್ಕಿಬಿದ್ದ ಡಿವೈಎಸ್‌ಪಿ: ಕೆಲವು ಆತಂಕಕಾರಿ ಮಾಹಿತಿ

ಕೆಲವು ದಿನಗಳ ಹಿಂದಷ್ಟೇ ದೇವಿಂದರ್ ಸಿಂಗ್, ಕಾಶ್ಮೀರದ ಸ್ಥಿತಿಗತಿ ತಿಳಿಯಲು ಭೇಟಿ ನೀಡಿದ್ದ ವಿದೇಶಿ ರಾಜತಾಂತ್ರಿಕರ ನಿಯೋಗವನ್ನು ಸ್ವಾಗತಿಸುವ ಅಧಿಕೃತ ತಂಡದ ಭಾಗವಾಗಿದ್ದರು.

ಅಫ್ಜಲ್ ಗುರು ಪತ್ರದಲ್ಲಿ ದೇವಿಂದರ್

ಅಫ್ಜಲ್ ಗುರು ಪತ್ರದಲ್ಲಿ ದೇವಿಂದರ್

ದೇವಿಂದರ್ ಸಿಂಗ್ ಸುದ್ದಿಯಲ್ಲಿರುವುದು ಇದು ಮೊದಲ ಸಲವೇನಲ್ಲ. ಸಂಸತ್ ಮೇಲಿನ ದಾಳಿ ಪ್ರಕರಣದಲ್ಲಿ ತಪ್ಪಿತಸ್ಥ ಎಂದು 2013ರಲ್ಲಿ ಮರಣದಂಡನೆಗೆ ಗುರಿಯಾದ ಉಗ್ರ ಅಫ್ಜಲ್ ಗುರು, 2004ರಲ್ಲಿ ತನ್ನ ವಕೀಲರಿಗೆ ಒಂದು ಪತ್ರ ಬರೆದಿದ್ದ. ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್, ವ್ಯಕ್ತಿಯೊಬ್ಬನನ್ನು ರಾಜಧಾನಿ ದೆಹಲಿಗೆ ಕರೆದುಕೊಂಡು ಹೋಗಿ ಆತನಿಗೆ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸುವಂತೆ ಆದೇಶಿಸಿದ್ದರು ಎಂದು ಅಫ್ಜಲ್ ಗುರು ಪತ್ರದಲ್ಲಿ ತಿಳಿಸಿದ್ದ. ಆ ಉಗ್ರ 2001ರಲ್ಲಿ ಸಂಸತ್ ಮೇಲೆ ನಡೆದ ದಾಳಿಯಲ್ಲಿ ಭಾಗವಹಿಸಿದ್ದ ಉಗ್ರರಲ್ಲಿ ಒಬ್ಬ. ಆತ ದಾಳಿಯ ವೇಳೆ ಜೀವ ಕಳೆದುಕೊಂಡಿದ್ದ.

ಅಫ್ಜಲ್ ಪತ್ರದಲ್ಲಿ ಏನಿತ್ತು?

ಅಫ್ಜಲ್ ಪತ್ರದಲ್ಲಿ ಏನಿತ್ತು?

'ನನ್ನನ್ನು ಹುಮ್ಹಾಮಾ ಎಸ್‌ಟಿಎಫ್ ಶಿಬಿರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಡಿಎಸ್‌ಪಿ ದೇವಿಂದರ್ ಸಿಂಗ್ ಕೂಡ ನನಗೆ ಹಿಂಸೆ ನೀಡಿದರು. ಅವರಲ್ಲಿ ಶಾಂತಿ ಸಿಂಗ್ ಎಂಬ ಇನ್‌ಸ್ಪೆಕ್ಟರ್ ನನ್ನನ್ನು ಬೆತ್ತಲೆ ಮಾಡಿ ಮೂರು ಗಂಟೆ ವಿದ್ಯುತ್ ಶಾಕ್ ನೀಡಿದರು. ಟೆಲಿಫೋನ್ ಸಾಧನದ ಮೂಲಕ ಶಾಕ್ ನೀಡುವಾಗ ನೀರು ಕುಡಿಯುವಂತೆ ಮಾಡುತ್ತಿದ್ದರು. ಕೊನೆಗೆ ನಾನು ಅವರಿಗೆ 10 ಲಕ್ಷ ರೂ. ಕೊಡಲು ಒಪ್ಪಿಕೊಂಡೆ. ಅದಕ್ಕಾಗಿ ನನ್ನ ಕುಟುಂಬ ನನ್ನ ಹೆಂಡತಿಯ ಆಭರಣಗಳನ್ನು ಮಾರಾಟ ಮಾಡಿತು. ಅದರಿಂದ ಸಿಕ್ಕಿದ್ದು 80,000 ಮಾತ್ರ. ಬಳಿಕ ಕೇವಲ 2-3 ತಿಂಗಳು ಹಳೆಯದಾದ ಸ್ಕೂಟರ್‌ಅನ್ನು ಮಾರಾಟ ಮಾಡಿದೆ. ಅದರಿಂದ 24,000 ರೂ. ಸಿಕ್ಕಿತ್ತು' ಎಂದು ಅಫ್ಜಲ್ ಗುರು ಪತ್ರದಲ್ಲಿ ಬರೆದಿದ್ದ.

ದೇವಿಂದರ್ ಸಿಂಗ್ ರಾಷ್ಟ್ರಪತಿ ಪದಕ ಪಡೆದಿರಲಿಲ್ಲದೇವಿಂದರ್ ಸಿಂಗ್ ರಾಷ್ಟ್ರಪತಿ ಪದಕ ಪಡೆದಿರಲಿಲ್ಲ

ತನಗೆ ಹಿಂಸೆ ನೀಡಿದ ಶಾಂತಿ ಸಿಂಗ್ ಮತ್ತು ದೇವಿಂದರ್ ಅವರಿಗೆ ಹಣ ನೀಡಲಾಯಿತೇ ಅಥವಾ ಆ ಪಡೆಯಲ್ಲಿದ್ದ ಇತರೆ ಅಧಿಕಾರಿಗಳಿಗೂ ಹಣ ನೀಡಿದ್ದನೇ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ ಅಫ್ಜಲ್ ಗುರು ಇಷ್ಟಕ್ಕೆ ಆರೋಪ ಮುಗಿಸಿರಲಿಲ್ಲ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಸಂಬಂಧಿ ಅಲ್ತಾಫ್ ಹುಸೇನ್ ತಮ್ಮನ್ನು ಮತ್ತೊಮ್ಮೆ ದೇವಿಂದರ್ ಬಳಿ ಕರೆದೊಯ್ದಿದ್ದಾಗಿ ಅಫ್ಜಲ್ ತಿಳಿಸಿದ್ದ.

ಉಗ್ರನಿಗೆ ದೆಹಲಿಯಲ್ಲಿ ಮನೆ ಕೊಡಿಸಿದ

ಉಗ್ರನಿಗೆ ದೆಹಲಿಯಲ್ಲಿ ಮನೆ ಕೊಡಿಸಿದ

'ಒಂದು ದಿನ ಅಲ್ತಾಫ್ ನನ್ನನ್ನು ಡಿಎಸ್‌ಪಿ ಬಳಿ ಕರೆದೊಯ್ದ. ನಿನ್ನಿಂದ ಒಂದು ಸಣ್ಣ ಕೆಲಸ ಆಗಬೇಕು. ಒಬ್ಬ ವ್ಯಕ್ತಿಯನ್ನು ದೆಹಲಿಗೆ ಕರೆದೊಯ್ದು ಆತನಿಗೆ ಒಂದು ಬಾಡಿಗೆ ಮನೆ ಕೊಡಿಸಬೇಕು ಎಂದು ಡಿಎಸ್‌ಪಿ ಸೂಚಿಸಿದ್ದರು. ನನಗೆ ದೆಹಲಿ ಚೆನ್ನಾಗಿ ಗೊತ್ತಿತ್ತು. ಆದರೆ ನನಗೆ ಆ ವ್ಯಕ್ತಿ ಗೊತ್ತಿರಲಿಲ್ಲ. ಆ ವ್ಯಕ್ತಿ ಕಾಶ್ಮೀರಿ ಅಲ್ಲ ಎಂಬ ಅನುಮಾನ ಮೂಡಿತ್ತು. ಏಕೆಂದರೆ ಆತನಿಗೆ ಕಾಶ್ಮೀರಿ ಭಾಷೆ ಬರುತ್ತಿರಲಿಲ್ಲ. ಆದರೂ ನಾನು ಅಸಹಾಯಕನಾಗಿದ್ದೆ. ಅವನನ್ನು ದೆಹಲಿಗೆ ಕರೆದೊಯ್ದೆ' ಎಂದು ವಿವರಿಸಿದ್ದ.

ಪೊಲೀಸರಿಗೆ ಮಾಹಿತಿಯೇ ಇಲ್ಲ

ಪೊಲೀಸರಿಗೆ ಮಾಹಿತಿಯೇ ಇಲ್ಲ

ಆದರೆ ಸಂಸತ್ ಮೇಲಿನ ದಾಳಿಯಲ್ಲಿ ದೇವಿಂದರ್ ಪಾತ್ರದ ಆರೋಪದ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯ ವೇಳೆ ಇನ್‌ಸ್ಪೆಕ್ಟರ್ ಜನರಲ್ ಕುಮಾರ್ ಹೇಳಿದ್ದರು. 'ದೇವಿಂದರ್ ಅವರಿಗೆ 2001ರ ಸಂಸತ್ ದಾಳಿಯಲ್ಲಿ ಪಾಲ್ಗೊಂಡ ಉಗ್ರರ ನಂಟು ಇತ್ತು ಎಂದು ಅನೇಕ ಮಾಧ್ಯಮಗಳು ಬರೆದಿವೆ. ಆದರೆ ನಮ್ಮ ಬಳಿ ದಾಖಲೆಗಳಲ್ಲಿ ಆ ರೀತಿಯ ಮಾಹಿತಿ ಇಲ್ಲ' ಎಂದು ಹೇಳಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಉಗ್ರರ ರಕ್ಷಿಸುವ ಭದ್ರತಾ ಪಡೆಗೆ ಲಕ್ಷಲಕ್ಷ ರೂ.!ಜಮ್ಮು-ಕಾಶ್ಮೀರದಲ್ಲಿ ಉಗ್ರರ ರಕ್ಷಿಸುವ ಭದ್ರತಾ ಪಡೆಗೆ ಲಕ್ಷಲಕ್ಷ ರೂ.!

ಆಗ ಪೊಲೀಸ್, ಈಗ ಉಗ್ರ

ಆಗ ಪೊಲೀಸ್, ಈಗ ಉಗ್ರ

2001ರಲ್ಲಿ ಸಂಸತ್ ದಾಳಿಯ ವೇಳೆ ದೇವಿಂದರ್ ಸಿಂಗ್, ಬುದ್ಗಾಮ್‌ನ ವಿಶೇಷ ಕಾರ್ಯಾಚರಣೆ ಗುಂಪಿನ ಉಪ ವರಿಷ್ಠಾಧಿಕಾರಿಯಾಗಿದ್ದರು. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವಿಭಾಗದ ಹೈಜಾಕ್ ನಿಗ್ರಹ ಘಟಕದ ಸದಸ್ಯರಾಗಿದ್ದ ಅವರು, ಶ್ರೀನಗರದಲ್ಲಿನ ಸೇನಾ ಕಂಟೋನ್ಮೆಂಟ್ ಸಮೀಪದ ಇಂದಿರಾ ನಗರ ಎಂಬಲ್ಲಿ ವಾಸವಿದ್ದರು.

2017ರ ಆಗಸ್ಟ್ 27ರಂದು ಪುಲ್ವಾಮಾದಲ್ಲಿ ಉಗ್ರರ ಜತೆ ಎನ್‌ಕೌಂಟರ್‌ ನಡೆಸಿದ್ದ ದೇವಿಂದರ್ ಅವರಿಗೆ 2018ರ ಸ್ವಾತಂತ್ರ್ಯ ದಿನಾಚರಣೆ ವೇಳೆ ಶೌರ್ಯ ಪದಕ ಲಭಿಸಿತ್ತು. ಉಗ್ರರನ್ನು ವಿಚಾರಣೆ ನಡೆಸಲು ಕರೆದೊಯ್ಯುತ್ತಿದ್ದೆ ಎಂದು ದೇವಿಂದರ್ ಸಮಜಾಯಿಷಿ ನೀಡಿದ್ದರೂ, ಅವರನ್ನು ಉಗ್ರರಲ್ಲಿ ಒಬ್ಬನೆಂದು ಪರಿಗಣಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಉಗ್ರರ ಜತೆ ಚಂಡೀಗಡ ಪ್ರವಾಸ

ಉಗ್ರರ ಜತೆ ಚಂಡೀಗಡ ಪ್ರವಾಸ

2019ರ ಜೂನ್‌ನಲ್ಲಿ ಮೂವರು ಹಿಜ್ಬುಲ್ ಉಗ್ರರ ಜತೆ ಚಂಡೀಗಡಕ್ಕೆ ತೆರಳಿ ಮೂರು ದಿನ ನಗರದಲ್ಲಿ ವಾಸ್ತವ್ಯ ಹೂಡಿದ್ದಾಗಿ ದೇವಿಂದರ್ ಸಿಂಗ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಚಂಡೀಗಡ ಪ್ರಮುಖ ಶಾಪಿಂಗ್ ಮಾಲ್ ಒಂದಕ್ಕೆ ಉಗ್ರರನ್ನು ದೇವಿಂದರ್ ಕರೆದೊಯ್ದಿದ್ದರು. ಅವರಲ್ಲಿ ಒಬ್ಬ ಉಗ್ರನಿಗೆ ಹುಷಾರಿಲ್ಲದ ಕಾರಣ ಉಳಿದುಕೊಂಡಿದ್ದ ಸ್ಥಳಕ್ಕೆ ವಾಪಸ್ ಬಂದಿದ್ದರು ಎನ್ನಲಾಗಿದೆ.

ಅಷ್ಟೇ ಅಲ್ಲದೆ, ಸೆಕ್ಟರ್ 32ರಲ್ಲಿನ ಸರ್ಕಾರಿ ಆಸ್ಪತ್ರೆಗೆ ಅಸ್ವಸ್ಥ ಉಗ್ರನನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿ ಮೊಹಾಲಿ ಮೂಲದ ಕಾಲೇಜಿನಲ್ಲಿ ಓದುತ್ತಿದ್ದ ಇಬ್ಬರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದರು. ಬಳಿಕ ಜೂನ್ 25-26ರ ನಡುವೆ ಮೂವರು ಉಗ್ರರನ್ನು ಪಠಾಣ್‌ಕೋಟ್‌ವರೆಗೆ ಕರೆದುಕೊಂಡು ಹೋಗಿ, ಎರಡು ದಿನಗಳ ಬಳಿಕ ತಾವು ಉಳಿದುಕೊಂಡಿದ್ದ ಸೆಕ್ಟರ್ 51ರ ಅಪಾರ್ಟ್‌ಮೆಂಟ್‌ಗೆ ಹಿಂದಿರುಗಿದ್ದರು. ಈ ಕೆಲಸಕ್ಕಾಗಿ ಅವರು 12 ಲಕ್ಷ ರೂ ಪಡೆದಿದ್ದರು ಎನ್ನಲಾಗಿದೆ.

ಎನ್‌ಐಎ ತನಿಖೆಗೆ ಸೂಚನೆ

ಎನ್‌ಐಎ ತನಿಖೆಗೆ ಸೂಚನೆ

ಕೇಂದ್ರ ಗೃಹ ಸಚಿವಾಲಯವು ದೇವಿಂದರ್ ಸಿಂಗ್ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಸೂಚಿಸಿದೆ. ಶೀಘ್ರವೇ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಲು ಸೂಕ್ತ ಸಿದ್ಧತೆ ನಡೆಸಲಾಗಿದೆ. ಅಲ್ಲದೆ 2001ರ ಸಂಸತ್ ದಾಳಿಯಲ್ಲಿ ದೇವಿಂದರ್ ಪಾತ್ರದ ಕುರಿತೂ ಅನುಮಾನ ವ್ಯಕ್ತವಾಗಿರುವುದರಿಂದ ಆ ಆಯಾಮದಿಂದಲೂ ತನಿಖೆ ನಡೆಯಲಿದೆ.

1994ರಲ್ಲಿ ಕಾಶ್ಮೀರ ಕಣಿವೆಯ ಬದ್ಗಾಮ್‌ನಲ್ಲಿ ಪೊಲೀಸರ ವಶದಲ್ಲಿನ ಆರೋಪಿಗಳು ಅಸಹಜವಾಗಿ ಮೃತಪಟ್ಟಿದ್ದರು. ಅದರ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಆಗ ದೇವಿಂದರ್ ಸಿಂಗ್ ವಿಶೇಷ ಕಾರ್ಯಾಚರಣೆ ಪಡೆಯ ನೇತೃತ್ವ ವಹಿಸಿದ್ದರು. ಇದರ ನಂತರ ದೇವಿಂದರ್ ಅವರನ್ನು ತಮ್ಮ ಮೂಲಕ ಶ್ರೇಣಿಗೆ ಇಳಿಸಿ ರಾಜ್ಯ ಗುಪ್ತಚರ ವಿಭಾಗಕ್ಕೆ ನೇಮಿಸಲಾಗಿತ್ತು.

2015ರಲ್ಲಿ ದೇವಿಂದರ್ ಹಾಗೂ ವಿಶೇಷ ಕಾರ್ಯಾಚರಣೆ ದಳದ ಇನ್ನೊಬ್ಬ ಡೆಪ್ಯುಟಿ ಸುಪರಿಂಡೆಂಟ್ ಇಬ್ಬರೂ ಜನಸಾಮಾನ್ಯರಿಂದ ಸುಲಿಗೆ ಮಾಡುತ್ತಿದ್ದು, ಅವರ ಮೇಲೆ ಸುಳ್ಳು ಪೊಲೀಸ್ ಪ್ರಕರಣಗಳನ್ನು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರಿಂದ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

English summary
Deputy Superintendent of the Jammu and Kashmir police Davinder Singh was arrested ferrying two terrorists. Who is he? Was he linked with 2001 Parliament attack?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X