ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು NPR? CAA, NRC ಮತ್ತು NPR ಸಂಬಂಧ, ವ್ಯತ್ಯಾಸಗಳೇನು?

|
Google Oneindia Kannada News

ರಾಷ್ಟ್ರೀಯ ಪೌರತ್ವ ನೋಂದಣಿ (NRC) ಮೂಲಕ ಭಾರತೀಯ ನಾಗರಿಕರನ್ನು ಗುರುತಿಸುವ ಯೋಜನೆ ಭಾರಿ ವಿವಾದ ಸೃಷ್ಟಿಸಿತ್ತು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿ ಧಾರ್ಮಿಕ ಕಿರುಕುಳ ಅನುಭವಿಸಿ ವಲಸೆ ಬಂದ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆಗೆ (CAA) ಅನುಮೋದನೆ ಪಡೆದುಕೊಂಡಿದ್ದು, ದೇಶದಾದ್ಯಂತ ಹಿಂಸಾಚಾರ ಸಹಿತದ ಪ್ರತಿಭಟನೆಗೆ ಕಾರಣವಾಯಿತು. ಈ ನಡುವೆ ಕೇಂದ್ರ ಸರ್ಕಾರ ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ (NPR) ಚಾಲನೆ ನೀಡಿದೆ. ಅದಕ್ಕಾಗಿ 3,941.35 ಕೋಟಿ ರೂ.ಅನುದಾನಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಕರ್ನಾಟಕದಲ್ಲಿ ಏಪ್ರಿಲ್ 15ರಿಂದ ಎನ್‌ಪಿಆರ್ ಮತ್ತು ಜನಗಣತಿ ನಡೆಸಲು ತೀರ್ಮಾನಿಸಲಾಗಿದೆ. ಏನಿದು ಎನ್‌ಆರ್‌ಸಿ, ಸಿಎಎ ಮತ್ತು ಎನ್‌ಪಿಆರ್? ಇವುಗಳ ನಡುವಿನ ವ್ಯತ್ಯಾಸಗಳೇನು? ಜನಗಣತಿಯ ಸಾಮಾನ್ಯ ಪ್ರಕ್ರಿಯೆಗೂ ಎನ್‌ಪಿಆರ್‌ಗೂ ಸಂಬಂಧವೇನಿದೆ? ಮುಂತಾದ ಗೊಂದಲಗಳು ಉದ್ಭವಿಸಿವೆ. ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ...

NRCಗೂ ಮೊದಲು NPR: ಕೇಂದ್ರದ ಮಹತ್ವದ ತೀರ್ಮಾನNRCಗೂ ಮೊದಲು NPR: ಕೇಂದ್ರದ ಮಹತ್ವದ ತೀರ್ಮಾನ

ಭಾರತದ ಸಾಮಾನ್ಯ ನಾಗರಿಕರನ್ನು ಮೂರು ಕಾನೂನುಗಳ ಅಡಿಯಲ್ಲಿ (1955ರ ಪೌರತ್ವ ಕಾಯ್ದೆ, 1946ರ ವಿದೇಶಿಗರ ಕಾಯ್ದೆ, 1920ರ ಪಾಸ್‌ಪೋರ್ಟ್ ಕಾಯ್ದೆ) ಒಳ ನುಸುಳುಕೋರರು, ಅಕ್ರಮ ವಲಸಿಗರಿಂದ ಪ್ರತ್ಯೇಕಿಸುವ, ವ್ಯಾಖ್ಯಾನಿಸುವ, ಗುರುತಿಸುವ ಮತ್ತು ಖಾತರಿಪಡಿಸುವ ಕಾರ್ಯ ಮಾಡಲಾಗುತ್ತದೆ.

ಎನ್‌ಪಿಆರ್ ಮತ್ತು ಜನಗಣತಿ

ಎನ್‌ಪಿಆರ್ ಮತ್ತು ಜನಗಣತಿ

ಎನ್‌ಪಿಆರ್ ಎಂದರೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ. ಇದು 1955ರ ಪೌರತ್ವ ಕಾಯ್ದೆಯಡಿ 2003ರಲ್ಲಿ ಎನ್‌ಪಿಆರ್ ರೂಪಿಸಲಾಯಿತು. ಎನ್‌ಪಿಆರ್‌ನ ನಿಯಮಾವಳಿಗಳೇ ಭಾರತದ ರಾಷ್ಟ್ರೀಯ ಪೌರತ್ವ ನೋಂದಣಿಗೆ (ಎನ್‌ಸಿಆರ್) ಕಾನೂನಾತ್ಮಕ ಚೌಕಟ್ಟು ನೀಡುತ್ತವೆ.

ಎನ್‌ಪಿಆರ್ ಎನ್ನುವುದು ದೇಶದ ಎಲ್ಲ ಸಹಜ ನಿವಾಸಿಗಳ ಪಟ್ಟಿಯನ್ನು ಒಳಗೊಂಡ ದತ್ತಾಂಶ. ದೇಶದಲ್ಲಿ ವಾಸಿಸುತ್ತಿರುವ ಜನರ ಸಮಗ್ರ ಗುರುತಿನ ದತ್ತಾಂಶ ಹೊಂದುವುದು ಎನ್‌ಪಿಆರ್ ಮೂಲ ಉದ್ದೇಶ. ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಸಂದರ್ಭದಲ್ಲಿ ಮನೆ ಮನೆ ಸಮೀಕ್ಷೆ ಮೂಲಕ ಸಾಮಾನ್ಯ ನಿವಾಸಿಗಳ ಪಟ್ಟಿ ಸಿದ್ಧಪಡಿಸಲಾಗುತ್ತದೆ. ದೇಶದಲ್ಲಿ ಈ ಹಿಂದೆ ಜನಗಣತಿ ನಡೆದಿದ್ದು 2011ರಲ್ಲಿ. ಮುಂದಿನ ಜನಗಣತಿ 2021ರಲ್ಲಿ ನಡೆಯಲಿದೆ. ಇದನ್ನು ಮೊಬೈಲ್ ಫೋನ್ ಆಪ್ ಮೂಲಕ ನಡೆಸಲಾಗುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಎನ್‌ಪಿಆರ್‌ನಲ್ಲಿ ಏನೇನಿರಲಿದೆ?

ಎನ್‌ಪಿಆರ್‌ನಲ್ಲಿ ಏನೇನಿರಲಿದೆ?

ದೇಶದಲ್ಲಿ ಮೊದಲ ಜನಗಣತಿ ನಡೆದಿದ್ದು 1872ರಲ್ಲಿ. 2021ರಲ್ಲಿ ನಡೆಯುವ ಜನಗಣತಿ 16ನೆಯ ಗಣತಿಯಾಗಲಿದೆ. ಹಾಗೆಯೇ ಸ್ವಾತಂತ್ರ್ಯಾನಂತರದ ಎಂಟನೇ ಜನಗಣತಿಯಾಗಲಿದೆ.

ಎನ್‌ಪಿಆರ್‌ನಲ್ಲಿ ಸಾಮಾನ್ಯ ನಾಗರಿಕ ಒಂದು ಸ್ಥಳದಲ್ಲಿ ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಸಮಯದಿಂದ ವಾಸಿಸುತ್ತಿದ್ದಾನೆಯೇ ಮತ್ತು ಇನ್ನೂ ಆರು ಅಥವಾ ಅದಕ್ಕಿಂತ ಹೆಚ್ಚು ತಿಂಗಳು ಅಲ್ಲಿಯೇ ನೆಲೆಸಲು ಬಯಸಿದ್ದಾನೆಯೇ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ.

NRC: ಭಾರತೀಯ ಪೌರರೆಂದು ಸಾಬೀತುಪಡಿಸಲು ಕೊಡಬೇಕಾದ ದಾಖಲೆಗಳ ಪಟ್ಟಿNRC: ಭಾರತೀಯ ಪೌರರೆಂದು ಸಾಬೀತುಪಡಿಸಲು ಕೊಡಬೇಕಾದ ದಾಖಲೆಗಳ ಪಟ್ಟಿ

ಜನಗಣತಿಯಲ್ಲಿ ಸವಿವರವಾದ ಪ್ರಶ್ನೋತ್ತರ ಇರುತ್ತದೆ. 2011ರ ಜನಗಣತಿಯಲ್ಲಿ ಒಟ್ಟು 29 ಅಂಶಗಳಿಗೆ ಉತ್ತರ ನೀಡಬೇಕಿತ್ತು. ಪ್ರತಿ ವ್ಯಕ್ತಿಯ ವಯಸ್ಸು, ಲಿಂಗ, ವೈವಾಹಿಕ ವಿವರ, ಮಕ್ಕಳು, ವೃತ್ತಿ, ಜನ್ಮಸ್ಥಳ, ಮಾತೃಭಾಷೆ, ಧರ್ಮ, ಅಂಗವೈಕಲ್ಯ, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆಯೇ ಮುಂತಾದವುಗಳು ಸೇರಿದಂತೆ ಅನೇಕ ಮಾಹಿತಿಗಳನ್ನು ಒದಗಿಸಬೇಕು. ಇನ್ನೊಂದೆಡೆ ಎನ್‌ಪಿಆರ್ ಸಂಗ್ರಹಕಾರರು ಮೂಲ ಜನಸಂಖ್ಯಾ ದತ್ತಾಂಶಗಳು ಹಾಗೂ ಬಯೋಮೆಟ್ರಿಕ್ ವಿವರಗಳನ್ನು ಪಡೆದುಕೊಳ್ಳುತ್ತಾರೆ. ಮುಖ್ಯವಾಗಿ ಜನಗಣತಿಯಲ್ಲಿ ವ್ಯಕ್ತಿಗಳು ಮಾಡುವ ಸ್ವಯಂ ಘೋಷಣೆಯನ್ನು ಯಾವುದೇ ಪುನರ್ ಪರಿಶೀಲನೆಗಳಿಲ್ಲದೆ ದಾಖಲಿಸಲಾಗುತ್ತದೆ. ಎನ್‌ಪಿಆರ್‌ನಲ್ಲಿ 21 ಅಂಶಗಳಿಗೆ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಪಾನ್, ಆಧಾರ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಮತ್ತು ಮೊಬೈಲ್ ನಂಬರ್ ಮುಂತಾದ ವಿವರಗಳನ್ನು ಪಡೆದುಕೊಳ್ಳಲಾಗುತ್ತದೆ.

ಮಾಹಿತಿ ನೀಡದೆ ಇದ್ದರೆ ಏನಾಗುತ್ತದೆ?

ಮಾಹಿತಿ ನೀಡದೆ ಇದ್ದರೆ ಏನಾಗುತ್ತದೆ?

ಎನ್‌ಪಿಆರ್ ಸಿದ್ಧಪಡಿಸಲು ಜನಸಂಖ್ಯಾ ವಿವರಗಳನ್ನು ಹಂಚಿಕೊಳ್ಳುವುದು ಕಡ್ಡಾಯ. ಒಂದು ವೇಳೆ ಮಾಹಿತಿ ನೀಡಲು ನಿರಾಕರಿಸಿದರೆ, ತಪ್ಪು ಮಾಹಿತಿಗಳನ್ನು ನೀಡುವ ಮೂಲಕ ದಾರಿ ತಪ್ಪಿಸಲು ಪ್ರಯತ್ನಿಸಿದರೆ ಅದು 2003ರ ಪೌರತ್ವ ನಿಯಮಗಳ ಪ್ರಕಾರ ದಂಡದ ಶಿಕ್ಷೆಗೆ ಗುರಿಯಾಗಬಹುದು. ಎನ್‌ಪಿಆರ್ ಡೇಟಾ ಮಾಹಿತಿ ನೀಡದೆ ಇರುವುದು ನಿಯಮ 17ರ ಪ್ರಕಾರ ಶಿಕ್ಷಾರ್ಹ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಜನಗಣತಿ ನಡೆಸುವ ಸಿಬ್ಬಂದಿ ಕುಟುಂಬದ ಮುಖ್ಯಸ್ಥರ ಮೂಲ ವಿವರಗಳನ್ನು ಪಡೆದುಕೊಂಡ ಬಳಿಕ ಸ್ವೀಕೃತಿ ಚೀಟಿಯನ್ನು ನೀಡುತ್ತಾರೆ. ಈ ಚೀಟಿಯು ಎನ್‌ಪಿಆರ್ ಪ್ರಕ್ರಿಯೆ ಆರಂಭವಾದಾಗ ಅದರ ನೋಂದಣಿಗೆ ಅಗತ್ಯವಾಗಿರುತ್ತದೆ.

ಪ್ರತಿ ಸ್ಥಳೀಯ (ಗ್ರಾಮ ಅಥವಾ ವಾರ್ಡ್), ಉಪ-ಜಿಲ್ಲಾ (ತಾಲ್ಲೂಕು), ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ವಿವರಗಳನ್ನು ದಾಖಲಿಸಿಕೊಂಡ ಬಳಿಕ ಈ ಮಟ್ಟಗಳಲ್ಲಿ ಜನಸಂಖ್ಯಾ ನೋಂದಣಿ ಮಾಡಲಾಗುತ್ತದೆ.

ಎನ್‌ಪಿಆರ್‌ನ ಕಾನೂನಾತ್ಮಕ ಚೌಕಟ್ಟು

ಎನ್‌ಪಿಆರ್‌ನ ಕಾನೂನಾತ್ಮಕ ಚೌಕಟ್ಟು

ಜನಗಣತಿಯು 1948ರ ಜನಗಣತಿ ಕಾಯ್ದೆಯಿಂದ ಮಾನ್ಯತೆ ಪಡೆದು ನಡೆಯುತ್ತದೆ. ಎನ್‌ಪಿಆರ್‌ಅನ್ನು 1955ರ ಪೌರತ್ವ ಕಾಯ್ದೆಯಡಿ ರೂಪಿಸಲಾದ ನಿಯಮಗಳ ಆಧಾರದಲ್ಲಿ ಸಿದ್ಧಪಡಿಸಲಾಗಿದೆ. 1955ರ ಪೌರತ್ವ ಕಾಯ್ದೆಗೆ 2004ರಲ್ಲಿ ಸೆಕ್ಷನ್ 14A ಅನ್ನು ಅಡಕ ಮಾಡಲಾಗಿತ್ತು. ಇದರ ಮೂಲಕ ಭಾರತದ ಪ್ರತಿ ನಾಗರಿಕನ ಕಡ್ಡಾಯ ನೋಂದಣಿ ಮಾಡಿಕೊಳ್ಳುವುದು ಹಾಗೂ ಅವರಿಗೆ ರಾಷ್ಟ್ರೀಯ ಗುರುತಿನ ಚೀಟಿ ನೀಡುವುದಕ್ಕೆ ಚಾಲನೆ ನೀಡಲಾಗಿತ್ತು. ಕೇಂದ್ರ ಸರ್ಕಾರವು ಭಾರತೀಯ ಪ್ರಜೆಗಳ ರಾಷ್ಟ್ರೀಯ ನೋಂದಣಿಯನ್ನು ನಿರ್ವಹಿಸಲು ಇದು ಅಗತ್ಯ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಈಗಾಗಲೇ ಶುರುವಾಗಿದೆ 'ಅಕ್ರಮ ವಲಸಿಗರ' ಪತ್ತೆ ಕಾರ್ಯರಾಜ್ಯದಲ್ಲಿ ಈಗಾಗಲೇ ಶುರುವಾಗಿದೆ 'ಅಕ್ರಮ ವಲಸಿಗರ' ಪತ್ತೆ ಕಾರ್ಯ

ರಿಜಸ್ಟ್ರಾರ್ ಜನರಲ್ ಇಂಡಿಯಾವು ರಾಷ್ಟ್ರೀಯ ನೋಂದಣಿ ಪ್ರಾಧಿಕಾರದಂತೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ರಿಜಿಸ್ಟ್ರಾರ್ ಜನರಲ್ ದೇಶದ ಜನಗಣತಿ ಆಯೋಗವೂ ಹೌದು. ಭಾರತೀಯ ಪ್ರಜೆಗಳ ರಾಷ್ಟ್ರೀಯ ನೋಂದಣಿಯನ್ನು (NRIC) ಜಾರಿಗೆ ತರುವಲ್ಲಿನ ಮೊದಲ ಹೆಜ್ಜೆ ಎನ್‌ಪಿಆರ್.

ಎನ್‌ಪಿಆರ್‌ಗೂ ಆಧಾರ್‌ಗೂ ಸಂಬಂಧವಿದೆಯೇ?

ಎನ್‌ಪಿಆರ್‌ಗೂ ಆಧಾರ್‌ಗೂ ಸಂಬಂಧವಿದೆಯೇ?

ಸರ್ಕಾರದ ಪ್ರಯೋಜನ ಹಾಗೂ ಸೇವೆಗಳನ್ನು ಜನರಿಗೆ ಇನ್ನಷ್ಟು ಉತ್ತಮವಾಗಿ ತಲುಪಿಸುವುದು ಎನ್‌ಪಿಆರ್‌ನ ಮೂಲ ಉದ್ದೇಶಗಳಲ್ಲಿ ಒಂದು. ಎನ್‌ಪಿಆರ್ ನೋಂದಣಿಯ ಆರಂಭದ ದಿನಗಳಲ್ಲಿ ಯುಪಿಎ ಸರ್ಕಾರವು ಸಾಮಾನ್ಯ ಗುರುತಿನ ಚೀಟಿ ಪ್ರಾಧಿಕಾರದ ಮೂಲಕ ಆಧಾರ್ ಸಂಖ್ಯೆ ನೀಡುವ ಯೋಜನೆಯನ್ನು ಆರಂಭಿಸಿತು. ಎನ್‌ಪಿಆರ್ ಮತ್ತು ಯುಐಡಿಎಐ ಎರಡರ ಆಡಳಿತ ನಿಭಾಯಿಸುತ್ತಿರುವ ಕೇಂದ್ರ ಗೃಹ ಸಚಿವಾಲಯದಲ್ಲಿಯೇ ಈ ಕುರಿತು ಸಂಘರ್ಷದ ವಾತಾವರಣವಿದೆ. ಎರಡೂ ಯೋಜನೆಗಳು ಬಯೋಮೆಟ್ರಿಕ್ ದತ್ತಾಂಶ ಸೇರಿದಂತೆ ವೈಯಕ್ತಿಕ ವಿವರಗಳನ್ನು ಸಂಗ್ರಹಿಸುವುದರಿಂದ ಒಂದೇ ಸಾಮಾನ್ಯ ಕೆಲಸಗಳನ್ನು ಮಾಡಿದಂತಾಗುತ್ತದೆ.

ಅಂತಿಮವಾಗಿ ಎರಡೂ ದತ್ತಾಂಶಗಳು ವಿಭಿನ್ನ ಉದ್ದೇಶಗಳ ಸಲುವಾಗಿ ಸಂಗ್ರಹಿಸಲಾಗುತ್ತಿದೆ. ಹಾಗೂ ಪರಸ್ಪರ ಬಯೋಮೆಟ್ರಿಕ್ ವಿವರಗಳನ್ನು ಬಳಸಿಕೊಳ್ಳುತ್ತವೆ. ಈಗಾಗಲೇ ಆಧಾರ್ ನೋಂದಣಿ ಮಾಡಿಸಿಕೊಂಡಿರುವವರು ಎನ್‌ಪಿಆರ್ ವೇಳೆ ಮತ್ತೆ ಬಯೋಮೆಟ್ರಿಕ್ ವಿವರಗಳನ್ನು ನೀಡಬೇಕಾದ ಅಗತ್ಯವಿಲ್ಲ. ಅಲ್ಲದೆ, ಎನ್‌ಪಿಆರ್ ವೇಳೆ ಸಂಗ್ರಹಿಸಿದ ವಿವರಗಳನ್ನು ಯುಐಡಿಐಗೆ ನಕಲು ಮಾಹಿತಿಯನ್ನು ತೆಗೆಯಲು ರವಾನಿಸಲಾಗುತ್ತದೆ. ಒಂದು ವೇಳೆ ಆಧಾರ್ ಮತ್ತು ಎನ್‌ಪಿಆರ್ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಬಳಿಕ ಅದನ್ನು ಸರಿಪಡಿಸಲಾಗುತ್ತದೆ. ಈಗಿನ ಸರ್ಕಾರವು 2011ರ ಜನಗಣತಿಯ ಬಳಿಕ ಸಂಗ್ರಹಿಸಲಾಗಿದ್ದ ಎನ್‌ಪಿಆರ್‌ಅನ್ನು ಉನ್ನತೀಕರಿಸಲು ನಿರ್ಧರಿಸಿದೆ.

ಎನ್‌ಪಿಆರ್ ಸಂಗ್ರಹದ ಬಳಿಕ ಏನು?

ಎನ್‌ಪಿಆರ್ ಸಂಗ್ರಹದ ಬಳಿಕ ಏನು?

ಭಾರತದ ಸಾಮಾನ್ಯ ನಾಗರಿಕರ ವಿವರ ಕ್ರೋಡೀಕರಿಸಿದ ನಂತರ ಸರ್ಕಾರವು ಭಾರತೀಯ ಪೌರರ ದತ್ತಾಂಶ ಸಿದ್ಧಪಡಿಸುತ್ತದೆ. ಹೀಗೆ, ಎನ್ಆರ್‌ಸಿಯು ಎನ್‌ಆರ್‌ಪಿಯ ಉಪ ವ್ಯವಸ್ಥೆಯಾಗಿ ಸಿದ್ಧವಾಗುತ್ತದೆ. ಎನ್‌ಆರ್‌ಸಿಯನ್ನು ಸ್ಥಳೀಯ, ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯವಾರು ಮಟ್ಟಗಳಲ್ಲಿ ನಿವಾಸಿಗಳ ಪೌರತ್ವದ ಸ್ಥಿತಿಗತಿಯನ್ನು ಪರಿಶೀಲನೆ ಮಾಡಿದ ನಂತರ ಸಿದ್ಧಪಡಿಸಲಾಗುತ್ತದೆ.

ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿ ವಿತರಣೆಯ 2003ರ ನಿಯಮಗಳು ಎಲ್ಲ ನಾಗರಿಕರ ನೋಂದಣಿ ಹಾಗೂ ಅವರಿಗೆ ರಾಷ್ಟ್ರೀಯ ಗುರುತಿನ ಚೀಟಿ ನೀಡುವುದನ್ನು ನಡೆಸಬೇಕಿದೆ. ಆದರೆ ಇಲ್ಲಿಯವರೆಗೂ ರಾಷ್ಟ್ರೀಯ ಗುರುತಿನ ಚೀಟಿ ಪರಿಚಯಿಸುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಎನ್‌ಪಿಆರ್-ಎನ್‌ಆರ್‌ಸಿ

ಎನ್‌ಪಿಆರ್-ಎನ್‌ಆರ್‌ಸಿ

ರಾಷ್ಟ್ರೀಯ ಪೌರತ್ವ ನೋಂದಣಿಗೆ ಎನ್‌ಪಿಆರ್ ಬುನಾದಿ ಹಾಕುತ್ತದೆ. ಎನ್‌ಪಿಆರ್ ಪರಿಶೀಲಿಸಿ ಸಂಗ್ರಹಿಸಿದ ವ್ಯಕ್ತಿಯ ವಿವರಗಳನ್ನೇ ಎನ್‌ಆರ್‌ಸಿ ಒಳಗೊಳ್ಳಲಿದೆ. ಎನ್‌ಆರ್‌ಸಿ ವೇಳೆ ಎನ್‌ಪಿಆರ್‌ನಲ್ಲಿ ದಾಖಲಿಸಿರುವ ಅಂಶಗಳನ್ನು ಸ್ಥಳೀಯ ಪೌರತ್ವ ನೋಂದಣಿಕಾರರಿಂದ ದೃಢೀಕರಿಸಲಾಗುತ್ತದೆ. ಈ ದೃಢೀಕರಣದ ನಂತರ ಅನುಮಾನಾಸ್ಪದ ನಾಗರಿಕರನ್ನು ತೆಗೆದುಹಾಕಿ ಎನ್‌ಆರ್‌ಸಿಯನ್ನು ಅಂತಿಮಗೊಳಿಸಲಾಗುತ್ತದೆ. ಎನ್‌ಪಿಆರ್ ಮಾಹಿತಿಯನ್ನು ದೃಢೀಕರಿಸಿದ ನಂತರ 'ಅನುಮಾನಾಸ್ಪದ ನಾಗರಿಕ'ರನ್ನು ಗುರುತಿಸುವ ಅಧಿಕಾರ ಸ್ಥಳೀಯ ನೋಂದಣಿಕಾರರಿಗೆ ಇರುತ್ತದೆ.

ಎನ್‌ಪಿಆರ್ ಮೂಲಕವೇ ಎನ್‌ಆರ್‌ಸಿ ನಡೆಯುತ್ತದೆ ಎನ್ನಲಾಗದು. ಎನ್‌ಪಿಆರ್ ಮೊದಲು ನಡೆದಿದ್ದು 2010ರಲ್ಲಿ. 2015ರಲ್ಲಿ ಅಪ್‌ಡೇಟ್ ಮಾಡಲಾಗಿತ್ತು. ಇದರ ನಂತರ ಎನ್‌ಸಿಆರ್ ನಡೆದೇ ನಡೆಯುತ್ತದೆ ಎನ್ನುವಂತಿಲ್ಲ. ಆದರೆ 2003ರ ನಿಯಮಾವಳಿ ಪ್ರಕಾರ ಎನ್‌ಪಿಆರ್ ಬಳಿಕವೇ ಎನ್‌ಆರ್‌ಸಿ ನಡೆಸಲಾಗುತ್ತದೆ. ಹೀಗಾಗಿ ಎನ್‌ಆರ್‌ಸಿಗೆ ಎನ್‌ಪಿಆರ್ ಅಗತ್ಯವಾಗಿದೆ. 2010ರಲ್ಲಿ ನಡೆದ ಎನ್‌ಪಿಆರ್‌ನಲ್ಲಿದ್ದ ಪ್ರಶ್ನೆಗಳಿಗೂ 2020ರ ಎನ್‌ಪಿಆರ್ ಪ್ರಶ್ನೆಗಳಿಗೂ ಸಾಕಷ್ಟು ವ್ಯತ್ಯಾಸಗಳಿರಲಿವೆ ಎನ್ನಲಾಗಿದೆ. 2020ರ ಎನ್‌ಪಿಆರ್‌ನ ಕಲಂನಲ್ಲಿ ವ್ಯಕ್ತಿಗಳ ಪೋಷಕರ ಜನ್ಮದಿನಾಂಕ ಮತ್ತು ಸ್ಥಳದ ಮಾಹಿತಿಯನ್ನೂ ನೀಡಬೇಕಿದೆ. ವ್ಯಕ್ತಿಗಳ ಪೋಷಕರ ಪೌರತ್ವ ವಿವರಗಳು 1987ರ ಬಳಿಕ ಜನಿಸಿದವರ ಪೌರತ್ವವನ್ನು ನಿರ್ಧರಿಸುವ ಪ್ರಮುಖ ಅಂಶವಾಗಲಿದೆ. ಜತೆಗೆ ಇದು ಮುಂದೆ ಜಾರಿಯಾಗಬಹುದಾದ ಎನ್‌ಆರ್‌ಸಿ ಮತ್ತು ಎನ್‌ಪಿಆರ್ ನಡುವಿನ ಹೊಂದಾಣಿಕೆಯನ್ನು ತೋರಿಸುವ ಹೆಚ್ಚುವರಿ ಅಂಶವೂ ಆಗಬಹುದು.

ಎನ್‌ಆರ್‌ಸಿ ಸಮಸ್ಯೆ ಏಕೆ?

ಎನ್‌ಆರ್‌ಸಿ ಸಮಸ್ಯೆ ಏಕೆ?

ಭಾರತದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ವ್ಯಕ್ತಿಯು ಆಡಳಿತ ಅಧಿಕಾರಿಗಳ ಎದುರು ದಾಖಲೆಗಳ ಆಧಾರದಲ್ಲಿ ತನ್ನ ಪೌರತ್ವ ಸಾಬೀತುಪಡಿಸುವಂತೆ ಹೇಳುವುದು ಅದರ ಅನುಷ್ಟಾನದ ಮಟ್ಟದಲ್ಲಿಯೇ ಸಮಸ್ಯಾತ್ಮಕವಾಗಿದೆ. ಇದು ಆಡಳಿತಾಧಿಕಾರಿಗಳ ದಬ್ಬಾಳಿಕೆ ಮತ್ತು ಸ್ವೇಚ್ಛಾಚಾರಕ್ಕೂ ಕಾರಣವಾಗಬಹುದು. ಏಕೆಂದರೆ ಭಾರತದ ಜನಸಂಖ್ಯೆಯ ಹೆಚ್ಚಿನ ಪಾಲು ಹಿಂದುಳಿದವರು ಹಾಗೂ ಅವಿದ್ಯಾವಂತರಿದ್ದಾರೆ.

ಇತ್ತೀಚೆಗೆ ಅಸ್ಸಾಂನಲ್ಲಿ ನಡೆದ ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ಸುಮಾರು 20 ಲಕ್ಷ ಜನರನ್ನು ವಿದೇಶಿಗರೆಂದು ಪರಿಗಣಿಸಿ ನಾಗರಿಕರ ಪಟ್ಟಿಯಿಂದ ಪ್ರತ್ಯೇಕಿಸಲಾಗಿದೆ. ಇದರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ನಿವೃತ್ತ ಸೈನಿಕ ಸಹ ಸೇರಿದ್ದಾರೆ.

ಹಾಗೆಯೇ 2003ರ ನಿಯಮದಲ್ಲಿನ 'ಅನುಮಾನಾಸ್ಪದ ನಾಗರಿಕ'ನನ್ನು ಗುರುತಿಸುವ ವಿಭಾಗ ಕೂಡ ವಿಚಿತ್ರವಾಗಿದೆ. ಇಲ್ಲಿ ಕೂಡ ಆಡಳಿತಾಧಿಕಾರಿಗಳ ಹಸ್ತಕ್ಷೇಪ ಅಲ್ಲಗಳೆಯುವಂತಿಲ್ಲ. ಹಾಗೆಯೇ ಅನುಮಾನ ಉಂಟಾದ ನಾಗರಿಕರನ್ನು ಯಾವ ರೀತಿ ವಿಚಾರಣೆ ನಡೆಸಲಾಗುವುದು ಎಂಬುದಕ್ಕೆ ಮಾರ್ಗದರ್ಶಿಯನ್ನು ನೀಡಿಲ್ಲ. ಶಂಕಾಸ್ಪದ ಎನಿಸಿದರೆ ನಿಮಗೆ ಏನು ಮಾಡಲಾಗುತ್ತದೆ ಎಂದು ಕೂಡ ನಿಯಮಗಳು ವಿವರಿಸಿಲ್ಲ. ಆದರೆ 1964ರ ವಿದೇಶಿಗರ (ನ್ಯಾಯಮಂಡಳಿ) ತಿದ್ದುಪಡಿ ಆದೇಶದ ಪ್ರಕಾರ ಅನುಮಾನಾಸ್ಪದ ನಾಗರಿಕರನ್ನು ವಿದೇಶಿಗರ ನ್ಯಾಯಮಂಡಳಿ ವಿಚಾರಣೆಗೆ ಸೂಚಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಅಧಿಕಾರವಿದೆ.

ಸಿಎಎ ಮತ್ತು ಎನ್‌ಆರ್‌ಸಿ ಸಂಬಂಧ?

ಸಿಎಎ ಮತ್ತು ಎನ್‌ಆರ್‌ಸಿ ಸಂಬಂಧ?

ಸಿಎಎ ಮತ್ತು ಎನ್‌ಆರ್‌ಸಿ ನಡುವೆ ಯಾವುದೇ ಸಂಬಂಧವಿಲ್ಲ. ಆದರೆ 2019ರ ವಿಧಾನಸಭೆ ಚುನಾವಣೆಗಳ ವೇಳೆ ಅಮಿತ್ ಶಾ ನೀಡಿದ ಹೇಳಿಕೆಯಂತೆ ಸರ್ಕಾರವು ಎನ್‌ಆರ್‌ಸಿ ಜಾರಿಗೆ ತರಲಿದ್ದು, ಅದರ ನಂತರ ಸಿಎಎ ಬರಲಿದೆ. ಎನ್‌ಆರ್‌ಸಿಯಲ್ಲಿ ಹೊರಗುಳಿದವರಿಗೆ ಭಾರತದ ಪೌರತ್ವ ಸಿಗುವುದಿಲ್ಲ. ಮುಸ್ಲಿಮೇತರರಿಗೆ ಪೌರತ್ವ ನೀಡಲು ಸಿಎಎ ಸಹಾಯ ಮಾಡಲಿದೆ.

English summary
What is NPR? What is the link between NPR, NRC, Census and CAA? Here is the explainer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X