ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Stories of Strength: ಧೈರ್ಯ ಇದ್ದರೆ ಮಾತ್ರ ಇಲ್ಲಿ ಬೇಗ ಗುಣವಾಗಲು ಸಾಧ್ಯ: ಅಕ್ಷಯ ಕೃಷ್ಣ ಭೈರುಮನೆ

By ಅಕ್ಷಯ ಕೃಷ್ಣ ಭೈರುಮನೆ
|
Google Oneindia Kannada News

11 ದಿನಗಳ ವನವಾಸ 7 ದಿನಗಳ ಅಜ್ಞಾತ ವಾಸ ಇವತ್ತಿಗೆ ಕೊನೆಯಾಯಿತು, ಇದು ನನ್ನ ಕೊರೊನಾ ಕಥೆ ಅಥವಾ ವ್ಯಥೆಯು ಅನ್ನಬಹುದು. ಕೆಲವು ದಿನಗಳ ಕಾಲ ನನಗೆ ಬಿಟ್ಟು ಬಿಟ್ಟು ಜ್ವರ ಬರುತ್ತಿತ್ತು ಜೊತೆಗೆ ಉಡುಗೊರೆಯಾಗಿ ಕಫವೂ ಬಂತು. ಎಲ್ಲರ ಥರಾ ನಾನು ನನ್ನ ಪೋಷಕರ ಮಾತು ಕೇಳಿ ಹತ್ತಿರದ ಒಂದು ಖಾಸಗಿ ವೈದ್ಯನ ಹತ್ತಿರ ತಪಾಸಣೆ ಮಾಡಿಸಿದೆ. ಅವರು ಯಾವುದೇ ತೊಂದರೆ ಇಲ್ಲ ಹೆದರಬೇಡಿ ಎಂದು ಮಾತ್ರೆಗಳು ಕೊಟ್ಟು ಕಳುಹಿಸಿದರು.

1 ದಿನ 2 ದಿನ 3 ದಿನವಾದರೂ ವಾಸಿ ಆಗುವ ಯಾವುದೇ ಲಕ್ಷಣಗಳು ಕಾಣಲಿಲ್ಲ ಕೊನೆಗೆ ಆಯುರ್ವೇದ ಔಷಧಕ್ಕೆ ಮೊರೆ ಹೋದೆ. ಅಲ್ಲಿಂದ ಶುರು ನನ್ನ ವ್ಯಥೆ, ಆಯುರ್ವೇದ ಔಷಧಿ ತೆಗೆದುಕೊಂಡರೆ ವಾಂತಿ ಶುರು ಜೊತೆಗೆ ಹೊಟ್ಟೆ ಒಳಗೆ ಹಿಡಿತ ಅಪರಿಮಿತ ನೋವು. ಕೊನೆಗೆ ಆಸ್ಪತ್ರೆಗೆ ದಾಖಲಾಗುವ ಸಮಯವೂ ಬಂತು.

ಮೇ 1 ಕೊರೊನಾ ದಾಳಿ ಇಂದ ನಾನು ಆಸ್ಪತ್ರೆಗೆ ದಾಖಲಾದ ದಿನ. ಆಸ್ಪತ್ರೆಗೆ ಹೋದಾಗ ಕೊರೊನಾ ತಪಾಸಣೆ, ರಕ್ತ ಪರೀಕ್ಷೆ, ಎಕ್ಸ್ ರೇ, ಸಿಟಿ ಸ್ಕ್ಯಾನ್ ಮೂಲಕ ನನ್ನನ್ನು ಪರಿಶೀಲಿಸಲಾಯಿತು. ಏಕ್ಸ್ ರೇ ಅಲ್ಲಿ ನನ್ನ ಶ್ವಾಸಕೋಶಕ್ಕೆ ಕಫ ಅಂಟಿರುವುದು ಸ್ಪಷ್ಟವಾಗಿ ಗೋಚರಿಸಿತು. ತಕ್ಷಣವೇ ದಾಖಲು ಮಾಡಿಕೊಂಡು ಕೊರೊನಾ ಚಿಕಿತ್ಸೆ ಶುರುವಾಯಿತು.

ಪ್ರತಿ ಕ್ಷಣವೂ ಮನಸಲ್ಲಿ ಏನೋ ತಳಮಳ

ಪ್ರತಿ ಕ್ಷಣವೂ ಮನಸಲ್ಲಿ ಏನೋ ತಳಮಳ

ಪ್ರತಿ ಕ್ಷಣವೂ ಮನಸಲ್ಲಿ ಏನೋ ತಳಮಳ. ಪಕ್ಕದಲ್ಲಿ ಇರುವ ರೋಗಿಗಳಿಗೂ ಕೊರೊನಾ ಬಂದಿದಿಯೋ ಇಲ್ಲವೋ ಎಂದು ಮನಸಲ್ಲಿ ಪ್ರಶ್ನೆಗಳು ಮತ್ತು ಭಯದ ವಾತಾವರಣ. ಜೊತೆಗೆ ದಿನಕ್ಕೆ ನೀಡುವ 5-6 ಇಂಜೆಕ್ಷನ್ನುಗಳು, ಸುಯ್ಯನೆ ಗಾಳಿ ಬೀಸುವ ಮೂಗಿನೊಳಗೇ ಇರುವ ಆಕ್ಸಿಜನ್ ಪೈಪು, ಕೈಗೆ ನೀಡಿರುವ ರೆಮ್‌ಡಿಸಿವರ್‌ಗಳು, ಮೇಲೆ ನೇತು ಹಾಕಿರುವ ಗ್ಲುಕೋಸ್ ಬಾಟ್ಲಿಗಳು ಜೊತೆಗೆ ಅರಗಿಸಿಕೊಳ್ಳಲು ಕಷ್ಟವಾಗುವ ಮಾತ್ರೆಗಳು ಅಬ್ಬಬ್ಬಾ ಅದೊಂದು ನರಕ ಯಾತನೆ ಇದ್ದಂತೆ.

ಕಣ್ಣ ಮುಂದೆ ಸತ್ತವರು ಅದೆಷ್ಟೋ ಜನ

ಕಣ್ಣ ಮುಂದೆ ಸತ್ತವರು ಅದೆಷ್ಟೋ ಜನ

ಇನ್ನೂ ಕಣ್ಣ ಮುಂದೆ ಸತ್ತವರು ಅದೆಷ್ಟೋ ಜನ. ಐಸಿಯುವಿನ ಒಳಗೆ ಹೋದವರು ಬಂದಿದ್ದು ಹೆಣವಾಗಿ, ನನ್ನ ಪರಿಚಯದ ಕೆಲವರು ನನ್ನ ಪಕ್ಕದ ಐಸಿಯುನಲ್ಲಿ ಪ್ರಾಣ ಬಿಟ್ಟಿದ್ದು ಬೇಸರದ ಸಂಗತಿಯಾಗಿ ಮನದಲ್ಲೇ ಉಳಿಯಿತು.ಇದೆಲ್ಲದರ ಮಧ್ಯೆ ಹೆದರದೆ ವೈದ್ಯರು ನೀಡುವ ಚಿಕಿತ್ಸೆಗೆ ಗುಣಾತ್ಮಕವಾಗಿ ಸ್ಪಂದಿಸುವುದು ಒಂದು ದೊಡ್ಡ ಸವಾಲೇ ಸರಿ. ಹೀಗೆ ನನ್ನ 11 ದಿನಗಳ ಆಸ್ಪತ್ರೆ ವನವಾಸ ಸಾವು ನೋವು ಭಯ ಆತ್ಮ ನಂಬಿಕೆಯ ಮಧ್ಯೆ ಕಳೆದು ಹೋಯಿತು.

ನಂತರ ಶುರುವಾಗಿದ್ದು ಅಜ್ಞಾತ ವಾಸ

ನಂತರ ಶುರುವಾಗಿದ್ದು ಅಜ್ಞಾತ ವಾಸ

ನಂತರ ಶುರುವಾಗಿದ್ದು ಅಜ್ಞಾತ ವಾಸ. 11 ದಿನಗಳ ಕಾಲ ಮನೆಯವರ ಮುಖ ನೋಡದೆ ನೋವು ಪಟ್ಟಿದ್ದು ಒಂದೆಡೆ ಆದರೆ ಈಗ ಮನೆಯ ಹತ್ತಿರ ಇದ್ದರೂ ಮನೆಯೊಳಗೆ ಕಾಲಿಡದಂಥ ಶಿಕ್ಷೆ.

ಮನೆಯ ಗೇಟಿನ ಹತ್ತಿರ ಸಣ್ಣ ಕೋಣೆ ಇದ್ದ ಕಾರಣ 7 ದಿನಗಳು ಅಲ್ಲೇ ಕಳೆದೆ. ಇಲ್ಲೂ ಅಷ್ಟೇ ಅದೇ ಅರಗಿಸಿಕೊಳ್ಳಲು ಆಗದ 90 ರ ಆಸುಪಾಸಿನ ಮಾತ್ರೆಗಳ ಸೇವನೆ. ಮುಂಜಾನೆ ಬೇಗನೆ ಎದ್ದು ಪ್ರಕೃತಿಯ ಸೊಬಗು ಸವಿಯುತ್ತಾ ಸಣ್ಣ ಓಡಾಟ, ಸಂಜೆ ಗೂಡಿಗೆ ಮರಳುವ ಹಕ್ಕಿಗಳ ಕಣ್ತುಂಬಿಕೊಳ್ಳುತ್ತಾ ಮನಸ್ಸಿನ ಹಾರಾಟ. ಹಾಗೂ ಹೀಗೂ ಇಂದು 7 ದಿನಗಳ ಅಜ್ಞಾತ ವಾಸವು ಮುಗಿಯಿತು ಕೊರೊನಾ ಕಾಯಿಲೆಯು ವಾಸಿಯಾಯಿತು.

ಮಾನಸಿಕ ಸ್ಥಿತಿ ಎಳೆ ಎಳೆಯಾಗಿ ಪರೀಕ್ಷೆ

ಮಾನಸಿಕ ಸ್ಥಿತಿ ಎಳೆ ಎಳೆಯಾಗಿ ಪರೀಕ್ಷೆ

ಕೊರೊನಾ ಎಂಬುದು ಒಬ್ಬರ ಮಾನಸಿಕ ಸ್ಥಿತಿಯನ್ನು ಎಳೆ ಎಳೆಯಾಗಿ ಪರೀಕ್ಷೆಗೆ ಒಳಪಡಿಸುತ್ತದೆ. ಧೈರ್ಯ ಇದ್ದರೆ ಮಾತ್ರ ಇಲ್ಲಿ ಬೇಗ ಗುಣವಾಗಲು ಸಾಧ್ಯ. ಇಲ್ಲದಿದ್ದರೆ ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಿ ಚಿತ್ರಹಿಂಸೆ ಕೊಟ್ಟು ‌ಸಾಯಿಸುತ್ತದೆ.

ನನಗೆ ಯಾರಿಂದ ಕಾರೋನ ಬಂತು ಅಂತ ನನಗಂತೂ ಗೊತ್ತಿಲ್ಲ ಆದರೆ ನನ್ನಿಂದ ಯಾರಿಗೂ ಹರಡಿಲ್ಲ ಅನ್ನೋದು ಒಂದು ನೆಮ್ಮದಿ ನನಗೆ.ನನಗೆ ಜ್ವರ ಬಂದಾಗ ಕೆಮ್ಮು ಬಂದಾಗ ನನ್ನ ಪೋಷಕರು ನನ್ನ ಜೊತೆಯೇ ಇದ್ದರೂ ಆದರೆ ಅವರಿಗೆ ಅದು ಅಂಟಲಿಲ್ಲ ಅದೇ ನನ್ನ ಪುಣ್ಯ. ಮುಖ್ಯವಾಗಿ ನನಗೆ ಕಫ ಆದಾಗ ನನ್ನ ಪುಣ್ಯಕ್ಕೆ ಅದು ಗಂಟಲಿನಲ್ಲೇ ಗಟ್ಟಿಯಾಗಿ ಉಳಿದಿದ್ದರಿಂದ ಕೆಮ್ಮಿದಾಗ ಯಾವುದೇ ಕಣಗಳು ಹೊರಗೆ ಬರಲಿಲ್ಲ ಇದರಿಂದ ಕೊರೊನಾ ಕೂಡ ಯಾರಿಗೂ ಹರಡಲಿಲ್ಲ(ನಾನು ಅಂದುಕೊಂಡಿದ್ದು ಇದು).

ನಾನು ಸಾಕಷ್ಟು ಪಾಠವಂತೂ ಕಲಿತಿದ್ದೇನೆ

ನಾನು ಸಾಕಷ್ಟು ಪಾಠವಂತೂ ಕಲಿತಿದ್ದೇನೆ

ಒಂದಂತೂ ಸತ್ಯ ಈ ಕೊರೊನಾದಿಂದ ನಾನು ಸಾಕಷ್ಟು ಪಾಠವಂತೂ ಕಲಿತಿದ್ದೇನೆ ಹಾಗೂ ನಾನು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕಲಿತುಕೊಂಡಿದ್ದೇನೆ.

ದಯವಿಟ್ಟು ಯಾರೂ ಕೊರೊನಾವನ್ನು ನಿರ್ಲಕ್ಷ್ಯ ಮಾಡಬೇಡಿ.ನಿಮ್ಮ ಜೀವದ ಜೊತೆಗೆ ನಿಮ್ಮವರ ಜೀವಕ್ಕೂ ಕುತ್ತು ತರಬೇಡಿ. ಕೊರೊನಾ ಅನ್ನುವುದು ಸತ್ಯ.ಕೆಲಸಕ್ಕೆ ಬಾರದ ಮಾತುಗಳ ವಾಟ್ಸಾಪ್ ಕಥೆಗಳನ್ನು ನಂಬಿ ಮೂರ್ಖರಾಗಬೇಡಿ.ಇದು ಕೊರೊನಾ ಬಂದು ಗುಣಮುಖಗೊಂಡ ರೋಗಿಯ ಕಥೆ ಮತ್ತು ಅವನ ಸವಿನಯ ಪ್ರಾರ್ಥನೆ 🙏🏻 ಭಾಗ ಎರಡು ಮುಂದುವರೆಯುವುದು..

ಸೂಚನೆ: ಕೊರೊನಾ ಗೆದ್ದವರ ಅನುಭವ, ಕಥೆ ಇದಾಗಿದ್ದು, ಇಲ್ಲಿ ಮಂಡಿಸಿರುವ ವಿಷಯ, ಅಭಿಪ್ರಾಯ ಎಲ್ಲದರ ಹೊಣೆ, ಹಕ್ಕು ಲೇಖಕರದ್ದಾಗಿರುತ್ತದೆ.

English summary
Stories of Strength: Bengalurean Akshaya Krishna Byrumane shares his experience of battled with Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X