• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಸ್ವಾರ್ಥ, ಸಮಾನತೆಯ ಪ್ರತಿರೂಪದ ಶಿಕ್ಷಕರಿಗೊಂದು ದೊಡ್ಡ ಸಲಾಮ್

|

ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮಃ ಎಂದು ಗುರುವನ್ನು ದೇವರ ರೂಪದಲ್ಲಿ ಕಾಣಲಾಗುತ್ತಿದೆ. ಹೀಗೆ ಅನೇಕರ ಬಾಳಿಗೆ ಬೆಳಕಾಗುವವರಿಗೆ ಶಿಕ್ಷಕರು ದೇವರಂತೆ ಕಾಣುತ್ತಾರೆ. ಕಲಿಕೆಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಗುರುವೊಬ್ಬರು ಬೇಕು ಎನಿಸುತ್ತದೆ. ಜಗತ್ತಿನಲ್ಲಿ ತಾಯಿಯ ಹೊರತಾಗಿ ಎಲ್ಲಾ ಸಮಸ್ಯೆಗಳಿಗೂ ದಾರಿದೀಪವಾಗಿ ನಿಲ್ಲಬಲ್ಲ ಸೃಷ್ಟಿ ಎಂದರೆ ಅದು ಶಿಕ್ಷಕರು ಮಾತ್ರ.

ತತ್ವಜ್ಞಾನಿ, ಆದರ್ಶ ಶಿಕ್ಷಕ, ಮಾಜಿ ರಾಷ್ಟ್ರಪತಿಯೂ ಆಗಿರುವ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸವಿ ನೆನಪಿಗಾಗಿ ಪ್ರತಿವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ನಮಗೆ ಕಲಿಸಿದ ಶಿಕ್ಷಕರನ್ನು ನೆನೆಯುತ್ತಾ ಈ ಲೇಖನ...

ಅಕ್ಷರ ಕಲಿಸಿದ... ಬದುಕೋದನ್ನು ತೋರಿಸಿದ ಗುರುಗಳಿಗಿರಲಿ ನಮನ

ತಂತ್ರಜ್ಞಾನ ಮುಂದುವರೆದಿರುವ ಈ ಕಾಲದಲ್ಲಿ ಜ್ಞಾನ, ಮಾಹಿತಿ ಪಡೆಯುವುದು ಸುಲಭವಾದರೂ, ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿಕೊಳ್ಳಲು ಗುರುವೊಬ್ಬರ ಅಗತ್ಯ ಇದ್ದೇ ಇರುತ್ತದೆ. ಸರಳತೆ, ತಾಳ್ಮೆ, ಸಮಗ್ರತೆಯ ಪ್ರತಿರೂಪವಾಗಿ ಶಿಕ್ಷಕರನ್ನು ನಾವು ಕಾಣುತ್ತೇವೆ.

ಶಿಕ್ಷಕರು ನಮಗೆ ನಿಜವಾದ ಅನುಕರಣೀಯ ವ್ಯಕ್ತಿಗಳಾಗಿದ್ದಾರೆ. ನಮ್ಮ ಜೀವನದಲ್ಲಿ ಒಳ್ಳೆಯ ಚಿಂತನೆಯನ್ನು ಬೆಳೆಸಿ ಸರಿ ಮಾರ್ಗವನ್ನು ತೋರುವವರು ಅವರಾಗಿದ್ದಾರೆ. ಚಿಕ್ಕವರಿದ್ದಾಗ ಶಾಲಾ ದಿನಗಳಲ್ಲಿ ಶಿಕ್ಷಕರ ದಿನಾಚರಣೆಯನ್ನು ತುಂಬಾ ಸಂಭ್ರಮದಿಂದ ಆಚರಿಸುತ್ತಿದ್ದೇವು.

ವರ್ಷಪೂರ್ತಿ ಶಿಕ್ಷಕರ ಮಾತು ಕೇಳಿಸಿಕೊಳ್ಳುತ್ತಿದ್ದ ನಾವು, "ಟೀಚರ್ಸ್ ಡೇ' ದಿನ ಶಿಕ್ಷಕರನ್ನು ನಮ್ಮ ಪ್ರೀತಿಯಿಂದ ಕಟ್ಟಿ ಹಾಕುತ್ತಿದ್ದೆವು. ಕೇಕ್ ಕತ್ತರಿಸಿ, ಉಡುಗೊರೆಗಳನ್ನು ನೀಡಿ, ನಾವೇ ಅವರಿಗೆ ಸ್ಪರ್ಧೆ ಏರ್ಪಡಿಸಿ ಟೀಚರ್ಸ್ ಜತೆ ಹಾಡಿ ನಲಿದು ಖುಷಿಪಡುತ್ತಿದ್ದೆವು.

ಉತ್ತರ ಕರ್ನಾಟಕದವನಾದ ನನಗೆ ಬಾಲ್ಯದಲ್ಲಿ ಆಟಗಳೆಂದರೆ ತುಂಬಾ ಇಷ್ಟ. ಶಾಲೆಗೆ ಹೋಗಲು ಭಯಪಡುತ್ತಿದ್ದ ನನಗೆ ಶಾಲೆ ಮೇಲೆ, ತರಗತಿ ಮೇಲೆ ಪ್ರೀತಿ ಬೆಳೆಯಲು ನನ್ನ ಪ್ರಾಥಮಿಕ ಶಾಲೆಯ ಶಿಕ್ಷಕರೇ ಕಾರಣ.

ಶಿಕ್ಷಕರು ಕಲಿಸುತ್ತಿದ್ದ ರೀತಿ, ಅವರು ತೋರುವ ಪ್ರೀತಿ, ನಮ್ಮೊಂದಿಗೆ ನಮ್ಮಂತೆಯೇ ಆಡಿ ಖುಷಿಪಡಿಸಿದ್ದಾರೆ. ಕಲಿಕೆಯಲ್ಲಿ ಅಥವಾ ಬೇರೆ ವಿಚಾರದಲ್ಲಿ ತಪ್ಪು ಮಾಡಿದಾಗ ಶಿಕ್ಷೆ ನೀಡಿದ್ದಾರೆ. ಅದೇ ಕಲಿಕೆ, ವೈಯಕ್ತಿಕವಾಗಿ ಒಳ್ಳೆಯದು ಮಾಡಿದಾಗ ಅವರೇ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ.

ನಾನು ಯಾವುದೇ ವಿಷಯದ ಕಲಿಕೆಯಲ್ಲಿ ಹಿಂದೆ ಉಳಿದಾಗ ನಮಗೆ ತಿದ್ದಿ ತಿಳಿ ಹೇಳಿದ ಗುರುಗಳು ಇಂದು ನಮಗೆ ಆದರ್ಶವಾಗಿ ಕಾಣುತ್ತಾರೆ. ಭಾಷೆಯ ಬಳಕೆಯಲ್ಲಿ ತಪ್ಪು ಮಾಡಿದಾಗ ಅವರು ಕಿವಿಹಿಂಡಿದ್ದು ನಮಗೆ ಈಗಲೂ ನೆನಪಿದೆ.

ಯಾವ ವಿದ್ಯಾರ್ಥಿಯನ್ನು ಭೇದ-ಭಾವದಿಂದ ನೋಡದೆ ಎಲ್ಲರನ್ನೂ ಈ ಸಮಾಜದಲ್ಲಿ ಸಮಾನವಾಗಿ ನೋಡುತ್ತಾರೆಂದರೆ ಅದು ಶಿಕ್ಷಕರು ಮಾತ್ರ. ಇದು ನನ್ನ ವಿದ್ಯಾರ್ಥಿ ಜೀವನದುದ್ದಕ್ಕೂ ಕಂಡುಬಂದಿರುವ ಸತ್ಯ. ಯಾವುದೇ ಸ್ವಾರ್ಥವಿಲ್ಲದೇ ವಿದ್ಯಾರ್ಥಿಗಳ ಏಳಿಗೆ ಬಯಸುವವರು ನಮ್ಮ ಶಿಕ್ಷಕರು.

ತಮ್ಮ ವಿದ್ಯಾರ್ಥಿ ಭವಿಷ್ಯದಲ್ಲಿ ಒಬ್ಬ ಉನ್ನತ ಸರ್ಕಾರಿ ಅಧಿಕಾರಿಯಾದಾಗ ಮೊದಲು ಖುಷಿಪಡುವವರು ಶಿಕ್ಷಕರಾಗಿರುತ್ತಾರೆ. ಅಂತಹ ಶಿಕ್ಷಕರು ಎಲ್ಲಡೆಯೂ ಇದ್ದಾರೆ ಎನ್ನುವುದು ನನ್ನ ನಂಬಿಕೆಯಾಗಿದೆ.

ಕಲಿಕೆ ಮತ್ತು ಜೀವನದ ಪರೀಕ್ಷೆಯಲ್ಲಿ ಸೋತು ಕೂತಾಗ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುವವರು ನಮ್ಮ ಶಿಕ್ಷಕರಾಗಿರುತ್ತಾರೆ. ನಮ್ಮ ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಅತ್ಯಂತ ಮಹತ್ವವಾಗಿದೆ. ನಮ್ಮಲ್ಲಿರುವ ಅಜ್ಞಾನವನ್ನು ಹೊರಗೆ ಹಾಕಲು ಶಿಕ್ಷಕರು ಮಾರ್ಗದರ್ಶಿಯಾಗುತ್ತಾರೆ.

ಗುರು ಎಂಬ ಶಬ್ದದ ಅರ್ಥವೇ ಅಂಧಃಕಾರವನ್ನು ದೂರಾಗಿಸುವವನು ಎಂದು. ಪ್ರತಿಯೊಬ್ಬ ವಿದ್ಯಾರ್ಥಿ ಜೀವನದ ಏಳು-ಬೀಳಿಗೆ ಗುರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣನಾಗುತ್ತಾನೆ. ಏಕೆಂದರೆ ಒಬ್ಬ ಶಿಕ್ಷಕನು ನಮ್ಮಲ್ಲಿರುವ ಪ್ರಜ್ಞೆಯನ್ನು ಜಾಗೃತಗೊಳಿಸುವ ಶಕ್ತಿಯಾಗಿರುತ್ತಾನೆ.

"ವಿದ್ಯೆಯಂ ಕಲಿಸಿದಾತಂ ಗುರು' ಎನ್ನುವುದು ಜ್ಞಾನ ಬೋಧನೆ ಯಾರಿಂದಾದರೂ ಅದನ್ನು ಸ್ವೀಕರಿಸುವ ಮನೋಭಾವ ಎಲ್ಲರಲ್ಲೂ ಇದ್ದರೆ ಒಳಿತು. ಶಂಕರಾಚಾರ್ಯರಿಗೆ ಒಮ್ಮೆ ಚಂಡಾಲನೋರ್ವನಿಂದ ಉಪದೇಶವಾಯಿತಂತೆ. ಚಂಡಾಲನು ಮಾತುಗಳನ್ನು ನಾನೇಕೆ ಕೇಳಬೇಕು ಎಂದು ಶಂಕರರು ನಿರ್ಧರಿಸಬಹುದಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ.

ಇಂದು ಆಧುನಿಕ ತಂತ್ರಜ್ಞಾನಗಳು ಬಂದು ಗುರು-ಶಿಷ್ಯರ ನಡುವಿನ ಬಾಂಧವ್ಯವನ್ನು ಹಾಳು ಮಾಡುತ್ತಿವೆ. ಕೆಟ್ಟ ಅಭಿರುಚಿಯ ಚಿತ್ರಗಳು ಸಮಾಜವನ್ನು ಕೆಡಿಸುತ್ತಿವೆ. ಗುರುವಾದವನು ತನ್ನ ಶಿಷ್ಯನಿಗೆ ತಂದೆ-ತಾಯಿ ಎರಡೂ ಆಗಬಲ್ಲ. ಒಳ್ಳೆಯ ಮಾರ್ಗದಲ್ಲಿ ನಡೆಯುವವರು, ನಡೆದವರು, ನಡೆಯಬಯಸುವವರು ಇನ್ನಾದರೂ ತಮ್ಮ ಮಾರ್ಗದರ್ಶಕರನ್ನು ಮರೆಯದೇ ನೆನಪಿಸಿಕೊಳ್ಳುವುದು ಅಗತ್ಯ.

ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮನ್ನು ಪೋಷಿಸಿದವರನ್ನು ಒಮ್ಮೆ ಹಿಂತಿರುಗಿ ನೋಡಿದಾಗಲೇ ತೃಪ್ತಿ ದೊರೆಯುತ್ತದೆ. ಅದು ತಂದೆ-ತಾಯಿಗಳಾಗಿರಬಹುದು ಅಥವಾ ಶಿಕ್ಷಕರೇ ಅಗಿರಬಹುದು. ನಾವು ನಮ್ಮ ಕಾಲೇಜಿನ ಅಥವಾ ಶಾಲೆಯ ಅದರಲ್ಲೂ ಪ್ರಾಥಮಿಕ ಶಾಲೆಯ ಗುರುಗಳನ್ನು ಭೇಟಿ ಮಾಡಿ ಮಾತನಾಡಿಸಿದರೆ ಆಗ ಅವರಿಗೆ ಆಗುವ ಸಂತೋಷದ ಪರಿಯನ್ನು ನೋಡಿ ನಾವು ವಿಸ್ಮಿತರಾಗುವುದು ಖಂಡಿತ. ನನ್ನ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರಿಗೆ ಈ ಲೇಖನ ಅರ್ಪಣೆ. ನನ್ನ ಎಲ್ಲ ಗುರು ವೃಂದಕ್ಕೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು...

English summary
September 5th is being celebrated as Teachers' Day. This day we remember the teachers who taught us, the way to live.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X