ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುದ್ದೀಪದ ಬೆಳಕಿನಲ್ಲಿ ಮೈಸೂರಿನಲ್ಲಿ 'ಅಂಬಾರಿ' ಪ್ರದಕ್ಷಿಣೆ

By ಬಿಎಂ ಲವಕುಮಾರ್
|
Google Oneindia Kannada News

ದಸರಾ ಸಂಭ್ರಮ ಮೈಸೂರಿಗೆ ಕಳೆಕಟ್ಟಿದೆ. ರಾತ್ರಿಯಾಗುತ್ತಿದ್ದಂತೆಯೇ ಇಡೀ ನಗರ ವಿದ್ಯುದ್ದೀಪದಿಂದ ಜಗಮಗಿಸುತ್ತಿದ್ದರೆ ಇಂದ್ರನ ಅಮರಾವತಿಯೇ ಧರೆಗಿಳಿದ ಅನುಭವವಾಗುತ್ತಿದೆ. ಎಲ್ಲಿ ನೋಡಿದರಲ್ಲಿ ಬಣ್ಣಬಣ್ಣದಿಂದ ಮಿನುಗುವ ವಿದ್ಯುದ್ದೀಪಗಳು ಕಣ್ಣಿಗೆ ಕಟ್ಟುತ್ತಿವೆ.

ಸಂಜೆಯಾಗುತ್ತಿದ್ದಂತೆಯೇ ಜಗಮಗಿಸುವ ಅರಮನೆ ನಗರಿಯಲ್ಲಿ ಹೆಜ್ಜೆ ಹಾಕುವುದು ಥೇಟ್ ಸ್ವರ್ಗ ಲೋಕದಲ್ಲಿ ಅಡ್ಡಾಡುತ್ತೇವೆಯೇನೋ ಎಂಬ ಅನುಭವ ನೀಡುತ್ತಿದೆ. ಈ ಬಾರಿ ವಿದ್ಯುದ್ದೀಪದ ಅಲಂಕಾರ ಈ ಹಿಂದಿನ ದಸರಾಗಳಿಗಿಂತ ಅದ್ಧೂರಿಯಾಗಿದ್ದು, ರಾಜಮಾರ್ಗಗಳು ಸೇರಿದಂತೆ ವೃತ್ತಗಳು ಒಂದಕ್ಕಿಂತ ಒಂದು ಸುಂದರವಾಗಿ ಕಂಗೊಳಿಸುತ್ತಿವೆ. ಇನ್ನು ಅರಮನೆಗಳು, ಪಾರಂಪರಿಕ ಕಟ್ಟಡಗಳು, ಮರಗಿಡಗಳು ವಿದ್ಯುದ್ದೀಪಗಳ ಬೆಳಕಿನಲ್ಲಿ ಮಿನುಗುತ್ತಿವೆ.

ಮೈಸೂರು ದಸರಾ 2022: ದಸರಾ ಬೆಳಕಿನ ವೈಭವಕ್ಕೆ ಚಾಲನೆಮೈಸೂರು ದಸರಾ 2022: ದಸರಾ ಬೆಳಕಿನ ವೈಭವಕ್ಕೆ ಚಾಲನೆ

ಇನ್ನು ವೃತ್ತಗಳಲ್ಲಿ ನಿರ್ಮಿಸಿರುವ ರಾಜಮಹಾರಾಜರು, ಕಲಾವಿದರು, ನಾಯಕರ ವಿದ್ಯುದ್ದೀಪದಿಂದಲೇ ನಿರ್ಮಾಣವಾದ ಕಲಾಕೃತಿಗಳು ಗಮನಸೆಳೆಯುತ್ತಿವೆ. ಈ ಸುಂದರ ದೃಶ್ಯಗಳನ್ನು ನೋಡಲೆಂದೇ ಡಬಲ್ ಡೆಕ್ಕರ್ ಅಂಬಾರಿ ಬಸ್ ರಸ್ತೆಗಿಳಿದಿದ್ದು ಇದರಲ್ಲಿ ಕುಳಿತು ಮೈಸೂರಿನ ಚೆಲುವನ್ನು ರಾತ್ರಿ ಹೊತ್ತಿನಲ್ಲಿ ವೀಕ್ಷಿಸುವುದೇ ಮರೆಯಲಾರದ ಸುಂದರ ಅನುಭವವಾಗಿದೆ.

 ದೀಪಾಲಂಕಾರ ನೋಡಲೆಂದೇ ನಗರದತ್ತ ಜನರು

ದೀಪಾಲಂಕಾರ ನೋಡಲೆಂದೇ ನಗರದತ್ತ ಜನರು

ಹಾಗೆ ನೋಡಿದರೆ ಡಬಲ್ ಡೆಕ್ಕರ್ ಅಂಬಾರಿ ಬಸ್‌ಗಳು ಈ ಹಿಂದಿನಿಂದಲೇ ಮೈಸೂರಿನಲ್ಲಿ ನಗರ ಪ್ರದಕ್ಷಿಣೆ ಮಾಡುತ್ತಿವೆ. ನಗರದಲ್ಲಿರುವ ಪ್ರವಾಸಿ ತಾಣಗಳಿಗೆ ಕರೆದೊಯ್ದು ತೋರಿಸಿಕೊಂಡು ಬರುತ್ತಿವೆ. ಇದೀಗ ದಸರಾ ಆರಂಭವಾಗಿರುವುದರಿಂದ ರಾತ್ರಿವೇಳೆ ನಗರದಲ್ಲಿ ದೀಪಾಲಂಕಾರ ಮಾಡಲಾಗಿದ್ದು ಅದನ್ನು ನೋಡಲು ಅಂಬಾರಿ ಬಸ್‌ಗಳತ್ತ ಜನ ಮುಖ ಮಾಡಿದ್ದಾರೆ. ಎರಡು ವರ್ಷಗಳ ಕಾಲ ಕೊರೊನಾದಿಂದ ಸಾರ್ವಜನಿಕರು ದಸರಾದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಸಂಜೆಯಾಗುತ್ತಿದ್ದಂತೆಯೇ ದೀಪಾಲಂಕಾರ ನೋಡಲೆಂದೇ ಜನರು ನಗರದತ್ತ ಬರುತ್ತಿದ್ದಾರೆ.

 ವಿಭಿನ್ನ ಅನುಭವ ನೀಡುವ ಪಯಣ

ವಿಭಿನ್ನ ಅನುಭವ ನೀಡುವ ಪಯಣ

ಡಬಲ್ ಡೆಕ್ಕರ್ ಅಂಬಾರಿ ಬಸ್‌ನಲ್ಲಿ ದೀಪಾಲಂಕಾರ ನೋಡುತ್ತಾ ಪ್ರಯಾಣಿಸುವುದು ವಿಭಿನ್ನ ಅನುಭವ ನೀಡುತ್ತದೆ. ಹಗಲಿನಲ್ಲಿಯೂ ಸಂಚರಿಸುವ ಈ ಬಸ್ ನಗರದ ಪ್ರಮುಖ ಪ್ರವಾಸಿ ತಾಣಗಳಿಗೆ ತೆರಳುವ ಪ್ರವಾಸಿಗರನ್ನು ಹೊತ್ತೊಯ್ದು ಸ್ಥಳಪರಿಚಯ ಮಾಡಿಸಲಿದೆ. ದೂರದಿಂದ ಬರುವ ಪ್ರವಾಸಿಗರಿಗೆ ಪ್ರವಾಸಿ ಸ್ಥಳಗಳನ್ನು ನೋಡಲು ಇದು ಅನುಕೂಲ ಮಾಡಿಕೊಡುತ್ತಿದೆ. ಹೀಗಾಗಿ ಪ್ರವಾಸಿಗರು ಡಬಲ್ ಡೆಕ್ಕರ್ ಅಂಬಾರಿ ಬಸ್‌ನಲ್ಲಿ ಪ್ರಯಾಣಿಸುವ ಮೂಲಕ ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ.

 ಹಲವು ಪ್ರವಾಸೊ ತಾಣಗಳ ಪರಿ

ಹಲವು ಪ್ರವಾಸೊ ತಾಣಗಳ ಪರಿ

ಪ್ರತಿದಿನ ನಗರದ ಪ್ರವಾಸೋದ್ಯಮ ಇಲಾಖೆಯ ಆವರಣ (ಹೋಟೆಲ್ ಮಯೂರ ಹೊಯ್ಸಳ) ದಿಂದ ಹೊರಡುವ ಬಸ್ ನಗರದ ಜಿಲ್ಲಾಧಿಕಾರಿ ಕಚೇರಿ, ಕುಕ್ಕರಹಳ್ಳಿಕೆರೆ, ಮೈಸೂರು ವಿಶ್ವವಿದ್ಯಾನಿಲಯ, ರಾಮಸ್ವಾಮಿ ಸರ್ಕಲ್, ಸಂಸ್ಕೃತ ಪಾಠಶಾಲೆ, ಕೆ.ಆರ್.ಸರ್ಕಲ್, ದೊಡ್ಡಗಡಿಯಾರ, ಅರಮನೆ ದಕ್ಷಿಣದ್ವಾರ, ಹಾರ್ಡಿಂಗ್ ಸರ್ಕಲ್, ಮೃಗಾಲಯ, ಕಾರಂಜಿಕೆರೆ, ಗೌರ್ಮೆಂಟ್ ಗೆಸ್ಟ್ ಹೌಸ್, ಸಂತ ಫಿಲೋಮಿನಾ ಚರ್ಚ್, ಬನ್ನಿಮಂಟಪ, ಆಯುರ್ವೇದಿಕ್ ಆಸ್ಪತ್ರೆ ಸರ್ಕಲ್, ರೈಲ್ವೆ ನಿಲ್ದಾಣದ ಮೂಲಕ ಹೊರಟ ಸ್ಥಳ ಹೋಟೆಲ್ ಮಯೂರ ಹೊಯ್ಸಳವನ್ನು ತಲುಪುತ್ತದೆ.

 ಸಿಸಿಟಿವಿ ಸೇರಿದಂತೆ ಹಲವು ಸೌಲಭ್ಯಗಳು

ಸಿಸಿಟಿವಿ ಸೇರಿದಂತೆ ಹಲವು ಸೌಲಭ್ಯಗಳು

ಅಂಬಾರಿ ಬಸ್ಸಿನ ಬಗ್ಗೆ ಹೇಳುವುದಾದರೆ ಇದನ್ನು ಬೆಂಗಳೂರಿನ ಕೆಎಂಎಸ್ ಬಸ್ ಕವಚ ನಿರ್ಮಾಣ ಸಂಸ್ಥೆ ತಯಾರು ಮಾಡಿದ್ದು, ಮೇಲೆ ಮತ್ತು ಕೆಳಗೆ ಸೇರಿ ನಲವತ್ತು ಆಸನಗಳಿವೆ. ಸುಮಾರು ಇಪ್ಪತೈದು ಅಡಿಯಷ್ಟು ಎತ್ತರವಿದೆ. ಇನ್ನು ಬಸ್ ಸಂಚರಿಸುವ ವೇಳೆ ಆಯಾಯ ಸ್ಥಳಗಳು ಬಂದಾಗ ಅದರ ಪರಿಚಯ ಬಸ್‌ನಲ್ಲಿ ಸಂಚರಿಸುವ ಪ್ರವಾಸಿಗರಿಗೆ ಮಾಡಿಕೊಡಲಾಗುತ್ತದೆ. ಮೇಲಿನ ಮಹಡಿ ತೆರೆದಿದ್ದರೆ ಕೆಳಗಿನ ಮಹಡಿ ಹವಾನಿಯಂತ್ರಿತವಾಗಿದ್ದು, ಸಿಸಿಟಿವಿ ಸೇರಿದಂತೆ ಎಲ್ಲ ಸೌಲಭ್ಯಗಳು ಇದರಲ್ಲಿದೆ.

ಒಟ್ಟಾರೆ ದಸರಾಗೆ ಮೈಸೂರಿಗೆ ಆಗಮಿಸುವ ಪ್ರವಾಸಿಗರು ಅಂಬಾರಿ ಬಸ್‌ನಲ್ಲಿ ಪ್ರಯಾಣ ಮಾಡಿ ಹೊಸ ಅನುಭವವನ್ನು ಪಡೆಯಲು ಸಾಧ್ಯವಾಗಲಿದೆ. ಇತರೆ ದಿನಗಳಲ್ಲಿ ಈ ಬಸ್‌ನಲ್ಲಿ ಪ್ರಯಾಣಿಸಿದವರು ಇದೀಗ ದಸರಾ ಬೆಳಕಿನಲ್ಲಿ ಪ್ರಯಾಣಿಸುವುದರ ಮೂಲಕ ಹೊಸ ಅನುಭವ ಪಡೆಯಲು ಸಾಧ್ಯವಾಗಲಿದೆ.

English summary
Ambaari double-decker bus attracted to tourists in Mysore. This bus traveled across the tourist place in the city with price of RS. 250
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X