ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಘಾಲಯದ ನಿಸರ್ಗ ನಿರ್ಮಿತ ಸೇತುವೆ - ಲಿವಿಂಗ್ ರೂಟ್ ಬ್ರಿಡ್ಜ್

By ಸೌಮ್ಯ ಬೀನಾ, ಸಾಗರ
|
Google Oneindia Kannada News

ಲಂಡನ್ ನ ಟವರ್ ಬ್ರಿಡ್ಜ್, ಸ್ಯಾನ್ ಫ್ರಾನ್ಸಿಸ್ಕೊ ದ ಗೋಲ್ಡನ್ ಗೇಟ್ ಬ್ರಿಡ್ಜ್, ಜಪಾನಿನ ಆಕಾಶಿ-ಕೈಕೋ ಬ್ರಿಡ್ಜ್, ಸಮುದ್ರ ನಗರಿ ವೆನಿಸ್ ನ ರಿಯಾಲ್ಟೋ ಬ್ರಿಡ್ಜ್ ಹೀಗೆ ಪ್ರಪಂಚದಾದ್ಯಂತ ಅದೆಷ್ಟೋ ಸೇತುವೆಗಳು, ತಮ್ಮ ನಿರ್ಮಾಣದ ಐತಿಹಾಸಿಕತೆಗೆ, ವಿಜ್ಞಾನ ಮತ್ತು ತಂತ್ರವಿದ್ಯೆಗೆ ಪ್ರಸಿದ್ಧಿಯನ್ನು ಪಡೆದಿದೆ.

ಮಾನವನ ಆವಿಷ್ಕಾರಗಳ ಚಾಣಾಕ್ಷ್ಯತೆಯ ಇಂತಹ ಕೊಡುಗೆಗಳ ಪೈಕಿ, ಕಲ್ಲು, ಇಟ್ಟಿಗೆ, ಕಬ್ಬಿಣ, ಉಕ್ಕು, ಕಾಂಕ್ರೀಟ್ ಇತ್ಯಾದಿ ಯಾವುದೇ ವಸ್ತುಗಳನ್ನು ಬಳಸದೇ, ಪ್ರಕೃತಿಯನ್ನೇ ಸಂಪರ್ಕ ಕೊಂಡಿಯಾಗಿ ಬಳಸಿಕೊಂಡು ನಿರ್ಮಿಸಿರುವ, ನೂರಾರು ವರ್ಷಗಳಷ್ಟು ಹಳೆಯ ಆದರೂ ಸುಧೃಡವಾಗಿ ಚಾಲ್ತಿಯಲ್ಲಿರುವ, ಸೇತುವೆಗಳ ದಾಖಲೆಯೊಂದು ನಮ್ಮ ಭಾರತದಲ್ಲಿದೆ. ಅದುವೇ ಪ್ರಪಂಚದ ಅದ್ಭುತ ಅಚ್ಚರಿಗಳಲ್ಲಿ ಒಂದಾದ ಮೇಘಾಲಯದ ನಿಸರ್ಗ ನಿರ್ಮಿತ ಸೇತುವೆ - ಲಿವಿಂಗ್ ರೂಟ್ ಬ್ರಿಡ್ಜ್.

ಅತಿ ಕಡಿಮೆ ಖರ್ಚಿನಲ್ಲಿ ವಿಶ್ವ ಪರ್ಯಟನೆಗೆ ಶ್ರೀನಿಧಿ ದಿಕ್ಸೂಚಿ!ಅತಿ ಕಡಿಮೆ ಖರ್ಚಿನಲ್ಲಿ ವಿಶ್ವ ಪರ್ಯಟನೆಗೆ ಶ್ರೀನಿಧಿ ದಿಕ್ಸೂಚಿ!

'ಲಿವಿಂಗ್ ರೂಟ್ ಬ್ರಿಡ್ಜ್' ಹೆಸರೇ ಸೂಚಿಸುವಂತೆ, ಈ ಸೇತುವೆಗಳು ನಿರ್ಮಾಣಗೊಂಡಿರುವುದು ಜೀವಂತ ಮರದ ಬೇರುಗಳಿಂದ! ಸಂಪನ್ನ ಅರಣ್ಯ ರಾಶಿ ಇಲ್ಲಿನ ವರವೇನೋ ಹೌದು. ಆದರೆ ಈ ಮಳೆ ನಾಡಿನಲ್ಲಿ ಮೂಲನಿವಾಸಿಗಳ ಕಾಲದಿಂದಲೂ ನದಿ ಮತ್ತು ಹೊಳೆಗಳನ್ನು ದಾಟಲು ಸಂಪರ್ಕ ಕೊಂಡಿಯ ವ್ಯವಸ್ಥೆ ಅತ್ಯಂತ ದೊಡ್ಡ ಸವಾಲು.

 ಖಾಸೀ ಬುಡಕಟ್ಟು ಜನಾಂಗದ ಕೊಡುಗೆ

ಖಾಸೀ ಬುಡಕಟ್ಟು ಜನಾಂಗದ ಕೊಡುಗೆ

ಹಿಂದೆ, ಬಿದಿರು ಮತ್ತು ಇತರ ಮರಮುಟ್ಟುಗಳನ್ನು ನೀರಿಗೆ ಅಡ್ಡವಾಗಿ ಕಟ್ಟಿ ಚಿಕ್ಕ ಪುಟ್ಟ ಕಾಲುದಾಟುಗಳನ್ನಾಗಿ ನಿರ್ಮಿಸಿಕೊಳ್ಳುತ್ತಿದ್ದರಾದರೂ, ಸರ್ವಕಾಲಿಕ ಮಳೆಯಿಂದುಂಟಾಗುವ ತೇವಾಂಶ-ಆರ್ದ್ರತೆಗೆ ಅವುಗಳು ಬಲುಬೇಗ ನಶಿಸಿ ಹೋಗುತ್ತಿದ್ದವು. ಇದಕ್ಕೊಂದು ಶಾಶ್ವತ ಪರಿಹಾರವೆಂಬಂತೆ, ಖಾಸೀ ಬುಡಕಟ್ಟು ಜನಾಂಗದವರು, ಪ್ರಕೃತಿಯ ಮೇಲಿನ ಗೌರವ ಮತ್ತು ನಂಬಿಕೆಯಿಂದ ಕಂಡುಕೊಂಡ ಉಪಾಯವೇ ಈ ಲಿವಿಂಗ್ ರೂಟ್ ಬ್ರಿಡ್ಜ್. ಖಾಸಿ ಮತ್ತು ಜೇನ್ತಿಯಾ ಬೆಟ್ಟಗಳಲ್ಲಿ, ಅಲ್ಲಿನ ಆರ್ದ್ರತೆಗೆ ದಷ್ಟಪುಷ್ಟವಾಗಿ ಬೆಳೆಯುವ ಒಂದು ಜಾತಿಯ ರಬ್ಬರ್ (Ficus Elastica) ನ ಗಟ್ಟಿಮುಟ್ಟಾದ ಉದ್ದದ ಬೇರುಗಳನ್ನು ಬಳಸಿ, ಸೇತುವೆ ಕಟ್ಟುವ ಅನನ್ಯ ಪ್ರಯತ್ನ ಅಲ್ಲಿನ ಬುಡಕಟ್ಟು ಜನಾಂಗದವರಿಂದ ಪ್ರಾರಂಭವಾಯಿತು.

ಅವರು ಈ ರಬ್ಬರ್ ಮತ್ತು ಆಲದ ಗಿಡಗಳನ್ನು ನದಿ ದಂಡೆಯ ಪಕ್ಕದಲ್ಲಿ ಒಂದಕ್ಕೊಂದು ಸಮೀಪದಲ್ಲಿ ನೆಟ್ಟು ಬೆಳೆಸಲಾರಂಭಿಸಿದರು. ಆ ಸಸಿಗಳು ದೊಡ್ಡದಾಗಿ,ಅವುಗಳಿಂದ ಟಿಸಿಲೊಡೆದ ಬೇರು ಮತ್ತು ಬಿಳಲುಗಳನ್ನು, ಅತ್ಯಂತ ಕುಶಲತೆಯಿಂದ ಹಂತಹಂತವಾಗಿ ಸೇರಿಸಿ ಮತ್ತಷ್ಟು ಗಟ್ಟಿಗೊಳಿಸುತ್ತಿದ್ದರು. ಹೀಗೆ ಬೆಳೆಯುವ ಮೀಟರುಗಟ್ಟಲೆ ಉದ್ದದ ಬಿಳಲುಗಳನ್ನು ಪ್ರತಿ 4-5 ತಿಂಗಳಿಗೊಮ್ಮೆ ಎಳೆದು ಹುರಿಗೊಳಿಸಿ, ನದಿಗಳಿಗೆ ಅಡ್ಡಲಾಗಿ ತಾತ್ಕಾಲಿಕವಾಗಿ ಕಟ್ಟಿರುತ್ತಿದ್ದ ಮರದ ಅಥವಾ ಬಿದಿರಿನ ಸಂಕೋಲೆಗಳ ಮೇಲೆ ನೈಪುಣ್ಯತೆಯಿಂದ ಹೆಣೆಯುತ್ತಿದ್ದರು.

 ಆರ್ಗ್ಯಾನಿಕ್ ಇಂಜಿನಿಯರಿಂಗ್

ಆರ್ಗ್ಯಾನಿಕ್ ಇಂಜಿನಿಯರಿಂಗ್

ಈ ನಿರಂತರ ಕಾರ್ಯವನ್ನು ಖಾಸೀ ಜನರು ಕಾಲದಿಂದ ಕಾಲಕ್ಕೆ ಒಂದು ಸಾಂಪ್ರದಾಯಿಕ ಕ್ರಮದಂತೆ ಮುಂದುವರೆಸುತ್ತ ಬಂದರು. ಕ್ರಮೇಣ ಮರದ ಬಿಳಲು ಮತ್ತು ಬೇರುಗಳು, ಅವುಗಳನ್ನು ರೂಪುಗೊಳಿಸಿದ ರೀತಿಯಲ್ಲಿಯೇ ಅಗಲ-ಉದ್ದವಾಗಿ ಹಿಗ್ಗಿಕೊಂಡು ಬೆಳೆದು ಗಟ್ಟಿಯಾದ ಸೇತುವೆಯಾಗಿ ಮಾರ್ಪಾಟುಗೊಂಡಿತು. ಹೀಗೆ ಸುದೃಢವಾಗಿ ಬೆಳೆದ ಬೇರುಗಳ ಸಂಕೋಲೆಗಳ ಮೇಲೆ, ಬಿದಿರು ಮತ್ತು ಮರದ ತೊಗಟೆಗಳ ಹೊದಿಕೆಯನ್ನು ನೀಡಿ, ಅದರ ಮೇಲೆ ಮಣ್ಣು ಮತ್ತು ಸಣ್ಣ ಕಲ್ಲುಗಳ ಜೋಡಣೆ ಮಾಡುತ್ತಾ ಬಂದಂತೆಯೂ, ಬೇರುಗಳು ಅದಕ್ಕೆ ಒಗ್ಗಿಕೊಂಡು, ಜನರ ಓಡಾಟದ 'ಲಿವಿಂಗ್ ರೂಟ್ ಬ್ರಿಡ್ಜ್' ಆಗಿ ನಿರ್ಮಾಣಗೊಂಡಿತು. ಅನಕ್ಷರಸ್ಥರಾಗಿದ್ದರೂ ಕೂಡ ಆ ಕಾಲಕ್ಕೆ 'ಆರ್ಗ್ಯಾನಿಕ್ ಇಂಜಿನಿಯರಿಂಗ್' ತಂತ್ರವಿದ್ಯೆಯ ಸೇತುವೆಯ ನಿರ್ಮಾಣ ಖಾಸೀ ಬುಡಕಟ್ಟು ಜನಾಂಗದವರ ಅದ್ಬುತ ಸಾಧನೆ. ಈ ರೀತಿಯ ಒಂದೊಂದು ಸೇತುವೆ ನಿರ್ಮಾಣವೂ ಸುಮಾರು 30-40ವರ್ಷಗಳವರೆಗೆ ನಡೆದಿದೆ ಎನ್ನುತ್ತಾರೆ ಇಲ್ಲಿನ ಹಿರಿಯರು.

ಸಿಖ್ಖರ ಪವಿತ್ರ ತಾಣ ಹೇಮಕುಂಡ್ ಸಾಹಿಬ್ ಸುತ್ತಾ ರೋಚಕ ಚಾರಣಸಿಖ್ಖರ ಪವಿತ್ರ ತಾಣ ಹೇಮಕುಂಡ್ ಸಾಹಿಬ್ ಸುತ್ತಾ ರೋಚಕ ಚಾರಣ

 ಚಿರಾಪುಂಜಿಯ ಗ್ರಾಮ ಆಕರ್ಷಣೆ

ಚಿರಾಪುಂಜಿಯ ಗ್ರಾಮ ಆಕರ್ಷಣೆ

ಪೂರ್ವ ಖಾಸಿ ಹಿಲ್ಸ್ ಜಿಲ್ಲೆಗಳಲ್ಲಿ, ಮ್ಯಾವಲಾಂಗ್ ಮತ್ತು ನಾನ್ಗ್ರಿಯಾಟ್ ಇನ್ನಿತರ ಚಿರಾಪುಂಜಿಯ ಗ್ರಾಮಗಳಲ್ಲಿ ಕಾಣಸಿಗುವ ಈ ಸೇತುವೆಗಳು, ಮೇಘಾಲಯದ ಈಗಿನ ಮುಖ್ಯ ಪ್ರವಾಸೀ ಸ್ಥಳಗಳಲ್ಲಿ ಒಂದಾಗಿದೆ. ಕೇವಲ ನೋಡಲಷ್ಟೇ ಅಲ್ಲದೆ ಇಂದಿಗೂ ಕೂಡ ಸುತ್ತಮುತ್ತಲಿನ ಹಳ್ಳಿಗರು ನೂರಾರು ವರ್ಷಗಳ ಹಿಂದೆ 'ಬೆಳೆಸಿದ' ಈ ಸೇತುವೆಗಳನ್ನು ಈಗಲೂ ನಿರ್ಭಯವಾಗಿ ದಿನನಿತ್ಯದ ಓಡಾಟಕ್ಕೆ, ಕೃಷಿಭೂಮಿಗೆ ಸಾಮಾನುಗಳನ್ನು ಸಾಗಾಟಕ್ಕೆ ಇತ್ಯಾದಿಯಾಗಿ ಬಳಕೆ ಮಾಡುತ್ತಿದ್ದಾರೆ.

ಹಲವು ಸೇತುವೆಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಈ ರೂಟ್ ಬ್ರಿಡ್ಜ್ ಸೇತುವೆಗಳು , ಕನಿಷ್ಠವೆಂದರೂ 8 ಅಡಿಗಳಷ್ಟು ಅಗಲ, 70ಅಡಿಗಳಷ್ಟು ಉದ್ದದಷ್ಟಿದೆ. ಖಾಸಿ ಜಿಲ್ಲೆಯ ಮಾವ್ಕಿರ್ಣಟ್ ಹಳ್ಳಿಯಲ್ಲಿರುವ ಲಿವಿಂಗ್ ರೂಟ್ ಬ್ರಿಡ್ಜ್ 175 ಫೀಟ್ ಉದ್ದವಾಗಿದ್ದು ಮೇಘಾಲಯದ ಅತೀ ಉದ್ದದ ಲಿವಿಂಗ್ ರೂಟ್ ಬ್ರಿಡ್ಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟಿಗೆ ನೂರಾರು ಜನರು ನಿಂತರೂ ಕೂಡ ತಡೆದುಕೊಳ್ಳುವ ಶಕ್ತಿ, ನೂರಾರು ವರ್ಷಗಳಿಂದ ನಿಂತಿರುವ ಆ ಮರದ ಬೇರುಗಳಿಗಿವೆ. ಇದರಂತೆಯೇ, ಒಂದು ಸೇತುವೆಯ ಮೇಲೆ ಮತ್ತೊಂದು ಸೇತುವೆಯಂತೆ ನಿರ್ಮಿಸಿದ, ಉಂಶಿಯಾಂಗ್ 'ಡಬ್ಬಲ್ ಡೆಕ್ಕರ್ ರೂಟ್ ಬ್ರಿಡ್ಜ್' ನೋಡಲು ಅತ್ಯಂತ ಆಕರ್ಷಣೀಯವಾಗಿದ್ದು, ಅದು ಸುಮಾರು 180 ವರ್ಷಗಳಷ್ಟು ಪುರಾತನವಾದದ್ದಂತೆ!

 ನಿಸರ್ಗ ಮತ್ತು ಮಾನವನ ಪರಸ್ಪರ ಬೆಸುಗೆ

ನಿಸರ್ಗ ಮತ್ತು ಮಾನವನ ಪರಸ್ಪರ ಬೆಸುಗೆ

ಪ್ರಕೃತಿಯಿಂದ ಕೇವಲ ಪಡೆಯುವ ಇಚ್ಛೆಯಲ್ಲದೇ, ನಿಸರ್ಗ ಮತ್ತು ಮಾನವನ ಪರಸ್ಪರ ಕೊಡುವುದು ಮತ್ತು ತೆಗೆದುಕೊಳ್ಳುವ ಸಮತೋಲನದ ಅದ್ಭುತ ಉದಾಹರಣೆ ಈ 'ಲಿವಿಂಗ್ ರೂಟ್ ಬ್ರಿಡ್ಜ್' ಗಳು. ಉತ್ತಮ ದರ್ಜೆಯ ಸಾಮಗ್ರಿಗಳು, ವಿಜ್ಞಾನ ಮತ್ತು ತಂತ್ರವಿದ್ಯೆ, ಪೂರಕ ನಿರ್ಮಾಣ ಘಟಕಗಳು, ಮೆಷಿನರಿ ಉಪಕರಣಗಳನ್ನು ಬಳಸಿ ನಿರ್ಮಿಸಿದ ನೂತನ ಸೇತುವೆಗಳು, ಕಟ್ಟಿ ಕೆಲವೇ ವರ್ಷಗಳಲ್ಲಿ ತಾಂತ್ರಿಕ ದೋಷಗಳಿಂದ ಮುರಿದು ಬೀಳುವ ಘಟನೆಗಳೆದುರು, ನೂರಾರು ವರ್ಷ ಸ್ಥಿರವಾಗಿ ನಿಲ್ಲುವ ಅಂತಹ ಮಳೆನಾಡಿನ ನಿಸರ್ಗದತ್ತ ಸೇತುವೆಗಳು ನಮ್ಮನ್ನು ಅಚ್ಚರಿಗೊಳಿಸದೇ ಇರುವುದಿಲ್ಲ. ಇಂತಹ ಪ್ರಾಕೃತಿಕ, ಪಾರಂಪರಿಕ ಅದ್ಭುತಗಳು ಇತ್ತೀಚೆಗಿನ ಕಾಂಕ್ರೀಟು ಸೇತುವೆಗಳ ಅಭಿವೃದ್ಧಿಯ ಹೆಸರಿನಲ್ಲಿ ಕಳೆದು ನಶಿಸಿ ಹೋಗುತ್ತಿರುವುದು ಅತ್ಯಂತ ವಿಷಾದನೀಯ. ಇಂತಹ ರೂಟ್ ಬ್ರಿಡ್ಜ್ ನ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು, ನಿರ್ಮಾಣದ ಕುಶಲತೆಯ ಪಾರಂಪರ್ಯತೆಯನ್ನು ಉಳಿಸಿಕೊಳ್ಳಲು ಕೆಲವು ನಿಸರ್ಗ ಪ್ರಿಯರು, ಸಂಘ ಸಂಸ್ಥೆಗಳ ಜನರು ಪ್ರಯತ್ನಿಸುತ್ತಲೇ ಇದ್ದಾರೆ .

24 ತಾಸಿಗಿಂತ ಹೆಚ್ಚು ಮೇಘಾಲಯದಲ್ಲಿ ಇರಬೇಕಾದರೆ ಹೀಗೆ ಮಾಡಬೇಕು24 ತಾಸಿಗಿಂತ ಹೆಚ್ಚು ಮೇಘಾಲಯದಲ್ಲಿ ಇರಬೇಕಾದರೆ ಹೀಗೆ ಮಾಡಬೇಕು

 ಪಾರಂಪರಿಕ ವಸ್ತುಗಳು ಉಳಿದುಕೊಂಡಿರಲಿ

ಪಾರಂಪರಿಕ ವಸ್ತುಗಳು ಉಳಿದುಕೊಂಡಿರಲಿ

"ಈ ಲಿವಿಂಗ್ ರೂಟ್ ಬ್ರಿಡ್ಜ್ಗಳ ಆಯುಷ್ಯ 500 ವರ್ಷಗಳಿರಬಹುದು ಎಂದು ಕೆಲವು ಪರಿಸರ ತಜ್ಞರು, ಸಂಶೋಧಕರು ಊಹಿಸುತ್ತಾರೆ. ಆದರೆ ರಕ್ಷಿಸಿ ಪೋಷಿಸಿಕೊಂಡರೆ ತನ್ನ ನಿಷ್ಕ್ರೀಯತೆಯ ಬುಡದಲ್ಲೇ ಹೊಸ ಸೃಷ್ಟಿಯ ಬೇರುಗಳಿಂದಾಗಿ ಈ ಸೇತುವೆಗಳು ಎಂದೂ ಸಾಯುವುದಿಲ್ಲ"ಎಂದು ಅಭಿಪ್ರಾಯ ಪಡುತ್ತಾರೆ ಊರಿಂದ ಊರಿಗೆ ಓಡಾಡಿ ಲಿವಿಂಗ್ ರೂಟ್ ಬ್ರಿಡ್ಜ್ ನ ಕುರಿತಾಗಿ ಹೆಚ್ಚಿನ ಜ್ಞಾನವನ್ನು ಹಂಚುವ 'ಲಿವಿಂಗ್ ಬ್ರಿಡ್ಜ್ ಫೌಂಡೇಶನ್' ನ ಸ್ಥಾಪಕ, ಮಾರ್ನಿಂಗ್ಸ್ಟಾರ್ ಕಾಂಗ್ತಾವ್. ಏನೇ ಆದರೂ, ಜನರ ಬಳಕೆ ಮಾತ್ರಕ್ಕೆ ಸೀಮಿತವಾಗದೆ, ಪ್ರವಾಸೋದ್ಯಮದ ಲಾಬಿಗಾಗಿ ಅಲ್ಲದೇ, ಪರಿಸರವನ್ನು ಹಾಳುಗೆಡುವದೇ ಮತ್ತಷ್ಟು ಸಮೃದ್ಧಗೊಳಿಸುವ ಉದ್ದೇಶಕ್ಕಾದರೂ ಇಂತಹ ಪಾರಂಪರಿಕ ವಸ್ತುಗಳು ಉಳಿದುಕೊಂಡಿರಲಿ ಎಂಬುದೇ ನಮ್ಮ ಆಶಯ.

English summary
The living root bridges of Cherrapunji in Meghalaya are main attraction. Here is travel guide and more information on the marvel of Nature.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X