ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ವಿಕೃತಿಗೆ ಬಲಿಪಶುಗಳಾದ ಸಿರಿಧಾನ್ಯ ಮತ್ತು ಸಿರಿಗನ್ನಡ

By ಗುರು ಕುಲಕರ್ಣಿ
|
Google Oneindia Kannada News

ವೈವಿಧ್ಯತೆಯು ಸಹಜ ಪ್ರಕೃತಿ, ಒತ್ತಾಯದಿಂದ ಏಕರೂಪತೆ ತರಲೆತ್ನಿಸುವುದು ವಿಕೃತಿ. ಕೆಲ ದಶಕಗಳಿಂದ ಏಕರೂಪತೆ ತರುವ ನಮ್ಮ ವಿಕೃತಿಗೆ ಬಲಿಪಶುಗಳಾದದ್ದು ಸಿರಿಗನ್ನಡ ಮತ್ತು ಸಿರಿಧಾನ್ಯಗಳು. ಗಮನಿಸಿ ನೋಡಿದರೆ ಸಿರಿಧಾನ್ಯ ಮತ್ತು ಸಿರಿಗನ್ನಡದ ಪರಿಸ್ಥಿತಿ ನಡುವೆ ಅದೆಷ್ಟು ಸಾಮ್ಯತೆ ಇವೆ ಎಂದು ಅಚ್ಚರಿಯಾಗುತ್ತದೆ.

ಸಿರಿಧಾನ್ಯ ಮತ್ತು ಸಿರಿಗನ್ನಡದ ನಡುವಿರುವ ಸಮಾನಾಂಶಗಳ ಬಗೆಗೆ ಟಿಪ್ಪಣಿ ಮಾಡುವುದು ಈ ಪುಟ್ಟ ಬರಹದ ಉದ್ದೇಶ. ಈ ಬರಹದಲ್ಲಿ ಸಿರಿಗನ್ನಡಕ್ಕೆ ಅನ್ವಯವಾಗುವುದು ಹೆಚ್ಚುಕಡಿಮೆ ಬೇರೆಲ್ಲಾ ಭಾರತೀಯ ಭಾಷೆಗಳಿಗೂ ಅನ್ವಯವಾಗುತ್ತದೆ.

1. ಸಿರಿಧಾನ್ಯ ಮತ್ತು ಸಿರಿಗನ್ನಡ ಎರಡನ್ನೂ ಅರಗಿಸಿಕೊಳ್ಳುವುದು ಸುಲಭ

ಕನ್ನಡ ಉಳಿಸಲು ಪಾಶ್ಚಾತ್ಯ ಶಿಕ್ಷಣದ ಗುಂಗಿನಿಂದ ಹೊರಬನ್ನಿ: ಕಂಬಾರ ಕನ್ನಡ ಉಳಿಸಲು ಪಾಶ್ಚಾತ್ಯ ಶಿಕ್ಷಣದ ಗುಂಗಿನಿಂದ ಹೊರಬನ್ನಿ: ಕಂಬಾರ

ಸಿರಿಧಾನ್ಯಗಳು ತಮ್ಮಲ್ಲಿರುವ ಪೋಷಕಾಂಶಗಳ ಹದವಾದ ಸಂಯೋಜನೆಯಿಂದ ನಮ್ಮ ಪಚನಾಂಗಗಳಲ್ಲಿ ಸುಲಭವಾಗಿ ಅರಗುತ್ತವೆ.

Similarity between Kannada and Millets

ಸಿರಿಗನ್ನಡ ನಮ್ಮ ತಾಯಿನುಡಿಯಾಗಿರುವುದರಿಂದ ಮತ್ತು ಸುಲಿದ ಬಾಳೆಯಹಣ್ಣಿನಂದದಿ ಸರಳವಾಗಿರುವುದರಿಂದ ಅದು ನಮಗೆ ಅರಗಿಸಿಕೊಳ್ಳಲು ಸುಲಭ.

2. ಸಿರಿಧಾನ್ಯ ಮತ್ತು ಸಿರಿಗನ್ನಡ ಎರಡರ ಬಗೆಗೂ ಸರಕಾರಗಳಿಗೆ ಅಸಡ್ಡೆ

ಸ್ವಾತಂತ್ರ್ಯಾನಂತರದ ಬಹುತೇಕ ಸರಕಾರಗಳು ಸಿರಿಧಾನ್ಯಗಳ ಮತ್ತು ಸಿರಿಗನ್ನಡದ ಮಹತ್ವ ಅರಿಯದೇ ಹೋದವು. ದೇಶದೆಲ್ಲೆಡೆ ಉಪಯೋಗಿಸುತ್ತಿದ್ದ ಹಲವಾರು ಸಿರಿಧಾನ್ಯಗಳ ಬದಲು ಉತ್ತರದಲ್ಲಿ ಗೋದಿ, ದಕ್ಷಿಣದಲ್ಲಿ ಅಕ್ಕಿ ಎಂಬ ಸರಳೀಕೃತ ಮೂರ್ಖ ನಂಬಿಕೆಯಿಂದ ಸರಕಾರಗಳು ಅವೆರಡೇ ಕಾಳುಗಳಿಗೆ ಪ್ರಾಧಾನ್ಯತೆ ಕೊಟ್ಟು ಸಿರಿಧಾನ್ಯಗಳ ಅಸಡ್ಡೆ ಮಾಡಿವೆ. 'ಹಸಿರುಕ್ರಾಂತಿ' ಯೋಜನೆಯಡಿಯಲ್ಲಿ ಅವೆರಡೇ ಧಾನ್ಯಗಳ ತಳಿ ಅಭಿವೃದ್ಧಿಗೆ ಹೆಚ್ಚಿನ ಗಮನ, ಬೆಂಬಲ ಬೆಲೆ ಘೋಷಿಸಿದ್ದು ಮೊದಲು ಅವೆರಡೇ ಬೆಳೆಗಳಿಗೆ. ಸರಕಾರದ ಆಹಾರ ನಿಗಮ ಕೊಂಡುಕೊಳ್ಳುವುದು ಅವೆರಡು ಧಾನ್ಯಗಳನ್ನು ಮಾತ್ರ. ಪಡಿತರ ವ್ಯವಸ್ಥೆಯಲ್ಲಿ ಅವೆರಡಕ್ಕೆ ಅಗ್ರಸ್ಥಾನ, ಮಕ್ಕಳ ಬಿಸಿಯೂಟದ ತಟ್ಟೆಯಲ್ಲಿ ಬಹುಭಾಗ ಆಕ್ರಮಿಸಿಕೊಂಡದ್ದು ಅವೆರಡೇ.

ಅದರಂತೆ ಸಿರಿಗನ್ನಡದ ಬಗ್ಗೆಯೂ ಸರಕಾರದ್ದು ಅಸಡ್ಡೆಯ ನಡೆ. ಹತ್ತು ಹಲವು ನುಡಿಗಳ ನಾಡಾದ ನಮ್ಮ ಭಾರತ ದೇಶದ ಕೇಂದ್ರ ಸರಕಾರದ ಆಡಳಿತ ಭಾಷೆಗಳು ಎರಡೇ ಎರಡು - ಪೂಜಿ ಪೂಣಾಂಕ ಪೂಜಿ ದಶಾಂಕ ಪ್ರತಿಶತ ಜನರ ತಾಯಿನುಡಿಯಾದ ಇಂಗ್ಲೀಷು ಮತ್ತು ಶೇಕಡಾ ಅರವತ್ತಕ್ಕಿಂತ ಹೆಚ್ಚು ಜನರ ತಾಯಿನುಡಿಯಲ್ಲದ ಹಿಂದಿ. ಅಂದಹಾಗೆ ನಿಮಗೆ ಗೊತ್ತಿರಬೇಕಲ್ಲ - ಶೇಕಡಾ ನಲವತ್ತು ಭಾರತೀಯರು ಹಿಂದಿ ಭಾಷಿಕರು ಎನ್ನುವುದು ಕೂಡ ಮೋಸದ ಲೆಕ್ಕ - ಅದರಲ್ಲಿ ರಾಜಸ್ಥಾನಿ, ಭೋಜಪುರಿ, ಮೈಥಿಲಿ ಇತ್ಯಾದಿ ತಾಯ್ನುಡಿಯವರೂ ಸೇರಿದ್ದಾರೆ. (ಭತ್ತದ) ಅಕ್ಕಿಯ ಲೆಕ್ಕದಲ್ಲಿ ನವಣಕ್ಕಿ, ಸಾವಕ್ಕಿಗಳನ್ನು ಹಿಡಿದರೆ ಹ್ಯಾಗೆ ಮೋಸವೋ ಹಾಗೆ.

84ನೇ ಕನ್ನಡ ಸಾಹಿತ್ಯ ಸಮ್ಮೇಳನ : ವಿಶೇಷ ಪ್ರವಾಸಿ ಪ್ಯಾಕೇಜ್ ಘೋಷಣೆ 84ನೇ ಕನ್ನಡ ಸಾಹಿತ್ಯ ಸಮ್ಮೇಳನ : ವಿಶೇಷ ಪ್ರವಾಸಿ ಪ್ಯಾಕೇಜ್ ಘೋಷಣೆ

ಹೀಗಾಗಿ ಭಾರತ ಸರಕಾರದ ಸ್ವಾಮ್ಯದ ಎಲ್ಲ ಸಂಸ್ಥೆಗಳು - ಬಾನಯಾನ, ರೈಲು, ಬಾನುಲಿ, ದೂರದರ್ಶನ, ಅಂಚೆಕಚೇರಿ, ಬ್ಯಾಂಕು, ಕೊನೆಗೆ ರೈತರು ತಮ್ಮ ಫಸಲನ್ನು ಕಾಯದಿಡಲು ಬಳಸುವ ಉಗ್ರಾಣ ಕೂಡ - ಸಿರಿಗನ್ನಡದಲ್ಲಿ ಸೇವೆ ಕೊಡಲು ಅಸಡ್ಡೆ ತೋರಿಸುತ್ತವೆ. ಹಾಗೆಯೇ ಈ ಸಂಸ್ಥೆಗಳಲ್ಲಿ ನೌಕರಿಗಳಿಗೆ -ಕೆಲಸದ ಜಾಗ ಕರ್ನಾಟಕದಲ್ಲಿದ್ದರೂ - ಸಿರಿಗನ್ನಡ ತಾಯಿನುಡಿಯವರೂ ತಮ್ಮದಲ್ಲದ ನುಡಿಯಲ್ಲಿ ಪ್ರಾವಿಣ್ಯ ಸಿದ್ಧಪಡಿಸಿ ತೋರಿಸುವ ಕರ್ಮ.

3. ಸಿರಿಧಾನ್ಯ ಮತ್ತು ಸಿರಿಗನ್ನಡ ಎರಡರ ಹಿನ್ನಡೆಗೆ ಜನಸಾಮಾನ್ಯರೂ ಕಾರಣ

ಅನಿಷ್ಟಕ್ಕೆಲ್ಲ ಶನೀಶ್ವರ ಕಾರಣ ಎನ್ನುವಂತೆ ಎಲ್ಲಕ್ಕೂ ಸರಕಾರವನ್ನೇ ದೂರದೇ ನಾವು-ನೀವು ಕೂಡ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಬೆಳ್ಳಗಿನ ಮೈದಾದ ಚಪಾತಿ, ಬಿಳೀ ಅಕ್ಕಿಯ ಅನ್ನವೇ ಶ್ರೇಷ್ಠ ಎಂದು ನಂಬಿದ, ಹಿಂದಿ ರಾಷ್ಟ್ರಭಾಷೆ ಎಂದು ತಲೆಮೇಲೆ ಕೂರಿಸಿಕೊಳ್ಳುವ ಅರೆ-ಶಿಕ್ಷಿತ ಜನಸಾಮಾನ್ಯರು ನಮ್ಮಲ್ಲಿರಲಿಲ್ಲವೇ?

Similarity between Kannada and Millets

ಇಂದೂ ಕೂಡ ಕೆಲವರಾದರೂ ಪಿಜ್ಜಾ-ಬರ್ಗರ್-ನ್ಯೂಡಲ್ ತಿಂದು ಇಂಗ್ಲೀಷು ಹಾಡು ಗುನುಗುವುದೇ ನವನಾಗರಿಕತೆಯ ಲಕ್ಷಣ ಎಂದು ತಿಳಿಯುವ ಯುವಕರು, ನಾನ್-ತಂದೂರಿ ರೊಟ್ಟಿ ತಿಂದು ಹಳೇ ಬಾಲಿವುಡ್ ಹಾಡು ಹಾಡುವುದೇ ಭಾರತೀಯ ಸಂಸ್ಕೃತಿ ಎಂದು ಬೀಗುವ ಮುದಿ-ಮಧ್ಯ ವಯಸ್ಕ ಜನಸಾಮಾನ್ಯರು ಇದ್ದಾರೆ.
ನಮ್ಮಲ್ಲಿರುವ ಈ ಮೂಢನಂಬಿಕೆಗಳನ್ನು ತೊಲಗಿಸಿಕೊಳ್ಳದಿದ್ದರೆ ಸಿರಿಧಾನ್ಯ-ಸಿರಿಗನ್ನಡಗಳ ಹಿನ್ನಡೆಗೆ ಕಾರಣರಾದ ಪಾಪ ನಮಗೂ ಬರುತ್ತದೆ!

4. ಸಿರಿಧಾನ್ಯ ಮತ್ತು ಸಿರಿಗನ್ನಡ ಎರಡರ ವಿಷಯದಲ್ಲಿ ಪೂರ್ಣ ನಿರಾಶರಾಗಬೇಕಿಲ್ಲ

'ಈಗ ಜ್ವಾಳದ ರೊಟ್ಟಿ ಬಡಿಯುವ ಗಟ್ಟಿ ಹೆಂಗಸರು ಯಾರೂ ಇಲ್ಲ' ಎಂದೋ, 'ಮುದ್ದೆ ನುಂಗಲು ಈಗ ಯಾರಿಗೂ ಬರೋದಿಲ್ಲ' ಎಂದೋ ಸಿರಿಧಾನ್ಯಗಳ ಬಗ್ಗೆ, 'ಈಗಿನ ಮಕ್ಕಳು ಸಿಬಿಎಸ್ಸಿ, ಐಸಿಎಸ್ಸಿ ಕಲಿಯೋದರಿಂದ ಸಿರಿಗನ್ನಡ ಬಳಸೋರು ಯಾರೂ ಇಲ್ಲ' ಎನ್ನುವ 'ಇಲ್ಲಪ್ಪ'ಗಳು ನಿಮಗೆ ಅಲ್ಲಿಲ್ಲಿ ಸಿಗುತ್ತಾರೆ. ಅವರಿಗೆ ಹೇಳಬೇಕಾದುದು ಇಷ್ಟೇ:
ಎಷ್ಟೇ ಅವಜ್ಞಗೆ ಒಳಗಾದರೂ ಇಂದಿಗೂ ಸಿರಿಧಾನ್ಯಗಳು ನಮ್ಮ ದೇಶದ ಬಹಷ್ಟು ಜನರ ಹೊಟ್ಟೆ ತುಂಬಿಸುತ್ತಿವೆ. ವಿಶ್ವದಲ್ಲಿ ಅತೀ ಹೆಚ್ಚು ಸಿರಿಧಾನ್ಯ ಬೆಳೆಯುವುದು ನಮ್ಮ ದೇಶವೇ -ಜಗತ್ತಿನ ಒಟ್ಟು ಸಿರಿಧಾನ್ಯ ಫಸಲಿನಲ್ಲಿ ನಮ್ಮದು ಶೇಕಡಾ 36% ಪಾಲು.

ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ

ಕರ್ನಾಟಕದಲ್ಲಿ ಶೇಕಡಾ 60% ಮಕ್ಕಳು ಕಲಿಯುವುದು ಕನ್ನಡ ಮಾಧ್ಯಮದಲ್ಲಿಯೇ (2018ರಲ್ಲಿ 1-10ನೇ ತರಗತಿಯಲ್ಲಿರುವ 1 ಕೋಟಿ ಮಕ್ಕಳಲ್ಲಿ 60 ಲಕ್ಷ ಕನ್ನಡ ಮಾಧ್ಯಮದವರು). ಉಳಿದ ಭಾಷಾಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳೂ ಭಾಷೆಯಾಗಿ ಬಹುತೇಕ ಕನ್ನಡ ಕಲಿಯುತ್ತಿದ್ದಾರೆ. ಹೀಗಾಗಿ 'ಸಿರಿಗನ್ನಡ ಉಪಯೋಗಿಸುವವರು ಇಲ್ಲ' ಎನ್ನುವ ಪರಿಸ್ಥಿತಿ ಇಲ್ಲ, ಇರೋದಿಲ್ಲ.

ಅದರ ಜೊತೆಗೆ, ಸಿರಿಗನ್ನಡಕ್ಕೂ ಸಿರಿಧಾನ್ಯಗಳಿಗೂ ಒಳ್ಳೆದಿನಗಳು ಬರಲಿವೆ ಎನ್ನಲು ಹಲವಾರು ಕಾರಣಗಳಿವೆ, ಮುಖ್ಯವಾಗಿ:

ಕಡಿಮೆ ನೀರು, ಕೀಟನಾಶಕ ಔಷಧಿ, ಗೊಬ್ಬರ ಬಯಸುವ ಸಿರಿಧಾನ್ಯಗಳು ಅಕ್ಷರಶಃ ವಿಷವರ್ತುಲದಲ್ಲಿರುವ ಕೃಷಿರಂಗಕ್ಕೆ ದೇವರು ಕೊಟ್ಟ ವರ ಎಂದು ನಿಧಾನವಾಗಿಯಾದರೂ ಜನರಿಗೆ ಅರ್ಥವಾಗತಾ ಇದೆ. ಹಾಗೆಯೇ ಬೊಜ್ಜು-ಸಕ್ಕರೆ ಕಾಯಿಲೆಯಂತ ಸಮಸ್ಯೆಗಳಿಗೆ ಸಿರಿಧಾನ್ಯ ಸರಳ ಉಪಾಯ ಎಂದು ಅರಿವಾಗತಾ ಇದೆ. ಪಡಿತರದಲ್ಲಿ, ಬಿಸಿಯೂಟದಲ್ಲಿ ಸಿರಿಧಾನ್ಯಗಳನ್ನು ಒದಗಿಸುವ ಪ್ರಯತ್ನ ನಡೀತಾ ಇದೆ.

ಬಾನುಲಿ, ದೂರದರ್ಶನ, ಬಾನಯಾನ, ಬ್ಯಾಂಕು ಇತ್ಯಾದಿಗಳ ಖಾಸಗೀಕರಣವಾಗಿ, ಆ ಖಾಸಗಿ ಕಂಪನಿಗಳು ಗ್ರಾಹಕರ ಅನುಕೂಲಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತ ಸಿರಿಗನ್ನಡದಲ್ಲಿ ಸೇವೆಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಕನ್ನಡಿಗರೂ ಕೂಡ ಪಾಲಿಗೆ ಬಂದದ್ದು ಪಂಚಾಮೃತ ಎಂದು ಕೊಳ್ಳದೇ, ನುಡಿಸಮಾನತೆಯ ಹಕ್ಕು ಮಂಡಿಸುತ್ತ, #ServeInMyLanguage ಎಂದು ಕೇಳುತ್ತಿದ್ದಾರೆ. ತಾಂತ್ರಿಕತೆ ಮುಂದುವರೆದಂತೆಲ್ಲ ಮೋಬೈಲಿನಲ್ಲೂ, ಅಂತರ್ಜಾಲದಲ್ಲಿಯೂ ಸಿರಿಗನ್ನಡ ತನ್ನ ಗುರುತು ಮೂಡಿಸತಾ ಇದೆ.

5. ಸಿರಿಧಾನ್ಯ ಮತ್ತು ಸಿರಿಗನ್ನಡ ಎರಡನ್ನೂ ಉಳಿಸಿ ಬೆಳಿಸಿಕೊಳ್ಳಲು ನಾವು ಮಾಡಬೇಕಾದದ್ದು ಬಹಳ ಸುಲಭದ ಕೆಲಸ.

ನಾವು ಸಿರಿಗನ್ನಡ-ಸಿರಿಧಾನ್ಯ ಬಳಸತಾ ಇರೋದೆ ಅವುಗಳನ್ನು ಉಳಿಸಿ-ಬೆಳಸಲು ಮಾಡಬೇಕಾದ ಕೆಲಸ.

English summary
Similarity between Kannada language and Millets. Both are neglected by government and people, both are easy to assimilate. But, we need not worry much. People have understood the importance of both Kannada and Millets, both will survive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X