ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರಿಗೆ ಉರುಳಾಗುತ್ತಿದೆ ಸೌದಿ ಯುವರಾಜನ ಸುಧಾರಣಾ ಕ್ರಮ!

By ಉಡುಪಿ ಪ್ರತಿನಿಧಿ
|
Google Oneindia Kannada News

ಸೌದಿ ಅರೇಬಿಯಾ ಎಂಬ ಪದ ಕಿವಿಗೆ ಬಿದ್ದರೆ ರೋಮಾಂಚನಗೊಳ್ಳುವ ಕಾಲವಿತ್ತು. ಸೌದಿಯಲ್ಲಿ ದುಡಿಯುವ ವ್ಯಕ್ತಿಗೆ ವಿಶೇಷ ಮನ್ನಣೆ ನೀಡುವ ಜನರಿದ್ದರು. ಇದಕ್ಕೆ ಕಾರಣವೂ ಇಲ್ಲದಿಲ್ಲ. ದಶಕಗಳ ಹಿಂದೆ ಕಟ್ಟರ್ ಸಂಪ್ರದಾಯಸ್ಥ ಮುಸಲ್ಮಾನರ ಈ ದೇಶ ಸಾವಿರಾರು ಜನರಿಗೆ ಉದ್ಯೋಗ ನೀಡಿತ್ತು. ಕೈತುಂಬ ಸಂಬಳ. ಭಾರತೀಯ ಕರೆನ್ಸಿಗೆ ಹೋಲಿಸಿದ್ರೆ ಅಲ್ಲಿನ ಕರೆನ್ಸಿ ರಿಯಾಲ್ ಗೆ ಹೆಚ್ಚಿನ ಮೌಲ್ಯ ಇತ್ತು. ಹೀಗಾಗಿ ಯುವ ಜನಾಂಗ ಸಹಜವಾಗಿಯೇ ಸೌದಿಯಲ್ಲಿ ದುಡಿಯುವ ಕನಸು ಕಂಡಿದ್ದರಲ್ಲಿ ಆಶ್ಚರ್ಯವೇ ಇಲ್ಲ.

ಕಳೆದ ಕೆಲ ದಶಕಗಳಿಂದ ಕರ್ನಾಟಕ ಕರಾವಳಿ ಮತ್ತು ಗಡಿ, ಗಡಿನಾಡು ಕಾಸರಗೋಡಿನ ಲಕ್ಷಾಂತರ ಮಂದಿ ಸೌದಿ ಅರೇಬಿಯಾದ ಕೃಪೆಯಿಂದ ತಮ್ಮ ಜೀವನ ರೂಪಿಸಿಕೊಂಡದ್ದನ್ನು ಮರೆಯುವಂತೆಯೇ ಇಲ್ಲ. ಸೌದಿಯಲ್ಲಿ ನೌಕರಿ ಹಿಡಿದು, ಊರಲ್ಲಿರುವ ಕುಟುಂಬವನ್ನು ಸಾಕುತ್ತಿದ್ದ ಸಾವಿರಾರು ಕುಟುಂಬಗಳು, ಇಲ್ಲಿ ಆಸ್ತಿ ಖರೀದಿಸಿ, ಮನೆ ಕಟ್ಟಿಕೊಂಡು ಸೆಟ್ಲ್ ಆದ ಉದಾಹರಣೆಗಳು ಅನೇಕ.

ಸೌದಿಯಲ್ಲಿನ ಭಾರತೀಯರ ಕನಸಿನ ಗೋಪುರ ಕೆಡವಿದ ಅವಲಂಬನಾ ತೆರಿಗೆ ಸೌದಿಯಲ್ಲಿನ ಭಾರತೀಯರ ಕನಸಿನ ಗೋಪುರ ಕೆಡವಿದ ಅವಲಂಬನಾ ತೆರಿಗೆ

ನೀವು ಬೇಕಿದ್ದರೆ ಕರ್ನಾಟಕ ಕರಾವಳಿ ಮತ್ತು ಗಡಿನಾಡ ಕಾಸರಗೋಡಿಗೆ ಒಂದು ಸುತ್ತು ಹಾಕಿದ್ರೆ ಸಾಕು, ಕಣ್ಣು ಕೋರೈಸುವ ವೈಭವೋಪೇತ ಮನೆಗಳು, ಬಂಗಲೆಗಳು ಕಣ್ಣಿಗೆ ರಾಚುತ್ತವೆ. ಇವೆಲ್ಲ ಸೌದಿ ಅರೇಬಿಯಾದ ಕೃಪೆಯಿಂದಲೇ ಆದಂಥವು. ಒಂದು ಕಾಲದಲ್ಲಿ ಅಲ್ಲಿಗೆ ಉದ್ಯೋಗ ಅರಸಿ ಹೋದ ಈ ಭಾಗದ ಮಂದಿ, ಕಷ್ಟಪಟ್ಟು ದುಡಿದಿದ್ದರು. ದುಡಿದು ಊರಲ್ಲಿ ಆಸ್ತಿ ಖರೀದಿಸಿದ್ದರು. ತಮ್ಮ ಮನೆಯ ಮದುವೆ, ಮುಂಜಿ ಅಂತ ಗಡದ್ದಾಗಿ ಖರ್ಚು ಮಾಡುತ್ತಿದ್ದರು.

ಕರಾವಳಿಯ ಪ್ರಗತಿಯಲ್ಲಿ ಅನಿವಾಸಿ ಭಾರತೀಯರ ಕೊಡುಗೆ

ಕರಾವಳಿಯ ಪ್ರಗತಿಯಲ್ಲಿ ಅನಿವಾಸಿ ಭಾರತೀಯರ ಕೊಡುಗೆ

ಇವತ್ತು ಕರಾವಳಿ ಜಿಲ್ಲೆಗಳ ಅಭಿವೃದ್ಧಿಯಲ್ಲಿ ಅನಿವಾಸಿ ಕನ್ನಡಿಗರ ಕೊಡುಗೆ ಅಪಾರವಾದದ್ದು. ಅಲ್ಲಿಯ ಕರೆನ್ಸಿ ರಿಯಾಲ್ ಮತ್ತು, ದಿರ್ ಹಮ್ ಗಳನ್ನು ಇವರೆಲ್ಲ ವ್ಯಯಿಸಿದ್ದು ಇಲ್ಲೇ ಕರ್ನಾಟಕದ ಕರಾವಳಿಯಲ್ಲಿ. ಹೀಗಾಗಿ ಕರಾವಳಿಯ ಆರ್ಥಿಕ ಸ್ಥಿತಿ ಬಹುಮಟ್ಟಿಗೆ ಚೆನ್ನಾಗಿತ್ತು. ಆದರೆ ಬರಬರುತ್ತಾ ಸೌದಿ ಅರೇಬಿಯಾ ಎಂಬುದು ಭಾರತೀಯ ಬಡ, ಮಧ್ಯಮ ವರ್ಗದ ಮಂದಿಯ ಕನಸಿಗೆ ತಣ್ಣಿರೆರೆಚುತ್ತಾ ಬಂತು. ಅಲ್ಲಿ ಜಾರಿಗೆ ಬರುತ್ತಿರುವ ಹೊಸ ಆರ್ಥಿಕ, ಔದ್ಯೋಗಿಕ ಮತ್ತು ವಲಸೆ ನೀತಿಗಳು ಭಾರತೀಯರ ನೌಕರಿಗಳಿಗೆ ಕುತ್ತು ತರುತ್ತಲೇ ಇವೆ.

ಈಗ ಅವಲಂಬನಾ ತೆರಿಗೆ ಹೊಡೆತಕ್ಕೆ ಸಿಲುಕಿರುವ ಸಾವಿರಾರು ಭಾರತೀಯರಿಗೆ ಈ ಹಿಂದೆಯೂ ಸೌದಿ ಸರಕಾರ ಹೊಡೆತ ನೀಡಿದ್ದುಂಟು. ಇತ್ತೀಚೆಗಂತೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ ಹಾದಿಯಲ್ಲಿದೆ. ಹೀಗಾಗಿ ಶ್ರೀಮಂತ ದೇಶ ಎನಿಸಿಕೊಂಡಿದ್ದ ಸೌದಿ ಅರೇಬಿಯಾದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಇದರಿಂದಾಗಿ ಭಾರತೀಯ ಮೂಲದ ಸಾವಿರಾರು ಕಾರ್ಮಿಕರು ಉದ್ಯೋಗವನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ತಲೆದೋರಿದೆ.

ಟೈಮ್ಸ್ ವರ್ಷದ ವ್ಯಕ್ತಿ 2017: ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಟೈಮ್ಸ್ ವರ್ಷದ ವ್ಯಕ್ತಿ 2017: ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್

ಸಲ್ಮಾನ್ ಸೌದಿ ಸುಧಾರಣೆಯ ಹರಿಕಾರ!

ಸಲ್ಮಾನ್ ಸೌದಿ ಸುಧಾರಣೆಯ ಹರಿಕಾರ!

ಹೊಸ ರಾಜ ಮುಹಮ್ಮದ್ ಬಿನ್ ಸಲ್ಮಾನ್ ಬಗ್ಗೆ ತಿಳಿದುಕೊಂಡರೆ, ಸೌದಿಯ ಈಗಿನ ಪರಿಸ್ಥಿತಿಯನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಯುವರಾಜ ಸುಧಾರಣಾ ಕ್ರಮಗಳಿಗೆ ತೆಗೆದುಕೊಳ್ಳುತ್ತಿದ್ದು, ತಮ್ಮ ದೇಶದ ಪ್ರಜೆಗಳನ್ನು ಬಿಟ್ಟು ವಿದೇಶೀ ಮೂಲದವರನ್ನು ಕಡೆಗಣಿಸುತ್ತಿರೋದೇ ಈ ಎಲ್ಲ ಸಮಸ್ಯೆಗಳಿಗೆ ಮೂಲ. ಸೌದಿ ಅರೇಬಿಯಾದ ನೂತನ ದೊರೆ ಅನೇಕ ಕ್ರಾಂತಿಕಾರಕ ಬದಲಾವಣೆ ತರುತ್ತಿದ್ದಾರೆ.

ಕಳೆದ ಎಂಟು ದಶಕಗಳಲ್ಲಿ ಆ ದೇಶದಲ್ಲಿ ಇಷ್ಟೊಂದು ತೀವ್ರವಾದ ಕ್ರಮಗಳನ್ನು ಯಾರೂ ಕೈಗೊಂಡಿರಲಿಲ್ಲ. ಈಗಿನ ಯುವರಾಜ ಇನ್ನೂ 32ರ ಹರೆಯದ ಯುವಕ. 2017ರ ಟೈಮ್ಸ್ ವರ್ಷದ ವ್ಯಕ್ತಿಯಾಗಿ ಆಯ್ಕೆಯಾದವರು. ಮೊಹಮ್ಮದ್ ಬಿನ್ ಸಲ್ಮಾನ್ ಅಲ್ಲಿನ ಹಿಂದಿನ ದೊರೆಯ ಅಚ್ಚುಮೆಚ್ಚಿನ ಮಗ. ಅಧಿಕಾರದ ಸಂಪೂರ್ಣ ನಿಯಂತ್ರಣ ಮೊಹಮ್ಮದ್ ಕೈಯಲ್ಲಿಯೇ ಇದೆ. ಚಲನಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿರುವುದು, ಮಹಿಳೆಯರಿಗೆ ಕಾರು ಚಾಲನೆಗೆ ಅವಕಾಶ ಮಾಡಿಕೊಟ್ಟಿರುವುದು ಸಣ್ಣ ಸಾಧನೆಯೇನಲ್ಲ.

ದಶಕದಿಂದ ಸೌದಿ ಅರೇಬಿಯಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅಭಿವೃದ್ಧಿ ಕುಂಠಿತೊಂಡಿದೆ. ಕೆಲ ಶ್ರೀಮಂತರು ವೈಯಕ್ತಿಕ ಹಿತಾಸಕ್ತಿಯಿಂದ ಅಧಿಕಾರಿ ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರ ಹಣವನ್ನು ಲಪಟಾಯಿಸುತ್ತಿರುವ ಹಿನ್ನೆಲೆಯಲ್ಲಿ ಕಿಂಗ್ ಸಲ್ಮಾನ್ ಭ್ರಷ್ಟವಿರೋಧಿ ಅಭಿಯಾನವನ್ನು ಆರಂಭಿಸಿದ್ದಾರೆ. ಹಲವಾರು ಶ್ರೀಮಂತರ ಮೇಲೆ ಮುಗಿಬಿದ್ದು, ಅವರನ್ನು ಜೈಲಿಗೆ ಅಟ್ಟುತ್ತಿದ್ದಾರೆ.

ಸೌದಿಯಲ್ಲಿ 'ಕುಬೇರ' ತಲಾಲ್ ಸೇರಿ ಹಲವರ ಬಂಧನ ಸೌದಿಯಲ್ಲಿ 'ಕುಬೇರ' ತಲಾಲ್ ಸೇರಿ ಹಲವರ ಬಂಧನ

ಯುವ ಸಮೂಹದ ಮನಗೆಲ್ಲಲು ಯತ್ನ

ಯುವ ಸಮೂಹದ ಮನಗೆಲ್ಲಲು ಯತ್ನ

ನಿಮಗೆ ಗೊತ್ತಿರಲಿ ; ಸೌದಿಯ ಪ್ರಜೆಗಳಲ್ಲಿ ಶೇ. 60ರಷ್ಟು ಜನ 30ರೊಳಗಿನ ವಯಸ್ಸಿನವರು. ಆಧುನಿಕತೆಗೆ ತಮ್ಮನ್ನು ತೆರೆದುಕೊಳ್ಳಲು ಹಪಹಪಿಸುವವರು. ಹೀಗಾಗಿ ಯುವರಾಜ ಸಲ್ಮಾನ್ ಯುವಸಮೂಹದ ಮನಗೆಲ್ಲಲು ಯತ್ನಿಸುತ್ತಿದ್ದಾರೆ. ಇದರ ಭಾಗವಾಗಿ ಸಲ್ಮಾನ್, ಸೌದಿ ಪ್ರಜೆಗಳಿಗೆ ಅನುಕೂಲವಾಗುವ ಎಲ್ಲ ಕ್ರಮಗಳನ್ನೂ ಕೈಗೊಂಡು, ವಿದೇಶೀಯರಿಗೆ ಬಾಗಿಲು ಬಂದ್ ಮಾಡುತ್ತಿದ್ದಾರೆ.

ಸ್ವದೇಶೀಯರಿಗೆ ನೌಕರಿ, ಪ್ರತಿವೊಂದು ವಸ್ತುಗಳ ಮೇಲೆ ವ್ಯಾಟ್, ಅವಲಂಬಿತರ ಮೇಲೆ ತಲೆ ಕಂದಾಯ, ಕಾರ್ಮಿಕ ಪರವಾನಿಗೆ ದರದಲ್ಲಿ ಹೆಚ್ಚಳ ಮೊದಲಾದ ನಿಯಮಾವಳಿಗಳನ್ನು ಈಗಾಗಲೇ ಅಲ್ಲಿ ಜಾರಿಗೊಳಿಸಲಾಗಿದೆ. ಕೆಲ ಸಮಯದ ಹಿಂದೆ ನಿತಾಕತ್ ಎಂಬ ನಿಯಮಾವಳಿಯನ್ನು ತಂದು ಕಂಪನಿಗಳು ಕಡ್ಡಾಯವಾಗಿ ಶೇ.50ರಷ್ಟು ಸೌದಿ ಪ್ರಜೆಗಳನ್ನು ಕೆಲಸದಲ್ಲಿ ಇಟ್ಟುಕೊಳ್ಳಬೇಕೆಂಬ ಸ್ವದೇಶೀಕರಣ ನೀತಿ ಜಾರಿಗೆ ತಂದಿತ್ತು. ಸೌದಿ ಅರೇಬಿಯಾ ತನ್ನ ದೇಶದಲ್ಲಿನ ಆರ್ಥಿಕ ಬಿಕ್ಕಟ್ಟು ನಿವಾರಿಸಿಕೊಳ್ಳಲು ತನ್ನ ದೇಶದಲ್ಲಿರುವ ಹೊರ ದೇಶಗಳ ಪ್ರಜೆಗಳ ಮೇಲೆ 'ಲೆವಿ' ಎಂಬ ಹೊಸ ನಿಯಮಾವಳಿಯನ್ನು ಜಾರಿಗೊಳಿಸಿದ್ದು ಈ ನಿಯಮ ಅನಿವಾಸಿ ಭಾರತೀಯರಿಗೆ ಭಾರೀ ಹೊಡೆತವನ್ನು ನೀಡಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕರ್ನಾಟಕದ ಕರಾವಳಿ ಮೇಲೆ ನೇರ ಪರಿಣಾಮ!

ಕರ್ನಾಟಕದ ಕರಾವಳಿ ಮೇಲೆ ನೇರ ಪರಿಣಾಮ!

ನೀವು ನಂಬಲಿಕ್ಕಿಲ್ಲ ; ಸೌದಿ ಅರೇಬಿಯಾದಲ್ಲಿ ಏನೇ ಬಿಕ್ಕಟ್ಟು ತಲೆದೋರಿದರೂ ಅದರ ನೇರ ಪರಿಣಾಮ ಕರ್ನಾಟಕದ ಕರಾವಳಿಯ ಮೇಲಾಗುತ್ತದೆ. ಕಾರಣ, ಕರಾವಳಿಯ ಪ್ರತೀ ಮನೆಯಲ್ಲೂ ಕನಿಷ್ಠ ಒಬ್ಬ ಸದಸ್ಯನಾದರೂ ಸೌದಿಯಲ್ಲಿ ದುಡಿಯುತ್ತಿರುತ್ತಾರೆ. ಹೀಗಾಗಿ ಇವತ್ತಿನ ಕರಾವಳಿಯ ಅಭಿವೃದ್ಧಿಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಮಂದಿಯ ಕೊಡುಗೆ ಅಪಾರ.

ಕಳೆದ ಹದಿನೇಳು ವರ್ಷಗಳಿಂದ ಸೌದಿಯ ರಿಯಾದ್ ನಲ್ಲಿ ದುಡಿಯುತ್ತಿದ್ದ ಹಕೀಂ ಪ್ರಕಾರ, ಈಗಾಗಲೇ ಸೌದಿಯ ನಾಡಿಮಿಡಿತ, ಅಲ್ಲಿಯ ಕಾನೂನನ್ನು ಅರಿತು ದುಡಿಯುತ್ತಿರುವ ಮಂದಿ ಹೇಗೋ ಬದುಕಿಕೊಳ್ಳುತ್ತಾರೆ. ಅಂಥವರಿಗೆ ದೊಡ್ಡ ಸಮಸ್ಯೆಯೇನೋ ಆಗೋದಿಲ್ಲ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಹೋದ ಕಡಿಮೆ ವಿಧ್ಯಾಭ್ಯಾಸ ಹೊಂದಿದ ಒಂದು ವರ್ಗಕ್ಕೆ ಸೌದಿಯ ಹೊಸ ಕಾನೂನುಗಳು ಬಿಗಿಯಾಗುತ್ತಿವೆ.

2017ರ ಹೊತ್ತಿಗೇ ಸೌದಿ ಅರೇಬಿಯಾದಲ್ಲಿರುವ ಭಾರತೀಯರ ಸಂಖ್ಯೆ ಸುಮಾರು 30 ಲಕ್ಷವನ್ನು ದಾಟಿದೆ ಎಂಬುದು ಅಂದಾಜು. ಇವರಲ್ಲಿ ಅಧಿಕ ಮಂದಿ ಕೇರಳ ಮತ್ತು ಕರ್ನಾಟದವರೇ ಆಗಿದ್ದಾರೆ. ಇನ್ನುಳಿದ ಕೊಲ್ಲಿ ರಾಷ್ಟ್ರಗಳಲ್ಲಿ ಅಪಾರ ಸಂಖ್ಯೆಯ ಭಾರತೀಯರಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡಿಗರಿದ್ದಾರೆ.

ದುಬೈಯಲ್ಲಿ ಅಂತಹ ಪರಿಸ್ಥಿತಿ ಇಲ್ಲ

ದುಬೈಯಲ್ಲಿ ಅಂತಹ ಪರಿಸ್ಥಿತಿ ಇಲ್ಲ

ಕಟ್ಟರ್ ಮುಸ್ಲಿಂ ರಾಷ್ಟ್ರ ಸೌದಿ ಅರೇಬಿಯಾಕ್ಕಿಂತ, ಪುಟ್ಟ ದುಬೈಯಲ್ಲಿ ಅಂತಹ ಪರಿಸ್ಥಿತಿ ಇಲ್ಲ ಅಂತಾರೆ ಅಬುಧಾಬಿಯಲ್ಲಿರೋ ಈ ಲೇಖಕನ ಮಿತ್ರ ಉಸ್ಮಾನ್. ದುಬೈಯ ಆದಾಯದ ಮೂಲವೇ ಪ್ರವಾಸೋದ್ಯಮ. ಜಗತ್ತಿನ ಬಹುತೇಕ ರಾಷ್ಟ್ರದ ಜನ ದುಬೈಗೆ ಭೇಟಿ ಕೊಡುತ್ತಾರೆ. ಮೋಜು ಮಸ್ತಿಗೂ ದುಬೈ ಸಾಕಷ್ಟು ಖ್ಯಾತಿ ಗಳಿಸಿರುವ ದೇಶ. ಹೀಗಾಗಿ ಸೌದಿಯಿಂದ ವಾಪಸಾಗುವ ಕೆಲವರು ದುಬೈಯತ್ತ ಮುಖ ಮಾಡುತ್ತಿದ್ದಾರೆ ಅನ್ನೋದು ಉಸ್ಮಾನ್ ಅಭಿಪ್ರಾಯ.

ಆದ್ರೆ ದುಬೈ ವಿದ್ಯಾವಂತರನ್ನಷ್ಟೇ ಹೆಚ್ಚಾಗಿ ಆಕರ್ಷಿಸುವ ದೇಶ. ಜೊತೆಗೆ ದುಬಾರಿ ಕೂಡ. ಇಲ್ಲಿ ನೌಕರಿ ಮಾಡುವ ಜನರಿಗೆ ಹೆಚ್ಚಿನ ಸಂಬಳವಿದ್ದರಷ್ಟೇ ಏನಾದ್ರೂ ಉಳಿತಾಯ ಮಾಡಲು ಸಾಧ್ಯ. ಸಣ್ಣಪುಟ್ಟ ಕೆಲಸ ಮಾಡಿಕೊಂಡವರು, ತಮ್ಮ ದುಡಿದ ಹಣ ಊಟ ವಸತಿಗೇ ಖರ್ಚಾಗಿ ಹೋಗುತ್ತದೆ. ಹೀಗಾಗಿ ಸೌದಿಗೆ ಹೋಗುವಷ್ಟು ಸಲೀಸಾಗಿ ದುಬೈಗೆ ಹೋಗಲು ಕನ್ನಡಿಗರು ಹಿಂದೇಟು ಹಾಕುತ್ತಾರೆ.

ಒಟ್ಟಾರೆ, ಸುಧಾರಣೆಯ ತುಡಿದಲ್ಲಿರುವ ಸೌದಿಯ ನೂತನ ರಾಜ, ತಮ್ಮ ಪ್ರಜೆಗಳ ಹಿತದೃಷ್ಟಿಯನ್ನಷ್ಟೇ ಇಟ್ಟುಕೊಂಡು ವಿದೇಶೀಯರಿಗೆ ಒಂದೊಂದೇ ಹೊಡೆತ ಕೊಡುತ್ತಿದ್ದಾರೆ. ಇದರ ಪರಿಣಾಮವಾಗಿ ಅಲ್ಲಿ ನೆಲೆಸಿರೋ ಸಾವಿರಾರು ಮಂದಿ ಅತ್ತ ಅಲ್ಲೂ ಉಳಿಯಲಾಗದೆ, ತವರಿಗೆ ವಾಪಸಾಗಿ ಉದ್ಯೋಗವನ್ನೂ ಮಾಡಲಾಗದೆ ಅತಂತ್ರ ಸ್ಥಿತಿ ಎದುರಿಸುವಂತಾಗಿದೆ.

English summary
Special story : Saudi Arabia is no more tax heaven for Indians. Saudi King Salman has been imposing several tax schemes to improve economy of this traditional muslim country. It has hit Indian, especially from Dakshina Kannada very hard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X