ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭತ್ತ ಚೆಲ್ಲಿಕೆ: ಹೆಚ್ಚಿನ ಇಳುವರಿಗೆ ಹುಣಸೂರು ರೈತರ ಹೊಸ ವಿಧಾನ

By ಬಿ.ಎಂ.ಲವಕುಮಾರ್
|
Google Oneindia Kannada News

ಮೈಸೂರು, ಜನವರಿ 19: ಹುಣಸೂರಿನ ಕೆಲವು ರೈತರು ಭತ್ತವನ್ನು ಗದ್ದೆಯಲ್ಲಿ ಚೆಲ್ಲಿಕೆ ವಿಧಾನದ ಮೂಲಕ ಬೆಳೆದು ಯಶಸ್ವಿಯಾಗಿದ್ದಾರೆ. ಈ ವಿಷಯ ತಿಳಿದ ತಕ್ಷಣ ರೈತರಲ್ಲಿ ಇದೇನಪ್ಪಾ? ಹೀಗೂ ಉಂಟಾ? ಭತ್ತವನ್ನು ನಾಟಿ ಮಾಡದೆ ಚೆಲ್ಲಿ ಬೆಳೆಸೋದು ಹೇಗೆ? ಮುಂತಾದ ಪ್ರಶ್ನೆಗಳು ತಲೆಯಲ್ಲಿ ಗಿರಕಿಹೊಡೆಯುವುದು ಖಂಡಿತ!

ಸಾಮಾನ್ಯವಾಗಿ ಭತ್ತವನ್ನು ಸಸಿಮಡಿ ತಯಾರಿಸಿ ಬಿತ್ತನೆ ಮಾಡಿ ಅದು ಪೈರಾಗಿ ಬೆಳೆಯುತ್ತಿದ್ದಂತೆಯೇ ಕಿತ್ತು ಗದ್ದೆಯಲ್ಲಿ ನಾಟಿ ಮಾಡುವುದು ಹಿಂದಿನಿಂದಲೂ ನಡೆದು ಬಂದ ಸಾಂಪ್ರದಾಯಿಕ ಕೃಷಿ. ಇದಕ್ಕೆ ಸಮಯ, ಜನ, ಖರ್ಚು ಎಲ್ಲವೂ ಅಧಿಕವೇ. ಈ ಹಿಂದೆ ಅವಿಭಕ್ತ ಕುಟುಂಬಗಳಿದ್ದ ಕಾಲದಲ್ಲಿ ಎಲ್ಲವನ್ನು ತಾವೇ ಮಾಡುತ್ತಿದ್ದರಿಂದ ಭತ್ತದ ಕೃಷಿ ರೈತರಿಗೆ ನಷ್ಟವಾಗಿ ಗೋಚರಿಸುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ. ಬದಲಾದ ಕಾಲದಲ್ಲಿ ಭತ್ತವನ್ನು ಹಿಂದಿನ ಕಾಲದಂತೆ ಸಾಂಪ್ರದಾಯಿಕವಾಗಿ ಬೆಳೆಯುವುದು ಕಷ್ಟದ ಮತ್ತು ಹೆಚ್ಚು ಖರ್ಚಿನ ಕೃಷಿಯಾಗಿ ಗೋಚರಿಸತೊಡಗಿದೆ.

ಕೃಷಿಯಲ್ಲಿ ತಂತ್ರಜ್ಞಾನ ಬಳಸಿ ಲಾಭ ಕಂಡುಕೊಂಡ ರೈತಕೃಷಿಯಲ್ಲಿ ತಂತ್ರಜ್ಞಾನ ಬಳಸಿ ಲಾಭ ಕಂಡುಕೊಂಡ ರೈತ

ಅದರಲ್ಲೂ ಕೊಡಗಿನಲ್ಲಿ ಭತ್ತದ ಕೃಷಿಯನ್ನು ಮಾಡುವುದೇ ಕಷ್ಟವಾಗಿ ಪರಿಣಮಿಸಿದ್ದು, ನಷ್ಟವಾಗುವ ಕಾರಣ ಇಲ್ಲಿನ ಬಹುತೇಕ ಬೆಳೆಗಾರರು ಭತ್ತದ ಕೃಷಿಗೆ ವಿರಾಮ ಹೇಳಿದ್ದಾರೆ. ಹೀಗಾಗಿ ಹೆಚ್ಚಿನ ಭತ್ತದ ಗದ್ದೆ ಬಯಲುಗಳು ಕೃಷಿ ಮಾಡಲಾಗದೆ ಪಾಳು ಬಿದ್ದಿರುವುದು ಕಂಡು ಬರುತ್ತ್ತಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭತ್ತದ ಗದ್ದೆಗಳು ಅಡಿಕೆ, ತೆಂಗು ತೋಟವಾಗಿ ಮಾರ್ಪಾಡಾಗಿವೆ.

ಆದರೆ ಬಯಲು ಸೀಮೆಯಲ್ಲಿ ಮಾತ್ರ ಒಂದಷ್ಟು ಭತ್ತದ ಗದ್ದೆಗಳು ಉಳಿದುಕೊಂಡಿವೆ. ಮಂಡ್ಯದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಸಮರ್ಪಕವಾಗಿ ಕೆಆರ್ ಎಸ್‍ ಗೆ ನೀರು ಹರಿದು ಬಾರದ ಕಾರಣ ನೀರಿಲ್ಲದೆ ಭತ್ತ ಬೆಳೆಯುವುದೇ ರೈತರಿಗೆ ಕಷ್ಟವಾಗಿದೆ.

ಲಾಭ ಪಡೆಯಲು ಹೊಸ ವಿಧಾನ

ಲಾಭ ಪಡೆಯಲು ಹೊಸ ವಿಧಾನ

ಇಂತಹ ಸಂಕಷ್ಟದ ದಿನಗಳಲ್ಲಿ ಮೊದಲಿನಂತೆ ಸಾಂಪ್ರದಾಯಿಕ ಕ್ರಮದಿಂದ ಭತ್ತದ ಕೃಷಿ ಮಾಡಿದರೆ ನಷ್ಟವಂತೂ ಕಟ್ಟಿಟ್ಟ ಬುತ್ತಿ. ಮೊದಲೇ ಸಾಲದ ಸುಳಿಯಲ್ಲಿರುವ ರೈತರು ನಷ್ಟ ಮಾಡಿಕೊಳ್ಳಲು ತಯಾರಿಲ್ಲ. ಆದ್ದರಿಂದ ನಷ್ಟವಾಗದೆ ಲಾಭದಲ್ಲಿ ಫಸಲು ಪಡಯಲು ಅನುಕೂಲವಾಗುವಂತೆ ಕೃಷಿ ಇಲಾಖೆ ಚೆಲ್ಲಿಕೆ ಮೂಲಕ ಭತ್ತ ಬೆಳೆಯುವ ವಿಧಾನವನ್ನು ಕಂಡು ಹಿಡಿದಿದ್ದು, ಆ ವಿಧಾನವನ್ನು ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿಯಲ್ಲಿ ರೈತರ ಜಮೀನಿನಲ್ಲಿ ಮಾಡಿಸುವ ಮೂಲಕ ಯಶಸ್ಸು ಕಂಡಿದ್ದಾರೆ. ಈ ಹಿಂದೆ ಕೃಷಿ ಅಧಿಕಾರಿ ರಾಮು ಅವರು ಭತ್ತದ ನಾಟಿ ಬದಲಿಗೆ ಚೆಲ್ಲಿಕೆ ಮಾಡಿ ಭತ್ತ ಬೆಳೆಯುವ ವಿಧಾನದ ಬಗ್ಗೆ ಹಿರೀಕ್ಯಾತನಹಳ್ಳಿ ಗ್ರಾಮದ ರೈತರಾದ ಮಹೇಶಗೌಡ, ಕೃಷ್ಣೇಗೌಡ ರಾಜಶೇಖರ್, ಶಿವಪ್ಪ ಅವರಿಗೆ ತಿಳಿಸಿದ್ದರು. ಆ ವಿಧಾನವನ್ನು ಅನುಸರಿಸಿದ ರೈತರು ಇದೀಗ ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಹುಣಸೂರು ತಾಲೂಕಿನಾದ್ಯಂತ 16 ಹೆಕ್ಟೇರ್ ಪ್ರದೇಶಗಳಲ್ಲಿ ಚೆಲ್ಲಿಕೆ ಕ್ರಮದಿಂದ ಭತ್ತವನ್ನು ರೈತರು ಬೆಳೆದು ಯಶಸ್ವಿಯಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಏನಿದು ಚೆಲ್ಲಿಕೆ ವಿಧಾನ?

ಏನಿದು ಚೆಲ್ಲಿಕೆ ವಿಧಾನ?

ಇದೆಲ್ಲದರ ನಡುವೆ ಚೆಲ್ಲಿಕೆ ಕೃಷಿ ವಿಧಾನ ಹೇಗೆ ಎಂಬ ಪ್ರಶ್ನೆಯೂ ಮೂಡದಿರದು. ಈ ಬಗ್ಗೆ ಈಗಾಗಲೇ ಭತ್ತ ಬೆಳೆದ ರೈತರು ಹೇಳುವಂತೆ ಈ ವಿಧಾನದಲ್ಲಿ ನಾಟಿ ಮಾಡಲು ಒಂದು ಎಕರೆ ಪ್ರದೇಶಕ್ಕೆ 10 ರಿಂದ 12 ಕೆಜಿ ಭತ್ತ ಸಾಕು. ಮೊದಲಿಗೆ ಭತ್ತದ ಬೀಜಗಳನ್ನು ಸುಮಾರು 12ಗಂಟೆಗಳ ಕಾಲ ನೆನೆಯಲು ಹಾಕಬೇಕು. ಬಳಿಕ ತೆಗೆದು ಒಂದು ದಿನ ಗೋಣಿಚೀಲಗಳಲ್ಲಿ ತುಂಬಿ ಮೊಳಕೆ ಬರೋ ರೀತಿ ಕಟ್ಟಬೇಕು.

ತುಮಕೂರು ರೈತನಿಗೆ ಭಾರಿ ಅದೃಷ್ಟ ತಂದು ಕೊಟ್ಟ ಅಪ್ಪ ನೆಟ್ಟ ಹಲಸಿನ ಗಿಡತುಮಕೂರು ರೈತನಿಗೆ ಭಾರಿ ಅದೃಷ್ಟ ತಂದು ಕೊಟ್ಟ ಅಪ್ಪ ನೆಟ್ಟ ಹಲಸಿನ ಗಿಡ

ಕೊಟ್ಟಿಗೆ ಗೊಬ್ಬರದಲ್ಲಿ ಉಳುಮೆ

ಕೊಟ್ಟಿಗೆ ಗೊಬ್ಬರದಲ್ಲಿ ಉಳುಮೆ

ಆ ನಂತರ ಗದ್ದೆಯನ್ನು ಕೊಟ್ಟಿಗೆ ಗೊಬ್ಬರ ಬೆರೆಸಿ ಚೆನ್ನಾಗಿ ಉಳುಮೆ ಮಾಡಬೇಕು. ನಾಟಿಗೆ ಮುನ್ನ ಸ್ವಲ್ಪ ನೀರು ಗದ್ದೆಗೆ ಬಿಟ್ಟುಕೊಂಡು ಮಣ್ಣನ್ನು ಕಲೆಸಿದ ರೀತಿ ಉಳುಮೆ ಮಾಡಿ, ಆ ನಂತರ ಮೊಳಕೆ ಬಂದ ಭತ್ತವನ್ನು ತೆಗೆದುಕೊಂಡು ಹಿಮ್ಮುಖವಾಗಿ ತೆಳುವಾಗಿ ಚೆಲ್ಲಬೇಕು. ಗದ್ದೆಯಲ್ಲಿ ಬಿತ್ತಿದ ಬೀಜ ಚೆನ್ನಾಗಿ ಮೊಳಕೆ ಬಂದು ಹಸಿರಾಗುವ ತನಕ ನೀರು ಆರದಂತೆ ನೋಡಿಕೊಳ್ಳಬೇಕು. ಆ ನಂತರ ಪೈರು ಒತ್ತೊತ್ತಾಗಿದ್ದರೆ ಅದನ್ನು ಕಿತ್ತು ದೂರ ಮಾಡಬೇಕು. ಬಳಿಕ ಗೊಬ್ಬರ ನೀರು ನೀಡಿದ್ದೇ ಆದರೆ ಹುಲುಸಾಗಿ ಬೆಳೆದು ಉತ್ತಮ ಇಳುವರಿ ನೀಡುತ್ತದೆ.

ದುಬಾರಿಯೂ ಅಲ್ಲ!

ದುಬಾರಿಯೂ ಅಲ್ಲ!

ಈ ವಿಧಾನದ ಮೂಲಕ ಭತ್ತ ಬೆಳೆದಿದ್ದೇ ಆದರೆ ಒಂದು ಎಕರೆ ಪ್ರದೇಶಕ್ಕೆ ಸುಮಾರು ನಾಲ್ಕರಿಂದ ಐದು ಸಾವಿರದಷ್ಟು ಹಣ ಉಳಿತಾಯವಾಗಲಿದೆಯಂತೆ. ಈಗಾಗಲೇ ಚೆಲ್ಲಿಕೆ ವಿಧಾನದಿಂದ ಭತ್ತ ಬೆಳೆದಿರುವ ಹಿರೀಕ್ಯಾತನಹಳ್ಳಿಯ ರೈತ ಮಹೇಶ್ ಗೌಡ ಅವರ ಪ್ರಕಾರ ಅವರು ಹಲವಾರು ವರ್ಷಗಳಿಂದ ಭತ್ತದ ನಾಟಿ ಮಾಡುವ ವಿಧಾನ ಅಳವಡಿಸಿಕೊಂಡು ಭತ್ತ ಬೆಳೆಯುತ್ತಿದ್ದರು. ಇದೀಗ ಚೆಲ್ಲಿಕೆ ಮಾಡಿ ಭತ್ತ ಬೆಳೆದಿದ್ದು, ಉತ್ತಮ ಇಳುವರಿ ಬಂದಿದ್ದು, ಖರ್ಚು ಕಡಿಮೆಯಾಗಿದೆ. ಮುಂದೆ ಇದೇ ರೀತಿಯಲ್ಲಿ ಭತ್ತ ಬೆಳೆಯುವುದಾಗಿ ಹೇಳುತ್ತಾರೆ.

ಹೆಚ್ಚು ಕೂಲಿಗಳ ಅಗತ್ಯವಿಲ್ಲ

ಹೆಚ್ಚು ಕೂಲಿಗಳ ಅಗತ್ಯವಿಲ್ಲ

ಮತ್ತೊಬ್ಬ ರೈತ ಕೃಷ್ಣೇಗೌಡ ಅವರು ಮಾತನಾಡಿ ಈ ಹಿಂದೆ ಭತ್ತದ ನಾಟಿ ಮಾಡಲು ಹೆಚ್ಚಿನ ಮಹಿಳಾ ಕೂಲಿ ಕಾರ್ಮಿಕರು ಬೇಕಾಗುತ್ತಿತ್ತು. ಜತೆಗೆ ನಾಟಿ ಕೆಲಸ ಮುಗಿಸಲು ಕನಿಷ್ಟ 15 ದಿನ ಬೇಕಾಗುತ್ತಿತ್ತು. ಆದರೆ ಕಡಿಮೆ ಅವಧಿ ಮತ್ತು ಹೆಚ್ಚು ಕೆಲಸಗಾರರ ಅವಶ್ಯಕತೆಯಿಲ್ಲದೆ ಭತ್ತದ ಕೃಷಿ ಮಾಡಲು ಹಾಗೂ ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಿರುವುದಾಗಿ ಅಭಿಪ್ರಾಯಪಟ್ಟಿದ್ದಾರೆ.

English summary
Farmers from Hunsur region in Mysuru district invented a new method to get profit by cropping paddy (rice). This method will be the inspiration to more other farmers to get more profit and to increase productions. Here is a success story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X