ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಯಾಚಿನ್ ಸಂಘರ್ಷ: ಹಿಮದ ಸೌಂದರ್ಯದ ಮೇಲೆ ಯುದ್ಧ ಮೂಡಿಸಿದ ನೆತ್ತರ ಕಲೆ

|
Google Oneindia Kannada News

ಸಿಯಾಚಿನ್ ಗ್ಲೇಸಿಯರ್ ಎಂಬ ವಿಸ್ಮಯಕಾರಿ ಪ್ರದೇಶ ಎಷ್ಟು ಸುಂದರವೋ ಅಷ್ಟೇ ಅಪಾಯಕಾರಿ ಕೂಡ. ಇಲ್ಲಿನ ಕಡು ಚಳಿಗೆ ನೀರು ಕಲ್ಲಿನಂತಾಗುತ್ತದೆ. ಆದರೆ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ವೈರತ್ವದ ಕಾವು ಮಾತ್ರ ಈ ಶೀತದ ವಾತಾವರಣದಲ್ಲಿಯೂ ತಣ್ಣಗಾಗುವುದಿಲ್ಲ. ಸಿಯಾಚಿನ್‌ನ ಹಿಮಾಚ್ಛಾದಿತ ಪ್ರದೇಶದಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸಲೂ ಅವಕಾಶವಿಲ್ಲ. ಆದರೂ ಭಾರತ ಮತ್ತು ಪಾಕ್ ನಡುವೆ ಈ ಪ್ರದೇಶದ ಮೇಲೆ ಹಕ್ಕು ಸಾಧಿಸಲು ಕದನಗಳಾಗುತ್ತವೆ. ತಮ್ಮ ಸೇನಾ ನೆಲೆಗಳನ್ನು ಸ್ಥಾಪಿಸಲು ಕೋಟ್ಯಂತರ ರೂಪಾಯಿ ಹಣ ವ್ಯಯಿಸುತ್ತವೆ.

ಈ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಈ ಕಾದಾಟಗಳೇಕೆ? ಸೌಂದರ್ಯದೊಳಗೆ ಭಯಾನಕ ಕ್ರೌರ್ಯವನ್ನೂ ತುಂಬಿಕೊಂಡಿರುವ ಸಿಯಾಚಿನ್ ಏಕೆ ಕೇಂದ್ರಬಿಂದುವಾಗಿದೆ? ಪ್ರತಿ ವರ್ಷ ಇಲ್ಲಿ ಸಂಭವಿಸುವ ಹಿಮಪಾತಕ್ಕೆ ಸಿಲುಕಿ ನಮ್ಮ ಯೋಧರೇಕೆ ಅನ್ಯಾಯವಾಗಿ ಜೀವ ಕಳೆದುಕೊಳ್ಳುತ್ತಾರೆ? ಇತ್ಯಾದಿ ಪ್ರಶ್ನೆಗಳು ನಮಗೆ ಎದುರಾಗುತ್ತವೆ. ಸಿಯಾಚಿನ್ ಕೇವಲ ಒಂದು ಭೂಭಾಗವಲ್ಲ. ಅದು ಭಾರತದ ರಕ್ಷಣೆಯ ಬೃಹತ್ ಗೋಡೆ. ಅದರೊಂದಿಗೆ ಭಾರತಕ್ಕೆ ಭಾವನಾತ್ಮಕ ನಂಟೂ ಇದೆ. ಈ ಚೆಂದದ, ನಯನ ಮನೋಹರ ಪ್ರದೇಶದ ಮೇಲೆ ನಿಯಂತ್ರಣ ನಡೆಸುವ ಪ್ರಯತ್ನಕ್ಕೆ ರಾಜಕೀಯ ಮತ್ತು ಸೇನಾ ಪರಿಭಾಷೆಯಲ್ಲಿ ಇರುವುದು 'ಸಿಯಾಚಿನ್ ಸಂಘರ್ಷ' ಎಂಬ ಹೆಸರು.

ಜ್ಯೂಸು ಇಟ್ಟಿಗೆಯಾಗುವ, ಮೊಟ್ಟೆ ಕಲ್ಲಾಗುವ ಸಿಯಾಚಿನ್ ಎಂಬ ಮಾಯಾ ತಾಣ!ಜ್ಯೂಸು ಇಟ್ಟಿಗೆಯಾಗುವ, ಮೊಟ್ಟೆ ಕಲ್ಲಾಗುವ ಸಿಯಾಚಿನ್ ಎಂಬ ಮಾಯಾ ತಾಣ!

ಬಿಳಿಯೆಂದರೆ ಹಿಮದಷ್ಟು ಬಿಳುಪು ಎಂದು ಹೋಲಿಸುವ ಚೆಂದದ ಹಿಮರಾಶಿಯ ಮೇಲೆಯೂ ನೆತ್ತರು ಚಿಮ್ಮಿದೆ. ಆ ಕಲೆಗಳು ಮತ್ತೆ ಬೋಳುವ ಹಿಮದೊಳಗೆ ಮರೆಯಾಗಿವೆ. ಅದೆಷ್ಟೋ ಜೀವಗಳು ಈ ಹಿಮದ ರಾಶಿಯ ಚೆಲುವಿನ ಅಡಿಯಲ್ಲಿ ಉಸಿರು ಕಳೆದುಕೊಂಡಿವೆ. ಹೂತುಹೋದ ಸೈನಿಕರ ಸಮವಸ್ತ್ರಗಳೂ ನಮಗೆ ಕಾಣಸಿಗದು. ಸಿಯಾಚಿನ್ ಎನ್ನುವುದು ವಾಸ್ತವವಾಗಿ ಪ್ರಕೃತಿಯ ಸೌಂದರ್ಯದ ಕೆತ್ತನೆ. ಆದರೆ ದೇಶಗಳ ಗಡಿವಿಚಾರದಲ್ಲಿ ಅದು ರಣರಂಗ.

ಕಾಳಿದಾಸ ಮತ್ತು ಮೇಘದೂತ

ಕಾಳಿದಾಸ ಮತ್ತು ಮೇಘದೂತ

ಕಾಳಿದಾಸ ಬರೆದ ಪ್ರಸಿದ್ಧ 'ಮೇಘದೂತ' ಕಾವ್ಯ ಮೋಡಗಳ ಮೂಲಕ ಸಂದೇಶ ರವಾನಿಸುವ ಪ್ರೇಮದ ಆಹ್ಲಾದವನ್ನು ನೀಡುತ್ತದೆ. ಈ ಹೆಸರು ಭಾರತೀಯ ಸೇನೆಯಲ್ಲಿ ಪ್ರೇಮದ ಸಂದೇಶವಲ್ಲ, ಬದಲಾಗಿ ಸಮರದ ಸಂಕೇತ. ಕಾಶ್ಮೀರದ ಲಡಾಕ್‌ನಲ್ಲಿರುವ ಸಿಯಾಚಿನ್ ನೀರ್ಗಲ್ಲು ಪ್ರದೇಶವನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯ ಹೆಸರು 'ಆಪರೇಷನ್ ಮೇಘದೂತ್'. ಈ ಕಾರ್ಯಾಚರಣೆಯ ಬಳಿಕವೇ 'ಸಿಯಾಚಿನ್ ಸಂಘರ್ಷ' ಎಂಬ ಕಾದಾಟದ ಸ್ಥಿತಿ ಹುಟ್ಟಿಕೊಂಡಿತು.

'ಆಪರೇಷನ್ ಮೇಘದೂತ್' ಬಳಿಕ ವಾಸ್ತವಿಕ ಭೂ ಸ್ಥಿತಿ ರೇಖೆ ಎಂದು ಗುರುತಿಸಲಾಗಿರುವ ಪ್ರದೇಶದಲ್ಲಿ ಭಾರತೀಯ ಸೇನೆ ತನ್ನ ಹಿಡಿತ ಸಾಧಿಸಿದೆ. ಸುಮಾರು 6,400 ಮೀಟರ್ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಇನ್ನೊಂದು ಬದಿಯಲ್ಲಿ ಪಾಕಿಸ್ತಾನದ ಸೇನೆ ಇದೆ. ಈ ಎರಡೂ ದೇಶಗಳ ಸುಮಾರು ಹತ್ತು ಬೆಟಾಲಿಯನ್‌ಗಳು ಇಲ್ಲಿ ಮೊಕ್ಕಾಂ ಹೂಡಿವೆ.

ಒಪ್ಪಂದಗಳಲ್ಲಿ ಗಡಿ ಉಲ್ಲೇಖವಿಲ್ಲ

ಒಪ್ಪಂದಗಳಲ್ಲಿ ಗಡಿ ಉಲ್ಲೇಖವಿಲ್ಲ

ಗಡಿ ನಿಯಂತ್ರಣ ರೇಖೆಯಂತೆಯೇ ಸಿಯಾಚಿನ್ ನೀರ್ಗಲ್ಲು ಪ್ರದೇಶ ಭಾರತ ಮತ್ತು ಪಾಕಿಸ್ತಾನ ನಡುವಿನ ವಿವಾದದ ಬಿಂದು. 1949ರಲ್ಲಿ ನಡೆದ ಕರಾಚಿ ಒಪ್ಪಂದದ ವೇಳೆ ಉಭಯ ದೇಶಗಳ ಗಡಿಗಳನ್ನು ಗುರುತಿಸುವ ವಿಚಾರದಲ್ಲಿ ಸಿಯಾಚಿನ್ ಮೇಲಿನ ಮಾಲೀಕತ್ವದ ಕುರಿತು ನಿರ್ದಿಷ್ಟ ಮತ್ತು ಸ್ಪಷ್ಟ ನಿಲುವು ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ.

1972ರಲ್ಲಿ ನಡೆದ ಶಿಮ್ಲಾ ಒಪ್ಪಂದದಲ್ಲಿ ಸಿಯಾಚಿನ್ ಪ್ರದೇಶವು ನಿರುಪಯುಕ್ತ ಮತ್ತು ಮಾನವ ವಸತಿ ಯೋಗ್ಯವಲ್ಲದ ಜಾಗವೆಂದು ಉಲ್ಲೇಖಿಸಲಾಗಿತ್ತು. ಇದಕ್ಕೂ ಮುನ್ನ ಈ ಪ್ರದೇಶದಲ್ಲಿ ಯಾವ ದೇಶವೂ ತನ್ನ ಕಾಯಂ ಅಸ್ತಿತ್ವ ಹೊಂದಿರಲಿಲ್ಲ. ಆದರೆ ಈ ಒಪ್ಪಂದವು ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿಯನ್ನು ನಿರ್ಧರಿಸಿರಲಿಲ್ಲ. ಎನ್‌ಜೆ9842 ಎಂದು ಗುರುತಿಸಲಾಗಿರುವ ಪ್ರದೇಶದವರೆಗೆ ಈ ಎರಡೂ ದೇಶಗಳು ತಮ್ಮ ಗಡಿ ಗುರುತಿಸಿಕೊಂಡಿವೆ.

ಪಾಕಿಸ್ತಾನ ಹಕ್ಕು ಪ್ರತಿಪಾದನೆ

ಪಾಕಿಸ್ತಾನ ಹಕ್ಕು ಪ್ರತಿಪಾದನೆ

ಅಮೆರಿಕ ಮತ್ತು ಪಾಕಿಸ್ತಾನಗಳು ಎನ್‌ಜೆ9842ನಿಂದ ಕರಕೋಮ್ ಪ್ರದೇಶದವರೆಗಿನ ಭಾಗವನ್ನು ತಮ್ಮ ಭೂಪಟಗಳಲ್ಲಿ ಚುಕ್ಕಿಗಳ ಮೂಲಕ ಗುರುತಿಸಿದ್ದವು. ಇದನ್ನು ಭಾರತ ಭೂನಕ್ಷೆಯಲ್ಲಿನ ದೋಷ ಎಂದು ಪ್ರತಿಪಾದಿಸಿತ್ತು. ಕದನ ವಿರಾಮ ರೇಖೆ (ಸಿಎಫ್‌ಎಲ್) ಎಂದು ಕರೆಯಲಾಗುತ್ತಿದ್ದ ಪ್ರದೇಶವನ್ನೇ ಈ ಒಪ್ಪಂದಗಳಲ್ಲಿ ಎನ್‌ಜೆ9842 ಎಂದು ಕರೆಯಲಾಗಿತ್ತು. ಹಿಮಾವೃತ ಮತ್ತು ನಿರುಪಯುಕ್ತ ನೆಲದ ಮೇಲೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಯಾವುದೇ ವಿವಾದ ಇಲ್ಲ ಎಂದೇ ವಿಶ್ವಸಂಸ್ಥೆ ಪರಿಗಣಿಸಿತ್ತು.

1980ರಲ್ಲಿ ಪಾಕಿಸ್ತಾನವು ತನ್ನ ಭಾಗದಿಂದ ಇಲ್ಲಿಗೆ ಅನೇಕ ಪ್ರವಾಸಿಗರನ್ನು ಕಳುಹಿಸುವ ಮೂಲಕ ಈ ಪ್ರದೇಶದ ಮೇಲಿನ ಹಕ್ಕನ್ನು ಪ್ರತಿಪಾದಿಸಲು ಪ್ರಯತ್ನಿಸಿತು.

ಸಿಯಾಚಿನ್‌ನಲ್ಲಿ ಹಿಮಪಾತ; ನಾಲ್ವರು ಯೋಧರ ದುರ್ಮರಣಸಿಯಾಚಿನ್‌ನಲ್ಲಿ ಹಿಮಪಾತ; ನಾಲ್ವರು ಯೋಧರ ದುರ್ಮರಣ

ಪಾಕಿಸ್ತಾನದ ದಾಳಿ ಬಗ್ಗೆ ಭಾರತಕ್ಕೆ ಸುಳಿವು

ಪಾಕಿಸ್ತಾನದ ದಾಳಿ ಬಗ್ಗೆ ಭಾರತಕ್ಕೆ ಸುಳಿವು

1984ರಲ್ಲಿ ಪಾಕಿಸ್ತಾನವು ಸಿಯಾಚಿನ್ ಗ್ಲೇಸಿಯರ್ ಭಾಗವನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆ ನಡೆಸುವ ಸಲುವಾಗಿ ಯುರೋಪ್‌ನ ಕಂಪೆನಿಯೊಂದಕ್ಕೆ ಕೆಲವು ಬೆಚ್ಚಗಿನ ಉಡುಪುಗಳನ್ನು ತಯಾರಿಸಲು ಆರ್ಡರ್ ನೀಡಿತ್ತು. ಆದರೆ ಲಂಡನ್ ಮೂಲದ ಇದೇ ಕಂಪೆನಿ ಭಾರತೀಯ ಸೇನೆಗೂ ಉಡುಪುಗಳನ್ನು ತಯಾರಿಸಿಕೊಡುತ್ತಿತ್ತು. ಹೀಗಾಗಿ ಪಾಕಿಸ್ತಾನದ ತಂತ್ರದ ಬಗ್ಗೆ ಭಾರತಕ್ಕೆ ಸುಳಿವು ಸಿಕ್ಕಿತ್ತು. ಪಾಕಿಸ್ತಾನ 300 ಉಡುಪುಗಳಿಗೆ ಬೇಡಿಕೆ ಇರಿಸಿತ್ತು. ಭಾರತ ಅದರ ಎರಡು ಪಟ್ಟು ಉಡುಪುಗಳಿಗೆ ಬೇಡಿಕೆ ಇರಿಸಿದ್ದು ಮಾತ್ರವಲ್ಲ, ತನ್ನ ಸೈನಿಕರನ್ನು ಸಿಯಾಚಿನ್ ಪ್ರದೇಶಕ್ಕೆ ಕಳುಹಿಸಿತ್ತು. ಪಾಕಿಸ್ತಾನ ಆಕ್ರಮಣದ ಸಿದ್ಧತೆ ನಡೆಸುವ ವೇಳೆಗಾಗಲೇ ಭಾರತ ಆಪರೇಷನ್ ಮೇಘದೂತ್ ನಡೆಸಿ ಸಿಯಾಚಿನ್‌ಅನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು.

ದುಬಾರಿ ಸೇನಾ ಕಾರ್ಯಾಚರಣೆ

ದುಬಾರಿ ಸೇನಾ ಕಾರ್ಯಾಚರಣೆ

ಈ ನೀರ್ಗಲ್ಲು ಪ್ರದೇಶದ ಮೂರನೇ ಎರಡರಷ್ಟು ಭಾಗವು ಭಾರತದ ಹಿಡಿತದಲ್ಲಿದೆ. ಅತ್ಯಂತ ಎತ್ತರದ ಪ್ರದೇಶದವರೆಗೆ ಭಾರತ ಸಿಯಾಚಿನ್ ಮೇಲೆ ನಿಯಂತ್ರಣ ಸಾಧಿಸಿದೆ. ಜತೆಗೆ ಮೂರು ವಾಹನ ಸಂಚಾರ ಭಾಗಗಳ ಪೈಕಿ ಅತಿ ದೊಡ್ಡ ವಾಹನ ಸಂಚಾರ ಮಾರ್ಗ ಖರ್ದುಂಗ್ಲಾ ಪಾಸ್ ಸೇರಿದಂತೆ ಎರಡನ್ನು ತನ್ನ ಅಧೀನದಲ್ಲಿರಿಸಿಕೊಂಡಿದೆ. ಎತ್ತರದ ಪ್ರದೇಶ ಭಾರತದ ನಿಯಂತ್ರಣದಲ್ಲಿದ್ದರೆ, ಪಶ್ಚಿಮದ ಇಳಿಜಾರಿನ ಸಾಲ್ತೊರೊ ಪ್ರದೇಶದಲ್ಲಿ ಪಾಕಿಸ್ತಾನ ಸೇನೆಯನ್ನು ನಿಯೋಜಿಸಿದೆ.

ಇಲ್ಲಿನ ಭಯಾನಕ ಹವಾಮಾನ ಸ್ಥಿತಿಗತಿಯ ನಡುವೆಯೂ ಭಾರತ ತನ್ನ ಸೇನಾಪಡೆಯನ್ನು ನಿಯೋಜಿಸಿದೆ. ಇಲ್ಲಿ ಶತ್ರುಗಳೊಂದಿಗಿನ ಕಾದಾಟಕ್ಕಿಂತಲೂ ಹೆಚ್ಚು ಸೈನಿಕರು ಹಿಮಪಾತ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಮೃತಪಡುತ್ತಾರೆ. ವರದಿಗಳ ಪ್ರಕಾರ ಭಾರತ ಸೈನಿಕರ ಸುರಕ್ಷತೆಗಾಗಿ ಪ್ರತಿ ದಿನವೂ ಐದು ಕೋಟಿ ರೂಪಾಯಿ ಹಣವನ್ನು ಇಲ್ಲಿಗೆ ವ್ಯಯಿಸುತ್ತಿದೆ. 1984ರಿಂದ ಇದುವರೆಗೂ ಅಂದಾಜು 8,000 ಮಂದಿ ಇಲ್ಲಿ ಜೀವ ಕಳೆದುಕೊಂಡಿದ್ದಾರೆ. ಹೆಚ್ಚಿ ಸಾವು ನೋವುಗಳು ಯುದ್ಧಕ್ಕಿಂತಲೂ ಹಿಮಪಾತ, ಭೂಕುಸಿತ, ಹಿಮಗಡಿತ, ಅನಾರೋಗ್ಯ ಮುಂತಾದವುಗಳಿಂದ ಸಂಭವಿಸಿವೆ.

ಕರ್ನಲ್ ನರೇಂದ್ರ ಕುಮಾರ್ ಸಾಹಸ

ಕರ್ನಲ್ ನರೇಂದ್ರ ಕುಮಾರ್ ಸಾಹಸ

1949ರಲ್ಲಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ನಡೆದ ಕದನ ವಿರಾಮದ ನಂತರ ನಡೆದ ಒಪ್ಪಂದದಲ್ಲಿ ಸಿಯಾಚಿನ್ ನೀರ್ಗಲ್ಲಿನ ತಳಭಾಗದಲ್ಲಿರುವ ಎನ್‌ಜೆ9842ವರೆಗೂ ಭಾರತ ಮತ್ತು ಪಾಕಿಸ್ತಾನದ ಗಡಿಯನ್ನು ಗುರುತಿಸಲಾಗಿತ್ತು.

1971ರಲ್ಲಿ ಭಾರತ-ಪಾಕಿಸ್ತಾನ ಯುದ್ಧದ ಬಳಿಕ ಮತ್ತು 1972ರ ಜುಲೈನಲ್ಲಿ ಶಿಮ್ಲಾ ಒಪ್ಪಂದದ ನಂತರ ಕದನವಿರಾಮ ರೇಖೆಯನ್ನು ಗಡಿ ನಿಯಂತ್ರಣ ರೇಖೆಯನ್ನಾಗಿ ಪರಿವರ್ತಿಸಲಾಯಿತು. 1949ರ ಕರಾಚಿ ಒಪ್ಪಂದಕ್ಕೆ ಎರಡನೆಯ ಸೇರ್ಪಡೆ ಮಾಡಿದ ವಿಶ್ವಸಂಸ್ಥೆ, ಸಿಎಫ್‌ಎಲ್ ಗುರುತು ಇರುವ ಪ್ರದೇಶವನ್ನು ಜಮ್ಮು ಮತ್ತು ಕಾಶ್ಮೀರದ ರಾಜ್ಯದ ನಕ್ಷೆಯೊಳಗೆ ತೋರಿಸಿತು.

1978ರಲ್ಲಿ ಕರ್ನಲ್ ನರೇಂದ್ರ ಕುಮಾರ್, ಸಿಯಾಚಿನ್ ಪ್ರದೇಶಕ್ಕೆ ಮೊದಲು ಜರ್ಮನ್ ಪರ್ವತಾರೋಹಿಗಳ ಜತೆ ಭೇಟಿ ನೀಡಿದ್ದರು. ಭಾರತೀಯ ಸೇನೆ ಮತ್ತು ವಾಯುಪಡೆಯ ನೆರವಿನೊಂದಿಗೆ 1981ರಲ್ಲಿ ಅವರು ಮತ್ತೊಂದು ತಂಡದೊಂದಿಗೆ ನೀರ್ಗಲ್ಲು ಪ್ರದೇಶದ ತುದಿಗೆ ತಲುಪಿ ತ್ರಿವರ್ಣ ಧ್ವಜ ಹಾರಿಸಿದ್ದರು. ಮುಖ್ಯವಾಗಿ ಅವರ ಭೇಟಿಯ ಉದ್ದೇಶ ಆ ಪ್ರದೇಶದ ಭೌಗೋಳಿಕ ಮಾಹಿತಿಗಳನ್ನು ಸೇನೆಗೆ ನೀಡುವುದಾಗಿತ್ತು. ಅಲ್ಲಿನ ನಕ್ಷೆ, ಛಾಯಾಚಿತ್ರಗಳು, ವಿಡಿಯೋ ಹಾಗೂ ಯೋಜನೆಗಳನ್ನು ನರೇಂದ್ರ ಕುಮಾರ್ ಅವರು ಸೇನೆಗೆ ತಯಾರಿಸಿ ನೀಡಿದ್ದರು. 1984ರ ಆಪರೇಷನ್‌ ಮೇಘದೂತ್‌ಗೆ ಇದು ನೆರವಾಯಿತು.

ಭಾರತೀಯ ನಾಗರಿಕರಿಗೆ ಸಿಯಾಚಿನ್ ಪ್ರವೇಶ; ಗೊತ್ತಿರಬೇಕಾದ 5 ಸಂಗತಿಭಾರತೀಯ ನಾಗರಿಕರಿಗೆ ಸಿಯಾಚಿನ್ ಪ್ರವೇಶ; ಗೊತ್ತಿರಬೇಕಾದ 5 ಸಂಗತಿ

ಸಾಲು ಸಾಲು ಯುದ್ಧಗಳು

ಸಾಲು ಸಾಲು ಯುದ್ಧಗಳು

ಸಿಯಾಚಿನ್ ನೀರ್ಗಲ್ಲು ಜಗತ್ತಿನ ಅತಿ ಹೆಚ್ಚು ಕದನಗಳು ನಡೆದ ರಣರಂಗ. ಇಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ 1984ರ ಏಪ್ರಿಲ್‌ನಿಂದ 13 ತೀವ್ರ ಕದನಗಳಾಗಿವೆ.

ಭಾರತಕ್ಕೂ ಮುನ್ನ ಸಿಯಾಚಿನ್ ಪ್ರದೇಶವನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನದ ಸೇನೆ ಆಪರೇಷನ್ ಅಬಬೀಲ್ ಪ್ರಾರಂಭಿಸಿತ್ತು. ಆದರೆ ಉಡುಪು ತಯಾರಿಕಾ ಕಂಪೆನಿ ಜತೆ ಮಾಡಿಕೊಂಡ ಒಪ್ಪಂದ ಭಾರತಕ್ಕೆ ತಿಳಿದಿದ್ದು, ಸಿಯಾಚಿನ್‌ನ ಪ್ರಮುಖ ಭಾಗ ಭಾರತದ ವಶವಾಗುವಂತೆ ಮಾಡಿತು. ಪಾಕಿಸ್ತಾನದ ಸೇನೆ ಅತಿಕ್ರಮಿಸಿಕೊಂಡಿದ್ದ ವಿಲಾಫೊಂಡ್ ಲಾ, ಸಿಯಾ ಲಾ ಪ್ರದೇಶಗಳನ್ನು ಭಾರತ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಭಾರತದ ಸೇನೆಯನ್ನು ಎದುರಿಸಲು ಪಾಕ್ 1984ರ ಏಪ್ರಿಲ್ 25ರಂದು ತನ್ನ ಪಡೆಗಳನ್ನು ಬಳಸಿಕೊಂಡಿತು. ಇದು ನೀರ್ಗಲ್ಲು ಪ್ರದೇಶದಲ್ಲಿ ನಡೆದ ಮೊದಲ ಸಶಸ್ತ್ರ ಕದನ.

ಬಳಿಕವೂ ಭಾರತ ಈ ಭಾಗದಲ್ಲಿ ತನ್ನ ಪ್ರಾಬಲ್ಯ ಮೆರೆಯಿತು. 1987ರ ಜೂನ್ ಮತ್ತು ಜುಲೈನಲ್ಲಿ ಸಿಯಾಚಿನ್‌ನ ಅತಿ ಎತ್ತರ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ಪಡೆದುಕೊಳ್ಳಲು ಆಪರೇಷನ್ ರಾಜೀವ್ ನಡೆಸಲಾಯಿತು. ಪಾಕಿಸ್ತಾನದ ವಶದಲ್ಲಿದ್ದ ಕ್ಯೂದ್ ಪೋಸ್ಟ್‌ಅನ್ನು ಜೂನ್ 25ರಂದು ವಶಪಡಿಸಿಕೊಳ್ಳಲಾಯಿತು.


1987ರ ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನದ ಬ್ರಿಗೇಡಿಯರ್ ಜನರಲ್ ಪರ್ವೇಜ್ ಮುಷರಫ್ ನೇತೃತ್ವದಲ್ಲಿ ಕ್ಯುದ್ ಪೀಕ್‌ಅನ್ನು ಮರುವಶಪಡಿಸಿಕೊಳ್ಳಲು ಆಪರೇಷನ್ ಕ್ಯುದತ್ ನಡೆಯಿತು. ಪಾಕಿಸ್ತಾನ ಸೇನೆಯ ಚಲನವಲನಗಳನ್ನು ಗುರುತಿಸಿದ ಭಾರತೀಯ ಸೇನೆ ಅದಕ್ಕೆ ಪ್ರತಿಯಾಗಿ ಆಪರೇಷನ್ ವಜ್ರಶಕ್ತಿ ನಡೆಸಿ, ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿತು.

1989ರ ಮೇ ತಿಂಗಳಲ್ಲಿ ಚುಮಿಕ್ ಗ್ಲೇಸಿಯರ್ ಪ್ರದೇಶದಲ್ಲಿ ಪಾಕಿಸ್ತಾನವನ್ನು ಓಡಿಸಲು ಭಾರತೀಯ ಸೇನೆ ಆಪರೇಷನ್ ಐಬೆಕ್ಸ್ ನಡೆಸಿತು. ಆದರೆ ಈ ದಾಳಿಯನ್ನು ಪಾಕಿಸ್ತಾನ ವಿಫಲಗೊಳಿಸಿತು. 1992ರ ಜುಲೈ-ಆಗಸ್ಟ್‌ನಲ್ಲಿ ಪಾಕಿಸ್ತಾನ ನಡೆಸಿದ ದಾಳಿಯಿಂದ ಚುಲುಂಗ್‌ನಲ್ಲಿ ಬಹದ್ದೂರ್ ಪೋಸ್ಟ್‌ಅನ್ನು ಉಳಿಸಿಕೊಳ್ಳಲು ಆಪರೇಷನ್ ತ್ರಿಶೂಲ್ ಮೂಲಕ ಪ್ರತಿದಾಳಿ ನಡೆಸಲಾಯಿತು. ಭಾರತದ ಕ್ಷಿಪಣಿಗಳು ಪಾಕ್ ಹೆಲಿಕಾಪ್ಟರ್‌ಗಳನ್ನು ಪುಡಿಗಟ್ಟಿದವು. ಪಾಕಿಸ್ತಾನ ಸೇನೆಯ ಪ್ರಮುಖರು ಬಲಿಯಾದರು. ಈ ಯುದ್ಧ ಪಾಕಿಸ್ತಾನಕ್ಕೆ ಭಾರಿ ನಷ್ಟ ಉಂಟುಮಾಡಿತು.

1995ರ ಮೇನಲ್ಲಿ ಪಾಕಿಸ್ತಾನವು ಸಾಲ್ತೊರೊ ರಕ್ಷಣಾ ರೇಖೆ ಸಮೀಪದ ತ್ಯಾಕ್ಷಿ ಪೋಸ್ಟ್ ಮೇಲೆ ದಾಳಿ ನಡೆಸಿತು. ಈ ದಾಳಿಯನ್ನು ಭಾರತೀಯ ಪಡೆ ವಿಫಲಗೊಳಿಸಿತು. 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನ ಪಡೆಗಳ ನಿಯಂತ್ರಣದಲ್ಲಿದ್ದ ಪಿಟಿ 5770 (ನವೀದ್ ಟಾಪ್) ಪ್ರದೇಶವನ್ನು ವಶಪಡಿಸಿಕೊಂಡಿತು.

ಭಾರತದ ಹಿಡಿತದಲ್ಲಿ ಸಿಯಾಚಿನ್ ಭಾಗ

ಭಾರತದ ಹಿಡಿತದಲ್ಲಿ ಸಿಯಾಚಿನ್ ಭಾಗ

ಪಾಕಿಸ್ತಾನವು ತನ್ನದೆಂದು ಪ್ರತಿಪಾದಿಸಿದ್ದ ಸುಮಾರು 900 ಚದರ ಮೈಲು ಪ್ರದೇಶವನ್ನು ಕಳೆದುಕೊಂಡಿರುವುದಾಗಿ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿಕೊಂಡಿದ್ದಾರೆ. ಅಮೆರಿಕದ ಟೈಮ್ಸ್ ನಿಯತಕಾಲಿಕೆ ವರದಿ ಪ್ರಕಾರ, ಪಾಕಿಸ್ತಾನ ತನಗೆ ಸೇರಿದ್ದು ಎಂದು ಹೇಳಿಕೊಂಡಿದ್ದ 1000 ಚದರ ಮೈಲು ಭಾಗ ಭಾರತದ ಪಾಲಾಗಿದೆ.

ಸಿಯಾಚಿನ್ ನೀರ್ಗಲ್ಲು ಪ್ರದೇಶದ 76 ಕಿ.ಮೀ ದೂರವರೆಗೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಭಾರತೀಯ ಸೇನೆ ನಿಯಂತ್ರಿಸುತ್ತಿದೆ. ಮುಖ್ಯವಾಗಿ ಸಾಲ್ತೊರೊ ಪಾಸ್‌ನ ತುದಿಯನ್ನು ಕೂಡ ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡಿದೆ.

ಸಿಯಾಚಿನ್ ಗಡಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ಜೀವಂತವಾಗಿಟ್ಟಿದೆ. ವಾಸ್ತವವಾಗಿ ಈ ಭಾಗದಲ್ಲಿ ಸೇನೆಯನ್ನು ನಿಯೋಜಿಸಿರುವುದು ಎರಡೂ ದೇಶಗಳಿಗೆ ಆರ್ಥಿಕ ಹಾಗೂ ಯೋಧರ ಜೀವದ ವಿಚಾರದಲ್ಲಿ ಬಹಳ ದುಬಾರಿಯಾಗಿದೆ. ಆದರೆ ಭಾರತ ತನ್ನ ಸುರಕ್ಷತೆಯ ದೃಷ್ಟಿಯಿಂದ ಇಲ್ಲಿ ಸೇನೆ ನಿಯೋಜಿಸಿ ಹಿಡಿತ ಕಾಪಾಡುವುದು ಅನಿವಾರ್ಯವಾಗಿದೆ. ಜತೆಗೆ ಈ ಪ್ರದೇಶದಲ್ಲಿ ಚಾರಣಕ್ಕೆ ಬರುವವರಿಗೆ ಭಾರತೀಯ ಸೇನೆ ನೆರವು ನೀಡುತ್ತಿದೆ.

ಕಾರ್ಗಿಲ್ ಯುದ್ಧಕ್ಕೂ ಮುನ್ನ ಕೆಲವು ನೆಲೆಗಳಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ಭಾರತ ಉದ್ದೇಶಿಸಿತ್ತು. ಪಾಕಿಸ್ತಾನವು ಈ ಭಾಗಗಳನ್ನು ಮತ್ತೆ ಆಕ್ರಮಿಸುವ ಸಾಧ್ಯತೆ ಇರುವುದರಿಂದ ಅದನ್ನು ಕೈಬಿಟ್ಟಿದೆ. ಭಾರತ ಸೂಚಿಸಿರುವ ಸದ್ಯದ ಗಡಿ ರೇಖೆಯನ್ನು ಪಾಕಿಸ್ತಾನ ಒಪ್ಪಿಕೊಳ್ಳುವವರೆಗೂ ಸಿಯಾಚಿನ್‌ನಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳದಿರಲು ನಿರ್ಧರಿಸಲಾಗಿದೆ.

ಭೇಟಿ ನೀಡಿದ ಪ್ರಮುಖರು

ಭೇಟಿ ನೀಡಿದ ಪ್ರಮುಖರು

2005ರ ಜೂನ್ 12ರಂದು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಈ ಪ್ರದೇಶಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎನಿಸಿಕೊಂಡಿದ್ದಾರೆ. 2007ರಲ್ಲಿ ಅಬ್ದುಲ್ ಕಲಾಂ ಸಿಯಾಚಿನ್‌ಗೆ ಭೇಟಿ ನೀಡಿದ ಮೊದಲ ರಾಷ್ಟ್ರಪತಿ ಎಂದೆನಿಸಿಕೊಂಡರು. 2014ರ ಅಕ್ಟೋಬರ್ 23ರಂದು ಪ್ರಧಾನಿ ನರೇಂದ್ರ ಮೋದಿ ಸಿಯಾಚಿನ್‌ಗೆ ಭೇಟಿ ನೀಡಿ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು.

ಅಮೆರಿಕ ಸೇನೆಯ ಸಿಬ್ಬಂದಿ ಮುಖ್ಯಸ್ಥ ಜಾರ್ಜ್ ಕೇಸಿ 2008ರ ಅಕ್ಟೋಬರ್‌ನಲ್ಲಿ ಸಿಯಾಚಿನ್ ನೀರ್ಗಲ್ಲುವಿಗೆ ಭೇಟಿ ನೀಡಿದ್ದಾಗ ಸೇನಾ ಮುಖ್ಯಸ್ಥ ದೀಪಕ್ ಕಪೂರ್ ಅವರೊಂದಿಗೆ ತೆರಳಿದ್ದರು. 2012ರಲ್ಲಿ ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಶ್ಫಾಕ್ ಪರ್ವೇಜ್ ಖಯಾನಿ ಭೇಟಿ ನೀಡಿದ್ದರು.

ಸಿಯಾಚಿನ್ ಮೃತ್ಯುಕೂಪದ ಬದಲು ಮಿಲಿಟರಿ ಮುಕ್ತ ತಾಣವಾಗಲಿಸಿಯಾಚಿನ್ ಮೃತ್ಯುಕೂಪದ ಬದಲು ಮಿಲಿಟರಿ ಮುಕ್ತ ತಾಣವಾಗಲಿ

English summary
Siachen is one of the major war barder between India and Pakistan. Both nations claiming their power over the place. Why these two are giving more importance to this place?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X