• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಗನ್ ರೆಡ್ಡಿ ಪಟ್ಟುಗಳಿಗೆ ಹಳೇ ಜಟ್ಟಿ ಚಂದ್ರಬಾಬು ಚಿತ್; ಇದು ಆಂಧ್ರ ಪಾಲಿಟಿಕ್ಸ್

By ಅನಿಲ್ ಆಚಾರ್
|

ಆತ ಕೆಲಸದ ವಿಷಯದಲ್ಲಿ ರಾಕ್ಷಸ. ಹಠದಲ್ಲಿ ಥೇಟ್ ಅವರಪ್ಪನಂತೆಯೇ. ಮುಂಚೆ ಇದ್ದ ಹುಂಬತನ ಈಗಿಲ್ಲ. ಆದರೆ 'ಯಾವುದರ ಬೆಲೆ ಎಷ್ಟು' ಎಂದು ನಿರ್ಧರಿಸಬಲ್ಲ ಶುದ್ಧ ವ್ಯಾಪಾರಿ. ಆತ ಅಪಾಯಕಾರಿ ಎಂಬುದೇನೋ ಗೊತ್ತಿತ್ತು. ಆದರೆ ಈ ಪರಿಯಾಗಿ ಬೆಳೆಯಬಹುದು, ಚಂದ್ರಬಾಬು ನಾಯ್ಡು ಅಂಥವರನ್ನು ಹೀಗೆ ನೆಲ ಕಚ್ಚಿಸಬಹುದು ಎಂಬ ಅಂದಾಜಿರಲಿಲ್ಲ ಎನ್ನುತ್ತಾರೆ ಆಂಧ್ರಪ್ರದೇಶದ ರಾಜಕಾರಣ ಬಲ್ಲವರು.

ಈ ಮಾತುಗಳೆಲ್ಲ ಕೇಳಿಬರುವುದು ವೈ.ಎಸ್.ಜಗನ್ ಮೋಹನ್ ರೆಡ್ಡಿ ಬಗ್ಗೆ. ಆಂಧ್ರಪ್ರದೇಶದಲ್ಲಿ ಅದ್ಯಾವ ಪರಿ ವೈಎಸ್ ಆರ್ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದೆ ಅಂದರೆ, ಉಳಿದೆಲ್ಲ ಪಕ್ಷಗಳಿಗೆ ಅಲ್ಲಿ ಚೇತರಿಕೆ ಕಾಣುವುದಕ್ಕೆ ಇನ್ನೆಷ್ಟು ಸಮಯ ಬೇಕೋ ಎಂದು ಪ್ರಶ್ನೆ ಮಾಡಿಕೊಳ್ಳುವ ಮಟ್ಟಿಗೆ ಜಗನ್ ಜಯ ಸಾಧಿಸಿದ್ದಾರೆ.

ಆಂಧ್ರದಲ್ಲಿ ನಾಯ್ಡು ಯುಗಾಂತ್ಯ! ಮೇ 30 ರಂದು ಜಗನ್ ಗದ್ದುಗೆಗೆ

ಆಂಧ್ರಪ್ರದೇಶದಲ್ಲಿ ತನ್ನ ಪರವಾಗಿ ಇರುವ ಅಲೆಯನ್ನು ಗುರುತಿಸಿದ ಜಗನ್ ಚೂರು ಕೂಡ ವ್ಯರ್ಥ ಮಾಡಿಕೊಳ್ಳದೆ ಅಷ್ಟನ್ನೂ ತಮ್ಮ ಪಕ್ಷಕ್ಕೆ ಬಳಸಿಕೊಂಡಿದ್ದಾರೆ. ದೊಡ್ಡ ಮಟ್ಟದ ಜಯ ಸಾಧಿಸಿರುವ ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಲಿದ್ದಾರೆ. ತನ್ನ ರಾಜಕೀಯ ಎದುರಾಳಿ ಚಂದ್ರಬಾಬು ನಾಯ್ಡುವನ್ನು ಅಕ್ಷರಶಃ ಹೊಸಕಿ ಹಾಕಿಬಿಟ್ಟಿದ್ದಾರೆ. ಲೋಕಸಭೆ, ವಿಧಾನಸಭೆ ಎರಡರಲ್ಲೂ ಜಗನ್ ಪಕ್ಷದ್ದೇ ದರ್ಬಾರ್.

ಕಳೆದ ಬಾರಿ ಆಘಾತಕಾರಿ ಸೋಲು ಕಂಡಿದ್ದರು ಜಗನ್ ರೆಡ್ಡಿ

ಕಳೆದ ಬಾರಿ ಆಘಾತಕಾರಿ ಸೋಲು ಕಂಡಿದ್ದರು ಜಗನ್ ರೆಡ್ಡಿ

ಕಳೆದ ಬಾರಿ ನಾಯ್ಡುವಿಂದ ಆಘಾತಕಾರಿ ಸೋಲು ಕಂಡಿದ್ದರು ಜಗನ್. ಆದರೆ ತನ್ನ ತಂದೆ ರಾಜಶೇಖರ್ ರೆಡ್ಡಿಯಲ್ಲಿದ್ದ ಅದೇ ಹೋರಾಟದ ಕೆಚ್ಚಿನಲ್ಲಿ ಪುಟಿದೆದ್ದು ಬಂದಿದ್ದಾರೆ. ಈ ಹಿಂದಿನ ಸೋಲು ನೆನೆಸಿಕೊಂಡು ಸುಮ್ಮನೆ ಕೂರದ ಜಗನ್, ಆಡಳಿತಾರೂಢ ಟಿಡಿಪಿ ಸರಕಾರದ ವಿರುದ್ಧ ವಿಪಕ್ಷವಾಗಿ ಕತ್ತಿಯನ್ನೇ ಝಳಪಿಸಿದರು. ರಾಜ್ಯದಾದ್ಯಂತ ಮೂರೂವರೆ ಸಾವಿರ ಕಿ.ಮೀ.ನಷ್ಟು ಪಾದಯಾತ್ರೆ ಮಾಡಿದರು. ವೈಎಸ್ ಆರ್ ಕಾಂಗ್ರೆಸ್ ಕಾರ್ಯಕರ್ತರನ್ನು ಉತ್ತೇಜಿಸಿದರು. ಅವರ ಪ್ರಯತ್ನ ಹುಸಿ ಹೋಗಲಿಲ್ಲ. ಅದರ ಫಲಿತಾಂಶ ಈ ಬಾರಿಯ ಚುನಾವಣೆಯಲ್ಲಿ ಸಿಕ್ಕಿದೆ. ಅಂದ ಹಾಗೆ ಜಗನ್ ದಣಿವರಿಯದ ದುಡಿಮೆಯ ವ್ಯಕ್ತಿ. ಆದರೆ ತುಂಬ ಮಾತನಾಡದ, 'ಮೂಡಿ' ವ್ಯಕ್ತಿ. ಆದರೆ ಯಾವಾಗ ಆಪ್ತ ವಲಯದಿಂದ ಸಲಹೆಗಳು ಬಂದವೋ ಜಗನ್ ಬದಲಾದರು. ತಮ್ಮ ಸಂಪೂರ್ಣ ಶಕ್ತಿ, ಸಾಮರ್ಥ್ಯವನ್ನು ಪ್ರಚಾರಕ್ಕೆ ಮೀಸಲಿಟ್ಟರು. ಶತಾಯಗತಾಯ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಹಾಕಿದ ಶ್ರಮ ಹುಸಿ ಹೋಗಲಿಲ್ಲ.

ಪ್ರಧಾನಿ ಮೋದಿ ವಿರುದ್ಧದ ನಾಯ್ಡು ಟೀಕೆಯಿಂದ ಸಹಾಯ

ಪ್ರಧಾನಿ ಮೋದಿ ವಿರುದ್ಧದ ನಾಯ್ಡು ಟೀಕೆಯಿಂದ ಸಹಾಯ

ಎನ್ ಡಿಎಯಿಂದ ಹೊರಬಂದ ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶದ ಉದ್ಧಾರಕ್ಕೆ ಪ್ರಧಾನಿ ಮೋದಿ ಏನೂ ಸಹಾಯ ಮಾಡಲಿಲ್ಲ ಎಂದು ದೂರಿದರು. ಆ ಅಂಶ ಕೂಡ ಜಗನ್ ಗೆ ನೆರವಾಯಿತು. ಸಿಟ್ಟಾದ ಬಿಜೆಪಿ ಬೆಂಬಲಿಗರು ಜಗನ್ ಪರ ನಿಂತರು. ಆದರೆ ತಂತ್ರ ಹೆಣೆಯುವ ದೃಷ್ಟಿಯಿಂದ ವೈಎಸ್ ಆರ್ ಕಾಂಗ್ರೆಸ್ ಜತೆಗೆ ಬಿಜೆಪಿಯು ಅಧಿಕೃತವಾಗಿ ಯಾವುದೇ ಮೈತ್ರಿ ಮಾಡಿಕೊಂಡಿರಲಿಲ್ಲ. ಇನ್ನು ಪಕ್ಕದ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಕೂಡ ಜಗನ್ ಪರ ನಿಂತರು. ಆದರೆ ಅದು ಅಧಿಕೃತವಾಗಿಯೇನೂ ಅಲ್ಲ. ತಮ್ಮ ಹಳೆ ಮಿತ್ರ ಹಾಗೂ ಹೊಸದಾಗಿ ಶತ್ರುವಾಗಿ ಬದಲಾಗಿದ್ದ ಚಂದ್ರಬಾಬು ನಾಯ್ಡು ವಿರುದ್ಧ ಕೆಸಿಆರ್ ಗೆ ದ್ವೇಷ ತೀರಿಸಿಕೊಳ್ಳಬೇಕಿತ್ತು. ಇವೆಲ್ಲಕ್ಕೂ ಮುಖ್ಯವಾಗಿ ರಣತಂತ್ರ ರೂಪಿಸುವುದಕ್ಕೆ ಜಗನ್ ಬೆನ್ನಿಗೆ ನಿಂತಿದ್ದು ಪ್ರಶಾಂತ್ ಕಿಶೋರ್. ಎರಡು ವರ್ಷಗಳ ಹಿಂದೆ ತನ್ನ ಪಕ್ಷದ ಪ್ರಚಾರ ಕಾರ್ಯಗಳಿಗೆ ಐ-ಪ್ಯಾಕ್ ನ ಪ್ರಶಾಂತ್ ಕಿಶೋರ್ ರನ್ನು ಜಗನ್ ನೇಮಕ ಮಾಡಿಕೊಂಡಿದ್ದರು. ನಾಯ್ಡು ಹೈಟೆಕ್ ಪ್ರಚಾರಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಹೈದರಾಬಾದ್ ನಲ್ಲಿ ಕಚೇರಿ ತೆರೆದರು ಪ್ರಶಾಂತ್.

ಆಂಧ್ರದಲ್ಲಿ ಚಂದ್ರಬಾಬು ನಾಯ್ಡುಗೆ ಇದು ಅಂತಿಂಥ ಮುಖಭಂಗವಲ್ಲ!

ಸಂಪನ್ಮೂಲದ ಕೊರತೆ ಎದುರಿಸುತ್ತಿರುವ ರಾಜ್ಯ

ಸಂಪನ್ಮೂಲದ ಕೊರತೆ ಎದುರಿಸುತ್ತಿರುವ ರಾಜ್ಯ

ಮತದಾನದ ದಿನವೇ ಜಗನ್ ಜಯಗಳಿಸಿದ್ದಾರೆ ಎಂದು ಐ ಪ್ಯಾಕ್ ಘೋಷಿಸಿಬಿಟ್ಟಿತು. ಅವರೆಷ್ಟು ಆತ್ಮವಿಶ್ವಾಸದಿಂದ ಇದ್ದರು ಅಂದರೆ ಮತ ಎಣಿಕೆ ಕೂಡ ಅಗತ್ಯ ಇಲ್ಲ ಎಂಬಷ್ಟರ ಮಟ್ಟಿಗೆ ವಿಶ್ವಾಸದಿಂದ ಇದ್ದರು. ಅದು ನಿಜವಾಯಿತು. ಅತಂತ್ರ ಸಂಸತ್ ನಿರ್ಮಾಣ ಆಗಬಹುದು. ಅಂಥ ಸಂದರ್ಭದಲ್ಲಿ ದೆಹಲಿಯಲ್ಲಿ ನರೇಂದ್ರ ಮೋದಿಗೆ ಬೆಂಬಲ ನೀಡಬೇಕು ಎಂಬುದು ಜಗನ್ ಲೆಕ್ಕಾಚಾರ ಆಗಿತ್ತು. ಇದೀಗ ಸ್ವತಃ ಮೋದಿ ತುಂಬ ದೊಡ್ಡ ಗೆಲುವು ಪಡೆದಿರುವುದರಿಂದ ಕೇಂದ್ರದಲ್ಲಿ ಜಗನ್ ಮೋಹನ್ ರೆಡ್ಡಿಯ ಬೆಂಬಲ ಬೇಡ. ಇದೀಗ ಜಗನ್ ಎದುರು ಅಧಿಕಾರದ ಜತೆಗೆ ಅತಿ ದೊಡ್ಡ ಜವಾಬ್ದಾರಿಯೂ ಇದೆ. ಆಂಧ್ರಪ್ರದೇಶ ವಿಭಜನೆ ನಂತರ ಸಂಪನ್ಮೂಲ ಕೊರತೆ ಎದುರಾಗಿದೆ. ಹೊಸ ರಾಜಧಾನಿ ಅಮರಾವತಿಯಲ್ಲಿ ಈಗಲೂ ನಿರ್ಮಾಣ ಕಾರ್ಯಗಳು ನಿಧಾನ ಗತಿಯಲ್ಲೇ ಸಾಗುತ್ತಿವೆ. ಚುನಾವಣೆ ಪ್ರಚಾರದ ವೇಳೆ ಎಲ್ಲ ವರ್ಗಕ್ಕೂ ಒಂದಲ್ಲ ಒಂದು ಭರವಸೆ ನೀಡಿರುವ ಜಗನ್, ಸಂಪನ್ಮೂಲ ಕೊರತೆ ಎದುರಿಸುತ್ತಿರುವ ರಾಜ್ಯವನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಪ್ರಶ್ನೆಯೂ ಇದೆ.

ಅವಮಾನ ಎದುರಿಸಿದ ಜಗನ್ ಪಾಲಿಗೆ ಎಲ್ಲವೂ ಬದಲಾಯಿತು

ಅವಮಾನ ಎದುರಿಸಿದ ಜಗನ್ ಪಾಲಿಗೆ ಎಲ್ಲವೂ ಬದಲಾಯಿತು

ತನ್ನ ತಂದೆ ಇದ್ದ ಕಾಂಗ್ರೆಸ್ ಪಕ್ಷದಿಂದಲೇ ಜೈಲು ಸೇರಿದ್ದರು ಜಗನ್ ಮೋಹನ್ ರೆಡ್ಡಿ. ಅವರ ಮೇಲೆ ಆದಾಯಕ್ಕೆ ಮೀರಿದ ಆಸ್ತಿ ಗಳಿಸಿದ ಆರೋಪ ಇತ್ತು. ಅದರಿಂದ ಸಾಕಷ್ಟು ಅವಮಾನ ಎದುರಿಸಿದ ಜಗನ್ ಪಾಲಿಗೆ ಎಲ್ಲವೂ ಬದಲಾಯಿತು. ಎಲ್ಲವೂ ಎಂಟು ವರ್ಷದೊಳಗೆ ಬದಲಾಯಿತು. ಜಗನ್ ಪಾಲಿನ ಏಕೈಕ ರಾಜಕೀಯ ವಿರೋಧಿ ಚಂದ್ರಬಾಬು ನಾಯ್ಡುಗೆ ಈಗ ಅರವತ್ತೊಂಬತ್ತು ವರ್ಷ. ಮುಂದಿನ ಚುನಾವಣೆ ವೇಳೆಗೆ ಎಪ್ಪತ್ನಾಲ್ಕು ವರ್ಷ ವಯಸ್ಸು. ಜಗನ್ ಗೆ ಈಗ ನಲವತ್ತಾರು ವರ್ಷ ವಯಸ್ಸು. ಅದು ಅವರ ಪರವಾಗಿಯೇ ಇದೆ. ಇನ್ನೂ ದೀರ್ಘ ಕಾಲ ರಾಜಕಾರಣ ಮಾಡಬಹುದು. ಮೊದಲೇ ಹೇಳಿದ ಹಾಗೆ ಜಗನ್ ಮೋಹನ್ ರೆಡ್ಡಿಗೆ ಅವರ ಅಪ್ಪನ ಗುಣಗಳು ಬಂದಿವೆ. ಕೆಲವು ಅಪಾಯಕಾರಿ ಆದವು ಕೂಡ ಹೌದು. ಆದರೆ ಅನುಭವ ಎಲ್ಲವನ್ನೂ ಕಲಿಸಬಹುದು. ಅಥವಾ ಆ ವ್ಯಕ್ತಿಗೆ ಕಲಿಯುವ ಮನಸು ಅಗದೇ ಹೋಗಬಹುದು. ಆದರೆ ಇತಿಹಾಸ ಮಾತ್ರ ಎಲ್ಲವನ್ನೂ ದಾಖಲಿಸುತ್ತದೆ.

ಮೋದಿ ಇಳಿಸಲು ಊರೆಲ್ಲಾ ಸುತ್ತಿ ಬಂದಾಗ ತನ್ನ ಕುರ್ಚಿಯೇ ಹೋಗಿತ್ತು!

English summary
The great journey of Jaganmohan Reddy in Andhra politics, who has defeated Chandrababu Naidu with huge huge margin and will become CM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more