ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಗೆ: ಏನಿದು ಬ್ರೆಕ್ಸಿಟ್? Explainer

|
Google Oneindia Kannada News

ಜನವರಿ 31ರ ರಾತ್ರಿ 11 ಗಂಟೆಗೆ ಬ್ರಿಟನ್ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ನಂಟು ಕಳಚಿಕೊಳ್ಳಲಿದೆ. ಶುಕ್ರವಾರ ರಾತ್ರಿ 11 ಗಂಟೆಯ ನಂತರ ಯುರೋಪಿಯನ್ ಒಕ್ಕೂಟದ ಸದಸ್ಯತ್ವದಿಂದ ಬ್ರಿಟನ್ ಅಧಿಕೃತವಾಗಿ ಹೊರಬರಲಿದೆ.

ನಾಲ್ಕು ವರ್ಷಗಳ ಕಸರತ್ತಿನ ಬಳಿಕ ಬುಧವಾರ ಯುರೋಪಿಯನ್ ಸಂಸತ್‌ನಲ್ಲಿ ನಡೆದ ಮತದಾನದಲ್ಲಿ 'ಬ್ರೆಕ್ಸಿಟ್'ಗೆ ಸಂಪೂರ್ಣ ಒಪ್ಪಿಗೆ ದೊರಕಿತು. ಬ್ರೆಕ್ಸಿಟ್ ಪರ 621 ಮತಗಳು ಚಲಾವಣೆಯಾದರೆ, ಬ್ರೆಕ್ಸಿಟ್ ವಿರುದ್ಧ 49 ಮತಗಳು ಚಲಾವಣೆಯಾದವು. ಈ ಮೂಲಕ 47 ವರ್ಷಗಳಿಂದ ಇದುವರೆಗೆ ಯುರೋಪಿಯನ್ ಒಕ್ಕೂಟದೊಂದಿಗೆ ಬ್ರಿಟನ್ ಮಾಡಿಕೊಂಡಿದ್ದ ಎಲ್ಲ ಒಪ್ಪಂದಗಳು ಹಾಗೂ ಸಹಕಾರಗಳು ಮುರಿದುಬೀಳಲಿವೆ. ಒಕ್ಕೂಟದ ಎಲ್ಲ ದೇಶಗಳೊಂದಿಗೆ ಬ್ರಿಟನ್ ಪ್ರತ್ಯೇಕವಾಗಿ ವ್ಯಾಪಾರ, ವಹಿವಾಟಿನ ಒಪ್ಪಂದಗಳನ್ನು ನಡೆಸಲಿದೆ.

ಬ್ರೆಕ್ಸಿಟ್ ಮಸೂದೆ ಅಂಗೀಕಾರ, ಬೊರಿಸ್ ಗೆ ಐತಿಹಾಸಿಕ ಗೆಲುವು ಬ್ರೆಕ್ಸಿಟ್ ಮಸೂದೆ ಅಂಗೀಕಾರ, ಬೊರಿಸ್ ಗೆ ಐತಿಹಾಸಿಕ ಗೆಲುವು

ಬ್ರಿಟನ್ ನಿರ್ಗಮನದ ಬಳಿಕವೂ ಈ ವರ್ಷದ ಅಂತ್ಯದವರೆಗೂ ಇಂಗ್ಲೆಂಡ್, ಯುರೋಪಿಯನ್ ಒಕ್ಕೂಟದ ಆರ್ಥಿಕ ವ್ಯವಸ್ಥೆಯೊಳಗೆ ಇರಲಿದೆ. 11 ತಿಂಗಳ ಒಳಗೆ ವ್ಯಾಪಾರ ಒಪ್ಪಂದಗಳನ್ನು ಸಂಪೂರ್ಣವಾಗಿ ತುಂಡರಿಸಲಿದ್ದು, ಹೊಸ ಸಹಕಾರ ಒಪ್ಪಂದಗಳ ಕುರಿತು ಈಗಾಗಲೇ ಕೆಲವು ದೇಶಗಳೊಂದಿಗೆ ಮಾತುಕತೆ ನಡೆದಿದೆ.

ಏನಿದು ಯುರೋಪಿಯನ್ ಒಕ್ಕೂಟ?

ಏನಿದು ಯುರೋಪಿಯನ್ ಒಕ್ಕೂಟ?

28 ಐರೋಪ್ಯ ದೇಶಗಳ ಆರ್ಥಿಕ ಮತ್ತು ರಾಜಕೀಯ ಒಕ್ಕೂಟವೇ ಯುರೋಪಿಯನ್ ಒಕ್ಕೂಟ. ಇದು ಸದಸ್ಯ ದೇಶಗಳ ನಡುವೆ ಉಚಿತ ವ್ಯಾಪಾರಕ್ಕೆ ಅನುವು ಮಾಡಿಕೊಡುತ್ತದೆ. ಅಂದರೆ, ಸದಸ್ಯ ದೇಶಗಳ ನಡುವೆ ರವಾನೆಯಾಗುವ ಸರಕುಗಳ ಮೇಲೆ ಯಾವುದೇ ತಪಾಸಣೆ ಅಥವಾ ಹೆಚ್ಚುವರಿ ಶುಲ್ಕ ಇರುವುದಿಲ್ಲ. ಹಾಗೆಯೇ ಈ ದೇಶಗಳ ಜನರು ತಮಗೆ ಬೇಕಾದ ದೇಶಕ್ಕೆ ಮುಕ್ತವಾಗಿ ತೆರಳಿ ಅಲ್ಲಿ ವಾಸಿಸುವ ಮತ್ತು ಉದ್ಯೋಗ ಮಾಡುವ ಅವಕಾಶವನ್ನು ನೀಡುತ್ತದೆ.

ಯುರೋಪಿಯನ್ ಆರ್ಥಿಕ ಸಮುದಾಯ ಎಂಬ ಹೆಸರು ಹೊಂದಿದ್ದ ದೇಶಗಳ ಒಕ್ಕೂಟಕ್ಕೆ ಬ್ರಿಟನ್ 1973ರಲ್ಲಿ ಸೇರ್ಪಡೆಯಾಗಿತ್ತು. ಹಾಗೆಯೇ ಈ ಒಕ್ಕೂಟದಿಂದ ಹೊರಬರುತ್ತಿರುವ ಮೊದಲ ದೇಶ ಇದಾಗಿದೆ.

ಏನಿದು ಬ್ರೆಕ್ಸಿಟ್?

ಏನಿದು ಬ್ರೆಕ್ಸಿಟ್?

ಐರೋಪ್ಯ ಒಕ್ಕೂಟದ ಭಾಗವಾಗಿದ್ದರೂ ಬ್ರಿಟನ್ ಹಿಂದಿನಿಂದಲೂ ಒಂದು ಅಂತರ ಕಾಯ್ದುಕೊಂಡಿತ್ತು. ಅದರ ನಿಯಮಗಳಿಗೆ ಮೊದಲಿನಿಂದಲೂ ಬ್ರಿಟನ್ ರಾಜಕೀಯ ನಾಯಕರಲ್ಲಿ ಪ್ರತಿರೋಧವಿತ್ತು. 2008ರಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾದಾಗ ಅದು ತೀವ್ರಗೊಂಡಿತ್ತು. ಯುರೋಪಿಯನ್ ದೇಶಗಳು ಹಾಗೂ ಮಧ್ಯಪ್ರಾಚ್ಯದ ವಲಸಿಗರು ಬರುವುದು ಹೆಚ್ಚಾಯಿತು. ಇದರಿಂದ ಒಕ್ಕೂಟದಿಂದ ಬ್ರಿಟನ್ ಹೊರಬರಬೇಕೆಂಬ ಒತ್ತಡ ತೀವ್ರವಾಯಿತು.

2016ರಲ್ಲಿ ಆಗಿನ ಪ್ರಧಾನಿ ಡೇವಿಡ್ ಕ್ಯಾಮರಾನ್ ಸಾರ್ವಜನಿಕ ಜನಾಭಿಪ್ರಾಯ ಸಂಗ್ರಹಣೆಗೆ ಮುಂದಾದರು. ಆಗ ಶೇ 52ರಷ್ಟು ಮಂದಿ ಒಕ್ಕೂಟದ ಹೊರಬರುವುದು ಸೂಕ್ತ ಎಂದರೆ, ಶೇ 48ರಷ್ಟು ಮಂದಿ ಒಕ್ಕೂಟದಲ್ಲಿ ಇರಬೇಕು ಎಂದು ಅಭಿಪ್ರಾಯಪಟ್ಟರು. ಇದನ್ನೇ ಬ್ರೆಕ್ಸಿಟ್ -ಬ್ರಿಟನ್‌ನ ಎಕ್ಸಿಟ್ ಎಂದು ಕರೆಯಲಾಗಿದೆ.

ಬ್ರೆಕ್ಸಿಟ್ ಗೆ ಜ. 31ರ ತನಕ ಕಾಲಾವಕಾಶ ನೀಡಿದ ಯುರೋಪಿಯನ್ ಒಕ್ಕೂಟಬ್ರೆಕ್ಸಿಟ್ ಗೆ ಜ. 31ರ ತನಕ ಕಾಲಾವಕಾಶ ನೀಡಿದ ಯುರೋಪಿಯನ್ ಒಕ್ಕೂಟ

ಬ್ರೆಕ್ಸಿಟ್ ದಿನದ ಬಳಿಕ ಮುಂದೇನು?

ಬ್ರೆಕ್ಸಿಟ್ ದಿನದ ಬಳಿಕ ಮುಂದೇನು?

2020ರ ಜ 31ರ ರಾತ್ರಿ ಅಧಿಕೃತವಾಗಿ ಯುರೋಪಿಯನ್ ಒಕ್ಕೂಟದಿಂದ ಯು.ಕೆ. ಹೊರಹೋಗಲಿದೆ. ಆದರೂ ಅದರ ಕುರಿತಾತ ಮಾತುಕತೆ ಮತ್ತು ಹಲವು ತಿಂಗಳ ವ್ಯವಹಾರಗಳು ಬಾಕಿ ಉಳಿಯಲಿವೆ. ತನ್ನ ನಿರ್ಗಮನದ ಕುರಿತಾದ ನಿಯಮಗಳಿಗೆ ಬ್ರಿಟನ್ ಒಪ್ಪಿಕೊಂಡಿದ್ದರೂ, ಮುಂದಿನ ಸಂಬಂಧದ ಕುರಿತು ಎರಡೂ ಕಡೆ ಇನ್ನಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ.

ಬ್ರೆಕ್ಟಿಟ್ ಡೇನಿಂದ (ಯುರೋಪಿಯನ್ ಒಕ್ಕೂಟದಿಂದ ಹೊರಹೋಗುವ ದಿನದ ತಕ್ಷಣದಿಂದ) 2020ರ ಡಿ. 31ರವರೆಗೆ ಪರಿವರ್ತನೆಯ ಅವಧಿ ಇರಲಿದೆ. ಈ 11 ತಿಂಗಳಿನಲ್ಲಿ ಯುರೋಪಿಯನ್ ಒಕ್ಕೂಟದ ನಿಯಮಗಳನ್ನು ಬ್ರಿಟನ್ ಪಾಲಿಸಲಿದೆ. ಅದರ ವ್ಯಾಪಾರ ಸಂಬಂಧಗಳು ಕೂಡ ಹಾಗೆಯೇ ಇರಲಿದೆ.

ಏನೇನು ಒಪ್ಪಂದಗಳು ನಡೆಯಬೇಕಿವೆ?

ಏನೇನು ಒಪ್ಪಂದಗಳು ನಡೆಯಬೇಕಿವೆ?

ಪರಿವರ್ತನೆಯ ಅವಧಿ ಎಂದರೆ ಒಕ್ಕೂಟ ಮತ್ತು ಬ್ರಿಟನ್ ಎರಡಕ್ಕೂ ವ್ಯವಸ್ಥೆಯಿಂದ ಹೊರಬಂದಾಗಿನ ಗೊಂದಲ, ಒತ್ತಡಗಳಿಂದ ಸುಧಾರಿಸಿಕೊಳ್ಳಲು ಸಿಗುವ ಸಮಯ. ಈ ಅವಧಿಯಲ್ಲಿ ಹೊಸ ವ್ಯಾಪಾರ ಒಪ್ಪಂದಗಳು ಸಿದ್ಧಗೊಳ್ಳಲಿವೆ. ಪರಿವರ್ತನೆ ಅವಧಿ ಅಂತ್ಯಗೊಂಡ ಬಳಿಕ ಏಕರೂಪದ ಮಾರುಕಟ್ಟೆಯಿಂದ ಬ್ರಿಟನ್ ಹೊರಗುಳಿಯಲಿದೆ. ಹಾಗಾಗಿ ಬ್ರಿಟನ್‌ನಿಂದ ಒಕ್ಕೂಟದ ದೇಶಗಳಿಗೆ ಹೋಗುವ ಮತ್ತು ಒಕ್ಕೂಟದ ದೇಶಗಳಿಂದ ಬ್ರಿಟನ್‌ಗೆ ಬರುವ ಸರಕುಗಳ ಮೇಲೆ ತೆರಿಗೆ ಬೀಳಲಿದೆ.

ಇವುಗಳ ಜತೆಗೆ ಕಾನೂನು ಜಾರಿ, ದತ್ತಾಂಶ ಹಂಚಿಕೆ ಮತ್ತು ಭದ್ರತೆ, ವಿಮಾನಯಾನ ಗುಣಮಟ್ಟ ಮತ್ತು ಸುರಕ್ಷತೆ, ಮೀನುಗಾರಿಕೆ ಪ್ರದೇಶಕ್ಕೆ ಪ್ರವೇಶ, ವಿದ್ಯುತ್ ಮತ್ತು ಅನಿಲ ಪೂರೈಕೆ ಹಾಗೂ ಔಷಧಗಳ ಪರವಾನಗಿ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಒಪ್ಪಂದಗಳು ಹೊಸ ರೂಪ ತಾಳಲಿವೆ.

ಈ ಪರಿವರ್ತನೆಯ ಅವಧಿಯನ್ನು ವಿಸ್ತರಿಸುವುದಿಲ್ಲ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಪಟ್ಟು ಹಿಡಿದಿದ್ದಾರೆ. ಆದರೆ ಈಗಿರುವ ಸೀಮಿತ ಅವಧಿಯ ವೇಳಾಪಟ್ಟಿ ತೀರಾ ಸವಾಲಿನದ್ದು ಎಂದು ಯುರೋಪಿಯನ್ ಆಯೋಗ ಎಚ್ಚರಿಕೆ ನೀಡಿದೆ.

ಫಲ ನೀಡಿದ ಬ್ರೆಕ್ಸಿಟ್ ವಚನ, ಬೋರಿಸ್ ಜಾನ್ಸನ್‌ಗೆ ಐತಿಹಾಸಿಕ ಬಹುಮತಫಲ ನೀಡಿದ ಬ್ರೆಕ್ಸಿಟ್ ವಚನ, ಬೋರಿಸ್ ಜಾನ್ಸನ್‌ಗೆ ಐತಿಹಾಸಿಕ ಬಹುಮತ

ಬ್ರೆಕ್ಸಿಟ್ ಡೀಲ್ ಎಂದರೇನು?

ಬ್ರೆಕ್ಸಿಟ್ ಡೀಲ್ ಎಂದರೇನು?

ಬ್ರಿಟನ್ ನಿರ್ಗಮನದ ಪರಿವರ್ತನೆಯ ಅವಧಿ ಮತ್ತು ಇತರೆ ಅಂಶಗಳಲ್ಲಿ ಹಿಂಪಡೆಯುವ ಒಪ್ಪಂದಗಳೆಂಬ ಪ್ರತ್ಯೇಕ ಒಪ್ಪಂದಗಳು ನಡೆಯಲಿವೆ. ಇವುಗಳಲ್ಲಿ ಹೆಚ್ಚಿನ ವ್ಯವಹಾರಗಳು ಥೆರೆಸಾ ಮೇ ಸರ್ಕಾರದಲ್ಲಿಯೇ ನಡೆದಿವೆ. ಆದರೆ 2019ರ ಜುಲೈನಲ್ಲಿ ಅವರ ಸ್ಥಾನಕ್ಕೆ ಬಂದ ಬೋರಿಸ್ ಜಾನ್ಸನ್, ವಿವಾದಾತ್ಮಕ ನಿರ್ಧಾರವನ್ನು ತೆಗೆದುಹಾಕಿದ್ದರು. ಬ್ರೆಕ್ಸಿಟ್ ಬಳಿಕ ಐರ್ಲೆಂಡ್ ಗಣರಾಜ್ಯ ಮತ್ತು ಉತ್ತರ ಐರ್ಲೆಂಡ್ ನಡುವೆ ಯಾವುದೇ ಗಡಿ ತಪಾಸಣಾ ನೆಲೆ ಅಥವಾ ಬೇಲಿ ಇರುವುದಿಲ್ಲ. ಈ ಮೂಲಕ ಬ್ರಿಟನ್, ಒಕ್ಕೂಟದೊಂದಿಗೆ ಸಮೀಪದ ವ್ಯಾಪಾರ ಸಂಬಂಧ ಹೊಂದಬಹುದು ಎಂದು ನಿರ್ಧರಿಸಲಾಗಿತ್ತು. ಇದನ್ನು ಜಾನ್ಸನ್ ರದ್ದುಗೊಳಿಸಿದ್ದಾರೆ.

ಉತ್ತರ ಐರ್ಲೆಂಡ್ ಮತ್ತು ಬ್ರಿಟನ್ ನಡುವೆ ಗಡಿ ಇರಲಿದೆ. ಅಂದರೆ ಉತ್ತರ ಐರ್ಲೆಂಡ್‌ನಿಂದ ಬ್ರಿಟನ್‌ಗೆ ಬರುವ ಕೆಲವು ಸರಕುಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ ಮತ್ತು ಯುರೋಪಿಯನ್ ಒಕ್ಕೂಟ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ.

ಬ್ರಿಟನ್‌ನಲ್ಲಿರುವ ಯುರೋಪಿಯನ್ ಒಕ್ಕೂಟದ ನಾಗರಿಕರು ಮತ್ತು ಯುರೋಪಿಯನ್ ಒಕ್ಕೂಟದಲ್ಲಿರುವ ಬ್ರಿಟನ್ ನಾಗರಿಕರ ಹಕ್ಕುಗಳು ಪರಿವರ್ತನೆಯ ಅವಧಿಯಲ್ಲಿ ಹಾಗೆಯೇ ಇರುತ್ತದೆ. ಒಕ್ಕೂಟದಿಂದ ನಿರ್ಗಮಿಸುತ್ತಿರುವುದಕ್ಕೆ ಬ್ರಿಟನ್ 30 ಬಿಲಿಯನ್ ಪೌಂಡ್ ಹಣವನ್ನು ಒಕ್ಕೂಟಕ್ಕೆ ಪಾವತಿಸಬೇಕಾಗಿದೆ.

ಬ್ರೆಕ್ಸಿಟ್ ತಡವಾಗಿದ್ದು ಏಕೆ?

ಬ್ರೆಕ್ಸಿಟ್ ತಡವಾಗಿದ್ದು ಏಕೆ?

ಬ್ರೆಕ್ಸಿಟ್ 2019ರ ಮಾರ್ಚ್ 29ರಂದೇ ನಡೆಯಬೇಕಿತ್ತು. ಆದರೆ ಆಗಿನ ಪ್ರಧಾನಿ ಥೆರೆಸಾ ಮೇ ಅವರು ನಡೆಸಿದ್ದ ಒಪ್ಪಂದ ವ್ಯವಹಾರಗಳನ್ನು ಸಂಸದರು ತಿರಸ್ಕರಿಸಿದ್ದರಿಂದ ಎರಡು ಬಾರಿ ಮುಂದೂಡಿಕೆಯಾಯಿತು.

ಕನ್ಸರ್ವೇಟಿವ್ ಪಕ್ಷದ ಅನೇಕ ಸಂಸದರು ಮತ್ತು ಸಂಸತ್‌ನಲ್ಲಿ ಸರ್ಕಾರದ ಮಿತ್ರಪಕ್ಷ ಡಿಯುಪಿಯ ಸಂಸದರು ಈ ನಿರ್ಧಾರವನ್ನು ವಿರೋಧಿಸಿದ್ದರು. ಇದರಿಂದ ಬ್ರಿಟನ್ ಅದೇ ಜಾಲದೊಳಗೆ ವರ್ಷಗಟ್ಟಲೆ ಸಿಲುಕಿಕೊಳ್ಳಲಿದೆ ಎಂದು ಆರೋಪಿಸಿದ್ದರು. ಮೂರನೇ ಬಾರಿ ಈ ಒಪ್ಪಂದಕ್ಕೆ ವಿರೋಧ ಎದುರಾದಾಗ ಥೆರೆಸಾ ಮೇ ರಾಜೀನಾಮೆ ನೀಡಿದ್ದರು.

English summary
United Kingdom will formally leave the European Union at 11 PM on Friday, 31st January. All you need to know about Brexit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X