ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019ನೇ ವರ್ಷದ ಹಳೆಯ ನೆನಪುಗಳನ್ನು ಕೆದಕುತ್ತವೆ ಈ ಫೋಟೋಗಳು

|
Google Oneindia Kannada News

ಕಣ್ಣು ಮುಚ್ಚಿ ಕಣ್ಣು ಬಿಡುವುದರಲ್ಲೇ ಒಂದು ವರ್ಷ ಎಂಬುದು ಕಳೆದು ಹೋಗಿದೆ. ಕಳೆದ ವರ್ಷ ದೇಶ-ವಿದೇಶ, ರಾಜ್ಯ ಯಾಕೆ ಪ್ರತಿಯೊಂದು ಹಳ್ಳಿಹಳ್ಳಿಗಳಲ್ಲೂ ಸವಿನೆನಪಿನ ಘಟನೆಗಳು ನಡೆದಿವೆ. ಇದು ನಿಮ್ಮೂರಿನಲ್ಲೇ ನಿಮಗೆ ಗೊತ್ತಿಲದೇ ನಡೆದು ಹೋಗಿರುವ ಘಟನೆಗಳನ್ನು ನೆನಪಿಸುವ ಚಿಕ್ಕ ಪ್ರಯತ್ನ.

2019ನೇ ಸಾಲಿನಲ್ಲಿ ಸಾಕಷ್ಟು ಸಿಹಿ-ಕಹಿ ಘಟನೆಗಳು ನಡೆದಿವೆ. ಲೋಕಸಭಾ ಚುನಾವಣೆ ನಡೆದಿದ್ದು ಬಿಜೆಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿತು. ಗುಜರಾತ್ ನರ್ಮದಾ ನದಿಯಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ರ ಐತಿಹಾಸಿಕ ಏಕತಾ ಪ್ರತಿಮೆ ಅನಾವರಣಗೊಂಡಿತು. ಮಹಾರಾಷ್ಟ್ರದಲ್ಲಿ 30 ವರ್ಷಗಳ ದೋಸ್ತಿ ಮುರಿದು ಬಿತ್ತು. ಬಿಹಾರ, ಕರ್ನಾಟಕ, ಮಹಾರಾಷ್ಟ್ರದಲ್ಲಿ ವರುಣನ ಅಬ್ಬರಕ್ಕೆ ಬದುಕು ಬೀದಿಗೆ ಬಂದಿತ್ತು.

ವರ್ಷಾಂತ್ಯದ ವೇಳೆಗೆ ಹೈದ್ರಾಬಾದ್ ನಲ್ಲಿ ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ. ಆರೋಪಿಗಳ ಮೇಲೆ ಪೊಲೀಸರು ನಡೆಸಿದ ಎನ್ ಕೌಂಟರ್. ತ್ರಿವಳಿ ತಲಾಖ್ ಕಾಯ್ದೆ, ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ನಡೆಸಿದ ಪ್ರತಿಭಟನೆ ಹೀಗೆ ನೆನಪಿನಲ್ಲಿ ಇಟ್ಟುಕೊಳ್ಳುವಂತಾ ಘಟನೆಗಳು ಸಾವಿರಾರು. ಅದರಲ್ಲಿ ಕೆಲವು ಮುಖ್ಯ ಪೋಟೋಗಳ ಮೂಲಕ ನಿಮ್ಮ ನೆನಪುಗಳನ್ನು ಕೆದಕುವ ಕೆಲಸವನ್ನು ಪಿಟಿಐ ಸಂಸ್ಥೆ ಮಾಡಿದೆ. ಆ ಘಟನೆಗಳನ್ನು ನೆನಪಿಸುವ ಪುಟ್ಟ ಪ್ರಯತ್ನವೇ ನಮ್ಮ ಈ ವರದಿ.

ರಾಜ್ ಘಾಟ್ ನಲ್ಲಿ 'ಮಹಾತ್ಮ'ರಿಗೆ ನಮನ

ರಾಜ್ ಘಾಟ್ ನಲ್ಲಿ 'ಮಹಾತ್ಮ'ರಿಗೆ ನಮನ

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಶಾಂತಿಪಥದಲ್ಲಿ ಹೋರಾಡಿದ ಮಹಾತ್ಮ ಗಾಂಧೀಜಿಯವರ 71ನೇ ಪುಣ್ಯಸ್ಮರಣೆಯನ್ನು ಜನವರಿ.30ರಂದು ಆಚರಿಸಲಾಯಿತು. ನವದೆಹಲಿಯ ರಾಜಘಾಟ್ ನಲ್ಲಿರುವ ಗಾಂಧೀಜಿ ಸಮಾಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನಮನ ಸಲ್ಲಿಸಿದರು.

ಮನೋಹರ್ ಪರಿಕ್ಕರ್ ಕರ್ತವ್ಯನಿಷ್ಠೆಗೆ ಸಲಾಂ

ಮನೋಹರ್ ಪರಿಕ್ಕರ್ ಕರ್ತವ್ಯನಿಷ್ಠೆಗೆ ಸಲಾಂ

ಕಳೆದ ಜನವರಿಯಲ್ಲಿ ಗೋವಾ ವಿಧಾನಸಭೆಯ ಬಜೆಟ್ ಅಧಿವೇಶನ ನಡೆಯಿತು. ಈ ವೇಳೆ ತೀವ್ರ ಅನಾರೋಗ್ಯದ ನಡುವೆಯೂ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಗ್ಲುಕೋಸ್ ಹಾಕಿಕೊಂಡೇ ಬಜೆಟ್ ಅಧಿವೇಶನಕ್ಕೆ ಹಾಜರಾಗಿದ್ದು ಎಲ್ಲರ ಗಮನ ಸೆಳೆಯಿತು. ಹಣ, ಅಧಿಕಾರದ ಹಿಂದೆ ದುಂಬಾಲು ಬೀಳುವ ರಾಜಕಾರಣಿಗಳೇ ಹೆಚ್ಚು. ಇಂಥವರ ಮಧ್ಯೆ ಅನಾರೋಗ್ಯವನ್ನೂ ಲೆಕ್ಕಿಸದೇ ಕರ್ತವ್ಯ ಪ್ರಜ್ಞೆ ತೋರಿದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಅವರಿಗೆ ಅಂದು ಇಡೀ ದೇಶವೇ ಸಲಾಂ ಎಂದಿತು.

ವಿಂಡೀಸ್-ಪಾಕ್ ಟ್ರೋಫಿ ಹಿಡಿದು ಒಂಟೆ ಮೇಲೆ ಫೋಸ್

ವಿಂಡೀಸ್-ಪಾಕ್ ಟ್ರೋಫಿ ಹಿಡಿದು ಒಂಟೆ ಮೇಲೆ ಫೋಸ್

ಪಾಕಿಸ್ತಾನಕ್ಕೆ ಕ್ರಿಕೆಟ್ ತಂಡಗಳೇ ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದ ಸಮಯವದು. ಅಂಥದ್ದರಲ್ಲೇ 15 ವರ್ಷಗಳ ನಂತರ ವೆಸ್ಟ್ ಇಂಡೀಸ್ ಮಹಿಳಾ ತಂಡವು ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಆಡಲು ತೆರಳಿತ್ತು. ಉಭಯ ತಂಡಗಳ ನಾಯಕಿಯರು ಟ್ರೋಫಿ ಹಿಡಿದು ಒಂಟೆ ಮೇಲೆ ಕುಳಿತ ಪೋಟೋ ಸಾಕಷ್ಟು ಗಮನ ಸೆಳೆದಿತ್ತು.

ಪ್ರೀತಿಯ ದೋಣಿಗೆ ತಾಯಿಯೇ ಸಾರಥಿ

ಪ್ರೀತಿಯ ದೋಣಿಗೆ ತಾಯಿಯೇ ಸಾರಥಿ

ಜಮ್ಮು-ಕಾಶ್ಮೀರದಲ್ಲಿ ದಟ್ಟ ಹಿಮ ಕವಿದಿದ್ದು, ಇದರ ಮಧ್ಯೆಯೂ ಮಂಜು ಸುರಿಯುತ್ತಿತ್ತು. ಈ ನಡುವೆ ಶ್ರೀನಗರದ ದಾಲ್ ಲೇಕ್ ಬಳಿ ಸುರಿಯುತ್ತಿದ್ದ ಮಂಜಿನಿಂದ ಮಕ್ಕಳನ್ನು ರಕ್ಷಿಸಲು ತಾಯಿ ದೋಣಿ ಚಾಲನೆ ಮಾಡಿದರು. ಒಂದೆಡೆ ತಾಯಿ ಬೋಟ್ ನಡೆಸುತ್ತಿದ್ದರೆ, ಇನ್ನೊಂದು ಬದಿಯಲ್ಲಿ ಮಕ್ಕಳು ಕೊಡೆ ಹಿಡಿದು ಕುಳಿತಿದ್ದರು.

ಒಂದು ಕುಟುಂಬ, ಒಂದು ಸರ್ಕಾರಿ ಉದ್ಯೋಗ

ಒಂದು ಕುಟುಂಬ, ಒಂದು ಸರ್ಕಾರಿ ಉದ್ಯೋಗ

ಪಶ್ಚಿಮ ಬಂಗಾಳದಲ್ಲಿ ಒಂದು ಕುಟುಂಬಕ್ಕೆ ಒಂದು ಸರ್ಕಾರಿ ಉದ್ಯೋಗ ನೀಡುವಂತೆ ಕೂಗು ಕೇಳಿ ಬಂದಿತ್ತು. ಕೋಲ್ಕತ್ತಾದಲ್ಲಿ ದಲಿತ ಹಾಗೂ ಅಲ್ಪಸಂಖ್ಯಾತರು ನೆರೆದಿದ್ದು, ಬೃಹತ್ ಪ್ರತಿಭಟನೆ ನಡೆಸಿದರು. ಕಳೆದ ವರ್ಷದ ಆರಂಭದಲ್ಲೇ ಶುರುವಾಗಿದ್ದ ಈ ಹೋರಾಟ ಪಶ್ಚಿಮ ಬಂಗಾಳವಷ್ಚೇ ಅಲ್ಲದೇ ದೇಶಾದ್ಯಂತ ಸದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ 2019ರ ಸಾಲಿನಲ್ಲಿ ನಡೆದ ಹೋರಾಟಗಳಲ್ಲಿ ಇದೂ ಕೂಡಾ ಪ್ರಾಮುಖ್ಯತೆ ಪಡೆದುಕೊಂಡಿದೆ.

ವಾರೇ ವ್ಹಾ, ಕಷ್ಟದ ಮಧ್ಯೆಯೂ ಕರ್ತವ್ಯ ನಿಷ್ಠೆ

ವಾರೇ ವ್ಹಾ, ಕಷ್ಟದ ಮಧ್ಯೆಯೂ ಕರ್ತವ್ಯ ನಿಷ್ಠೆ

ಪಶ್ಚಿಮ ಬಂಗಾಳದಲ್ಲಿ ವರ್ಷದ ಆರಂಭದಲ್ಲಿ ವರುಣದೇವನು ಅಬ್ಬರಿಸಿ ಬೊಬ್ಬಿರಿದನು. ರಾಜ್ಯಾದ್ಯಂತ ಸುರಿದ ವ್ಯಾಪಕ ಮಳೆಯಿಂದ ಕೋಲ್ಕತ್ತಾದಲ್ಲಿ ರಸ್ತೆಗಳೆಲ್ಲ ಜಲಾವೃತಗೊಂಡಿದ್ದವು. ಇದರ ಮಧ್ಯೆಯೂ ರಿಕ್ಷಾ ನಡೆಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ಪ್ರಯಾಣಿಕರನ್ನು ರಿಕ್ಷಾದಲ್ಲಿ ಕೂರಿಸಿಕೊಂಡು ತಾನು ನಡೆಯುತ್ತಾ ನೀರಿನಲ್ಲಿ ನಡೆದಿದ್ದು ಮನ ಮಿಡಿಯುವಂತಿತ್ತು.

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ದಿಗ್ವಿಜಯ

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ದಿಗ್ವಿಜಯ

ಇಂಗ್ಲೆಂಡ್ ವಿರುದ್ಧ ನಡೆದ ಕ್ರಿಕೆಟ್ ಸರಣಿಯಲ್ಲಿ ಭಾರತದ ಮಹಿಳಾ ತಂಡ ದಿಗ್ವಿಜಯ ಸಾಧಿಸಿತು. ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮಹಿಳೆಯರ ತಂಡವು ಗೆದ್ದು ಬೀಗಿತು. ನಂತರದಲ್ಲಿ ಟೀಮ್ ಇಂಡಿಯಾದ ಮಹಿಳಾ ಆಟಗಾರರು ಟ್ರೋಫಿಯೊಂದಿಗೆ ಕ್ಯಾಮರಾ ಮುಂದೆ ಹೀಗೆ ಫೋಸ್ ಕೊಟ್ಟರು.

ಚಂದ್ರಯಾನ-2 ವಿಫಲ, ಕಣ್ಣೀರು ಹಾಕಿದ ಶಿವನ್

ಚಂದ್ರಯಾನ-2 ವಿಫಲ, ಕಣ್ಣೀರು ಹಾಕಿದ ಶಿವನ್

ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಸ್ಥೆ ನಡೆಸಿದ ಚಂದ್ರಯಾನ-2 ಅಂತಿಮ ಕ್ಷಣದಲ್ಲಿ ಗುರಿ ಮುಟ್ಟುವಲ್ಲಿ ವಿಫಲವಾಯಿತು. ತಮ್ಮ ಕನಸು ಈಡೇರದ ಹಿನ್ನೆಲೆಯಲ್ಲಿ ಇಸ್ಕೋ ಅಧ್ಯಕ್ಷ ಕೆ.ಶಿವನ್ ಭಾವುಕರಾಗಿ ನಿಂತಿದ್ದರು. ಈ ವೇಳೆ ಬೆಂಗಳೂರು ಯಲಹಂಕದ ವಾಯುನೆಲೆಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೆ.ಶಿವನ್ ಅವರನ್ನು ತಬ್ಬಿಕೊಂಡು ಸಂತೈಸಿದ ಪರಿ. ಸಾಧಕರ ಸಾಧನೆಗೆ ಸ್ಪೂರ್ತಿ ನೀಡುವ ಬಗೆಯನ್ನು ಎತ್ತಿ ತೋರಿಸುವಂತಿತ್ತು.

ಪ್ರಧಾನಮಂತ್ರಿ ನರೇಂದ್ರ ಮೋದಿ ತಲೆ ಮೇಲೆ ಟೋಪಿ

ಪ್ರಧಾನಮಂತ್ರಿ ನರೇಂದ್ರ ಮೋದಿ ತಲೆ ಮೇಲೆ ಟೋಪಿ

2019ರಲ್ಲಿ ದೇಶದ ಲೋಕಸಭಾ ಚುನಾವಣೆ ನಡೆಯಿತು. ಬಿಹಾರದಲ್ಲಿ ಬಿಜೆಪಿ ಜೊತೆ ಮುನಿಸಿಕೊಂಡಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೆ ಕೇಸರಿ ಬಣ ಸೇರಿಕೊಂಡು ಕಹಳೆ ಊದಿದರು. ಸಿಎಂ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸ್ವತಃ ಪ್ರಧಾನಮಂತ್ರಿಯೇ ಪೇಟಾ ಧರಿಸುತ್ತಿದ್ದ ಸಂದರ್ಭದಲ್ಲಿ ಕ್ಲಿಕ್ಕಿಸಿದ ಪೋಟೋ ಆಕರ್ಷಣೀಯವಾಗಿದೆ,

ಇಂದಿರಾ ಗಾಂಧಿ ಗುಣವನ್ನೇ ತೋರುತ್ತೆ ಈ ಚಿತ್ರ

ಇಂದಿರಾ ಗಾಂಧಿ ಗುಣವನ್ನೇ ತೋರುತ್ತೆ ಈ ಚಿತ್ರ

ಒಂದು ಕಡೆ ಲೋಕಸಭಾ ಚುನಾವಣೆಗೆ ಬಿಜೆಪಿ ನಾಯಕರು ಅಬ್ಬರ ಪ್ರಚಾರ ನಡೆಸುತ್ತಿದ್ದರು. ಇನ್ನೊಂದೆಡೆ ಕಾಂಗ್ರೆಸ್ ನಾಯಕರು ಕೂಡಾ ಗೆಲುವಿಗೆ ತಂತ್ರ ರೂಪಿಸುತ್ತಿದ್ದರು. ಆದರೆ, ಈ ಪ್ರಚಾರದ ಭರಾಟೆ ಮಧ್ಯೆಯೂ ಸಾಕಷ್ಟು ಮನಸ್ಸಿಗೆ ಮುಟ್ಟಿದ್ದು ಮಾತ್ರ ಈ ಚಿತ್ರ. ಉತ್ತರ ಪ್ರದೇಶದ ಪ್ರಚಾರದ ವೇಳೆ ವೃದ್ಧೆಯೊಬ್ಬರನ್ನು ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಮಾತನಾಡಿಸಿದ ಪ್ರೀತಿಯ ಪರಿ ಥೇಟ್ ಅವರ ಅಜ್ಜಿ ಇಂದಿರಾ ಗಾಂಧಿ ಅವರನ್ನೇ ಹೋಲುವಂತಿತ್ತು.

ಮಂಜುಗಡ್ಡೆಯನ್ನೂ ಹೀಗೂ ಒಯ್ಯಬಹುದೇ?

ಮಂಜುಗಡ್ಡೆಯನ್ನೂ ಹೀಗೂ ಒಯ್ಯಬಹುದೇ?

ಈ ಬಾರಿ ಮಾರ್ಚ್ ಎಪ್ರಿಲ್ ತಿಂಗಳಿನಲ್ಲಿ ಬಿರು ಬಿಸಿಲು ಮೈ ಸುಡುವಂತಿತ್ತು. ಅದರಲ್ಲೂ ಮರಭೂಮಿ ರಾಜಸ್ಥಾನ ಎಂದರೆ ಕೇಳಬೇಕೆ. ಬಿಕನೇರ್ ಎಂಬ ಪ್ರದೇಶದಲ್ಲಿ ಬಿಸಿಲಿನ ಬೇಗೆ ನೀಗಿಸಿಕೊಳ್ಳಲು ವ್ಯಾಪಾರಿಯೊಬ್ಬರು ಮಂಜುಗಡ್ಡೆಯನ್ನೇ ತಮ್ಮ ಸ್ಕೂಟರ್ ನಲ್ಲಿಟ್ಟುಕೊಂಡು ಸಾಗಿದ ಚಿತ್ರವು ಬೇಸಿಗೆ ಬಗ್ಗೆ ಹೇಳುವಂತಿತ್ತು.

ಮತದಾನಕ್ಕಾಗಿ ದೋಣಿ ಪ್ರಯಾಣ

ಮತದಾನಕ್ಕಾಗಿ ದೋಣಿ ಪ್ರಯಾಣ

ದೇಶದಲ್ಲಿ ಈ ಬಾರಿ ಲೋಕಸಭಾ ಚುನಾವಣೆ ನಡೆಯಿತು. ಎಲ್ಲ ಅನುಕೂಲಗಳಿದ್ದರೂ ಜನರು ತಮ್ಮ ಹಕ್ಕು ಚಲಾಯಿಸಲು ಹಿಂದು-ಮುಂದು ನೋಡುತ್ತಾರೆ. ನಗರ ಪ್ರದೇಶದ ಜನರು ಮತ ಚಲಾವಣೆ ಎಂದರೆ ನಮಗೇಕೆ ಎನ್ನುವಂತಾ ಮನೋಭಾವನೆಯನ್ನು ಪ್ರದರ್ಶಿಸುತ್ತಿದ್ದಾರೆ. ಅಂಥದ್ರಲ್ಲಿ, ಬಿಹಾರದ ಧರ್ಬಂಗ್ ಜಿಲ್ಲೆಯಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗೆ ಸಾಗಿದರು. ಆದರೆ, ಮತದಾರರು ಹೊರಟಿದ್ದ ದೋಣಿಗೆ ದೋಣಿಯೇ ತುಂಬಿ ಹೋಗಿತ್ತು. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯವೇ ನಡೆದು ಹೋಗುತ್ತಿತ್ತು.

ಗುಹೆಯಲ್ಲಿ ಕುಳಿತು ಧ್ಯಾನ ಮಾಡಿದ ಮೋದಿ

ಗುಹೆಯಲ್ಲಿ ಕುಳಿತು ಧ್ಯಾನ ಮಾಡಿದ ಮೋದಿ

ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ದೇಶ ಸುತ್ತುವ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ದೇವರ ಮೊರೆ ಹೋದರು. ಜಮ್ಮು-ಕಾಶ್ಮೀರದಲ್ಲಿನ ಪವಿತ್ರ ದೇವಾಲಯಗಳನ್ನು ಸುತ್ತಿದ ಮೋದಿ, ಕೇದಾರನಾಥನ ದರ್ಶನ ಪಡೆದರು. ನಂತರದಲ್ಲಿ ಕೇದಾರನಾಥ ಗುಹೆಯಲ್ಲಿ ಮೋದಿ ಧ್ಯಾನಾಸಕ್ತರಾದರು. ಈ ಒಂದು ಫೋಟೋ ದೇಶಾದ್ಯಂತ ಸಾಕಷ್ಟು ಸುದ್ದಿ ಮಾಡಿತು. ಅಷ್ಟೇ ಅಲ್ಲದೇ ಮೋದಿ ಧ್ಯಾನ ಮಾಡಿದ ಗುಹೆಗೂ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಯಿತು.

2ನೇ ಬಾರಿ ಪ್ರಧಾನಮಂತ್ರಿಯಾಗಿ ಮೋದಿ ಪದಗ್ರಹಣ

2ನೇ ಬಾರಿ ಪ್ರಧಾನಮಂತ್ರಿಯಾಗಿ ಮೋದಿ ಪದಗ್ರಹಣ

ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ಎನ್ ಡಿಎ ಮೈತ್ರಿಕೂಟ. ಎರಡನೇ ಬಾರಿ ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಮಾಣವಚನ ಬೋಧಿಸಿದರು.

ಮಹಾತ್ಮರಿಗೆ ನಮೋ ಎಂದ ಪ್ರಧಾನಮಂತ್ರಿ

ಮಹಾತ್ಮರಿಗೆ ನಮೋ ಎಂದ ಪ್ರಧಾನಮಂತ್ರಿ

ಎರಡನೇ ಅವಧಿಗೆ ಭಾರತದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಆಯ್ಕೆಯಾದರು. ಈ ಹಿನ್ನೆಲೆ ದೆಹಲಿ ಪ್ರಧಾನಮಂತ್ರಿ ಕಚೇರಿ ದಕ್ಷಿಣ ಭಾಗದ ಕೊಠಡಿಯಲ್ಲಿರುವ ಮಹಾತ್ಮ ಗಾಂಧೀಜಿ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲ್ ಮೂರ್ತಿಗೆ ನಮಸ್ಕರಿಸಿದ ಕ್ಷಣ.

ಎರಡನೇ ಬಾರಿ ಪ್ರಧಾನಿ ಕುರ್ಚಿ ಏರಿದ ಮೋದಿ

ಎರಡನೇ ಬಾರಿ ಪ್ರಧಾನಿ ಕುರ್ಚಿ ಏರಿದ ಮೋದಿ

ಭಾರತದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಪೂರ್ಣ ಬಹುಮತದೊಂದಿಗೆ ಎರಡನೇ ಬಾರಿ ಗದ್ದುಗೆ ಹಿಡಿಯಿತು. ಪ್ರಧಾನಮಂತ್ರಿಯಾಗಿ ಎರಡನೇ ಬಾರಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಕ್ಷಣವಿದು.

ಅಬ್ಬಾ, ಅಂತೂ ಕುಡಿಯೋದಕ್ಕೆ ನೀರು ಸಿಕ್ಕಿತಲ್ಲ

ಅಬ್ಬಾ, ಅಂತೂ ಕುಡಿಯೋದಕ್ಕೆ ನೀರು ಸಿಕ್ಕಿತಲ್ಲ

ಈ ವರ್ಷ ಕೂಡಾ ಸೂರ್ಯನ ಕೋಪವೇನು ಕಡಿಮೆಯಿರಲಿಲ್ಲ. ಮೇ ತಿಂಗಳಿನಲ್ಲಿ ಸುಡುವ ಬಿಸಿಲಿನ ಬೇಗೆಯಿಂದ ಬಾಯಾರಿಕೆ ಆರಿಸಿಕೊಳ್ಳಲು ಕೋತಿಯೊಂದು ನಳಕ್ಕೆ ಬಾಯಿಟ್ಟು ನೀರು ಕುಡಿಯುತ್ತಿತ್ತು. ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳೂ ಕೂಡಾ ಬಿಸಿಲಿಗೆ ಬಳಲಿ ಬೆಂಡಾಗಿದ್ದವು ಎಂಬುದನ್ನು ಈ ಚಿತ್ರವೇ ಸಾಕ್ಷೀಕರಿಸುತ್ತದೆ.

ಪ್ರಾರ್ಥನೆಯಲ್ಲಿ ತಲ್ಲೀನರಾಗಿರುವ ಮುಸ್ಲಿಂ ಬಾಂಧವರು

ಪ್ರಾರ್ಥನೆಯಲ್ಲಿ ತಲ್ಲೀನರಾಗಿರುವ ಮುಸ್ಲಿಂ ಬಾಂಧವರು

ಈ ವರ್ಷ ಪವಿತ್ರ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ದೇಶದ ವಿವಿಧ ಭಾಗಗಳಲ್ಲಿ ನೆರೆದ ಮುಸ್ಲಿಂ ಬಾಂಧವರು ಅಲ್ಲಾಹ್ ನ ಸ್ಮರಿಸಿದರು. ಹೈದ್ರಾಬಾದ್ ನ ಮೆಕ್ಕಾ ಮಸೀದಿ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

ಬೆತ್ತಕ್ಕೂ ಬೆದರದ ಕಾಗೆ

ಬೆತ್ತಕ್ಕೂ ಬೆದರದ ಕಾಗೆ

ಧ್ವನಿಯಾದರೆ ಸಾಕು ಇರುವ ಸ್ಥಳವನ್ನೇ ಬಿಟ್ಟು ಹಾರಿ ಹೋಗುವುದು ಪ್ರಾಣಿಗಳ ಗುಣ. ಗಿಡ ಮರಗಳಲ್ಲಿ ಕುಳಿತುಕೊಳ್ಳುತ್ತಿದ್ದ ಕಾಗೆಗೆ ಅಂದ್ಯಾಕೋ ಮಹಾತ್ಮನ ಮೇಲೆ ಪ್ರೀತಿ ಹುಟ್ಟಿಕೊಂಡಿದ್ದೇನೋ ಗೊತ್ತಿಲ್ಲ. ಲಾಠಿ ಹಿಡಿದು ನಿಂತರೆ ಬೆದರುವ ಕಾಗೆ, ಕೋಲ್ಕತ್ತಾದಲ್ಲಿರುವ ಮಹಾತ್ಮ ಗಾಂಧೀಜಿ ಅವರ ಲಾಠಿ ಮೇಲೆಯೇ ವಾಸ್ತವ್ಯ ಹೂಡಿ ಬಿಟ್ಟಿತ್ತು. ಸುಮಾರು ಗಂಟೆಗಳ ಕಾಲ ಅಲ್ಲಿಯೇ ಕುಳಿತ ಕಾಗೆಯ ಚಿತ್ರ ನೋಡುವುದಕ್ಕೂ ಬಲು ಮಜುಬೂತಾಗಿದೆ.

ನೇಪಾಳದಲ್ಲಿ ಕೆಸರು ಎರಚುವುದೇ ಹಬ್ಬ

ನೇಪಾಳದಲ್ಲಿ ಕೆಸರು ಎರಚುವುದೇ ಹಬ್ಬ

ಭಾರತದಲ್ಲಿ ಭತ್ತ ನಾಟಿ ಮಾಡುವ ವೇಳೆಯಲ್ಲಿ ಜಾನಪದ ಪದಗಳನ್ನು ಹಾಡುತ್ತಾರೆ. ಆದರೆ, ನೇಪಾಳದಲ್ಲಿ ಭತ್ತ ನಾಟಿ ಮಾಡುವುದನ್ನ ಹಬ್ಬದ ರೀತಿಯಲ್ಲಿ ಆಚರಿಸಲಾಯಿತು. ಆ ಹಬ್ಬವು ಬಲು ವಿಶಿಷ್ಟ ಹಾಗೂ ವಿಶೇಷವಾಗಿರುತ್ತದೆ. ಅಂದು ಕೆಸರು ಗದ್ದೆಯಲ್ಲಿ ಯುವಕ ಯುವತಿಯರು ಪರಸ್ಪರ ಕೆಸರು ಎರಚಿಗೊಂಡು ಸಂಭ್ರಮಿಸಿದ್ದು ವಿಶೇಷವಾಗಿತ್ತು.

ಮುಸ್ಲಿಂ ಮಹಿಳೆಯರಿಗೆ ಧೈರ್ಯವಿತ್ತ ಸರ್ಕಾರ

ಮುಸ್ಲಿಂ ಮಹಿಳೆಯರಿಗೆ ಧೈರ್ಯವಿತ್ತ ಸರ್ಕಾರ

ಕೇಂದ್ರ ಸರ್ಕಾರ ಮಂಡಿಸಿದ ತ್ರಿವಳಿ ತಲಾಖ್ ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕಾರವಾಯಿತು. ಈ ಹಿನ್ನೆಲೆ ದೇಶಾದ್ಯಂತ ಮುಸ್ಲಿಂ ಮಹಿಳೆಯರು ಸಂಭ್ರಮ ಆಚರಿಸಿದರು. ಬಿಹಾರದ ಪಾಟ್ನಾದಲ್ಲಿ ಮುಸ್ಲಿಂ ಮಹಿಳೆಯರು ಪರಸ್ಪರ ಬಣ್ಣ ಎರಚಿಕೊಂಡು ಸಂತಸ ಹಂಚಿಕೊಂಡರು.

ಕೆಫೆ ಕಾಫಿ ಡೇ ಸಂಸ್ಥಾಪಕರ ಅಂತಿಮ ದರ್ಶನ

ಕೆಫೆ ಕಾಫಿ ಡೇ ಸಂಸ್ಥಾಪಕರ ಅಂತಿಮ ದರ್ಶನ

ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ದಾರ್ಥ್ ನಾಪತ್ತೆಯಾಗಿ ಎರಡು ದಿನಗಳ ನಂತರ ನೇತ್ರಾವತಿ ನದಿಯಲ್ಲಿ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿಕ್ಕಮಗಳೂರಿನಲ್ಲಿ ಮೃತರ ಅಂತಿಮ ದರ್ಶನ ಪಡೆದರು.

ಮನುಜರ ಬಗ್ಗೆ ಮರುಕ ತೋರದ ಮಳೆರಾಯ

ಮನುಜರ ಬಗ್ಗೆ ಮರುಕ ತೋರದ ಮಳೆರಾಯ

ಬಿಹಾರದಲ್ಲಿ ಈ ವರ್ಷ ಸುರಿದ ಧಾರಾಕಾರ ಮಳೆಗೆ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಪಾಟ್ನಾ ನಗರವು ಅಕ್ಷರಶಃ ಮುಳುಗಿ ಹೋಗಿದ್ದು, ಪ್ರಾಣ ಉಳಿಸಿಕೊಳ್ಳಲು ತನ್ನ ಪುಟ್ಟ ಮಗುವಿನೊಂದಿಗೆ ತಂದೆ ತಳ್ಳುವ ಗಾಡಿಯಲ್ಲಿ ಕುಳಿತ ದೃಶ್ಯ ಕಣ್ಣಿಗೆ ರಾಚುವಂತಿತ್ತು. ಇನ್ನೊಂದೆಡೆ ಜಲಾವೃತಗೊಂಡ ರಸ್ತೆಯಲ್ಲಿ ವೃದ್ಧನನ್ನು ಇಬ್ಬರು ಯುವಕರು ಎತ್ತಿಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು.

ಬಾಗ್ದಾದಿ ಬದುಕಿಗೆ ಇತಿಶ್ರೀ ಹಾಡಿದ ಅಮೆರಿಕ ಸೇನೆ

ಬಾಗ್ದಾದಿ ಬದುಕಿಗೆ ಇತಿಶ್ರೀ ಹಾಡಿದ ಅಮೆರಿಕ ಸೇನೆ

ಇಸ್ಲಾಮಿಕ್ ಸ್ಟೇಟ್ಸ್ ಮುಖ್ಯಸ್ಥ ಅಬು ಬಕ್ರ ಅಲ್ ಬಾಗ್ದಾದಿಯನ್ನು ಅಮೆರಿಕಾದ ಸೇನಾಪಡೆಗಳು ಹೊಡೆದುರುಳಿಸಿತು. ಈ ಬಗ್ಗೆ ಸ್ಪಷ್ಟನೆ ನೀಡುವಂತಾ ವಿಡಿಯೋ ಒಂದನ್ನು ಅಮೆರಿಕಾದ ರಕ್ಷಣಾ ಇಲಾಖೆ ಬಿಡುಗಡೆ ಮಾಡಿತು. ಅದರ ಒಂದು ಚಿತ್ರ ಇಲ್ಲಿದೆ.

182 ಅಡಿ ಎತ್ತರದ ಸರ್ದಾರ್ ಪಟೇಲರ ಪ್ರತಿಮೆ ಅನಾವರಣ

182 ಅಡಿ ಎತ್ತರದ ಸರ್ದಾರ್ ಪಟೇಲರ ಪ್ರತಿಮೆ ಅನಾವರಣ

144ನೇ ಜನ್ಮ ದಿನಾಚರಣೆ ಹಿನ್ನೆೆಯಲ್ಲಿ ಗುಜರಾತ್ ನರ್ಮದಾ ನದಿ ದಡದಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 182 ಅಡಿ ಎತ್ತರದ ಏಕತಾ ಪ್ರತಿಮೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು. ಬೃಹತ್ ಪ್ರತಿಮೆ ಎದುರು ಪ್ರಧಾನಮಂತ್ರಿ ಪುಷ್ಪಾರ್ಪಣೆ ಮಾಡುತ್ತಿದ್ದರೆ, ಪ್ರತಿಮೆ ಕಾಲಿನ ಬೆರಳಿಗಿಂತ ಚಿಕ್ಕವರಂತೆ ಕಾಣುತ್ತಿದ್ದರು.

ಬಿಜೆಪಿ ಸಖ್ಯ ತೊರೆದ ಶಿವಸೇನೆಗೆ ಅಧಿಕಾರದ ಗದ್ದುಗೆ

ಬಿಜೆಪಿ ಸಖ್ಯ ತೊರೆದ ಶಿವಸೇನೆಗೆ ಅಧಿಕಾರದ ಗದ್ದುಗೆ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಂತರದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ, 30 ವರ್ಷಗಳ ನಂತರ ಬಿಜೆಪಿ ಸಖ್ಯ ತೊರೆದ ಶಿವಸೇನೆ ಕಾಂಗ್ರೆಸ್ ಹಾಗೂ ಎನ್ ಸಿಪಿ ಜೊತೆಗೆ ಸರ್ಕಾರ ರಚನೆ ಮಾಡಿತು. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ವೈದ್ಯೆ ಮೇಲೆ ಎರಗಿದ ಪಶುಗಳ ವಿರುದ್ಧ ಧಿಕ್ಕಾರ

ವೈದ್ಯೆ ಮೇಲೆ ಎರಗಿದ ಪಶುಗಳ ವಿರುದ್ಧ ಧಿಕ್ಕಾರ

ಹೈದ್ರಾಬಾದ್ ನಲ್ಲಿ ಪಶುವೈದ್ಯೆ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿ ಸುಟ್ಟು ಹಾಕಿದ್ದರು. ಈ ಕೃತ್ಯವನ್ನು ವಿರೋಧಿಸಿ ದೆಹಲಿಯಲ್ಲಿ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಇತ್ತ ಹೈದ್ರಾಬಾದ್ ನಲ್ಲಿ ಪೊಲೀಸರ ವಿರುದ್ಧ ಬೀದಿಗಿಳಿದ ಜನರು ಆರೋಪಿಗಳನ್ನು ಬಂಧಿಸುವಂತೆ ಧಿಕ್ಕಾರ ಕೂಗಿದರು. ಆದರೆ, ಘಟನೆ ನಡೆದು ಒಂದು ವಾರದೊಳಗೆ ನಾಲ್ವರು ಆರೋಪಿಗಳು ಪೊಲೀಸ್ ಎನ್ ಕೌಂಟರ್ ನಲ್ಲಿ ಪ್ರಾಣ ಬಿಟ್ಟರು.

ಎನ್ಆರ್ ಸಿ ಹಾಗೂ ಸಿಎಎ ವಿರುದ್ಧ ಹೋರಾಟ

ಎನ್ಆರ್ ಸಿ ಹಾಗೂ ಸಿಎಎ ವಿರುದ್ಧ ಹೋರಾಟ

ರಾಷ್ಟ್ರಾದ್ಯಂತ ಈ ವರ್ಷಾಂತ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ರಾಷ್ಟ್ರೀಯ ನಾಗರಿಕ ಕಾಯ್ದೆ(ಎನ್ಆರ್ ಸಿ) ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ). ಕೇಂದ್ರ ಸರ್ಕಾರ ಜಾರಿಗೊಳಿಸಿದ ಈ ನಿರ್ಧಾರಗಳನ್ನು ವಾಪಸ್ ಪಡೆಯಬೇಕೆಂದು ದೇಶಾದ್ಯಂತ ಉಗ್ರ ಪ್ರತಿಭಟನೆಗಳು ನಡೆದವು. ಗುವಾಹಟಿಯಲ್ಲಿ ತಮ್ಮ ಇಳಿವಯಸ್ಸಿನಲ್ಲೂ ವೃದ್ಧರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಸಿಎಎ ಹಾಗೂ ಎನ್ಆರ್ ಸಿ ವಿರುದ್ಧ ರಸ್ತೆಗಿಳಿದಿ ಡಿಎಂಕೆ

ಸಿಎಎ ಹಾಗೂ ಎನ್ಆರ್ ಸಿ ವಿರುದ್ಧ ರಸ್ತೆಗಿಳಿದಿ ಡಿಎಂಕೆ

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ತಮಿಳುನಾಡಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಚೆನ್ನೈನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟ್ಯಾಲಿನ್ ನೇತೃತ್ವದಲ್ಲಿ ರ್ಯಾಲಿ ನಡೆಸಲಾಯಿತು. ಈ ವೇಳೆ ಸಾವಿರಾರು ಮಂದಿ ಪ್ರತಿಭಟನಾ ಮೆರವಣಿಗೆಯಲ್ಲಿ ನಡೆದು ಬಂದರು.

ಜೆಎಂಎಂ ಮೈತ್ರಿಗೆ ಜೈ, ಕೈಗೆ ಜಾರಿತು ಜಾರ್ಖಂಡ್

ಜೆಎಂಎಂ ಮೈತ್ರಿಗೆ ಜೈ, ಕೈಗೆ ಜಾರಿತು ಜಾರ್ಖಂಡ್

ಜಾರ್ಖಂಡ್ ನಲ್ಲಿ ಈ ವರ್ಷ ವಿಧಾನಸಭಾ ಚುನಾವಣೆ ನಡೆಯಿತು. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದ ಕನಸು ಕಂಡಿದ್ದ ಬಿಜೆಪಿಗೆ ತೀವ್ರ ಮುಖಭಂಗ ಅನುಭವಿಸಿತು. ಜಾರ್ಖಂಡ್ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ ಮೈತ್ರಿಗೆ ಪೂರ್ಣ ಬಹುಮತ ಲಭಿಸಿತು.

English summary
2019: Special Context And incident In Past Year. 2019:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X