ಚುನಾವಣೆ ಸೋತರೂ ಡಿಸಿಎಂ ಆದ ಕೇಶವ್ ಪ್ರಸಾದ್ ಮೌರ್ಯ!
ಲಕ್ನೋ, ಮಾರ್ಚ್ 25; ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ಪ್ರಮಾಣ ವಚನ ಸ್ವೀಕಾರ ಮಾಡಿದರು. ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಉಪ ಮುಖ್ಯಮಂತ್ರಿಯಾಗಿದ್ದಾರೆ.
2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡರೂ ಕೇಶವ್ ಪ್ರಸಾದ್ ಮೌರ್ಯ ಉಪಮುಖ್ಯಮಂತ್ರಿಯಾಗಿದ್ದಾರೆ. ಬಿಜೆಪಿ ಸರ್ಕಾರದ ಒಬಿಸಿ ಸಮುದಾಯದ ಪ್ರಬಲ ನಾಯಕನ ಮೇಲೆ ನಂಬಿಕೆ ಇಟ್ಟು ಪಕ್ಷ ಉಪಮುಖ್ಯಮಂತ್ರಿ ಹುದ್ದೆ ನೀಡಿದೆ.
ಯೋಗಿ ಸಂಪುಟ; ಡಿಸಿಎಂ ಬ್ರಜೇಶ್ ಪಾಠಕ್ ಪರಿಚಯ
ಕೇಶವ್ ಪ್ರಸಾದ್ ಮೌರ್ಯ ನೇಮಕದ ಹಿಂದೆ ಬಿಜೆಪಿಯ ತಂತ್ರವೂ ಅಡಗಿದೆ. ಒಬಿಸಿ ನಾಯಕರಾದ ಸ್ವಾಮಿ ಪ್ರಸಾದ್ ಮೌರ್ಯ, ದಾರಾ ಸಿಂಗ್ ಕೆಲವು ದಿನಗಳ ಹಿಂದೆ ಬಿಜೆಪಿ ವಿರುದ್ಧ ಬಂಡಾಯವೆದ್ದಿದ್ದರು. 2024ರ ಚುನಾವಣೆ ಲೆಕ್ಕಾಚಾರದಲ್ಲಿ ಒಬಿಸಿ ನಾಯಕರ ಬೆಂಬಲ ಕಳೆದುಕೊಳ್ಳದಿರಲು ಬಿಜೆಪಿ ಬಯಸಿದೆ.
ಯೋಗಿ ಆದಿತ್ಯನಾಥ್ 2.0 ಸಂಪುಟ ಸೇರಿದ ಸಚಿವರ ಪಟ್ಟಿ
1980ರಿಂದಲೇ ಕೇಶವ್ ಪ್ರಸಾದ್ ಮೌರ್ಯ ಆರ್‌ಎಸ್‌ಎಸ್, ವಿಶ್ವಹಿಂದೂ ಪರಿಷತ್ ಜೊತೆ ಗುರುತಿಸಿಕೊಂಡಿದ್ದಾರೆ. ನಗರ ಕಾರ್ಯವಾಹ, ವಿಎಚ್‌ಪಿಯ ಪ್ರಾಂತ ಸಂಘಟನಾ ಮಂತ್ರಿ ಮುಂತಾದ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಯುಪಿ: ಯೋಗಿ ಆದಿತ್ಯನಾಥ್ ಯಾರು? ಸನ್ಯಾಸಿ-ರಾಜಕಾರಣಿಯ ಪ್ರಯಾಣ
ಕೇಶವ್ ಪ್ರಸಾದ್ ಮೌರ್ಯ ಗೌರಕ್ಷಾ ಚಳುವಳಿಗಳಲ್ಲಿ ಸಕ್ರಿಯರಾಗಿದ್ದರು. ರಾಮಜನ್ಮಭೂಮಿ ಆಂದೋಲನದಲ್ಲೂ ಭಾಗವಹಿಸಿದ್ದರು. ಬಿಜೆಪಿ ಪಕ್ಷದಲ್ಲಿ ಕಾಶಿಯ ಹಿಂದುಳಿದ ವರ್ಗಗಳ ವಿಭಾಗ ಮತ್ತು ಬಿಜೆಪಿ ಕಿಸಾನ್ ಮೋರ್ಚಾದ ಸಂಯೋಜಕರಾಗಿದ್ದರು.
ಸೀರತ್ತು ವಿಧಾನಸಭಾ ಕ್ಷೇತ್ರದಿಂದ 2002, 2007 ಮತ್ತು 2012ರ ಚುನಾವಣೆಗೆ ಸ್ಪರ್ಧಿಸಿದರು. ಫುಲ್ಪುರ್ ಕ್ಷೇತ್ರದಿಂದ 2014ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸುಮಾರು 5 ಲಕ್ಷ ಮತಗಳಿಂದ ಆಯ್ಕೆಯಾದದರು.
2016ರಲ್ಲಿ ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷರಾದರು. 2017ರಲ್ಲಿ ಅವರ ನೇತೃತ್ವದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿತು.
ಚುನಾವಣೆಯಲ್ಲಿ ಬಿಜೆಪಿ ಗೆದ್ದ ಬಳಿಕ ಕೇಶವ್ ಪ್ರಸಾದ್ ಮೌರ್ಯ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ 2017ರ ಮಾರ್ಚ್ 18 ರಂದು ಅವರನ್ನು ಉಪಮುಖ್ಯಮಂತ್ರಿ ಮಾಡಲಾಯಿತು.
2012ರ ಚುನಾವಣೆಯಲ್ಲಿ ಸೀರತ್ತು ಕ್ಷೇತ್ರದಲ್ಲಿ ಕೇಶವ್ ಪ್ರಸಾದ್ ಮೌರ್ಯ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಉತ್ತರ ಪ್ರದೇಶ ರಾಜ್ಯದ ಇತಿಹಾಸದಲ್ಲಿ ಸೀರತ್ತು ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದ ಶಾಸಕರು ಕೇಶವ್ ಪ್ರಸಾದ್ ಮೌರ್ಯ.
ಮೇ 7, 1969ರಲ್ಲಿ ಜನಿಸಿದ ಕೇಶವ್ ಪ್ರಸಾದ್ ಮೌರ್ಯ ತಂದೆ ರೈತರು ಮತ್ತು ಗ್ರಾಮದಲ್ಲಿ ಟೀ ಅಂಗಡಿ ನಡೆಸುತ್ತಿದ್ದರು. 1985ರಲ್ಲಿ ರಾಜ್‌ಕುಮಾರ್ ದೇವಿಯನ್ನು ವಿವಾಹವಾದರು.