ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರಾಂತ್ಯದ ವಿಶೇಷ ಲೇಖನ: ಮಾಯವಾದ ಸಮುದ್ರದಲ್ಲೀಗ ಹಡಗುಗಳ ಶವಯಾತ್ರೆ!!

By ಶಿವರಾಜ್ ಉಡುಪ
|
Google Oneindia Kannada News

ಮಾಯವಾದ ಸಮುದ್ರವೇ?! ಸಮುದ್ರ ಮಾಯವಾಗುವುದೆಂದರೇನೆಂದು ಆಶ್ಚರ್ಯಪಟ್ಟಿರಾ!

ನಿಜ, ವಿಚಿತ್ರವಾದರೂ ಸತ್ಯವಿದು. ನೈಸರ್ಗಿಕ ಸಂಪನ್ಮೂಲದ ಅತಿ ಬಳಕೆಯಿಂದಾದ ಜಗತ್ತಿನ ಹೊಚ್ಚಹೊಸ ಹಾಗೂ ದೊಡ್ಡ ದುರಂತವೆಂದರೆ ಬತ್ತಿಹೋದ ಅರಾಲ್ ಸಮುದ್ರ!

ಸಮುದ್ರವಲ್ಲದಿದ್ದರೂ ಸಮುದ್ರದಂತೇ ಇದ್ದ ಜಗತ್ತಿನ ನಾಲ್ಕನೇ ಅತಿದೊಡ್ಡ ಒಳನಾಡು ಸರೋವರವೆಂಬ ಖ್ಯಾತಿಯಿದ್ದ 68,000 ಚಕಿಮೀ ವಿಸ್ತೀರ್ಣದ ಅರಾಲ್ ಸರೋವರ ಅಥವಾ ಅರಾಲ್ ಸಮುದ್ರ ಮಾನವನ ದುರಾಸೆಯಿಂದಾಗಿ ಸಾಯುವ ಕೊನೆಯ ಹಂತದಲ್ಲಿದ್ದು ದೊಡ್ಡ ಮರುಭೂಮಿಯೊಂದರ ಉಗಮಕ್ಕೂ ಕಾರಣವಾಗಿದ್ದು ಬಹಳ ಹಿಂದಿನ ಕಾಲವೇನಲ್ಲ ತೀರ ಇತ್ತೀಚಿನ ಅಂದರೆ 60ರ ದಶಕದಿಂದ ಶುರುವಾದ ದುರಂತ.

ಮಧ್ಯ ಏಷಿಯಾದ ಉಜ್ಬೆಕಿಸ್ತಾನ ಹಾಗೂ ಕಜಕಿಸ್ತಾನಗಳಲ್ಲಿ ಹರಡಿಕೊಂಡಿದ್ದ ಈ ಸಮುದ್ರದ ಉಪಯೋಗ ಪಡೆಯುತ್ತಿದ್ದವರು ಸುತ್ತಲಿನ 9 ರಾಷ್ಟ್ರಗಳ ಸಾವಿರಾರು ಜನ.

ಇಂತಹ ವಿಶಿಷ್ಟ ಸಮುದ್ರಕ್ಕೆ ಏನಾಯಿತು? ಅಲ್ಲಿ 'ಸತ್ತ ಹಡಗುಗಳ' ಅಸ್ತಿಪಂಜರಗಳು ಚೆಲ್ಲಾಪಿಲ್ಲಿಯಾಗಿ ಹೇಗೆ ಬಿದ್ದಿವೆ? ಅದಕ್ಕೆ ಕಾರಣಗಳೇನು? ಪರಿಣಾಮಗಳೇನು? ಅಲ್ಲಿ ಈಗೇನು ನಡೆಯುತ್ತಿದೆ? ಮುಂತಾದ ಅನೇಕ ಕುತೂಹಲಕಾರಿ ಪ್ರರ್ಶನೆಗಳು ಉದ್ಭವಿಸುತ್ತವೆ.

ನ.11 ರಂದು ನಡೆದಿತ್ತೊಂದು ವಿಲಕ್ಷಣ ಘಟನೆ! ಕಾರಣ ನಿಗೂಢ!ನ.11 ರಂದು ನಡೆದಿತ್ತೊಂದು ವಿಲಕ್ಷಣ ಘಟನೆ! ಕಾರಣ ನಿಗೂಢ!

ಮಾನವನ ಮಿತಿಮೀರಿದ ಹಸ್ತಕ್ಷೇಪಗಳು ಪ್ರಕೃತಿಯ ಮೇಲೆ ಯಾವ ರೀತಿ ಪ್ರಹಾರ ಮಾಡುತ್ತದೆ ಎಂಬುದಕ್ಕೆ ಎದುರಿಗೇ ಇರುವ ನಿದರ್ಶನ ಅರಾಲ್ ಸಮುದ್ರ. ಈ ಕೌತುಕಮಯ ಸಮುದ್ರದ ಕುರಿತು ಕೃಷಿಕರಾದ ಶಿವರಾಜ್ ಉಡುಪ ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ.

ಸಾವಿರಾರು ಜನರಿಗೆ ಉದ್ಯೋಗ

ಸಾವಿರಾರು ಜನರಿಗೆ ಉದ್ಯೋಗ

ಸುಮಾರು 50000 ಟನ್ನುಗಳಷ್ಟು ಮತ್ಸ್ಯೋತ್ಪಾದನೆಯಾಗುತ್ತಿದ್ದ ಇದಕ್ಕೆ ಸಿರ್ ದರಿಯಾ ಹಾಗೂ ಅಮು ದರಿಯಾ ಎಂಬೆರಡು ನದಿಗಳು ನೀರು ಒದಗಿಸುತ್ತಿದ್ದವು. ದೊಡ್ಡ ದೊಡ್ಡ ಹಡಗುಗಳೂ ಸಂಚರಿಸುತ್ತಿದ್ದ ಇದರ ಸುತ್ತಮುತ್ತ ಮೀನುಗಾರಿಕೆಯಲ್ಲಿ ತೊಡಗಿದವರು ಸಾವಿರಾರು ಜನ.
(ಚಿತ್ರ ಕೃಪೆ: ನಾಸಾ)

ಭೂಮಿಯ ಚಂದಿರ ಒಂಟಿಯಲ್ಲ; ಆತನಿಗೆ ಇನ್ನೂ ಇಬ್ಬರು ಜತೆಗಾರರಿದ್ದಾರೆ!ಭೂಮಿಯ ಚಂದಿರ ಒಂಟಿಯಲ್ಲ; ಆತನಿಗೆ ಇನ್ನೂ ಇಬ್ಬರು ಜತೆಗಾರರಿದ್ದಾರೆ!

ದಾಳಿಯಿಟ್ಟಿತು ನೋಡಿ ಸೋವಿಯತ್ ರಷ್ಯಾ

ದಾಳಿಯಿಟ್ಟಿತು ನೋಡಿ ಸೋವಿಯತ್ ರಷ್ಯಾ

ಇವೆಲ್ಲವು ಬದಲಾಗಿದ್ದು ಮಾತ್ರ 60ರ ದಶಕದಲ್ಲಿ. ಆಗಿದ್ದ ಸೋವಿಯತ್ ಸರ್ಕಾರವು 50ರ ದಶಕದಿಂದಲೇ ಅವೆರಡೂ ನದಿಗಳ ನೀರನ್ನು ತಿರುಗಿಸಿ ವಿವಿಧ ಬೆಳೆಗಳನ್ನು ಅದರಲ್ಲೂ 'ಬಿಳಿ ಚಿನ್ನ' ಎಂದೇ ಕರೆಸಿಕೊಳ್ಳುತ್ತಿದ್ದ ಹತ್ತಿಯನ್ನು ಬೆಳೆಯಲು ಉಪಯೋಗಿಸಿಕೊಳ್ಳಲು ತೀರ್ಮಾನಿಸಿತು.

ಇದರ ಅಂಗವಾಗಿ ಕಾಲುವೆಗಳು ನಿರ್ಮಾಣವಾದವು. ಉಜ್ಬೆಕಿಸ್ತಾನದಿಂದ ಟರ್ಕಮೆನಿಸ್ತಾನದವರೆಗೂ ನಿರ್ಮಾಣವಾದ ಈ ಕಾಲುವೆಗಳ ನಿರ್ಮಾಣ ಸಮರ್ಪಕವಾಗಿರಲಿಲ್ಲ. ಸೋರುವಿಕೆ ಹಾಗೂ ಆವಿಯಾಗುವಿಕೆ ವಿಪರೀತವಾಗಿ ನದಿಗಳ ನೀರುಗಳು ವಿಪರೀತ ಬಳಕೆಯಾದವು.
(ಚಿತ್ರ ಕೃಪೆ: ನಾಸಾ)

ಏನಾಗುತ್ತಿದೆ?:ದಕ್ಷಿಣ ಕನ್ನಡ ಮಾತ್ರವಲ್ಲ, ಮಲೆನಾಡಿನ ಪಂಚ ನದಿಗಳು ಬತ್ತುತ್ತಿವೆ!ಏನಾಗುತ್ತಿದೆ?:ದಕ್ಷಿಣ ಕನ್ನಡ ಮಾತ್ರವಲ್ಲ, ಮಲೆನಾಡಿನ ಪಂಚ ನದಿಗಳು ಬತ್ತುತ್ತಿವೆ!

ಕುಸಿಯತೊಡಗಿತು ನೀರಿನ ಮಟ್ಟ

ಕುಸಿಯತೊಡಗಿತು ನೀರಿನ ಮಟ್ಟ

ಸರೋವರಕ್ಕೆ ಹೋಗುವ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಯಿತು.1964 ರಲ್ಲೇ ಇದರ ಪರಿಣಾಮವನ್ನು ರಷಿಯಾದ ತಜ್ಞರು ಊಹಿಸಿದ್ದರೂ ಸೋವಿಯತ್ ಸರ್ಕಾರದ ವಿರುದ್ಧ ಸೊಲ್ಲೆತ್ತುವ ಧೈರ್ಯ ಯಾರಿಗಿದ್ದೀತು!ಅಂತೆಯೇ ನೀರಿನ ಬಳಕೆಯೂ ಹೆಚ್ಚಿತು.

ಇದರ ಪರಿಣಾಮವಾಗಿದ್ದು ಮಾತ್ರ ಅರಾಲ್ ಸಮುದ್ರದ ಮೇಲೆ! 1960ರಿಂದ 71ರ ಹೊತ್ತಿಗೆ ಅರಾಲ್ ನೀರಿನ ಮಟ್ಟ ವರ್ಷಕ್ಕೆ 20 ಸೆಂ.ಮೀ ಗಳಷ್ಟು ವೇಗವಾಗಿ ಕುಸಿಯಿತು. 1980ರ ಹೊತ್ತಿಗೆ ಈ ಕುಸಿತದ ಪ್ರಮಾಣ ವರ್ಷಕ್ಕೆ 60 ಸೆಂ.ಮೀ ವೇಗ ಪಡೆಯಿತು!! ಇದೆಲ್ಲದರಿಂದ 1998ರ ವೇಳೆಗೆ ಸರೋವರದ ಮೇಲ್ಮೈ ವಿಸ್ತೀರ್ಣ 60% ಕ್ಕೆ ಇಳಿದು ಪ್ರಪಂಚದ 4 ನೇ ಅತಿದೊಡ್ಡ ಸರೋವರವಾಗಿದ್ದ ಅರಾಲ್ 8 ನೇ ಸ್ಥಾನಕ್ಕಿಳಿದುಹೋಯಿತು!
(ಚಿತ್ರ ಕೃಪೆ: ನಾಸಾ)

ಪ್ರವಾಹ ಸೃಷ್ಟಿಸಿದ್ದ ನೇತ್ರಾವತಿ, ಕುಮಾರಧಾರ ಈಗ ಬತ್ತಲು ಕಾರಣ ಇದೇನಾ!ಪ್ರವಾಹ ಸೃಷ್ಟಿಸಿದ್ದ ನೇತ್ರಾವತಿ, ಕುಮಾರಧಾರ ಈಗ ಬತ್ತಲು ಕಾರಣ ಇದೇನಾ!

ಸಮುದ್ರವೇ ಮರುಭೂಮಿಯಾಯಿತು!

ಸಮುದ್ರವೇ ಮರುಭೂಮಿಯಾಯಿತು!

ನೀರಿನ ಪ್ರಮಾಣ ಕಡಿಮೆಯಾದಂತೆ ಕ್ಷಾರದ ಪ್ರಮಾಣ ಜಾಸ್ತಿಯಾಗಿ ಒಂದಾಗಿದ್ದ ಸರೋವರ ನಾಲ್ಕು ಭಾಗಗಳಾಗಿ ಒಡೆದವು. ಉತ್ತರ ಅರಾಲ್, ಪಶ್ಚಿಮ ಹಾಗೂ ಪೂರ್ವ ಅರಾಲ್ ಮತ್ತು ಚಿಕ್ಕದೊಂದು ಸರೋವರವಾಗಿ ಭಾಗವಾಗಿದ್ದ ಇವುಗಳಲ್ಲಿ ಪೂರ್ವದ ಸರೋವರ 2009ರ ಹೊತ್ತಿಗೆ ಸಂಪೂರ್ಣ ಮರೆಯಾದರೆ ಪಶ್ಚಿಮದ್ದು ಚಿಕ್ಕದೊಂದು ಪಟ್ಟಿಯಂತಾಗಿಹೋಯಿತು. ಸಮುದ್ರ ಮರುಭೂಮಿಯಾಯಿತು!!

2014ರ ಹೊತ್ತಿಗೆ ಸಮುದ್ರದ ಪೂರ್ವಭಾಗ ಸಂಪೂರ್ಣವಾಗಿ ಬತ್ತಿಹೋಗಿ "ಅರಾಲ್ಕುಮ್ ಮರುಭೂಮಿ" ಎಂಬ 45000 ಚ.ಕಿ.ಮೀ ವಿಸ್ತೀರ್ಣದ ಹೊಚ್ಚಹೊಸ ಮರುಭೂಮಿಯೊಂದರ ಉಗಮಕ್ಕೆ ನಾಂದಿ ಹಾಡಿತು. ಜಾಗತಿಕ ಇತಿಹಾಸದಲ್ಲಿ ಮಾನವನ ನೇರ ಹಸ್ತಕ್ಷೇಪದಿಂದ ಉದ್ಭವಿಸಿದ ಅತಿನವೀನ ಮರುಭೂಮಿಯೆಂಬ ಕುಖ್ಯಾತಿ ಇದರದು!!
(ಚಿತ್ರ ಕೃಪೆ: ವಿಕಿಮೀಡಿಯಾ ಕಾಮನ್ಸ್)

ಅನಾಹುತ ಒಂದೆರೆಡಲ್ಲ

ಅನಾಹುತ ಒಂದೆರೆಡಲ್ಲ

ಇದರಿಂದಾದ ದುಷ್ಪರಿಣಾಮಗಳು ಒಂದೆರಡಲ್ಲ. ಒಂದು ಕಾಲದಲ್ಲಿ ಸಮೃದ್ಧವಾಗಿ ಮೀನುಗಾರಿಕೆ ನಡೆಯುತ್ತಿದ್ದ ಪ್ರದೇಶ ಮರುಭೂಮಿಯಾಗಿತ್ತು. ಬತ್ತಿದ ಸಮುದ್ರದ ಜಾಗದಲ್ಲಿ ಹಡಗುಗಳು ಶವಗಳಂತೆ ಬಿದ್ದುಕೊಂಡವು! ಸಾವಿರಾರು ಜನ ನಿರುದ್ಯೋಗಿಗಳಾದರು. ಹೆಚ್ಚಿದ ಕ್ಷಾರೀಯ ಪ್ರಮಾಣದಿಂದ ಸಸ್ಯಪ್ರಬೇಧಗಳು ನಾಶವಾದವು.

ಆ ಪ್ರದೇಶದಲ್ಲಿ ನಡೆಸಿದ ಆಯುಧಪರೀಕ್ಷೆಗಳ ತ್ಯಾಜ್ಯ, ಸಮುದ್ರದ ಬುಡದಲ್ಲಿದ್ದ ಕಾರ್ಖಾನೆಗಳ ತ್ಯಾಜ್ಯ, ರಾಸಾಯನಿಕ ಗೊಬ್ಬರಗಳ, ಕೀಟನಾಶಕಗಳ ತ್ಯಾಜ್ಯಗಳೆಲ್ಲ ಬುಡದ ಉಪ್ಪು ಮಣ್ಣಿನೊಡನೆ ಬೆರೆತು ಒಣಗಿದವು.

ಆ ಪ್ರದೇಶದಲ್ಲಿ ಪೂರ್ವ ಪಶ್ಚಿಮವಾಗಿ ಬೀಸುವ ಪ್ರಬಲ ಗಾಳಿಯು ಈ ದೂಳನ್ನು ಸುತ್ತಲಿನ ಜನವಸತಿಗಳ ಮೇಲೆಲ್ಲ ಹರಡಿತು! ( ಈ ಗಾಳಿಯು ದೂಳನ್ನು ಅಂಟಾರ್ಟಿಕಾದವರೆಗೂ ಕೊಂಡೊಯ್ದಿದೆಯಂತೆ! ಅಲ್ಲಿನ ಪೆಂಗ್ವಿನ್ನುಗಳಲ್ಲಿ, ನಾರ್ವೆಯ ಕಾಡುಗಳಲ್ಲೂ ಇದರ ದೂಳಿನ ಕಣ ಸಿಕ್ಕಿದೆಯೆಂದರೆ ಇದರ ಗಂಭೀರತೆ ಮನದಟ್ಟಾಗುತ್ತದೆ)
(ಚಿತ್ರ ಕೃಪೆ: ನಾಸಾ)

ಆಯುಷ್ಯದ ಪ್ರಮಾಣ ಇಳಿಕೆ

ಆಯುಷ್ಯದ ಪ್ರಮಾಣ ಇಳಿಕೆ

ಇದರಿಂದಾಗಿ ಜಲಪ್ರದೂಷಣೆ, ಕುಡಿಯುವ ನೀರಿನ ಅಲಭ್ಯತೆ, ಆರೋಗ್ಯ ಸಮಸ್ಯೆ, ಕ್ಯಾನ್ಸರ್ ಹಾಗೂ ಶ್ವಾಸಸಂಬಂಧಿ ರೋಗಗಳು ಗಣನೀಯವಾಗಿ ಹೆಚ್ಚಾದವು. ನವಜಾತ ಶಿಶುಗಳ ಮರಣ ಜಾಸ್ತಿಯಾಗಿ ಸರಾಸರಿ ಆಯುಷ್ಯ ಪ್ರಮಾಣ 65ರಿಂದ 51 ಕ್ಕೆ ಇಳಿಯಿತು. ನೋಡ ನೋಡುತ್ತಲೆ ಸಮೃದ್ಧವಾಗಿದ್ದ ಸಮುದ್ರದಂತ ಸರೋವರವೊಂದು ಮುಕ್ಕಾಲುಭಾಗ ಮರುಭೂಮಿಯಾಗಿಹೋಯಿತು!!
(ಚಿತ್ರ ಕೃಪೆ: ಬ್ರೋಕನ್ ವಾಚ್ ಟ್ವಿಟ್ಟರ್ ಖಾತೆ)

ಪಂಚ ರಾಷ್ಟ್ರ ಸೂತ್ರ

ತಮ್ಮ ಕಣ್ಣೆದುರೇ ಇಂಥ ದುರಂತ ನಡೆದುದನ್ನು ನೋಡಿದ ವಿಜ್ಞಾನಿಗಳು, ಸರ್ಕಾರಗಳು ಉತ್ತರ ಆರಾಲ್ ಸರೋವರವನ್ನಾದರೂ ಉಳಿಸಿಕೊಳ್ಳಲು ಪ್ರಯತ್ನಿಸಿದರು. ಇದರ ಸುತ್ತಲಿನ ರಾಷ್ಟ್ರಗಳಾದ ಕಜಾಕ್, ಉಜ್ಬೆಕ್, ತಾಜಿಕ್, ಕಿರ್ಗಿಜ್, ಟರ್ಕಮೆನಿಸ್ತಾನ್ ಈ 5 ರಾಷ್ಟ್ರಗಳು 90ರ ದಶಕದಲ್ಲಿ ಯೋಜನೆಯೊಂದನ್ನು ರೂಪಿಸಿದವು.

Aral Sea Basin Program ಎಂಬ ಹೆಸರಿನ ಈ ಯೋಜನೆಯ ಆರಂಭಿಕ ಹಂತದಲ್ಲಿ ಸರೋವರದ ಸುತ್ತಲಿನ ಪ್ರದೇಶಗಳ ಅಭಿವೃದ್ಧಿಯತ್ತ ಗಮನ ಹರಿಸಲಾಯಿತು. ಆದರೆ ಸ್ಥಳೀಯರ ಸಮಸ್ಯೆಗಳಿಗೆ ಗಮನ ಕೊಡದಿದ್ದುದರಿಂದ ನಂತರದಲ್ಲಿ ಇದಕ್ಕೆ ಸ್ವಲ್ಪ ಹಿನ್ನಡೆಯಾದರೂ ಉಳಿದ ದಿನಗಳಲ್ಲಿ ಇದನ್ನು ಸಮರ್ಪಕವಾಗಿ ಜಾರಿ ಮಾಡಲು ಪ್ರಯತ್ನಗಳಾದವು.

ಮೂಡಿದ ಭರವಸೆ

ಮೂಡಿದ ಭರವಸೆ

ಇದರ ಫಲವಾಗಿ ಉತ್ತರ ಹಾಗೂ ದಕ್ಷಿಣ ಸರೋವರಗಳ ಮಧ್ಯೆ ತಡೆಗೋಡೆಯೊಂದು ನಿರ್ಮಾಣವಾಗಿ ಅದರಲ್ಲಿ ನೀರು ನಿಲ್ಲುವ ಪ್ರಮಾಣ ಹೆಚ್ಚಿಸಲಾಯಿತು. ಇವೆಲ್ಲ ಪ್ರಯತ್ನಗಳ ಫಲವಾಗಿ ತಜ್ಞರೇ ಬೆರಗಾಗುವಂತೆ ಉತ್ತರ ಅರಾಲಿನ ನೀರಿನ ಮಟ್ಟ 2006 ರಲ್ಲಿ ಸ್ವಲ್ಪ ಜಾಸ್ತಿಯಾಯಿತು.

98 ಅಡಿಗಳಿದ್ದ ನೀರಿನಾಳ 2008ರಲ್ಲಿ 138 ಅಡಿಗಳಾಯಿತು. ಕ್ಷಾರದ ಪ್ರಮಾಣವೂ ತಗ್ಗಿ ಮತ್ಸ್ಯ ಸಂತತಿ ಅಭಿವೃದ್ಧಿಯಾದವು. ಈಗಲೂ ಇದರ ಅಂಗವಾಗಿ ವಿವಿಧ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆಯೆಂಬುದೇ ಸಮಾಧಾನದ ಸಂಗತಿ. ನೈಸರ್ಗಿಕ ಸಂಪನ್ಮೂಲಗಳ ಮಿತಿಮೀರಿದ ಹಾಗೂ ಅಸಮರ್ಪಕ ಬಳಕೆಗಳಿಂದ ಅದರಲ್ಲೂ ನದಿನೀರಿನ ಅಸಮರ್ಪಕ ಬಳಕೆ, ಆಣೆಕಟ್ಟುಗಳಿಂದಾಗುವ ದುಷ್ಪರಿಣಾಮಕ್ಕೆ ಮರುಭೂಮಿಯಾಗಿ ಮಾರ್ಪಟ್ಟ ಅರಾಲ್ ಸಮುದ್ರ ಇತ್ತೀಚಿನ ಉದಾಹರಣೆಯಾಗಿದೆ.

(ಚಿತ್ರ ಕೃಪೆ: ಬ್ರೋಕನ್ ವಾಚ್ ಟ್ವಿಟ್ಟರ್ ಖಾತೆ)

English summary
Soviet Union's water diversion project caused the draining of life beat of Aral sea. Agriculturist and writer Shivaraj Udupa explained how the Aral sea became a desert, how it effected on the world environment, and livlihood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X