ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಂಟರಾಗಿರುವುದೇ ಯುವಕರ ಲಕ್ಷಣ : ಶ್ರೀಶ್ರೀ ರವಿಶಂಕರ್ ವಿಶೇಷ ಲೇಖನ

By ಶ್ರೀಶ್ರೀ ರವಿಶಂಕರ್
|
Google Oneindia Kannada News

ಇಂದು ವಿಶ್ವ ಯುವಕರ ದಿನ. ಯುವಕರೆಂದರೆ ಯಾರು? ಯುವಕರ ಲಕ್ಷಣವೇನು?

ಒಂದು ಘಟನೆಯೊಡನೆ ಪ್ರಾರಂಭಿಸೋಣ. ಒಮ್ಮೆ ಪುಣೆಯ ಒಂದು ಬೃಹತ್ ಕ್ರೀಡಾಂಗಣದಲ್ಲಿ ದೊಡ್ಡ ಸಮಾವೇಶವನ್ನು ನಡೆಸುತ್ತಿದ್ದೆವು. ಒಂದು ವಾರದ ಆ ಸಮಾವೇಶವನ್ನು ಹತ್ತು ದಿನಗಳೊಳಗೆ ನಿಯೋಜಿಸಿ ನಡೆಸಲಾಗಿತ್ತು. ಕಾರ್ಯಕ್ರಮ ಕೊನೆಗೊಂಡಾಗ ಓರ್ವ ಯುವ ಸ್ವಯಂಸೇವಕರು, "ಗುರುದೇವ್, ಇಡೀ ಸಮಾವೇಶ ಬಹಳ ಸುಗಮವಾಗಿ ಸಾಗಿತು. ಯಾವ ರೀತಿಯ ಅಡಚಣೆ ಅಥವಾ ಕಷ್ಟಗಳು ಎದುರಾಗಲಿಲ್ಲ!" ಎಂದರು.

ನಾವು ಮುಗುಳ್ನಗುತ್ತಾ, "ಸವಾಲುಗಳು ಬಂದಂತೆ ಅದನ್ನು ಎದುರಿಸಲು ಸದಾ ಸಿದ್ಧರಾಗಿರುವವರೇ ಯುವಕರು. ಎಲ್ಲವೂ ಸುಗಮವಾಗಿ ಇರಬೇಕೆಂದು ಎದುರುನೋಡಿದರೆ ಅಥವಾ ಅದಕ್ಕಾಗಿ ಕಾದುಕುಳಿತರೆ ನೀವು ಯುವಕರಲ್ಲ" ಎಂದೆವು.

ಮುದಿ ವಯಸ್ಸಿನಲ್ಲಿ ಎಲ್ಲ ಕಷ್ಟಗಳಿಂದಲೂ ದೂರವಿರಬೇಕೆಂದು ಬಯಸುತ್ತೇವೆ. ದೆಹಲಿ ಅಥವಾ ಚಂಡೀಘಡಕ್ಕೆ ಹೋಗಬೇಕೆಂದರೆ ಬಸ್ಸು ಅಥವಾ ರೈಲಿನಲ್ಲಿ ಪಯಣಿಸಬಹುದು. ಆದರೆ ಅದೇ ಪಯಣವನ್ನು ಯುವಕರು ಸಾಹಸಮಯವಾಗಿ ಪರಿವರ್ತಿಸುತ್ತಾರೆ.

ಶ್ರೀ ರವಿಶಂಕರ ಗುರೂಜಿ ಜೀವನ ಚರಿತ್ರೆ ಬಿಡುಗಡೆಶ್ರೀ ರವಿಶಂಕರ ಗುರೂಜಿ ಜೀವನ ಚರಿತ್ರೆ ಬಿಡುಗಡೆ

ಸವಾಲುಗಳನ್ನು ಎದುರಿಸುವ ಸಿದ್ಧತೆ ಮತ್ತು ಮರಣಿಸದ ಉತ್ಸಾಹವು ಯುವಕರ ಚಿಹ್ನೆ. ಒಂದು ಮೇಣದ ಬತ್ತಿಯನ್ನು ಉರಿಸಿ ಮೇಲು ಕೆಳಗಾಗಿ ಮಾಡಿದಾಗಲೂ ಜ್ವಾಲೆಯು ಮೇಲ್ಮುಖವಾಗಿಯೇ ಉರಿಯುತ್ತದೆ. ಅದೇ ರೀತಿಯಾಗಿ ಜೀವನದ ದಿಶೆ ಯಾವ ಕಡೆಯಲ್ಲಾದರೂ ಹೋಗಲಿ ಆತ್ಮವು ಸದಾ ಮೇಲ್ಮುಖವಾಗಿಯೇ ಹೋಗಬೇಕು. ಸವಾಲುಗಳು ಯಾವ ರೂಪದಲ್ಲಾದರೂ ಬರಬಹುದು. ಪರಿಸ್ಥಿತಿ ಹೇಗೆ ಇದ್ದರೂ ಅದನ್ನು ನಿಭಾಯಿಸುವ ತೀಕ್ಷ್ಣ ತೆ ನಮ್ಮಲ್ಲಿರಬೇಕು.

SriSri Ravishankar inspirational article on National Youth Day

ಯುವಕರು ಅಸುರಕ್ಷತೆಗಳಿಂದ ಸಾಮಾನ್ಯವಾಗಿ ಬಾಧಿತರಾಗಿರುತ್ತಾರೆ. "ನನ್ನ ಭವಿಷ್ಯದಲ್ಲಿ ಏನಾಗುತ್ತದೆ? ನನಗೆ ಎಷ್ಟು ಅಂಕಿಗಳು ಬರುತ್ತವೆ? ನನಗೆ ಕೆಲಸ ಸಿಗುತ್ತದೆಯೆ? ನಾನು ಸ್ವಯಂ ಉದ್ಯಮಿಯಾಗುತ್ತೇನೆಯೆ?" ಈ ರೀತಿಯ ಚಿಂತೆಗಳು ನಿಮ್ಮ ಮನದಲ್ಲಿ ಅಸುರಕ್ಷತೆಗಳಿಂದ ತುಂಬಿ, ನಿಮ್ಮ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಆಗ ನಿಮ್ಮ ವಿಶ್ವಾಸವನ್ನೆಲ್ಲಾ ಇರಿಸಬಲ್ಲಂತಹ ಒಂದು ಸ್ಥಿರವಾದ ಆಧಾರ ಬೇಕು. ಅದರಿಂದ ನಿಮ್ಮ ಅಡಿಪಾಯ ಬಲಿಷ್ಠವಾಗಿ, ನೀವು ಎಲ್ಲವನ್ನೂ ಗೆದ್ದು ಅಭಿವೃದ್ಧಿ ಹೊಂದುತ್ತೀರಿ ಎಂಬ ವಿಶ್ವಾಸ ಬರುತ್ತದೆ.

ಮರಾಠಿ ವೀರರಾದ ಶಿವಾಜಿ ಮಹಾರಾಜರ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ. ಅನೇಕ ಯುದ್ಧಗಳನ್ನು ಮಾಡಿದ ನಂತರ ಶಿವಾಜಿ ಮಹಾರಾಜರು ದಣಿದು ಹೋದರು. ಖಿನ್ನತೆಯನ್ನು ಅನುಭವಿಸಿ, ಅಸುರಕ್ಷತೆಯನ್ನು ಅನುಭವಿಸತೊಡಗಿದರು. ಜೀವನದಲ್ಲಿ ಕಳೆಗುಂದಿದ ಭಾವ ಬಂದಾಗ ನಮ್ಮನ್ನು ಉತ್ಥಾಪಿಸಲು ಗುರುಗಳು ಬರುತ್ತಾರೆನ್ನುತ್ತಾರೆ.

ಸಂಕ್ರಾಂತಿ ವಿಶೇಷ ಪುಟ

ಶಿವಾಜಿಯ ಗುರುಗಳಾದ ಸಮರ್ಥ ರಾಮದಾಸರು ಶಿವಾಜಿಯ ದರ್ಬಾರಿಗೆ ಬಂದರು. "ನನ್ನ ಆತ್ಮೀಯನೆ ನಿನ್ನಿಂದ ಏನೋ ಒಂದು ಕೇಳಲು ಬಂದಿದ್ದೇನೆ" ಎಂದಾಗ, ಸದಾ ವಿಧೇಯನಾದ ಶಿವಾಜಿಯು, " ನನ್ನ ಇಡೀ ಜೀವನ ನಿಮ್ಮದು. ನನ್ನ ತಲೆಯನ್ನು ಕಡಿದು ನಿಮ್ಮ ಪಾದಗಳಿಗೆ ಸಮರ್ಪಿಸಲು ಸಿದ್ಧನಾಗಿದ್ದೇನೆ. ನಿಮಗೇನು ಬೇಕೆಂದು ಕೇಳಿ. ಅದನ್ನು ನಿಮಗೆ ಕೊಡುತ್ತೇನೆ" ಎಂದರು.

ಸಮರ್ಥ ರಾಮದಾಸರು ಗಂಭೀರವಾದ ಮುಖವನ್ನು ಇಟ್ಟುಕೊಂಡು, "ನಿನ್ನ ರಾಜ್ಯ ನನಗೆ ಕೊಡು" ಎಂದರು. ಆಗ ಕಣ್ಮನ್ನೂ ಮಿಟುಕಿಸದೆ ಅವರ ಕಿರೀಟವನ್ನು ಮತ್ತು ಕತ್ತಿಯನ್ನು ಗುರುಗಳ ಪಾದಗಳಿಗೆ ಸಮರ್ಪಿಸಿದರು. ಆಗ ನೆಮ್ಮದಿಯನ್ನು ಅನುಭವಿಸಿದ ಶಿವಾಜಿ,

"ಈಗ ನನ್ನ ಎಲ್ಲಾ ಆತಂಕ, ಚಿಂತೆ ಮುಕ್ತಾಯವಾಯಿತು. ಅವು ನನ್ನ ಮೇಲೆ ದೊಡ್ಡ ಹೊರೆಯಾಗಿದ್ದವು. ಈಗ ನನಗೆ ಬಿಡುಗಡೆಯಾಗಿದೆ. ನಿಮಗೆ ಮತ್ತೆ ಮತ್ತೆ ನಮಿಸುತ್ತೇನೆ" ಎಂದರು.

ಎದ್ದು ನಿಂತು ನಡೆದು ಹೋಗುತ್ತಿದ್ದ ಶಿವಾಜಿಯನ್ನು ತಡೆದು ನಿಲ್ಲಿಸಿದ ಗುರುಗಳು, "ನನ್ನ ಆತ್ಮೀಯನೆ ನನಗೆ ಮತ್ತೊಂದು ಉಪಕಾರ ಬೇಕು" ಎಂದರು. ಶಿವಾಜಿಯು ತಲೆಬಾಗಿ ನಮಸ್ಕರಿಸಿದರು. "ನೀನು ನನ್ನ ನಂಬಿಕಸ್ಥ ಸೇನಾನಿಯಾಗಿ ನನ್ನ ರಾಜ್ಯವನ್ನು ಸಂರಕ್ಷಿಸಬೇಕು. ನನ್ನ ಪ್ರತಿನಿಧಿಯಾಗಿ ಈ ಕಿರೀಟವನ್ನು ಧರಿಸು. ಕತ್ತಿಯನ್ನು ತೆಗೆದು ಯಾವ ಚಿಂತೆಯೂ ಇಲ್ಲದೆಯೇ ನನ್ನ ಶತೃಗಳನ್ನು ಧೈರ್ಯವಾಗಿ ಗೆಲ್ಲು" ಎಂದರು ಗುರುಗಳು.

ರಾಜನಾಗಿ ಶಿವಾಜಿಯ ಜವಾಬ್ದಾರಿ ಮತ್ತು ಪಾತ್ರ ಒಂದೇ ಆಗಿದ್ದರೂ ಶಿವಾಜಿ ಮಹಾರಾಜರು ಎಂದಿಗೂ ಅಸುರಕ್ಷತೆಯ ಭಾವವನ್ನು ಅನುಭವಿಸಲಿಲ್ಲ ಎಂದು ಹೇಳಲಾಗಿದೆ. ಧೈರ್ಯವನ್ನು ಕಳೆದುಕೊಳ್ಳದೆ ಯುದ್ಧಗಳನ್ನು ಗೆಲ್ಲುವ ಕಾರ್ಯಗಳನ್ನು ಮುಂದುವರಿಸಿದರು.

ಆದ್ದರಿಂದ ನಿಮ್ಮೊಳಗೆ ಒಂದು ಪರಮ ಶಕ್ತಿಯಿದೆಯೆಂದು ತಿಳಿಯಬೇಕು ಮತ್ತು ನಿಮ್ಮನ್ನು ಸದಾ ರಕ್ಷಿಸುತ್ತಿದೆಯೆಂದು ಅರಿಯಬೇಕು. ಆ ಶಕ್ತಿಯನ್ನು ಗುರು ಎಂದಾದರೂ ಕರೆಯಬಹುದು, ಹನುಮನೆನ್ನಬಹುದು ಅಥವಾ ಓಂ ಎನ್ನಬಹುದು. ಅದರಿಂದ ನಮಗೆ ಅಪಾರವಾದ ಆಂತರಿಕ ಬಲ ಬರುತ್ತಿದೆಯೆಂದು ತಿಳಿಯಬೇಕು. ದೇಹವು ಕೃಶವಾದರೂ ಬಲಿಷ್ಠವಾದ ಮನಸ್ಸು ಅದನ್ನು ಎಳೆದೊಯ್ಯುತ್ತದೆ. ಆದರೆ ಕೃಶವಾದ, ನಕಾರಾತ್ಮಕತೆಯಲ್ಲಿ ಮುಳುಗಿದ ಮನಸ್ಸು ಬಲಿಷ್ಠವಾದ ದೇಹವನ್ನು ಎಳೆದೊಯ್ಯಲಾರದು. ಬಲಿಷ್ಠವಾದ, ಸ್ಥಿರವಾದ ಮನಸ್ಸನ್ನು ಹೊಂದುವುದು ಬಹಳ ಮುಖ್ಯ. ಅಸುರಕ್ಷತೆಗಳು ಮನಸ್ಸನ್ನು ಆವರಿಸದಂತೆ ಎಚ್ಚರ ವಹಿಸಬೇಕು.

ಅಸುರಕ್ಷತೆಗಳು ನಮ್ಮನ್ನು ಕಾಡದಿದ್ದಾಗ ಅಪಮಾನದ ಭಯ ಕಾಡುತ್ತದೆ. ಅನೇಕರು, ಯಾರೂ ತಮ್ಮನ್ನು ಅಪಮಾನಿಸಬಾರದು ಅಥವಾ ನಿಂದಿಸಬಾರದು ಎಂದು ಬಯಸುತ್ತಾರೆ. ಅನೇಕರು ಅಪಮಾನದ ಬಗ್ಗೆ ಭೀತಿಯನ್ನು ಹೊಂದುತ್ತಾರೆ ಮತ್ತು ಅದು ಅಭಿವೃದ್ಧಿಯ ಹಾದಿಯಲ್ಲಿ ಅಡಚಣೆಯಾಗುತ್ತದೆ. ಅಪಮಾನವನ್ನು ಉಂಟು ಮಾಡಬಹುದಾದ ಎಲ್ಲಾ ಪರಿಸ್ಥಿತಿಗಳಿಂದಲೂ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುತ್ತೇವೆ. ಇದರಿಂದ ನಾವು ಅರಳುವುದೂ ಇಲ್ಲ ಮತ್ತು ಸಹಜವಾಗಿಯೂ ಇರುವುದಿಲ್ಲ.

"ನಾನು ಅಪಮಾನಕ್ಕೆ , ನಿಂದೆಗೆ ಭಯ ಪಡುವುದಿಲ್ಲ. ಹೀಗೆ ಮಾಡುವವರು ಯಾರಾದರೂ ಆಗಿರಲಿ" ಎಂದು ತಲೆಯನ್ನು ನೇರವಾಗಿ ಎತ್ತಿ ನಡೆಯಬೇಕು. ನಮ್ಮನ್ನು ಮೂರ್ಖರೆಂದು ಕರೆಯಬಹುದು. ಆಷ್ಟೇ ಅಲ್ಲವೆ? ಅದರ ಬಗ್ಗೆ ಭಯಪಡುವುದಿಲ್ಲ ಎಂದು ತೀರ್ಮಾನಿಸಿಬಿಡಬೇಕು. ಅಪಮಾನಕ್ಕೇ ಸವಾಲನ್ನೆಸೆದರೆ, ಆಗ ನಿಮ್ಮ ಆತ್ಮವಿಶ್ವಾಸ ಕುಗ್ಗುವುದಿಲ್ಲ ಅಥವಾ ನೀವು ದುಃಖಿಗಳೂ ಆಗುವುದಿಲ್ಲ.

ಈ ರೀತಿಯ ಭಯಗಳಿಂದ ಹೊರಬಂದವರು ಮನಸ್ಸಿನಲ್ಲಿ ದೃಢ ಸಂಕಲ್ಪವನ್ನು, ಗುರಿಯನ್ನು ಹೊಂದುವುದರಿಂದ ಯಶಸ್ವಿಗಳಾಗುತ್ತಾರೆ. ಜೀವನದಲ್ಲಿ ಎರಡು ಗುರಿಗಳಿರಬೇಕು. ಒಂದು ನಿಮಗೆಂದಿರುವ ವೈಯಕ್ತಿಕ ಗುರಿ. ಮತ್ತೊಂದು ಸಮಾಜಕ್ಕಾಗಿ ಅಥವಾ ರಾಷ್ಟ್ರಕ್ಕಾಗಿ. ಕೇವಲ ನಿಮ್ಮ ವೈಯಕ್ತಿಕ ಗುರಿಗಳಿಗೆ ಅಂಟಿಕೊಂಡಿದ್ದರೆ ಆಗ ನೀವು ಬೆಳೆಯದೆ ಸಣ್ಣ ವ್ಯಕ್ತಿಗಳಾಗಿಯೇ ಉಳಿದುಬಿಡುತ್ತೀರಿ. ಅದೇ ರೀತಿಯಾಗಿ, ಸಮಾಜಕ್ಕೆಂದು ದುಡಿಯುತ್ತಿರುವಾಗ ನಿಮ್ಮ ವೈಯಕ್ತಿಕ ಗುರಿಗಳನ್ನು ಮರೆಯಬಾರದು.

ಎರಡರ ನಡುವೆಯೂ ಸಮತೋಲನವಿರಬೇಕು, ಗಮನವಿರಬೇಕು. ಒಂದು ಬೈಸಿಕಲ್ಲನ್ನು ಓಡಿಸಿದಂತೆ. ಈ ಎರಡೂ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ಜೀವನದಲ್ಲಿ ತೃಪ್ತಿ ಸಿಗುವುದಿಲ್ಲ. ದುಃಖಿಗಳಾಗಿ ಉಳಿದು ಚಡಪಡಿಸುತ್ತಲೇ ಇದ್ದು ಬಿಡುತ್ತೀರಿ.

ಕೊನೆಯದಾಗಿ, ಯುವಕರ ಲಕ್ಷಣವೆಂದರೆ ತುಂಟತನವನ್ನು ಹೊಂದುವುದು! ನೀವು ತುಂಟುತನವನ್ನು ಮಾಡಿದ್ದೀರೆ? ಇಲ್ಲ ಎಂದಾದರೆ ಈಗಾಗಲೇ ತುಂಟರಾಗಲು ಪ್ರಾರಂಭಿಸಿ. ಇಲ್ಲವಾದರೆ ಯುವಕರೆಂಬ ಪಟ್ಟವನ್ನು ಕಳೆದುಕೊಳ್ಳುತ್ತೀರಿ. ನೀವು ತುಂಟರಲ್ಲದಿದ್ದರೆ ವಯಸ್ಸಾಗುತ್ತಿದೆ ನಿಮಗೆ ಎಂದರ್ಥ. ಜೀವನದ ಅಷ್ಟೊಂದು ಕ್ಷುಲ್ಲಕವಾದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯೇನು? ವಿಶ್ರಮಿಸಿ, ಸಂತೋಷದಿಂದಿದ್ದು ಆಟವಾಡಿ. ನಕ್ಕು ಇತರರನ್ನೂ ನಗಿಸಿ. ನೀವೂ ಸಿಲುಕಿಕೊಳ್ಳಬೇಡಿ ಮತ್ತು ಇತರರನ್ನೂ ಸಿಲುಕಿಸಬೇಡಿ. ಯುವಕರಾಗಿರಲು ಇದಕ್ಕಿಂತಲೂ ಹೆಚ್ಚಿನದ್ದೇನೂ ನಿಮಗೆ ಬೇಕಿಲ್ಲ.

English summary
January 12 is National Youth Day. Inspirational article by Gurudev Sri Sri Ravi Shankar for the youth in Kannada. It is a beautiful article with inspirational examples for youth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X