ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದುಕಿಗೆ ಗಟ್ಟಿತನ ಕೊಡುವ ವಿವೇಕಾನಂದರ ಸ್ವಾನುಭವದ ಪುಟ್ಟ ಕಥೆಗಳು

|
Google Oneindia Kannada News

"ಈ ಜಗತ್ತು ಇರುವುದು ಹೇಡಿಗಳಿಗಲ್ಲ; ಸೋಲು-ಗೆಲುವುಗಳಿಗೆ ಅಂಜದಿರಿ" ಎನ್ನುತ್ತಲೇ ಯುವಪೀಳಿಗೆಯಲ್ಲಿ ಸ್ಫೂರ್ತಿ, ಗಟ್ಟಿತನವನ್ನು ತುಂಬುತ್ತಿದ್ದ ಸ್ವಾಮಿ ವಿವೇಕಾನಂದರ ಬದುಕೇ ಪ್ರೇರಣೆ. ತಾರುಣ್ಯದ ಶಕ್ತಿಯನ್ನು ಗುರುತಿಸಿ ಯುವ ಹೃದಯಗಳಲ್ಲಿ ಚೈತನ್ಯ ತುಂಬಿ, ಹಿಂದೂ ಧರ್ಮದ ಅನನ್ಯತೆಯನ್ನು, ದೇಶದೆಡೆಗಿನ ಪ್ರೀತಿಯನ್ನು ಉದ್ದೀಪಿಸಿದ ಈ ವೀರ ಸಂತ ನಡೆದ ದಾರಿಯೇ ಹಿರಿದು.

ಜೀವನದ ದಾರಿಯನ್ನು ರೂಪಿಸುವ, ಆ ದಾರಿಯನ್ನು ಸ್ಪಷ್ಟವಾಗಿ ಕಾಣಿಸುವ "ಅನುಭವ"ಗಳ ಖಜಾನೆಯೇ ವಿವೇಕಾನಂದರು. ವಿವೇಕಾನಂದರ, ಅವರ ಆಲೋಚನೆ, ಸೂಕ್ಷ್ಮತೆಯ ಕುರಿತ ಈ ಸಣ್ಣ ಸಣ್ಣ ಕಥೆ ಜೀವನವನ್ನು ನೋಡುವ ದಿಕ್ಕನ್ನೇ ಬದಲಿಸಬಲ್ಲವು.

ನಿನ್ನ ಪಾದದ ಕೆಳಗಿರುವ ದಾರಿ ನೀನು ಕ್ರಮಿಸಿ ಬಂದಿದ್ದೇ...
ಹೀಗೆ ಒಮ್ಮೆ ಹಿಮಾಲಯದಲ್ಲಿ ದೀರ್ಘ ಪಯಣ ಕೈಗೊಂಡಿದ್ದ ವಿವೇಕಾನಂದರು ಅಲ್ಲೇ ಸುಸ್ತಾಗಿ ನಿಂತಿದ್ದ ಒಬ್ಬ ವೃದ್ಧನನ್ನು ಕಂಡರು. ಪರ್ವತದ ಇಳಿಜಾರಿನೊಂದರ ಮೇಲೆ ನಿಂತು, ಇನ್ನು ಹತ್ತಲು ಆಗುವುದೇ ಇಲ್ಲ ಎಂದು ಸೋತು ಹೋದಂತೆ ಕಾಣುತ್ತಿದ್ದ ಆ ವೃದ್ಧ, ವಿವೇಕಾನಂದರನ್ನು ಕಾಣುತ್ತಿದ್ದಂತೆ, "ಒಹ್ ಸ್ವಾಮೀಜಿ, ಹೇಗೆ ಈ ಅಖಂಡ ಪರ್ವತವನ್ನು ಹತ್ತುವುದು, ನನ್ನಿಂದ ಇನ್ನು ಸಾಧ್ಯವೇ ಇಲ್ಲ" ಎಂದು ಕೈ ಚೆಲ್ಲಿ ಕುಳಿತ. ತಾಳ್ಮೆಯಿಂದ ಈ ಮಾತನ್ನು ಕೇಳಿಸಿಕೊಂಡ ವಿವೇಕಾನಂದರು, "ನಿನ್ನ ಪಾದದ ಕೆಳಗೆ ಒಮ್ಮೆ ನೋಡು. ನಿನ್ನ ಪಾದದ ಕೆಳಗಿರುವ ಈ ದಾರಿ ನೀನು ಕ್ರಮಿಸಿ ಬಂದಿದ್ದೇ. ನೀನು ಮುಂದೆ ನೋಡುತ್ತಿರುವ ದಾರಿಯೂ ನಿನ್ನ ಪಾದದ ಕೆಳಗಿರುವುದರಲ್ಲಿ ಸಂಶಯವೇ ಇಲ್ಲ" ಎಂದರು.

ತಾನು ಕ್ರಮಿಸಿದ ದಾರಿಯನ್ನು ಹಿಂದಿರುಗಿ ನೋಡಿ, ಮುಂದೆ ಹುಮ್ಮಸ್ಸಿನಿಂದ ನಡೆದು ತಮ್ಮ ಗುರಿ ಮುಟ್ಟಿದರು ಆ ವೃದ್ಧ.

Swami Vivekananda Related Inspiring Small Stories

ಕಷ್ಟ, ಶತ್ರುಗಳೂ ಹಾಗೇ, ಎದುರಿಸಿದರಷ್ಟೇ ಗೆಲುವು
ಸಾರಾನಾಥ್ ನಲ್ಲಿ ದುರ್ಗಾ ಮಾತೆಯ ದರ್ಶನ ಮಾಡಿದ ನಂತರ ಹೊರಟಿದ್ದ ವಿವೇಕಾನಂದರು, ಒಂದು ದೊಡ್ಡ ಕೆರೆಯನ್ನು ಹಾದು ಹೋಗುತ್ತಿದ್ದರು. ಈ ಸ್ಥಳದಲ್ಲಿ ದೊಡ್ಡ ದೊಡ್ಡ ಮಂಗಗಳು ಸ್ವಾಮೀಜಿಯನ್ನು ಆವರಿಸಿದವು. ಮುಂದೆ ಹೋಗಲು ಬಿಡದೇ ಕಾಡಲು ಆರಂಭಿಸಿದವು. ತಪ್ಪಿಸಿಕೊಳ್ಳಲು ಆ ದಾರಿ ಬಿಟ್ಟು ಬೇರೆ ದಾರಿಯೂ ಇರಲಿಲ್ಲ. ಮುಂದೆ ಅಡಿ ಇಡುತ್ತಿದ್ದಂತೆ ಕಿರುಚಿಕೊಂಡು ಪಾದದ ಮೇಲೇ ಬಿದ್ದು ಭಯ ಹುಟ್ಟಿಸುತ್ತಿದ್ದವು ಮಂಗಗಳು. ಅವು ಹತ್ತಿರತ್ತಿರ ಬಂದಂತೆ ಇವರು ಓಡಲು ಆರಂಭಿಸಿದರು. ಜೋರಾಗಿ ಓಡಿದಂತೆ ಮಂಗಗಳು ಅಟ್ಟಿಸಿಬರುತ್ತಿದ್ದವು. ಏನು ಮಾಡಲು ತೋಚದೇ ಇದ್ದಾಗ, ಇದ್ದಕ್ಕಿದ್ದಂತೆ ಸನ್ಯಾಸಿಯೊಬ್ಬರು ಇವರನ್ನು ಕಂಡು ಕೂಗಿದರು. "ಅವನ್ನು ಎದುರಿಸಿ ನಿಲ್ಲು" ಎಂದು. ತಾನು ಓಡುವುದನ್ನು ನಿಲ್ಲಿಸಿ, ತಿರುಗಿ ಮಂಗಗಳತ್ತ ದೃಷ್ಟಿ ಬೀರಿದರು. ಹಾಗೆ ಮಾಡುತ್ತಿದ್ದಂತೆ ಹಿಂದೆ ಓಡಿ ಹೋದವು ಮಂಗಗಳು. ನಂತರ ಸನ್ಯಾಸಿಗೆ ಧನ್ಯತೆಯಿಂದ ನಮಸ್ಕರಿಸಿದರು. ಕಷ್ಟಗಳು, ಶತ್ರುಗಳೂ ಹಾಗೆ, ಎದುರಿಸಿ ನಿಂತರೆ ಗೆಲ್ಲುವುದು ಕಷ್ಟವಲ್ಲ ಎಂಬರ್ಥವನ್ನು ಅನುಭವದಿಂದಲೇ ಹೇಳಹೊರಟರು ಅವರು.

ಒಂದೇ ಬಾರಿ ಗುರಿ ಇಟ್ಟು ಹೊಡೆದದ್ದು ಹೇಗೆ ಸಾಧ್ಯ?
ಅಮೆರಿಕದಲ್ಲಿ ಕೆಲವು ತರುಣರನ್ನು ನೋಡುತ್ತಾ ನಿಂತಿದ್ದರು ಸ್ವಾಮೀಜಿಗಳು. ನದಿಯಲ್ಲಿ ತೇಲುತ್ತಿದ್ದ ಮೊಟ್ಟೆಯ ಚಿಪ್ಪುಗಳನ್ನು ಗುರಿಯಾಗಿಸಿ ಶೂಟ್ ಮಾಡಲು ಸೇತುವೆ ಮೇಲೆ ನಿಂತು ಪ್ರಯತ್ನಿಸುತ್ತಿದ್ದರು ಆ ತರುಣರು. ಆದರೆ ಅವರು ವಿಫಲವಾಗುತ್ತಲೇ ಇದ್ದರು. ಯಾರಿಗೂ ಶೂಟ್ ಮಾಡಲು ಆಗಲಿಲ್ಲ. ಕೋಪದಿಂದಲೇ ಪ್ರಯತ್ನ ಮುಂದುವರೆಸಿದ್ದರು. ಇದನ್ನೇ ನೋಡುತ್ತಿದ್ದ ವಿವೇಕಾನಂದರು ಬಂದೂಕು ತೆಗೆದುಕೊಂಡು ಗುರಿಯಿಟ್ಟು ಗುಂಡು ಹಾರಿಸಿ, ಎಲ್ಲವನ್ನೂ ಒಡೆಯುವಲ್ಲಿ ಯಶಸ್ವಿಯಾದರು. ಆ ತರುಣರಿಗೋ ಆಶ್ಚರ್ಯ. ನಾವು ಇಷ್ಟು ಪ್ರಯತ್ನಿಸಿದರೂ ಆಗದ್ದು, ನಿಮ್ಮಿಂದ ಹೇಗೆ ಸಾಧ್ಯವಾಯಿತು ಎಂದು ಕೇಳಿದರು. ಸ್ವಾಮೀಜಿ ಉತ್ತರ ಒಂದೇ ಆಗಿತ್ತು. "ನೀವು ಏನೇ ಮಾಡಿದರೂ ಇಡೀ ಮನಸ್ಸನ್ನು ಅದರಲ್ಲಿ ತೊಡಗಿಸಿ. ನೀವು ಬಂದೂಕು ಹಿಡಿದಾಗ, ನಿಮ್ಮ ಮನಸ್ಸೆಲ್ಲವೂ ಗುರಿಯ ಮೇಲೇ ಇರಬೇಕು. ಹೀಗಾದಾಗ ಗುರಿ ತಪ್ಪಲು ಸಾಧ್ಯವೇ ಇಲ್ಲ. ಯಾವುದೇ ಕೆಲಸದಲ್ಲಿ ಪರಿಪೂರ್ಣವಾಗಿ ತೊಡಗಿಕೊಂಡರಷ್ಟೇ ಯಶಸ್ಸು ಸಾಧ್ಯ" ಎಂದು ಹೇಳಿ ಬಂದೂಕು ಕೊಟ್ಟು ಹೊರಟರು.

ಚಿಕ್ಕ ವಿಷಯದಲ್ಲಿ ಮಗನ ಸಾಮರ್ಥ್ಯ ಪರೀಕ್ಷಿಸಿದ ತಾಯಿ
ಹಿಂದೂ ಧರ್ಮದ ಪ್ರತಿಪಾದನೆಗಾಗಿ ಮೊದಲ ಬಾರಿ ವಿದೇಶಕ್ಕೆ ಹೋಗುತ್ತಿದ್ದರು ವಿವೇಕಾನಂದರು. ಆದರೆ ಈ ಕಾರ್ಯಕ್ಕೆ ತನ್ನ ಮಗ ಶಕ್ತ ಹೌದೋ ಅಲ್ಲವೋ ಎಂಬ ಅನುಮಾನ ಅವರ ತಾಯಿಯದ್ದು. ಹೀಗಾಗಿ ಪರೀಕ್ಷಿಸಲೆಂದೇ, ರಾತ್ರಿ ಊಟಕ್ಕೆ ಮಗನನ್ನು ಕರೆದರು. ತನ್ನ ತಾಯಿಯ ವಿಶೇಷ ಪ್ರೀತಿಯೂ ಬೆರೆತ ಆ ಊಟ ವಿವೇಕಾನಂದರಿಗೆ ಹಿತವೆನಿಸಿತ್ತು. ಊಟದ ನಂತರ ಹಣ್ಣುಗಳನ್ನು ಕೊಟ್ಟು, ಅದನ್ನು ಕತ್ತರಿಸಲು ಚಾಕನ್ನು ಮಗನ ಕೈಗೆ ಕೊಟ್ಟರು. ಹಣ್ಣುಗಳನ್ನು ಕತ್ತರಿಸಿ ತಿಂದರು. ನಂತರ ತಾಯಿಯು, "ಮಗು ಆ ಚಾಕುವನ್ನು ಕೊಡು" ಎಂದು ಕೇಳಿದರು. ತಕ್ಷಣವೇ ಅದನ್ನು ಕೊಟ್ಟರು ವಿವೇಕಾನಂದರು. ಆಗ ಸಮಾಧಾನಗೊಂಡ ತಾಯಿಯು, "ಮಗನೇ, ನೀನು ನನ್ನ ಪರೀಕ್ಷೆಯಲ್ಲಿ ಗೆದ್ದಿದ್ದೀಯ. ನೀನು ಹೋಗಲು ನಾನು ಮನಃಪೂರ್ವಕವಾಗಿ ಒಪ್ಪಿದ್ದೇನೆ" ಎಂದರು.

ಆಶ್ಚರ್ಯಗೊಂಡ ವಿವೇಕಾನಂದರು, "ನನ್ನನ್ನು ಹೇಗೆ ಪರೀಕ್ಷಿಸಿದಿರಿ" ಎಂದು ಕೇಳಿದರು. "ಮಗನೇ ನಾನು ಚಾಕುವನ್ನು ಕೇಳಿದಾಗ, ನೀನು ಅದನ್ನು ಹೇಗೆ ಕೊಟ್ಟೆ ಎಂಬುದನ್ನು ಗಮನಿಸಿದೆ. ನೀನು ಚಾಕುವಿನ ಅಂಚನ್ನು ನಿನ್ನ ಕೈಯಲ್ಲಿಟ್ಟುಕೊಂಡು, ಮರದ ಹಿಡಿಯನ್ನು ನನ್ನತ್ತ ಕೊಟ್ಟೆ. ಇದರಲ್ಲಿ, ಇನ್ನೊಬ್ಬರ ಬಗೆಗಿನ ನಿನ್ನ ಕಾಳಜಿ ಕಾಣುತ್ತದೆ. ಅದೇ ನಿನಗೆ ಪರೀಕ್ಷೆ. ತನ್ನ ಹೊರತಾಗಿ ಮತ್ತೊಬ್ಬರ ಒಳಿತಿನ ಕುರಿತು ಯೋಚಿಸುವ ವ್ಯಕ್ತಿಯು ಇಡೀ ವಿಶ್ವಕ್ಕೆ ಪ್ರತಿಪಾದಿಸುವ ಹಕ್ಕನ್ನು ಹೊಂದಿರುತ್ತಾನೆ. ನಿನಗೆ ಆ ಹಕ್ಕು ದೊರೆತಿದೆ. ನಿನಗೆ ನನ್ನೆಲ್ಲಾ ಆಶೀರ್ವಾದ ಇದೆ" ಎಂದು ಹೇಳಿದರು.

English summary
The stories regarding swamy vivekananda, his thoughts and his sensitivity may change the direction of looking at life,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X