ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿತ ತಾಯಿಯಿಂದ ಭ್ರೂಣಕ್ಕೆ ತೊಂದರೆಯೇ?; ವೈದ್ಯರಿಂದ ಸ್ಪಷ್ಟನೆ

|
Google Oneindia Kannada News

ನವದೆಹಲಿ, ಜುಲೈ 27: ಕೊರೊನಾ ಸೋಂಕಿಗೆ ಒಳಗಾಗಿರುವ ತಾಯಿಯು ಮಗುವಿಗೆ ಹಾಲುಣಿಸಬಹುದೇ, ಇದರಿಂದ ಮಗುವಿಗೆ ಸೋಂಕು ಹರಡುವ ಸಾಧ್ಯತೆಯಿದೆಯೇ? ತಾಯಿಯಾದವರು ಏನೇನು ಕ್ರಮಗಳನ್ನು ತೆಗೆದುಕೊಳ್ಳಬೇಕು, ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಗರ್ಭಿಣಿಯರಿಗೆ ಯಾವ್ಯಾವ ಸಮಸ್ಯೆಗಳಿವೆ ಎಂಬ ಕುರಿತ ಗೊಂದಲಗಳಿಗೆ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.

ಗರ್ಭಿಣಿಯರಿಗೆ ಕೋವಿಡ್-19 ಲಸಿಕೆ ನೀಡುವ ಇತ್ತೀಚಿನ ನಿರ್ಧಾರದ ಬಗ್ಗೆ ಮತ್ತು ಕೋವಿಡ್-19 ಸೋಂಕು ತಗುಲಿದ ಸಂದರ್ಭ ಗರ್ಭಿಣಿ ಹಾಗೂ ಮಗುವನ್ನು ರಕ್ಷಿಸಲು ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಕುರಿತು ನವದೆಹಲಿಯ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನ ಪ್ರಸೂತಿ ಸ್ತ್ರೀರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಂಜುಪುರಿ ಮಾತನಾಡಿದ್ದಾರೆ. ಮುಂದೆ ಓದಿ...

 ಗರ್ಭಿಣಿಯರಿಗೆ ಕೊರೊನಾ ಲಸಿಕೆ ಸಹಕಾರಿಯೇ?

ಗರ್ಭಿಣಿಯರಿಗೆ ಕೊರೊನಾ ಲಸಿಕೆ ಸಹಕಾರಿಯೇ?

ಮಹಿಳೆಯರು ಗರ್ಭ ಧರಿಸಿದ್ದರೂ ಕೊರೊನಾ ಲಸಿಕೆ ಪಡೆಯಲು ಅನುಮೋದನೆ ನೀಡಲಾಗಿದೆ. ಇದು ಹೇಗೆ ಸಹಕಾರಿ?

ಕೋವಿಡ್ ಮೊದಲನೇ ಅಲೆಗೆ ಹೋಲಿಸಿದರೆ ಎರಡನೇ ಅಲೆ ಸಂದರ್ಭ ಹಲವು ಮಹಿಳೆಯರಿಗೆ ಕೊರೊನಾ ಸೋಂಕು ತಗುಲಿದೆ. ಕೊರೊನಾ ಗಂಭೀರವಾಗಿದ್ದರೆ ಅದು ಗರ್ಭಿಣಿಯರ ಮೇಲೆ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು, ಅದರಲ್ಲೂ ವಿಶೇಷವಾಗಿ ಕೊನೆಯ ತ್ರೈಮಾಸಿಕದಲ್ಲಿ ತೊಂದರೆಯಾಗುವ ಸಾಧ್ಯತೆಯಿದೆ. ಈ ಸಮಯ ರಕ್ತದ ಆಮ್ಲಜನಕ ಇದ್ದಕ್ಕಿದ್ದಂತೆ ಕುಸಿದು ತಾಯಿ ಮತ್ತು ಮಗುವಿನ ಪ್ರಾಣಕ್ಕೂ ಅಪಾಯ ಎದುರಾಗಬಹುದು. ಹೀಗಾಗಿ ಲಸಿಕೆ ಗರ್ಭಿಣಿಯರಲ್ಲಿ ರೋಗ ಗಂಭೀರವಾಗುವುದನ್ನು ತಡೆಯಲು ಸಹಕಾರಿ.

ಕೊರೊನಾ ಲಸಿಕೆ; ಗರ್ಭಿಣಿಯರ ಆರೋಗ್ಯದ ಕುರಿತು ಎಚ್ಚರಿಕೆ ಕೊಟ್ಟ ಕೇಂದ್ರಕೊರೊನಾ ಲಸಿಕೆ; ಗರ್ಭಿಣಿಯರ ಆರೋಗ್ಯದ ಕುರಿತು ಎಚ್ಚರಿಕೆ ಕೊಟ್ಟ ಕೇಂದ್ರ

ಅಲ್ಲದೆ ತಾಯಿಗೆ ಲಸಿಕೆ ನೀಡುವುದರಿಂದ ನವಜಾತ ಶಿಶುಗಳಲ್ಲೂ ಪ್ರತಿಕಾಯ ಅಭಿವೃದ್ಧಿಯಾಗುತ್ತದೆ. ತಾಯಿಯ ರಕ್ತದ ಮೂಲಕ ಭ್ರೂಣದಲ್ಲೂ ಪ್ರತಿಕಾಯ ಅಭಿವೃದ್ಧಿ ಹೊಂದುತ್ತದೆ. ಬಾಣಂತಿಯರಲ್ಲಿ, ತಾಯಿಯ ಎದೆಹಾಲಿನ ಮೂಲಕ ನವಜಾತ ಶಿಶುಗಳಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ.

 ಲಸಿಕೆಯಿಂದ ಬಂಜೆತನ ಉಂಟಾಗುವುದೇ?

ಲಸಿಕೆಯಿಂದ ಬಂಜೆತನ ಉಂಟಾಗುವುದೇ?

ಲಸಿಕೆ ಕೆಲವು ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗುತ್ತದೆ ಎಂಬ ಅನುಮಾನ ವ್ಯಕ್ತಗೊಂಡಿದೆ. ಅದು ನಿಜವೇ?

ಇವೆಲ್ಲಾ ವದಂತಿಗಳಷ್ಟೇ, ತಪ್ಪು ಮಾಹಿತಿ ಸೋಂಕಿಗಿಂತ ಅತ್ಯಂತ ಹೆಚ್ಚು ಅಪಾಯಕಾರಿ. ಕೊರೊನಾ ಲಸಿಕೆ ಹೊಸದಾದರೂ ಅವುಗಳನ್ನು ಪರೀಕ್ಷೆಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಲಸಿಕೆಗಳು ನಿರ್ದಿಷ್ಟ ರೋಗಕಾರಕಗಳ ವಿರುದ್ಧ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಭಿವೃದ್ಧಿ ಮಾಡುತ್ತವೆ ಹಾಗೂ ದೇಹದ ಇತರೆ ಅಂಗಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಾವು ಹೆಪಟೈಟಿಸ್ ಬಿ, ಇನ್‌ಫ್ಲುಯೆನ್ಸಾ, ಪೊರ್ಟುಸಿಸ್ ಲಸಿಕೆಗಳನ್ನು ಗರ್ಭಿಣಿಯರಿಗೆ ನೀಡುತ್ತೇವೆ. ಆ ಮೂಲಕ ಅವರನ್ನು ಮತ್ತು ಇನ್ನೂ ಜನಿಸದ ಮಗುವನ್ನು ನಾನಾ ರೋಗಗಳಿಂದ ರಕ್ಷಿಸಲಾಗುತ್ತದೆ.

ಸುರಕ್ಷತೆಯ ಖಾತ್ರಿ ನಂತರವೇ ಗರ್ಭಿಣಿಯರಿಗೆ ಲಸಿಕೆ ನೀಡಲು ಅನುಮೋದನೆ ನೀಡಿದ್ದಾರೆ. ಲಸಿಕೆ ಬಂಜೆತನಕ್ಕೆ ಕಾರಣವಾಗುತ್ತದೆ ಎಂದು ಸಾಬೀತುಪಡಿಸುವ ಯಾವುದೇ ವೈಜ್ಞಾನಿಕ ದಾಖಲೆಗಳಿಲ್ಲ. ಈ ಲಸಿಕೆಗಳು ಯಾವುದೇ ರೀತಿಯಲ್ಲೂ ಸಂತಾನೋತ್ಪತ್ತಿಯ ಅಂಗಗಳ ಮೇಲೆ ಪರಿಣಾಮ ಬೀರುವುದಿಲ್ಲ.

 ಗರ್ಭಿಣಿಯರು ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳಬೇಕು?

ಗರ್ಭಿಣಿಯರು ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳಬೇಕು?

ಕೊರೊನಾ ಸೋಂಕು ತಗುಲದಂತೆ ರಕ್ಷಿಸಿಕೊಳ್ಳಲು ಗರ್ಭಿಣಿಯರು ಯಾವ ರೀತಿಯ ಮುಂಜಾಗ್ರತೆಗಳನ್ನು ಕೈಗೊಳ್ಳಬೇಕು?

ತಾಯಿಯಾಗುವ ನಿರೀಕ್ಷೆಯಲ್ಲಿರುವವರು ಮನೆಯಲ್ಲೂ ತಮ್ಮ ಕುಟುಂಬದ ಸದಸ್ಯರ ಜೊತೆ ಇರುವಾಗ ಮಾಸ್ಕ್ ಧರಿಸಲು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಶಿಫಾರಸ್ಸು ಮಾಡುತ್ತೇವೆ. ಆ ಮಹಿಳೆ ಹೊರಗೆ ಹೋಗದೇ ಇರಬಹುದು. ಆದರೆ ಅವರ ಕುಟುಂಬದ ಸದಸ್ಯರು ಉದ್ಯೋಗಕ್ಕಾಗಿ ಹೊರಗಡೆ ಹೋಗಿ ಬರಬಹುದು ಮತ್ತು ಇದರಿಂದ ಆಕೆಗೆ ಸೋಂಕು ತಗುಲಬಹುದು.
ಆದ್ದರಿಂದ ಗರ್ಭಧಾರಣೆ ಅವಧಿಯಲ್ಲಿ ಮಹಿಳೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ಪಾಲನೆ ಮಾಡಬೇಕು ಮತ್ತು ಮಗುವಿನ ಜನನದ ನಂತರವೂ ಸೋಂಕು ಹರಡದಂತೆ ಮತ್ತು ಸಂಬಂಧಿಸಿದ ಸಮಸ್ಯೆಗಳು ಎದುರಾಗದಂತೆ ನಿಯಂತ್ರಿಸಿಕೊಳ್ಳಬೇಕು.

ಕೋವಿಡ್ 19: ಗರ್ಭಾವಸ್ಥೆ, ಪ್ರಸವಾನಂತರದಲ್ಲಿ ಸೋಂಕು ಪ್ರಮಾಣ ಹೆಚ್ಚಳಕೋವಿಡ್ 19: ಗರ್ಭಾವಸ್ಥೆ, ಪ್ರಸವಾನಂತರದಲ್ಲಿ ಸೋಂಕು ಪ್ರಮಾಣ ಹೆಚ್ಚಳ

 ಸೋಂಕು ಕಾಣಿಸಿಕೊಂಡರೆ ಏನು ಮಾಡಬೇಕು?

ಸೋಂಕು ಕಾಣಿಸಿಕೊಂಡರೆ ಏನು ಮಾಡಬೇಕು?

ಗರ್ಭಿಣಿಯರಲ್ಲಿ ಕೋವಿಡ್-19 ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ ಏನು ಮಾಡಬೇಕು?

ಮೊದಲಿಗೆ ಅವರಲ್ಲಿ ಕೊರೊನಾ ಲಕ್ಷಣಗಳು ಕಂಡುಬಂದರೆ ಶೀಘ್ರವೇ ಅವರು ತಮ್ಮನ್ನು ತಾವು ಪರೀಕ್ಷೆಗೊಳಪಡಿಸಿಕೊಳ್ಳಬೇಕು. ಸೋಂಕು ಪತ್ತೆಯಾದ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ತಮ್ಮನ್ನು ತಾವು ಐಸೋಲೇಟ್ ಮಾಡಿಕೊಳ್ಳಬೇಕು, ಸಾಕಷ್ಟು ಪ್ರಮಾಣದ ದ್ರವಾಹಾರ ಸೇವಿಸಬೇಕು, ತಾಪಮಾನ ಪರೀಕ್ಷಿಸಿಕೊಳ್ಳಬೇಕು ಮತ್ತು ಪ್ರತಿ 4 ರಿಂದ 6 ಗಂಟೆಗೊಮ್ಮೆ ಆಮ್ಲಜನಕ ಸ್ಥಿತಿಗತಿ ಪರಿಶೀಲಿಸಿಕೊಳ್ಳಬೇಕು. ಪ್ಯಾರಸಿಟಮಾಲ್ ತೆಗೆದುಕೊಂಡ ನಂತರವೂ ತಾಪಮಾನ ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಆಮ್ಲಜನಕ ಸಾಂದ್ರತೆಯ ಮಟ್ಟ ಕುಸಿದರೆ ಅಥವಾ ಬೆಳಿಗ್ಗೆ 98, ಸಂಜೆ 97, ಮರುದಿನ ಮತ್ತಷ್ಟು ಕುಸಿತ ಹೀಗಾಗುತ್ತಿದ್ದರೆ, ನಿರಂತರವಾಗಿ ವೈದ್ಯರ ಸಂಪರ್ಕದಲ್ಲಿರಬೇಕು. ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಸಂಬಂಧ ಸಮಸ್ಯೆಗಳು, ಬೊಜ್ಜು ಇತ್ಯಾದಿ ಕಾಯಿಲೆಗಳನ್ನು ಮಹಿಳೆಯರು ಹೊಂದಿದ್ದರೆ ಹೆಚ್ಚು ಜಾಗರೂಕರಾಗಿಬೇಕು ಮತ್ತು ಅಂಥವರು ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಕೋವಿಡ್ ಚೇತರಿಕೆ ನಂತರವೂ ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಸಮಗ್ರ ಆರೋಗ್ಯ ತಪಾಸಣೆ ಮಾಡಿಸಬೇಕು.

 ತಾಯಿಯಿಂದ ಭ್ರೂಣಕ್ಕೆ ತೊಂದರೆಯಿದೆಯೇ?

ತಾಯಿಯಿಂದ ಭ್ರೂಣಕ್ಕೆ ತೊಂದರೆಯಿದೆಯೇ?

ತಾಯಿಯಿಂದ ಭ್ರೂಣಕ್ಕೆ ಕೊರೊನಾ ಸೋಂಕು ತಗುಲಬಹುದೇ?

ಈ ಆತಂಕವನ್ನು ಬೆಂಬಲಿಸಲು ಯಾವುದೇ ಸಾಕ್ಷ್ಯವಿಲ್ಲ. ನಾವು ಹಲವು ಅಧ್ಯಯನಗಳನ್ನು ನಡೆಸಿದ್ದೇವೆ ಮತ್ತು ಗರ್ಭಾಶಯದಲ್ಲಿ ಭ್ರೂಣವು ಬೆಳೆಯುವ ಪ್ಲಸೆಂಟಾ ಇರುವುದನ್ನು ಪತ್ತೆ ಹಚ್ಚಿದ್ದೇವೆ, ಅದು ರಕ್ಷಣಾತ್ಮಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಂಡುಕೊಂಡಿದ್ದೇವೆ. ನವಜಾತ ಶಿಶುಗಳಿಗೆ ಸೋಂಕು ತಗುಲಿದ ಪ್ರಕರಣಗಳನ್ನು ನಾವು ಕಂಡಿದ್ದೇವೆ, ಆದರೆ ತಾಯಿಯ ಗರ್ಭದಲ್ಲಿದ್ದಾಗ ಅಥವಾ ಜನನದ ನಂತರ ಸೋಂಕು ತಗುಲಿರುವುದು ಕಂಡುಬಂದಿಲ್ಲ.

 ತಮ್ಮ ಮಗುವಿಗಾಗಿ ಏನು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು?

ತಮ್ಮ ಮಗುವಿಗಾಗಿ ಏನು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು?

ಕೋವಿಡ್ ಪಾಸಿಟಿವ್ ಹೊಂದಿರುವ ತಾಯಿ ತನ್ನ ನವಜಾತ ಶಿಶುವನ್ನು ರಕ್ಷಿಸಲು ಯಾವ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು?

ತಾಯಿ ಮಗುವಿಗೆ ಹಾಲುಣಿಸುವುದನ್ನು ಮುಂದುವರಿಸಬೇಕು, ಆದರೆ ಹಾಲುಣಿಸದೇ ಇದ್ದ ಸಂದರ್ಭದಲ್ಲಿ ಮಗುವಿನಿಂದ 6 ಅಡಿ ಅಂತರ ಕಾಯ್ದುಕೊಳ್ಳುವುದು ಸೂಕ್ತ. ನೆಗೆಟಿವ್ ಹೊಂದಿರುವ ಆರೈಕೆದಾರರು ನವಜಾತ ಶಿಶುವಿನ ಆರೈಕೆಗೆ ಸಹಕಾರ ನೀಡಬೇಕು. ನವಜಾತ ಶಿಶುವಿಗೆ ಹಾಲುಣಿಸುವ ಮುನ್ನ ಆಕೆ ಚೆನ್ನಾಗಿ ಕೈಗಳನ್ನು ತೊಳೆದುಕೊಳ್ಳಬೇಕು ಮತ್ತು ಮಾಸ್ಕ್, ಫೇಸ್ ಶೀಲ್ಡ್ ಮತ್ತಿತರ ಸುರಕ್ಷತಾ ಸಾಧನಗಳನ್ನು ಬಳಸಬೇಕು. ಜೊತೆಗೆ ಸುತ್ತಲಿನ ಪರಿಸರವನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು.

ಒಂದು ವೇಳೆ ಮಗುವಿನ ಆರೈಕೆಗೆ ಯಾರೊಬ್ಬರೂ ಇಲ್ಲದೇ ಇದ್ದ ಸಂದರ್ಭ ತಾಯಿ ಎಲ್ಲ ಸಂದರ್ಭದಲ್ಲೂ ಮಾಸ್ಕ್ ಧರಿಸಬೇಕು ಮತ್ತು ಮಗುವಿನಿಂದ ಸಾಧ್ಯವಾದಷ್ಟು ದೈಹಿಕ ಅಂತರ ಕಾಯ್ದುಕೊಳ್ಳಬೇಕು. ತಾಯಿ ಮತ್ತು ಮಗು ಉತ್ತಮ ಗಾಳಿ - ಬೆಳಕು ಇರುವಂತಹ ಕೋಣೆಯಲ್ಲಿ ವಾಸಿಸಬೇಕು.

 ಸಾಂಕ್ರಾಮಿಕ ಸಮಯದಲ್ಲಿ ಪ್ರಸವಾನಂತರ ಖಿನ್ನತೆ ಬರುವುದೇ?

ಸಾಂಕ್ರಾಮಿಕ ಸಮಯದಲ್ಲಿ ಪ್ರಸವಾನಂತರ ಖಿನ್ನತೆ ಬರುವುದೇ?

ಮಹಿಳೆಯರಲ್ಲಿ ಪ್ರಸವಾನಂತರದ ಖಿನ್ನತೆ ಮತ್ತು ಆತಂಕ ಸಾಮಾನ್ಯವಾಗಿರುತ್ತದೆ. ಸಾಂಕ್ರಾಮಿಕದ ಸಮಯದಲ್ಲಿ ಮಹಿಳೆಯರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿರುವುದನ್ನು ನೀವು ಗಮನಿಸಿದ್ದೀರಾ?

ಖಂಡಿತವಾಗಿಯೂ ಗರ್ಭಿಣಿಯರಲ್ಲಿ ಮತ್ತು ಪ್ರಸವದ ನಂತರ ಮಹಿಳೆಯರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ಇಂತಹ ಸಂದರ್ಭದಲ್ಲಿ ಮಹಿಳೆಯರಲ್ಲಿ ಸಾಕಷ್ಟು ಹಾರ್ಮೋನ್ ಗಳು ಮತ್ತು ದೈಹಿಕ ಬದಲಾವಣೆಗಳು ಕಂಡುಬರುತ್ತವೆ. ಅಂಥ ಸಮಯದಲ್ಲಿ ಆಕೆಗೆ ಸಾಮಾಜಿಕ ಬೆಂಬಲದ ಅಗತ್ಯವಿರುತ್ತದೆ. ಸಾಮಾಜಿಕ ಬೆಂಬಲದ ಕೊರತೆಯಿಂದಾಗಿ ಆಕೆಗೆ ಒಂಟಿತನದ ಅನುಭವವಾಗಬಹುದು. ಅಸಹಾಯಕತೆ ಮತ್ತು ಖಿನ್ನತೆಗೂ ಒಳಗಾಗಬಹುದು.
ಪ್ರತಿಯೊಬ್ಬರಿಗೂ, ಅದರಲ್ಲೂ ವಿಶೇಷವಾಗಿ ಗರ್ಭಿಣಿಯರಲ್ಲಿ ಮತ್ತು ಬಾಣಂತಿ ತಾಯಂದಿರಲ್ಲಿ 15 ದಿನಗಳ ಐಸೋಲೇಷನ್ ಅತ್ಯಂತ ಕಷ್ಟಕರ. ಅಂತಹ ಸಮಯದಲ್ಲಿ ತನ್ನ ಮಗುವಿನ ಆರೋಗ್ಯ ಸ್ಥಿತಿಗತಿ ಬಗ್ಗೆ ಆಕೆ ಹೆಚ್ಚು ಆತಂಕಕ್ಕೆ ಒಳಗಾಗುತ್ತಾಳೆ ಮತ್ತು ಆಕೆಯ ಮಾನಸಿಕ ಸ್ಥಿತಿಗತಿಯ ಮೇಲೆ ಪರಿಣಾಮವಾಗುತ್ತದೆ.

ಈ ಸಮಯದಲ್ಲಿ ಮಹಿಳೆಯರಿಗೆ ನಿರಂತರ ಬೆಂಬಲ ಮತ್ತು ಭರವಸೆ ನೀಡುವುದು ಅತ್ಯಂತ ಮುಖ್ಯ. ಮಹಿಳೆ ಖಿನ್ನತೆಗೆ ಒಳಗಾಗಿರುವುದು ಕಂಡುಬಂದರೆ ವೈದ್ಯಕೀಯ ನೆರವು ನೀಡಬೇಕು. ಒಮ್ಮೊಮ್ಮೆ ಮನಃಶಾಸ್ತ್ರಜ್ಞರಿಂದ ಆಪ್ತ ಸಮಾಲೋಚನೆ ಅಗತ್ಯವಿದೆ ಎಂದರ್ಥ. ವೈದ್ಯರು ಹಾಗೂ ಕುಟುಂಬದ ಸದಸ್ಯರು ಆ ಸಮಯದಲ್ಲಿ ಮಹಿಳೆಯ ವರ್ತನೆಯ ಮೇಲೆ ಗಂಭೀರ ನಿಗಾ ಇರಿಸುವುದು ಅವಶ್ಯಕ.

 ಗರ್ಭಿಣಿಯರಿಗೆ, ತಾಯಂದಿರಿಗೆ ಸಲಹೆಗಳು

ಗರ್ಭಿಣಿಯರಿಗೆ, ತಾಯಂದಿರಿಗೆ ಸಲಹೆಗಳು

ಗರ್ಭಿಣಿಯರಿಗೆ, ತಾಯಂದಿರಿಗೆ ಯಾವ ಸಲಹೆಗಳನ್ನು ನೀಡಲು ಬಯಸುತ್ತೀರಿ?

ಸುರಕ್ಷಿತವಾಗಿರಿ, ಸೂಕ್ತ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಿ. ಕೋವಿಡ್-19 ಸೂಕ್ತ ನಡವಳಿಕೆ ಪಾಲಿಸಿ. ಕೊರೊನಾ ಲಸಿಕೆ ಪಡೆದುಕೊಳ್ಳಿ ಮತ್ತು ಯಾರನ್ನೂ ಭೇಟಿ ಮಾಡುವುದರಿಂದ ದೂರವಿರಿ. ಕೋವಿಡ್ ಸೋಂಕಿನ ಲಕ್ಷಣಗಳಾದ ಜ್ವರ, ಗಂಟಲು ನೋವು, ರುಚಿ ಅಥವಾ ವಾಸನೆ ಸಿಗದಿರುವುದು ಅಥವಾ ಕೋವಿಡ್ ಪಾಸಿಟಿವ್ ವ್ಯಕ್ತಿಯ ಜೊತೆ ಸಂಪರ್ಕಕ್ಕೆ ಬಂದಾಗ ವೈದ್ಯಕೀಯ ಸಹಾಯ ಅಗತ್ಯವಿರುತ್ತದೆ. ಸೋಂಕು ಪತ್ತೆಯಲ್ಲಿ ಯಾವುದೇ ವಿಳಂಬ ಮಾಡುವುದು ಸರಿಯಲ್ಲ ಮತ್ತು ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬಾರದು. ಪ್ರಸವ ನಂತರ ತಕ್ಷಣಕ್ಕೆ ಅಳವಡಿಸಿಕೊಳ್ಳಲು ಪೋಸ್ಟ್ ಪಾರ್ಟಮ್ ಇಂಟ್ರಾ ಯುಟರೈನ್ ಡಿವೈಸ್(ಸಿಯು ಟಿ) ಅಳವಡಿಸಿಕೊಳ್ಳಲು ಸೂಚಿಸುತ್ತೇವೆ. ಇದು ಮಗುವಿನ ಜನನದ ನಂತರ ಅವರು ಅನಗತ್ಯವಾಗಿ ಆಸ್ಪತ್ರೆಗೆ ಭೇಟಿ ನೀಡುವುದನ್ನು ತಪ್ಪಿಸುತ್ತದೆ ಮತ್ತು ಯೋಜನೆ ಇಲ್ಲದ ಗರ್ಭಧಾರಣೆಯ ಅಪಾಯ ತಪ್ಪಿಸುತ್ತದೆ.

English summary
Dr Manju Puri, Head, Department, Obstetrics and Gynaecology, Lady Hardinge Medical College, New Delhi talks about the recent decision to administer Covid-19 vaccination during pregnancy, and what precautions women should take to protect herself and her child from catching COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X