• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಠಾಕ್ರೆ ಕುಟುಂಬದ ಮೊದಲ ಸಿ.ಎಂ ಉದ್ಧವ್ ವ್ಯಕ್ತಿಚಿತ್ರ

|

ಒಂದೂ ಚುನಾವಣೆ ಎದುರಿಸಲಿಲ್ಲ, ಸರ್ಕಾರದ ಯಾವುದೇ ಅಂಗಕ್ಕೂ ಆಯ್ಕೆಯಾಗಲಿಲ್ಲ. ಆದರೂ ಮಹಾರಾಷ್ಟ್ರ ಎಂಬ ವಿಶಾಲ ರಾಜ್ಯದ ಆಡಳಿತ ನಡೆಸುವ ಅಧಿಕಾರ ಒಲಿಸಿಕೊಂಡವರು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ. ಹಾಗೆ ನೋಡಿದರೆ ಠಾಕ್ರೆ ಕುಟುಂಬದ ಯಾರೊಬ್ಬರೂ ಚುನಾವಣೆಯಲ್ಲಿ ಸ್ಪರ್ಧಿಸುವ ಗೋಜಿಗೆ ಹೋಗಿರಲಿಲ್ಲ. ಈ ಬಾರಿಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಮಗ ಆದಿತ್ಯ ಠಾಕ್ರೆ ಸ್ಪರ್ಧಿಸಿ ಜಯಗಳಿಸಿದ್ದೇ ಮೊದಲು. ಆದರೂ ಮುಖ್ಯಮಂತ್ರಿ ಹುದ್ದೆಗೆ ಏರುವ ಅವಕಾಶ ಉದ್ಧವ್ ಠಾಕ್ರೆಗೆ ಒಲಿದಿದೆ.

ಈ ಹಿಂದೆಯೂ ಚುನಾವಣಾ ಪ್ರಕ್ರಿಯೆ ಮೂಲಕ ಆಯ್ಕೆಯಾಗದಿದ್ದರೂ ಶಿವಸೇನಾ ಮುಖಂಡರು ಸರ್ಕಾರದ ಭಾಗವಾಗಿ ಆಡಳಿತ ಪಕ್ಷದಲ್ಲಿ ಅಥವಾ ವಿರೋಧಪಕ್ಷದಲ್ಲಿ ಸಕ್ರಿಯರಾಗಿರುತ್ತಿದ್ದರು. ಇದೇ ಮೊದಲ ಸಲ ಠಾಕ್ರೆ ಕುಟುಂಬದ ಹೆಸರು ಮುಖ್ಯಮಂತ್ರಿ ಸ್ಥಾನದಲ್ಲಿ ಕೇಳಿಸಿದೆ. ಇದು ಶಿವಸೇನಾ ಸಂಸ್ಥಾಪಕ ಬಾಳ ಸಾಹೇಬ್ ಠಾಕ್ರೆ ಅವರ ಕನಸು ಎಂದು ಉದ್ಧವ್ ಹೇಳಿಕೊಂಡಿದ್ದಾರೆ.

ಸೈದ್ಧಾಂತಿಕ ವಿರೋಧಿಗಳಾದ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜತೆಗಿನ ಮೈತ್ರಿ ಮೂಲಕ ಅಧಿಕಾರ ಹಿಡಿದು ಉದ್ಧವ್ ಮುಖ್ಯಮಂತ್ರಿ ಗಾದಿಗೇರಿದ್ದಾರೆ. ಇದು ಬಾಳ ಸಾಹೇಬ್ ಠಾಕ್ರೆ ಅವರ ನಿಲುವಿಗೆ ವಿರುದ್ಧವಾಗಿದೆಯೋ ಅಥವಾ ಪೂರಕವಾಗಿದೆಯೋ ಎಂಬ ಚರ್ಚೆಗಳು ನಡೆಯುತ್ತಿದೆ. ತಂದೆಯ ಕಾಲದಿಂದಲೂ ಇದ್ದ ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡು ಸರ್ಕಾರ ರಚಿಸಿರುವ ಉದ್ಧವ್, ಕುಟುಂಬದ ಇದುವರೆಗಿನ ನಡೆಯ ದಿಕ್ಕನ್ನು ಬದಲಿಸುವ ಸೂಚನೆ ನೀಡಿದ್ದಾರೆ.

ಮತ್ತೆ 'ಮಹಾ' ಸಿಎಂ ಹುದ್ದೆಗೇರಿದ ದೇವೇಂದ್ರ ಫಡ್ನವಿಸ್ ವ್ಯಕ್ತಿಚಿತ್ರ

ಶಿವಸೇನಾದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ಅದರ ಮುಖ್ಯಸ್ಥರಾಗಿ ಬೆಳೆದ ಉದ್ಧವ್, ನ.27ರಿಂದ ನೈಜ ರಾಜಕೀಯ ಬದುಕಿಗೆ ಕಾಲಿಟ್ಟಿದ್ದಾರೆ. ಇಲ್ಲಿಯವರೆಗೆ ಅವರು ಮಾಡುತ್ತಿದ್ದದ್ದು ರಾಜಕೀಯದ ಸೂತ್ರಧಾರನ ಕೆಲಸ.

ಮಿತಭಾಷಿ, ಅಂತರ್ಮುಖಿ

ಮಿತಭಾಷಿ, ಅಂತರ್ಮುಖಿ

ಆರಂಭದ ಉದ್ಧವ್ ವ್ಯಕ್ತಿತ್ವವನ್ನು ಕಂಡವರು, ರಾಜಕೀಯದಲ್ಲಿ ಬೆಳೆದು ಇಡೀ ಮಹಾರಾಷ್ಟ್ರ ರಾಜಕೀಯವನ್ನೇ ನಿಯಂತ್ರಿಸುವ ಮಟ್ಟಕ್ಕೆ ಏರುತ್ತಾರೆ ಎಂದು ಊಹಿಸಲೂ ಸಾಧ್ಯವಿರಲಿಲ್ಲ. ಏಕೆಂದರೆ ಉದ್ಧವ್ ಸಂಕೋಚದ, ಮಿದು ಭಾಷೆಯ ಮತ್ತು ಅಂತರ್ಮುಖಿ ವ್ಯಕ್ತಿತ್ವ ಎಂದೇ ಹೇಳಲಾಗುತ್ತಿತ್ತು. ಅವರ ಜತೆಗೇ ಬೆಳೆದ ಚಿಕ್ಕಪ್ಪನ ಮಗ ರಾಜ್ ಠಾಕ್ರೆ ಅವರದು ವಿರುದ್ಧದ ಸ್ವಭಾವ.

ಚಿಕ್ಕಪ್ಪನ ಪ್ರೀತಿಯ 'ಡಿಂಗ'

ಚಿಕ್ಕಪ್ಪನ ಪ್ರೀತಿಯ 'ಡಿಂಗ'

ಉದ್ಧವ್ ಠಾಕ್ರೆಯನ್ನು ಅವರ ಚಿಕ್ಕಪ್ಪ (ಬಾಳ ಠಾಕ್ರೆ ತಮ್ಮ) ಶ್ರೀಕಾಂತ್ ಠಾಕ್ರೆ ಕರೆಯುತ್ತಿದ್ದದ್ದು 'ಡಿಂಗ' ಎಂದು. ತಂದೆ ಬಾಳ ಠಾಕ್ರೆ, ಚಿಕ್ಕಪ್ಪ ಶ್ರೀಕಾಂತ್ ಠಾಕ್ರೆ ಮತ್ತು ಚಿಕ್ಕಪ್ಪನ ಮಗ ರಾಜ್ ಠಾಕ್ರೆ ಅವರಂತೆಯೇ ಉದ್ಧವ್ ಕೂಡ ವ್ಯಂಗ್ಯಚಿತ್ರಕಾರ. ಚಿಕ್ಕಪ್ಪನ ಒಡನಾಟದಲ್ಲಿಯೇ ಹೆಚ್ಚು ಬೆಳೆದ ಉದ್ಧವ್, ಬಳಿಕ ಅವರ ಪ್ರಭಾವದಿಂದಲೇ ಛಾಯಾಗ್ರಹಣದತ್ತ ಹೊರಳಿದರು. ಒಂಬತ್ತು ವರ್ಷದ ಮಗುವಾಗಿದ್ದಾಗ ತೀವ್ರ ಕಾಯಿಲೆಗೆ ಒಳಗಾಗಿದ್ದ ಉದ್ಧವ್ ಅವರನ್ನು ತಮ್ಮ ಸ್ವಂತ ಮಗನಿಗಿಂತ ಹೆಚ್ಚಾಗಿ ನೋಡಿಕೊಂಡು ಆರೈಕೆ ಮಾಡಿದವರು ಶ್ರೀಕಾಂತ್ ಠಾಕ್ರೆ.

ಶಿವಸೇನಾ ಮುಖ್ಯಸ್ಥರು ಎಂದಷ್ಟೇ ಗುರುತಿಸಿಕೊಳ್ಳುತ್ತಿದ್ದ ಕುಟುಂಬದವರೊಬ್ಬರು ಮುಖ್ಯಮಂತ್ರಿ ಹುದ್ದೆಗೆ ಏರಿದ್ದು, ಅದರ ಸುದೀರ್ಘ ಇತಿಹಾಸ ಗಮನಿಸಿದಾಗ ವಿಶೇಷ ಎನಿಸುತ್ತದೆ. 1966ರಲ್ಲಿ ಬಾಳ ಠಾಕ್ರೆ ಹುಟ್ಟು ಹಾಕಿದ ಶಿವಸೇನಾ ರಾಜ್ಯ ಮತ್ತು ಕೇಂದ್ರಗಳಲ್ಲಿ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೂ ತನ್ನದೇ ಪಕ್ಷದ ಮುಖ್ಯಸ್ಥನನ್ನು ಮುಖ್ಯಮಂತ್ರಿಯನ್ನಾಗಿ ಅಥವಾ ಸಚಿವನನ್ನಾಗಿ ಕಾಣುವ ಅವಕಾಶ ಪಡೆದಿರಲಿಲ್ಲ. ಹೀಗಾಗಿ ಉದ್ಧವ್ ಅವರು ಮಹಾರಾಷ್ಟ್ರ ರಾಜಕಾರಣದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮತ್ತೆ ಡಿಸಿಎಂ ಸ್ಥಾನ ಪಡೆದ ಅಜಿತ್ ಪವಾರ್ ವ್ಯಕ್ತಿಚಿತ್ರ

ಚುನಾವಣಾ ಪ್ರಚಾರದಲ್ಲಿ ಭಾಗಿ

ಚುನಾವಣಾ ಪ್ರಚಾರದಲ್ಲಿ ಭಾಗಿ

1985ರಲ್ಲಿ ಶಿವಸೇನಾ ಬೃಹನ್ ಮುಂಬೈ ಮಹಾನಗರ ಪಾಲಿಕೆಯಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿತು. ಆ ಚುನಾವಣೆಯ ಪ್ರಚಾರದಲ್ಲಿ 25 ವರ್ಷದ ಉದ್ಧವ್ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಪ್ರತಿಷ್ಠಿತ ಜೆಜೆ ಅನ್ವಯಿಕ ಕಲಾ ಸಂಸ್ಥೆಯಿಂದ ಪದವಿ ಪಡೆದ ಅವರು ಸ್ನೇಹಿತರ ಜತೆಗೂಡಿ ಜಾಹೀರಾತು ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದರು. 1989ರಲ್ಲಿ ಶಿವಸೇನಾ ತನ್ನ ಮುಖವಾಣಿಯಾದ 'ಸಾಮ್ನಾ' ಆರಂಭಿಸಿದಾಗ ಅದರಲ್ಲಿ ಉದ್ಧವ್ ಪ್ರಮುಖ ಪಾತ್ರ ವಹಿಸಿದರು. ನಂತರ ಅದರ ಸಂಪಾದಕರೂ ಆದರು.

ರಾಜ್ ಠಾಕ್ರೆ ಎಂಬ ಬೆಂಕಿ ಚೆಂಡು

ರಾಜ್ ಠಾಕ್ರೆ ಎಂಬ ಬೆಂಕಿ ಚೆಂಡು

1988ರಲ್ಲಿ ರಾಜ್ ಠಾಕ್ರೆ ಸೇನಾದ ಯುವ ಘಟಕ 'ಭಾರತೀಯ ವಿದ್ಯಾರ್ಥಿ ಸೇನಾದ (ಬಿವಿಎಸ್) ಅಧ್ಯಕ್ಷರಾಗುವ ಮೂಲಕ ರಾಜಕೀಯಕ್ಕೆ ಕಾಲಿಟ್ಟರು. ಆಗ ಅವರಿಗೆ ಕೇವಲ 20 ವರ್ಷ. ಆಗಲೇ ಅವರನ್ನು ಬಾಳ ಠಾಕ್ರೆಯವರ ಉತ್ತರಾಧಿಕಾರಿ ಎಂದು ಬಿಂಬಿಸಲಾಗಿತ್ತು. 1990ರ ಏಪ್ರಿಲ್‌ನಲ್ಲಿ ಉದ್ಧವ್ ಸೇನಾದ ಶಾಖೆಯೊಂದರ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಔಪಚಾರಿಕ ರಾಜಕೀಯ ಪ್ರವೇಶ ಮಾಡಿದರು.

ಆದರೆ ಉತ್ಸಾಹ, ಹುಮ್ಮಸ್ಸಿನ ಜತೆಗೆ ಬೆಂಕಿ ಚೆಂಡು ಎಂದು ಗುರುತಿಸಿಕೊಂಡಿದ್ದ ರಾಜ್ ಬಗ್ಗೆ ಸೇನಾದ ಒಂದು ವರ್ಗ ಒಲವು ಹೊಂದಿರಲಿಲ್ಲ. ಅವರು ಮಿತಭಾಷಿ ಉದ್ಧವ್‌ರನ್ನು ಪರ್ಯಾಯವಾಗಿ ಬೆಳೆಸಲು ಮುಂದಾದರು. 1993ರಲ್ಲಿ ರಾಜ್ ಇಡೀ ಮಹಾರಾಷ್ಟ್ರದಲ್ಲಿ ಸಂಚರಿಸಿ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಸಂಬಂಧ ಬೃಹತ್ ಪ್ರತಿಭಟನಾ ಮೋರ್ಚಾ ಆಯೋಜಿಸಿದರು. ಆದರೆ Rallyಯ ಹಿಂದಿನ ದಿನ ಸೇನಾದ ಅಧಿಕಾರದಲ್ಲಿದ್ದ ನಾಯಕರು ಅಲ್ಲಿ ಉದ್ಧವ್ ಭಾಷಣಕ್ಕೂ ಅವಕಾಶ ನೀಡಬೇಕು ಎಂದು ರಾಜ್‌ಗೆ ಸೂಚಿಸಿದರು. ಸತತ ಪರಿಶ್ರಮವಹಿಸಿ ಬೃಹತ್ ಸಂಘಟನೆ ಮಾಡಿದ್ದ ರಾಜ್, ತನ್ನ ಶ್ರಮದ ಶ್ರೇಯಸ್ಸನ್ನು 'ದಾದು'ಗೆ (ಉದ್ಧವ್ ಠಾಕ್ರೆಯನ್ನು ರಾಜ್ ಕರೆಯುತ್ತಿದ್ದದ್ದು) ನೀಡಬೇಕಾಗಿದೆ ಎಂಬ ಬೇಸರ ಮೂಡಿಸಿತು.

ಸಾಲು ಸಾಲು ಸಾವು ಮತ್ತು ಉದ್ಧವ್ ಅಧಿಕಾರ

ಸಾಲು ಸಾಲು ಸಾವು ಮತ್ತು ಉದ್ಧವ್ ಅಧಿಕಾರ

ಬಾಳ ಠಾಕ್ರೆ ಅವರ ಪತ್ನಿ ಮೀನಾ ತಾಯ್ 1995ರಲ್ಲಿ ಮೃತಪಟ್ಟರೆ, ಅವರ ಹಿರಿಮಗ ಬಿಂದುಮಾಧವ್ ಮರು ವರ್ಷ ಕಾರು ಅಪಘಾತದಲ್ಲಿ ನಿಧನರಾದರು. ಎರಡನೆಯ ಮಗ ಜೈದೇವರ್ ಕೂಡ ಮರಣ ಹೊಂದಿದರು. ಇದರಿಂದ ಬಾಳ ಠಾಕ್ರೆ ಅವರು ಉದ್ಧವ್‌ ಅವರನ್ನು ಅವಲಂಬಿಸುವುದು ಹೆಚ್ಚಾಯಿತು. ನಿಧಾನವಾಗಿ ಉದ್ಧವ್ ಮತ್ತು ಅವರ ಪತ್ನಿ ರಶ್ಮಿ ಶಿವಸೇನಾದ ಮೇಲೆ ಹಿಡಿತ ಸಾಧಿಸಿದರು. 2002ರಲ್ಲಿ ಬಿಎಂಸಿ ಚುನಾವಣೆಯಲ್ಲಿ ಉದ್ಧವ್ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಶಿವಸೇನಾ ಅಧಿಕಾರಕ್ಕೆ ಬಂದಿತು. 2003ರಲ್ಲಿ ಶಿವಸೇನಾದ ಮೊದಲ ಕಾರ್ಯಾಧ್ಯಕ್ಷರಾಗಿ ಉದ್ಧವ್ ನೇಮಕವಾದರು. 2003ರಲ್ಲಿ ಶ್ರೀಕಾಂತ್ ಠಾಕ್ರೆ ನಿಧನದ ಬಳಿಕ ಬಾಂಧವ್ಯ ಸಂಪೂರ್ಣವಾಗಿ ಕಡಿತಗೊಂಡಿತು.

ಫಡ್ನವೀಸ್, ಬಿಎಸ್‌ವೈ; ಅಕ್ಕಪಕ್ಕ ರಾಜ್ಯಗಳ ನಾಯಕರ ಕಥೆ!

ಸೇನಾದಿಂದ ಹೊರಬಂದ ರಾಜ್ ಠಾಕ್ರೆ

ಸೇನಾದಿಂದ ಹೊರಬಂದ ರಾಜ್ ಠಾಕ್ರೆ

ಶಿವಸೇನಾದಲ್ಲಿ ಎರಡು ಬಣಗಳ ನಡುವೆ ಅಸಮಾಧಾನದ ಕಿಡಿ ಹೊತ್ತಿಕೊಂಡಿತು. 1995ರಿಂದಲೇ ಬಣಗಳಲ್ಲಿ ಭಿನ್ನಾಭಿಪ್ರಾಯ ಬೆಳೆಯುತ್ತಲೇ ಹೋಗಿತ್ತು. ಕೊನೆಗೆ ಅದು ಸ್ಫೋಟಗೊಂಡು 2006ರಲ್ಲಿ ರಾಜ್ ಶಿವಸೇನಾದಿಂದ ಹೊರಬಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಸ್ಥಾಪಿಸಿದರು.

ಅದಕ್ಕೂ ಮೊದಲು ಶಿವಸೇನಾ-ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ 1996ರ ಜುಲೈನಲ್ಲಿ ಮುಂಬೈನ ನಿವಾಸಿ ರಮೇಶ್ ಕಿಣಿ ಎಂಬುವವರ ಸಾವಿನ ಹಿಂದೆ ರಾಜ್ ಮತ್ತು ಅವರ ಬೆಂಬಲಿಗರ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತು. ಆಗ ರಾಜ್ ಸಿಬಿಐ ವಿಚಾರಣೆಗೂ ಒಳಗಾದರು. ಇದು ಅವರಿಗೆ ಹಿನ್ನಡೆಯುಂಟುಮಾಡಿತ್ತು.

ಪ್ರಮುಖರನ್ನು ಹೊರಗಟ್ಟಿದ ಉದ್ಧವ್

ಪ್ರಮುಖರನ್ನು ಹೊರಗಟ್ಟಿದ ಉದ್ಧವ್

ಶಿವಸೇನಾದ ಮೇಲೆ ನಿಯಂತ್ರಣ ಸಾಧಿಸಿದ ಉದ್ಧವ್, ತಮ್ಮ ಪ್ರತಿಸ್ಪರ್ಧಿಗಳಾದ ರಾಜ್, ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಹಾಗೂ ಅವರ ಅತ್ತಿಗೆ (ಜೈದೇವ್ ಅವರ ಮಾಜಿ ಪತ್ನಿ ಸ್ಮಿತಾ) ಅವರನ್ನು ಹಂತಹಂತವಾಗಿ ಪಕ್ಕಕ್ಕೆ ತಳ್ಳಿ ಬೆಳೆಯತೊಡಗಿದರು. ಉದ್ಧವ್‌ರನ್ನು ಸಾರ್ವಜನಿಕವಾಗಿ ಟೀಕಿಸಿದ ರಾಣೆ ಅವರನ್ನು 2005ರಲ್ಲಿ ಉಚ್ಚಾಟನೆ ಮಾಡಲಾಯಿತು. ರಾಜ್ ಠಾಕ್ರೆ ಎಂಎನ್‌ಎಸ್‌ ನಿರ್ಮಿಸಿದರು.

2013ರಲ್ಲಿ ಬಾಳ ಠಾಕ್ರೆ ನಿಧನದ ಬಳಿಕ ಶಿವಸೇನಾ ಸಂಪೂರ್ಣವಾಗಿ ಉದ್ಧವ್ ಠಾಕ್ರೆ ಹಿಡಿತಕ್ಕೆ ಸಿಕ್ಕಿತು. ಈಗ ಶಿವಸೇನಾದಲ್ಲಿ ಉದ್ಧವ್ ಅವರಿಗೆ ಪರ್ಯಾಯವಾದ ನಾಯಕರಿಲ್ಲ. ತಮ್ಮ ಉತ್ತರಾಧಿಕಾರಿಯನ್ನಾಗಿ ಅವರು ಮಗ ಆದಿತ್ಯ ಠಾಕ್ರೆಯನ್ನು ಬೆಳೆಸುತ್ತಿದ್ದಾರೆ. ಅವರನ್ನೇ ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿ ಎಂದೂ ಬಿಂಬಿಸಿದ್ದರು.

ರಾಜಕೀಯದಾಚೆಗೆ ಉದ್ಧವ್

ರಾಜಕೀಯದಾಚೆಗೆ ಉದ್ಧವ್

ಛಾಯಾಗ್ರಾಹಕ ಮತ್ತು ಬರಹಗಾರರಾಗಿ ಉದ್ಧವ್ ಕಲಾ ಲೋಕದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. 2006ರಿಂದ 'ಸಾಮ್ನಾ'ದ ಸಂಪಾದಕೀಯ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ತಮ್ಮ ಫೋಟೊಗ್ರಫಿಗಳನ್ನು ಸೇರಿಸಿ ಪುಸ್ತಕಗಳನ್ನು ಸಹ ಪ್ರಕಟಿಸಿದ್ದಾರೆ. ವಿದೇಶದಲ್ಲಿ ಓದುತ್ತಿರುವ ಅವರ ಎರಡನೆಯ ಮಗ ತೇಜಸ್ ಇದುವರೆಗೂ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಂಡಿಲ್ಲ. ಬಾಳ ಠಾಕ್ರೆ ಅವರ ಪುತ್ರ ವ್ಯಾಮೋಹಕ್ಕೆ ರಾಜಕೀಯ ಬದುಕು ನಾಶವಾಗುತ್ತಿದೆ ಎಂದು ಆರೋಪಿಸಿದ್ದ ನಾರಾಯಣ ರಾಣೆ ಅವರ ಹೇಳಿಕೆಯಂತೆ ಈಗ ಉದ್ಧವ್ ತಮ್ಮ ಮಗ ಆದಿತ್ಯರನ್ನು ಕೂಡ ಬೆಳೆಸುತ್ತಿದ್ದಾರೆ.

ಉದ್ಧವ್ ಠಾಕ್ರೆ ವೈಯಕ್ತಿಕ ವಿವರ

ಉದ್ಧವ್ ಠಾಕ್ರೆ ವೈಯಕ್ತಿಕ ವಿವರ

ಜನನ: 27, ಜುಲೈ 1960 (ಮುಂಬೈ)

ತಂದೆ ತಾಯಿ: ಬಾಳ ಠಾಕ್ರೆ ಮತ್ತು ಮೀನಾತಾಯ್ ಅವರ ಮೂರನೇ ಮಗ

ಕುಟುಂಬ: ರಶ್ಮಿ ಠಾಕ್ರೆ (ಪತ್ನಿ). ಆದಿತ್ಯ ಠಾಕ್ರೆ, ತೇಜಸ್ ಠಾಕ್ರೆ (ಮಕ್ಕಳು)

ವಿದ್ಯಾಭ್ಯಾಸ: ಬಾಲಮೋಹನ ವಿದ್ಯಾಮಂದಿರ, ಸರ್ ಜೆಜೆ ಇನ್‌ಸ್ಟಿಟ್ಯೂಟ್ ಆಫ್ ಅಪ್ಲೈಡ್ ಆರ್ಟ್‌ನಲ್ಲಿ ಪದವಿ

ಹುದ್ದೆ: ಮಹಾರಾಷ್ಟ್ರ ಮುಖ್ಯಮಂತ್ರಿ, ಶಿವಸೇನಾ ಮುಖ್ಯಸ್ಥ, 'ಸಾಮ್ನಾ' ಪತ್ರಿಕೆ ಸಂಪಾದಕ

ಇದುವರೆಗೆ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸುತ್ತಿದ್ದ ಶಿವಸೇನಾ ಇದೇ ಮೊದಲ ಬಾರಿಗೆ ತನ್ನ ಬದ್ಧ ವೈರಿಗಳ ಜತೆಗೂಡಿ ಸರ್ಕಾರ ರಚಿಸಿರುವುದಲ್ಲದೆ ಮುಖ್ಯಮಂತ್ರಿ ಸ್ಥಾನವನ್ನೂ ಪಡೆದುಕೊಂಡಿದೆ. ಮಹಾರಾಷ್ಟ್ರ ರಾಜಕಾರಣದಲ್ಲಿ ಇದೊಂದು ಮಹತ್ತರ ತಿರುವು. ಇಲ್ಲಿಂದ ಶಿವಸೇನಾ ಹಾಗೂ ಠಾಕ್ರೆ ಕುಟುಂಬದ ರಾಜಕಾರಣವೂ ಮತ್ತೊಂದು ಮಗ್ಗುಲಿಗೆ ಹೊರಳಿದೆ.

English summary
Shiv Sena's chief Uddhav Thackeray will sworn in as the Chief Minister of Maharashtra on Nov 27. He will become the first CM of Thackeray family. Here is his brief profile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X