• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಡಿಯೂರಪ್ಪ ಆಪರೇಷನ್ ಕಮಲ ಹಾಳುಗೆಡವಿದ್ದೇ ಈ ಪಂಚ ಪಾಂಡವರು!

By ಆರ್ ಟಿ ವಿಠ್ಠಲಮೂರ್ತಿ
|

ಈ ಬಾರಿ ಸಕಲ ಶಸ್ತ್ರಾಸ್ತ್ರಗಳೊಂದಿಗೇ ಆಪರೇಷನ್ ಕಮಲ ಕಾರ್ಯಾಚರಣೆಗೆ ಇಳಿದಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಫೇಲ್ ಆಗುವುದರ ಹಿಂದೆ ಕಮಲ ಪಾಳೆಯದ ಪಂಚ ಪಾಂಡವರ ಮುಖ ಕಾಣತೊಡಗಿದೆ.

ಸಂಕ್ರಾಂತಿಯ ನಂತರ ನಿಮ್ಮ ಜಾತಕ ಉಜ್ವಲವಾಗಿರುವುದರಿಂದ ಆಪರೇಷನ್ ಕಮಲ ಕಾರ್ಯಾಚರಣೆಗೆ ಕೈ ಇಡಿ, ನಿರಾಯಾಸವಾಗಿ ಮುಖ್ಯಮಂತ್ರಿ ಹುದ್ದೆಗೆ ಬಂದು ಕೂರುತ್ತೀರಿ ಎಂದು ಅವರ ಆಪ್ತ ಜ್ಯೋತಿಷಿಗಳು ಯಡಿಯೂರಪ್ಪ ಅವರಿಗೆ ವಿವರಿಸಿದ್ದರು.

ಯಾವಾಗ ಯಡಿಯೂರಪ್ಪ ಅವರಿಗೆ ಆಪ್ತ ಜ್ಯೋತಿಷಿಗಳಿಂದ ಗ್ರೀನ್ ಸಿಗ್ನಲ್ ದಕ್ಕಿತೋ? ಆಗ ತೆರೆ ಮರೆಯ ಹಿಂದೆ ನಡೆಸುತ್ತಿದ್ದ ಆಪರೇಷನ್ ಕಮಲ ಕಾರ್ಯಾಚರಣೆಗೆ ವೇಗ ಕೊಟ್ಟಿದ್ದಾರೆ. ವಸ್ತುಸ್ಥಿತಿ ಎಂದರೆ ಅವರ ಕಾರ್ಯಾಚರಣೆಗೆ ಪೂರಕವಾಗಿ ಸರ್ಕಾರ ಉರುಳಿಸಲು ಅಗತ್ಯವಾದ ಶಾಸಕರ ಸಂಖ್ಯೆ ಜಮೆಯಾಗಿದೆ.

ಬಿಎಸ್ವೈ ಅವ್ರದ್ದು ಬಸ್ ಸ್ಟ್ಯಾಂಡ್ ಲವ್, ಕಾಂಗ್ರೆಸ್ಸಿನಗರು ಮುತ್ತೈದೆಯರು: ಸಿಎಂ ಇಬ್ರಾಹಿಂ

ಆದರೆ ರಾಜೀನಾಮೆ ನೀಡುವ ಮುನ್ನ ಅವರಿರುವ ಜಾಗ ಯಾವುದು ಎಂಬುದು ಕುಮಾರಸ್ವಾಮಿ ಅವರಿಗೇ ಫಸ್ಟು ಗೊತ್ತಾಗುತ್ತಿದೆ. ಅಂದ ಹಾಗೆ ಸರ್ಕಾರ ಬೀಳಿಸಲು ಇಂತಹ ಅಟೆಂಪ್ಟು ನಡೆಯುತ್ತದೆ ಎಂಬ ಮಾಹಿತಿ ಒಂದು ವಾರದ ಹಿಂದೆಯೇ ಕುಮಾರಸ್ವಾಮಿ ಅವರಿಗೆ ಗೊತ್ತಾಗಿತ್ತು.

ಹಾಗೆಯೇ ತಮ್ಮ ಸರ್ಕಾರವನ್ನು ಬೀಳಿಸಲು ಉದ್ಯಮಿಯೊಬ್ಬರು ಐನೂರು ಕೋಟಿ ರೂ ಬಂಡವಾಳ ಹೂಡುತ್ತಿದ್ದಾರೆ ಎಂಬುದೂ ಗೊತ್ತಿತ್ತು. ಆದರೆ ತಮಗೆ ಈ ಮಾಹಿತಿ ನೀಡಿದ ಗುಪ್ತಚರ ದಳದ ಹಿರಿಯ ಅಧಿಕಾರಿಯ ಬಳಿ ಮಾತನಾಡಿದ ಕುಮಾರಸ್ವಾಮಿ, ಸರ್ಕಾರ ಬಿದ್ದರೆ ಬೀಳಲಿ ಎಂದು ನೇರವಾಗಿಯೇ ಹೇಳಿ ಸಾಗಹಾಕಿದ್ದರು.

ಒಂದು ವೇಳೆ ಸಮ್ಮಿಶ್ರ ಸರಕಾರ ಬಿದ್ದರೆ ಶ್ರೇಯಸ್ಸು ಯಾರಿಗೆ ಸಲ್ಲಬೇಕು?

ಕುಮಾರಸ್ವಾಮಿ ಲೆಕ್ಕಾಚಾರವೇ ಬೇರೆಯಾಗಿತ್ತು

ಕುಮಾರಸ್ವಾಮಿ ಲೆಕ್ಕಾಚಾರವೇ ಬೇರೆಯಾಗಿತ್ತು

ವಸ್ತುಸ್ಥಿತಿ ಎಂದರೆ, ಹೀಗೆ ಸರ್ಕಾರವನ್ನು ಬೀಳಿಸಲು ನಡೆಯುತ್ತಿದ್ದ ಅಟೆಂಪ್ಟು ಅದೇ ಮೊದಲ ಬಾರಿಯದೇನಲ್ಲ. ಆದರೆ ಹೀಗೆ ಪದೇ ಪದೇ ಸರ್ಕಾರ ಬೀಳಿಸುವ ಟೆಕ್ನಿಕ್ಕಿಗೆ ಪ್ರತಿಯಾಗಿ ಭಿನ್ನಮತೀಯ ಶಾಸಕರನ್ನು ಸೆಳೆಯಲು ತಾವು ಹೂಡುವ ಬಂಡವಾಳವೂ ಅಧಿಕವಾಗುತ್ತಾ ಹೋಗುತ್ತಿರುವುದನ್ನು ಕುಮಾರಸ್ವಾಮಿ ಸೀರಿಯಸ್ ಆಗಿಯೇ ಗಮನಿಸಿದ್ದರು.

ಹಾಗಂತಲೇ, ಈ ಸರ್ಕಾರ ಬೇಕಿರುವುದು ಕಾಂಗ್ರೆಸ್ ಪಕ್ಷಕ್ಕೆ. ಬೇಕಿದ್ದರೆ ಈ ಸರ್ಕಾರವನ್ನು ಅವರು ಉಳಿಸಿಕೊಳ್ಳಲಿ. ಅವರ ಪಕ್ಷದ ಅಗ್ರಮಾನ್ಯ ನಾಯಕ ಸಿದ್ಧರಾಮಯ್ಯ ಅವರ ಬೆಂಬಲಿಗರೇ ಇದರಲ್ಲಿ ಹೆಚ್ಚಾಗಿರುವುದರಿಂದ ನಾನಾದರೂ ಅವರನ್ನು ಎಷ್ಟು ಅಂತ ತಡೆಯಲಿ ಎಂಬುದು ಕುಮಾರಸ್ವಾಮಿ ಲೆಕ್ಕಾಚಾರವಾಗಿತ್ತು.

ಬಿಜೆಪಿ ಶಾಸಕರು ಹೋಟೆಲ್‌ನಲ್ಲಿ ಬರ ವೀಕ್ಷಣೆ ಮಾಡುತ್ತಿದ್ದಾರಾ? ಸಿಎಂ ಪ್ರಶ್ನೆ

ರಾಹುಲ್ ಗಾಂಧಿಗೆ ರವಾನಿಸುತ್ತಿದ್ದರು ಮಾಹಿತಿ

ರಾಹುಲ್ ಗಾಂಧಿಗೆ ರವಾನಿಸುತ್ತಿದ್ದರು ಮಾಹಿತಿ

ಹಾಗಂತಲೇ ಈ ಸಲ ಬಿಜೆಪಿಯ ಕಡೆ ಹೋದ ಭಿನ್ನಮತೀಯ ಶಾಸಕರನ್ನು ಸೆಳೆಯಲು ಅವರು ಹೋಗಲಿಲ್ಲ. ಬದಲಿಗೆ, ಯಾವ್ಯಾವ ಕಾಂಗ್ರೆಸ್ ಶಾಸಕರು ಯಡಿಯೂರಪ್ಪ ಅವರ ಸಂಪರ್ಕದಲ್ಲಿದ್ದಾರೆ, ಅವರು ಕರೆದಲ್ಲಿಗೆ ಹೋಗುತ್ತಿದ್ದಾರೆ ಎಂಬ ವಿವರವನ್ನು ತಮ್ಮ ಪರ್ಸನಲ್ ಇಂಟಲಿಜೆನ್ಸ್ ಮೂಲಕ ಪಡೆಯುತ್ತಿದ್ದರು.

ಹೀಗೆ ವಿವರ ಪಡೆಯುತ್ತಿದ್ದ ಕುಮಾರಸ್ವಾಮಿ ನೇರವಾಗಿ ಅದನ್ನು ರವಾನಿಸುತ್ತಿದ್ದುದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ರೈಟ್ ಹ್ಯಾಂಡ್ ಅನ್ನಿಸಿಕೊಂಡ ವ್ಯಕ್ತಿಗೆ. ಹೀಗಾಗಿ ಅವರು ಮಾಹಿತಿ ನೀಡಿದ ಸ್ವಲ್ಪ ಹೊತ್ತಿನ ಒಳಗಾಗಿ ದಿಲ್ಲಿಯಿಂದ ನೇರವಾಗಿ ಸಿದ್ಧರಾಮಯ್ಯ ಅವರಿಗೇ ಫೋನು ಬರುತ್ತಿತ್ತು.

ಪರಿಣಾಮ? ಯಡಿಯೂರಪ್ಪ ಅವರ ಜತೆ ತಮ್ಮ ಬೆಂಬಲಿಗ ಶಾಸಕರ ಪೈಕಿ ಇಂತಿಂತವರು ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಹೈಕಮಾಂಡ್ ವತಿಯಿಂದಲೇ ಬರತೊಡಗಿದ ಮೇಲೆ ಸಿದ್ಧರಾಮಯ್ಯ ಸುಮ್ಮನೆ ಕೂರಲು ಸಾಧ್ಯವಾಗಲಿಲ್ಲ. ಹಾಗಂತಲೇ ಅವರು ಯಡಿಯೂರಪ್ಪ ಕ್ಯಾಂಪಿನಲ್ಲಿದ್ದ ತಮ್ಮ ಬೆಂಬಲಿಗ ಶಾಸಕರನ್ನು ವಾಪಸ್ ಕರೆಸಿಕೊಳ್ಳುವ ಸ್ಥಿತಿ ಬಂತು.

ಆಪರೇಷನ್ ಠುಸ್... 3 ನೇ ಬಾರಿಗೂ ಯಡಿಯೂರಪ್ಪ ಫೇಲ್?

ಬಿಜೆಪಿಯ ಪಂಚ ಪಾಂಡವರು ಯಾರು?

ಬಿಜೆಪಿಯ ಪಂಚ ಪಾಂಡವರು ಯಾರು?

ಆದರೆ ಇಂಟರೆಸ್ಟಿಂಗ್ ಸಂಗತಿ ಎಂದರೆ, ಕುಮಾರಸ್ವಾಮಿ ಅವರಿಗೆ ಆಪರೇಷನ್ ಕಮಲ ಕಾರ್ಯಾಚರಣೆಯ ಪಿನ್ ಟು ಪಿನ್ ಮಾಹಿತಿ ಲಭ್ಯವಾಗುತ್ತಿದ್ದುದು ಯಾರಿಂದ ಗೊತ್ತೇ? ಅದೇ ಬಿಜೆಪಿ ಪಾಳೆಯದ ಪಂಚ ಪಾಂಡವರಿಂದ.

ಯಡಿಯೂರಪ್ಪ ಅವರನ್ನು ಹೊರತುಪಡಿಸಿದರೆ ಬಿಜೆಪಿಯ ಪಂಚ ಪಾಂಡವರು ಯಾರು? ಅನ್ನುವುದು ಈಗ ರಾಜಕೀಯ ವಲಯಗಳಿಗೆ ಗೊತ್ತು. ಎಲ್ಲಕ್ಕಿಂತ ಮುಖ್ಯವಾಗಿ ಯಡಿಯೂರಪ್ಪ ಬಂದು ಸಿಎಂ ಹುದ್ದೆಯಲ್ಲಿ ಕೂರುವುದು ಈ ಪಂಚ ಪಾಂಡವರಿಗೆ ಬೇಕಿಲ್ಲ ಎಂಬುದೂ ಗೊತ್ತು.

ವಾಸ್ತವವಾಗಿ ಈ ಪಂಚಪಾಂಡವರು ಯಡಿಯೂರಪ್ಪ ಅವರಿಗಿಂತ ಕುಮಾರಸ್ವಾಮಿ ಅವರಿಗೆ ಆಪ್ತರು. ಹಾಗೇನಾದರೂ ಆಪರೇಷನ್ ಕಮಲ ಕಾರ್ಯಾಚರಣೆ ಯಶಸ್ವಿಯಾಗಿ, ಯಡಿಯೂರಪ್ಪ ಸಿಎಂ ಹುದ್ದೆಯಲ್ಲಿ ಬಂದು ಕುಳಿತರೆ ತಮ್ಮ ಮುಂದಿನ ಕತೆಯೇನು? ಅನ್ನುವ ಪ್ರಶ್ನೆ ಈ ಐದೂ ಮಂದಿ ನಾಯಕರನ್ನು ಕಾಡುತ್ತಿದೆ. ಅಷ್ಟೇ ಮುಖ್ಯವಾಗಿ ಸಿಎಂ ಹುದ್ದೆಯಲ್ಲಿ ಯಡಿಯೂರಪ್ಪ ಕೂರುವುದು ಅವರಿಗೆ ಇಷ್ಟವಿಲ್ಲ.

ಆಪರೇಷನ್ ಕಮಲ : ತಿಳಿಯಬೇಕಾದ 7 ಪ್ರಮುಖ ಸಂಗತಿಗಳು

ಏನಿದು ಬ್ಲಡ್ ಲೆಸ್ ಆಪರೇಷನ್?

ಏನಿದು ಬ್ಲಡ್ ಲೆಸ್ ಆಪರೇಷನ್?

ಈ ಮಧ್ಯೆ, ಯಡಿಯೂರಪ್ಪ ಅವರೇನೋ ಪಕ್ಷದ ಹೈಕಮಾಂಡ್ ವರಿಷ್ಠರಿಗೆ, ಮುಂದಿನ ಪಾರ್ಲಿಮೆಂಟ್ ಚುನಾವಣೆಯ ಗುಮ್ಮ ತೋರಿಸಿ, ನಿಮಗೆ ಇಪ್ಪತ್ತು ಸೀಟುಗಳನ್ನು ನಾವು ಗೆಲ್ಲಿಸಿಕೊಡಬೇಕೆಂದರೆ ನೀವು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ನೆರವು ನೀಡಬೇಕು ಎಂದು ಎಚ್ಚರಿಕೆಯ ಧಾಟಿಯಲ್ಲಿಯೇ ಹೇಳಿ ಒಪ್ಪಿಗೆ ಪಡೆದಿದ್ದರು.

ಈ ರೀತಿ ಒಂದು ಕಡೆಯಿಂದ ಯಡಿಯೂರಪ್ಪ ಒಪ್ಪಿಗೆ ಪಡೆದರೆ ಮತ್ತೊಂದು ಕಡೆಯಿಂದ ರಾಜ್ಯ ಬಿಜೆಪಿಯ ಈ ಪಂಚ ಪಾಂಡವರು ಕಮಲ ಪಾಳೆಯದ ಹೈಕಮಾಂಡ್ ಪ್ರಮುಖರಿಗೆ, ಆಪರೇಷನ್ ಕಮಲ ಕಾರ್ಯಾಚರಣೆ ಏನಾದರೂ ಯಶಸ್ವಿಯಾದರೆ ರಾಜ್ಯದಲ್ಲಿ ರಾಜಕೀಯ ಅರಾಜಕತೆ ಆರಂಭವಾಗುತ್ತದೆ. ಹೀಗಾಗಿ ಬ್ಲಡ್ ಲೆಸ್ ಆಪರೇಷನ್ ನಡೆಯಬೇಕು ಎಂದು ವಿವರಿಸಿದ್ದರು.

ಏನಿದು ಬ್ಲಡ್ ಲೆಸ್ ಆಪರೇಷನ್ ಅಂತ ಕಮಲ ಪಾಳೆಯದ ಹೈಕಮಾಂಡ್ ವರಿಷ್ಠರು ಕೇಳಿದರೆ, ಆಪರೇಷನ್ ಕಮಲ ಕಾರ್ಯಾಚರಣೆ ಮಾಡಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಸೆಳೆದೆವು ಅಂತಿಟ್ಟುಕೊಳ್ಳಿ. ಆಗ ಸಹಜವಾಗಿಯೇ ಪಕ್ಷದ ಇಮೇಜ್ ಕುಗ್ಗಿ ಹೋಗುತ್ತದೆ. ಯಾಕೆಂದರೆ ನಾವು ಆಪರೇಷನ್ ಕಮಲ ಕಾರ್ಯಾಚರಣೆ ನಡೆಸಿದ ಮೇಲೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಸುಮ್ಮನಿರುವುದಿಲ್ಲ ಅಂತ ಹೇಳಿದ್ದರು.

ಎಚ್ಡಿಕೆ ಅವರನ್ನೇ ಸಿಎಂ ಕುರ್ಚಿ ಮೇಲೆ ಕೂಡಿಸುವುದು

ಎಚ್ಡಿಕೆ ಅವರನ್ನೇ ಸಿಎಂ ಕುರ್ಚಿ ಮೇಲೆ ಕೂಡಿಸುವುದು

ಅರ್ಥಾತ್, ಬಿಜೆಪಿ ನಡೆಸುವ ಆಪರೇಷನ್ ಕಮಲ ಕಾರ್ಯಾಚರಣೆ ಯಶಸ್ವಿಯಾಗಿ ಯಡಿಯೂರಪ್ಪ ಸಿಎಂ ಹುದ್ದೆಯ ಮೇಲೆ ಕುಳಿತರೂ, ಸರ್ಕಾರವೇನೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಯಾಕೆಂದರೆ ವಿರೋಧಿಗಳೂ ಪ್ರತಿ ಕಾರ್ಯಾಚರಣೆಗಿಳಿದರೆ ನಮ್ಮ ಪಕ್ಷದಿಂದಲೂ ಕೆಲ ಶಾಸಕರು ಆ ಕಡೆ ಹೋಗಬಹುದು.

ಆಗ ಶುರುವಾಗುವ ರಾಜಕೀಯ ಅರಾಜಕತೆಗೆ ಬಿಜೆಪಿ ಕಾರಣವಾದಂತಾಗುತ್ತದೆಯೇ ಹೊರತು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷವಲ್ಲ. ಹೀಗಾಗಿ ವಿಪರೀತ ರಕ್ತಸ್ರಾವವಾಗುವ ಆಪರೇಷನ್ ಗಿಂತ ಬ್ಲಡ್ ಲೆಸ್ ಆಪರೇಷನ್ ಮಾಡಿದರೆ ಹಲವು ಅನುಕೂಲಗಳಾಗುತ್ತವೆ.

ಬ್ಲಡ್ ಲೆಸ್ ಆಪರೇಷನ್ ಎಂದರೆ ನಾವೇ ಇಂಡಿಪೆಂಡೆಂಟ್ ಆಗಿ ಕಾರ್ಯಾಚರಣೆ ನಡೆಸುವ ಬದಲು ಜೆಡಿಎಸ್ ಪಕ್ಷದ ಜತೆಗೇ ಹೊಂದಾಣಿಕೆ ಮಾಡಿಕೊಂಡು ಕುಮಾರಸ್ವಾಮಿ ಅವರನ್ನೇ ಸಿಎಂ ಹುದ್ದೆಯ ಮೇಲೆ ಕೂರಿಸುವುದು.

ಬಿಎಸ್ವೈ ಬೆದರಿಕೆಗೇ ಹೆದರಿದ್ದ ಹೈಕಮಾಂಡ್

ಬಿಎಸ್ವೈ ಬೆದರಿಕೆಗೇ ಹೆದರಿದ್ದ ಹೈಕಮಾಂಡ್

ಎಷ್ಟೇ ಆದರೂ ಇವತ್ತು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇನೂ ನೆಮ್ಮದಿಯಾಗಿಲ್ಲ. ಯಾಕೆಂದರೆ, ಸರ್ಕಾರ ನಡೆಸಲು ಅಗತ್ಯವಾದ ಫಂಡೇ ಇಲ್ಲದೆ ಅವರು ತೊಳಲಾಡುತ್ತಿದ್ದಾರೆ. ಮತ್ತು ಇದಕ್ಕೆ ಕಾರಣರಾದ ಕಾಂಗ್ರೆಸ್ ನಾಯಕರು ಪಕ್ಕದಲ್ಲೇ ಇದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಅವರ ಮನ ಒಲಿಸಿ, ಜೆಡಿಎಸ್ ನೇತೃತ್ವದಲ್ಲೇ ಸರ್ಕಾರ ರಚಿಸಿದರೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸಹಜವಾಗಿಯೇ ನಾವು ಇಪ್ಪತ್ತು ಸೀಟುಗಳನ್ನು ನಿರಾಯಾಸವಾಗಿ ಗೆಲ್ಲುತ್ತೇವೆ. ಹಾಗೆಯೇ ಬ್ಲಡ್ ಲೆಸ್ ಆಪರೇಷನ್ ನಡೆಸಿ ಕರ್ನಾಟಕವನ್ನು ವಶಪಡಿಸಿಕೊಂಡಂತಾಗುತ್ತದೆ ಎಂದು ಈ ಪಂಚ ಪಾಂಡವರು ಹೈಕಮಾಂಡ್ ವರಿಷ್ಠರಿಗೆ ವಿವರಿಸಿದ್ದಾರೆ.

ಆದರೆ ಯಡಿಯೂರಪ್ಪ ಪ್ರಬಲ ಲಿಂಗಾಯತ ಸಮುದಾಯದ ನಾಯಕರಾದ್ದರಿಂದ ಆಪರೇಷನ್ ಕಮಲ ಕಾರ್ಯಾಚರಣೆ ನಡೆಸುವುದು ಬೇಡ ಎಂದು ನೇರವಾಗಿ ಹೇಳುವುದು ಕಷ್ಟ. ಹಾಗೇನಾದರೂ ನಾವು ಹೇಳಿದರೆ ಅವರು ನಮ್ಮ ವಿರುದ್ಧವೇ ತಿರುಗಿ ಬೀಳಬಹುದು. ಮತ್ತು ನಾಳೆ ಅದೇ ಅಂಶ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಬಹುದು ಎಂದು ಬಿಜೆಪಿ ವರಿಷ್ಠರು ಧರ್ಮಸಂಕಟ ತೋಡಿಕೊಂಡಿದ್ದಾರೆ.

ಲೆಕ್ಕಾಚಾರ ತಲೆಕೆಳಗು ಮಾಡಿದ ಪಂಚ ಪಾಂಡವರು

ಲೆಕ್ಕಾಚಾರ ತಲೆಕೆಳಗು ಮಾಡಿದ ಪಂಚ ಪಾಂಡವರು

ಹೀಗಾಗಿ ಅವರ ಪಾಡಿಗೆ ಅವರು, ಪಂಚ ಪಾಂಡವರ ಪಾಡಿಗೆ ಪಂಚಪಾಂಡವರು ಮೌನವಾಗಿದ್ದಾರೆ. ಆದರೆ ಯಡಿಯೂರಪ್ಪ ಶುರು ಮಾಡಿದ ಕಾರ್ಯಾಚರಣೆಯ ವಿವರ ಮತ್ತು ಅವರು ಕಲೆ ಹಾಕಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ವಿವರವನ್ನು ಕುಮಾರಸ್ವಾಮಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.

ಎಷ್ಟೇ ಆದರೂ ಯಡಿಯೂರಪ್ಪ ಸಿಎಂ ಆದರೆ ತಮ್ಮ ಭವಿಷ್ಯವೇನು? ಅನ್ನುವ ಪ್ರಶ್ನೆ ಈ ಪಂಚ ಪಾಂಡವರಿಗೆ ಇದ್ದೇ ಇದೆ. ಹೀಗಾಗಿ ಕುಮಾರಸ್ವಾಮಿ ಬಿಜೆಪಿ ಜತೆ ಕೈ ಜೋಡಿಸಿ ಸಿಎಂ ಆಗಿ ಮುಂದುವರಿದರೂ ಪರವಾಗಿಲ್ಲ. ಇಲ್ಲವೇ ಹಾಲಿ ಸರ್ಕಾರವೇ ಮುಂದುವರಿದರೆ ಸಮಸ್ಯೆ ಇಲ್ಲ ಎಂಬುದು ಪಂಚ ಪಾಂಡವರ ಲೆಕ್ಕಾಚಾರ.

ಜ್ಯೋತಿಷಿಯ ಮಾತು ಕೇಳಿ ಬಿಎಸ್ವೈ ಮೂರ್ಖರಾದರೆ

ಜ್ಯೋತಿಷಿಯ ಮಾತು ಕೇಳಿ ಬಿಎಸ್ವೈ ಮೂರ್ಖರಾದರೆ

ಅವರ ಲೆಕ್ಕಾಚಾರಕ್ಕೆ ಪೂರಕವಾಗಿಯೇ ಎಲ್ಲವೂ ನಡೆದಿದೆ. ಮತ್ತು ಬಿಜೆಪಿಯ ಈ ಪಂಚ ಪಾಂಡವರ ಪಡೆಯ ನಡೆ ಕುಮಾರಸ್ವಾಮಿಗೆ ಅನುಕೂಲಕರವಾಗಿ ಪರಿಣಮಿಸಿದೆ. ಮತ್ತು ಯಾವ ಬಂಡವಾಳವನ್ನೂ ಹೂಡುವ ಅಗತ್ಯವಿಲ್ಲದೆ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಅವರು ಮಾಸ್ಟರ್ ಪ್ಲಾನ್ ರೂಪಿಸಲು ನೆರವಾಗಿದೆ.

ಹೀಗಾಗಿ ಸಂಕ್ರಾಂತಿಯ ನಂತರ ನಿಮಗೆ ಸಿಎಂ ಆಗುವ ಯೋಗವಿದೆ ಎಂಬ ಮಾತನ್ನು ಯಡಿಯೂರಪ್ಪ ಭದ್ರವಾಗಿ ನಂಬಿದರೂ, ಅವರಂದುಕೊಂಡ ಗುರಿ ತಲುಪುವ ಮುನ್ನವೇ ಅವರು ಹತ್ತಿದ ಮರದ ರೆಂಬೆ ಮುರಿದು ಬೀಳುತ್ತಿದೆ. ಪರಿಣಾಮ? ಪಂಚ ಪಾಂಡವರ ಹೊಡೆತಕ್ಕೆ ಯಡಿಯೂರಪ್ಪ ಡಲ್ಲಾಗಿದ್ದಾರೆ. ಮುಂದೇನು ಮಾಡಬೇಕು? ಅನ್ನುವ ಯೋಚನೆಯಲ್ಲಿದ್ದಾರೆ.

English summary
Which pancha pandavas of BJP put plug on Operation Lotus in Karnataka by Yeddyurappa? They ensured that Operation Kamala is failed and no MLA from Congress and JDS quit the party by informing H D Kumaraswamy in advance. Political analysis by R T Vittal Murthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X