• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟೆಕ್ಸಾಸ್‌ನಿಂದ ಕನ್ನಡತಿ ಸುಮಾ ಹಂಚಿಕೊಂಡ ಚಳಿಗಾಲದ ''ಬೆಚ್ಚನೆಯ'' ಅನುಭವ

By ಸುಮಾಬೀನಾ, ಟೆಕ್ಸಾಸ್‌
|
Google Oneindia Kannada News

ಕಳೆದ ವಾರ ಅಮೆರಿಕಾಕ್ಕೆ ಅಪ್ಪಳಿಸಿದ ಭೀಕರ ಶೀತಮಾರುತ ''ಯುರಿ'' ಯ ಪ್ರಕೋಪ ಹಲವಾರು ರಾಜ್ಯಗಳಲ್ಲಿ, ವಿಶೇಷವಾಗಿ ಟೆಕ್ಸಾಸ್‌ನಲ್ಲಿ ಜೀವಹಾನಿಯೂ ಸೇರಿದಂತೆ ವ್ಯಾಪಕವಾದ ವಿದ್ಯುಚ್ಛಕ್ತಿ ಮತ್ತು ನೀರಿನ ಕೊರತೆ ಉಂಟುಮಾಡಿದ್ದು, ಮಿಲಿಯನ್ ಗಟ್ಟಲೆ ಜನರು ಒಂದು ವಾರ ಕೊರೆಯುವ ಚಳಿಯಲ್ಲಿ ಬದುಕಿಗಾಗಿ ಹೋರಾಡಬೇಕಾಯಿತು. ಆ ಸಮಯದಲ್ಲಿನ, ನನ್ನ ಕುಟುಂಬದ ಜೊತೆಗಿನ ಒಂದು ವಾರದ ನೆನಪುಗಳನ್ನು ಇಲ್ಲಿ ದಾಖಲಿಸಿದ್ದೇನೆ. ಪ್ರಪಂಚಾದ್ಯಂತ ಜನರು ಬೇರೆಬೇರೆ ವಿಧದಲ್ಲಿ, ಪ್ರಾಕೃತಿಕ ಮತ್ತು ಮಾನವ ನಿರ್ಮಿತ ವಿಕೋಪಗಳ ನಡುವೆ ನಿರಂತರ ಹೋರಾಟದ ಜೀವನ ಸಾಗಿಸುತ್ತಿದ್ದಾರೆ.

ಅಷ್ಟೇ ಅಲ್ಲದೆ ನಮ್ಮ ಭಾರತದಂತಹ ದೇಶಗಳಲ್ಲಿ ಆರ್ಥಿಕ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯ ಮಧ್ಯೆ ಸಂತ್ರಸ್ತರಿಗೆ ಅಗತ್ಯ ನೆರವು ಸಿಕ್ಕದೇ ಬಹಳಷ್ಟು ಸಾವು ನೋವುಗಳು ಸಂಭವಿಸುತ್ತಿರುತ್ತದೆ. ಇಂತಹ ಯಾವ ಅನುಭವವೂ ಇದುವರೆಗೆ ಆಗದ ಭಾಗ್ಯಶಾಲಿಗಳಲ್ಲಿ ನಾವೊಬ್ಬರು ಎಂಬ ಅರಿವಿಟ್ಟುಕೊಂಡು, ಶೀತ ಹವಾಮಾನದಲ್ಲಿ ಇದೊಂದು ಹೊಸ ಅನುಭವ ಎಂಬ ದೃಷ್ಟಿಕೋನದಲ್ಲಿ ಇದನ್ನು ಬರೆದಿದ್ದೇನೆ. - ಸುಮಾಬೀನಾ.

10 ಲಕ್ಷ ರೂಪಾಯಿ ಕರೆಂಟ್ ಬಿಲ್, ಕೂಡಿಟ್ಟಿದ್ದ ಹಣವೆಲ್ಲಾ ಖಾಲಿ ಖಾಲಿ..!10 ಲಕ್ಷ ರೂಪಾಯಿ ಕರೆಂಟ್ ಬಿಲ್, ಕೂಡಿಟ್ಟಿದ್ದ ಹಣವೆಲ್ಲಾ ಖಾಲಿ ಖಾಲಿ..!

ಒಂದೂವರೆ ವರ್ಷದ ಹಿಂದೆ ನಮ್ಮ ಮನೆಯವರು ಅಮೆರಿಕಕ್ಕೆ ಶಿಫ್ಟ್ ಆಗುವ ಪ್ರಸ್ತಾಪವಿಟ್ಟಾಗ ಒಪ್ಪಿಕೊಂಡಿದ್ದು ಒಂದೇ ಒಂದು ಕಾರಣಕ್ಕೆ. ನಾವು ಹೋಗುತ್ತಿರುವುದು ಬಿಸಿಲು ಪ್ರದೇಶವಾದ ಟೆಕ್ಸಾಸ್ ರಾಜ್ಯಕ್ಕೆ ಎಂಬುದು. ಹೈದರಾಬಾದ್‌ನಲ್ಲಿ ಹತ್ತು ವರ್ಷದ ವಾಸದ ನಂತರ ಮಲೆನಾಡಿನ ಹಿತವಾದ ಚಳಿಗಾಲವೂ ನನಗೆ ಹೆಚ್ಚೆನಿಸುತ್ತಿತ್ತು.

ಭೂಮಿ ಮೇಲೆ ಮತ್ತೆ ಹಿಮಯುಗ..? ಕೊತ ಕೊತ ನೀರು ಕೂಡ ಮಂಜುಗಡ್ಡೆ..!ಭೂಮಿ ಮೇಲೆ ಮತ್ತೆ ಹಿಮಯುಗ..? ಕೊತ ಕೊತ ನೀರು ಕೂಡ ಮಂಜುಗಡ್ಡೆ..!

ಹೀಗಿರುವಾಗ ಅಸಲಿನಲ್ಲಿ ಮರುಭೂಮಿಯಾದ ಟೆಕ್ಸಾಸ್‌ನಲ್ಲಿ ಉಷ್ಣಾ೦ಶ ಮೈನಸ್ಗಂತೂ ಹೋಗುವುದಿಲ್ಲ ಎಂಬ ವಿಶ್ವಾಸದ ಜೊತೆ ಆಸ್ಟಿನ್ ಗೆ ಬಂದಮೇಲೆ, ಹವಾಮಾನದ ಕುರಿತಾಗಿ ಈ ನಗರದ ಜನಪ್ರಿಯತೆ ಸುಳ್ಳಲ್ಲ ಎಂಬುದು ಒಂದು ವರ್ಷದಲ್ಲೇ ಗೊತ್ತಾಯಿತು. ವಯಸ್ಸಿನ ಪ್ರಬುದ್ಧತೆಯೋ ಏನೋ, ಹವಾಮಾನದ ಬಗ್ಗೆ ನನ್ನ ದೂರುಗಳೂ ಕಡಿಮೆಯಾಗಿದ್ದವು. ದಿನಂಪ್ರತಿ ಬದಲಾಗುವ ಆಸ್ಟಿನ್ ನಗರದ ಹವಾಮಾನ ಅಚ್ಚರಿಗೊಳಿಸುತ್ತಿದ್ದರೂ ಒಂದು ತರಹ ಆಪ್ತವೆನಿಸುತ್ತಿತ್ತು.

ಅತಿರೇಕವಲ್ಲದ ಚಳಿಗಾಲದ ವಾತಾವರಣವಿತ್ತು

ಅತಿರೇಕವಲ್ಲದ ಚಳಿಗಾಲದ ವಾತಾವರಣವಿತ್ತು

ಒಂದು ದಿನ ಹೈದರಾಬಾದ್ ನೆನಪಿಸುವ ಬೇಸಿಗೆಯಾದರೆ ಮರುದಿನ ಧೋ ಎಂದು ಸುರಿಯುವ ಮಲೆನಾಡಿನ ತರಹದ ಮಳೆ. ಒಮ್ಮೊಮ್ಮೆ ಒಂದು ಅಂಕೆಯ ತಾಪಮಾನವಿದ್ದರೆ ಮರುದಿನ ಸ್ವೆಟರ್ ಅವಶ್ಯಕತೆಯೇ ಇರದ ಹಿತವಾದ ಹಗಲು. ಈ ಸಲವೂ ಅತಿರೇಕವಲ್ಲದ ಚಳಿಗಾಲದ ವಾತಾವರಣವನ್ನು ಸಂಪೂರ್ಣವಾಗಿ ಆಸ್ವಾದಿಸುತ್ತಿದ್ದೆ. ಒಂದು ತಿಂಗಳ ಈಚೆಗೆ ಆಸ್ಟಿನ್ ನಗರಕ್ಕೆ ಅತ್ಯಂತ ಅಪರೂಪವಾದ 4-6 ಇಂಚಿನ ಹಿಮಸುರಿತವೂ ನೋಡಲು ಸಿಕ್ಕಿತ್ತು!

ಅದು ಫೆಬ್ರವರಿ ಎರಡನೇ ವಾರ. ವಾಡಿಕೆಯಂತೆ ಪ್ರಕೃತಿ ಶಿಶಿರದಿಂದ ವಸಂತ ಋತುವಿನೆಡೆಗೆ ದಾಟುವ ತಯಾರಿ ನೆಡೆಸುತ್ತಿತ್ತು. ಎಂಟರಿಂದ ಹದಿನೈದು ಡಿಗ್ರಿ ಸೆಲ್ಸಿಯಸ್ ನಡುವೆ ಇದ್ದ ಉಷ್ಣಾ೦ಶ ಮುಂಬರುವ ಶೀತಮಾರುತದ ಕಾರಣ ಮೈನಸ್ ಹದಿನೇಳಕ್ಕೆ ಹೋಗಲಿದೆ ಎಂಬ ಹವಾಮಾನ ಮುನ್ಸೂಚನೆ ತೀರಾ ವಿಶೇಷ ಎನ್ನಿಸಿರಲಿಲ್ಲ. ಫೆಬ್ರವರಿ ಹನ್ನೊಂದನೇ ತಾರೀಕು, ಗುರುವಾರ ಬೆಳಿಗ್ಗೆ ಜೀರೋ ಡಿಗ್ರಿ ಇದ್ದ ಕಾರಣ ಎರಡೆರಡು ಜ್ಯಾಕೆಟ್ಟು ಧರಿಸಿ ಸ್ಕೂಲಿಗೆ ಹೋಗಿದ್ದೆ. ಹತ್ತು ಗಂಟೆಯ ಹೊತ್ತಿದೆ ಹಿಮ-ಮಳೆ ಆರಂಭವಾಯಿತು. ಅರ್ಧ ಗಂಟೆಯಲ್ಲೇ ಇಡೀ ನಗರ ಚಳಿಯಿಂದ ಹೆಪ್ಪುಗಟ್ಟಲು ಆರಂಭವಾಯಿತು. ಮಳೆನೀರು ಭೂಮಿಯ ಮೇಲೆಬಿದ್ದ ತಕ್ಷಣ ಪಾರದರ್ಶಕವಾದ ಐಸ್ ಆಗಿಬಿಡುತ್ತಿತ್ತು.

ಹುಗಿಯುವ ಹಿಮಕ್ಕಿಂತ ಅಪಾಯ ಜಾರುವ ಈ ಐಸ್

ಹುಗಿಯುವ ಹಿಮಕ್ಕಿಂತ ಅಪಾಯ ಜಾರುವ ಈ ಐಸ್

ಹುಗಿಯುವ ಹಿಮಕ್ಕಿಂತ ಅಪಾಯ ಜಾರುವ ಈ ಐಸ್. ರಸ್ತೆಯ ಮೇಲೆ ಒಂದರ ಹಿಂದೊಂದು ಅಪಘಾತಗಳ ಸುದ್ದಿ ಬರತೊಡಗಿದವು. ನಮ್ಮ ಮನೆಯ ಹತ್ತಿರ ಒಂದು ಅಪಘಾತದಲ್ಲಿ ಇಪ್ಪತ್ತಾರು ಕಾರುಗಳು ಸ್ಕಿಡ್ ಆಗಿ ಒಂದರ ಮೇಲೊಂದು ರಾಶಿ ಹೊಡೆದುಕೊಂಡಿವೆ ಎಂದು ಕೇಳಿ ಸಂಜೆ ಮನೆಗೆ ಸ್ವಲ್ಪ ಬೇಗ ಹೋಗಬೇಕು ಎಂದುಕೊಂಡಿದ್ದೆನೋಡುನೋಡುತ್ತಿದ್ದಂತೆಯೇ ಎಪ್ಪತ್ನಾಲ್ಕು, ತೊಂಭತ್ತು, ನೂರಾ ಇಪ್ಪತ್ತು ವಾಹನಗಳ ರಾಶಿಗಳು ಟೆಕ್ಸಾಸ್ ರಾಜ್ಯದ ಎಲ್ಲ ಹೈವೇಗಳನ್ನು ಬಂದ್ ಮಾಡಿಸಿವೆ ಎಂಬ ವಿಷಯ ಎಲ್ಲರ ಮನಸ್ಸಿನ ಸಣ್ಣ ಕಳವಳ ಉಂಟುಮಾಡಿದರೂ , ಈ ಹಿಮಮಳೆ ಮುಂದಿನ ಎಂಟು ದಿನದಲ್ಲಿ ಟೆಕ್ಸಾಸ್ ನಲ್ಲಿ ಚಾರಿತ್ರಿಕವಾದ ಅವಘಡಗಳನ್ನು ತರಲಿದೆ ಎಂಬುದು ಹವಾಮಾನ ಇಲಾಖೆಗೂ ಗೊತ್ತಿರಲಿಲ್ಲ.

ಟೆಕ್ಸಾಸ್: ಭಾರಿ ಚಳಿಯಿಂದ 21 ಸಾವು, ವಿದ್ಯುತ್ ಪೂರೈಕೆ ಸ್ಥಗಿತಟೆಕ್ಸಾಸ್: ಭಾರಿ ಚಳಿಯಿಂದ 21 ಸಾವು, ವಿದ್ಯುತ್ ಪೂರೈಕೆ ಸ್ಥಗಿತ

ಮಧ್ಯಾಹ್ನ ಎರಡೂವರೆಯ ಹೊತ್ತಿಗೆ ಮನೆಯವರಿಂದ ಫೋನ್ - " ಕರೆಂಟ್ ಇಲ್ಲ; ಕಾರು ತೆಗೆಯಲು ಗರಾಜ್ ಡೋರ್ ಓಪನ್ ಆಗ್ತಿಲ್ಲ, ನೀನೆ ಪಿಕ್ ಮಾಡಬೇಕು ಮಕ್ಕಳನ್ನ". ಒಂದೇ ಉಸಿರಿಗೆ ಸಂಬಂಧಪಟ್ಟವರಿಗೆ ಇಮೇಲ್ ಮಾಡಿ ಮನೆಗೆ ಹೊರಟೆ. ಹೊರಗೆ ಬಂದರೆ ತಾಪಮಾನ ಮೈನಸ್ ಆರು ಡಿಗ್ರಿ ; ಅಲ್ಲದೇ ಹಿಮಮಿಶ್ರಿತ ಮಳೆಗೆ ಕಾರಿನ ಬಾಗಿಲು ಹೆಪ್ಪುಗಟ್ಟಿತ್ತು. ಈ ಕೊರೆಯುವ ಚಳಿಯಲ್ಲಿ ಹೊರಗಡೆ ಅಪ್ಪನಿಗಾಗಿ ಕಾಯುತ್ತ ನಿಂತಿರುವ ಮಕ್ಕಳ ನೆನಪಾಗಿ ಇದೇ ಮೊದಲ ಬಾರಿಗೆ ಫ್ರೋಜನ್ ರೋಡ್ಸ್ ಮೇಲೆ ಕಾರ್ ಓಡಿಸುತ್ತಿದ್ದೇನೆ ಅನ್ನುವ ಆತಂಕವನ್ನು ಮರೆತು ಮನೆ ಕಡೆ ಸಾಗಿದೆ. ಇದೇ ರಸ್ತೆಯನ್ನು ಪ್ರತೀ ಋತುವಿನಲ್ಲೂ ನೋಡಿದ್ದರೂ ಆ ದಿನ ಮಾತ್ರ ಎಲ್ಲವೂ ಬಹಳ ನಿಗೂಢವಾಗಿ ಕಾಣುತ್ತಿತ್ತು. ಎಲೆಯಿಲ್ಲದ ಗಿಡಮರಗಳ ಮೇಲೆ ನೀರು ಘನೀಕರಿಸಿ ಸ್ಫಟಿಕದಿಂದ ಮಾಡಲ್ಪಟ್ಟಂತೆ ಕಾಣುತ್ತಿದ್ದವು. ಅಂತೂ ಆ ದಿನ ಜಾರುವ ರಸ್ತೆಯ ಮೇಲೆ ಹದವೇಗದಲ್ಲಿ ಒಂಭತ್ತು ಮೈಲಿ ಪ್ರಯಾಣಿಸಿ ಸುರಕ್ಷಿತವಾಗಿ ಮನೆಗೆ ಬಂದು ಮುಟ್ಟಿದಾಗ ಎಲ್ಲರಲ್ಲೂ ಸಮಾಧಾನದ ನಿಟ್ಟುಸಿರು!

ಕಾಫಿ ಮಾಡಿಕೊಳ್ಳಲೂ ನಮ್ಮ ಮನೆಯಲ್ಲಿರುವುದು ಕರೆಂಟ್ ಇರ್ಲಿಲ್ಲ

ಕಾಫಿ ಮಾಡಿಕೊಳ್ಳಲೂ ನಮ್ಮ ಮನೆಯಲ್ಲಿರುವುದು ಕರೆಂಟ್ ಇರ್ಲಿಲ್ಲ

ಮನೆಯಲ್ಲಿ ಕರೆಂಟ್ ಇಲ್ಲದ ಕಾರಣ ಹೀಟರ್ ಗೆ ಮೈಯ್ಯೊಡ್ಡುವುದಿರಲಿ, ಬಿಸಿನೀರಿನಲ್ಲಿ ಕೈಕಾಲು ತೊಳೆಯುವುದಕ್ಕೂ ಅವಕಾಶವಿಲ್ಲ. ಹೋಗಲಿ, ಬಿಸಿ ಬಿಸಿ ಕಾಫಿ ಮಾಡಿಕೊಳ್ಳಲೂ ನಮ್ಮ ಮನೆಯಲ್ಲಿರುವುದು ಕರೆಂಟ್ ಒಲೆ. ಸರಿ, ಮಕ್ಕಳ ಜೊತೆ ಹರಟೆ ಹೊಡೆದು, ಆಟ ಆಡಿ, ಬೆಳಿಗ್ಗೆ ಮಾಡಿದ್ದ ಅಡುಗೆಯ ಜೊತೆ ಸ್ವಲ್ಪ ಹಣ್ಣು ತಿಂದು, ಛಳಿಯ ಸಲುವಾಗಿ ಏಳೂವರೆಗೇ ಮಲಗಿದ್ದಾಯ್ತು. ಬೆಳಿಗ್ಗೆ ನೋಡಿದರೆ ಶೀತಮಾರುತ ತನ್ನ ಗತಿಯನ್ನು ಹೆಚ್ಚಿಸಿಕೊಂಡಿದ್ದು ಗಮನಕ್ಕೆ ಬಂತು. ಹೊಟ್ಟೆ ತಾಳ ಹಾಕುತ್ತಿತ್ತು. ಮತ್ತೆ ತಣ್ಣನೆಯ ಹಣ್ಣುಗಳನ್ನು ತಿನ್ನಬೇಕೆ ಎಂದುಕೊಳ್ಳುವಷ್ಟರಲ್ಲಿ ಒಂದು ಯೋಚನೆ ಬಂತು.

ನಮ್ಮ ಹೈಕಿಂಗ್, ಟ್ರೆಕ್ಕಿಂಗ್ ಚಾಳಿಯ ದೆಸೆಯಿಂದ ಕ್ಯಾ೦ಪಿಂಗ್ ಗೋಸ್ಕರ ಟೆಂಟ್, ಸೋಲಾರ್ ಟಾರ್ಚು, ಜೊತೆ ಒಂದು ಪ್ರೋಪೆನ್ ಒಲೆಯೂ ಹಾಗೂ ಅದಕ್ಕೆ ಬೇಕಾದ ಉಪಕರಣಗಳೂ ಇದ್ದವು. ಆದರೆ ಒಂದು ಸಮಸ್ಯೆಯಿತ್ತು. ಅಂತಹ ಒಲೆಗಳನ್ನು ಮನೆಯ ಒಳಗೆ ಹೊತ್ತಿಸಲು ನಿರ್ಬಂಧವಿದೆ ಮತ್ತು ಅದು ಅಪಾಯಕಾರಿ ಕೂಡಾ. ಅದರಿಂದ ಹೊರಹೊಮ್ಮುವ ಕಾರ್ಬನ್ ಮಾನಾಕ್ಸೈಡ್ ಗೆ ವಾಸನೆ ಇಲ್ಲದ ಕಾರಣ ಪ್ರಾಣಾ೦ತಿಕ ಮಟ್ಟ ತಲುಪಿದ್ದು ಗೊತ್ತಾಗುವುದಿಲ್ಲ. ಆದ್ದರಿಂದ ಕೆಳಗೆ ತಣ್ಣಗೆ ಕೊರೆಯುವ ಗಾರಾಜ್ ನಲ್ಲಿ ಸೋಲಾರ್ ಲ್ಯಾಂಪ್ ಇಟ್ಟುಕೊಂಡು ಬಿಸಿ ಚಹಾ ಮತ್ತು ಒಗ್ಗರಣ್ಣೆ ಅವಲಕ್ಕಿ ಮಾಡಿದ್ದಾಯ್ತು. ಸಂಧರ್ಭ ಸಿಕ್ಕಿದಾಗೆಲ್ಲ ಪ್ರಕೃತಿಯೊಡನೆ ಸಮಯ ಕಳೆಯಲು ಮಾಡಿಕೊಂಡ ಇಂತಹ ಏರ್ಪಾಡು ಹೀಗೆ ನಮ್ಮಆಪತ್ಕಾಲದಲ್ಲಿ ಸಮಯಕ್ಕೆ ಒದಗಿ ಬಂದಿದ್ದು ಆ ಕೊರೆಯುವ ಚಳಿಯಲ್ಲಿ ಬೆಚ್ಚನೆಯ ಹೆಮ್ಮೆ ಮೂಡಿಸಿತ್ತು.

ಕೋಣೆ ಇಪ್ಪತ್ತು ಡಿಗ್ರಿ ಗೆ ಬರಲು ತೆಗೆದುಕೊಂಡ ಕಾಲ 14 ತಾಸು

ಕೋಣೆ ಇಪ್ಪತ್ತು ಡಿಗ್ರಿ ಗೆ ಬರಲು ತೆಗೆದುಕೊಂಡ ಕಾಲ 14 ತಾಸು

ಆಗಾಗಲೇ ಮಕ್ಕಳ ಮತ್ತು ನನ್ನ ಸ್ಕೂಲ್ ಶುಕ್ರವಾರವನ್ನು ವರ್ಚುಯಲ್ ಲರ್ನಿಂಗ್ ಡೇ ಮಾಡಿದ್ದರು. ಚಳಿಯಿಂದ ಮುದುಡುತ್ತಲೇ ಲ್ಯಾಪ್ ಟಾಪ್ ಎದುರಿಗೆ ಕೂತರೂ, ಸರಿಸುಮಾರು ಇಪ್ಪತ್ನಾಲ್ಕು ತಾಸಿನಿಂದ ಹೀಟರ್ ಆಫ್ ಇದ್ದ ಕಾರಣ ಹತ್ತು ಗಂಟೆಯ ಹೊತ್ತಿಗೆ ಮನೆಯ ಒಳಗೆ ಕೂರಲಾಗಲಿಲ್ಲ. ವೆದರ್ ಚಾನೆಲ್ ಪ್ರಕಾರ ತಾಪಮಾನ ಮೈನಸ್ ಏಯ್ಟ್ , ಫೀಲ್ಸ್ ಲೈಕ್ ಮೈನಸ್ ಇಲೆವೆನ್. ಅಷ್ಟು ಹೊತ್ತಿಗೆ ಲ್ಯಾಪ್ಟಾಪ್ ಚಾರ್ಜೂ ಹೋಗಿದ್ದರಿಂದ ನಮ್ಮ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ನಲ್ಲೇ ಇದ್ದ ನನ್ನ ಗೆಳತಿಯ ಮನೆಗೆ ಎಲ್ಲರೂ ಹೋಗಿ ಆ ದಿನದ ಕೆಲಸ ಮುಗಿಸಿದ್ದಾಯ್ತು.

ಅಂತೂ ರಾತ್ರಿ 8 ಗಂಟೆಗೆ ಕರೆಂಟ್ ಬಂತು. ಮನೆಗೆ ಬಂದು, ಸ್ನಾನ ಮಾಡಿ ಮಲಗಲು ಹೋದರೆ ಒಂದೂವರೆ ದಿನ ಮೈನಸ್ ತಾಪಮಾನವಿದ್ದ ಕಾರಣ ಹಾಸಿಗೆ ತಣ್ಣಗೆ ಕೊರೆಯುತ್ತಿತ್ತು. ಅಂತೂ ಎಲ್ಲರೂ ಒತ್ತಟ್ಟಾಗಿ ಮಲಗಿದೆವು. ಹೀಟರ್ ಆನ್ ಇದ್ದರೂ ಕೋಣೆ ಇಪ್ಪತ್ತು ಡಿಗ್ರಿ ಗೆ ಬರಲು ತೆಗೆದುಕೊಂಡ ಕಾಲ ಬರೋಬರಿ ಹದಿನಾಲ್ಕು ತಾಸು! ಅಮೆರಿಕಾದ ಇತರೆ ರಾಜ್ಯಗಳಂತೆ ಟೆಕ್ಸಾಸ್ ನ ಮನೆಗಳು ಇಂತಹ ಹವಾಮಾನಕ್ಕೆ ಹೇಳಿಮಾಡಿಸಿದ್ದವಲ್ಲ. ಹಾಗಾಗಿ ರೀತಿಯ ತೊಂದರೆಗಳು ಇದ್ದದ್ದೇ ಎಂದುಕೊಂಡೆವು. ಆದರೆ ಹೊರಗೆ ನಡೆಯುತ್ತಿದ್ದ ವಿದ್ಯಮಾನಗಳು ಬೇರೆಯೇ ಕಥೆ ಹೇಳಲು ಶುರು ಮಾಡಿದ್ದವು.

ಮಳೆಯ ಜೊತೆ ಸಣ್ಣಗೆ ಹಿಮವೂ ಆರಂಭ

ಮಳೆಯ ಜೊತೆ ಸಣ್ಣಗೆ ಹಿಮವೂ ಆರಂಭ

ಭಾನುವಾರ ಬೆಳಿಗ್ಗೆ ಮಳೆಯ ಜೊತೆ ಸಣ್ಣಗೆ ಹಿಮವೂ ಆರಂಭವಾಯಿತು. ರಸ್ತೆಯ ಮೇಲೆ ಬಿದ್ದ ಮಳೆ ನೀರು ತಕ್ಷಣ ಐಸ್ ಆಗುತ್ತಿದ್ದರಿಂದ ರಸ್ತೆಗಳಲ್ಲಿ ಓಡಾಟ ದುಸ್ತರವಾಯಿತು. ಪ್ರಾದೇಶಿಕ ನಗರಾಧಿಕಾರಿಗಳು ಎಲ್ಲರನ್ನೂ ಮನೆಯಲ್ಲಿಯೇ ಇರುವಂತೆ ಆದೇಶ ಹೊರಡಿಸಿದರು. ಕರೆಂಟನ್ನು ಮಿತವಾಗಿ ಬಳಸುವಂತೆ ಹೇಳಲಾಯಿತು. ಹವಾಮಾನ ಇಲಾಖೆ ಶೈತ್ಯಗಾಳಿ ಎಚ್ಚರಿಕೆ ಜಾರಿಗೆ ತಂದಿತು. ಕಳೆದ ಎಂಭತ್ತುವರ್ಷಗಳಲ್ಲಿ ಪ್ರಥಮಬಾರಿಗೆ ಮುನ್ಸೂಚನೆ ಮೈನಸ್ ಹತ್ತೊಂಭತ್ತು ಡಿಗ್ರಿ ಸೆಲ್ಷಿಯಸ್ ತೋರಿಸುತ್ತಿದ್ದುದು ಸ್ಥಳೀಯರಿಗೆ ಅಚ್ಚರಿಯ ಜೊತೆ ಆತಂಕದ ವಿಷಯವೂ ಆಗಿತ್ತು. ಆದರೆ ಮಕ್ಕಳು ಮಾತ್ರ ಚಳಿಯ ಕಲ್ಪನೆ ಇಲ್ಲದೆ ಕಳೆದಬಾರಿಯಂತೆ ಹಿಮದಲ್ಲಿಆಡುವ ಕನಸು ಕಾಣುತ್ತಿದ್ದರು.

ಸೋಮವಾರ ಬೆಳಿಗ್ಗೆ ಎದ್ದಾಗ ಎಲ್ಲ ಕಡೆ ಸಕ್ಕರೆ ಪುಡಿಯಂತಹ ಹಿಮದ ದಪ್ಪ ಹೊದಿಕೆ. 1949 ರ ನಂತರ ಇದೇ ಪ್ರಥಮ ಬಾರಿಗೆ ಟೆಕ್ಸಾಸ್ ಪ್ರಾಂತ್ಯದಲ್ಲಿ ಅಷ್ಟು ಹಿಮ ಬಿದ್ದಿದ್ದಂತೆ. ಟೆಕ್ಸಾಸ್ ನಗರಗಳು ಇಂತಹ ಒಂದು ಬದಲಾವಣೆಗೆ ಖಂಡಿತವಾಗಿಯೂ ತಯಾರಿರಲಿಲ್ಲ. ರಾತ್ರಿಯಿಡೀ ಆದ ಹಿಮಪಾತದಿಂದ ಕರೆಂಟು ನೀರು ಇತ್ಯಾದಿ ನಿತ್ಯಬಳಕೆಯ ಸೌಲಭ್ಯಗಳು ಅಸ್ತವ್ಯಸ್ತವಾದವು. ನಿರೀಕ್ಷೆಗೆ ಮೀರಿದ ಚಳಿಯ ದೆಸೆಯಿಂದ ರಾಜ್ಯದೆಲ್ಲೆಡೆ ಕರೆಂಟಿಗೆ ಬೇಡಿಕೆ ಹೆಚ್ಚಾಗಿ ದೇಶದ ಏಕಮಾತ್ರ ಸ್ವತಂತ್ರ ವಿದ್ಯುತ್ ನಿಗಮ ಹೊರೆ ತಡೆಯಲಾಗದೆ ನೆಲಕಚ್ಚಿತ್ತು. ಜೊತೆಗೆ ನೈಸರ್ಗಿಕ ವಿದ್ಯುನ್ಮೂಲವಾದ ಗಾಳಿಯಂತ್ರಗಳೂ ಹೆಪ್ಪುಗಟ್ಟಿ ಸ್ಥಬ್ಧವಾಗಿದ್ದವು.

ಮಕ್ಕಳೊಡನೆ ಹಿಮದಲ್ಲಿ ಆಟವಾಡಲು ಹೋದೆವು

ಮಕ್ಕಳೊಡನೆ ಹಿಮದಲ್ಲಿ ಆಟವಾಡಲು ಹೋದೆವು

ರಾಜ್ಯದೆಲ್ಲೆಡೆ ಕತ್ತಲೆ ಆವರಿಸಿತು. ಅದೃಷ್ಟವಶಾತ್ ನಮ್ಮ ಮನೆಯಲ್ಲಿ ಕರೆಂಟ್ ಇದ್ದರೂ ಯಾವಾಗ ಹೋಗುವುದೋ ಎಂಬ ಭಯದಿಂದ ಮರುದಿನಕ್ಕೆ ಬೇಕಾದ ಅಡುಗೆಯನ್ನೂ ಮಾಡಿ ಮುಗಿಸಿಬಿಟ್ಟೆವು. ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ತಾಪಮಾನ ಮೈನಸ್ ಹನ್ನೊಂದು ಡಿಗ್ರಿ ಆಗಿದ್ದರೂ ಮಕ್ಕಳೊಡನೆ ಹಿಮದಲ್ಲಿ ಆಟವಾಡಲು ಹೋದೆವು. ದಾರಿಯೇ ಗುರುತು ಸಿಗದಂತೆ ಎಲ್ಲ ಕಡೆ ಮರದ ಹಿಮಾವೃತ ಕೊಂಬೆಗಳು ಬಾಗಿ ಇಡೀ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ವಿಚಿತ್ರವಾಗಿ ಕಾಣುತ್ತಿತ್ತು. ಅಂತೂ ಇಪ್ಪತ್ತು ನಿಮಿಷ ಆಡುವಷ್ಟರಲ್ಲಿ ಕೈಬೆರಳುಗಳೆಲ್ಲ ಉರಿಯಲು ಶುರುವಾಗಿ, ಮನೆಗೆ ಬಂದು ಬಿಸಿನೀರಿನಲ್ಲಿ ಸ್ನಾನ ಮಾಡಿದ್ದಾಯ್ತು. ಅದು ಆ ವಾರಕ್ಕೆ ಕೊನೆಯ ಸ್ನಾನ ಎಂದು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ!

ಆ ರಾತ್ರಿ ಮತ್ತೆ ಕರೆಂಟ್ ಹೋದರೂ ನಮ್ಮ ಅದೃಷ್ಟಕ್ಕೆ ಮತ್ತೆ ಮೂರು ತಾಸಿನ ನಂತರ ಬಂತು. ಆದರೂ ಹೊರಗಿನ ಪರಿಸ್ಥಿತಿ ನೋಡಿ ಯಾವುದಕ್ಕೂ ಇರಲಿ ಎಂದು ಸ್ವಲ್ಪ ದೋಸೆ ಹಿಟ್ಟು, ಚಟ್ನಿ ಪುಡಿ ಮಾಡಿ ಇಟ್ಟುಕೊಂಡೆ. ಫ್ರೀಜ್ ವಾರ್ನಿಂಗ್ ಇರುವಾಗ ಮನೆಯ ಎಲ್ಲ ನಲ್ಲಿಗಳೂ ಹನಿ ಹನಿ ಹನುಕುವಿನಂತೆ ಬಿಟ್ಟಿರಬೇಕಾಗುತ್ತದೆ. ಪೈಪ್ ಲ್ಲಿ ನೀರು ಘನೀಕರಿಸಬಾರದು ಎಂದು. ಹೀಗಿರುವಾಗ ಮರುದಿನ ಕೆಲವು ಬಿಲ್ಡಿಂಗ್ ಗಳಲ್ಲಿ ನೀರು ನಿಂತು ಹೋಗಿದೆ ಎಂಬ ಸುದ್ದಿ ಬಂತು.

ಅಸಲಿನಲ್ಲಿ ಈ ತರಹದ ಶೀತವಾತಾವರಣಕ್ಕೆ ಬೇಕಾಗುವಂತಹ ಪೈಪ್ ವ್ಯವಸ್ಥೆ ಟೆಕ್ಸಾಸ್ ನಲ್ಲಿ ಇಲ್ಲ. ಆಗಾಗಲೇ ಮೈನಸ್ 22 ಕ್ಕೆ ಕುಸಿದ ತಾಪಮಾನದ ಕಾರಣದಿಂದ ನೀರು ಹೆಪ್ಪುಗಟ್ಟಿ ಪೈಪುಗಳು ಒಡೆಯುತ್ತಿವೆ ಎಂದು ಗೊತ್ತಾಯಿತು. ತಕ್ಷಣ ಮಾಡಿದ ಮೊದಲ ಕೆಲಸ ಎರಡೂ ಬಾತ್ ಟಬ್ ಗಲ್ಲಿ ನೀರು ತುಂಬಿಟ್ಟಿದ್ದು. ಎರಡು ದಿನಗಳಿಗಾಗುವಷ್ಟು ಕುಡಿಯುವ ನೀರು ಶೇಖರಿಸಿಕೊಂಡು ಅಂತೂ ಈ ಭಯಂಕರ ಶೀತಮಾರುತಕ್ಕೆ ನಾನು ಸಜ್ಜಾಗಿದ್ದೇನೆ ಎಂದುಕೊಳ್ಳುವಷ್ಟರಲ್ಲಿ ಸಿಕ್ಕಿತ್ತು ಸುದ್ದಿ, ಮತ್ತೊಂದು ಚಂಡಮಾರುತ ಟೆಕ್ಸಾಸ್ ನ್ನು ತಬ್ಬಿಕೊಳ್ಳಲಿದೆ ಎಂದು !! ನಾನು ರೆಡಿ ಇರುವುದು ಬದಿಗಿರಲಿ, ದೇಶವೇ ಈ ಸುದ್ದಿಗೆ ಸಿದ್ಧವಿರಲಿಲ್ಲ.

ಇಡೀ ರಾಜ್ಯದಲ್ಲಿ ಕರೆಂಟು, ನೀರು, ಶಾಖದ ವ್ಯವಸ್ಥೆ ಇಲ್ಲ

ಇಡೀ ರಾಜ್ಯದಲ್ಲಿ ಕರೆಂಟು, ನೀರು, ಶಾಖದ ವ್ಯವಸ್ಥೆ ಇಲ್ಲ

ಮರುದಿನ ಬೆಳಗಾಗುವಷ್ಟರಲ್ಲಿ ಇಡೀ ರಾಜ್ಯ ಕರೆಂಟು, ನೀರು, ಶಾಖದ ವ್ಯವಸ್ಥೆ ಇಲ್ಲದೆ ಅಲ್ಲೋಲಕಲ್ಲೋಲವಾಗಿತ್ತು. ನಮ್ಮ ಹೀಟರ್ ಕೆಲಸ ಮಾಡಲು ಕರೆಂಟು, ನೀರು ಎರಡೂ ಬೇಕು. ಹೀಟಿಂಗ್ ಇಲ್ಲದೆ ನಮ್ಮಅಪಾರ್ಟ್ಮೆಂಟ್ ಫ್ರಿಡ್ಜ್ ತರಹ ತಣ್ಣಗಾಗಿತ್ತು. ಐದು - ಆರು ಪದರಗಳ ಬಟ್ಟೆಹಾಕಿಕೊಂಡರೂ ನಡುಕ. ನಮ್ಮ ಪರಿಸ್ಥಿತಿಯೇ ಹೀಗಾದರೆ ಪಾಪ, ಕರೆಂಟ್ ಕೂಡ ಇಲ್ಲದೆ ತಣ್ಣನೆಯ ಆಹಾರ ತಿನ್ನುತ್ತಿರುವ, ಆಹಾರವೂ ದುರ್ಲಭವಾಗಿರುವ ಲಕ್ಷಗಟ್ಟಲೆ ಜನರ ಬಗ್ಗೆ ಮನಸ್ಸು ಮರುಗತೊಡಗಿತು. ಆಗಾಗಲೇ ತುರ್ತುಪರಿಸ್ಥಿತಿ ಘೋಷಣೆ ಮಾಡಿ ಸರ್ಕಾರ ಅಲ್ಲಲ್ಲಿ ಶಾಖ-ಕೇಂದ್ರಗಳನ್ನು ನಿರ್ಮಿಸಿತ್ತು. ತುರ್ತುವ್ಯವಸ್ಥೆಗಳ ವಾಹನಗಳು ಎಡೆಬಿಡದೆ ಕೆಲಸಮಾಡುತ್ತಿದ್ದವು. ಕೊರೆಯುವ ಚಳಿ, ಆಹಾರದ ಕೊರತೆ ಜೊತೆ ಮನೆಗಳ ಒಳಗೆ ಪೈಪುಗಳು ಒಡೆದು ನೀರು ಬಸಿಯುತ್ತಿರುವ ಫೋಟೋಗಳು ಫೋನಿನಲ್ಲಿ ನಿರಂತರವಾಗಿ ಬರತೊಡಗಿದವು. ಆ ಹೊತ್ತಿಗೆ ಅನ್ನಿಸಿದ್ದು, ನಮ್ಮ ಹತ್ತಿರ ಎಷ್ಟೆಲ್ಲಾ ಇದೆ! ತಲೆಯ ಮೇಲೆ ಸೂರು, ತಿನ್ನಲು ಆಹಾರ, ಚಳಿಯಿದ್ದರೂ ಕನಿಷ್ಠ ತೊಯ್ದು ತೊಪ್ಪೆಯಲ್ಲದ ಬಟ್ಟೆ, ನಾವೆಷ್ಟು ಅದೃಷ್ಟಶಾಲಿಗಳು!

ನಗರಪಾಲಿಕೆ ಕಡೆಯಿಂದ, ನಾನಾ ಸಂಘಸಂಸ್ಥೆಗಳಿಂದ ಮನೆಯೊಳಗಿನ ಶಾಖವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಸಲಹೆ, ಉಪಾಯಗಳ ಬಗ್ಗೆ ಮೆಸೇಜುಗಳು ಬರಲು ಶುರುವಾಗಿದ್ದವು. ಕಿಟಕಿ ಪರದೆಗಳನ್ನೆಲ್ಲ ಮುಚ್ಚಿ, ಅದರಮೇಲೆ ಮತ್ತೊಂದು ಬೆಡ್ ಶೀಟ್ ಇಳಿಬಿಟ್ಟೆವು. ಹಳೆ ಬಟ್ಟೆಗಳನ್ನೆಲ್ಲ ತಂದು ಕಿಟಕಿ ಬಾಗಿಲು ಸಂದುಗಳನ್ನು ತುಂಬಿದ್ದಾಯ್ತು. ಮನೆ ಮಂದಿಯೆಲ್ಲ ಒಂದೇ ರೂಮಿನಲ್ಲಿ ಇದ್ದರೆ ತಕ್ಕಮಟ್ಟಿಗೆ ಶಾಖದ ಶೇಖರಣೆ ಆಗುವುದರಿಂದ ನಾವು ನಾಲ್ಕೂ ಜನ ಕೂರುವುದಕ್ಕೆ ತಕ್ಕನಾದ ಸ್ಥಳ ಹುಡುಕಬೇಕಾಯಿತು.

ಚಿಕ್ಕ ಕೋಣೆ ನಮ್ಮ ಮನೆಯ ಶಾಖ ಕೇಂದ್ರವಾಗಿತ್ತು

ಚಿಕ್ಕ ಕೋಣೆ ನಮ್ಮ ಮನೆಯ ಶಾಖ ಕೇಂದ್ರವಾಗಿತ್ತು

ಬೆಡ್ ರೂಮಿನಲ್ಲಿ ಇರುವ ವಾಕ್-ಇನ್ ಕ್ಲೋಸೆಟ್ ಎನ್ನುವ ಬಟ್ಟೆಗಳನ್ನಿಡುವ ಕಿಟಕಿಗಳಿಲ್ಲದ ಚಿಕ್ಕ ಕೋಣೆ ನಮ್ಮ ಮನೆಯ ಶಾಖ ಕೇಂದ್ರ ಎಂದು ತೀರ್ಮಾನಿಸಿದೆವು. ರಾತ್ರಿ ಮಲಗಲು ಹೊದಿಕೆಗಳೆಲ್ಲ ಬೆಚ್ಚಗಿರಬೇಕಲ್ಲ? ಅವೆಲ್ಲವನ್ನೂ ಆ ಅಲ್ಲಿ ಹಾಸಿ ಅದರ ಮೇಲೆ ನಮ್ಮ ಪುಸ್ತಕ, ಕಂಪ್ಯೂಟರ್ ಎಲ್ಲ ತಂದು ಇಡುವ ಹೊತ್ತಿಗೆ ಮಕ್ಕಳು ಈ ಎಲ್ಲ ಹೊಸತರಹದ ಏರ್ಪಾಟು ನೋಡಿ ಖುಷಿಯಿಂದ ಕುಣಿದಾಡಿಡುತ್ತಿದ್ದರು! ಇದ್ದಬದ್ದ ಸ್ವೆಟರ್, ಜಾಕೆಟ್ ಎಲ್ಲವನ್ನೂ ಹಾಕಿಕೊಂಡು ಒತ್ತಟ್ಟಿಗೆ ಕುಳಿತದ್ದಾಯಿತು.

ಮನೆಯ ಇನ್ಯಾವ ಜಾಗದಲ್ಲೂ ಕಾಲಿಡಲಾಗದಷ್ಟು ಚಳಿ ಇದ್ದದ್ದರಿಂದ ಕೊನೆಗೆ ಊಟವನ್ನೂ ಅದೇ ಕೋಣೆಯಲ್ಲಿ ಮಾಡಿದ್ದಾಯ್ತು. ರಾತ್ರೆ ಮಲಗುವುದೂ ಅಲ್ಲಿಯೇ ಎಂದು ನಿರ್ಧರಿಸಿದಾಗಂತೂ ಮಕ್ಕಳಿಗೆ ರೋಮಾಂಚನ! ಈ ಎಲ್ಲ ತೊಂದರೆಗಳನ್ನು ಲೆಕ್ಕಿಸದೇ, ಚಳಿಯಾದರೂ ಹೊಸತನ್ನುಆನಂದಿಸುವ ಮಕ್ಕಳ ಮನೋಭಾವ ನಿಜಕ್ಕೂ ಪ್ರಶಂಸನೀಯ . ಬೇಸಿಗೆ, ಮಳೆ, ಚಳಿಗಾಲವೆನ್ನದೇ , ಸಣ್ಣ ಪುಟ್ಟ ದೂರುಗಳಿಗೆ ಕಿವಿಗೊಡದೇ, ಚಿಕ್ಕವರಿದ್ದಾಗಿನಿಂದ ಗುಡ್ಡ ಕಾಡು ಸುತ್ತಿಸಿ ಅವರನ್ನು ಗಟ್ಟಿ ಮಾಡಿದ್ದು ಸಾರ್ಥಕವೆನಿಸಿತು.

ಮುಂದಿನ ಮೂರು ದಿನ ನಾವು ಕಂಡ ಅತ್ಯಂತ ತಣ್ಣನೆಯ ಹಗಲು-ರಾತ್ರಿಗಳು. ಇಡೀ ಮನೆ ಮಂಜುಗಡ್ಡೆಗಳಿಂದ ಮಾಡಿದಂತೆ ತಣ್ಣಗೆ ಕೊರೆಯುತ್ತಿತ್ತು. ಏನು ಮುಟ್ಟಿದರೂ ಐಸ್ ಮುಟ್ಟಿದಂತೆ. ಎಲ್ಲ ಸ್ನೇಹಿತರದ್ದೂ ಇದೇ ಪಾಡಾದ್ದರಿಂದ ಒಬ್ಬರಿಗೊಬ್ಬರು ಏನೂ ಮಾಡದಂತಹ ಅಸಹಾಯಕ ಪರಿಸ್ಥಿತಿ. ಹೀಗಿರುವಾಗ ಕೆಲವು ಪ್ರದೇಶಗಳಲ್ಲಿ ಮನೆಗಳಲ್ಲಿ ಕರೆಂಟು, ಹೀಟರ್ ಇರುವಂಥವರು ಸಹಾಯ ಬೇಕಾದವರಿಗೆ ಆಶ್ರಯ ಕೊಡುತ್ತಿದ್ದರು. ಊಟ ತಿಂಡಿಯ, ಕುಡಿಯುವ ನೀರಿನ ಸರಬರಾಜಿಗೆ ವ್ಯವಸ್ಥೆ ಮಾಡುತ್ತಿದ್ದರು. ಆದರೆ ನಾವೇ ಹೊರಗೆ ಹೆಪ್ಪುಗಟ್ಟಿದ ರಸ್ತೆಗಳ ಮೇಲೆ ಪ್ರಯಾಣ ಮಾಡುವ ಸಾಹಸಕ್ಕೆ ಕೈಹಾಕಲಿಲ್ಲ.

ನಮ್ಮೊಳಗಿನ ಸಹನಶೀಲತೆಯ ಅಳೆಯಲು ಒಂದು ಅವಕಾಶ ಎನ್ನುವ ಮನಸ್ಥಿತಿಯಲ್ಲಿ ಪರಸ್ಪರ ಪ್ರೋತ್ಸಾಹದ ಮಾದರಿಯಲ್ಲಿ ಸಮಯ ಕಳೆಯತೊಡಗಿದೆವು. ಅಷ್ಟರಲ್ಲಿ ವಾಟ್ಸ್ಯಾಪ್ ನಲ್ಲಿ ಯಾರೋ ಫೈರ್ ಪ್ಲೇಸ್ ನ ಫೋಟೋ ಹಾಕಿದ್ದಾಗ ನೆನಪಾಯಿತು ನಮ್ಮ ಮನೆಯಲ್ಲೂ ಅದು ಇದೆ ಎಂದು! ಗ್ಯಾಸ್ ಚಾಲಿತ ಸಣ್ಣ ಅಗ್ಗಿಷ್ಟಿಕೆ ಇಡೀ ಹಾಲ್ ನ್ನು ಬೆಚ್ಚಗಾಸುವುದಕ್ಕೆ ಸಾಧ್ಯವಿಲ್ಲದಿದ್ದರೂ ಅದರ ಹತ್ತಿರ ಕುಳಿತರೆ ಚಳಿಯಿಂದ ರಕ್ಷಣೆ ಪಡೆಯಬಹುದಾಗಿತ್ತು. ಆನಂತರ ನಮ್ಮ ಹಗಲು ವೇಳೆಯ ಬಿಡಾರ ಕ್ಲೋಸೆಟ್ ನಿಂದ ಫೈರ್ ಪ್ಲೇಸ್ ಗೆ ಸ್ಥಳಾಂತರಗೊಂಡಿತು.

ಚಂಡಮಾರುತದ ಆಟೋಪ ನಿರಂತರವಾಗಿ ಸಾಗುತ್ತಿತ್ತು

ಚಂಡಮಾರುತದ ಆಟೋಪ ನಿರಂತರವಾಗಿ ಸಾಗುತ್ತಿತ್ತು

ಹೊರಗೆ ಚಂಡಮಾರುತದ ಆಟೋಪ ನಿರಂತರವಾಗಿ ಸಾಗುತ್ತಿತ್ತು. ಒಳಗೆ ಬಾತ್ ಟಬ್ ನಲ್ಲಿ ಶೇಖರಿಸಿದ ನೀರಿನ ಮಟ್ಟ ಇಳಿಯುತ್ತಿತ್ತು, ನೀರಿಲ್ಲದಿದ್ದರೆ ಏನಂತೆ, ನೀರಿನ ಮತ್ತೊಂದು ರೂಪ ಇಡೀ ಟೆಕ್ಸಾಸನ್ನೇ ಆವರಿಸಿಕೊಂಡಿದೆಯಲ್ಲ? ರಾಜ್ಯಾದ್ಯಂತ ಎಲ್ಲರೂ ಮಾಡುತ್ತಿರುವಂತೆ ಮುಂಬಾಗಿಲಲ್ಲೇ ಬಿದ್ದು ಕಾಲಿಗೆ ತೊಡರುವ ರಾಶಿ ರಾಶಿ ಹಿಮವನ್ನು ತಂದು ನೀರುಮಾಡಿಕೊಳ್ಳುವ ಪ್ಲಾನ್ ಮಾಡಲಾಯಿತು! ಇಷ್ಟು ಹೇಳುವುದೇ ತಡ ಮಕ್ಕಳಿಗಂತೂ ಎಲ್ಲಿಲ್ಲದ ಉತ್ಸಾಹ! ಬಕೆಟ್, ಪಾತ್ರೆ, ಸೌಟು ಹೀಗೆ ಕಣ್ಣಿಗೆ ಕಂಡಿದ್ದೆಲ್ಲ ತೆಗೆದುಕೊಂಡು ಪೈಪೋಟಿಯ ಮೇಲೆ ಹಿಮವನ್ನು ಟಬ್ ಗೆತಂದು ಸುರುಗಿದೆವು. ಈ ಕೆಲಸ ನಮಗೆ ಜೊತೆ ಸ್ವಲ್ಪ ದೈಹಿಕ ಚಟುವಟಿಕೆ ಕೊಟ್ಟಿದ್ದು ಮಾತ್ರವಲ್ಲದೆ, ತತ್ಕಾಲಕ್ಕೆ ದೇಹದ ಉಷ್ಣಾ೦ಶವನ್ನೂ ಏರಿಸಿ ಹಿತವಾದ ಅನುಭವ ಕೊಟ್ಟಿತ್ತು! ಒಟ್ಟಿನಲ್ಲಿ ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬುದನ್ನು ಗ್ರಹಿಸಲು ಬಹಳಷ್ಟು ಅವಕಾಶಗಳು ಈ ಒಂದು ವಾರದಲ್ಲಿ ದೊರಕಿದ್ದವು.

ಈ ಒಂದು ವಾರ ನಮ್ಮ ನಾಲ್ಕು ಜನರಲ್ಲಿ ಆಪ್ತ ನೆನಪುಗಳನ್ನು ಮೂಡಿಸಿದೆ. ಚಳಿಯ ಸಲುವಾಗಿ ಕೂತಲ್ಲೇ ಒಟ್ಟಾಗಿ ಇರಬೇಕಾದ ಕಾರಣ, ಒಗಟು ಬಿಡಿಸುವುದು ಇತ್ಯಾದಿ ಆಟಗಳನ್ನು ಆಡಿದೆವು. ಮಕ್ಕಳು ತಮ್ಮ ಅನುಭಾವಗಳನ್ನು ಚಿತ್ರದಲ್ಲಿ, ಬ್ಲಾಗ್ ನಲ್ಲಿ ದಾಖಲಿಸಿದರು. ಸ್ನೇಹಿತರ, ನೆರೆಹೊರೆಯವರ ಸುರಕ್ಷತತೆಯನ್ನು ದಿನಕ್ಕೊಮ್ಮೆ ವಿಚಾರಿಸಿದಾಗ, ನ್ಯೂಸ್ ನಲ್ಲಿ ನಮಗಿಂತ ಹತ್ತು ಪಟ್ಟು ಕಷ್ಟದಲ್ಲಿರುವವರನ್ನು ನೋಡಿ ನಮಗಿರುವ ಸೌಲಭ್ಯಗಳ ಬಗ್ಗೆ ಚರ್ಚಿಸಿದೆವು.

ನೈಸರ್ಗಿಕ ಸಂಪನ್ಮೂಲಗಳ ಬೆಲೆ ಅರ್ಥಮಾಡಿಸಿದ ಶೀತಮಾರುತ

ನೈಸರ್ಗಿಕ ಸಂಪನ್ಮೂಲಗಳ ಬೆಲೆ ಅರ್ಥಮಾಡಿಸಿದ ಶೀತಮಾರುತ

ನೀರಿನ ಮಿತಬಳಕೆಗಾಗಿ ಎಲ್ಲರೂ ಒಂದೇ ಪ್ಲೇಟಿನಲ್ಲಿ ತಿಂಡಿ ತಿಂದೆವು. ಟೀ ಬಿಟ್ಟು ಮತ್ತೇನೂ ಮಾಡಲು ಗೊತ್ತಿಲ್ಲದ, ಅಡುಗೆ ಮನೆಯೆಂದರೆ ಮಾರು ದೂರ ಹೋಗುವ ಮಹೇಶ್ ಈ ಸಾರಿ ಮಾತ್ರ ಅಡುಗೆಯಲ್ಲಿ ನನ್ನ ಸಹಾಯಕ್ಕೆ ಎಲ್ಲಿಲ್ಲದ ಉತ್ಸಾಹ ತೋರಿಸುತ್ತಿದ್ದರು! ಅಡುಗೆ ಮನೆಯ ಒಲೆಯಿಂದ ಬರುವ ಶಾಖ ಅಷ್ಟು ಅಮೂಲ್ಯ! ದೋಸೆಯಂತೂ ಸೀದಾ ಕಾವಲಿಯಿಂದ ತಿನ್ನುವುದೇ ಮಜಾ ಎನಿಸುತ್ತಿತ್ತು. ತೆಂಗಿನಕಾಯಿ ಹಾಗೂ ಬಾದಾಮಿ ಬಳಸಿ ಹಾಲು ಮನೆಯಲ್ಲೇ ಮಾಡಿಕೊಳ್ಳುವ ವಿಧಾನ ಸ್ನೇಹಿತರಿಗೆ ಕಲಿಸಿದ್ದು, ಶೇಂಗಾಬೀಜದಿಂದ ಮೊಸರು ಮಾಡುವುದು ಕಲಿತಿದ್ದು ಈ ದಿನಗಳ ಸಾಧನೆಗಳಲ್ಲಿ ಒಂದು!

ಶೀತ ಮಾರುತ ಅಪ್ಪಳಿಸಿದ ನಂತರ ಒಂಭತ್ತನೇ ದಿನ, ರಥಸಪ್ತಮಿ ಯಂದು ಮೊದಲ ಬಾರಿಗೆ ಸೂರ್ಯನ ದರ್ಶನವಾಯಿತು! ಅಷ್ಟು ದಿನ ಮೈನಸ್ ಉಷ್ಣಾ೦ಶದಲ್ಲಿ ಇದ್ದುದ್ದಕ್ಕೆ ಅಂದು 1 ಡಿಗ್ರಿ ಕೂಡಾ ಬಹಳ ಹಿತವೆನಿಸಿತ್ತು! ನಂತರ ಇನ್ನೆರಡು ದಿನಗಳಲ್ಲಿ ರಾಜ್ಯಾದ್ಯಂತ ಕರೆಂಟು, ನೀರಿನ ವ್ಯವಸ್ಥೆ ಪೂರ್ವಸ್ಥಿತಿಗೆ ಬಂತು. ಹದಿನಾಲ್ಕು ದಿನಗಳ ನಂತರ ಶಾಲೆಗಳು ಮತ್ತೆ ತೆರೆದವು. ನೋಡಲು ಎಲ್ಲವೂ ಮೊದಲಿನಂತೆ ಕಂಡರೂ ಈ ಚಾರಿತ್ರಿಕ ಚಂಡ ಮಾರುತ ಎಲ್ಲರನ್ನೂ ಸ್ವಲ್ಪಮಟ್ಟಿಗಾದರೂ ಬದಲಾಯಿಸಿದೆ. ನಾವೆಷ್ಟು ಸುಖದ ದಾಸರಾಗಿದ್ದೇವೆಂದು ತಿಳಿಸಿಕೊಟ್ಟಿದೆ. ನೈಸರ್ಗಿಕ ಸಂಪನ್ಮೂಲಗಳ ಬೆಲೆ ಅರ್ಥಮಾಡಿಸಿದೆ. ಪ್ರಕೃತಿ ಎದುರಿಗೆ ನಮ್ಮ ತಂತ್ರಜ್ಞಾನ, ಅಭಿವೃದ್ಧಿ, ಆಧುನಿಕತೆ ಎಲ್ಲವೂ ಅರ್ಥಹೀನ ಎಂದು ಸಾಬೀತುಪಡಿಸಿದೆ. ಎಲ್ಲಕ್ಕಿಂತ ಮೇಲಾಗಿ ಒಂದು ಮನುಕುಲಕ್ಕೆ ಸಂದೇಶವನ್ನೂ ಕಳುಹಿಸಿದೆ. ಅದನ್ನು ಅರ್ಥೈಸಿಕೊಳ್ಳುವ ಕೆಲಸ ಮಾತ್ರ ಬಾಕಿ ಉಳಿದಿದೆ.

English summary
Texas winter storm 2021: Resident Suma Beena from Karnataka otigin shares her experience of winter, power outrage, cold wave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X