ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದುಕಿನಲ್ಲಿ ನೆಮ್ಮದಿಯಾಗಿರಬೇಕಾದರೆ ಏನು ಮಾಡಬೇಕು?

|
Google Oneindia Kannada News

ನಮ್ಮ ಪಾಡಿಗೆ ನಾವು ಬದುಕುವುದನ್ನು ರೂಢಿಸಿಕೊಳ್ಳದೇ ಹೋದರೆ ನೆಮ್ಮದಿಯ ಬದುಕು ನಮಗೆ ಮರೀಚಿಕೆಯಾಗುತ್ತದೆ. ಏಕೆಂದರೆ ಕೆಲವೊಮ್ಮೆ ನಮಗೆ ಅಗತ್ಯವಿಲ್ಲದ ವಿಚಾರಗಳಿಗೆಲ್ಲ ಮೂಗು ತೂರಿಸಿ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ. ಬಹಳಷ್ಟು ಸಾರಿ ನಮ್ಮ ನೆಮ್ಮದಿ ಹಾಳಾಗಲು ಪರೋಕ್ಷವಾಗಿ ನಾವೇ ಕಾರಣರಾಗಿರುತ್ತೇವೆ.

ಇವತ್ತಿನ ಬದುಕಿನಲ್ಲಿ ನಾವ್ಯಾರು ನೆಮ್ಮದಿಯಾಗಿಲ್ಲ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮನೆಯಿಂದ ಆಫೀಸಿನವರೆಗೂ ನಮ್ಮದು ಒಂಥರಾ ಧಾವಂತದ ಬದುಕು. ಪ್ರತಿಕ್ಷಣವೂ ಒತ್ತಡ, ಆತಂಕದಲ್ಲಿಯೇ ಕಳೆಯುತ್ತಿರುತ್ತೇವೆ. ಇದಕ್ಕೆ ಕಾರಣ, ಹೆಚ್ಚು ಹೆಚ್ಚು ಹಣ ಸಂಪಾದಿಸಬೇಕೆನ್ನುವ ಹಂಬಲ, ಐಷಾರಾಮಿಯಾಗಿ ಬದುಕು ಸಾಗಿಸಬೇಕೆನ್ನುವ ದುರಾಸೆ. ಅಷ್ಟೇ ಅಲ್ಲ ಯಾರಿಗೂ ನಾವು ಕಡಿಮೆ ಇಲ್ಲ ಎನ್ನುವ ಒಣ ಪ್ರತಿಷ್ಠೆ. ಇದೆಲ್ಲವೂ ನಮಗೆ ಗೊತ್ತಿಲ್ಲದಂತೆ ನಮ್ಮ ನೆಮ್ಮದಿಯನ್ನು ಕೊಲ್ಲುತ್ತಾ ಹೋಗುತ್ತದೆ.

ನೆಮ್ಮದಿಯಿಲ್ಲದಿದ್ದರೆ ಬದುಕು ಕಷ್ಟಕರ

ನೆಮ್ಮದಿಯಿಲ್ಲದಿದ್ದರೆ ಬದುಕು ಕಷ್ಟಕರ

ಒಂದು ವೇಳೆ ನಾವು ನೆಮ್ಮದಿಯನ್ನು ಕಳೆದುಕೊಂಡಿದ್ದೇ ಆದರೆ ಒಂದೊಳ್ಳೆಯ ಬದುಕನ್ನು ಕಟ್ಟಿಕೊಳ್ಳುವುದು ಅಸಾಧ್ಯವೇ. ನಾವು ನಾವಾಗಿ ಉಳಿಯುವುದು ಕೂಡ ಕಷ್ಟವೇ. ಮನಸ್ಸಿನ ಹಲವು ಬಗೆಯ ಹೊಯ್ದಾಟದಿಂದಾಗಿ ಕೆಲವೊಮ್ಮೆ ಎಲ್ಲ ವಿಚಾರಗಳನ್ನು ತಲೆಯಲ್ಲಿಟ್ಟುಕೊಳ್ಳಲು ಸಾಧ್ಯವಾಗದೆ ಮರೆವು ನಮ್ಮನ್ನು ಬಾಧಿಸಬಹುದು. ಆದ್ದರಿಂದ ಹಲವು ಸಮಸ್ಯೆಗಳನ್ನು ಎಳೆದುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಬಹುದು. ಉದಾಹರಣೆಗೆ ಆಹಾರ ಸೇವಿಸುವುದನ್ನು ಮರೆಯಬಹುದು. ಒಂದು ವೇಳೆ ಸಮಯಕ್ಕೆ ಸರಿಯಾಗಿ ಹೊಟ್ಟೆ ಆಹಾರವನ್ನು ಹಸಿವಿನ ಮೂಲಕ ನೆನಪಿಸಿದರೂ, ಕೆಲಸದ ಒತ್ತಡದಲ್ಲಿ ಅದನ್ನು ಮತ್ತೆ ಮಾಡಿದರಾಯಿತೆಂದು ಮುಂದೂಡಿ ಆರೋಗ್ಯ ಕೆಡಿಸಿಕೊಳ್ಳಬಹುದು. ಜತೆಗೆ ನಿದ್ದೆ ಕಡಿಮೆಯಾಗಿ ಕ್ರಿಯಾಶೀಲತೆಗೂ ಧಕ್ಕೆ ಬರಬಹುದು.

ಮಹಿಳಾ ದಿನದ ವಿಶೇಷ: ನೋವು ನುಂಗಿ ನಗುವ ಚೆಲ್ಲುವ ಆಕೆಗೊಂದು ನಮನ..ಮಹಿಳಾ ದಿನದ ವಿಶೇಷ: ನೋವು ನುಂಗಿ ನಗುವ ಚೆಲ್ಲುವ ಆಕೆಗೊಂದು ನಮನ..

ನೆಮ್ಮದಿಯ ಮೇಲೆ ಒತ್ತಡದ ಸವಾರಿ

ನೆಮ್ಮದಿಯ ಮೇಲೆ ಒತ್ತಡದ ಸವಾರಿ

ಹಾಗಾದರೆ ಒತ್ತಡದ ಬದುಕಿನಲ್ಲಿಯೂ ನಾವು ನೆಮ್ಮದಿಯ ಬದುಕನ್ನು ಹೇಗೆ ಸಾಗಿಸಬಹುದು? ಎಂಬ ಪ್ರಶ್ನೆಗಳು ನಮ್ಮಲ್ಲಿ ಸಹಜವಾಗಿ ಹುಟ್ಟಬಹುದು. ಇದಕ್ಕೆ ಉತ್ತರವನ್ನು ನಾವೇ ಹುಡುಕಿಕೊಳ್ಳಬೇಕಾಗುತ್ತದೆ. ಅನಗತ್ಯ ವಿಚಾರಗಳಿಂದ ದೂರವಿರುವುದು. ಮಾತನಾಡುವ ಮುನ್ನ ಯೋಚಿಸಿ ಮಾತನಾಡುವುದು, ದುರಾಸೆಗಳಿಂದ ಮುಕ್ತರಾಗುವುದು ಹೀಗೆ, ಕೆಲವೊಂದನ್ನು ನಾವು ಬಲತ್ಕಾರವಾಗಿ ಬದುಕಿನಲ್ಲಿ ರೂಢಿಸಿಕೊಳ್ಳಬೇಕಾಗುತ್ತದೆ. ಹಲವು ಸಂದರ್ಭಗಳಲ್ಲಿ ನಮಗೆ ನಾವೇ ತಂದುಕೊಳ್ಳುವ ಒತ್ತಡದ ಜೀವನವೂ ನೆಮ್ಮದಿಯ ಮೇಲೆ ಸವಾರಿ ಮಾಡಬಹುದು. ಹೀಗಾಗಿ ನಾವು ಮಾಡುವ ಕೆಲಸವಾಗಲೀ, ಸಾಗಿಸುವ ಜೀವನವಾಗಲೀ ಸಂತಸದಿಂದಲೇ ಮಾಡುವುದನ್ನು ಕಲಿಯಬೇಕು.

ಸಮಸ್ಯೆಗಳು ನೆಮ್ಮದಿಯನ್ನು ಕೊಲ್ಲುತ್ತವೆ

ಸಮಸ್ಯೆಗಳು ನೆಮ್ಮದಿಯನ್ನು ಕೊಲ್ಲುತ್ತವೆ

ಕೆಲವು ಸಮಸ್ಯೆಗಳು ನಮ್ಮ ಮನಸ್ಸಿನಲ್ಲಿದ್ದುಕೊಂಡೇ ನೆಮ್ಮದಿಯನ್ನು ಕೊಂದು ಹಾಕುತ್ತದೆ. ಈ ವೇಳೆ ಹಿತೈಷಿಗಳ ಸಲಹೆ ಪಡೆದು ಅಥವಾ ಚರ್ಚಿಸಿ ಒಂದಷ್ಟು ಪರಿಹಾರವನ್ನು ಕಂಡು ಕೊಳ್ಳಲು ಸಾಧ್ಯವಿದೆ. ಇದಲ್ಲದೆ ಬೆರೆತು ಬದುಕುವುದನ್ನು ಕಲಿಯಬೇಕು. ಮಾತನಾಡುವಾಗ ಎಚ್ಚರವಿರಬೇಕು, ಮತ್ತೊಬ್ಬರ ಬಗ್ಗೆ ಏನೇನೋ ಮಾತನಾಡಿ ಮನನೋಯಿಸುವ ಅಥವಾ ವಿವಾದಕ್ಕೆ ಗುರಿಯಾಗದಂತೆ ನೋಡಿಕೊಳ್ಳುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು. ಎಲ್ಲರೊಂದಿಗೆ ಹೊಂದಿಕೊಂಡು ಬೆರೆಯುವ ಮನೋಭಾವವಿರಬೇಕು. ಗಾಳಿ ಸುದ್ದಿಯನ್ನು ನಿಜವೆಂಬಂತೆ ಮಾತನಾಡುವುದನ್ನು ಬಿಟ್ಟು ಬಿಡಬೇಕು.

ಮತ್ಯಾರನ್ನೋ ತೇಜೋವಧೆ ಮಾಡಬೇಡಿ

ಮತ್ಯಾರನ್ನೋ ತೇಜೋವಧೆ ಮಾಡಬೇಡಿ

ದುಡಿಮೆಯ ನಡುವೆಯೂ ವಿಶ್ರಾಂತಿಗೆ ಸಮಯ ನೀಡಬೇಕು. ಮನಸ್ಸಿಗೆ ಸಂತೋಷ ನೀಡುವ ಇತರರಿಗೂ ಉಪಯೋಗವಾಗುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸಾಹಿತ್ಯ, ಕ್ರೀಡೆ ಮೊದಲಾದವುಗಳತ್ತ ಆಸಕ್ತಿ ವಹಿಸಬೇಕು. ಅವತ್ತಿನ ಕೆಲಸವನ್ನು ಅವತ್ತೆ ಮಾಡಿದರೆ ಒಳ್ಳೆಯದು. ಮುಂದೂಡಿದರೆ ಎಲ್ಲವನ್ನೂ ಒಟ್ಟಿಗೆ ಮುಗಿಸಬೇಕಾದ ಅನಿವಾರ್ಯತೆಯಿಂದ ಒತ್ತಡ ಹೆಚ್ಚಾಗುತ್ತದೆ. ಯಾವುದೇ ಕೆಲಸ ಮಾಡಬೇಕಾದರೂ ಅದಕ್ಕೊಂದು ಪೂರ್ವಭಾವಿ ಸಿದ್ಧತೆಯಿದ್ದು, ಅವರಂತೆ ಮಾಡಿದರೆ ಒಳ್ಳೆಯಾಗುತ್ತದೆ. ಒಂದೇ ಕಡೆ ಕುಳಿತು ಟಿವಿ ನೋಡುವುದನ್ನು ಕಡಿಮೆ ಮಾಡಿ. ಬದಲಿಗೆ ಪುಸ್ತಕ, ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಂಡರೆ ಉತ್ತಮ. ಮೊಬೈಲ್ ಚಾಟ್, ಅನಗತ್ಯ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವುದು, ಮತ್ಯಾರನ್ನೋ ತೇಜೋವಧೆ ಮಾಡುವ ವಿಚಾರದಿಂದ ದೂರವಿರಬೇಕು.

ಆಸೆಗಳಿರಲಿ ಆದರೆ ದುರಾಸೆ ಬೇಡ

ಆಸೆಗಳಿರಲಿ ಆದರೆ ದುರಾಸೆ ಬೇಡ

ಮೋಜು ಮಸ್ತಿ, ಪಾರ್ಟಿಗೆ ಕಡಿವಾಣ ಹಾಕಬೇಕು. ನಾವೇನು ಕೆಲಸ ಮಾಡುತ್ತಿದ್ದೇವೆಯೋ? ಅದನ್ನು ಪ್ರೀತಿಯಿಂದ ಮಾಡಬೇಕು, ಆಸೆಗಳಿರಲಿ ಆದರೆ ದುರಾಸೆ ಬೇಡ, ಸಾಲ ಕೊಡುತ್ತಾರೆ ಎಂಬ ಕಾರಣಕ್ಕೆ ಸಾಲ ಮಾಡದೆ ತೀರಿಸುವ ಮಾರ್ಗವಿದ್ದು, ಅಗತ್ಯವಿದ್ದರಷ್ಟೆ ಸಾಲ ಮಾಡಬೇಕು. ಗೊತ್ತಿಲ್ಲದ ವಿಚಾರದಲ್ಲಿ ಮೂಗು ತೂರಿಸಬಾರದು. ಇದೆಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಪಾಡಿಗೆ ನಾವಿರುವುದನ್ನು ಕಲಿತರೆ ಜೀವನವನ್ನು ನೆಮ್ಮದಿಯಾಗಿ ಸಾಗಿಸಲು ಸಾಧ್ಯವಾಗುತ್ತದೆ.

English summary
Most of the time we are indirectly responsible for our incomfort life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X