ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಒಕ್ಕಲಿಗರ ಬಲ ಪ್ರದರ್ಶನದ ನಂತರ ಕೈ ಎತ್ತಿವೆ ಈ 4 ಪ್ರಶ್ನೆಗಳು

By ಅನಿಲ್ ಆಚಾರ್
|
Google Oneindia Kannada News

Recommended Video

ಒಕ್ಕಲಿಗರ ಬಲ ಪ್ರದರ್ಶನದ ನಂತರ ಹುಟ್ಟಿಕೊಂಡ ಪ್ರಶ್ನೆಗಳು

ಡಿ. ಕೆ. ಶಿವಕುಮಾರ್ ರನ್ನು ಇ. ಡಿ. ಬಂಧಿಸಿದಾಗಲೇ ಹೀಗಾಗುತ್ತದೆ ಎಂಬ ಅಂದಾಜಿತ್ತು. ಇದು ಒಕ್ಕಲಿಗರು ವರ್ಸಸ್ ಬಿಜೆಪಿ ಎಂದಾಗುತ್ತದೆ. ಇದರ ದೂರಗಾಮಿ ಪರಿಣಾಮ ಚುನಾವಣೆ ರಾಜಕೀಯದಲ್ಲೇ ಪರ್ಯವಸಾನ ಆಗುತ್ತದೆ ಎಂಬುದು ಕೂಡ ಅನಿರೀಕ್ಷಿತ ಆಗಿರಲಿಲ್ಲ. ಆದರೆ ಇಡೀ ಸ್ಟೋರಿಗೆ ಟ್ವಿಸ್ಟ್ ಬರುವ ರೀತಿಯಲ್ಲಿ ಪ್ರತಿಭಟನೆ ನಂತರದ ಬೆಳವಣಿಗೆಗಳು ಕಂಡುಬರುತ್ತಿವೆ.

ಮೊದಲ ಬಾಣ ತುಮಕೂರಿನ ಗುಬ್ಬಿ ಶಾಸಕ- ಜೆಡಿಎಸ್ ನ ಎಸ್. ಆರ್. ಶ್ರೀನಿವಾಸ್ ಕಡೆಯಿಂದ ಬಂದಿದೆ. ಗುರುವಾರದಂದು ಅವರು ಮಾತನಾಡಿದ ರೀತಿಯಿಂದ ಸ್ಪಷ್ಟ ಆಗುವ ವಿಚಾರ ಏನೆಂದರೆ, ಇದು ಜೆಡಿಎಸ್ ಕೋಟೆಯ ಅಡಿಪಾಯಕ್ಕೆ ಮತ್ತೊಮ್ಮೆ ಗಡಪಾರೆ ಇಟ್ಟು, ಒಂದೊಂದೇ ಗಟ್ಟಿ ಕಲ್ಲುಗಳನ್ನು ಕೆಡವುವ ಸೂಚನೆ ಎನಿಸುತ್ತದೆ.

ಕುಮಾರಸ್ವಾಮಿ ವಿರುದ್ಧ ಬಾಂಬ್ ಸಿಡಿಸಿದ ಜೆಡಿಎಸ್ ಶಾಸಕಕುಮಾರಸ್ವಾಮಿ ವಿರುದ್ಧ ಬಾಂಬ್ ಸಿಡಿಸಿದ ಜೆಡಿಎಸ್ ಶಾಸಕ

ಕುಮಾರಸ್ವಾಮಿ ಅವರು ನನ್ನ ಫೋನ್ ಕೂಡ ಕದ್ದಾಲಿಕೆ ಮಾಡಿಸಿರಬಹುದು. ತಪ್ಪು ಮಾಡಿದರೆ ಶಿಕ್ಷೆ ಅನುಭವಿಸುತ್ತಾರೆ ಬಿಡಿ. ಪ್ರತಿಭಟನೆಗೆ ಇನ್ವಿಟೇಷನ್ ಕೊಡುವುದಕ್ಕೆ ಆಗುತ್ತಾ? ನಮಗೂ ಯಾರೂ ಕರೆದಿರಲಿಲ್ಲ, ಡಿ. ಕೆ. ಶಿವಕುಮಾರ್ ಅವರ ಮೇಲೆ ಪ್ರೀತಿ ಇದ್ದುದರಿಂದ ಹೋಗಿದ್ದೆ... ಮಾತು ಹೀಗೇ ಮುಂದುವರಿದಿದೆ.

ಎಸ್. ಆರ್. ಶ್ರೀನಿವಾಸ್ ತಮ್ಮ ಉದ್ದ ನಾಲಗೆಗೆ ಬಹಳ ಹೆಸರುವಾಸಿ. ದೇವೇಗೌಡರು ತುಮಕೂರಲ್ಲಿ ಸೋತರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಅಂದಿದ್ದ ಭೂಪ ಇವರೇ. ಆದರೆ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ 'ವಾಸಣ್ಣ' ಅಂದರೆ ಇನ್ನೂ ಹವಾ ಇದೆ. ಅಂಥ ಶಾಸಕರೊಬ್ಬರು ತಮ್ಮ ಪಕ್ಷದ ನಾಯಕರ ಬಗ್ಗೆಯೇ ಹೀಗೆ ಮಾತನಾಡುತ್ತಾರೆ ಅಂದರೆ ಅದು ಬೇರೆಯದೇ ಸೂಚನೆ ನೀಡುತ್ತದೆ.

ಒಟ್ಟಾರೆ ಪ್ರತಿಭಟನೆ ನಂತರ ಉದ್ಭವಿಸಿರುವ ಪ್ರಶ್ನೆಗಳು ಹೀಗಿವೆ:

ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆಯಬಹುದಾ?

ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆಯಬಹುದಾ?

ಒಕ್ಕಲಿಗರ ವಿವಿಧ ಸಂಘ- ಸಂಸ್ಥೆಗಳಿಗೆ ಈಗಿನ ಹೋರಾಟದ ಕಾವು ಕಾಯ್ದುಕೊಳ್ಳುವುದು ಬಹಳ ಮುಖ್ಯ ಎಂಬ ಅರಿವಾಗಿದೆಯಾ? ಯಾಕೆಂದರೆ, ಇಂಥ ಪ್ರಕರಣಗಳಲ್ಲಿ ಬಂಧನದಲ್ಲಿ ಆರೆಂಟು ತಿಂಗಳು ಇದ್ದುಬಿಟ್ಟರೆ ಜನರು ಅದನ್ನು ಮರೆತು ಬಿಡುವ ಅಪಾಯ ಇದೆ ಎಂಬುದು ಈಗಾಗಲೇ ಸಾಬೀತಾಗಿರುವ ವಿಷಯ. ಇನ್ನು ತಿಂಗಳು, ಎರಡು ತಿಂಗಳ ಒಳಗಾಗಿ ಡಿ. ಕೆ. ಶಿವಕುಮಾರ್ ಬಂಧನದಿಂದ ಹೊರಬಂದರೆ ಪರವಾಗಿಲ್ಲ. ಒಂದು ವೇಳೆ ಆರೆಂಟು ತಿಂಗಳು ಸಮಯ ಹಿಡಿದುಬಿಟ್ಟರೆ ಹೋರಾಟವೂ ಇಲ್ಲ, ನೆನಪೂ ಇಲ್ಲ ಎಂಬ ಸ್ಥಿತಿ ತಲುಪುವ ಅಪಾಯ ಇದೆ. ಇದನ್ನು ಬುಧವಾರದ ದಿನ ಪ್ರತಿಭಟನೆ ಆಯೋಜಿಸಿದ್ದ ನಾಯಕರು ಪದೇ ಪದೇ ಹೇಳಿದರಾ? ನಾಯಕರು ಹೇಳಿದರೋ ಬಿಟ್ಟರೋ ನಂಜಾವಧೂತ ಸ್ವಾಮೀಜಿಯಂತೂ, ಇಂದಿನ ಪ್ರತಿಭಟನೆ ಸಾಂಕೇತಿಕ ಮಾತ್ರ ಎಂದರು. ಹಾಗಿದ್ದರೆ ಬೆಂಗಳೂರಿನಲ್ಲಿ ನಡೆದಂತೆ ಇಡೀ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆಯಬಹುದಾ?

ಕುಮಾರಸ್ವಾಮಿ ಪ್ರತಿಭಟನೆಯಲ್ಲಿ ಯಾಕೆ ಭಾಗಿ ಆಗಲಿಲ್ಲ?

ಕುಮಾರಸ್ವಾಮಿ ಪ್ರತಿಭಟನೆಯಲ್ಲಿ ಯಾಕೆ ಭಾಗಿ ಆಗಲಿಲ್ಲ?

ಮಾಜಿ ಮುಖ್ಯಮಂತ್ರಿ ಹಾಗೂ ಡಿ. ಕೆ. ಶಿವಕುಮಾರ್ ಅತ್ಯಾಪ್ತರೂ ಆದಂಥ ಎಚ್. ಡಿ. ಕುಮಾರಸ್ವಾಮಿ ಪ್ರತಿಭಟನೆಯಲ್ಲಿ ಯಾಕೆ ಭಾಗಿ ಆಗಲಿಲ್ಲ? ಅವರು ಭಾಗವಹಿಸಿದ್ದರೆ ವೇದಿಕೆಗೆ ಇನ್ನಷ್ಟು ತೂಕ ಇರುತ್ತಿತ್ತು. ಆದರೆ ನನಗೆ ಆಹ್ವಾನ ಇರಲಿಲ್ಲ, ಪೂರ್ವ ನಿಗದಿತ ಕಾರ್ಯಕ್ರಮ ಇತ್ತು. ಆದ್ದರಿಂದ ಭಾಗಿ ಆಗಲಿಲ್ಲ ಎಂದರು ಕುಮಾರಸ್ವಾಮಿ. ಆದರೆ ಇದರಿಂದ ಬೇರೆಯದೇ ಸಂದೇಶ ರವಾನೆ ಆಗಿದೆ. ಎಲ್ಲಿ ತಮ್ಮ ಮೇಲಿನ ಪ್ರಕರಣವು ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೋ ಎಂಬ ಆತಂಕ ಅವರಿಗೆ ಇತ್ತು ಹಾಗೂ ಮುಂದೆ ಬಿಜೆಪಿ ಜತೆ ಕೈ ಜೋಡಿಸುವ ಸ್ಥಿತಿ ಬಂದರೆ ಒಂದು ಬಾಗಿಲು ತೆಗೆದಿಟ್ಟಿರುವುದು ಉತ್ತಮ ಎಂಬ ಲೆಕ್ಕಾಚಾರದಲ್ಲಿ ಹೀಗೆ ಮಾಡಿದ್ದಾರೆ ಎಂಬುದು ಚರ್ಚೆಯಲ್ಲಿದೆ. ಜತೆಗೆ ಒಕ್ಕಲಿಗ ಸಮುದಾಯದಲ್ಲಿ ನಾಯಕತ್ವದ ವಿಚಾರಕ್ಕೆ ಬಂದರೆ ತಮಗೆ ಪ್ರಮುಖ ಪ್ರತಿಸ್ಪರ್ಧಿ ಆಗಿರುವ ಶಿವಕುಮಾರ್ ಪರ ಈಗ ಬಂದು ನಿಂತರೆ ಮುಂದೆ ರಾಮನಗರ ಜಿಲ್ಲೆಯಲ್ಲಿ ರಾಜಕಾರಣ ಮಾಡುವುದು ಕಷ್ಟ ಎಂಬ ದೂರದೃಷ್ಟಿಯೂ ಇದೆ. ಆದರೆ ಕುಮಾರಸ್ವಾಮಿ ಅವರು ನೀಡಿದ ಕಾರಣ ಮಾತ್ರ ಗುಮಾನಿಗೆ ಕಾರಣ ಆಗಿದೆ. ಏಕೆ ಬರಲಿಲ್ಲ, ಕುಮಾರಣ್ಣ ಏಕೆ ಬರಲಿಲ್ಲ ಇದೇ ಮುಖ್ಯ ಪ್ರಶ್ನೆಯಾಗಿದೆ.

ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಸೀಮಿತವಾಗಿತ್ತಾ?

ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಸೀಮಿತವಾಗಿತ್ತಾ?

ಈಗ ನಡೆದಿರುವ ಪ್ರತಿಭಟನೆ ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿತ್ತಾ? ಒಂದು ಕಡೆ ತಮ್ಮ ಪಕ್ಷದ ನಾಯಕನನ್ನು ಬಂಧಿಸಿದ್ದಾರೆ, ಇದರಲ್ಲಿ ಕೇಂದ್ರ ಸರಕಾರದ ದುರುದ್ದೇಶ ಇದೆ ಅಂದರೆ ಪಕ್ಷದ ಕಾರ್ಯಕರ್ತರು ಮಾತ್ರ ಸೇರುತ್ತಾರೆ. ಅದೇ ಒಂದು ಸಮುದಾಯದ ವಿರುದ್ಧದ ದ್ವೇಷ ಸಾಧನೆ ಎಂದು ಬಿಂಬಿತವಾದರೆ ಆ ಸಮುದಾಯದವರು ನಿಲ್ಲುತ್ತಾರೆ. ಅದೇ ವೇಳೆ ಜೆಡಿಎಸ್ ಜತೆಗೇ ಯಾವತ್ತಿದ್ದರೂ ಒಕ್ಕಲಿಗರು ನಿಲ್ಲುತ್ತಾರೆ ಎಂಬ ನಂಬಿಕೆಯನ್ನು ಬದಲಿಸುವ ಪ್ರಯತ್ನದ ಭಾಗವಾಗಿ ಹೀಗೆ ಮಾಡಲಾಯಿತಾ? ಅದೇ ಕಾರಣಕ್ಕೆ ಪಕ್ಷದ ಹಲವು ಹಿರಿಯ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿರಲಿಲ್ಲ. ಕಾಂಗ್ರೆಸ್ ಗೆ ವೇದಿಕೆಯೂ ಬೇಕು, ಅದೇ ವೇಳೆ ಪಕ್ಷದ ಸಾಂಪ್ರದಾಯಿಕ ವೋಟ್ ಬ್ಯಾಂಕ್ ಗೂ ಹೊಡೆತ ಬೀಳದಂತೆ ಎಚ್ಚರ ವಹಿಸಿದಂತೆ ಇದೆ.

ಒಕ್ಕಲಿಗರ ಮತಗಳ ಕನ್ಸಾಲಿಡೇಟ್ ಮಾಡುವ ಲೆಕ್ಕಾಚಾರ

ಒಕ್ಕಲಿಗರ ಮತಗಳ ಕನ್ಸಾಲಿಡೇಟ್ ಮಾಡುವ ಲೆಕ್ಕಾಚಾರ

ಉಪಚುನಾವಣೆಗಳು ನಡೆಯಬೇಕಿದೆ ಹಾಗೂ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗಬಹುದು. ಇಂಥ ಸನ್ನಿವೇಶದಲ್ಲಿ ಒಕ್ಕಲಿಗ ಮತಗಳನ್ನು ಕನ್ಸಾಲಿಡೇಟ್ ಮಾಡುವ ಅನಿವಾರ್ಯ ಇದೆ. ಏಕೆಂದರೆ ಲಿಂಗಾಯತ ಸಮುದಾಯದ ಮತಗಳು ಸಾಲಿಡ್ ಆಗಿ ಬಿಜೆಪಿ ಜತೆಗಿವೆ. ಈಗ ಸರಕಾರ ರಚನೆ ಆದ ಮೇಲೆ ಡಿಸಿಎಂಗಳ ನೇಮಕದಲ್ಲಿ ಅನುಸರಿಸಿರುವ ಸಮೀಕರಣ ಇತರೆ ಮಾನದಂಡಗಳನ್ನು ನೋಡಿದರೆ ಒಂದು ಕಡೆ ಜೆಡಿಎಸ್ ನ ತುಳಿದು ಹಾಕಿ, ಕಾಂಗ್ರೆಸ್ ಗೆ ಆಕ್ರಮಣಕಾರಿ ಧೋರಣೆಯ ನಾಯಕರೇ ಇಲ್ಲದಂತೆ ಮಾಡಿದರೆ ಮುಂದಿನ ಚುನಾವಣೆಗಳು ಬಿಜೆಪಿ ಪಾಲಿಗೆ ಕೇಕ್ ವಾಕ್. ಈ ಎಲ್ಲವನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡು, ಎಲ್ಲೆಲ್ಲಿ ಬಿಜೆಪಿ ಮತ ಬುಟ್ಟಿಯಿಂದ ಒಕ್ಕಲಿಗರ ಮತಗಳನ್ನು ಕೀಳಲು ಸಾಧ್ಯವೋ ಅದು ಆಗಲಿ ಅಂತಲೇ ಇದೊಂದು ಪ್ರತಿಭಟನೆ ನಡೆಸಲಾಯಿತಾ? ಪ್ರಶ್ನೆಗಳಂತೂ ಇವೆ. ಉತ್ತರ ಹುಡುಕಬೇಕಿದೆ.

English summary
Vokkalliga community recentlt staged protest against DK Shivakumar arrest by ED. This raised 4 questions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X