• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

FASTag ಸಂಪೂರ್ಣ ಸುರಕ್ಷಿತವೇ? ಅದರ ಅನನುಕೂಲಗಳೇನು?

|

ಸುಂಕ ಸಂಗ್ರಹ ಕೇಂದ್ರಗಳಲ್ಲಿ ಉಂಟಾಗುವ ವಾಹನದಟ್ಟಣೆಯನ್ನು ತಡೆಯಲು, ವಾಹನ ಸವಾರರ ಸಮಯ ಉಳಿತಾಯ ಮತ್ತು ಇಂಧನ ಉಳಿತಾಯದ ಜತೆಗೆ ವಾಯುಮಾಲಿನ್ಯವನ್ನು ತಗ್ಗಿಸಲು ಕೂಡ ಫಾಸ್‌ಟ್ಯಾಗ್ (FASTag) ನೆರವಾಗಲಿದೆ ಎನ್ನುತ್ತದೆ ಸರ್ಕಾರ. ಇದು ದೇಶದಾದ್ಯಂತ ಜಾರಿಯಾದರೆ ಪ್ರತಿ ವರ್ಷ ವ್ಯವಸ್ಥೆಯ ನಿರ್ವಹಣೆಗೆ 27,000 ಕೋಟಿ ಮತ್ತು ಇಂಧನದ 7,000 ಕೋಟಿ ರೂ. ಉಳಿತಾಯವಾಗುತ್ತದೆ.

ಹಾಗೆಂದು ಫಾಸ್‌ಟ್ಯಾಗ್ ಸಂಪೂರ್ಣ ವಾಹನ ಮಾಲೀಕರ ಸ್ನೇಹಿ ಎಂದು ಹೇಳಲು ಸಾಧ್ಯವಿಲ್ಲ. ಅನುಕೂಲಗಳಿರುವಂತೆಯೇ ಇದರಿಂದ ಹಲವ ಅನನುಕೂಲಗಳೂ ಇವೆ ಎಂಬ ಆರೋಪಗಳು ಕೇಳಿಬಂದಿವೆ. ಫಾಸ್‌ಟ್ಯಾಗ್‌ನಿಂದ ಇರುವ ಸಮಸ್ಯೆಗಳೇನು? ಅವುಗಳಿಗೆ ಪರಿಹಾರವಿದೆಯೇ?

FASTag ಅಂದ್ರೇನು? ಡಿ.1 ರಿಂದ ಅದು ಎಲ್ಲಾ ವಾಹನಕ್ಕೂ ಕಡ್ಡಾಯ ಏಕೆ?

ಫಾಸ್‌ಟ್ಯಾಗ್‌ ಖರೀದಿಸಲು ವಾಹನ ನೋಂದಣಿ ಪ್ರಮಾಣಪತ್ರ, ಫೋಟೊ ಮತ್ತು ವಿಳಾಸ ಖಾತರಿಪಡಿಸುವ ಗುರುತಿನ ಚೀಟಿ ನೀಡಬೇಕಾಗುತ್ತದೆ. ಅಂದರೆ ಫಾಸ್‌ಟ್ಯಾಗ್ ಪಡೆಯಲು ಅದನ್ನು ಪೂರೈಸುವ ಸಂಸ್ಥೆಗೆ ನಮ್ಮ ಖಾಸಗಿ ಮಾಹಿತಿಗಳನ್ನು ನೀಡಬೇಕಾಗುತ್ತದೆ. ನಾವು ಡೌನ್‌ಲೋಡ್ ಮಾಡಿಕೊಂಡು ಬಳಸುವ ಆಪ್, ವೆಬ್‌ಸೈಟ್ ಅಥವಾ ಬೇರೆ ಮೂಲಗಳಿಗೆ ಈ ದಾಖಲೆಗಳನ್ನು ಸಲ್ಲಿಸಬೇಕು. ಇದಕ್ಕೆ ನಮ್ಮ ಬ್ಯಾಂಕ್ ಖಾತೆಯನ್ನು ಕೂಡ ಜೋಡಣೆ ಮಾಡಿಕೊಳ್ಳಬೇಕು. ಇದು ಎಷ್ಟರ ಮಟ್ಟಿಗೆ ಸುರಕ್ಷಿತ? ನಮ್ಮ ಖಾಸಗಿ ದಾಖಲೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಹಾಗೂ ಅದರ ಮೂಲಕ ಜೋಡಣೆಯಾದ ಬ್ಯಾಂಕ್ ಖಾತೆಯೂ ಎಷ್ಟರ ಮಟ್ಟಗೆ ಸುರಕ್ಷಿತವಾಗಿರುತ್ತದೆ? ಎಂಬ ಪ್ರಶ್ನೆಗಳು ಅನೇಕರಲ್ಲಿ ಉಂಟಾಗಿದೆ.

ಆರ್‌ಎಫ್‌ಡಿ ಕೈಕೊಟ್ಟರೆ ಕಷ್ಟ

ಆರ್‌ಎಫ್‌ಡಿ ಕೈಕೊಟ್ಟರೆ ಕಷ್ಟ

ರೇಡಿಯೋ ತರಂಗಾಂತರವನ್ನ ಗುರುತಿಸುವ ತಂತ್ರಜ್ಞಾನವು (ಆರ್‌ಎಫ್‌ಐಡಿ) ಫಾಸ್‌ಟ್ಯಾಗ್‌ನ ಮೇಲೆ ಹಾದು ಅದರಲ್ಲಿನ ಕೋಡ್‌ಗಳನ್ನು ಓದುತ್ತದೆ. ಆಗ ಅದರ ವಿವರಗಳು ಸ್ಕ್ಯಾನ್ ಆಗಿ ವಾಹನದ ಸುಂಕ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ. ಆದರೆ ಆರ್‌ಎಫ್‌ಐಡಿ ಅನೇಕ ಮಿತಿಗಳನ್ನು ಹೊಂದಿವೆ. ಅದು ತನ್ನ ತರಂಗಾಂತರ ತಲುಪುವ ದೂರದವರೆಗಿನ ಟ್ಯಾಗ್‌ಗಳನ್ನು ಮಾತ್ರ ಓದಬಲ್ಲದು. ಜತೆಗೆ ಮಳೆ ಜೋರಾಗಿರುವ ಸಂದರ್ಭದಲ್ಲಿ ಅದರ ನಿಖರತೆ ಕ್ಷೀಣಿಸುತ್ತದೆ.

ಕಳ್ಳತನವಾಗುವ ಅಪಾಯ

ಕಳ್ಳತನವಾಗುವ ಅಪಾಯ

ವಾಹನಗಳ ಮುಂಭಾಗದಲ್ಲಿ ಅಂಟಿಸುವ ಫಾಸ್‌ಟ್ಯಾಗ್‌ಗಳು ಕಳ್ಳತನವಾಗಬಹುದು ಅಥವಾ ಕಳೆದುಹೋಗಬಹುದು. ಬೇರೆ ವಾಹನಗಳಿಂದ ಕದ್ದ ಫಾಸ್‌ಟ್ಯಾಗ್‌ಅನ್ನು ತಮ್ಮ ವಾಹನಕ್ಕೆ ಅಂಟಿಸಿಕೊಂಡು ಅದನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯವನ್ನು ತಳ್ಳಿಹಾಕುವಂತಿಲ್ಲ. ಹೀಗೆ ತಮ್ಮ ಫಾಸ್‌ಟ್ಯಾಗ್ ಕಳುವಾದ ಅಥವಾ ಕಳೆದುಹೋದ ಬಗ್ಗೆ ತಿಳಿದ ಕೂಡಲೇ ಮೊಬೈಲ್ ಫೋನ್ ಕಳೆದುಹೋದಾಗ ಸಿಮ್ ಬ್ಲಾಕ್ ಮಾಡುವಂತೆಯೇ ಸಂಬಂಧಿಸಿದ ಸಂಸ್ಥೆ ಅಥವಾ ಬ್ಯಾಂಕ್‌ಗೆ ಗಮನಕ್ಕೆ ಅದನ್ನು ತಂದು ಬ್ಲಾಕ್ ಮಾಡಿಸಬೇಕಾಗುತ್ತದೆ. ಬಳಿಕ ಹೊಸ ಟ್ಯಾಗ್ ಪಡೆದುಕೊಳ್ಳಬೇಕು.

'ಸುಂಕದ ಕಟ್ಟೆ'ಗಳಲ್ಲಿ ಫಾಸ್‌ಟ್ಯಾಗ್ ಹೇಗೆ ಕೆಲಸ ಮಾಡುತ್ತದೆ?

ತಾಂತ್ರಿಕ ಸಮಸ್ಯೆಯಿಂದ ಹೆಚ್ಚು ಹಣ ಕಡಿತ

ತಾಂತ್ರಿಕ ಸಮಸ್ಯೆಯಿಂದ ಹೆಚ್ಚು ಹಣ ಕಡಿತ

ಟ್ಯಾಗ್‌ಅನ್ನು ಸ್ಕ್ಯಾನ್ ಮಾಡುವ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಉಂಟಾದರೆ ನಿಮ್ಮ ಖಾತೆಯಿಂದ ದುಪ್ಪಟ್ಟು ಹಣ ಕಡಿತವಾದರೂ ಅಚ್ಚರಿಯಿಲ್ಲ. ಅಥವಾ ಕೆಲವೆಡೆ ಫಾಸ್‌ಟ್ಯಾಗ್ ಕೆಲಸ ಮಾಡದೆಯೂ ಇರಬಹುದು. ನಿಮ್ಮ ವಾಹನ ಆರ್‌ಎಫ್‌ಐಡಿ ಸ್ಕ್ಯಾನರ್ ಮೂಲಕ ತೆರಳಬೇಕು. ಅದು ಕೆಲವೊಮ್ಮೆ ನಿಮ್ಮ ವಾಹನಕ್ಕೆ ಅಂಟಿಸಿದ ಫಾಸ್‌ಟ್ಯಾಗ್‌ಅನ್ನು ಪತ್ತೆಹಚ್ಚದೆಯೂ ಇರಬಹುದು. ಈ ಸಮಸ್ಯೆ ಎದುರಾದರೆ ಫಾಸ್‌ಟ್ಯಾಗ್ ಗ್ರಾಹಕ ಕೇಂದ್ರಕ್ಕೆ ಮಾಹಿತಿ ನೀಡಬೇಕು.

ಟ್ಯಾಗ್ ಇಲ್ಲದವರೂ ಸರದಿಯಲ್ಲಿ

ಟ್ಯಾಗ್ ಇಲ್ಲದವರೂ ಸರದಿಯಲ್ಲಿ

ಟೋಲ್ ಪ್ಲಾಜಾಗಳಲ್ಲಿ ಫಾಸ್‌ಟ್ಯಾಗ್ ಹೊಂದಿರುವ ವಾಹನಗಳಿಗೆ ಪ್ರತ್ಯೇಕ ಸಾಲು ಇರುತ್ತದೆ. ಆದರೆ ಇದರ ಮಧ್ಯೆ ಫಾಸ್‌ಟ್ಯಾಗ್ ಹೊಂದಿರದ ವಾಹನ ಸೇರಿಕೊಂಡರೆ ಉಳಿದ ವಾಹನಗಳು ಅವರು ಸುಂಕ ಪಾವತಿಸುವವರೆಗೆ ಕಾಯುವುದು ಅನಿವಾರ್ಯ. ಹೀಗೆ ಟ್ಯಾಗ್ ಹೊಂದಿರದವರು ಅಲ್ಲಿ ಎರಡು ಪಟ್ಟು ಸುಂಕ ತೆರಬೇಕಾಗುತ್ತದೆ. ಕೆಲವು ವಾಹನಗಳು ಈಗ ಟೋಲ್ ಲೇನ್‌ಗಳಲ್ಲಿ ತೂರಿಕೊಳ್ಳುವಂತೆಯೇ ಅಡ್ಡಾದಿಡ್ಡಿ ವಾಹನಗಳನ್ನು ನುಗ್ಗಿಸಬಹುದು. ಇದರಿಂದ ಸುಂಕ ಕೇಂದ್ರಗಳಲ್ಲಿ ಗೊಂದಲ, ಗದ್ದಲಗಳು ಉದ್ಭವಿಸುವ ಸಾಧ್ಯತೆ ಇದೆ. ಅಲ್ಲದೆ, ಫಾಸ್‌ಟ್ಯಾಗ್ ಮತ್ತು ವಿಐಪಿ ವಾಹನಗಳಿಗೆ ಒಂದೇ ಲೇನ್ ನೀಡುವ ಯೋಜನೆ ಕೆಲವೆಡೆ ಇದೆ. ಇಲ್ಲಿಯೂ ಗೊಂದಲಗಳು ಉಂಟಾಗುತ್ತವೆ.

FASTag ಪಡೆಯೋದು ಹೇಗೆ? App ಬಳಸುವುದು ಹೇಗೆ?

ಖಾತೆಯಿಲ್ಲ ಸಾಕಷ್ಟು ಹಣವಿರಬೇಕು

ಖಾತೆಯಿಲ್ಲ ಸಾಕಷ್ಟು ಹಣವಿರಬೇಕು

ವಾಹನ ಮಾಲೀಕರು ತಮ್ಮ ಬ್ಯಾಂಕ್ ಖಾತೆ ಅಥವಾ ಫಾಸ್‌ಟ್ಯಾಗ್ ವ್ಯಾಲೆಟ್‌ನಲ್ಲಿ ಸೂಕ್ತ ಪ್ರಮಾಣದ ಬ್ಯಾಲೆನ್ಸ್ ಕಾಪಾಡಿಕೊಳ್ಳದೆ ಇದ್ದರೆ ಆ ಫಾಸ್‌ಟ್ಯಾಗ್‌ಅನ್ನು ಕಪ್ಪುಪಟ್ಟಿಗೆ ಸೇರಿಸಬಹುದು. ಬಳಿಕ ಅದು ಬಳಕೆಗೆ ನಿಷ್ಪ್ರಯೋಜಕವಾಗಬಹುದು. ಫಾಸ್‌ಟ್ಯಾಗ್ ಹೊಂದಿದ್ದರೂ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಹೊಂದಿರದೆ ಇದ್ದರೆ ಅದು ರಾಷ್ಟ್ರೀಯ ವಿದ್ಯುನ್ಮಾನ ಸುಂಕ ಸಂಗ್ರಹ (ಎನ್‌ಇಟಿಸಿ) ಸೇವೆಗಳಿಗೆ ಒಳಪಡುವುದಿಲ್ಲ. ಆಗ ನಗದು ರೂಪದಲ್ಲಿ ದುಪ್ಪಟ್ಟು ಸುಂಕ ಕಟ್ಟಿ ಸಾಗಬೇಕಾಗುತ್ತದೆ. ಹೀಗಾಗಿ ಬಳಕೆದಾರರು ತಾವು ಹೆಚ್ಚು ಬಳಸುವ ಮತ್ತು ಅಧಿಕ ಬ್ಯಾಲೆನ್ಸ್ ಹೊಂದಿರುವ ಖಾತೆಗಳನ್ನೇ ಟ್ಯಾಗ್‌ಗೆ ಜೋಡಣೆ ಮಾಡಬೇಕು.

ವಾಹನದಟ್ಟಣೆ ನಿಯಂತ್ರಣ

ವಾಹನದಟ್ಟಣೆ ನಿಯಂತ್ರಣ

ಮುಂಬೈ-ದೆಹಲಿ ಎನ್‌ಎಚ್‌8ರಲ್ಲಿ ಫಾಸ್‌ಟ್ಯಾಗ್ ಈ ಮೊದಲೇ ಜಾರಿಗೆ ಬಂದಿದೆ. ಆದರೆ ಇಲ್ಲಿ ವಾಹನ ಚಾಲಕರಲ್ಲಿ ಸರದಿ ಕಾಪಾಡುವ ಶಿಸ್ತು ಇಲ್ಲದಿರುವುದನ್ನು ಅನೇಕರು ಪ್ರಸ್ತಾಪಿಸಿದ್ದಾರೆ. ಫಾಸ್‌ಟ್ಯಾಗ್ ಇಲ್ಲದ ವಾಹನಗಳೂ ಇಲ್ಲಿ ಬಂದು ನಗದು ರೂಪದಲ್ಲಿ ಸುಂಕ ಪಾವತಿಸುವುದರಿಂದ ಉಳಿದ ವಾಹನಗಳು ಸರದಿಯಲ್ಲಿ ಕಾಯುವುದು ಅನಿವಾರ್ಯ. ಫಾಸ್‌ಟ್ಯಾಗ್‌ಗೆ ಮೀಸಲಾಗಿರುವ ಲೇನ್‌ಗಳಲ್ಲಿ ವಾಹನಗಳ ಸಂಖ್ಯೆ ಕಡಿಮೆ. ಹೀಗಾಗಿ ಉಳಿದ ಲೇನ್‌ಗಳಲ್ಲಿನ ವಾಹನದಟ್ಟಣೆ ತಡೆಯಲು ಈ ಲೇನ್‌ನಲ್ಲಿಯೂ ಟ್ಯಾಗ್ ಹೊಂದಿಲ್ಲದ ವಾಹನಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ಸುಂಕ ಸಂಗ್ರಹಕಾರರು ವಿವರಣೆ ನೀಡುತ್ತಾರೆ.

ಜನರಿಗೆ ಸೂಕ್ತ ಮಾಹಿತಿ ಇಲ್ಲ

ಜನರಿಗೆ ಸೂಕ್ತ ಮಾಹಿತಿ ಇಲ್ಲ

ಫಾಸ್‌ಟ್ಯಾಗ್ ಅಳವಡಿಸಿಕೊಳ್ಳಲು ವಾಹನಗಳ ಮಾಲೀಕರಿಗೆ ನೀಡಿದ ಗಡುವು ತೀರಾ ಕಡಿಮೆ. ಇದರಲ್ಲಿ ಅವರು ಈ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ಟ್ಯಾಗ್ ಖರೀದಿ ಮಾಡಬೇಕಾಗಿದೆ. ಇದರ ಬಗ್ಗೆ ಜನರಿಗೆ ಮಾಹಿತಿ ನೀಡುವ ಪ್ರಯತ್ನಗಳು ಸರ್ಕಾರದ ಕಡೆಯಿಂದ ನಡೆದಿಲ್ಲ. ಫಾಸ್‌ಟ್ಯಾಗ್ ವಿತರಣೆಗೆ ಟೋಲ್ ಪ್ಲಾಜಾಗಳಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಅಲ್ಲದೆ, ಆನ್‌ಲೈನ್‌ನಲ್ಲಿ ಈ ಪ್ರಕ್ರಿಯೆ ಕೂಡ ಸರಳವಾಗಿಲ್ಲ. ಟ್ಯಾಗ್ ಇಲ್ಲದ ವಾಹನಗಳು ಡಿ.1ರಿಂದ ಎರಡುಪಟ್ಟು ಹಣ ತೆರಬೇಕಿರುವುದು ವಾಹನ ಮಾಲೀಕರಿಗೆ ದೊಡ್ಡ ಹೊಡೆತ ನೀಡಲಿದೆ.

ಟ್ರಾವೆಲ್ಸ್ ಮಾಲೀಕರಿಗೆ ಸಂಕಷ್ಟ

ಟ್ರಾವೆಲ್ಸ್ ಮಾಲೀಕರಿಗೆ ಸಂಕಷ್ಟ

ಈ ವ್ಯವಸ್ಥೆಯಿಂದ ಹೆಚ್ಚು ಸಂಕಷ್ಟಕ್ಕೆ ಸಿಲುಕಿರುವವರು ಟ್ರಾವೆಲ್ಸ್ ವಾಹನಗಳ ಮಾಲೀಕರು. ಅವರು ತಮ್ಮ ವಾಹನಗಳಿಗೆ ಫಾಸ್‌ಟ್ಯಾಗ್ ಬಳಸಲು ಪ್ರತ್ಯೇಕ ಖಾತೆಗಳನ್ನು ತೆರೆದು ಅದರಲ್ಲಿ ಹೆಚ್ಚಿನ ಹಣ ಜಮೆ ಮಾಡಬೇಕಾಗುತ್ತದೆ. ನಿರಂತರ ವ್ಯವಹಾರಗಳನ್ನು ನಡೆಸುವುದರಿಂದ ಅವರು ತಮ್ಮ ದೈನಂದಿನ ವ್ಯವಹಾರಗಳ ಖಾತೆಯಲ್ಲದೆ ವಾಹನಗಳಿಗೆಂದೇ ಪ್ರತ್ಯೇಕ ಖಾತೆ ತೆರೆಯಬೇಕಾದ ಕಷ್ಟಕ್ಕೆ ಸಿಲುಕಲಿದ್ದಾರೆ.

English summary
FASTag system may help vehicles to move uninterruptedly, but it too have many issues and disadvantages like technical errors. What are the problems may faced by the customers?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X