• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉತ್ತಮ ಆಡಳಿತದ ಪಾಲುದಾರರು ಯಾರು?, ಜನರ ಪಾತ್ರವೇನು?

By ಪೂರ್ಣಿಮ ಜಿ.ಆರ್
|

ಬೆಂಗಳೂರು, ಡಿಸೆಂಬರ್ 25 : ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ದೇಶವೆಂದರೆ ಭಾರತ. ಪ್ರಜಾಪ್ರಭುತ್ವ ಎಂದಾಗ ನೆನಪಿಗೆ ಬರುವ ವಿಷಯವೆಂದರೆ 'ಜನರಿಂದ ಜನರಿಗಾಗಿ ಜನರಿಗೊಸ್ಕರವಿರುವ ಸರ್ಕಾರ.' ಎಂಬ ಲಿಂಕನ್ನರ ನುಡಿ.

ಭಾರತವು ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ಹೊಂದಿರುವುದು ಸಂತಸದ ವಿಷಯ. ದೇಶದಲ್ಲಿ ಆಡಳಿತವು ಮತ್ತು ಅಧಿಕಾರವು ಕೇಂದ್ರ, ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಹಂಚಿಕೆಯಾಗಿದೆ.

ವಾಜಪೇಯಿ ಭಾವಚಿತ್ರದ 100 ರೂ. ನಾಣ್ಯ ಬಿಡುಗಡೆ ಮಾಡಿದ ಮೋದಿ

ಹಾಗೆಯೇ ಇತ್ತೀಚಿನ ದಿನಗಳಲ್ಲಿ 'ಗರಿಷ್ಠ ಆಡಳಿತ-ಕನಿಷ್ಠ ಸರ್ಕಾರ', 'ಸ್ವರಾಜ್ಯದಿಂದ ಸುರಾಜ್ಯ ಎಂಬ ಮೋದಿಯವರ ಉಕ್ತಿಯನ್ನು ಕೇಳುತ್ತಿದ್ದೇವೆ. 2014 ರಿಂದ 25ನೇ ಡಿಸೆಂಬರ್‌ ಅನ್ನು 'ಉತ್ತಮ ಆಡಳಿತ ದಿನ'ವನ್ನು ಆಚರಿಸುತ್ತಿರುವುದು ಸ್ವಾಗತಾರ್ಹ.

ಈ ನಿಟ್ಟಿನಲ್ಲಿ ಉತ್ತಮ ಆಡಳಿತ ಎಂಬ ಪದವನ್ನು ರಾಜಕೀಯ ಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತು ನಾಗರಿಕರಲ್ಲಿ ಕೇಳುತ್ತಿದ್ದೇವೆ. ಉತ್ತಮ ಆಡಳಿತ ಎಂಬ ಪರಿಕಲ್ಪನೆಯು ಬಹಳ ವಿಶಾಲವಾಗಿದ್ದು ಅದನ್ನು ಅರ್ಥಮಾಡಿಕೊಳ್ಳದ ಹೊರತು ಆಡಳಿತವನ್ನು ಅಳೆಯಲು ಸಾಧ್ಯವಾಗುವುದಿಲ್ಲ.

ಲೇಖಕರು : ಪೂರ್ಣಿಮ ಜಿ.ಆರ್. ಸಿನೀಯರ್ ಪ್ರೋಗಾಂ ಆಫೀಸರ್, ಪಬ್ಲಿಕ್ ಅಫೇರ್ಸ್ ಸೆಂಟರ್.

ಉತ್ತಮ ಆಡಳಿತ

ಉತ್ತಮ ಆಡಳಿತ

ಉತ್ತಮ ಆಡಳಿತವು ಜವಾಬ್ದಾರಿ, ಪಾರದರ್ಶಕತೆ, ಹೊಣೆಗಾರಿಕೆ, ಸಮುದಾಯದ ಭಾಗವಹಿಸುವಿಕೆ, ಕಾನೂನಿನ ಚೌಕಟ್ಟು ಮತ್ತು ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ ಮುಂತಾದ ಹಲವು ಅಂಶಗಳನ್ನು ಒಳಗೊಂಡಿರುತ್ತದೆ. ಇವುಗಳಲ್ಲಿ ಒಂದೊಂದು ಅಂಶವನ್ನು ಅರ್ಥಮಾಡಿಕೊಂಡರೆ ಅದರ ಸ್ಪಷ್ಟತೆ ತಿಳಿಯುತ್ತದೆ. ಸರ್ಕಾರವು ಸಮುದಾಯದ ಸಮಗ್ರ ಅಗತ್ಯತೆಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸುವ ಪ್ರಕ್ರಿಯೆಯೇ ‘ಜವಾಬ್ದಾರಿ'. ಸಂಕ್ಷಿಪ್ತವಾಗಿ ಹೇಳುವುದಾದರೆ ಸಮಯಕ್ಕೆ ಸರಿಯಾಗಿ ಸೇವೆಯನ್ನು ಒದಗಿಸುವಲ್ಲಿ ಸಮುದಾಯಕ್ಕೆ ಜವಾಬ್ದಾರರಾಗಿರುವುದು.

ಪಾರದರ್ಶಕತೆ

ಪಾರದರ್ಶಕತೆ

ಸರ್ಕಾರವು ಮುಕ್ತವಾಗಿ ಕಾರ್ಯಕ್ರಮ/ಯೋಜನೆಗಳನ್ನು ಜನರಿಗೆ ತಿಳಿಸುವುದು, ಅದರ ಬಗ್ಗೆ ಅರಿವು ಮೂಡಿಸುವುದು, ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗು ಕುಂದುಕೊರತೆಗಳನ್ನು ನಿವಾರಿಸುವುದಾಗಿದೆ. ಒಟ್ಟಾರೆಯಾಗಿ ಸಾಮಾನ್ಯ ಜನರು ಸಹ ನಿರ್ಧಾರಗಳನ್ನು ಅರ್ಥಮಾಡಿಕೊಳ್ಳುವಂತ ಮತ್ತು ಅದನ್ನು ಅನುಸರಿಸುವಂತ ಪ್ರಕ್ರಿಯೆಯೇ ‘ಪಾರದರ್ಶಕತೆ'.

ಯಾವುದೇ ತೊಂದರೆ, ಸಮಸ್ಯೆಗಳ ನಿರ್ವಹಣೆಯ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುವುದು. ಸರ್ಕಾರದ ಕಾರ್ಯನೀತಿಗಳ ವಿಧಾನ ಮತ್ತು ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ಇರುವ ಕ್ರಮ, ಅವುಗಳಿಂದ ಸಾರ್ವಜನಿಕರಿಗೆ ಉಂಟಾಗುವ ಲಾಭಗಳನ್ನು ಮುಚ್ಚುಮರೆಯಿಲ್ಲದೆ ಸಾರ್ವಜನಿಕರ ಮುಂದಿಡುವುದರ ಮೂಲಕ ಅನುಷ್ಠಾನಕ್ಕೆ ಬದ್ಧರಾಗಿರುವುದಲ್ಲದೆ ಸರಿತಪ್ಪುಗಳ ಜವಾಬ್ದಾರಿಯನ್ನು ಹೊರುವುದೇ ಹೊಣೆಗಾರಿಕೆ.

ಸಮುದಾಯದ ಭಾಗವಹಿಸುವಿಕೆ

ಸಮುದಾಯದ ಭಾಗವಹಿಸುವಿಕೆ

‘ಸಮುದಾಯದ ಭಾಗವಹಿಸುವಿಕೆ'ಯು ಉತ್ತಮ ಆಡಳಿತದಲ್ಲಿ ಹೆಚ್ಚಿನ ಪ್ರಾಶಸ್ತ್ಯವನ್ನು ಪಡೆದಿದ್ದು, ಸಮುದಾಯದ ಒಳಿತಿಗಾಗಿ ಕಾರ್ಯನೀತಿ/ನಿರ್ಣಯಗಳನ್ನು ರಚಿಸುವಲ್ಲಿ ಸಮುದಾಯದ ಎಲ್ಲಾ ಸದಸ್ಯರ, ಅದರಲ್ಲೂ ದುರ್ಬಲವರ್ಗದವರ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳುವುದು, ಯಾವುದೇ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಮೊದಲು ಅದರ ಅಗತ್ಯೆತೆಗಳ ಬಗ್ಗೆ ಸಮುದಾಯದಲ್ಲಿ ಚರ್ಚಿಸಲು ಅವಕಾಶ ನೀಡುವುದು ಹಾಗೂ ಅವರ ಅಭಿಪ್ರಾಯಗಳನ್ನು ಕಾರ್ಯನೀತಿಯಲ್ಲಿ ಸೇರಿಸುವುದು. ಇದರ ಜೊತೆಗೆ ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ನಡೆಸಲು ಸಮುದಾಯದ ಸದಸ್ಯರಿಗೆ ಮುಕ್ತವಾಗಿ ಅವಕಾಶ ನೀಡುವುದು.

ಮಾನವ ಹಕ್ಕುಗಳು

ಮಾನವ ಹಕ್ಕುಗಳು

ಮಾನವ ಹಕ್ಕುಗಳಿಗೆ ಯಾವುದೇ ರೀತಿಯಲ್ಲಿ ಚುತಿ ಬಾರದಂತೆ ಕಾನೂನಿನ ಪರಿಮಿತಿಯಲ್ಲಿ ಸಮುದಾಯದ ಎಲ್ಲಾ ಸದಸ್ಯರಿಗೆ ಸೇವೆಗಳನ್ನು ಒದಗಿಸುವುದು ಹಾಗೂ ಲಭ್ಯವಿರುವ ಭೌತಿಕ ಮತ್ತು ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ಬಳಸುವ ಮೂಲಕ ಸಮಯಕ್ಕೆ ಸರಿಯಾದ ಫಲಿತಾಂಶವನ್ನು ನೀಡುವುದೇ ಕಾನೂನಿನ ಚೌಕಟ್ಟು ಮತ್ತು ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ. ಸರಳವಾಗಿ ವಿವರಿಸುವುದಾದರೆ ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಸರಿಯಾದ ಸಮಯಕ್ಕೆ ಸಾರ್ವಜನಿಕರಿಗೆ ಅಥವಾ ನಿರ್ಧಿಷ್ಟ ಫಲಾನುಭವಿಗಳಿಗೆ ಯಾವುದೇ ಪ್ರಯಾಸವಿಲ್ಲದೆ ಸಿಗುವಂತಾಗುವುದು.

ಉತ್ತಮ ಆಡಳಿತದ ಫಲಿತಾಂಶ

ಉತ್ತಮ ಆಡಳಿತದ ಫಲಿತಾಂಶ

‘ಉತ್ತಮ ಆಡಳಿತ' ಪದವು ಕೇಳುವುದಕ್ಕೆ ಹಿತವಾಗಿದ್ದರೂ ಸಹ ಅದನ್ನು ಅಳೆಯುವುದು ಒಂದು ದೊಡ್ಡ ಸವಾಲು. ಯಾವ ದೇಶವು ತನ್ನ ನಾಗರಿಕರಿಗೆ ಗುಣಮಟ್ಟದ ಶಿಕ್ಷಣ, ಸುಧಾರಿತ ಆರೋಗ್ಯ, ಉತ್ತಮ ಜೀವನಶೈಲಿ ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಪ್ರತಿಯೊಬ್ಬ ಸಾಮಾನ್ಯ ಪ್ರಜೆಗೆ ಯಾವುದೇ ಪ್ರಯಾಸವಿಲ್ಲದೆ ಸಮಯಕ್ಕೆ ಸರಿಯಾದ ಸೇವೆಯನ್ನು ಒದಗಿಸುವುದರ ಮೂಲಕ ನಿರೀಕ್ಷಿತ ಫಲಿತಾಂಶವನ್ನು ಪಡೆಯುತ್ತದೆಯೋ ಅದೇ ಉತ್ತಮ ಆಡಳಿತ.

ಏಕೆ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತಿಲ್ಲ?

ಏಕೆ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತಿಲ್ಲ?

ಭಾರತವು ಸದೃಢ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದ್ದರೂ ಸಹ ಉತ್ತಮ ಆಡಳಿತವನ್ನು ನೀಡಲು ಏಕೆ ಸಾಧ್ಯವಾಗುತ್ತಿಲ್ಲ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರಬಹುದು. ಕಾಲಕಾಲಕ್ಕೆ ಹೊರಬೀಳುವ ಸರ್ಕಾರದ ವರದಿಗಳು, ಸಮೀಕ್ಷೆಗಳು, ಜನಗಣತಿ, ವಿಶ್ವ ಸಂಸ್ಥೆಯ ವರದಿ ಹಾಗೂ ನಾಗರಿಕ ಸಮಾಜಗಳ ಅಧ್ಯಯನದ ವರದಿಗಳು ಸರ್ಕಾರದ ಪ್ರಗತಿಯನ್ನು ಹಾಗೆಯೇ ಸೇವೆಗಳನ್ನು ಒದಗಿಸುವಲ್ಲಿ ಇರುವ ಲೋಪದೋಷಗಳನ್ನು ಬಿಂಬಿಸುತ್ತವೆ.

ಸರ್ಕಾರವು ಸಾವಿರಾರು ಕೋಟಿ ರೂಪಾಯಿಗಳನ್ನು ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಬಳಸಿದರೂ ಸಹ ಭಾರತದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಮತ್ತು ಮಹಿಳೆಯರ ಸಂಖ್ಯೆ ಹೆಚ್ಚಿದೆ. ಉದಾಹರಣೆಗೆ ಇತ್ತೀಚಿನ 2017ರ ಗ್ಲೋಬಲ್ ನ್ಯೂಟ್ರೀಷನ್ ವರದಿಯು ‘ಭಾರತದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಅರ್ಧಕ್ಕಿಂತಲೂ ಹೆಚ್ಚಿನ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ' ಎಂದು ತಿಳಿಸಿದೆ.

ಉತ್ತಮ ಆಡಳಿತದ ಅಡೆ-ತಡೆಗಳು

ಉತ್ತಮ ಆಡಳಿತದ ಅಡೆ-ತಡೆಗಳು

ಉತ್ತಮ ಆಡಳಿತವನ್ನು ನೀಡುವಲ್ಲಿ ಇರುವ ಅಡೆತಡೆಗಳೇನು ಎಂಬುದನ್ನು ತಿಳಿಯುವುದು ಅತ್ಯವಶ್ಯಕವಾಗಿದೆ, ಅಂತಹ ಅಂಶಗಳೆಂದರೆ, ಕಾರ್ಯನೀತಿಗಳ ಅನುಷ್ಠಾನಗಳಲ್ಲಿ ಕಂಡು ಬಂದಿರುವ ನ್ಯೂನ್ಯತೆಗಳು. ಸಮುದಾಯದ ಅಗತ್ಯತೆಗಳು ಮತ್ತು ಸಂಪನ್ಮೂಲಗಳನ್ನು ಸರಿಯಾಗಿ ಬಳಸದೆ ಕಾರ್ಯನೀತಿ/ಯೋಜನೆಗಳನ್ನು ಅನುಷ್ಠಾನಗೊಳಿಸಿದರೆ ಅದು ನಿರೀಕ್ಷಿತ ಫಲಿತಾಂಶ ನೀಡಲು ಸಾಧ್ಯವಾಗುವುದಿಲ್ಲ.

ಈ ಯೋಜನೆಗಳ ಅನುಷ್ಠಾನ ಕಷ್ಟನಷ್ಟಗಳನ್ನು ಅರ್ಥ ಮಾಡಿಕೊಳ್ಳದೆ ಸರ್ಕಾರಗಳ ಜನಪ್ರಿಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಅನುಸರಿಸುತ್ತವೆ. ಇದು ಅಂತಿಮವಾಗಿ ನಿರೀಕ್ಷಿತ ಫಲಿತಾಂಶಗಳನ್ನು ನೀಡುವುದಿಲ್ಲ. ಒಂದು ಭಾರಿಗೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದಲ್ಲಿ ಅದನ್ನು ಹಿಂಪಡೆಯುವುದು ಬಹಳ ಕಷ್ಟ.

ದತ್ತಾಂಶ ಮತ್ತು ಸಾಕ್ಷಿಗಳ ಕೊರತೆ

ದತ್ತಾಂಶ ಮತ್ತು ಸಾಕ್ಷಿಗಳ ಕೊರತೆ

ಕಾರ್ಯಕ್ರಮ/ನೀತಿಯನ್ನು ಅನುಷ್ಠಾನ ಮಾಡುವ ಮೊದಲು ಈ ಯೋಜನೆಯು ಸಮಗ್ರ ಸಮುದಾಯದ ಅಗತ್ಯೆಯನ್ನು ಪೂರೈಸುತ್ತದೆಯೇ, ನಿರೀಕ್ಷಿತ ಗುರಿಉದ್ದೇಶವನ್ನು ಸಾಧಿಸುತ್ತದೆಯೇ ಎಂಬುದನ್ನು ಮೌಲ್ಯಮಾಪನ ಅಥವಾ ಸಂಶೋಧನೆಗಳ ಮೂಲಕ ತಿಳಿಯಬೇಕು. ಸರ್ಕಾರವು ಕಾರ್ಯಕ್ರಮ ಮತ್ತು ಯೋಜನೆಯ ಮಾಹಿತಿ, ಫಲಾನುಭವಿಗಳ ಅಂಕಿಸಂಖ್ಯೆಗಳನ್ನು ಕಾಲಕಾಲಕ್ಕೆ ಸಾರ್ವಜನಿಕ ಮಾಧ್ಯಮಗಳಲ್ಲಿ ಬಿತ್ತರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರದಲ್ಲಿ ಸಾಕಷ್ಟು ಅಂಕಿಅಂಶಗಳ ಮತ್ತು ಸಾಕ್ಷಿಗಳ ಕೊರತೆ ಇರುವುದು ಕಂಡುಬರುತ್ತದೆ.

ಸಮುದಾಯದ ಭಾಗವಹಿಸುವಿಕೆ

ಸಮುದಾಯದ ಭಾಗವಹಿಸುವಿಕೆ

ನಾಗರಿಕರ ಭಾಗವಹಿಸುವಿಕೆಯು ಅಸಮರ್ಪಕವಾಗಿದ್ದಲ್ಲಿ ಉತ್ತಮ ಆಡಳಿತವನ್ನು ನೋಡಲು ಸಾಧ್ಯವಿಲ್ಲ. ಯೋಜನೆಗಳು/ಕಾರ್ಯಕ್ರಮಗಳನ್ನು ಮೇಲ್ವಿಚಾರಣೆ ಮಾಡಲು ಸಮುದಾಯದ ಭಾಗವಹಿಸುವುವಿಕೆಯನ್ನು ಸರ್ಕಾರವು ಪ್ರೋತ್ಸಾಹಿಸುತ್ತಿದೆ.

ಆದರೆ ಈ ಸಮಿತಿಯ ಸದಸ್ಯರ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸದಿದ್ದಲ್ಲಿ ಸಮಿತಿಗಳು ನಿರೀಕ್ಷಿತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲು ಸಾಧ್ಯವಾಗುವುದಿಲ್ಲ. ಉದಾ: ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿ (ಶಾಲೆಗಳಲ್ಲಿ), ಬಾಲಸಮಿತಿ (ಅಂಗನವಾಡಿ ಕೇಂದ್ರಗಳಲ್ಲಿ), ವಿಜಿಲೆನ್ಸ್ ಕಮಿಟಿ (ಪಡಿತರ ವಿತರಣೆ ವ್ಯವಸ್ಥೆ) ಇತ್ಯಾದಿ. ಯಾವುದೇ ಸಮಿತಿಯು ರಚನೆಯಾದ ತಕ್ಷಣ ಆ ಸಮಿತಿಯ ಸದಸ್ಯರಿಗೆ ತರಬೇತಿಯನ್ನು ನೀಡುವ ಮೂಲಕ ಅವರ ಪಾತ್ರ ಮತ್ತು ಜವಾಬ್ದಾರಿಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಹಾಗೆಯೇ ಅವುಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ತಿಳಿಯಲು ಕಾಲಕಾಲಕ್ಕೆ ಸಭೆಗಳನ್ನು ನಡೆಸುವ ಮೂಲಕ ಅವುಗಳ ಇರುವಿಕೆಯನ್ನು ಖಾತರಿಪಡಿಸಬೇಕು.

ಮಾನವ ಸಂಪನ್ಮೂಲಗಳ ಅಸಮರ್ಪಕ ಬಳಕೆ

ಮಾನವ ಸಂಪನ್ಮೂಲಗಳ ಅಸಮರ್ಪಕ ಬಳಕೆ

ಸಿಬ್ಬಂದಿಗಳ ಕೊರತೆ ಎಂಬುದು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ದಿನನಿತ್ಯ ಕೇಳಿಬರುವ ವಿಷಯ. ಈ ನಿಟ್ಟಿನಲ್ಲಿ ಲಭ್ಯವಿರುವ ಸಿಬ್ಬಂದಿಗಳನ್ನು ಸಮರ್ಪಕವಾಗಿ ಉಪಯೋಗಿಸುವ ಮೂಲಕ ಉತ್ತಮ ಸೇವೆಯನ್ನು ಒದಗಿಸುವ ಹಾಗೆ ಮಾಡಬೇಕು. ಸೇವೆಗಳನ್ನು ಅಂತಮವಾಗಿ ಬಳಕೆದಾರರಿಗೆ ನೀಡುವ ಸ್ಥಳೀಯ ಸಿಬ್ಬಂದಿ ವರ್ಗಕ್ಕೆ ಉತ್ತಮ ಆಡಳಿತದ ಸೂಕ್ಷ್ಮತೆ ಮತ್ತು ಪ್ರಾಮುಖ್ಯತೆಯನ್ನು ವೃದ್ಧಿಸುವ ತರಬೇತಿಯನ್ನು ಕಾಲಕಾಲಕ್ಕೆ ನೀಡಬೇಕು.

ಸೇವೆಗಳ ಅಸಮರ್ಪಕ ಉಪಯೋಗ

ಸೇವೆಗಳ ಅಸಮರ್ಪಕ ಉಪಯೋಗ

ಸೇವೆಗಳ ಅಸಮರ್ಪಕ ಉಪಯೋಗ ಉತ್ತಮ ಆಡಳಿತ ನೀಡದಿರುವುದಕ್ಕೆ ಒಂದು ನಿದರ್ಶನ. ಯಾವುದೇ ಯೋಜನೆಯು ಬಳಕೆದಾರರಿಗೆ ತಲುಪದಿದ್ದಲ್ಲಿ ಅದರ ಗುರಿಉದ್ದೇಶ ಇಡೇರುವುದಿಲ್ಲ. ಸೇವೆಗಳ ಅಸಮರ್ಪಕ ಉಪಯೋಗವು ಎರಡು ಕಾರಣಗಳಿಂದ ಆಗಬಹುದು.

ಮೊದಲನೆಯದಾಗಿ ಸಿಬ್ಬಂದಿಗಳಿಂದ ಸೇವೆಗಳು ನಿರ್ಧಿಷ್ಟ ಬಳಕೆದಾರರಿಗೆ ತಲುಪಿಸುವಲ್ಲಿ ಇರುವ ತೊಂದರೆಗಳು, ಎರಡನೇಯದಾಗಿ ಬಳಕೆದಾರರಿಗೆ ಸೇವೆಗಳನ್ನು ಪಡೆಯುವಲ್ಲಿ ಇರುವ ತೊಂದರೆಗಳು.

ಭಾರತದ ರಾಜ್ಯಗಳಲ್ಲಿ ಆಡಳಿತದ ಗುಣಮಟ್ಟವನ್ನು ಸಮಗ್ರವಾಗಿ ಅಧ್ಯಯನಮಾಡುವ ದತ್ತಾಂಶ ಆಧಾರಿತ ಪಬ್ಲಿಕ್ ಅಪೇರ್ಸ್ ಇಂಡೆಕ್ಸ್ ಎಂಬ ವರದಿಯ ಮೂಲಕ ಉತ್ತಮ ಆಡಳಿತವನ್ನು ಅಳೆಯುವ ಪ್ರಯತ್ನವನ್ನು 2016ರಿಂದ ಪಬ್ಲಿಕ್ ಅಫೇರ್ಸ್ ಸೆಂಟರ್ ಸಂಸ್ಥೆಯು ಮಾಡುತ್ತಾ ಬಂದಿದೆ.

ಅಗತ್ಯ ಮೂಲಭೂತಸೌಕರ್ಯ, ಮಾನವ ಅಭಿವೃದ್ಧಿಗಾಗಿ ಬೆಂಬಲ, ಸಾಮಾಜಿಕ ರಕ್ಷಣೆ, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ, ಅಪರಾಧ, ಕಾನೂನು ಮತ್ತು ಸುವ್ಯವಸ್ಥೆಯ ನಿಯಂತ್ರಣ, ನ್ಯಾಯ ಹಂಚಿಕೆ, ಪರಿಸರ, ಪಾರದರ್ಶಕತೆ ಮತ್ತು ಸಾರ್ವಜನಿಕ ಹೊಣೆಗಾರಿಕೆ, ಹಣಕಾಸು ನಿರ್ವಹಣೆ ಮತ್ತು ಆರ್ಥಿಕ ಸ್ವಾತಂತ್ರ್ಯದ ವಿಸ್ತಾರವಾದ ವಿಷಯವಸ್ತುಗಳು, ಇವುಗಳಿಗೆ ಹೊಂದಿಕೊಂಡಂತ ಗಮನಕೇಂದ್ರಿತ ವಿಷಯಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಸೂಚಕಗಳ ಆಧಾರದ ಮೇಲೆ ರಾಜ್ಯಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ದತ್ತಾಂಶಗಳ ಮೂಲಕ ಅಧ್ಯಯನ ಮಾಡಿ ಉತ್ತಮ ಆಡಳಿತಕ್ಕೆ ಸಂಬಂಧಿಸಿದಂತೆ ರಾಜ್ಯಗಳಿಗೆ ಅಂಕಗಳನ್ನು ನೀಡಿದೆ.

ನಾಗರಿಕ ಸಮಾಜದ ಪಾತ್ರ

ನಾಗರಿಕ ಸಮಾಜದ ಪಾತ್ರ

ಉತ್ತಮ ಆಡಳಿತ ಸೇವೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿಯು ಜನಪ್ರತಿನಿದಿಗಳ ಮತ್ತು ಅಧಿಕಾರಿಗಳ ಮೇಲೆ ಇರುತ್ತದೆ. ಈ ಜನಪ್ರತಿನಿದಿಗಳು ಮತ್ತು ಅಧಿಕಾರಿಗಳು ತಮ್ಮ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಅಳತೆಮಾಡುವ ಜವಾಬ್ದಾರಿಯು ನಾಗರಿಕರು, ನಾಗರಿಕ ಸಮಾಜದ ಸಂಸ್ಥೆಗಳು ಮತ್ತು ಮಾಧ್ಯಮಗಳ ಮೇಲೆ ಇದೆ. ಜನಪ್ರತಿನಿಧಿಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಅಧಿಕಾರವು ಜನತೆಗೆ ಇರುತ್ತದೆ. ಸರ್ಕಾರಿ ಸೇವೆಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಮಾಹಿತಿ ಹಕ್ಕು ಕಾಯ್ದೆ, ಸಕಾಲ ಅವಕಾಶ ಮಾಡಿಕೊಟ್ಟಿದೆ. ಆದರೆ, ಈ ಕಾನೂನುಗಳನ್ನು ಸರಿಯಾಗಿ ಬಳಸುವ ಮೂಲಕ ನಾಗರಿಕರು ತಮ್ಮ ಹಕ್ಕುಗಳನ್ನು ಚಲಾಯಿಸಬಹುದು.

ಆದರೆ ವಾಸ್ತವಿಕವಾಗಿ ನಾಗರಿಕರು ಮತ್ತು ನಾಗರಿಕ ಸಮಾಜಗಳು ಎಷ್ಟರ ಮಟ್ಟಿಗೆ ಜವಾಬ್ದಾರಿಗಳನ್ನು ನಡೆಸುತ್ತಿವೆ ಎಂಬುದನ್ನು ನೋಡಬೇಕಾಗಿದೆ. ಸರ್ಕಾರವು ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳು ನಿರ್ಧಿಷ್ಟ ಗುರಿಉದ್ದೇಶಗಳನ್ನು ತಲುಪುವಲ್ಲಿ ಸಫಲವಾಗಿದೆಯೇ ಎಂಬುದನ್ನು ತಿಳಿಯಲು ನಾಗರಿಕ ಸಮಾಜದ ಸಂಸ್ಥೆಗಳು, ಸಂಶೋಧನ ಸಂಸ್ಥೆಗಳು ಅಧ್ಯಯನ ಅಥವಾ ಸಂಶೋಧನೆಗಳನ್ನು ನಡೆಸಿ ಶಿಫಾರಸ್ಸುಗಳನ್ನು ನೀಡಬೇಕು ಹಾಗೂ ಮಾಹಿತಿಗಳನ್ನು ಮಾಧ್ಯಮ ಮತ್ತು ಸಾರ್ವಜನಿಕ ಕ್ಷೇತ್ರಗಳಲ್ಲಿ ಬಿತ್ತರಿಸಬೇಕು.

English summary
Bharat Ratna and former Prime Minister Atal Bihari Vajpayee's birthday is being celebrated as Good Governance Day across the country on December 25. What is Good Governance?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X