ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ ಅಂಕಣ: ಅಪರಿಚಿತನಿಗೆ ಪುಸ್ತಕಗಳನ್ನು ಸಾಲ ಕೊಟ್ಟ ಪ್ರಕಾಶಕ ಮಹನೀಯ

By ಸ. ರಘುನಾಥ
|
Google Oneindia Kannada News

ಆವರೆಗೆ ಮುಖಮೂತಿ ಪರಿಚಯವಿಲ್ಲದನಿಗೆ, ಅಂದಿಗೆ ಅವನ ಊರಿನ ಹೆಸರನ್ನೂ ಕೇಳಿರದೆ ಇದ್ದವನಿಗೆ, ಅವನ ಮಾತನ್ನೇ ನಂಬಿ ಪುಸ್ತಕವನ್ನು ಸಾಲ ಕೊಟ್ಟ ಪ್ರಕಾಶಕರೊಬ್ಬರು ಇದ್ದರೆಂದರೆ ನಂಬುವುದೂ ಕಷ್ಟ, ನಂಬಿಸುವುದು ಮತ್ತೂ ಕಷ್ಟ.

ಹಣ ಕಡಿಮೆಯಿದೆಯೆಂದರೆ, ತಂದುಕೊಟ್ಟು ತೆಗೆದುಕೊಂಡು ಹೋಗಿ ಎನ್ನುವಾಗ, ಈ ಸಂಗತಿಯನ್ನು ಕೇಳಿ, ಇದು ಸಾಧ್ಯವೇ ಎಂದು ಆಶ್ಚರ್ಯಪಡುವ ದಿನಗಳಲ್ಲಿಯೂ ಹೀಗಾದುದು ನಿಜ ಮತ್ತು ವಿರಳ ಘಟನೆಯೇ. ಈ ಅನುಭವ ಪಡೆದ, ಆ ಸಾಲಗಾರ ನಾನೇ ಎಂಬುದಕ್ಕೆ ನಾನೇ ಸಾಕ್ಷಿ.

1977ರಲ್ಲಿ ತರಬೇತಿ ರಹಿತ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸಕ್ಕೆ ಸೇರಿದಾಗ ನನ್ನ ಸಂಬಳ 300 ರೂಪಾಯಿಗಳು. ಕಡಿತಗಳು ಕಳೆದು ಕೈಗೆ ಬರುತ್ತಿದ್ದುದು ಇನ್ನೂರರವತ್ತು ರೂಪಾಯಿಗಳು ಮಾತ್ರ. ರೂಮಿನ ಬಾಡಿಗೆ, ಊಟ, ಮನೆಗೆ ಕಳುಹಿಸುತ್ತಿದ್ದ ಹಣ, ಸುಧಾ, ಮಯೂರ, ಮಲ್ಲಿಗೆ, ತುಷಾರ ಹೀಗೆ ಪತ್ರಿಕೆಗಳಿಗಾಗಿ ಮತ್ತು ನನ್ನ ಕೈ ಖರ್ಚು ಅಂತ ಹೋಗಿ ಉಳಿತಾಯ ಸೊನ್ನೆ.

ಆ ದಿನಗಳಲ್ಲಿ ನಾನೊಬ್ಬ ಎಳಸು ಬರಹಗಾರ. (ಇಂದೇನು ಬಲಿತಿದ್ದೇನೆ ಎಂದು ಭಾವಿಸಿಲ್ಲ) ನನ್ನಷ್ಟಕ್ಕೆ ನಾನು ಬರೆಯುವುದು, ಪತ್ರಕೆಗಳಿಗೆ ಕಳುಹಿಸುವುದು, ಅಸ್ವೀಕೃತವಾದಾಗ ಸಂಪಾದಕಕರಿಗೆ ನನ್ನ ಬರಹಗಳನ್ನು ಓದಲು ಬಾರದು ಎಂದು ಮೂದಲಿಸಿಕೊಳ್ಳುತ್ತ ಬರೆಯುವುದು, ಕಳುಹಿಸುವುದು ನಡೆದಿತ್ತು. ನನ್ನೂರು ಮಲಿಯಪ್ಪನಹಳ್ಳಿಯಲ್ಲಿದ್ದಾಗ (ಫೇಲಾಗಿ ಊರಿನ ಬೀದಿಗಳಲ್ಲಿ ಅಲೆಯುತ್ತಿದ್ದ ದಿನಗಳು) ಚಿನ್ನಾರಪ್ಪನವರ ರಾಮಪ್ಪ ತನ್ನ ತಮ್ಮ- ನನ್ನ ಗೆಳೆಯ- ಚಿಕ್ಕನಂಜಪ್ಪನಿಗೆ ತಾನು ಕೆಲಸದಲ್ಲಿದ್ದ ಕಾಲೇಜು ಲೈಬ್ರರಿಯಿಂದ ಕಾದಂಬರಿಗಳನ್ನು ತಂದುಕೊಡುತ್ತಿದ್ದರು.

Sa. Raghunath Column: A Publisher Who Lent Books To A Stranger

ಅವನು ನನಗೂ ಓದಲು ಕೊಡುತ್ತಿದ್ದ. ಅವುಗಳಲ್ಲಿ ಮಾಸ್ತಿ, ತರಾಸು, ಅನಕೃ, ಶಿವರಾಮ ಕಾರಂತರ ಕಾದಂಬರಿಗಳಿರುತ್ತಿದ್ದವು. ಇದಕ್ಕೂ ಮುಂಚೆ ನನ್ನ ಸೋದರಮಾವನ ಮಗಳು ರಾಜೇಶ್ವರಿ, ತಾನಿದ್ದ ಮಾಲೂರಿನ ಹಾಸ್ಟೆಲ್ಲಿನಿಂದ ಎನ್. ನರಸಿಂಹಯ್ಯ, ಇಂದಿರಾತನಯ, ತ್ರಿವೇಣಿ ಮುಂತಾದವರ ಕಾದಂಬರಿಗಳನ್ನು ತಂದು ಕೊಟ್ಟು, ತನ್ನೊಂದಿಗೆ ಓದುವ ಖಯಾಲಿಗೆ ಬೀಳಿಸಿದ್ದಳು. ಪಠ್ಯ ಪುಸ್ತಕಗಳಿಗಿಂತ ಕದ್ದುಮುಚ್ಚಿ ಕಾದಂಬರಿಗಳನ್ನೇ ಹೆಚ್ಚಿಗೆ ಓದುತ್ತಿದ್ದುದು ಹತ್ತನೆಯ ತರಗಿಯಲ್ಲಿ ಫೇಲಾಗಲು ಇದ್ದ ಕಾರಣಗಳಲ್ಲಿ ಒಂದು.

ಪ್ರಾಥಮಿಕ ಶಾಲಾ ಮೇಷ್ಟ್ರನಾದ ಮೇಲೆ ಎಸ್.ಎಲ್. ಭೈರಪ್ಪನವರ ಕಾದಂಬರಿಗಳನ್ನು ಓದಬೇಕೆಂಬ ಆಸೆ ಹುಟ್ಟಿತು. ಆದರೆ ಕೊಂಡು ಓದಲು ಆರ್ಥಿಕ ಬಲವಿರಲಿಲ್ಲ. ಇದು ಅಡ್ಡಿಯಾಗಿತ್ತು. ಹೀಗಿದ್ದ ದಿನಗಳಲ್ಲಿ ಗೌನಿಪಲ್ಲಿಯ ಮಾದರಿ ಹಿರಿಯ ಶಾಲೆಯಲ್ಲಿ ಮುಖ್ಯೋಪಾಧ್ಯಾರಾಗಿದ್ದ, ಕತೆಗಾರ ಶೇಷಾದ್ರಿ ಕಿನಾರರ ಸಂಬಂಧಿ ರಮೇಶರ ಕೋಣೆಗೆ ಹೋಗಿದ್ದಾಗ ಅವರಲ್ಲಿದ್ದ ಭೈರಪ್ಪನವರ 'ದೂರ ಸರಿದರು' ಕಾದಂಬರಿ ಕಂಡಿತು. ಅದರಲ್ಲಿದ್ದ ಸಾಹಿತ್ಯ ಭಂಡಾರದ ವಿಳಾಸವನ್ನು ಬರೆದುಕೊಂಡು ಅಡ್ಡಗಲ್ಲಿಗೆ ಹಿಂದಿರುಗಿದೆ. ಈ ತಿಂಗಳ ಸಂಬಳದಲ್ಲಿ ಮನೆಗೆ ಕಳುಹಿಸದೆ ಬೆಂಗಳೂರಿಗೆ ಹೋಗುವುದೆಂದುಕೊಂಡೆ. ಅಂತೆಯೇ ಹೊರಟೆ. ಕಿಸೆಯಲ್ಲಿದ್ದುದು ಅರವತ್ತು ರೂಪಾಯಿಗಳು.

ಬಳೇಪೇಟೆಯ ಜಂಗಮ ಮೇಸ್ತ್ರಿ ಗಲ್ಲಿಗೆ ಹಳೇ ಪುಸ್ತಕದಂಗಡಿಯೊಬ್ಬಾತನನ್ನು ದಾರಿ ಕೇಳಿದೆ. ಹೀಗೆ ಹೋಗಿ ಬಲಗಡೆ ಒಂದು ಪೋಸ್ಟ್‌ಬಾಕ್ಸ್ ಇದೆ. ಅಲ್ಲಿ ತಿರುಗಿಕೊಳ್ಳಿ ಪುಸ್ತಕ ಭಂಡಾರ ಸಿಗುತ್ತೆ ಅಂದರು.

ಸರಳ ಪೋಷಾಕಿನ ಹಿರಿಯರು ಕುರ್ಚಿಯಲ್ಲಿ ಕುಳಿತಿದ್ದರು. ಷರ್ಟು, ಪಂಚೆಯಲ್ಲಿ ಹೆಗಲಿಗೊಂದು ಚೀಲ ನೇತು ಹಾಕಿಕೊಂಡು ಊರುಗೋಲನ್ನು ಆಧಾರಿಸಿ ನಿಂತ ನನ್ನತ್ತ ನೋಡಿ, ಏನು ಎಂದರು. ಭೈರಪ್ಪನವರ ಕಾದಂಬರಿಗಳು ಬೇಕು ಅಂದೆ. ತೆಗೆದುಕೊಳ್ಳಿ ಅಂದರು. ಸಂಕೋಚದಲ್ಲಿ ಮುದುಡಿಕೊಂಡು ನನ್ನ ಪರಿಚಯದೊಂದಿಗೆ ಎಲ್ಲವನ್ನೂ ಹೇಳಿಕೊಂಡು, ಸಾಲಕೊಟ್ಟರೆ ತಿಂಗಳು ತಿಂಗಳು ಇಷ್ಟಿಷ್ಟೆಂದು ಎಂ.ಒ. ಕಳುಹಿಸುತ್ತೇನೆಂದು ಕೇಳಿಕೊಂಡೆ. ವಿಚಿತ್ರವಾಗಿ ನನ್ನನ್ನು ಅವಲೋಕಿಸಿದರು. ಆ ಕ್ಷಣ ಸಾಧ್ಯವಾಗದು ಅನ್ನುತ್ತಾರೆ ಎಂದುಕೊಂಡೆ. ಆ ಕ್ಷಣ ಕಳೆಯಿತು. ಹಾಗೆಯೇ ಮಾಡಿ ಅಂದುಬಿಟ್ಟರು.

ಇಂಥದೊಂದು ಸನ್ನಿವೇಶದ ಪ್ರಾಮಾಣಿಕತೆಯನ್ನು ಪರೀಕ್ಷಿಸುವ ಸಂದರ್ಭ ಒದಗಿದೆ ಎಂದುಕೊಂಡರೇನೊ! ಅಂದಿಗೆ ಲಭ್ಯವಿದ್ದ ಭೈರಪ್ಪನವರ ಹನ್ನೊಂದು ಕಾದಂಬರಿಗಳೊಂದಿಗೆ, ಭೈರಪ್ಪನವರದೇ ಮೂರು ಪುಸ್ತಕಗಳನ್ನು ಕೊಡುವಂತೆ ಅದೇ ತಾನೆ ಒಳಬಂದ ತಮ್ಮ ಮಗ ರಾಜುಗೆ ಹೇಳಿದರು. ಮ. ಶ್ರೀಧರಮೂರ್ತಿಯವರ 'ವಾತ್ಸ್ಯಾಯನ ಕಾಮಸೂತ್ರ' ಕೃತಿಯನ್ನು ಓದಿರೆಂದು ಹೇಳಿ, ಸೇರಿಸಿದರು. (ಈ ಪುಸ್ತಕ ಏನಾಯಿತೆಂಬ ಪ್ರಸಂಗವನ್ನು ಮುಂದಿನ ಲೇಖನದಲ್ಲಿ ಬರೆಯುವೆ).

ರಾಜು ನನ್ನ ಹೆಗಲ ಚೀಲದಲ್ಲಿ ಆ ಪುಸ್ತಕಗಳನ್ನು ಜೋಡಿಸಿಕೊಟ್ಟರು. ನಂತರ ತಂದೆ, ಮಗ ಕಾಫಿ ಕುಡಿಸಿ ಬೀಳ್ಕೊಟ್ಟರು. ನಾನು ಹೇಳಿದಂತೆ ತಿಂಗಳು ತಿಂಗಳು ಹಣ ಕಳುಹಿಸಿದೆ. ಲೆಕ್ಕ ತಪ್ಪಿ ಹತ್ತು ರೂಪಾಯಿ ಹೆಚ್ಚು ಪಾವತಿಸಿದ್ದೆ. ಅದನ್ನು ಎಂ.ಒ. ಮೂಲಕ ಹಿಂದಿರುಗಿಸಿದರು. ಆ ಮಹನೀಯರೇ ಮ. ಗೋವಿಂದರಾಯರು.

ನಾನು ಗೋವಿಂದರಾಯರ ಮುಂದೆ ಬೇಡಿಕೆಯೊಂದಿಗೆ ನಿಂತಿದ್ದು 07-03-1979ರಂದು ಮಧ್ಯಾಹ್ನ ಎರಡು ಗಂಟೆಯಲ್ಲಿ. ಹಿಂದಿರುಗುವಾಗ ಬಹುದಿನದ ಬಯಕೆ ಈಡೇರಿದ ಉತ್ಸಾಹ ಮನ ತುಂಬಿತ್ತು.

English summary
Sa. Raghunath Column: Publisher M Govindaraya lent books to the stranger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X