ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುತ್ತಲೂ ಪೊಲೀಸರು, ಗಾಂಧಿ ಚಿತ್ರ ಕೈಯಲ್ಲಿ: ಯಾರೀ ಯುವ ನಾಯಕಿ?

|
Google Oneindia Kannada News

ಸುತ್ತಲೂ ಪೊಲೀಸರು, ಬಿಗುವಿನ ವಾತಾವರಣ, ಕೆಲವೇ ಹೊತ್ತಿಗೆ ಮುಂಚೆ ಅದೇ ಜಾಗದಿಂದ ನೂರಾರು ಜನರನ್ನು ಪೊಲೀಸರು ಹೊತ್ತೊಯ್ದಿದ್ದಾರೆ ಇಂಥಹಾ ಬಿಗುವಿನ ಪರಿಸ್ಥಿತಿಯಲ್ಲೂ ಯುವತಿಯೊಬ್ಬರು ಮಹಾತ್ಮಾ ಗಾಂಧಿ ಚಿತ್ರ ಹಿಡಿದು, ಖಚಿತ ಧ್ವನಿಯಲ್ಲಿ 'ನಾನು ಭಾರತೀಯಳು, ಭಾರತವನ್ನು ಧರ್ಮದ ಆಧಾರದಲ್ಲಿ ಒಡೆಯಲು ಬಿಡುವುದಿಲ್ಲ' ಎಂದು ಜೋರಾಗಿ ಕೂಗಿ ಹೇಳುತ್ತಾಳೆ...

ಈ ದೃಶ್ಯ ಯಾವುದೋ ಕ್ರಾಂತಿಕಾರಿ ಸಿನಿಮಾದಲ್ಲ, ಮೊನ್ನೆ ಬೆಂಗಳೂರಿನಲ್ಲಿಯೇ ನಡೆದಿದ್ದು, ಟೌನ್‌ ಹಾಲ್ ಬಳಿ ಪೊಲೀಸರ ವ್ಯಾನಿನ ಎದುರು ನಿಂತು ಏಕಾಂಗಿಯಾಗಿ ನಿಂತು ಯುವತಿಯೊಬ್ಬರು ಸಿಎಎ ವಿರುದ್ಧ ಖಚಿತ ಧ್ವನಿಯಲ್ಲಿ ವಿಚಾರ ಮಂಡಿಸಿದ್ದರು. ಆ ವಿಡಿಯೋ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿ ಹೋಯಿತು. ಆ ಯುವತಿ ಯಾರೆಂಬ ಹುಡುಕಾಟವೂ ಆರಂಭವಾಯಿತು. ಅದಕ್ಕೆ ಈಗ ಉತ್ತರ ಸಿಕ್ಕಿದೆ.

ಪೌರತ್ವ ಕಾಯ್ದೆ ಪ್ರಸ್ತಾಪಿಸಿರುವ 'ಧಾರ್ಮಿಕ ಕಿರುಕುಳ' ಎಂದರೇನು?ಪೌರತ್ವ ಕಾಯ್ದೆ ಪ್ರಸ್ತಾಪಿಸಿರುವ 'ಧಾರ್ಮಿಕ ಕಿರುಕುಳ' ಎಂದರೇನು?

ಕಪ್ಪು ಬಟ್ಟೆ ಧರಿಸಿ, ಗಾಂಧಿ ಚಿತ್ರ ಕೈಯಲ್ಲಿ ಹಿಡಿದು, ಸಿಎಎ ವಿಚಾರದಲ್ಲಿ ಬಿಜೆಪಿ ಬಣ್ಣ ಬಯಲು ಮಾಡಿದ ಯುವತಿಯ ಹೆಸರು ಭವ್ಯಾ ನರಸಿಂಹಮೂರ್ತಿ, ಇವರು ಬೆಂಗಳೂರಿನವರೇ, ವಿಡಿಯೋದಲ್ಲಿ ಇಂಗ್ಲಿಷ್‌ ನಲ್ಲಿ ಮಾತನಾಡುತ್ತಿರುವ ಭವ್ಯಾಗೆ ಕನ್ನಡ ನಿರರ್ಗಳ. ಭವ್ಯಾ ಕುಟುಂಬದ ಮೂರು ತಲೆಮಾರುಗಳಿಗೆ ಬೆಂಗಳೂರಿನ ನಂಟು ಇದೆ.

Social Activist Bhavya Narasimhamurthy Interview

ಮಹಾಲಕ್ಷ್ಮಿ ಲೇಔಟ್‌ ನ ಭವ್ಯಾ ಅವರು ಓದಿದ್ದು ಎಂ.ಎಸ್.ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಲ್ಲಿಂದ ಸೀದಾ ಅಮೆರಿಕೆಕ್ಕೆ ತೆರಳಿ ಕೊಲಂಬಿಯಾ ವಿವಿಯಲ್ಲಿ ಮಾಸ್ಟರ್ಸ್‌ ಇನ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಕಲಿತಿದ್ದಾರೆ. ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಬರಾಕ್ ಒಬಾಮಾ, ಡಾ.ಬಿ.ಆರ್.ಅಂಬೇಡ್ಕರ್ ಅವರು ಓದಿದ್ದು ಇದೇ ಕಾಲೇಜಿನಲ್ಲಿ.

ಸಿಎಎ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಯನ್ನು ದೇಶದಿಂದಲೇ ಹೊರಹಾಕಿದರು!ಸಿಎಎ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಯನ್ನು ದೇಶದಿಂದಲೇ ಹೊರಹಾಕಿದರು!

ಕಾಲೇಜು ಶಿಕ್ಷಣದ ನಂತರ ವಿಶ್ವಸಂಸ್ಥೆ (ಯುಎನ್‌) ನ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಭವ್ಯಾ, ಮಹಿಳೆ ಮತ್ತು ಮಕ್ಕಳ ಮೇಲೆ ಸೌದಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ದೌರ್ಜನ್ಯ, ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಇರುವ ಕಾನೂನುಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿ ವಿಶ್ವಸಂಸ್ಥೆಗೆ ವರದಿ ನೀಡಿದ ತಂಡದಲ್ಲಿ ಕಾರ್ಯನಿರ್ವಹಿಸಿದ್ದಾರೆ.

Social Activist Bhavya Narasimhamurthy Interview

ವಿಶ್ವಸಂಸ್ಥೆಯ ಇನ್ನೂ ಹಲವು ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಭವ್ಯಾ, ಈಜಿಪ್ಟ್‌, ಅರಬ್ ದೇಶಗಳು, ಆಫ್ರಿಕಾ ಇನ್ನೂ ಹಲವು ದೇಶಗಳಲ್ಲಿ ಲಿಂಗಾಧಾರಿತ ದೌರ್ಜನ್ಯ ಪ್ರಮಾಣ, ದೌರ್ಜನ್ಯ ತಡೆ ಕಾನೂನುಗಳು ಇನ್ನಿತರ ವಿಷಯಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿದ್ದಾರೆ. ನೇಪಾಳದಲ್ಲಿ ಅಪೌಷ್ಟಿಕತೆ ಬಗ್ಗೆಯೂ ಭವ್ಯಾ ಅಧ್ಯಯನ ನಡೆಸಿದ್ದಾರೆ.

NRC: ಭಾರತೀಯ ಪೌರರೆಂದು ಸಾಬೀತುಪಡಿಸಲು ಕೊಡಬೇಕಾದ ದಾಖಲೆಗಳ ಪಟ್ಟಿNRC: ಭಾರತೀಯ ಪೌರರೆಂದು ಸಾಬೀತುಪಡಿಸಲು ಕೊಡಬೇಕಾದ ದಾಖಲೆಗಳ ಪಟ್ಟಿ

2017 ರಲ್ಲಿ ಭಾರತಕ್ಕೆ ವಾಪಸ್ಸಾದ ಭವ್ಯಾ, ತಮ್ಮ ತುಡಿತವಾದ ಸಮಾಜ ಸೇವೆ, ಜಾಗೃತಿ ಮೂಡಿಸುವ ಕಾರ್ಯದಿಂದ ವಿಮುಖರಾಗಲಿಲ್ಲ. ಸಿದ್ದರಾಮಯ್ಯ ಸರ್ಕಾರ ಮಾಡಿದ 'ನವಕರ್ನಾಟ' ಕಾರ್ಯಕ್ರಮದ ಭಾಗವಾಗಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರವಾಸ ಮಾಡಿ ಜನರೊಂದಿಗೆ ಬೆರೆತು ಮಾಹಿತಿ ಸಂಗ್ರಹಿಸಿ ಸರ್ಕಾರದ ನೀತಿ ನಿರೂಪಣೆಗೆ ಸಹಾಯ ಮಾಡಿದರು. ನಂತರ ವಿಧಾನಸಭೆ ಚುನಾವಣೆಯಲ್ಲಿ ವೀರಪ್ಪ ಮೊಯ್ಲಿ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ನ ಚುನಾವಣೆ ಪ್ರಣಾಳಿಕೆ ತಯಾರಿಕೆಯಲ್ಲೂ ನೆರವು ನೀಡಿದ್ದರು.

Social Activist Bhavya Narasimhamurthy Interview

ಕೊಲಂಬಿಯಾ ವಿವಿ ಯಲ್ಲಿದ್ದಾಗಲೇ, ಶಶಿ ತರೂರ್, ರಘುರಾಂ ರಾಜನ್ ಸೇರಿದಂತೆ ಇನ್ನೂ ಹಲವು ರಾಷ್ಟ್ರ, ವಿಶ್ವ ನಾಯಕರನ್ನು ಭೇಟಿ ಆಗಿ ಸಂವಾದ ನಡೆಸಿರುವ ಭವ್ಯಾ, ರಾಜಕೀಯದ ಮೂಲಕ ಬದಲಾವಣೆಯ ಕನಸು ಹೊತ್ತು, ಕಳೆದ ನವೆಂಬರ್‌ ನಲ್ಲಿ ಕಾಂಗ್ರೆಸ್ ಸೇರಿದರು. ಕೂಡಲೇ ಅವರಿಗೆ 'ಪ್ರಿಯದರ್ಶಿನಿ' ಘಟಕದ ರಾಜ್ಯ ಉಸ್ತುವಾರಿಯನ್ನೂ ಪಕ್ಷ ವಹಿಸಿತು.

ರಾಜ್ಯದಲ್ಲಿ ಈಗಾಗಲೇ ಶುರುವಾಗಿದೆ 'ಅಕ್ರಮ ವಲಸಿಗರ' ಪತ್ತೆ ಕಾರ್ಯರಾಜ್ಯದಲ್ಲಿ ಈಗಾಗಲೇ ಶುರುವಾಗಿದೆ 'ಅಕ್ರಮ ವಲಸಿಗರ' ಪತ್ತೆ ಕಾರ್ಯ

'ಒನ್‌ಇಂಡಿಯಾ ಕನ್ನಡ' ಭವ್ಯಾರನ್ನು ಮಾತನಾಡಿಸಿದಾಗ, ಪ್ರತಿಭಟನೆಯ ದಿನದ ಆವೇಶ ಭರಿತ ಭಾಷಣದ ಬಗ್ಗೆ ನಗುತ್ತಲೇ ಮಾತಿಗಿಳಿದರು. 'ಅಂದು ಮನೆಯಲ್ಲಿ ಕೂತು ಟಿವಿಯಲ್ಲಿ ಪ್ರತಿಭಟನೆಯ ವರದಿಗಳನ್ನು ನೋಡುತ್ತಿದ್ದೆ. ಪ್ರತಿಭಟನೆಗೆ ಹೋಗಬೇಕೋ ಬೇಡವೋ ಎಂಬ ಗೊಂದಲವೂ ನನ್ನಲ್ಲಿತ್ತು, ಆದರೆ ಯಾವಾಗ ರಾಮಚಂದ್ರ ಗುಹಾ ಅವರನ್ನು ಎಳೆದಾಡಿ ವಶಕ್ಕೆ ಪಡೆಯಲಾಯಿತೋ ಆಗ ನಿಶ್ಚಯಿಸಿದೆ ಪ್ರತಿಭಟನೆಗೆ ಹೋಗಲೇ ಬೇಕೆಂದು', ಪ್ರತಿಭಟನೆಗೆ ಹೋಗುವ ಪ್ರೇರಕವಾದ ಕಾರಣ ನೀಡಿದರು ಭವ್ಯಾ.

Social Activist Bhavya Narasimhamurthy Interview

'ಟೌನ್‌ ಹಾಲ್‌ಗೆ ಬಂದಾಗ ಇಲ್ಲಿ ಬರೀ ಪೊಲೀಸರೇ ತುಂಬಿದ್ದರು. ಪ್ರತಿಭಟನಾಕಾರನ್ನು ಬಂಧಿಸಿ ಕರೆದೊಯ್ಯಲಾಗಿತ್ತು. ಯಾರನ್ನೂ ಒಳಗೆ ಬಿಡುತ್ತಿರಲಿಲ್ಲ, ನಾನು ಅಳುಕಿನಿಂದಲೇ ಬಂದೆ. ನನ್ನನ್ನು ನೋಡಿ ನಾನು ಮಾಧ್ಯಮದವಳೆಂದುಕೊಂಡೋ ಏನೋ ಪೊಲೀಸರು ಒಳಗೆ ಬಿಟ್ಟರು. ಅಲ್ಲಿಯೇ ಇದ್ದ ಗಾಂಧಿ ಅವರ ಚಿತ್ರವಿದ್ದ ಭಿತ್ತಿ ಪತ್ರವನ್ನು ಕೈಗೆತ್ತಿಕೊಂಡು ಏನು ಮಾಡಬೇಕೆಂದು ತೋಚದೆ ಯೋಚನೆ ಮಾಡುತ್ತಿದ್ದೆ' ಎಂದು ಪ್ರತಿಭಟನೆಯ ದಿನದ ತಮ್ಮ ಗೊಂದಲವನ್ನು ವಿವರಿಸುತ್ತಾ ಹೋದರು.

'ಅಷ್ಟರಲ್ಲಿ ಕ್ಯಾಮೆರಾ ಹಿಡಿದು ನಿಂತಿದ್ದ ಕೆಲವು ಮಾಧ್ಯಮದವರು ''ಏನಾದರೂ ಮಾತನಾಡಿ ಮೇಡಂ'' ಎಂದರು, ಅಷ್ಟೆ ನನ್ನೊಳಗೆ ಅಡಗಿದ್ದ ಸಿಟ್ಟನ್ನು, ಸಿಎಎ ಬಗ್ಗೆ ತಿಳಿದುಕೊಂಡಿದ್ದ ಮಾಹಿತಿಯನ್ನು ಒಟ್ಟು ಮಾಡಿ ಮಾತನಾಡಲು ಪ್ರಾರಂಭಿಸಿದೆ, ಅದು ಹೇಗೋ ವೈರಲ್ ಆಗಿದೆ. ಸಾಕಷ್ಟು ಜನರಿಗೆ ತಲುಪಿದೆ, ನನ್ನಿಂದ ಕೆಲವು ಜನರಿಗಾದರೂ ಬಿಜೆಪಿಯ ಒಡೆದು ಆಳುವ ಕುತಂತ್ರ ಅರ್ಥವಾಗಿದ್ದರೆ ಧನ್ಯ' ಎಂದು ಮುಗುಳುನಕ್ಕರು ಭವ್ಯಾ.

Social Activist Bhavya Narasimhamurthy Interview

ರಾಜಕೀಯವನ್ನು ಬಳಸಿಕೊಂಡು ಸೇವೆ ಮಾಡಬೇಕೆಂಬ ಆಸೆ ಭವ್ಯಾರಿಗಿದೆ. ಕಾಂಗ್ರೆಸ್‌ ಸೇರಿ ವರ್ಷವೇ ಆಗಿದೆ. ಕಾಂಗ್ರೆಸ್ ರಾಜಕಾರಣದ ಬಗ್ಗೆ ಮಾತನಾಡಲು 'ಪಕ್ಷದಲ್ಲಿ ನಾನಿನ್ನೂ ಸಣ್ಣವಳು' ಎಂದು ಬುದ್ಧಿವಂತಿಕೆ ಉತ್ತರ ನೀಡುವ ಭವ್ಯಾ, 'ಅದನ್ನೆಲ್ಲಾ ದೊಡ್ಡವರು ನೋಡಿಕೊಳ್ಳುತ್ತಾರೆ, ನಮ್ಮ ಕೆಲವ ನೆಲಮಟ್ಟದಲ್ಲಿ ದುಡಿಯುವುದು' ಎಂದು ಪಕ್ಕಾ ಕಾರ್ಯಕರ್ತೆಯಂತೆ ಮಾತನಾಡುತ್ತಾರೆ.

Social Activist Bhavya Narasimhamurthy Interview

ರಾಜಕೀಯ ಚರ್ಚೆಗೆ ಎಳೆದರೆ ಕೊನೆಗೆ ಭವ್ಯಾ ಮಾತು ಬಡವರು, ಮಹಿಳೆಯರ ಕಡೆಗೆ ತಿರುಗುತ್ತದೆ. ಖಚಿತ ವಿಚಾರಗಳನ್ನು ಹೊಂದಿರುವ, ನಗುತ್ತಲೇ ಕಠಿಣ ಮಾತುಗಳನ್ನು ಎದುರಿಗಿಡುವ, ವಿಶ್ವ ರಾಜಕೀಯವನ್ನು ಅರಿತಿರುವ ಭವ್ಯಾ, ಭವಿಷ್ಯದ ನಾಯಕಿಯಾಗುವ ಗುಣಗಳನ್ನು ಹೊಂದಿದ್ದಾರೆ.

English summary
Social activist, Congress young leader Bhavya Narasimhamurthy Interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X