ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನ ಜಿಟಿ ಜಿಟಿ ಮಳೆಯೂ... ಕಕ್ಕಡ ಪದ್ನಟ್ ಆಚರಣೆಯೂ...

|
Google Oneindia Kannada News

ಮಡಿಕೇರಿ, ಆಗಸ್ಟ್‌ 03: ಕೊಡಗಿನಲ್ಲಿ ಕಕ್ಕಡ (ಆಟಿ) ತಿಂಗಳು ಆರಂಭವಾಗಿ ಆಗಸ್ಟ್ 3ಕ್ಕೆ 18 ದಿನಗಳಾಗುತ್ತಿವೆ. ಈ ದಿನವನ್ನು ಕಕ್ಕಡ ಪದ್ನಟ್ ಎಂದು ಕರೆಯಲಾಗುತ್ತಿದ್ದು, ಇದರ ಬಗ್ಗೆ ನೋಡುತ್ತಾ ಹೋದರೆ ಹತ್ತು ಹಲವು ವಿಶೇಷತೆಗಳನ್ನು ಕಾಣಬಹುದಾಗಿದೆ.

ಕೊಡಗಿನ ಸಂಸ್ಕೃತಿ, ಆಚರಣೆ, ವಾತಾವರಣ ಎಲ್ಲವೂ ಇತರಡೆಗಿಂತ ಭಿನ್ನ. ಇಲ್ಲಿನ ಮಳೆಗಾಲವೂ ಒಂಥರಾ ವಿಭಿನ್ನ. ಒಮ್ಮೆ ಧೋ ಎಂದು, ಮತ್ತೊಮ್ಮೆ ಜಿಟಿ ಜಿಟಿಯಾಗಿ, ಮಗದೊಮ್ಮೆ ಮೈಕೊರೆಯುವ ಚಳಿ ಗಾಳಿಯೊಂದಿಗೆ ಅಡ್ಡಾದಿಡ್ಡಿಯಾಗಿ ಸುರಿಯುತ್ತಾ ಭಯಹುಟ್ಟಿಸಿ ಬಿಡುತ್ತದೆ. ಇತ್ತೀಚೆಗಿನ ವರ್ಷಗಳಲ್ಲಿ ಕೊಡಗಿನ ಮಳೆಗಾಲದ ವಾತಾವರಣವೇ ಬದಲಾಗಿದೆ. ಮೊದಲೆಲ್ಲ ಮಳೆಗಾಲ ಆರಂಭವಾದರೆ ಸಾಕು ನಂತರ ಬಿಡುವಿಲ್ಲದೆ ಒಂದೇ ಸಮನೆ ಸುರಿಯುತ್ತಿತ್ತು. ಆದರೆ ಯಾವುದೇ ಅನಾಹುತ ಸಂಭವಿಸುತ್ತಿರಲಿಲ್ಲ. ಆದರೆ ಬದಲಾದ ಕಾಲಘಟ್ಟದಲ್ಲಿ ಮಳೆಯ ಸುರಿಯುವಿಕೆಯಲ್ಲಿಯೂ ಬದಲಾವಣೆ ಕಂಡು ಬಂದಿದೆ.

ಕೊಡಗು ಪ್ರಕೃತಿ ವಿಕೋಪಕ್ಕೆ 'ಕೈಲ್' ಮುಹೂರ್ತ ಸಂಭ್ರಮ ಬಲಿ!ಕೊಡಗು ಪ್ರಕೃತಿ ವಿಕೋಪಕ್ಕೆ 'ಕೈಲ್' ಮುಹೂರ್ತ ಸಂಭ್ರಮ ಬಲಿ!

ಹಿರಿಯರು ಜಾರಿಗೆ ತಂದ ಆಚರಣೆ ಪಾಲನೆ

ಹಿರಿಯರು ಜಾರಿಗೆ ತಂದ ಆಚರಣೆ ಪಾಲನೆ

ಇಲ್ಲಿನ ಇವತ್ತಿನ ಆಚರಣೆಗಳನ್ನು ನೋಡುವುದಾದರೆ, ಅವುಗಳೆಲ್ಲವೂ ಹಿಂದಿನ ಕಾಲದ ಆಚರಣೆಗಳಾಗಿವೆ. ಅವತ್ತಿನ ಪರಿಸ್ಥಿತಿಗನುಗುಣವಾಗಿ ಕೆಲವು ಆಚರಣೆಯನ್ನು ಹಿರಿಯರು ಜಾರಿಗೆ ತಂದಿದ್ದರು. ಅದನ್ನು ಇವತ್ತಿಗೂ ಪಾಲನೆ ಮಾಡಿಕೊಂಡು ಬರಲಾಗುತ್ತಿದೆ. ಆಚರಣೆಯಲ್ಲಿ ಒಂದಿಷ್ಟು ಬದಲಾವಣೆಗಳು ಕಾಲಕ್ಕೆ ತಕ್ಕಂತೆ ಆಗಿವೆ. ಆದರೂ ಆಚರಣೆ ಮಸುಕಾಗಿಲ್ಲ. ಹಿರಿಯರು ಕೆಲವೊಂದನ್ನು ಆಚರಣೆಗೆ ತಂದಿರುವುದರ ಹಿಂದೆ ವೈಜ್ಞಾನಿಕ ಕಾರಣಗಳು ಇಲ್ಲದಿಲ್ಲ.

ಆಗಿನ ಕಾಲದಲ್ಲಿ ಭತ್ತದ ಕೃಷಿಯೇ ಪ್ರಮುಖ ಬೆಳೆಯಾಗಿತ್ತು. ನೀರಿನ ಆಶ್ರಯವಿರುವ ಸ್ಥಳಗಳಲ್ಲಿ ಗದ್ದೆಗಳನ್ನು ನಿರ್ಮಿಸಿ ಕೃಷಿ ಮಾಡುತ್ತಿದ್ದರು. ಆ ದಿನಗಳಲ್ಲಿ ಅವರ ಸಾಮರ್ಥ್ಯಕ್ಕೆ ತಕ್ಕಷ್ಟು ಜಾಗವನ್ನು ಬಳಸಿಕೊಂಡು ಕೃಷಿ ಮಾಡುತ್ತಿದ್ದರು. ಹೀಗಾಗಿ ಮೇ ತಿಂಗಳ ಕೊನೆಯ ವಾರದಲ್ಲಿ ಆರಂಭವಾದರೆ ಆಗಸ್ಟ್ ತಿಂಗಳು ಬಂದರೂ ಮುಗಿಯುತ್ತಿರಲಿಲ್ಲ. ಸುರಿಯುವ ಮಳೆಯಲ್ಲಿಯೇ ತಿಂಗಳಾನುಗಟ್ಟಲೆ ಭತ್ತದ ಕೃಷಿಯನ್ನು ಮಾಡಬೇಕಿತ್ತು.

 ನಾಟಿ ಗದ್ದೆಯಲ್ಲಿಯೇ ಮನರಂಜನೆ

ನಾಟಿ ಗದ್ದೆಯಲ್ಲಿಯೇ ಮನರಂಜನೆ

ಇಂತಹ ಶೀತ ವಾತಾವರಣದಲ್ಲಿ ದೇಹವನ್ನು ಬಿಸಿಯಾಗಿಟ್ಟುಕೊಳ್ಳಬೇಕಾಗಿತ್ತು. ಅದಕ್ಕಾಗಿ ಮಳೆಗಾಲದಲ್ಲಿ ಆಯಾಯ ಸಂದರ್ಭಕ್ಕೆ ತಕ್ಕಂತೆ ಸುತ್ತಮುತ್ತಲಿದ್ದ ಗಿಡಮೂಲಿಕೆಗಳಲ್ಲಿನ ಔಷಧೀಯ ಗುಣಗಳನ್ನು ಗಮನಿಸಿ ಅದನ್ನು ಬಳಸಲು ಆರಂಭಿಸಿದ್ದರಲ್ಲದೆ, ಅದರ ಸೇವನೆಗೆ ಅನುಕೂಲವಾಗುವಂತೆ ಆಚರಣೆಯನ್ನು ಜಾರಿ ಮಾಡಿದರು. ಅದು ಹಾಗೆಯೇ ಮುಂದುವರೆದು ಇಂದಿಗೂ ಆಚರಣೆಯಲ್ಲಿದೆ.

ಕೆಲವು ದಶಕಗಳ ಹಿಂದಕ್ಕೆ ಹೋದರೆ ಮಳೆಗಾಲ ಎನ್ನುವುದು ಕೊಡಗಿನವರ ಪಾಲಿಗೆ ಒಂದು ರೀತಿಯ ಚಾಲೆಂಜ್ ಆಗಿತ್ತು. ಸುರಿಯುವ ಮಳೆಯಲ್ಲಿಯೇ ಎಲ್ಲವನ್ನೂ ಮಾಡಬೇಕಾಗಿತ್ತು. ಹೊರಗಿನ ಪ್ರಪಂಚದ ಸಂಪರ್ಕದಿಂದ ದೂರವಾಗಿ ಭತ್ತದ ಕೃಷಿಯಲ್ಲಿಯೇ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ಜನ ಭತ್ತದ ಕೃಷಿ ನಡುವೆ ಎಲ್ಲರೂ ಒಟ್ಟಾಗಿ ಸೇರಿ ಕೃಷಿ ಕಾರ್ಯ ಮಾಡುವ ಮೂಲಕ ದೊಡ್ಡನಾಟಿಯಂದು ಒಂಡೆಡೆ ಕಲೆತು ನಾಟಿ ಮಾಡಿ ಬಳಿಕ ಅದರಲ್ಲಿ ಓಟ ಏರ್ಪಡಿಸಿ ಗೆದ್ದವರನ್ನು ಅಭಿನಂದಿಸಿ, ಸೋತವರಲ್ಲಿ ಆತ್ಮವಿಶ್ವಾಸ ತುಂಬಿ ಮನರಂಜನೆ ಪಡೆಯುತ್ತಿದ್ದರು.

 ಕೊಡಗಿನ ಮಳೆಯಲ್ಲಿ ಆಟಿ-ನಾಟಿ ಕೂಡುಕೂಟದ ಸಂಭ್ರಮ ಕೊಡಗಿನ ಮಳೆಯಲ್ಲಿ ಆಟಿ-ನಾಟಿ ಕೂಡುಕೂಟದ ಸಂಭ್ರಮ

 ಜುಲೈ 17ರಿಂದ ಕಕ್ಕಡ ಮಾಸ ಆರಂಭ

ಜುಲೈ 17ರಿಂದ ಕಕ್ಕಡ ಮಾಸ ಆರಂಭ

ಮುಂಗಾರು ಮಳೆಯ ಅವಧಿಯಲ್ಲಿ ಬರುವ ಕಕ್ಕಡ (ಆಟಿ) ತಿಂಗಳು ಕೊಡಗಿನವರ ಮಟ್ಟಿಗೆ ಬಿಡುವಿಲ್ಲದ ದುಡಿಮೆಯ ಕಾಲವಾಗಿತ್ತು. ಸದಾ ಸುರಿಯುವ ಮಳೆಯಲ್ಲಿ, ಮೈಕೊರೆಯುವ ಚಳಿಯಲ್ಲಿ ಮುಂಜಾನೆಯಿಂದ ಸಂಜೆಯವರೆಗೂ ಮಳೆಯಲ್ಲಿ ನೀರು ತುಂಬಿದ ಕೆಸರು ಗದ್ದೆಯಲ್ಲಿ ಮೈಬಗ್ಗಿಸಿ ದುಡಿಯಲೇ ಬೇಕಾಗಿತ್ತು. ಈ ವೇಳೆ ಅಂದರೆ ಜುಲೈ 17ರಿಂದ ಆರಂಭವಾಗಿ ಆಗಸ್ಟ್ 16ರವರೆಗಿನ ಒಂದು ತಿಂಗಳ ಅವಧಿ ಕಕ್ಕಡ (ಆಟಿ) ತಿಂಗಳಾಗಿತ್ತು. ಈ ಸಮಯದಲ್ಲಿ ಗದ್ದೆ ಕೆಲಸ ಹೊರತುಪಡಿಸಿ ಉಳಿದ ಎಲ್ಲ ಶುಭ ಕಾರ್ಯಗಳು ನಿಷಿದ್ಧವಾಗಿತ್ತು.

ಅವತ್ತಿನ ದಿನಗಳಲ್ಲಿ ಆಟಿ ತಿಂಗಳು ಎಂದರೆ ಸದಾ ಸುರಿಯುವ ಮಳೆ ಮತ್ತು ಬಿಡುವಿಲ್ಲದ ಕೆಲಸ ಇಂತಹ ಸಂದರ್ಭಗಳಲ್ಲಿ ತಮ್ಮ ಶರೀರವನ್ನು ಶೀತದಿಂದ ರಕ್ಷಿಸಿಕೊಂಡು ಆರೋಗ್ಯವಾಗಿರುವುದು ಕೂಡ ಬಹು ಮುಖ್ಯವಾಗಿತ್ತು. ಹಾಗಾಗಿಯೇ ಅವತ್ತು ಎಲ್ಲೆಡೆಯೂ ಸುಲಭವಾಗಿ ಬೆಳೆಯುತ್ತಿದ್ದ ಗಿಡಮೂಲಿಕೆಗಳಲ್ಲಿರುವ ಆರೋಗ್ಯಕಾರಿ ಗುಣ ಮತ್ತು ರುಚಿಯನ್ನು ಅರಿತು ಅವುಗಳನ್ನು ಬಳಕೆ ಮಾಡುತ್ತಾ ಬಂದರು.

 ಉಷ್ಣಾಂಶ ಹೊಂದಿದ ಆಹಾರ ಸೇವನೆ

ಉಷ್ಣಾಂಶ ಹೊಂದಿದ ಆಹಾರ ಸೇವನೆ

ಆಟಿ ತಿಂಗಳಲ್ಲಿ ಮಳೆ ಹೆಚ್ಚು ಸುರಿಯುತ್ತಿದ್ದರಿಂದ ಮನೆಯಿಂದ ಹೊರಗೆ ಹೋಗಲಾಗದ ಪರಿಸ್ಥಿತಿ ಇದ್ದುದರಿಂದ ತಮ್ಮ ಸುತ್ತಮುತ್ತ ಸಿಗುವ ಏಡಿ, ಅಣಬೆ, ಬಿದಿರು ಕಣಿಲೆ, ಮರದಲ್ಲಿ ಬೆಳೆಯುವ ಕೆಸದ ಪತ್ರೊಡೆ, ನಾಟಿ ಕೋಳಿ ಮೊದಲಾದವುಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು. ಇವುಗಳಲ್ಲಿ ಉಷ್ಣಾಂಶವನ್ನು ಹೆಚ್ಚಿಸುವ ಶಕ್ತಿಯಿತ್ತು. ಇನ್ನು ಆಟಿ ತಿಂಗಳ 18ನೇ ದಿನ ಕಾಡಿನಲ್ಲಿ ಸಿಗುವ ಆಟಿಸೊಪ್ಪನ್ನು ತಂದು ಅದನ್ನು ಚೆನ್ನಾಗಿ ತೊಳೆದು ಬಳಿಕ ನೀರಿನಲ್ಲಿ ಬೇಯಿಸಿ ಅದು ಬಿಡುವ ನೀರಿನಲ್ಲಿ ಪಾಯಸ, ಸೇರಿದಂತೆ ಇನ್ನಿತರ ತಿನಿಸು ಮಾಡಿ ಜೇನುತುಪ್ಪದೊಂದಿಗೆ ಸೇವಿಸುವುದು, ಹಾಗೆಯೇ ನಾಟಿಕೋಳಿ ಸಾರು, ಕಾಡಿನಲ್ಲಿ ಬೆಳೆಯುವ ಕೆಸುವನ್ನು ಬಳಸಿ ಮಾಡುವ ಪತ್ರೊಡೆ ಎಲ್ಲವೂ ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತಿತ್ತು. ಇದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿತ್ತು.

 ಇಂದು ಕಕ್ಕಡ ಪದ್ನಟ್ ಆಚರಣೆ

ಇಂದು ಕಕ್ಕಡ ಪದ್ನಟ್ ಆಚರಣೆ

ಕೊಡಗಿನ ಕಾಡುಗಳಲ್ಲಿ, ತೋಟಗಳ ಅಂಚಿನಲ್ಲಿ ಪೊದೆಯಾಗಿ ಬೆಳೆಯುವ ಉದ್ದುದ್ದ ದಂಟಿನ ಮೂರು ನಾಲ್ಕು ಅಡಿಗೂ ಹೆಚ್ಚು ಎತ್ತರ ಬೆಳೆಯುವ ಸಸ್ಯ ಆಟಿಸೊಪ್ಪು. ಇದರ ವೈಜ್ಞಾನಿಕ ಹೆಸರು ಜಸ್ಟಿಕಾ ವೈನಾಡೆನ್ಸಿಯಂತೆ. ಈ ಸೊಪ್ಪಿನಲ್ಲಿ ಆಟಿ ತಿಂಗಳು ಆರಂಭವಾಗುತ್ತಿದ್ದಂತೆಯೇ ಒಂದೊಂದೇ ಔಷಧಿಗುಣ ಸೇರುತ್ತಾ ಹೋಗಿ 18ರಂದು 18 ತರಹದ ಔಷಧಿ ಇದರಲ್ಲಿ ಇರುತ್ತದೆ. ಬಳಿಕ ಅದು ಕಡಿಮೆಯಾಗುತ್ತಾ ಹೋಗುತ್ತದೆ ಎನ್ನುವುದು ನಂಬಿಕೆ. ಹೀಗಾಗಿ ಕಕ್ಕಡ (ಆಟಿ) ಪದ್ನಟ್(ಆಗಸ್ಟ್ 3)ರಂದು ಜಿಲ್ಲೆಯಾದ್ಯಂತ ಆಚರಿಸಲಾಗುತ್ತದೆ.

ಈ ದಿನ ಸೊಪ್ಪಿಗೆ ಎಲ್ಲಿಲ್ಲದ ಬೇಡಿಕೆ ಕಂಡು ಬರುತ್ತದೆ. ವರ್ಷಗಳು ಉರುಳಿದಂತೆ ವಾಣಿಜ್ಯ ಬೆಳೆಗಳ ಭರಾಟೆಯಿಂದಾಗಿ ಭತ್ತದ ಕೃಷಿಯತ್ತ ರೈತರಿಗೆ ಆಸಕ್ತಿ ಕಡಿಮೆಯಾಗತೊಡಗಿತು. ಲಾಭ ನಷ್ಟದ ಲೆಕ್ಕಚಾರ ಹಾಕಿದ ಕೆಲವು ರೈತರು ಗದ್ದೆಯನ್ನು ಕಾಫಿ ತೋಟವನ್ನಾಗಿ ಪರಿವರ್ತಿಸಿದರೆ ಮತ್ತೆ ಕೆಲವರು ಭತ್ತದ ಬದಲಿಗೆ ಬೇರೆ ಬೆಳೆಗಳನ್ನು ಬೆಳೆಯತೊಡಗಿದರು. ಹೀಗಾಗಿ ಭತ್ತದ ಕೃಷಿ ಬಗೆಗಿನ ಆಸಕ್ತಿಯೂ ಕಡಿಮೆಯಾಗಿದೆ.

 ಕಕ್ಕಡ ಪದ್ನಟ್ ಆಚರಣೆ ಸಾಕ್ಷಿ

ಕಕ್ಕಡ ಪದ್ನಟ್ ಆಚರಣೆ ಸಾಕ್ಷಿ

ಈಗ ಕೊಡಗು ಎಲ್ಲ ರೀತಿಯಿಂದಲೂ ಅಭಿವೃದ್ಧಿಯಾಗಿದೆ. ಆಧುನಿಕ ಬದುಕು ಇಲ್ಲಿನ ಜನಜೀವನದ ಮೇಲೆ ಪರಿಣಾಮ ಬೀರಿದೆ. ಅದಕ್ಕೂ ಹೆಚ್ಚಾಗಿ ಇಲ್ಲಿನ ವಾತಾವರಣ ವರ್ಷದಿಂದ ವರ್ಷಕ್ಕೆ ಸಂಪೂರ್ಣ ಬದಲಾವಣೆಯಾಗಿದೆ. ಮಳೆ ಸಂಪೂರ್ಣ ಕಡಿಮೆಯಾಗುತ್ತಿದೆ. ವಾಡಿಕೆಯ ಮಳೆಯೂ ಸುರಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚಳಿ ಮಾಯವಾಗಿದೆ. ಆದರೂ ಹಿಂದಿನವರು ಮುಂದುವರೆಸಿಕೊಂಡು ಬಂದಿರುವ ಸಂಪ್ರದಾಯವನ್ನು ಇಲ್ಲಿನವರು ಪಾಲಿಸಿಕೊಂಡು ಹೋಗುತ್ತಿರುವುದಕ್ಕೆ ಕಕ್ಕಡ ಪದ್ನಟ್ (ಆಟಿ 18) ಆಚರಣೆ ಸಾಕ್ಷಿಯಾಗಿದೆ.

English summary
Today is 18th day of ati or Kakkada month in kodagu. People in kodagu celebrating kakkada padnat today,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X