• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಫಿನಾಡಿನ ಮೂವರು ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಅಕ್ಟೋಬರ್ 28: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ರಾಜ್ಯ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಗೆ ಕಾಫಿನಾಡಿನ ಮೂವರು ಆಯ್ಕೆಯಾಗಿದ್ದಾರೆ. ಈ ಬಾರಿ 65 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯಿಂದ ಸಮಾಜ ಸೇವೆ ಕ್ಷೇತ್ರಕ್ಕೆ ಮೋಹಿನಿ ಸಿದ್ದೇಗೌಡ ಹಾಗೂ ಪ್ರೇಮಾ ಕೋದಂಡರಾಮ ಶ್ರೇಷ್ಟಿ, ಶಿಕ್ಷಣ ಕ್ಷೇತ್ರದಿಂದ ಎಂ.ಎನ್.ಷಡಕ್ಷರಿ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂವರ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದೆ.

ಪ್ರೇಮಾ ಕೋದಂಡರಾಮ ಶ್ರೇಷ್ಟಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ "ಅಮ್ಮ" ಎಂದೇ ಕರೆಯಲಾಗುವ ಪ್ರೇಮಾ ಕೋದಂಡರಾಮ ಶ್ರೇಷ್ಠಿಯವರ ಸಮಾಜ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಜಿಲ್ಲೆಯ ಇಬ್ಬರು ಮಹಿಳಾ ಮಣಿಗಳಿಗೆ ಪ್ರಶಸ್ತಿ ಸಂದಿರುವುದು ವಿಶೇಷವಾಗಿದೆ.

65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ: ಪುರಸ್ಕೃತರ ಪಟ್ಟಿ

ಕೋಲಾರ ಜಿಲ್ಲೆಯ ಮಂಚೇನಹಳ್ಳಿ ಗ್ರಾಮದ ತಲ್ಲಂ ದೊಡ್ಡನಾರಾಯಣ ಶ್ರೇಷ್ಟಿ ಮತ್ತು ಅನ್ನಪೂರ್ಣಮ್ಮ ದಂಪತಿ ಮಗಳಾದ ಪ್ರೇಮ ಕೋದಂಡರಾಮ ಶ್ರೇಷ್ಟಿ ಅವರು ಜನಿಸಿದ್ದು 1939ರಲ್ಲಿ. 7ನೇ ತರಗತಿವರೆಗೂ ಶಿಕ್ಷಣ ಪಡೆದುಕೊಂಡ ಅವರು ಕಾಫಿಕಣಜ ಚಿಕ್ಕಮಗಳೂರು ಮೈಸೂರು ಲಚ್ಚಯ್ಯ ಶೆಟ್ಟರ ಮನೆತನಕ್ಕೆ ಸೊಸೆಯಾಗಿ ಬಂದರು. ತಮ್ಮ 15ನೇ ವಯಸ್ಸಿನಲ್ಲೇ ಭಗವದ್ಗೀತಾ ಪಠಣವನ್ನು ಕಂಠಸ್ಥಗೊಳಿಸಿಕೊಂಡ ಅವರು, ತಮ್ಮ ಮನೆ ಪರಿಸರದಲ್ಲಿ ಮಕ್ಕಳನ್ನು ಒಟ್ಟುಗೂಡಿಸಿ ಗೀತೆಯನ್ನು ಕಲಿಸುತ್ತಿದ್ದರು.

ಎಂ.ಜೆ.ಕೋದಂಡರಾಮ ಶ್ರೇಷ್ಟಿ ದಂಪತಿ ತಮ್ಮ ಬದುಕಿನುದ್ದಕ್ಕೂ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯ ಸಿರಿಹಬ್ಬವನ್ನೇ ಏರ್ಪಡಿಸಿದ್ದರು. ಅನೇಕ ಸಾಹಿತಿಗಳನ್ನು ಆಹ್ವಾನಿಸಿ ಸಾಹಿತ್ಯ ಸಮಾರಂಭಗಳನ್ನು ಏರ್ಪಡಿಸಿ ಸಾಹಿತ್ಯದ ಔತಣ ಉಣಬಡಿಸಿದ್ದರು. ಸಾಹಿತ್ಯದಂತೆ ಆಧ್ಯಾತ್ಮದಲ್ಲೂ ಅನನ್ಯ ಆಸಕ್ತಿ ಹೊಂದಿದ್ದ ದಂಪತಿ ಧರ್ಮದೀಪ ಎಂದು ನಾಮಾಂಕಿತಗೊಂಡಿದ್ದು, ಅನೇಕ ಸಾಧು ಸಂತರನ್ನು ಆಹ್ವಾನಿಸಿ ಧಾರ್ಮಿಕ ಸಭೆಗಳನ್ನು ಏರ್ಪಡಿಸಿದ್ದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್. ಎಸ್. ಹೆಗಡೆ ಕುಂದರಗಿ ಪರಿಚಯ

ಪ್ರೇಮಾ ಕೋದಂಡರಾಮ ಶ್ರೇಷ್ಟಿ ಅವರ ಪತಿ ಕೋದಂಡ ರಾಮ ಶ್ರೇಷ್ಟಿ ಅವರೂ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದು, 1981ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಪ್ರಶಸ್ತಿ ನೀಡಿ ಪುರಸ್ಕರಿಸಿದ್ದರು. ವಿವಿಧ ಸಂಘ ಸಂಸ್ಥೆಗಳ ಮೂಲಕ 25ಕ್ಕೂ ಹೆಚ್ಚು ಆಧ್ಯಾತ್ಮಿಕ ಸಂಸ್ಥೆಗಳನ್ನು ಸಂದರ್ಶಿಸಿ ಕಾವ್ಯಾವಾಚನ, ಗೀತಾ ತರಗತಿಗಳನ್ನು ನಡೆಸಿಕೊಟ್ಟಿದ್ದು, ಚಿಕ್ಕಮಗಳೂರು ನಗರದಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಆರ್ಯವೈಶ್ಯ ಮಹಿಳಾ ಸಮ್ಮೇಳನ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಭಗವದ್ಗೀತೆಯ ಗೀತ ಗಾಯನದಲ್ಲಿ ಅಪಾರಜ್ಞಾನ ಸಂಪಾದಿಸಿರುವ ಇವರು ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಇವರ ಈ ಸಾಧನೆಗೆ ಅನೇಕ ಸಂಘಸಂಸ್ಥೆಗಳು ಗೌರವಿಸಿದ್ದು, ಚಿದಾನಂದ ಮಹಾರಾಜ್ ಜೀ ಅವರು "ಗುರುರತ್ನ" ಬಿರುದು ನೀಡಿದ್ದಾರೆ. ಚಿಕಾಗೋ ರಾಮಕೃಷ್ಣಾಶ್ರಮ ಶ್ರೀಗಳು ಪಾರಿತೋಷಕ ನೀಡಿ ಗೌರವಿಸಿದ್ದು, ಇವರ ಸೇವೆಯನ್ನು ಪರಿಗಣಿಸಿದ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

ಮೋಹಿನಿ ಸಿದ್ದೇಗೌಡ

ಸಮಾಜ ಸೇವೆ ಕ್ಷೇತ್ರದಿಂದ ಆಯ್ಕೆಯಾಗಿರುವ ಮೋಹಿನಿ ಸಿದ್ದೇಗೌಡ ಅವರು ಸಕಲೇಶಪುರ ತಾಲ್ಲೂಕು ಅಂಜುಗೋಡನಹಳ್ಳಿ ಗ್ರಾಮದವರು. ಎಸ್ಸೆಸ್ಸೆಲ್ಸಿವರೆಗೂ ಶಿಕ್ಷಣ ಪಡೆದಿದ್ದ ಇವರು ಚಿಕ್ಕಮಗಳೂರಿನಲ್ಲಿ ಸುಮಾರು 40 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ಸಾಮಾಜಿಕ ಪಿಡುಗುಗಳ ವಿರುದ್ಧದ ಹೋರಾಟದ ಮುಂದಾಳತ್ವ ವಹಿಸಿ ಯಶಸ್ಸು ಕಂಡವರು.

23ನೇ ವಯಸ್ಸಿನಿಂದಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಅವರು, 15ಕ್ಕೂ ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ಸೇವೆ ಸಲ್ಲಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಿಮ್ಯಾಂಡ್ ಹೋಮ್ ಸದಸ್ಯರಾಗಿದ್ದರು. ಯುವಜನ ಮತ್ತು ಕ್ರೀಡಾ ಇಲಾಖೆ ಯುವ ಪ್ರಶಸ್ತಿ ಆಯ್ಕೆ ಸಮಿತಿ, ಭಾರತ ಸೇವಾದಳದ ಜಿಲ್ಲಾ ಸಮಿತಿ, ನಗರಸಭೆ ಸದಸ್ಯೆ, ಚಿಕ್ಕಮಗಳೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ, ಜಿಲ್ಲಾ ಮಹಿಳಾ ಒಕ್ಕೂಟ, ಜಾಗೃತಿ ಮಹಿಳಾ ಸಮಾಜ ಸದಸ್ಯೆ, ಜಿಲ್ಲಾ ಶಿಶು ಕಲ್ಯಾಣ ಸಮಿತಿ, ಪ್ರಸ್ತುತ ಕಸ್ತೂರಿ ಬಾ ಸದನದ ಕೌಟುಂಬಿಕ ಸಲಹಾ ಕೇಂದ್ರದಲ್ಲಿ ಉತ್ಸಾಹದಿಂದ ಸೇವೆ ಸಲ್ಲಿಸುತ್ತಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ; ಬಳ್ಳಾರಿ ವೈದ್ಯೆ ನಾಗರತ್ನ ಪರಿಚಯ

ಕೌಟುಂಬಿಕ ಸಲಹಾ ಕೇಂದ್ರ ಉದ್ಯೋಗಸ್ಥ ಮಹಿಳೆಯರ ವಸತಿಗೃಹ, ಮಹಿಳಾ ಮಂಡಳಿ ಮುಖಾಂತರ ಮಹಿಳೆಯರ ಅಭಿವೃದ್ಧಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರಿಗೆ, 2001-02ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ, 2018-19ರಲ್ಲಿ ಸುವರ್ಣಾದೇವಿ ಪ್ರಶಸ್ತಿ, 2019-20ರಲ್ಲಿ ಜಾಗೃತಿ ಸಂಘದಿಂದ ಮಹಿಳಾ ರತ್ನ ಪ್ರಶಸ್ತಿ ದೊರಕಿದೆ.

ಎಂ.ಎನ್. ಷಡಕ್ಷರಿ

ಶಿಕ್ಷಣ ಕ್ಷೇತ್ರದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಎಂ.ಎನ್. ಷಡಕ್ಷರಿ ಅವರು, ಬೆಳೆಗಾರ ಮುಗುಳುವಳ್ಳಿ ಎಂ.ನಂಜಪ್ಪಶೆಟ್ಟಿ ಮತ್ತು ಪಾರ್ವತಮ್ಮ ಅವರ ಪುತ್ರ. ಬಿಎಸ್ ‍ಸಿ ಬಿಇಡಿ ಪದವಿ ಪಡೆದಿರುವ ಇವರು ಮೌಂಟೆನ್ ‍ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಬಳಿಕ ತಾವೇ ಮಾಡೆಲ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ ತೆರೆದರು.

ಸ್ಕೌಟ್ಸ್ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಇವರು, ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿ ಜಿಲ್ಲೆಯಲ್ಲಿ ಮೂಂಚೂಣಿಗೆ ಬರಲು ಕಾರಣರಾದವರು. ಸ್ಕೌಟ್ ಶಿಕ್ಷಕರಾಗಿ ನೂರಾರು ಮಕ್ಕಳನ್ನು ರಾಷ್ಟ್ರಪತಿ ಪುರಸ್ಕಾರ ಅರ್ಹರನ್ನಾಗಿಸಿದ ಹೆಗ್ಗಳಿಕೆ ಇವರದ್ದು.

ಸ್ಕೌಟ್ಸ್ ಮತ್ತು ಪರಿಸರಕ್ಕೆ ಸಂಬಂಧಿಸಿದ ಅನೇಕ ಲೇಖನಗಳನ್ನೂ ಬರೆದಿದ್ದಾರೆ. 1955ರಲ್ಲಿ ಸ್ಕೌಟ್ ವಿದ್ಯಾರ್ಥಿಯಾಗಿ ಸೇರ್ಪಡೆಯಾದ ಇವರು 1968 ಮೌಂಟೆನ್ ವ್ಯೂ ಶಾಲೆಯ ರಾಬಿನ್ ಸ್ಕೌಟ್ ದಳದ ಜವಾಬ್ದಾರಿ ವಹಿಸಿಕೊಂಡಿದ್ದು, 1967 ಮೂಲ ತರಗತಿ ಶಿಬಿರ ವುಡ್ ಬ್ಯಾಡ್ಜ್ ತರಬೇತಿಯ ಸಹಾಯಕ ಮುಖಂಡರಾಗಿ, ಕುಮಟಾದಲ್ಲಿ ನಡೆದ ರಾಜ್ಯ ಜಾಂಬೂರಿಯಲ್ಲಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ.

ಇವರ ಸೇವೆಯನ್ನು ಗುರುತಿಸಿ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಜಿಲ್ಲಾ ವಿಜ್ಞಾನ ಪ್ರಶಸ್ತಿ, ಪರಿಸರಶಿಕ್ಷಕ ಪ್ರಶಸ್ತಿ, ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಗೆ ಸಲ್ಲಿಸಿರುವ ಉತ್ತಮ ಸೇವೆಗಾಗಿ 2011ರಲ್ಲಿ ರಾಷ್ಟ್ರಪತಿಯವರಿಂದ "ಸಿಲ್ವರ್ ಸ್ಟಾರ್'' ಪುರಸ್ಕಾರ, ಪರಿಸರ ಶಿಕ್ಷಣದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸ್ಯಾಂಚೂರಿ ಮ್ಯಾಗ್ ‍ಜೀನ್ ರವರು ನೀಡುವ ರಾಷ್ಟ್ರೀಯ ಪುರಸ್ಕಾರ "ಗ್ರೀನ್ ಟೀಚರ್" ಪ್ರಶಸ್ತಿಗೆ ಭಾಜನರಾಗಿದ್ದಾರೆ.

English summary
Three from chikkamagaluru district honored with rajyotsava award 2020. Prema kodandarama shresti and mohini siddegowda from social work field and shadakshari from education field awarded this time. Here is their short introduction
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X