• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರವಾಸ ಕಥನ: ಬ್ರಿಟಿಷ್ ಕೊಲಂಬಿಯಾದ ಸೌಂದರ್ಯದ ಖನಿ - ವ್ಯಾಂಕೂವರ್‌

By ಪ್ರೊ. ಕೆ. ವಿಟ್ಟಲ್ ದಾಸ್ ಭಟ್
|

530 ಕಿ ಮೀ ಗಳ ನಮ್ಮ ರೋಡ್ ಟ್ರಿಪ್ ಒರೆಗೊನ್ ರಾಜ್ಯದ ಪೋರ್ಟ್‌ಲ್ಯಾಂಡ್ ನಿಂದ ಮೇ ತಿಂಗಳ 25ರಂದು ಎರಡು ಗಂಟೆಗೆ ಆರಂಭವಾಯಿತು. ವಾಶಿಂಗ್ಟನ್ ರಾಜ್ಯದ ಸಿಯಾಟಲ್‌ಗೆ ಸಂಜೆ 6ಕ್ಕೆ ತಲಪಿ, ಅಲ್ಲಿಂದ 160 ಕಿ ಮೀ ಕ್ರಮಿಸಿ ಕೆನಾಡಾದ ಗಡಿ ಸೇರಿದೆವು. ಎರಡು ಮಹಾನ್ ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಸುಂದರವಾದ ಶಾಂತಿ ಉದ್ಯಾನವನ್ನು ನಿರ್ಮಿಸಿದ್ದಾರೆ. ಪ್ರವಾಸಿಗಳು ಕಾರಿಂದ ಇಳಿದು, ಫೋಟೋ ಕ್ಲಿಕ್ಕಿಸುತ್ತಾ ವಿಹರಿಸುತ್ತಿರುವುದು ಕಂಡು ಬಂತು.

ಪ್ರಥಮ ಬಾರಿ ಅಂತಾರಾಷ್ಟ್ರೀಯ ಗಡಿಯನ್ನು ಕಾರಿನಲ್ಲಿ ದಾಟುವ ಸಂದರ್ಭ ಒದಗಿ ಬಂದದ್ದರಿಂದ ಸಹಜವಾಗಿಯೇ ಕುತೂಹಲ ಉಂಟಾಗಿತ್ತು. ನಮ್ಮಲ್ಲಿ ಹೆದ್ದಾರಿಯ ಟೋಲ್ ಗೇಟ್ ಗಳಲ್ಲಿ ವಾಹನಗಳು ಹಾದು ಹೋಗುವಂತೆ 3 ಸಾಲುಗಳಲ್ಲಿ ವಲಸೆ ಮತ್ತು ಸುಂಕದ ಅಧಿಕಾರಿಗಳ ಎದುರು ಸಾಗ ಬೇಕಾಗಿತ್ತು. 30 ನಿಮಿಷಗಳಲ್ಲಿ ನಮ್ಮ ಸರತಿ ಬಂದಾಗ , ಕಾರಿನ ಕಿಟಕಿ ಮೂಲಕವೇ ನಮ್ಮ ಪಾಸ್‌ಪೋರ್ಟ್ ಗಳನ್ನು ಒಪ್ಪಿಸಿ ವಲಸೆ ಮುದ್ರೆಯನ್ನು ಪಡೆದೆವು. ಮಗಳು, ಅಳಿಯ ಗ್ರೀನ್ ಕಾರ್ಡಿನವರಾದುದರಿಂದ , ಮೊಮ್ಮಗ ಅಮೆರಿಕಾದ ಪ್ರಜೆಯಾದದ್ದರಿಂದ ಅವರಿಗೆ ವೀಸಾದ ಅಗತ್ಯವಿರಲಿಲ್ಲ.

ಸಿಖ್ಖರ ಪವಿತ್ರ ತಾಣ ಹೇಮಕುಂಡ್ ಸಾಹಿಬ್ ಸುತ್ತಾ ರೋಚಕ ಚಾರಣ

ಆದರೆ ಕಾರಲ್ಲಿ ನಿಷೇಧಿತ ಆಹಾರ, ಹಣ ಇದೆಯಾ, ಭೇಟಿಯ ಕಾರಣ, ಎಷ್ಟು ಸಮಯ ಇರುತ್ತೀರಿ,ಎಂದೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ, 10 ನಿಮಿಷಗಳಲ್ಲಿ ಕಾರಿಂದ ಇಳಿಯದೆ ಕೆನಡಾ ದೇಶಕ್ಕೆ ಪ್ರವೇಶ ಪಡೆದೆವು. ಕಾರಲ್ಲಿದ್ದ ನಮ್ಮ 5 ದಿನಗಳ ಪ್ರಯಾಣಕ್ಕೆ ಬೇಕಾದ ಯಾವ ಸಾಮಾನು ಸರಂಜಾಮುಗಳನ್ನೂ ಪಂಜಾಬೀ ವಲಸೆ ಅಧಿಕಾರಿ ಪರೀಕ್ಷಿಸಿಸಲಿಲ್ಲ. ನಮ್ಮ ದೇಶದಲ್ಲಿ ಅಂತರ್ ರಾಜ್ಯ ಗಡಿಗಳಲ್ಲಿ ಕೆಲವೊಮ್ಮೆ ತಾಸುಗಟ್ಟಲೆ ಕಾಯ ಬೇಕಾದ ಪರಿಸ್ಥಿತಿಗೆ ಹೋಲಿಸಿದಾಗ ಇದು ಆಶ್ಚರ್ಯಕರವಾಗಿ ಕಂಡು ಬಂತು.

ಗಡಿ ದಾಟಿ ವ್ಯಾಂಕೂವರಿನತ್ತ ಚಲಿಸುವಾಗ ನಾವು ಬೇರೆ ದೇಶಕ್ಕೆ ಬಂದ ಅನುಭವ ಆಗಲಿಲ್ಲ. ಭೌಗೋಳಿಕವಾಗಿ ಇದು ಉತ್ತರ ಅಮೆರಿಕಾದ ಪಶ್ಚಿಮ ಕರಾವಳಿಯೇ ಆದದ್ದರಿಂದ, ಎಲ್ಲಿ ನೋಡಿದರೂ ನದಿ, ಕೆರೆ, ಹಸಿರು ಕಾಡು ಮತ್ತು ಹಿಮಾವೃತ ಪರ್ವತಗಳು ಕಾಣ ಸಿಕ್ಕವು. ಬೇಸಿಗೆಯಲ್ಲಿ ಉತ್ತರ ಅಮೇರಿಕದಲ್ಲಿ 9 ಘಂಟೆಗೆ ಸೂರ್ಯಾಸ್ತವಾಗುವುದರಿಂದ ಪ್ರಕೃತಿಯ ಸುಂದರ ಚಿತ್ರಣವನ್ನು ಬೆಳಕಿನಲ್ಲೆ ನೋಡಿ ಅನಂದಿಸ ಬಹುದು.

ಮೊದಲ ದಿನದ ಅನುಭವ

ಮೊದಲ ದಿನದ ಅನುಭವ

ರಾತ್ರಿ 9 ಘಂಟೆಗೆ ವೆಂಕೂವರ್ ಡೌನ್ ಟೌನ್ ಸೇರಿ, ನಾವು ಮುಂದಿನ 2 ದಿನ ಉಳಿದುಕೊಳ್ಳ ಬೇಕಾದ 17ನೆಯ ಮಹಡಿಯ ವಿಲಾಸೀ ಕೊಂಡೊದ ಕೀಲಿಯನ್ನು, ಅದರ ಒಡೆಯನ ಲಾಕರಿಂದ ಪಡೆದು, ಅದನ್ನೇ ರಿಮೋಟ್ ಆಗಿ ಉಪಯೋಗಿಸಿ, ಕಾರ್ ಪಾರ್ಕಿಂಗ್ ಗೇಟ್, ಲಿಫ್ಟಿನ ಬಾಗಿಲುಗಳನ್ನು ತೆರೆದು, ನಮ್ಮ ಸೂಟ್‌ಕೇಸ್ ಗಳೊಂದಿಗೆ ನಮ್ಮ ವಾಸದ ಐಷಾರಾಮಿ ಮನೆಯನ್ನು ಪ್ರವೇಶಿಸಿದೆವು. ಮೂರು ಸುತ್ತ ಸಂಪೂರ್ಣವಾಗಿ ಗಾಜ಼ಿನಿಂದಲೇ ಆವೃತವಾದ 2 ಬಿಎಚ್ ಕೆ ಮನೆಯಿಂದ, ಮಾಯಾನಗರಿ ವೆಂಕೂವರ್ ಡೌನ್ ಟೌನಿನ ಗಗನ ಚುಂಬಿ ಕಟ್ಟಡಗಳ, ಸುಂದರ ರಾತ್ರಿಯ ದೃಶ್ಯಾವಳಿಯನ್ನು ನೋಡಿ ಆನಂದಿಸುತ್ತಾ, ಮಗಳ ವಿವಾಹ ದಿನವನ್ನು ಆಚರಿಸಿ, ರಾತ್ರಿ ಊಟ ಮುಗಿಸಿ, ನಿದ್ರೆಗೆ ಶರಣಾದೆವು.

ದಿನ 2 : ಸ್ಟ್ಯಾನ್ಲೆ ಪಾರ್ಕ್

ದಿನ 2 : ಸ್ಟ್ಯಾನ್ಲೆ ಪಾರ್ಕ್

ಮರುದಿನ ಬೆಳಗ್ಗಿನ ಉಪಹಾರದ ಬಳಿಕ, ನಗರದ ಹೃದಯ ಭಾಗದಲ್ಲಿರುವ, ಸ್ಟ್ಯಾನ್ಲೆ ಪಾರ್ಕಿಗೆ ಕಾಲ್ನಡಿಗೆಯಿಂದಲೇ ಪ್ರವೇಶಿಸಿದೆವು. ಸಾವಿರ ಎಕ್ರೆ ವಿಸ್ತಾರವಾದ ಈ ಪಾರ್ಕ್, ನ್ಯೂಯಾರ್ಕಿನ ಸೆಂಟ್ರಲ್ ಪಾರ್ಕಿಗಿಂತಲೂ ದೊಡ್ಡದಾಗಿದ್ದು, 2013 ರಲ್ಲಿ ಜಗತ್ತಿನ ಅತ್ಯುತ್ತಮ ಪಾರ್ಕುಗಳಲ್ಲಿ ಒಂದು, ಎಂದು ಪ್ರಸಿದ್ದಿ ಪಡೆದಿದೆ. ವರ್ಷಕ್ಕೆ 8 ಮಿಲಿಯನ್ ಪ್ರವಾಸಿಗಳನ್ನು, ತನ್ನತ್ತ ಸೆಳೆಯುತ್ತದೆ. ಪಾರ್ಕಿನ ಹೆಚ್ಚಿನ ಭಾಗ ದಟ್ಟ ಆರಣ್ಯವಾಗಿದ್ದು, 250 ಅಡಿ ಎತ್ತರದ, 100 ವರ್ಷಗಳಷ್ಟು ಹಳೆಯದಾದ ಮರಗಳಿಂದ ತುಂಬಿದೆ.

ಪಾರ್ಕ್ ಪ್ರವೇಶಿಸಿದಂತೆ, 41 ಎಕ್ರೆ ವಿಸ್ತಾರವಾದ, ಸಿಹಿ ನೀರಿನ , ಸುಂದರ, ಲೋಸ್ಟ್ ಲಗೂನ್ ಕಾಣಿಸುತ್ತದೆ. ಹಿಂದೆ ಉಪ್ಪು ನೀರಿನ ಜಲ ಮೂಲವನ್ನು, ಮಾನವ ಸಂರಕ್ಷಣೆಯಿಂದ, ಸಿಹಿ ನೀರಿನ ಕೊಳವನ್ನಾಗಿ ಪರಿವರ್ತಿಸಿದ್ದಾರೆ. ಸಮುದ್ರದ ಇಳಿತಕ್ಕೆ, ಮಾಯವಾಗುತ್ತಿದ್ದರಿಂದ ಲೋಸ್ಟ್ ಲಗೂನ್ ಎಂದು ಹೆಸರಿಸಲಾಗಿದೆ. ಈಗ ಉತ್ತರ ಅಮೇರಿಕದಲ್ಲಿಯೇ ಅತಿ ದೊಡ್ಡ, ನಗರವಾಸಿ ಹೆರೊನ್ ಹಕ್ಕಿಗಳ ವಾಸ ಸ್ಥಾನವಾಗಿ ಪ್ರಸಿದ್ದಿ ಪಡೆದಿದೆ. ಪಾರ್ಕೊಳಗೆ ಸಮುದ್ರ ತೀರದಲ್ಲಿ ನಿರ್ಮಿಸಿದ, 22 ಕಿ ಮೀ ಉದ್ದವಾದ ಕಾಲು ಹಾದಿ, ಸೈಕಲ್ ಸವಾರರಿಗೂ, ನಡೆದು ಹೋಗುವವರಿಗೂ, ಪ್ರಮುಖ ಆಕರ್ಷಣೆ ಆಗಿದ್ದು, ಜಗತ್ತಿನ ಅತಿ ಉದ್ದದ ಜಲಾವೃತ ರಚನೆ ಎಂದು ಹೆಸರುವಾಸಿ ಆಗಿದೆ.

ಪ್ರವಾಸ ಕಥನ : ಪಟ್ಟಾಯದ 'ಸ್ಯಾಂಚುರಿ ಆಫ್ ಟ್ರುಥ್ ' ದೇಗುಲದಲ್ಲೊಂದು ಸುತ್ತು

ಲೋಸ್ಟ್ ಲಗೂನಿನ ತೀರದ ಬೆಂಚಿನಲ್ಲಿ

ಲೋಸ್ಟ್ ಲಗೂನಿನ ತೀರದ ಬೆಂಚಿನಲ್ಲಿ

ನಾವು ಲೋಸ್ಟ್ ಲಗೂನಿನ ತೀರದಲ್ಲಿರುವ ಬೆಂಚಿನಲ್ಲಿ, ನಮ್ಮ ಮಧ್ಯಾಹ್ನದ ಊಟ ಸವಿದು, ಸಮುದ್ರ ತೀರದಲ್ಲಿ ನಡೆದು, ಅಸಂಖ್ಯಾತ ಯಾಂತ್ರೀಕೃತ ದೋಣಿಗಳು, ಅವುಗಳ ನಿಲುಗಡೆಗೆ ವ್ಯವಸ್ಥಿತ ತಂಗುದಾಣಗಳು, ಬೃಹತ್ ಬೋಟು ಕ್ಲಬ್ಬುಗಳು, ಸವಾರಿಗೆ ಕುದುರೆ ಗಾಡಿಗಳು, ನಮ್ಮ ಪಕ್ಕದಲ್ಲೇ ಹಾದು ಹೋಗುವ ಸಾವಿರಾರು ಸೈಕಲ್ ಸವಾರರನ್ನು ದಾಟಿ, ಟೋಟಮ್ ಕಂಬಗಳಿರುವ ಪ್ರದೇಶಕ್ಕೆ ಸೇರಿದೆವು. ಎತ್ತರವಾದ ಮರದ , ಬಣ್ಣ ಬಣ್ಣದ ಕಂಬಗಳು, ಕೆನಡಾದ ಮೂಲನಿವಾಸಿ ಇಂಡಿಯನರ ಜೀವನ ಚರಿತ್ರೆಯನ್ನು, ನಮ್ಮ ಶಾಸನಗಳಂತೆ ವಿವರಿಸುತ್ತವೆ. ಒಂದು ಎತ್ತರದ ಕಂಬವಂತೂ, 1956 ರ ವರೆಗೂ ಆ ಪ್ರದೇಶದಲ್ಲಿ ವಾಸ ಮಾಡಿದ್ದ, ಅಮೆರಿಕನ್ ಇಂಡಿಯನರ ಕುಟುಂಬಕ್ಕೆ ಸ್ಮಾರಕವಾಗಿದೆ. ಟೋಟಮ್ ಕಂಬದ, ಬೇರೆ ಬೇರೆ ಭಾಗಗಳು, ಅಲ್ಲಿ ವಾಸ ಮಾಡಿದ ಕುಟುಂಬದ ಸದಸ್ಯರ ಜೀವನ ಚರಿತ್ರೆಯನ್ನು, ಅವರ ಜೀವಿತ ವರ್ಷಗಳಿಗೆಅನುಗುಣವಾಗಿ, ಪ್ರತಿನಿಧಿಸುತ್ತವೆ. ವಿವಿಧ ಬಣ್ಣಗಳ, ಆಕಾರಗಳ, ಎತ್ತರಗಳ, ಅಸಂಖ್ಯಾತ ಟೋಟಮ್ ಕಂಭಗಳು, ನಮ್ಮ ಕರಾವಳಿಯ ಭೂತ ಕೋಲ ಗಳನ್ನುನೆನೆಪಿಸುವಂತಾಯಿತು.

ಬಂದ ದಾರಿಯಲ್ಲೇ ನಮ್ಮ ವಾಸಸ್ಥಾನಕ್ಕೆ ಮರಳಿ ಬಂದು, ದೀರ್ಘ ನಡಿಗೆಯಿಂದ ದಣಿದ ದೇಹಗಳಿಗೆ ವಿಶ್ರಾಂತಿ ಕೊಟ್ಟು, ಪುನಹ ಕಾರಲ್ಲಿ ಪಾರ್ಕಿನ ಪ್ರದಕ್ಷಿಣೆ ಕೈಕೊಂಡು, ಒದ್ದೆ ಉಡುಗೆಯ ಮರ್ಮೇಡ್ ವಿಗ್ರಹ, ಲೈಯನ್ಸ್ ಗೇಟ್ ಸೇತುವೆ, ಜಪಾನ್ ರಾಣಿಯ ವಿಗ್ರಹ, ದೀಪ ಸ್ತಂಭಗಳನ್ನು ವೀಕ್ಷಿಸಿ ಗೂಡು ಸೇರಿದೆವು.

ದಿನ 3: ಕೆಪಿಲಾನೊ ತೂಗು ಸೇತುವೆ

ದಿನ 3: ಕೆಪಿಲಾನೊ ತೂಗು ಸೇತುವೆ

ನಮ್ಮ ಎರಡು ದಿನಗಳ ವಾಸ್ತವ್ಯದ ಕೊಂಡೋಮಿನಿಯಂಗೆ ವಿದಾಯ ಹೇಳಿ, 15 ನಿಮಿಷಗಳಲ್ಲಿ ತೂಗು ಸೇತುವೆ ಪಾರ್ಕಿಗೆ ಬಂದುಸೇರಿದೆವು. ಇದು 1889 ರಲ್ಲಿ ನಿರ್ಮಿಸಲಾದ ,ಸಂಪೂರ್ಣ ಖಾಸಗಿ ಒಡೆತನದ ಒಂದು ಅತ್ಯದ್ಬುತ ರಚನೆಯಾಗಿದ್ದು, ಸಂಪೂರ್ಣ ಖಾಸಗಿ ಒಡೆತನದಲ್ಲಿದೆ.

ಕೆನಡಾದ ಹೆಚ್ಚಿನ ಪ್ರವಾಸಿ ಆಕರ್ಷಣೆಗಳಿಗೆ ಪ್ರವೇಶ ಶುಲ್ಕ ಸ್ವಲ್ಪ ದುಬಾರಿ ಎನಿಸುವಸ್ಟ್ಟು ಇದೆ. ಆದರೆ ಅಮೆರಿಕನ್ ಡಾಲರ್ ಬಲಿಷ್ಟ ಕರೆನ್ಸೀ ಆದದ್ದರಿಂದ, ನಮಗೆ ಅಷ್ಟೇನೂ ಹೊರೆಯಾಗಲಿಲ್ಲ. ಪ್ರತಿಯೊಬ್ಬರಿಗೂ $ 46 ಕೊಟ್ಟು ಒಳ ಪ್ರವೇಶಿಸಿದೆವು. ಹಿರಿಯ ನಾಗರಿಕರಿಗೆ, ಮಕ್ಕಳಿಗೆ ಹಾಗೂ ವಿದ್ಯಾರ್ಥಿಗಳಿಗೆ ರಿಯಾಯತಿ ದರಗಳಿವೆ.

ಇದು ಕೆಪಿಲಾನೊ ನದಿಗೆ ಕಟ್ಟಿದ 460 ಅಡಿ ಉದ್ದದ ತೂಗು ಸೇತುವೆ. 1889 ರಲ್ಲಿ ನದಿಯ ಮೇಲೆ 230 ಅಡಿ ಎತ್ತರದಲ್ಲಿ, ಸಿಡಾರ್ ಹಲಗೆಗಳನ್ನು ಹಗ್ಗದಲ್ಲಿ ಬಿಗಿದು ಮಾಡಲ್ಪಟ್ಟಿತು. 1903 ರಲ್ಲಿ ಸಧೃಡವಾದ ಕೇಬಲ್ ವೈಯರ್ ಸೇತುವೆಯಾಗಿ ಮಾರ್ಪಟ್ಟಿತು. ಸೇತುವೆ ಉದ್ದಕ್ಕೂ ಕೆಪಿಲಾನೊ ನದಿಯ ಮೇಲೆ ತೂಗಾಡುತ್ತಾ ಇನ್ನೊಂದು ತುದಿ ಸೇರುವ ಅನುಭವ ರೋಚಕವಾಗಿತ್ತು

ಮಾಯಾನಗರಿ ‘ನ್ಯೂಯಾರ್ಕ್'ನಲ್ಲೊಂದು ವಾರಾಂತ್ಯ

ಡಗ್ಲಸ್ ಫಿರ್ ಮರಗಳ ಮೇಲೆ 7 ಕಾಲು ಸೇತುವೆ

ಡಗ್ಲಸ್ ಫಿರ್ ಮರಗಳ ಮೇಲೆ 7 ಕಾಲು ಸೇತುವೆ

2004 ರಲ್ಲಿ ಅರಣ್ಯದ ನೆಲಭಾಗದಿಂದ 98 ಅಡಿ ಎತ್ತರಕ್ಕೆ, ನೂರಾರು ವರ್ಷ ಹಳೆಯ, ಡಗ್ಲಸ್ ಫಿರ್ ಮರಗಳ ಮೇಲೆ 7 ಕಾಲು ಸೇತುವೆಗಳನ್ನು ನಿರ್ಮಿಸಲಾಯಿತು. ನೂರಿನ್ನೂರು ಎತ್ತರದ ಬೃಹತ್ ಮರಗಳ ಮೇಲೆ ನಡೆದಾಡುವುದು ಆವಿಸ್ಮರಣೀಯವಾಗಿತ್ತು. ದೈತ್ಯ ಮರಗಳಿಗೆ ಸ್ವಲ್ಪವೂ ಹಿಂಸೆಯಾಗದಂತೆ, ಕಬ್ಬಿಣದ ಕಾಲರ್ ಗಳನ್ನು ಅಳವಡಿಸಿ, ಮರದಿಂದ ಮರಕ್ಕೆ ನಡೆದಾಡಲು ಹಾದಿ ಮಾಡಿದ್ದಾರೆ.

ಗುಡ್ಡದ ಬದಿಯಲ್ಲಿ ನಡೆದಾಡಲು ಒಂದು ಹೊಸ ಆಕರ್ಷಣೆಯನ್ನು ಆರಂಭಿಸಿದ್ದಾರೆ. ದುರ್ಗಮ ಬಂಡೆಗಳ ಅಂಚಿನಲ್ಲಿ, ಸುತ್ತಲಿನ ಪ್ರಾಕೃತಿಕ ಸೌಂದರ್ಯವನ್ನು ಆಸ್ವಾದಿಸುತ್ತಾ, ಕಾಲ್ನಡಿಗೆಯಲ್ಲಿ ಸಾಗಬಹುದು. ಹಾಗೆ ತನ್ನೊಡಲಲ್ಲಿ ಆಕರ್ಷಕ ಸ್ಥಳಗಳನ್ನು, ಹುದುಗಿಸಿಕೊಂಡಿರುವ ಇಲ್ಲಿನ ಸೊಬಗು ಕಣ್ಮನ ಸೆಳೆಯುತ್ತದೆ. 3 ತಾಸು ಸ್ವಚಂದವಾಗಿ ವಿಹರಿಸಿ, ನಮ್ಮ ಮುಂದಿನ ಪ್ರಯಾಣಕ್ಕೆ ಸಜ್ಜಾಗಲು, ಪಾರ್ಕಿಂಗ್ ಪ್ರದೇಶಕ್ಕೆ ಬಂದೆವು.

ಬೋವನ್ ದ್ವೀಪ

ಬೋವನ್ ದ್ವೀಪ

ಆ ದಿನದ ವಾಸ್ತವ್ಯಕ್ಕೆ ನಾವು ವೆಂಕೂವರ್ ಭೂಪ್ರದೇಶದಿಂದ 3 ಕಿ ಮೀದೂರವಿರುವ ಸುಂದರ ಬೋವನ್ ದ್ವೀಪವನು ಆಯ್ದು ಕೊಂಡೆವು. ಅಲ್ಲಿ ಸೇರಲು ಉತ್ತಮ ಜಲ ಸಾರಿಗೆ ಇದೆ. ನಾವು ಕಾರ್ ಸಮೇತ, ಸಣ್ಣ ಹಡಗಿನಂತಿರುವ ಬಾರ್ಜನ್ನು ಪ್ರವೇಶಿಸಿ, ಕಾರಿಂದ ಇಳಿದು, ಡೆಕ್ ಮೇಲೇರಿ, ನೀಲ ಸಮುದ್ರ, ಆಕಾಶ, ಸುತ್ತುವರಿದ ಹಿಮಚ್ಚಾದಿತ ಪರ್ವತಗಳು, ಮೋಟರ್ ಬೋಟ್, ಹಾಯಿ ದೋಣಿಗಳನ್ನು ನೋಡುತ್ತಾ, ಬೋವನ್ ದ್ವೀಪ ಸಮೀಪಿಸಿದೆವು. ನಿಲುಗಡೆಯಾದ ಬಳಿಕ, ಕಾರನ್ನು ಚಲಾಯಿಸಿಕೊಂಡೇ , ನಮ್ಮ ಆ ದಿನದ ವಾಸ್ತವ್ಯದ ಮನೆಯ ಕಡೆ ಪ್ರಯಾಣಿಸಿದೆವು.

ಬೋವನ್ ದ್ವೀಪ 6 ಕಿ ಮೀ ಅಗಲ, 12ಕಿಮಿ ಉದ್ದ, 49 ಚದರ ಕಿ ಮೀ ವಿಸ್ತಾರದ , 3700 ಜನಸಂಖ್ಯೆಯ ಒಂದು ಸುಂದರ ದ್ವೀಪ. ನಗರದ ಯಾಂತ್ರೀಕೃತ ಜೀವನವನ್ನು ಬಯಸದವರು, ಈ ದ್ವೀಪದಲ್ಲಿ, ಆಸ್ತಿ ಪಾಸ್ತಿ ಕೊಂಡು ನೆಲೆಸಿದ್ದಾರೆ. ಅಸಂಖ್ಯಾತ ಉದ್ಯೊಗಸ್ತರು ಹಾಗೂ ವಿಧ್ಯಾರ್ಥಿಗಳು, ನಿತ್ಯ ವೆಂಕೂವರಿನ ಕಚೇರಿ, ಶಾಲೆಗಳಿಗೆ, ಜಲ ಮಾರ್ಗದಲ್ಲಿ ಪ್ರಯಾಣಿಸುತ್ತಾರೆ. ಕೆನಡಾದ ಪ್ರಖ್ಯಾತ ಲೇಖಕರ ಮನೆಯನ್ನೇ ಏರ್‌-ಬೀಎನ್ ಬೀ ಮುಖಾಂತರ ಬಾಡಿಗೆ ಹಿಡಿದಿದ್ದೆವು. ಗುಡ್ಡದಂಚಿನಲ್ಲಿ, ಸಮುದ್ರ ತೀರದಲ್ಲಿ, ಸುಂದರ ಪರಿಸರದಲ್ಲಿದ್ದ ಈ ಮನೆಯಲ್ಲಿಯೇ ನಮ್ಮ ರಾತ್ರಿ ವಾಸ ನಿಗದಿಯಾಗಿತ್ತು. ವಿಶ್ರಾಂತಿ ತೆಗೆದುಕೊಂಡು, ಸಮೀಪದ ಪೆಬ್ಬಲ್ ಬೀಚಿಗೆ ಭೇಟಿ ನೀಡಿದೆವು. ಏನೂ ಜನಸಂಚಾರವಿರದ ಒಂದು ಸುಂದರ ಸಮುದ್ರ ಕಿನಾರೆಯಾಗಿದ್ದು, ಮರದ ದಿಮ್ಮಿಗಳಿಂದ ಆವೃತವಾಗಿತ್ತು. ಇಲ್ಲಿಯೇ ಸೂರ್ಯಾಸ್ತದ ವರೆಗೂ ವಿಹರಿಸಿ, ನಮ್ಮ ವಾಸ ಸ್ಥಾನಕ್ಕೆ ಮರಳಿದೆವು.

ದಿನ 4: ಗೌಸೆ ಪರ್ವತ

ದಿನ 4: ಗೌಸೆ ಪರ್ವತ

ಬೆಳಗ್ಗಿನ ಉಪಹಾರ ಮುಗಿಸಿ, ಮನೆಒಡತಿಗೆ ವಿದಾಯ ಹೇಳಿ, ಕೀಲಿಕೈ ಒಪ್ಪಿಸಿ, ಹತ್ತಿರದ ಸ್ಯಾಂಡೀ ಬೀಚಿಗೆ ತೆರೆಳಿದೆವು. ಸ್ಥಳೀಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೂರ್ಯ ಸ್ನಾನ, ದೋಣಿ ವಿಹಾರ, ಮಕ್ಕಳು, ನಾಯಿಗಳೊಂದಿಗೆ ಜಲ ಕ್ರೀಡೆಯಲ್ಲಿ ತೊಡಗಿರುವುದು ಕಂಡು ಬಂತು. ಕಣ್ಣು ಹಾಯಿಸುವರೆಗೂ ಕಂಡು ಬರುವ ನೀಲ ಸಾಗರ, ಸುತ್ತುವರಿದ ಹಿಮಾಚ್ಛಾದಿತ ಪರ್ವತಗಳು, ಎಲ್ಲೆಂದರಲ್ಲಿ ನೀರಿನಲ್ಲಿ ಚಲಿಸುವ ಅಸಂಖ್ಯಾತ ಸಣ್ಣ, ದೊಡ್ಡ ಮೋಟಾರ್ ಬೋಟುಗಳು, ಕ್ಷಣ ಕ್ಷಣಕ್ಕೂ, ಕುತೂಹಲದಿಂದಲೇ ಗಮನ ಸೆಳೆಯುತ್ತವೆ. ವೆಂಕೂವರಿಗೆ ವಾಪಾಸಾಗಲು, ಮಧ್ಯಾಹ್ನ ಕಿ ಮೀ ಉದ್ದದ ಸರತಿ ಸಾಲನ್ನು ಸೇರಿಕೊಂಡೆವು. ಕಾರ್ ಸಮೇತ ಬಾರ್ಜ್ ಪ್ರವೇಶಿಸಿ, ಕಾರಿಂದ ಇಳಿದು, ದ್ವೀಪದಿಂದ ನಿರ್ಗಮಿಸುತ್ತಿದ್ದಂತೆ, ವಿಶಾಲ ಸಾಗರದಲ್ಲಿ ಅನಾವರಣಗೊಳ್ಳುವ , ಪ್ರಾಕೃತಿಕ ಸೊಬಗು ಮೈ ಮನವನ್ನು ಕಲಕಿ ಬಿಡುತ್ತದೆ. ಬಾರ್ಜಿಂದ ಹೊರಬಂದು, 15 ಕಿ ಮೀ ಕ್ರಮಿಸಿ, ಗ್ರೌಸೆ ಪರ್ವತ ರೋಪ್ವೆ ನಿಲ್ದಾಣದ ಪಾರ್ಕಿಂಗ್ ಪ್ರದೇಶ ತಲಪಿದೆವು. ಕಾರಲ್ಲೇ ಮಧ್ಯಾಹ್ನದ ಊಟ ಮುಗಿಸಿ, ಕೊಂಬೋ ಟಿಕೆಟ್ ಖರೀದಿಸಿ, ಪರ್ವತ ಮೇಲೇರಲು, ಪ್ರಥಮ ಭಾಗವಾದ, ಟ್ರಾಮ್ ಸವಾರಿಗೆ ಅಣಿ ಆದೆವು.

ಸ್ಕೈರೈಡ್ ಟ್ರ್ಯಾಮ್ ಸವಾರಿ

ಸ್ಕೈರೈಡ್ ಟ್ರ್ಯಾಮ್ ಸವಾರಿ

95 ಜನರು ಪ್ರಯಾಣಿಸಬಹುದಾದ, ಸಂಪೂರ್ಣವಾಗಿ ಗಾಜಿನಿಂದ ಆವೃತವಾದ ಟ್ರಾಮನ್ನು ಪ್ರವೇಶಿಸಿದೆವು. ಹತ್ತು ನಿಮಿಷಗಳಲ್ಲಿ ನಮ್ಮನ್ನು ಪರ್ವತದ ಮಧ್ಯಭಾಗಕ್ಕೆ ಕೊಂಡೊಯ್ಯುತ್ತದೆ. ಮೇಲೇರುತ್ತಿರುವಂತೆ ಕೆನಡಾದ ಪ್ರಾಕೃತಿಕ ಸೌಂದರ್ಯ ನಮ್ಮನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಆಳೆತ್ತರದ ದೈತ್ಯ ಡಗ್ಲಸ್ ಫಿರ್ ಮರಗಳು ಮೇಲೆ ಟ್ರಾಮ್ ಚಲಿಸುತ್ತಿರುವಂತೆ ಕೆಪಿಲಾನೋ ನದಿಯ ಸುಂದರ ನೋಟವನ್ನು ಸವಿಯಬಹುದು.

ಚೇರ್ ಲಿಫ್ಟ್ (Chair Lift)

ಟ್ರಾಮಿಂದ ಹೊರಬಂದೊಡನೆ ಹಿಮಾವೃತವಾದ ಸಮತಟ್ಟು ಪ್ರದೇಶವನ್ನು ಬಂದು ಸೇರಿದೆವು. ಇಲ್ಲಿ ಕೆಫೆಟೀರಿಯಾಗಳು, ಲಂಬರ್ ಜಾಕ್ ಶೋ, 5 ಎಕ್ರೆ ವಿಸ್ತಾರದ ಜಾಗದಲ್ಲಿ ಗ್ರಿಜ್ಲೀ ಕರಡಿಗಳ ಪ್ರದರ್ಶನವನ್ನು ನೋಡುತ್ತಾ, ಹಿಮದ ರಾಶಿಯಲ್ಲಿ ನಿರ್ಮಿಸಲಾದ ಕಾಲುದಾರಿಯಲ್ಲಿ ನಡೆದು ಚೇರ್ ಲಿಫ್ಟ್ ನಿಲ್ದಾಣನನ್ನು ಸೇರಿದೆವು. ಒಂದರಲ್ಲಿ ಎರಡು ಪ್ರಯಾಣಿಕರನ್ನು ಕುಳ್ಳಿರಿಸಿ ಪರ್ವತದ ತುದಿಯನ್ನು 15 ನಿಮಿಷಗಳಲ್ಲಿ ಸೇರುವ ಇದೊಂದು ಅದ್ಭುತ ವ್ಯವಸ್ಥೆ. ಪರ್ವತ ಮೇಲೇರುತ್ತಿದ್ದಂತೆ, ಅಲ್ಪೈನ್ ಕಾಡುಗಳ, ಹಿಮಾವೃತ ಪರ್ವತಗಳು, ದೂರದ ವೆಂಕೂವರ್ ಮಹಾನಗರ ಹಾಗೂ ಬಂದರು ಪ್ರದೇಶ ವೀಕ್ಷಿಸಿ, ಪರ್ವತದ ತಪ್ಪಲಲ್ಲಿ ಇಳಿದೆವು. ಹಿಮದಲ್ಲಿಯೇ ನಡೆದು ದೈತ್ಯ ಪವನ ಯಂತ್ರವನ್ನು ಸೇರಿದೆವು.

ಐ ಆಫ್ ದಿ ವಿಂಡ್ (Eye of the wind)

ಐ ಆಫ್ ದಿ ವಿಂಡ್ (Eye of the wind)

200 ಅಡಿ ಎತ್ತರದ ಈ ಪವನ ಯಂತ್ರದ ಮೇಲ್ಭಾಗ ಸೇರಲು ಲಿಫ್ಟಿನಲ್ಲಿ ೫ ನಿಮಿಷ ಪ್ರಯಾಣಿಸಿ, ಗಾಜಿನಿಂದ ಆವೃತವಾದ ವ್ರತ್ತಾಕಾರದ ನಿರೀಕ್ಷಣಾ ಗೋಪುರವನ್ನು ಸೇರಿದೆವು. ಇಲ್ಲಿಂದ ಸುತ್ತುವರೆದಿರುವ ಗ್ಯಾರಿಬಾಲ್ಡಿ ಪರ್ವತ ಶಿಖರ, ವೆಂಕೂವರ್ ನಗರ, ಬಂದರು, 80 ಕಿ.ಮೀ. ದೂರದವರೆಗೂ ಕಾಣಿಸುವ ಬ್ರಿಟಿಷ್ ಕೊಲಂಬಿಯಾದ ಸಣ್ಣ ಪುಟ್ಟ ನಗರಗಳು, ನಾವು ಮೇಲೇರಿದ ಪರ್ವತದ ಇಳಿಜಾರಿನ 360 ಡಿಗ್ರಿ ಮನಮೋಹಕ ದೃಶ್ಯಾವಳಿಗಳು ತನ್ನೊಡಲಲ್ಲಿ ಮೇಲಿನ ಪ್ರಾಕೃತಿಕ ಸೌಂದರ್ಯದಿಂದಲೇ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ನಿಂತಲ್ಲಿಯೇ ಕೆಳ ಭಾಗವನ್ನು ವೀಕ್ಷಿಸಲು ಗಾಜಿನದ್ದೇ ನೆಲಭಾಗವನ್ನು ರಚಿಸಿದ್ದಾರೆ. ಇಲ್ಲಿ ಗಾಜೊಡೆದು ನಿಂತಲ್ಲಿಯೇ ಕೆಳಗೆ ಬೀಳುತ್ತೇವೊ ಎಂಬ ಭೀತಿ ನಿಮ್ಮನ್ನು ಕಾಡಿದರೂ ಆಶ್ಚರ್ಯವಿಲ್ಲ.

ವಿಂಡ್ ಮಿಲ್ ಬಗ್ಗೆ ವಿವರಣೆ ಕೊಡಲು ಯುವ ಗೈಡ್ ಗಳನ್ನು ನೇಮಿಸಿದ್ದಾರೆ. 122 ಅಡಿಗಳ ಉದ್ದದ ರೆಕ್ಕೆ ಇದ್ದು ಗಾಳಿಯ ವೇಗ ಅತ್ಯುತ್ತಮವಾಗಿದ್ದರೆ 400 ಮನೆಗಳಿಗೆ ಬೇಕಾಗುವ ವಿದ್ಯುತ್ತನ್ನು ಉತ್ಪಾದಿಸುವ ಸಾಮರ್ಥ್ಯವಿದೆಯಂತೆ. ಲಿಫ್ಟಿನಲ್ಲಿ ಕೆಳಗಿಳಿದು, ಜಾರುತ್ತಿರುವ ಹಿಮದಲ್ಲಿ ನಡೆದು, ಚೇರ್ ಲಿಫ್ಟಲ್ಲಿ ಕೆಳಗಿಳಿದು ಟ್ರಾಮ್ ಸ್ಟೇಶನ್ ಸೇರಿದೆವು. ಚಳಿಗೆ ತತ್ತರಿಸುವ ಮೈಯನ್ನು ಬಿಸಿ ಕಾಫಿಯಿಂದ ಬೆಚ್ಚಗಾಗಿಸಿಕೊಂಡೆವು. ಹತ್ತು ನಿಮಿಷಗಳ ಟ್ರಾಮ್ ಸವಾರಿ ಮಾಡಿ ಬೇಸ್ ನಿಲ್ದಾಣ ಪಾರ್ಕಿಂಗ್ ಸೇರಿದೆವು.

ದೋಸೆ ಮನೆ (House of Dosa)

ದೋಸೆ ಮನೆ (House of Dosa)

ವ್ಯಾಂಕೂವರಿನ ಹೃದಯ ಭಾಗದಲ್ಲಿರುವ ಬ್ರಿಟಿಶ್ ಕೊಲಂಬಿಯಾದಲ್ಲಿಯೇ ಪ್ರಸಿದ್ದಿ ಪಡೆದಿರುವ ದೋಸೆ ಮನೆಗೆ ಪ್ರಯಾಣ ಬೆಳೆಸಿದೆವು. ಶ್ರೀಲಂಕಾದ ಪ್ರಜೆಯಿಂದ ನಿರ್ವಹಿಸಲ್ಪಡುವ ಈ ಭಾರತೀಯ ಉಪಹಾರ ಗೃಹದಲ್ಲಿ ನಮ್ಮ ದೇಶದ ಹೊರಗೆ ಸಿಗಬಹುದಾದ ಅತ್ಯಂತ ರುಚಿಕರವಾದ ಮೆದು ವಡ, ಗರಿ ವಡ, ಊತಪ್ಪ, ಓನಿಯನ್ ರವ, ಘೀರೋಸ್ಟ್ ಮಸಾಲ ದೋಸೆ, ಗುಲಾಬ್ ಜಾಮೂನ್ ಹಾಗೂ ಚಹಾವನ್ನು ನಗುಮೊಗದ ಸ್ನೇಹಶೀಲ ಭಾರತೀಯ ಮೂಲದ ಪರಿಚಾರಿಕರಿಂದ ಪಡೆದು, ತಿಂದು ಆನಂದಿಸಿದೆವು. ಅಲ್ಲಿಂದ ನಮ್ಮ ರಾತ್ರಿ ವಾಸಕ್ಕೆ ನಿಗದಿ ಪಡಿಸಿದ ಹೋಮ್ ಸ್ಟೇಗೆ ರಾತ್ರಿ 9 ಕ್ಕೆ ಬಂದು ಸೇರಿ, ಮೂರು ದಿನಗಳ ಎಡೆಬಿಡದ ಪ್ರವಾಸೀ ವೀಕ್ಷಣೆಗಳಿಗೆ ವಿರಾಮವಿಟ್ಟು, ನಿದ್ದೆಗೆ ಶರಣಾದೆವು.

ದಿನ 5 - ಮರಳಿ ಮನೆಗೆ

ಭಾರವಾದ ಹೃದಯದಿಂದಲೇ ವೆಂಕೂವರಿಗೆ ವಿದಾಯ ಹೇಳಿ ನಮ್ಮ ಮುಂದಿನ ಪ್ರಯಾಣವನ್ನು ಆರಂಭಿಸಿದೆವು. ಎರಡು ಗಂಟೆಯ ಪ್ರಯಾಣದ ಬಳಿಕ ಅಂತಾರಾಷ್ಟ್ರೀಯ ಗಡಿ ತಲುಪಿ, ಅಮೇರಿಕಾದ ವಲಸೆ ಅಧಿಕಾರಿಗಳಿಂದ ಪರಿಶೀಲಿಸಲ್ಪಟ್ಟು, ಅಮೇರಿಕಾ ಪ್ರವೇಶಿಸಿದೆವು. ನಾಲ್ಕು ಗಂಟೆಗಳ ಪ್ರಯಾಣದ ಬಳಿಕ ಒರೆಗಾನ್ ರಾಜ್ಯದ ಪೋರ್ಟ್ ಲ್ಯಾಂಡ್ ಸೇರಿದೆವು.

English summary
Travelogue to British Columbia's beautiful destination Vancouver by Prof K Vittal Das Bhat, Manipal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X