ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಿನ್ನಮತೀಯರ ದಾಳಿಗೆ ಆಪರೇಷನ್ 'ಕೆಜಿಎಫ್' ಸಾಧ್ಯವಾಗುವುದೆ?

By ಆರ್ ಟಿ ವಿಠ್ಠಲಮೂರ್ತಿ
|
Google Oneindia Kannada News

Recommended Video

ಕರ್ನಾಟಕ ರಾಜಕೀಯದಲ್ಲಿ ಭಿನ್ನಮತ ಶಮನಗೊಳಿಸುವ ನಾಯಕತ್ವ ಯಾರಲ್ಲಿದೆ? | Oneindia Kannada

ಸಂಪುಟ ಪುನಾರಚನೆಯಿಂದ ಸಿಡಿದೆದ್ದಿರುವ ಕಾಂಗ್ರೆಸ್ ಭಿನ್ನಮತೀಯರ ಧಾಳಿ ಆಪರೇಷನ್ 'ಕೆ.ಜಿ.ಎಫ್' ಯಶಸ್ವಿಯಾಗುವಂತೆ ಮಾಡುತ್ತದೆಯೇ? ಆ ಮೂಲಕ ಸರ್ಕಾರ ಎಂಬ ಟೆಂಟನ್ನು ವಶಪಡಿಸಿಕೊಳ್ಳಲು ಬಿಜೆಪಿ ಶಕ್ತವಾಗುತ್ತದೆಯೇ?

'ಕೆ.ಜಿ.ಎಫ್' ಎಂದರೆ ಕರ್ನಾಟಕ ಗವರ್ನಮೆಂಟ್ ಈಸ್ ಫಾಲಿಂಗ್ ಎಂದರ್ಥ. ಹೀಗಾಗಿ ಕೆಲವರು ತಾವೇ ಈ ಪ್ರಶ್ನೆ ಹಾಕಿಕೊಂಡು ತಾವೇ ಉತ್ತರ ಹುಡುಕಲು ಪ್ರಯತ್ನಿಸುತ್ತಿದ್ದಾರೆ. ಅಂದ ಹಾಗೆ ಸಮ್ಮಿಶ್ರ ಸರ್ಕಾರಗಳಿಗೆ ಉರುಳುವ ಭೀತಿ ಇರುತ್ತದಾದರೂ, ಇಂತಹ ಭೀತಿಯನ್ನು ತಮಗನುಕೂಲವಾಗುವಂತೆ ಬಳಸಿಕೊಳ್ಳುವ ನಾಯಕತ್ವ ದಕ್ಕದಿದ್ದರೆ ಅದು ಅಸಾಧ್ಯ.

ಎಚ್.ಡಿ.ಕುಮಾರಸ್ವಾಮಿ ಸಂಪುಟ, ಜಿಲ್ಲಾ ಮತ್ತು ಜಾತಿ ಪ್ರಾತಿನಿಧ್ಯಎಚ್.ಡಿ.ಕುಮಾರಸ್ವಾಮಿ ಸಂಪುಟ, ಜಿಲ್ಲಾ ಮತ್ತು ಜಾತಿ ಪ್ರಾತಿನಿಧ್ಯ

ಈ ಬಾರಿಯ ಸಚಿವ ಸಂಪುಟ ಪುನಾರಚನೆಯ ನಂತರ ಬಂಡಾಯವೆದ್ದವರ ಇತಿಹಾಸವನ್ನು ನೋಡಿದರೆ ಅಂತಹ ನಾಯಕತ್ವವೊಂದು ಎಮರ್ಜ್ ಆಗುವುದು ಕಷ್ಟದ ಕೆಲಸ ಅನ್ನಿಸುತ್ತದೆ. ಹೀಗಾಗಿ ಆಪರೇಷನ್ 'ಕೆಜಿಎಫ್' ವಿಫಲವಾದರೂ ಅಚ್ಚರಿಯಿಲ್ಲ. ಆದರೆ, ಅಂದು ನಡೆದ ಸನ್ನಿವೇಶಗಳತ್ತ ಇಣುಕಿಹಾಕಿದರೆ, ಇಂದು ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಗೆ ಸಾಕಷ್ಟು ಸಾಮ್ಯತೆಯಿದೆ. ಆ ಸನ್ನಿವೇಶದತ್ತ ಒಮ್ಮೆ ಕಣ್ಣು ಹಾಯಿಸೋಣ.

ಕೈ ಗ್ಯಾಂಗಿಗೆ ಸಿದ್ದುವೇ ಚಕ್ರವರ್ತಿ, ಮಿಡ್ಲ್ ಮನ್ನುಗಳಿಗೆ ಫುಲ್ಲು ನಿಶ್ಯಕ್ತಿ! ಕೈ ಗ್ಯಾಂಗಿಗೆ ಸಿದ್ದುವೇ ಚಕ್ರವರ್ತಿ, ಮಿಡ್ಲ್ ಮನ್ನುಗಳಿಗೆ ಫುಲ್ಲು ನಿಶ್ಯಕ್ತಿ!

2004ರಲ್ಲಿ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂತಲ್ಲ? ಇದಾದ ಕೆಲ ಕಾಲದಲ್ಲಿ ಕುಮಾರಸ್ವಾಮಿ ನಾಯಕರಾಗಿ ರೂಪುಗೊಂಡು ನಿಂತಿದ್ದರು. ಮುಂದೆ ನಡೆದ ರಾಜಕೀಯ ಬೆಳವಣಿಗೆಗಳಿಂದಾಗಿ ಕುಮಾರಸ್ವಾಮಿ ಜೆಡಿಎಸ್ ನ ಪ್ರಖರ ನಾಯಕರಾಗಿ ಹೊರಹೊಮ್ಮಿದರು.

ನಾಯಕರಾಗಿ ಹೊರಹೊಮ್ಮಿದ ಕುಮಾರಸ್ವಾಮಿ

ನಾಯಕರಾಗಿ ಹೊರಹೊಮ್ಮಿದ ಕುಮಾರಸ್ವಾಮಿ

ಕುಮಾರಸ್ವಾಮಿ ಹಾಗೆ ನಾಯಕರಾಗಿ ಎಮರ್ಜ್ ಆಗಲು ಕಾರಣಗಳಿದ್ದವು. ಮೊದಲನೆಯದಾಗಿ, ಅಸ್ತಿತ್ವದಲ್ಲಿದ್ದ ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಶಾಸಕರ ಕುಂದುಕೊರತೆಗಳನ್ನು ನಿವಾರಿಸಲು ಒಬ್ಬ ಶಾಸಕರಾಗಿದ್ದರೂ, ದೇವೇಗೌಡರ ಮಗನಾಗಿದ್ದರಿಂದ ಅವರಿಗದು ಸುಲಭವಾಗಿತ್ತು.

ಹೀಗಾಗಿ ಸಿದ್ಧರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರೂ ಪಕ್ಷದ ಬಹುತೇಕ ಶಾಸಕರು ತಮ್ಮ ಕುಂದುಕೊರತೆಗಳ ಪರಿಹಾರಕ್ಕೆ ಕುಮಾರಸ್ವಾಮಿ ಅವರ ಮೊರೆ ಹೋಗುತ್ತಿದ್ದರು. ಕುಂದುಕೊರತೆಗಳು ಎಂದರೆ ಶಾಸಕರ ಕ್ಷೇತ್ರದವು ಮಾತ್ರವಲ್ಲ, ವೈಯಕ್ತಿಕ ಕುಂದುಕೊರತೆಗಳು ಕೂಡಾ.

ಹಾಗೆ ನೋಡಿದರೆ ಸಿದ್ಧರಾಮಯ್ಯ ಅವರಿಗೆ ಕೆಲಸ ಮಾಡಿ ಗೊತ್ತೇ ಹೊರತು, ವೈಯಕ್ತಿಕ ಕುಂದುಕೊರತೆಗಳನ್ನು ನಿವಾರಿಸುವ ಕಲೆ ಇರಲಿಲ್ಲ. ಅದವರಿಗೆ ಬೇಕೂ ಆಗಿರಲಿಲ್ಲ. ಹೀಗಾಗಿ ನೋಡ ನೋಡುತ್ತಲೇ ಜೆಡಿಎಸ್ ಪಕ್ಷದಲ್ಲಿ ಕುಮಾರಸ್ವಾಮಿ ನಾಯಕರಾಗಿ ಎಮರ್ಜ್ ಆಗುತ್ತಾ ಹೋದರು.

ವಿಧಾನಸಭೆಯನ್ನು ವಿಸರ್ಜಿಸಿ ಎಂದಿದ್ದ ಗೌಡರು

ವಿಧಾನಸಭೆಯನ್ನು ವಿಸರ್ಜಿಸಿ ಎಂದಿದ್ದ ಗೌಡರು

ಎಚ್ ಡಿ ಕುಮಾರಸ್ವಾಮಿ ಅವರು ನಾಯಕರಾಗಿ ರೂಪುಗೊಂಡ ಕಾಲಘಟ್ಟದಲ್ಲಿ ಎರಡು ಪ್ರಮುಖ ಬೆಳವಣಿಗೆಗಳು ನಡೆದವು. ಮೊದಲನೆಯದಾಗಿ, ಮುಖ್ಯಮಂತ್ರಿಯಾಗಲು ದೇವೇಗೌಡರು ತಮಗೆ ಬೆಂಬಲ ನೀಡಲಿಲ್ಲ ಎಂಬ ಕಾರಣಕ್ಕಾಗಿ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಎಸ್.ಎಂ. ಕೃಷ್ಣ ನೇತೃತ್ವದ ಒಂದು ಪಡೆ ಏಕಕಾಲಕ್ಕೆ ಪಕ್ಷದ ಮೇಲೆ ಹಿಡಿತ ಸಾಧಿಸಲು, ಜೆಡಿಎಸ್ ಪಕ್ಷವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿತ್ತು.

ಹಾಗೆಯೇ ಬಿಜೆಪಿಯಲ್ಲಿದ್ದ ಯಡಿಯೂರಪ್ಪ ಕೂಡಾ ಪಕ್ಷದಲ್ಲಿ ತಮ್ಮನ್ನು ನಿಯಂತ್ರಿಸುವ ಶಕ್ತಿಗಳ ಬಗ್ಗೆ ಭ್ರಮನಿರಸನಗೊಂಡಿದ್ದರು. ಅಷ್ಟೇ ಅಲ್ಲ, ಇದೇ ಕಾರಣಕ್ಕಾಗಿ ಕಮಲ ಪಾಳೆಯ ತೊರೆದು ಬರಲು ನಾನು ಸಿದ್ಧ. ಹೀಗಾಗಿ ಧರ್ಮಸಿಂಗ್ ನೇತೃತ್ವದ ಸರ್ಕಾರದಲ್ಲಿ ನನ್ನನ್ನು ಮಂತ್ರಿ ಮಾಡಿಸುತ್ತೀರಾ? ಎಂದವರು ಕುಮಾರಸ್ವಾಮಿ ಬಳಿ ಕೇಳಿದ್ದರು.

ಅವರು ಹೀಗೆ ಕೇಳುವ ಕಾಲಕ್ಕೆ ಸರಿಯಾಗಿ ಕಾಂಗ್ರೆಸ್ ನಾಯಕರ ವರ್ತನೆಯಿಂದ ಅಸಮಾಧಾನಗೊಂಡಿದ್ದ ದೇವೇಗೌಡರು ನೇರವಾಗಿ ದಿಲ್ಲಿಗೆ ಹೋಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ, ಈ ಸರ್ಕಾರ ನಡೆಯಲು ನಿಮ್ಮವರೇ ಅಡ್ಡಗಾಲು ಹಾಕುತ್ತಿದ್ದಾರೆ. ಹೀಗಾಗಿ ವಿಧಾನಸಭೆಯನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಹೋಗುವುದು ಲೇಸು ಎಂದು ಹೇಳಿ ಬಂದಿದ್ದರು.

ಯಾವ ಶಾಸಕರು ರಾಜೀನಾಮೆ ಕೊಡಲ್ಲ, ಸರ್ಕಾರ ಸುಭದ್ರ : ದೇವೇಗೌಡ ಯಾವ ಶಾಸಕರು ರಾಜೀನಾಮೆ ಕೊಡಲ್ಲ, ಸರ್ಕಾರ ಸುಭದ್ರ : ದೇವೇಗೌಡ

ಕುಮಾರಸ್ವಾಮಿ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರ

ಕುಮಾರಸ್ವಾಮಿ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರ

ಸಹಜವಾಗಿಯೇ ಮಧ್ಯಂತರ ಚುನಾವಣೆ ಎಂದಾಗ ಜೆಡಿಎಸ್ ಶಾಸಕರು ಗಾಬರಿಯಾದರು. ಈಗಲೇ ಚುನಾವಣೆಗೆ ಮಾಡಿರುವ ಸಾಲ ತೀರಿಲ್ಲ. ಹೀಗಿರುವಾಗ ಮತ್ತೆ ಮಧ್ಯಂತರ ಚುನಾವಣೆಯೇ? ಏನಾದರೂ ಮಾಡಿ, ಸರ್ಕಾರ ಎಂಬ ವ್ಯವಸ್ಥೆ ಉಳಿಯುವಂತೆ ಮಾಡಿ ಎಂದವರು ಕುಮಾರಸ್ವಾಮಿ ಮೊರೆ ಹೋದರು.

ಅಲ್ಲಿಗೆ ಯಡಿಯೂರಪ್ಪ ಅವರ ಆಸೆ ಮತ್ತು ಪಕ್ಷದ ಶಾಸಕರ ನಿರೀಕ್ಷೆಗಳೆರಡೂ ಸೇರಿ ಕುಮಾರಸ್ವಾಮಿ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರವೊಂದು ಬಂದು ಬಿದ್ದಂತಾಯಿತು. ಹೀಗಾಗಿ ಅವರು, ಜೆಡಿಎಸ್ ನಿಂದ ಒಂದು ಗುಂಪನ್ನು ಕರೆತರುತ್ತೇನೆ. ನೀವು ಪಕ್ಷದಲ್ಲಿದ್ದೇ ನಮಗೆ ಬೆಂಬಲ ಕೊಡಿಸಿ, ಇಬ್ಬರೂ ಸೇರಿ ಸರ್ಕಾರ ಮಾಡೋಣ. ಬರೀ ಮಂತ್ರಿಯಾಗುವುದೇಕೆ? ಉಪಮುಖ್ಯಮಂತ್ರಿಯೇ ಆಗಿ ಬಿಡಿ ಎಂದು ಯಡಿಯೂರಪ್ಪ ಅವರಿಗೆ ಸಲಹೆ ನೀಡಿದರು.

ಉಲ್ಟಾ ಹೊಡೆಯುವ ಶಕ್ತಿ ಸಿದ್ದುವಿಗಿದೆ

ಉಲ್ಟಾ ಹೊಡೆಯುವ ಶಕ್ತಿ ಸಿದ್ದುವಿಗಿದೆ

ಕುಮಾರಸ್ವಾಮಿ ಆಮಿಷ ಒಡ್ಡಿದ್ದರ ಪರಿಣಾಮವಾದರೂ ಏನು? ಹಲವರ ಆಸೆಗಳು ಒಗ್ಗೂಡಿ ಕುಮಾರಸ್ವಾಮಿ 2006ರಲ್ಲಿ ಧರ್ಮಸಿಂಗ್ ನೇತೃತ್ವದ ಮೈತ್ರಿಕೂಟ ಸರ್ಕಾರವನ್ನು ಬೀಳಿಸಲು ಮತ್ತು ಆ ಜಾಗದಲ್ಲಿ ಜೆಡಿಎಸ್-ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಸಾಧ್ಯವಾಯಿತು. ಅವತ್ತಿನ ಸ್ಥಿತಿಯಲ್ಲಿ ಇದಕ್ಕೆ ಉಲ್ಟಾ ಹೊಡೆಯುವ ಶಕ್ತಿ ಇದ್ದ ನಾಯಕ ಎಂದರೆ ಸಿದ್ಧರಾಮಯ್ಯ ಮಾತ್ರ. ಆದರೆ ಅವರಿಗೆ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕಲೆ ಗೊತ್ತಿರಲಿಲ್ಲ. ಹೀಗಾಗಿ ಅವರು ಎಲ್ಲವನ್ನೂ ನೋಡಿಕೊಂಡು ಮೌನವಾಗಿರಬೇಕಾಯಿತು.

ಆದರೆ ಈಗ ಕಾಲ ಬದಲಾಗಿದೆ. ಹನ್ನೆರಡು ವರ್ಷಗಳ ಅವಧಿಯಲ್ಲಿ ಸಿದ್ಧರಾಮಯ್ಯ ಈ ಕಲೆಯಲ್ಲಿ ಮಾಸ್ಟರ್ ಆಗಿ ಪರಿವರ್ತನೆಯಾಗಿದ್ದಾರೆ. ಅವರಿಗೆ ಜಾತಿಯ ಶಕ್ತಿಯನ್ನು ಬಳಸಿಕೊಳ್ಳುವುದು ಗೊತ್ತು. ಅಹಿಂದ ಸಮುದಾಯಗಳನ್ನು ದೊಡ್ಡ ಮಟ್ಟದಲ್ಲಿ ಒಂದುಗೂಡಿಸುವುದೂ ಗೊತ್ತು. ಅದೇ ರೀತಿ ಶಾಸಕರ ವೈಯಕ್ತಿಕ ಕುಂದುಕೊರತೆಗಳಿಗೆ ಪರಿಹಾರ ನೀಡುವುದೂ ಗೊತ್ತು.

ಸತೀಶ್‌ ಜಾರಕಿಹೊಳಿ ಪರ ಬ್ಯಾಟ್ ಬೀಸಿದ ಸಿದ್ದರಾಮಯ್ಯ, ಏನು ಒಳಮರ್ಮ?ಸತೀಶ್‌ ಜಾರಕಿಹೊಳಿ ಪರ ಬ್ಯಾಟ್ ಬೀಸಿದ ಸಿದ್ದರಾಮಯ್ಯ, ಏನು ಒಳಮರ್ಮ?

ಆ ಶಕ್ತಿ ರಮೇಶ್ ಜಾರಕಿಹೊಳಿ ಅವರಿಗೂ ಇಲ್ಲ

ಆ ಶಕ್ತಿ ರಮೇಶ್ ಜಾರಕಿಹೊಳಿ ಅವರಿಗೂ ಇಲ್ಲ

ಹೀಗಾಗಿ ಈ ಸಲದ ಸಚಿವ ಸಂಪುಟ ಪುನಾರಚನೆಯ ಸಂದರ್ಭದಲ್ಲಿ ತಮಗೆ ಬೇಕಾದವರನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಸುವಲ್ಲಿ ಅವರು ಯಶಸ್ವಿಯಾದರು. ಪರಿಣಾಮವಾಗಿ ಕೈ ಪಾಳೆಯದಲ್ಲಿ ಬಂಡಾಯವೆದ್ದಿದೆಯಾದರೂ, ಈ ಬಂಡಾಯದ ಚುಕ್ಕಾಣಿ ಹಿಡಿಯುವಂತಹ ಸಮರ್ಥ ನಾಯಕರು ಯಾರೂ ಕಾಣುತ್ತಿಲ್ಲ.

ರಾಮಲಿಂಗಾರೆಡ್ಡಿ, ರೋಷನ್ ಬೇಗ್, ಎಚ್.ಕೆ. ಪಾಟೀಲ ಅವರಂತಹ ಹಿರಿಯ ನಾಯಕರು ಕೈ ಪಾಳೆಯಕ್ಕೆ ತಮ್ಮದೇ ಕೊಡುಗೆ ನೀಡಿರುವುದು ನಿಜ. ಅವರು ಸಚಿವ ಸಂಪುಟದಲ್ಲಿರಬೇಕಿತ್ತು ಎಂಬುದೂ ನಿಜ. ಹಾಗೆಯೇ ಇದು ಆಗಿಲ್ಲ ಎಂದು ಅವರು ಅಸಮಾಧಾನಿತರಾಗಿರುವುದೂ ಸಹಜ.

ಆದರೆ ಅವರ್ಯಾರೂ ಕೈ ಪಾಳೆಯದ ವಿರುದ್ಧ ಸಾರಾಸಗಟಾಗಿ ತಿರುಗಿ ಬೀಳುವ ಮನ:ಸ್ಥಿತಿಯವರಲ್ಲ. ಇದ್ದುದರಲ್ಲಿ ರಮೇಶ್ ಜಾರಕಿಹೊಳಿ ಅವರಂತಹ ಶಾಸಕರು ಸರ್ಕಾರ ಬೀಳಲಿ ಎಂದು ಬಯಸುತ್ತಾರಾದರೂ, ಮತ್ತವರಿಗೆ ಹಲವರು ಕುಮ್ಮಕ್ಕು ನೀಡುತ್ತಾರಾದರೂ ಫೈನಲಿ, ಫ್ರಂಟ್ ಲೈನಿನಲ್ಲಿ ನಿಂತು ಅವರ ನಾಯಕರಾಗಿ ಬಂಡಾಯದ ಬಾವುಟ ಹಾರಿಸುವ ಶಕ್ತಿ ರಮೇಶ್ ಜಾರಕಿಹೊಳಿ ಅವರಿಗಿಲ್ಲ.

ರಮೇಶ್ ಜಾರಕಿಹೊಳಿ ಅಸಮಾಧಾನ : ಸತೀಶ್ ಜಾರಕಿಹೊಳಿ ಹೇಳಿದ್ದೇನು?ರಮೇಶ್ ಜಾರಕಿಹೊಳಿ ಅಸಮಾಧಾನ : ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಟಿಟ್ ಫಾರ್ ಟ್ಯಾಟ್ ಕಲೆ ಕರಗತ

ಟಿಟ್ ಫಾರ್ ಟ್ಯಾಟ್ ಕಲೆ ಕರಗತ

ಈ ಮಧ್ಯೆ ಸಮ್ಮಿಶ್ರ ಸರ್ಕಾರದ ಆಧಾರ ಸ್ತಂಭಗಳಾಗಿರುವ ಕುಮಾರಸ್ವಾಮಿ ಮತ್ತು ಸಿದ್ಧರಾಮಯ್ಯ ಅವರಿಬ್ಬರಿಗೂ ಟಿಟ್ ಫಾರ್ ಟ್ಯಾಟ್ ಕಲೆ ಗೊತ್ತು. ಅದರರ್ಥ, ಬಿಜೆಪಿ ಏನಾದರೂ ಆಪರೇಷನ್ ಕಮಲ ಕಾರ್ಯಾಚರಣೆಗೆ ಮುಂದಾದರೆ, ಕೆಸರಿಗೇ ನುಗ್ಗಿ ಕಮಲದ ನಡುವನ್ನು ಕತ್ತರಿಸುವುದು ಇಬ್ಬರಿಗೂ ಗೊತ್ತು.

ಹೀಗಾಗಿ ಆಪರೇಷನ್ ಕಮಲ ಕಾರ್ಯಾಚರಣೆ ಮಾಡುವುದು ಸರಳ ಸಂಗತಿಯೇನಲ್ಲ. ಯಾವ ಆಮಿಷವೊಡ್ಡಿ ಯಡಿಯೂರಪ್ಪ ಕೈ ಪಾಳೆಯದ, ತೆನೆ ಪಾಳೆಯದ ಶಾಸಕರನ್ನು ಸೆಳೆಯಬಲ್ಲರೋ? ಅಂತಹದೇ ಆಮಿಷಗಳನ್ನು ಒಡ್ಡಿ ಕಮಲ ಪಾಳೆಯದ ಶಾಸಕರನ್ನು ಸೆಳೆಯುವುದು ಕುಮಾರಸ್ವಾಮಿ ಹಾಗೂ ಸಿದ್ಧರಾಮಯ್ಯ ಅವರಿಬ್ಬರಿಗೂ ಗೊತ್ತು.

ಬಂಡಾಯದ ಎಪಿಸೋಡು ಇನ್ನೆಷ್ಟು ದಿನ?

ಬಂಡಾಯದ ಎಪಿಸೋಡು ಇನ್ನೆಷ್ಟು ದಿನ?

ಹೀಗಾಗಿ ಸಚಿವ ಸಂಪುಟ ಪುನಾರಚನೆಯ ಬೆಳವಣಿಗೆಯಿಂದ ಕುಮಾರಸ್ವಾಮಿ ಸರ್ಕಾರ ಉರುಳುತ್ತದೆ ಎನ್ನುವುದು ಕಷ್ಟ. ಹಾಗೇನಾದರೂ ರಮೇಶ್ ಜಾರಕಿಹೊಳಿ ಅವರನ್ನು ನಂಬಿಕೊಂಡು ಹದಿನೈದಕ್ಕೂ ಹೆಚ್ಚು ಶಾಸಕರು ಬಿಜೆಪಿ ಕಡೆ ಹೋಗುತ್ತಾರೆ ಎಂದಾದರೆ ಅನುಮಾನವೇ ಬೇಡ, ನಿಶ್ಚಿತವಾಗಿಯೂ ಅವರು ಭವಿಷ್ಯದ ಕುಮಾರಸ್ವಾಮಿ ಯಾ ಸಿದ್ಧರಾಮಯ್ಯ ಆಗುತ್ತಾರೆ.

ಆದರೆ ಸಮಸ್ಯೆ ಎಂದರೆ ಸರ್ಕಾರ ಬೀಳಿಸುವ ಪಿಕ್ಚರ್ ಓಡಿಸಲು ಯಡಿಯೂರಪ್ಪ ಸಿದ್ಧರಾಗಿದ್ದಾರೆ. ಟಿಕೆಟ್ ಕೌಂಟರಿನಲ್ಲಿ ರಮೇಶ್ ಜಾರಕಿಹೊಳಿಯೂ ಕುಳಿತುಕೊಂಡಿದ್ದಾರೆ. ಆದರೆ ಕೌಂಟರಿನ ಹೊರಗೆ ನಿಂತಿರುವವರಿಗೆ ಟಿಕೆಟ್ ಕೊಂಡುಕೊಳ್ಳುವ ಮನಸ್ಸಿದ್ದರೂ, ಧೈರ್ಯವಿಲ್ಲ. ಹೀಗಾಗಿ ಸ್ವಲ್ಪ ದಿನದ ಮಟ್ಟಿಗೆ ಬಂಡಾಯದ ಎಪಿಸೋಡು ಮುಂದುವರಿಯುತ್ತದೆ. ಸ್ವಲ್ಪ ದಿನಗಳ ನಂತರ ತಾನೇ ತಾನಾಗಿ ತಣ್ಣಗಾಗುತ್ತದೆ.

English summary
Present political developments in Karnataka are not different from situation when Dharam Singh formed government with the help of JDS. Will the government fall due to the dissidence of some Congress leaders? Political analysis by R T Vittal Murthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X