ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲ್ಯದ ನೆನಪು : ಹಿಂಗಿದ್ರು ನೋಡ್ರಿ ಧಾರವಾಡದಾಗ ನಮ್ಮ ನದಾಫ್ ಮಾಸ್ತರು!

By Prasad
|
Google Oneindia Kannada News

ನಾನು ಸಾಲಿ ಕಲಿತಿದ್ದು ಧಾರವಾಡದಾಗ, ಅದೂ ಕನ್ನಡ ಮೀಡಿಯಂದಾಗ. ಅದ್ಯಾಕೋ ಏನೋ ಇಂಗ್ಲಿಷ್ ಮೀಡಿಯಂ ಅಂದ್ರ ತಾತ್ಸಾರ ಇತ್ತೋ ಅಥವಾ ಭಾಳ ಫೀಸ್ ತಗೋತಾರ ಅಂತ ಕಳಸತಿದ್ದಿದ್ದಿಲ್ಲೋ ಅಥವಾ ತಮ್ಮ ಮಕ್ಕಳಿಗೆ ಇಂಗ್ಲಿಷ್ ಅಷ್ಟಾಗಿ ತಲೆವೊಳಗ ಹೋಗಂಗಿಲ್ಲ ಅಂತನೋ ಅಂತೂ ಕನ್ನಡ ಮೀಡಿಯಂ ಮೇಲೆ ಪೋಷಕರಿಗೆ ಬಲು ಪ್ರೀತಿ.

ಮದ್ಲಿಗೆ ಪ್ರೆಸೆಂಟೇಷನ್ ಕಾನ್ವೆಂಟ್ ಸ್ಕೂಲ್ ಅಂತ ಸಾಲಿಗೆ ಹಾಕಿದ್ರು. ಒನ್ನೆತ್ತಾ, ಎರಡನೆತ್ತಾ ಕಲಿತ ಮ್ಯಾಲ ಮೂರನೆತ್ತಾದಿಂದ ಇಂಗ್ಲಿಷ್ ಮೀಡಿಯಂ ಅದ ಅಂತ ಬಿಡಿಸಿ ಕನ್ನಡ ಸಾಲಿಗೆ ನಮ್ಮನ್ನ ಅಟ್ಟಿದರು. ನಮಗೂ ಅದ ಬೇಕಾಗಿತ್ತು. ಸಾಲಿ ಅಂದ್ರ ಆಗಿನ ಕಾಲಕ್ಕ ಹೋಗಿ ಮಜಾ ಮಾಡೋದು. ಆ ಸಾಲಿನೂ ಹಂಗ ಇತ್ತು ಅನ್ನೋದು ಬ್ಯಾರೆ ವಿಷಯ. ಟೈ ಇಲ್ಲ, ಬೂಟಿಲ್ಲ, ಬೆಲ್ಟೂ ಇಲ್ಲ, ಬಿಳಿ ಅಂಗಿ, ಖಾಕಿ ಚಡ್ಡಿ, ಕಾಲಾಗ ಚಪ್ಲಿ ಇದ್ರ ಇತ್ತು ಇಲ್ಲಂದ್ರ ಇಲ್ಲ.

ಚೇಳಿನ ಬಾಲಕ್ಕೆ ದಾರ ಕಟ್ಟುವವರ್ಯಾರು? ಬಾಲ್ಯದ ಆಟ ಆ ಹುಡುಗಾಟ..!ಚೇಳಿನ ಬಾಲಕ್ಕೆ ದಾರ ಕಟ್ಟುವವರ್ಯಾರು? ಬಾಲ್ಯದ ಆಟ ಆ ಹುಡುಗಾಟ..!

ಪಾಠ ಕಲಿಯೋದಕ್ಕಿಂತ ಆಟದ ಮ್ಯಾಲ ನಮಗೆ ಹೆಚ್ಚು ಆಸಕ್ತಿ ಇರತಿತ್ತು. ಕಿಶೆದಾಗ ಯಾವಾಗ ನೋಡಿದ್ರೂ ಗುಂಡಾ ತುಂಬಿರತಿದ್ವು, ಪಾಟೀಚೀಲದಾಗ ಗಿಲ್ಲಿ ದಂಡಾ ಇರತಿತ್ತು, ಮಳಿ ಬಂದ್ರ ಕಬ್ಬಿಣ ಸಲಾಕಿಯಿಂದ ಗಿಚ್ಚಿ ಆಡೋದು, ಬಗರಿ ಸೈತ ಪಾಟೀಚೀಲದಾಗ ಬೆಚ್ಚಗ ಕೂತಿರತಿತ್ತು. ಇನ್ನ ಮನಿಗೆ ಹ್ವಾದಮ್ಯಾಲ ಗಿಡಮಂಗ್ಯಾ, ಸರಬಡಗಿ, ಗುಂಡಾ ಗಿರಗಾಳ, ಹುಂಚಿಪಕ್ಕದ ಚುಮಕಿ, ಇಲ್ಲಾ ಕಟಗಿ ತಗೊಂಡು ಸೈಕಲ್ ರಿಮ್ ಓಡಿಸಿಕೊಂಡು ಊರು ಸುತ್ತೋದು.

Unforgettable memories of childhood : My beloved teacher Nadaf

ಐಸ್ ಪೈಸ್ ಆಡಲಿಕ್ಕೆ ಹೋಗಿ ಹೊಸದಾಗಿ ಕಟ್ಟಲಿಕತ್ತಿದ್ದ ಮನಿ ಗ್ವಾಡಿನ ಬೀಳಿಸಿದ್ವಿ ಅಂದ್ರ ಎಂಥಾ ಮಂಗ್ಯಾನಂಗ ಇದ್ವಿ ನೀವ ವಿಚಾರ ಮಾಡ್ರಿ. ಆದ್ರ ಏನ ಹೇಳ್ರಿ ನಮ್ಮಂಥಾ ಬಾಲ್ಯ ಈಗಿನ ಮಕ್ಕಳಿಗೆ ಕನಸಿನ ಮಾತು. ಈಗಿನ ಹುಡುಗರಂಗ ಛೊಲೋ ಓದಲಿಕ್ಕೆ ಆಗಲಿಲ್ಲ ಅನ್ನೋದು ಬ್ಯಾರೆ ಮಾತು. ಮನ್ಯಾಗನೂ ಕೂತ ಓದರಿ ಅಂತ ಹೇಳತಿದ್ದಿದ್ದಿಲ್ಲಾ, ನಾವೂ ಓದತಿದ್ದಿದ್ದಿಲ್ಲಾ.

ಇಂಥಾವ್ರಿಗೆ ಮೂರನೆತ್ತಾ ಇದ್ದಾಗ ಸಿಕ್ಕಿದ್ದು ಒಬ್ಬ ಮಾಸ್ತರ್ರು. ಯಾವತ್ತೂ ಅಚ್ಚ ಬಿಳಿ ಇರದಿದ್ದ ಜುಬ್ಬಾ ಪೇಜಾಮಾ, ತಲೆ ಮ್ಯಾಲೊಂದು ಗಾಂಧಿ ಟೋಪಿ, ಬಾಯಾಗ ಸದಾ ಎಲಿ ಅಡಕಿ ತಂಬಾಕು. ಹೆಣ್ಮಕ್ಕಳು ಹಣಿ ಮ್ಯಾಲ ಕುಂಕುಮ ಇಟ್ಟುಕೊಳ್ತಾರಲ್ಲ ಕರೆಕ್ಟ್ ಅದ ಜಾಗಕ್ಕ ಅವರಿಗೆ ಒಂದು ಪರ್ಮನಂಟ್ ಗುಳ್ಳಿ ಇತ್ತು. ಅವರ ಮುಖಾ ಇನ್ನೂ ಕಣ್ಣಾಗ ಹಂಗ ಅದ. ಇನ್ನೂ ಮುಂದಿಂದು ಇನ್ನೂ ಮಜಾ ಅದ. ಹಂಗ ಓದಿಕೋತ ಹೋಗ್ರಿ.

Unforgettable memories of childhood : My beloved teacher Nadaf

ಇವ್ರು ಅದ್ಹೆಂಗ ಮಾಸ್ತರ್ ಆದ್ರೋ ಗೊತ್ತಿಲ್ಲ. ಆದ್ರ ಬರೊಬ್ಬರಿ ಕ್ಲಾಸಿಗೇ ಬರತಿದ್ದಿದ್ದಿಲ್ಲ, ಬಂದ್ರ ಬಂದ್ರು ಬಿಟ್ರ ಬಿಟ್ರು. ಬಿಟ್ರಂತೂ ನಮಗ ಮಸ್ತ ಮಜಾನ ಮಜಾ. ಒಂದ್ ಸತಿ ಹಿಂಗ ಅವರೇನು ಕ್ಲಾಸಿಗೆ ಬರಂಗಿಲ್ಲ ಅಂತ ಅರ್ಧಕ್ಕ ಚಕ್ಕರ್ ಹಾಕಿ ಮನಿಗೆ ಹೋಗಿದ್ವಿ. ಕರೆಕ್ಟಾಗಿ ಸಂಜೀಮುಂದ ಪ್ಯಾಟಿದಾಗ ನಮ್ಮಪ್ಪನ ಮುಂದನ ಸಿಗಬೇಕ? 'ಇವ್ರ್ಯಾಕ ಸಾಲಿಗೆ ಬಂದಿಲ್ಲ' ಅಂತ ಕೇಳಿ ಅಪ್ಪನ ತಬ್ಬಿಬ್ಬು ಮಾಡಿದ್ರು. ಅನ್ನಂಗ ನಮ್ಮ ಮಾಸ್ತರ್ ಹೆಸರು ಹೇಳೋದ ಮರತಬಿಟ್ಟೆ. ಅವರು ನದಾಫ್ ಮಾಸ್ತರ್!

ಮಲೆನಾಡಲ್ಲಿ ಜೋರು ಮಳೆಯಂತೆ... ನೆನಪಿನ ದೋಣಿ ತುಂಬ ಸಂಭ್ರಮದ ಸಂತೆ! ಮಲೆನಾಡಲ್ಲಿ ಜೋರು ಮಳೆಯಂತೆ... ನೆನಪಿನ ದೋಣಿ ತುಂಬ ಸಂಭ್ರಮದ ಸಂತೆ!

ಒಂದೇ ವೇಳೆ ಅವರು ಸಾಲಿಗೆ ಬಂದಿದ್ರ, ಆದರ ಕ್ಲಾಸಿಗೆ ಬರದಿದ್ದರ ಅವರು ಎಲ್ಲಿರತಾರ ಅಂತ ಎಲ್ಲಿರಿಗೂ ಗೊತ್ತಿತ್ತು. ಯಾರರ ಬಂದು ಮಾಸ್ತರ್ ಎಲ್ಲಿದ್ದಾರ್ಲೇ ಅಂತ ಯಾರ ಕೇಳಿದರ ಬವ್ ಅಂತ ಒಂದ್ ಅರ್ಧ ಕಿಮೀ ದೂರದಲ್ಲಿದ್ದ ಸೊಸೈಟಿಗೆ ಓಡಿ ಹೋಗತಿದ್ವಿ. ಅಲ್ಲಿ ಅವರು ಬಿಶಿಬಿಶಿ ಉಪ್ಪಿಟ್ಟು ಅರ್ಧ ಚಾ ಕುಡಕೊಂಡು ಕೂತಿರತಿದ್ರು. ಸರ ಸಾಲಿಗೆ ಬರಬೇಕಂತ್ರಿ ಅಂದ್ರ ಅವರ ಬಾಯಿಂದ ಬರತಿದ್ದ ಮಾತು ಕಿವಿ ಮುಚಗೊಂಡು ಕೇಳ್ರಿ...

Unforgettable memories of childhood : My beloved teacher Nadaf

"ಯಾಕಲೇ ಮುಕಳ್ಯಾ ಯಾರ ಬಂದಾರ, ಯಾಕಿಂಗ ಓಡಿ ಬಂದಿ, ಬರ್ತೇನ ಹೋಗ..." ಅಂತ 'ಪ್ರೀತಿ'ಯಿಂದ ಹೇಳಿ ಕಳಸತಿದ್ರು. ಆ ಮುಕಳ್ಯಾ ಅನ್ನೋ ಪದ ಅದೆಷ್ಟು ಸತಿ ಬಳಸತಿದ್ರೋ, ಎಣಿಸಿದ್ರ ದಿನಕ್ಕ ಶಂಬರ್ ದಾಟತಿದ್ವು. ಏನ ಇರ್ಲಿ ಅವರು ನಮಗ ಪಾಠ ಮಾಡೋ ಮಾಸ್ತರು, ಅನಿಸಿಕೊಂಡು ಕೂಡತಿದ್ವಿ.

ಮಾಸ್ತರ್ ಹಿಂಗಿದ್ರೂ ಮೂರನೆತ್ತಾದಾಗನ ಮೂವತ್ತರ ಮಟಾ ಮಗ್ಗಿ ಬರತಿದ್ವು ಅಂದ್ರ ನಿಮಗ ಅಚ್ಚರಿ ಆಗಬಹುದು. ಅದಕ್ಕ ಕಾರಣ ಕೇಳಿದ್ರ ನಿಮಗ ಇನ್ನೂ ಅಚ್ಚರಿ ಆಗತೈತಿ. ನದಾಫ್ ಮಾಸ್ತರ್ ಇಲ್ಲದಾಗ ಕಿಟಕಿಯಿಂದ ಎರಡ ಮೀಟರ್ ಉದ್ದದ ಮುಳ್ಳುಗಳಿರೋ ಬಡಗಿ ಬರತಿತ್ತು. 'ಹೇಳ್ರಿಲೇ ಮಕ್ಕಳ್ರ್ಯಾ ಮಗ್ಗೀನ' ಅಂತ ಒಂದ ದನಿ ಧಮ್ಕಿ ಹಾಕತಿತ್ತು. ಆ ಮುಳ್ಳಿನ ಕಂಟಿ ಹೊಡೆತಕ್ಕ ಹೆದರಿ ನಾವು ಮಗ್ಗಿ ಕಲೀತಿದ್ವಿ. ಮಗ್ಗಿ ಕಲಿಸಿದ ವ್ಯಕ್ತಿ ಮತ್ತಾರೂ ಅಲ್ಲ, ಸಾಲಿ ಪ್ಯೂನ!

ಈಗ ಬೇಕಾದ್ರೂ ಕೇಳರಿ ಒಂಬೊಂಬೈಲೆ ಎಷ್ಟ್ರಲೇ ಅಂದ್ರ ಎಂಬಾವನ್ ರಿ ಸರ ಅಂತ ಫಟಕ್ಕನ ಹೇಳತೇನ ಬೇಕಾದ್ರ. ಆ ಪ್ಯೂನ ಅಕಾ ಜವಾನ ರಾಮಣ್ಣಗ ಒಂದು ಸಲಾಂ. ಸಾಲಿ ಅಂಥಾ ಸ್ಟಾಂಡರ್ಡ್ ಇಲ್ಲದಿದ್ದರೂ ತಕ್ಕಮಟ್ಟಿಗೆ ಛೊಲೋನ ಇತ್ತು, ನಮ್ಮ ನದಾಫ್ ಮಾಸ್ತರ್ ಕೂಡ ಅಂಥಾ ಕೆಟ್ಟವ್ರೂ ಇರಲಿಲ್ಲ, ಆದ್ರ ಸರಿಯಾಗಿ ಪಾಠ ಮಾಡ್ತಿರಲಿಲ್ಲ. ಇನ್ನ ವರ್ಷಕ್ಕೊಂದೇ ಬರೀತಿದ್ದ ಪರೀಕ್ಷಾಕ್ಕ ನಮ್ಮ ನದಾಫ್ ಮಾಸ್ತರ್ ನ ಉತ್ತರಾ ಬರೀಲಿಕ್ಕೆ ಡೈರಿ ತಗೊಂಡು ಬರಲಿಕ್ಕೆ ಹೇಳತಿದ್ರು ಅಂದ್ರ ಲೆಕ್ಕಾ ಹಾಕ್ರಿ!

Unforgettable memories of childhood : My beloved teacher Nadaf

ಇಂಥಾ ಮಾಸ್ತರ ಇರೋ ಕ್ಲಾಸಿನ್ಯಾಗ ಫಾತಿಮಾ ಅಂತ ಹುಡುಗಿ ಇರತಿದ್ಳು. ಅಕಿನ್ನ ನೋಡಿದ್ರ ಒಂಬತ್ತನೆತ್ತಾ ಇರಬೇಕಿದ್ದಾಕಿ ಮೂರನೆತ್ತಾಕ್ಕ ಬಂದ ಕೂತಾಳ ಅನ್ನಸತಿತ್ತು. ಅಕಿ ನಮ್ಮ ಮಾಸ್ತರ್ ರಿಲೇಟಿವ್ ಅಂತ ಕಾಣತೈತಿ, ಅಕಿ ಮ್ಯಾಲ ಏನ ಪ್ರೀತಿ ಅವ್ರಿಗಂತೂ ಅಬಾಬಾಬಾ. ಅಕಿನ್ನ ಮಾನಿಟರ್ ಮಾಡತಿದ್ರು ನದಾಫ್ ಸಾಹೇಬ್ರು. ಫಾತಿಮಾ ಹುಡುಗೋರ ಜುಟ್ಟಾ ಹಿಡದಳಂದ್ರ ಎಂಥಾವ್ನಿಗೂ ಚಡ್ಯಾಗ ಉಚ್ಚಿ ಬರತಿತ್ತು. ಅಂಥಾ ಹುಡುಗಿ ಆಕಿ. ಅಕಿ ಏ ಅಂತ ಒದರಿದ್ರ ನಾವೆಲ್ಲ ಹೆದರಿ ಗಡಗಡ ನಡಗತಿದ್ವಿ.

ಅಗಳೇನ ಹೇಳಿದಂಗ ಅಕಿನ ಮ್ಯಾಲ ನಮ್ಮ ನದಾಫ್ ಮಾಸ್ತರು ಯಾಕ ಅಷ್ಟ ಪ್ರೀತಿ ತೋರಿಸತಿದ್ರು ಅನ್ನೋ ನಮಗೆ ಆಮ್ಯಾಲಾಮ್ಯಾಲ ಗೊತ್ತಾಗಲಿಕ್ಕೆ ಶುರುವಾತು. ಒಂಬತ್ತನೆತ್ತಾ ಇರಬೇಕಿದ್ದಾಕಿ ಮೂರನೆತ್ತಾ ಕ್ಲಾಸಿನ್ಯಾಗ ಇರತಿದ್ಳು ಅಂದ್ರ ನೀವ ನೋಡ್ರಿ. ನಮ್ ಹುಚ್ಚು ಹುಡುಗರಿಗೆ ಆಗ ಏನೂ ಗೊತ್ತಾಗತಿದ್ದಿದ್ದಿಲ್ಲ. ನಮ್ಮ ನದಾಫ್ ಮಾಸ್ತರು ಅಕಿನ ಜೊತಿ ಮಾಡತಿದ್ದ ಏನೇನೋ ಹರಕತ್ತುಗಳನ್ನು ನೋಡಿಕೊಂಡು ಸುಮ್ಮನ ಕೂಡತಿದ್ವಿ. ಅದರ ಬಗ್ಗೆ ಭಾಳ ವಿವರ ಬೇಕಾಗಿಲ್ಲ ಅಂದಕೋತೇನಿ.

ಒಟ್ಟಿನ್ಯಾಗ ನೋಡ್ರಿ ನಮ್ ಮಾಸ್ತರು ಹಿಂಗಿದ್ರು. ಅವ್ರನ್ನ ಬಿಡ್ರಿ, ಮುಂದ ಧಾರವಾಡದಾಗ ಇನ್ನೂ ಬೇಕಾದಷ್ಟು ಮಾಸ್ತರುಗಳನ್ನ ನೋಡಿದೆ. ಒಬ್ಬರಿಗಿಂತ ಒಬ್ಬರು ಆದರ್ಶಪ್ರಾಯರು. ಈಗಸೈತ ನೆನೆಸಿಕೊಂಡು ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಬೇಕು ಅಂತ ಅನಸತದ. ನೀವು ಸಾಲಿ (ಶಾಲೆ) ಕಲಿಯುಮುಂದ ನಿಮಗ ಎಂಥಾ ಮಾಸ್ತರುಗಳು ಸಿಕ್ಕಿದ್ರು, ನಮಗೂ ಹೇಳ್ರ್ಯಲಾ.

English summary
Unforgettable memories of childhood : My beloved teacher Nadaf. I studied under him in Dharwad. Though he was not the best he has left behind rich memories.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X